• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಮ್ ಚಂದ್ರು ಮುಖ್ಯಮಂತ್ರಿ ಚಂದ್ರು ಆಗಿದ್ದು ಹೇಗೆ?

By Super
|

Mukhyamantri Chandru (Art : BG Gujjarappa)
'ಮುಖ್ಯಮಂತ್ರಿ' ಚಂದ್ರು (ಕಲೆ : ಬಿ.ಜಿ.ಗುಜ್ಜಾರಪ್ಪ)

ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ 'ಮುಖ್ಯಮಂತ್ರಿ' ಚಂದ್ರು ಅವರದು ನಟನೆ ಮತ್ತು ರಾಜಕೀಯ ರಂಗ ಎಂಬೆರಡು ದೋಣಿಗಳ ಮೇಲಿನ ಪಯಣ. ಎರಡೂ ರಂಗದಲ್ಲಿ ಹೋರಾಟ ಮಾಡಿಯಾದರೂ ಸಲ್ಲಬೇಕೆಂಬುದು ಅವರ ಬಯಕೆ. ಅವರ ಈ ವ್ಯಕ್ತಿತ್ವದಿಂದಾಗಿ ಅವರು ಇಷ್ಟವೂ ಆಗುತ್ತಾರೆ, ನಷ್ಟವನ್ನೂ ಅನುಭವಿಸಿದ್ದಾರೆ. ಚಂದ್ರು ಅವರನ್ನು ಹತ್ತಿರದಿಂದ ಬಲ್ಲ ಜೆ.ಎಸ್. ನಾರಾಯಣ ರಾವ್ (ಜೆಸುನಾ) ಅವರು ಮೈಮ್ ಚಂದ್ರುವಿನ ಅಂತರಾಳವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

***

1970-80ರ ದಶಕದಲ್ಲಿ ಕನ್ನಡ ಹವ್ಯಾಸಿ ರಂಗಭೂಮಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇದೇ ದಿನಮಾನಗಳಲ್ಲಿ ಕನ್ನಡದ ನವ್ಯ ಸಾಹಿತಿಗಳೂ ಅಟ್ಟಹಾಸದಿಂದ ವಿಜೃಂಭಿಸುತ್ತಿದ್ದರು. ಈ ಧಿಮಾಕಿನ ಅಮಲು ಎಲ್ಲಿಯವರೆಗೂ ಇತ್ತೆಂದರೆ ವಿಶ್ವದ ಅತಿ ಶ್ರೇಷ್ಠ ಸಾಹಿತಿಗಳಲ್ಲೊಬ್ಬರಾದ ಕುವೆಂಪು ಅವರನ್ನು ಸಾಹಿತಿಯೇ ಅಲ್ಲ ಎನ್ನುವವರೆಗೂ ಹೋಗಿಮುಟ್ಟಿತ್ತು! ಕನ್ನಡ ಹವ್ಯಾಸಿ ರಂಗಭೂಮಿಗೆ ಹೊಸ ನೀರು ಹರಿದುಬಂದಿತ್ತು. ಹೊಸ ನಾಟಕಗಳು, ಹೊಸ ಪರಿಕಲ್ಪನೆ ಬೆಡಗು ಪಡೆದುಕೊಂಡಿತ್ತು. ಪಾಶ್ಚಿಮಾತ್ಯ ಸಾಹಿತ್ಯದ ಅನೇಕ ಹೊಸತನಗಳನ್ನು ಸಾರಾಸಗಟಾಗಿ ಕದ್ದು ಅವು ತಮ್ಮದೇ ಸ್ವಂತ ಕಲ್ಪನೆಯೆಂಬ ಭ್ರಮಾವಲಯವನ್ನು ನವ್ಯರು ಸೃಷ್ಟಿಸಿದ್ದರು.

ಆಗಿನ ದಿನಗಳಲ್ಲಿ ಈ ಎರಡೂ ಕ್ಷೇತ್ರಗಳಿಗೆ ಸೇರಿದವರು ಪ್ರತಿದಿನ ಬರುತ್ತಿದ್ದುದು ರವೀಂದ್ರ ಕಲಾಕ್ಷೇತ್ರಕ್ಕೆ. ಬೆಳಗಿನಿಂದ ಸಂಜೆಯವರೆಗೂ ಅಲ್ಲಿ ಅವರದ್ದೇ ಕಾರುಬಾರು. ಜುಬ್ಬಾ, ಪೈಜಾಮ, ದಾಡಿ, ಬಗಲಿಗೆ ಒಂದು ಬ್ಯಾಗು, ಬಲಗೈಲಿ ಸಿಗರೇಟು, ಎಡಗೈಲಿ ಕಾಫ್ಕ, ಸಾರ್ತ್ರೆ, ಕಾಮು, ಬ್ರೆಕ್ಟ್ ಅವರ ಯಾವುದಾದರೂ ಒಂದು ಇಂಗ್ಲಿಷ್ ಪುಸ್ತಕ ಹಿಡಿದುಕೊಂಡವರದ್ದೇ ಅಲ್ಲಿನ ಜಾತ್ರೆ. ಪ್ರತಿಯೊಬ್ಬರೂ ಷೇಕ್ಸ್‌ಪಿಯರನ ಒಂದು ಮರಿ ತುಂಡುಗಳೇ. ಈ ಜಾತ್ರೆಯಲ್ಲಿ ಹುಡುಗಿಯರೂ ಇರುತ್ತಿದ್ದರು.

ಇಡೀ ದೇಶದಲ್ಲಿ ಕನ್ನಡ ಹವ್ಯಾಸಿ ರಂಗಭೂಮಿ ಪ್ರಸಿದ್ಧಿಯನ್ನು ಪಡೆದಿದ್ದ ಈ ದಶಕದ ನಡುಭಾಗದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ರಾಷ್ಟ್ರದಾದ್ಯಂತ ತುರ್ತುಸ್ಥಿತಿಯನ್ನು ಜಾರಿಗೊಳಿಸಿದ್ದರು. ಹೀಗಾಗಿ ಅವರ ವಿರುದ್ಧ ನಾಟಕಗಳನ್ನು ಆಡತೊಡಗಿದರು. ತುರ್ತುಸ್ಥಿತಿಯನ್ನು ಹೊರತುಪಡಿಸಿದರೆ ಇಂದಿರಾಗಾಂಧಿಯವರನ್ನು ನಿಸ್ಸಂಕೋಚವಾಗಿ ಈಗಲೂ ರಾಷ್ಟ್ರಮಾತೆಯೆಂದೇ ಕರೆಯಬಹುದು.

ಇಂಥ ಉಸಿರುಗಟ್ಟಿಸುವ ಸನ್ನಿವೇಶದಲ್ಲಿ ಮೈಮ್ ಚಂದ್ರು ಕಲಾಕ್ಷೇತ್ರದ ಮೆಟ್ಟಿಲು ಹತ್ತಿ ಒಳ ಪ್ರವೇಶಿಸಿದರು. ಈ ಚಂದ್ರು ಯಾರು ಅಂತ ಗೊತ್ತಾಗಿರಬೇಕಲ್ಲ? ಈ ಚಂದ್ರುವೇ ಮುಂದೆ ಮುಖ್ಯಮಂತ್ರಿ ಚಂದ್ರುವಾಗಿ ರೂಪಾಂತರಗೊಂಡು ಯಶಸ್ಸಿನ ತುದಿಗೆ ಹೋಗಿ ಕುಳಿತವರು. ಆರಂಭದಲ್ಲಿ ಚಂದ್ರು ಮೂಕಾಭಿನಯ ಮಾಡುತ್ತಿದ್ದ. ಹೀಗಾಗಿಯೇ ಅವನಿಗೆ ಮೈಮ್ ಚಂದ್ರು ಎಂದು ಕರೆಯುತ್ತಿದ್ದದ್ದು. ಒಂದು ಕಾಲನ್ನು ರಂಗಭೂಮಿ ಹಾಗೂ ಇನ್ನೊಂದು ಕಾಲನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಊರಿದ್ದ. ವಿಶ್ವವಿದ್ಯಾಲಯದಲ್ಲಿ ಚಂದ್ರು ಅಲಿಯಾಸ್ ಚಂದ್ರಶೇಖರ್ ಕಾರಕೂನನಾಗಿದ್ದ. ಅಲ್ಲೇ ಸೇವೆಯಲ್ಲಿದ್ದಿದ್ದರೆ ಈ ಹೊತ್ತಿಗೆ ಉಪನಿರ್ದೇಶಕನಾಗಿ ಬಡ್ತಿ ಹೊಂದಿರುತ್ತಿದ್ದ. ಅದು ಅವನ ಹಣೆಯಲ್ಲಿ ಬರೆದಿರಲಿಲ್ಲ. ಕೆಲಸಕ್ಕೆ ರಾಜೀನಾಮೆ ನೀಡಿ ಅಭಿನಯದಲ್ಲೇ ತಲ್ಲೀನನಾಗಿ ಬಿಟ್ಟ.

ನನ್ನ ಚಂದ್ರುವಿನ ಸ್ನೇಹ ಬಹಳ ಹಿಂದಿನದು. ಈತ ಸ್ನೇಹಕ್ಕೆ ಅತ್ಯಂತ ಅರ್ಹ. ಆಗಿನ ದಿನಗಳಲ್ಲಿ ಕಲಾಕ್ಷೇತ್ರದಲ್ಲಿ ನಾಟಕ ನೋಡಿಕೊಂಡು ಪ್ರತಿದಿನ ರಾತ್ರಿ ನಡೆದುಕೊಂಡೇ ಜಯನಗರ ಅಶೋಕ ಪಿಲ್ಲರ್‌ವರೆಗೂ ಹೋಗುತ್ತಿದ್ದೆವು. ಅಲ್ಲಿ ಎಡಕ್ಕೆ ತಿರುಗಿಕೊಂಡು ಸಿದ್ದಾಪುರದಲ್ಲಿದ್ದ ರಂಗನಟಿಯೊಬ್ಬರ ಮನೆಯಲ್ಲಿ ಮಲಗಲು ಹೋಗುತ್ತಿದ್ದ. ನಾನು ಬಲಕ್ಕೆ ತಿರುಗಿಕೊಂಡು ಎರಡನೇ ಬ್ಲಾಕಿನಲ್ಲಿದ್ದ ಮನೆಯತ್ತ ಸಾಗುತ್ತಿದ್ದೆ.

ಒಂದು ಸ್ವಾರಸ್ಯಕರ ಪ್ರಸಂಗವನ್ನು ಇಲ್ಲಿ ನೆನಪಿಸಿಕೊಳ್ಳಬೇಕೆನಿಸುತ್ತದೆ. 'ಬೆಂಕಿ' ಚಲನಚಿತ್ರಕ್ಕೆ ನಾನು ನಿರ್ಮಾಣ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೆ. ಚಂದ್ರುವಿಗೂ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಇತ್ತು. ಶಿರಾ ತಾಲ್ಲೂಕಿನ ಮಾಗೋಡು ಎಂಬ ಹಳ್ಳಿಯಲ್ಲಿ ಚಿತ್ರೀಕರಣಕ್ಕಾಗಿ ಒಂದು ತಿಂಗಳ ಕಾಲ ಮೊಕ್ಕಾಂ ಹೂಡಿದ್ದೆವು. ಊರಿನ ದಕ್ಷಿಣ ಭಾಗದಲ್ಲಿ ಅತ್ಯಂತ ದೊಡ್ಡ ಕೆರೆ, ಅದರ ಮಗ್ಗುಲಲ್ಲೇ ಒಂದು ಮನೆ. ನಾನು, ದಿ. ಮಾನು, ಎಂ.ಎಸ್. ಉಮೇಶ್ ಹಾಗೂ ಚಂದ್ರು ಈ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆವು.

ಬೆಳಗಿನಿಂದ ರಾತ್ರಿ ಹನ್ನೆರಡರವರೆಗೂ ಶೂಟಿಂಗ್. ಶೂಟಿಂಗ್ ಪ್ಯಾಕಪ್ ಆದ ಕೂಡಲೇ ನಮ್ಮ ಗುಂಪು ರೂಮಿಗೆ ಬರುತ್ತಿತ್ತು. ನಮ್ಮೊಂದಿಗೆ ಕ್ಯಾಮರಾಮನ್ ಎಸ್. ರಾಮಚಂದ್ರ ಅವರೂ ಬರುತ್ತಿದ್ದರು. ಗುಂಡಿನ ಸಮಾರಾಧನೆ ಆರಂಭಗೊಳ್ಳುತ್ತಿತ್ತು. ರಮ್ ಜೊತೆಯಲ್ಲಿ ನಿಂಬೆಹಣ್ಣಿನ ರಸ ಬೆರೆಸಿದರೆ ಬೆಳಗ್ಗೆ ಹ್ಯಾಂಗೋವರ್ ಆಗೋಲ್ಲ ಎಂಬ ಅಂಶವನ್ನು ಆರ್ಕಿಮಿಡೀಸ್‌ನಂತೆ ರಾಮಚಂದ್ರ ಪತ್ತೆ ಹಚ್ಚಿದ್ದರು. ಅಷ್ಟು ಹೊತ್ತಿನಲ್ಲಿ ನಿಂಬೆಹಣ್ಣನ್ನು ಎಲ್ಲಿಂದ ತರೋದು? ನಾವಿದ್ದ ಮನೆ ಎದುರುಗಡೆಯೇ ಒಂದು ನಿಂಬೆಹಣ್ಣಿನ ಗಿಡ ಇತ್ತು. ಕತ್ತಲಲ್ಲಿ ಹಣ್ಣು ಎಲ್ಲಿದೆ ಎಂದು ಹುಡುಕುವುದೇ ಕಷ್ಟದ ಕೆಲಸ. ಈ ಕೆಲಸ ನಾನೇ ಮಾಡುತ್ತಿದ್ದೆ. ಗಿಡದೊಳಗೆ ಕೈಹಾಕಿ ಹಣ್ಣನ್ನು ಹುಡುಕುತ್ತ ಹೋದಂತೆಲ್ಲ ಅದರ ಮುಳ್ಳುಗಳು ನನ್ನ ಕೈಯನ್ನು ಗೀರಿ ರಕ್ತ ಸುರಿಯುವಂತೆ ಮಾಡುತ್ತಿದ್ದವು. ಕೊನೆಗೂ ಹಣ್ಣನ್ನು ಪತ್ತೆ ಮಾಡಿ ತಂದಾಗ ಇಡೀ ನಮ್ಮ ತಂಡದವರು ವಿಜಯೋನ್ಮತ್ತರಂತೆ ಕೇಕೆ ಹಾಕುತ್ತಿದ್ದರು.

ನಾಟಕ, ಸಿನಿಮಾ ಲೋಕದಲ್ಲೇ ಮುಳುಗಿ ಹೋಗಿದ್ದ ಚಂದ್ರು ರಾಜಕಾರಣಕ್ಕೆ ಪ್ರವೇಶಿಸಿದ್ದೇ ನನ್ನಂಥ ಗೆಳೆಯರಿಗೆ ಆಶ್ಚರ್ಯವೆನಿಸಿದ್ದು. ಅವನು ಎಂದೂ ಯಾರ ಬಳಿಯೂ ತನ್ನ ರಾಜಕೀಯ ಅದಮ್ಯ ಆಸೆಯನ್ನು ತೋಡಿಕೊಂಡಿರಲಿಲ್ಲ. ಬಹುಶಃ ಅವನ ಈ ಉಪಕ್ರಮಕ್ಕೆ 'ಮುಖ್ಯಮಂತ್ರಿ' ನಾಟಕವೇ ಮೂಲಪ್ರೇರಣೆ ಎನಿಸುತ್ತದೆ.

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ 'ಮುಖ್ಯಮಂತ್ರಿ' ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ಇನ್ನೊಬ್ಬ ರಂಗನಟ ಲೋಹಿತಾಶ್ವ. ಬಿ.ವಿ. ರಾಜಾರಾಂ ನಿರ್ದೇಶನದ ಈ ನಾಟಕದಲ್ಲಿ ಲೋಹಿತಾಶ್ವ ಮುಖ್ಯಮಂತ್ರಿಯಾಗಿ ಅಭಿನಯಿಸಬೇಕಾಗಿತ್ತು. ರಂಗ ತಾಲೀಮು ನಡೆದಿತ್ತು. ನಾಟಕ ಆಡಬೇಕಿದ್ದ ದಿನ ಲೋಹಿತಾಶ್ವ ಅವರಿಗೆ ವಿಪರೀತ ಜ್ವರ. ಬೇರೆ ದಾರಿಯೇ ಕಾಣದಿದ್ದಾಗ ಚಂದ್ರುವೇ ಈ ಪಾತ್ರ ಮಾಡಬೇಕಾಯಿತು. ನಾಟಕ ಅಭೂತಪೂರ್ವ ಯಶ ಕಂಡಿತು. ಚಂದ್ರು ಅಭಿನಯ ಅತ್ಯಂತ ಉನ್ನತವಾಗಿತ್ತು. ಚಂದ್ರು ಇಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ.

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಟಿ.ಎನ್. ಸೀತಾರಾಂ ಜನತಾಪಕ್ಷದ ಪರವಾಗಿ ಚುನಾವಣೆಗೆ ಸ್ಪರ್ಧಿಸಬೇಕಾಗಿತ್ತು. ಕೊನೆ ಗಳಿಗೆಯಲ್ಲಿ ಸೀತಾರಾಂ ಮನಸ್ಸು ಬದಲಾಯಿಸಿದರು. ಹೀಗಾಗಿ ಮುಖ್ಯಮಂತ್ರಿ ಚಂದ್ರು ಕಣಕ್ಕಿಳಿದು ಗೆದ್ದು ಬಂದು ಶಾಸಕನಾದ. ಚಂದ್ರು ಸೊಗಸಾದ ಮಾತುಗಾರ. 'ಹ'ಕಾರ 'ಅ'ಕಾರ ದೋಷವನ್ನು ಅವನು ಹುಟ್ಟುವಾಗಲೇ ಪಡೆದುಕೊಂಡಿದ್ದರಿಂದ ಅವನನ್ನು ಅದರಿಂದ ತಿದ್ದಲು ಯಾರಿಗೂ ಸಾಧ್ಯವಾಗಲಿಲ್ಲ. ಇದು ಬಿಟ್ಟರೆ ಅವನ ಮಾತು ಕೇಳಬೇಕೆನಿಸುತ್ತದೆ. ವಿಧಾನಸಭೆಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದ್ದಿರಲಿ ಆ ಬಗ್ಗೆ ಪೂರ್ವಸಿದ್ಧತೆ ಮಾಡಿಕೊಂಡು ಮಾತನಾಡುವ ಚಂದ್ರುವಿನ ಪರಿ ನೋಡಿಯೇ ಅನುಭವಿಸಬೇಕು.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚಂದ್ರು ಹಾರಿಕೊಂಡಿದ್ದು ಬೇರೊಂದು ರಾಜಕೀಯ ಘಟ್ಟವೆನ್ನಬೇಕು. ಮೊದಲು ಇದ್ದದ್ದು ಜನತಾ ಪಕ್ಷದಲ್ಲಿ. ಮೇಲ್ಮನೆ ಶಾಸಕನಾಗಿದ್ದು ಭಾರತೀಯ ಜನತಾ ಪಾರ್ಟಿಯಿಂದ! ಎಲ್ಲ ರಾಜಕಾರಣಿಗಳಂತೆ ಚಂದ್ರುವಿಗೂ ಏಕಪಕ್ಷನಿಷ್ಠೆ ಇಲ್ಲ ಎಂದು ಇದಿಷ್ಟರಿಂದಲೇ ಸಾಬೀತಾಯಿತಲ್ಲ. ಈಗಲೂ ಅಷ್ಟೆ. ವಯಸ್ಸು ಐವತ್ನಾಲ್ಕು ದಾಟಿದ್ದರೂ ಹುಮ್ಮಸ್ಸು ಕುಂದಿಲ್ಲ. ಅದೇ ಅಡೆತಡೆಯಿಲ್ಲದ ಮಾತು. ಅದರ ಆಳದಲ್ಲೆಲ್ಲೋ ಅತೃಪ್ತಿಯೂ ಕಾಡುತ್ತಿರುವಂತಿದೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ತಾನು ಸಚಿವನಾಗಬಹುದು ಎಂಬ ನಿರೀಕ್ಷೆ ಚಂದ್ರುವಿಗೆ ಇತ್ತು, ಆಗಲಿಲ್ಲ. ಅದರ ಪರಿಣಾಮವೆಂದರೆ ತಮ್ಮ ನಾಯಕರ ಮೇಲೆ ಆಗೀಗ ಹರಿಹಾಯ್ದದ್ದು ಬಿಟ್ಟರೆ ಮತ್ತೇನೂ ಕಂಡುಬರುತ್ತಿಲ್ಲ. ಚಂದ್ರು ಈಗ ರಾಜಕೀಯದ ನಡುಹಾದಿಯಲ್ಲಿದ್ದಾನೆ. ಅವನನ್ನು ಅದು ಎಲ್ಲಿಗೆ ಕೊಂಡೊಯ್ಯುತ್ತದೋ ನೋಡಬೇಕು.

ಪೂರಕ ಓದಿಗೆ

ಮುಖ್ಯಮಂತ್ರಿ ಚಂದ್ರುಗೆ ಶಿಕಾಗೋದಲ್ಲಿಯೂ ನಿರಾಶೆ

ಲಂಡನ್ ಕನ್ನಡ ಹೋಳಿಗೆಗೆ ತೊಟ್ಟು ನಿಂಬೆರಸ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X