ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಕುರ್ಚಿಯಲ್ಲಿ ಕುಬೇರ

By Staff
|
Google Oneindia Kannada News

Meet RV Deshpande, new CEO of KPCC
ಆರ್.ವಿ.ದೇಶಪಾಂಡೆ (ಕಲೆ : ಬಿ.ಜಿ.ಗುಜ್ಜಾರಪ್ಪ)
ರಾಮಕೃಷ್ಣ ಹೆಗಡೆಯವರ ಆಪ್ತ, ದೇವೇಗೌಡರ ಗೆಳೆಯ, ಕೃಷ್ಣ ಅವರ ಹಿಂಬಾಲಕ, ಸೋನಿಯಾ ಗಾಂಧೀ ಆರಾಧಕ, ಶಕ್ತ ಕೈಗಾರಿಕೋದ್ಯಮಿ, ಉತ್ತರ ಕನ್ನಡ ಜಿಲ್ಲೆಯ ಸೇವಕ, ಮುಖ್ಯಮಂತ್ರಿ ಕುರ್ಚಿಯ ಕನಸುಗಾರ, ಇದೀಗ ಕೆಪಿಸಿಸಿ ಅಧ್ಯಕ್ಷ, ಸಿರಿವಂತ ಆರ್.ವಿ.ದೇಶಪಾಂಡೆ ಅವರನ್ನು ಕಾಣಿರಿ.

ಅಂಕಣಕಾರ : ಜೆ.ಎಸ್.ನಾರಾಯಣ ರಾವ್ (ಜೆಸುನಾ)

ನೋಡ್ರೀ..ನನ್ನ ಎಡ್ದಾಗಡೆ ಉಮೇಶ್ ಭಟ್ಟ ಕುಂತಾನು... ಬಲ್ದಗಡೆ ನಾಯಕರು ಕುಂತಾರು. ನಿಮ್ಗೆ ಹೇಳ್ಲಿಕ್ಕೆ ಬೇಕೂ ಅಂದ್ರೆ ಇದು ಯಾಡ್ ಶಮಸ್ಯೆ ಅದಾವು...".

ಉತ್ತರ ಕನ್ನಡ ಜಿಲ್ಲೆಯ ಆರ್.ವಿ. ದೇಶಪಾಂಡೆ ಅವರ ವಾಗ್ವೈಖರಿ ಇದು. ಇತ್ತ ಕನ್ನಡವೂ ಅಲ್ಲದ, ಅತ್ತ ಕೊಂಕಣಿಯೂ ಅಲ್ಲದ ಅವರ ಇಬ್ಬಂದಿ ಕನ್ನಡದ ಮಾತು ಅನರ್ಥಕ್ಕೆ ಎಡೆಮಾಡಿಕೊಡುವುದೇ ಜಾಸ್ತಿ. ಜನರ ಕೆಲಸ ಮಾಡೋದಿಕ್ಕೆ ಒಂದೆರಡು ಸಮಸ್ಯೆಗಳಿವೆಯೆಂದು ಹೇಳುವ ದೇಶಪಾಂಡೆ ಮಾತಿನ ಅಂತರಾರ್ಥ ಇದು. ಆದರೆ ಮೇಲಿನ ಮಾತಿನಿಂದ ಅನರ್ಥವೇ ಘಟಿಸಿಹೋಗುವುದು ಅವರ ಗಮನಕ್ಕೇ ಬರುವುದಿಲ್ಲ.

ಇನ್ನೊಂದು ಸ್ಯಾಂಪಲ್ ಬೇಕಾ? ತಗೊಳ್ಳಿ...

ಎಲ್ಲಿ ಹ್ವಾದ್ರಿ? ಅವನು ಪಿಯಾಸು(ಪಿಎಸ್ ಆಪ್ತ ಕಾರ್ಯದರ್ಶಿ)ಯೇನು ಮಾಡಾಕ ಹತ್ಯಾನೆ. ಹೊಟ್ಟಿ, ತೆಲಿ ಎಲ್ಲಾ ಗಡಬಡ ಮಾಡಾಕ್ ಹತ್ಯಾವು. ಒನ್ನಾ ವೇಳೆ ಅವ ಬಂದ್ರಾ ನನಗೆ ಮಾರಿ ತೋರಿಸ್‌ಬ್ಯಾಡ ಅಂತ ಹೇಳ್ರೀ...

ಏನಾದರೂ ನಿಮಗೆ ಅರ್ಥ ಆಯಿತಾ? ಇಲ್ಲ ಅಲ್ಲವಾ? ತಮ್ಮ ಆಪ್ತ ಕಾರ್ಯದರ್ಶಿ ಬಗ್ಗೆ ವಿಚಾರಿಸುತ್ತಲೇ, ಫೋನಿನಲ್ಲಿ ಮತ್ಯಾರಿಗೋ ಮುಖ ತೋರಿಸದಿರಲು ಹೇಳ್ತಿರ್ತಾರೆ. ಪಾಪ ಈ ಮಾತಿನಿಂದ ಆಪ್ತ ಕಾರ್ಯದರ್ಶಿ ಗತಿ ಏನಾಗಬೇಕು? ಒಂದು ಬಾರಿಯಂತೂ ಪ್ರಭಾಕರಪ್ಪ ಎಂಬ ಅವರ ಆಪ್ತ ಕಾರ್ಯದರ್ಶಿ ಸಚಿವರ ನಿಗೂಢ ಕನ್ನಡ ಭಾಷೆಯಿಂದ ತತ್ತರಿಸಿ ಕೆಲಸಕ್ಕೆ ಬಂದ ಮೂರನೇ ದಿನಕ್ಕೇ ಅಲ್ಲಿಂದ ಪರಾರಿಯಾಗಿದ್ದರು.

1994ರಲ್ಲಿ ಜನತಾದಳ ಅಧಿಕಾರಕ್ಕೆ ಬಂದಾಗ ದೇಶಪಾಂಡೆ ಬೃಹತ್ ಕೈಗಾರಿಕಾ ಖಾತೆಯನ್ನು ಹೊಂದಿದ್ದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂಬ ವಾಸನೆ ಹಿಡಿದ ದೇಶಪಾಂಡೆಯವರು ಸೋನಿಯಾ ಕಾಂಪೌಂಡಿಗೆ ಹಾರಿಕೊಂಡರು. ನಿರೀಕ್ಷೆ ಹುಸಿಯಾಗಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಬೃಹತ್ ಕೈಗಾರಿಕಾ ಖಾತೆಯೇ ಬೇಕು ಅಂತ ಅವರು ಪಟ್ಟುಹಿಡಿದಾಗ ಕಾಂಗ್ರೆಸ್ ಹೈಕಮಾಂಡ್ ಇಲ್ಲ ಎನ್ನಲಿಲ್ಲ. ಇದು ರಘುನಾಥರಾವ್ ದೇಶಪಾಂಡೆಯವರ ಕೈಗಾರಿಕಾ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ.

ದುಬೈ, ಪುಣೆ, ಮುಂಬೈಗಳಲ್ಲೇ ತಮ್ಮ ವಹಿವಾಟಿನ ಮೂಲ ನೆಲೆಗಳನ್ನು ಹೊಂದಿರುವ ಅವರು ಸಚಿವರಾಗಿದ್ದಾಗ ವಿಧಾನಸೌಧಕ್ಕೆ ಬರುವುದೇ ಅಪರೂಪವಾಗಿತ್ತು. ಬೆಂಗಳೂರಿನಲ್ಲಿದ್ದರೂ ಮನೆಯಲ್ಲೇ ಕೂತು ಆಡಳಿತ ನಡೆಸುತ್ತಿದ್ದರು. ಅವರ ಮುಖ್ಯ ಚಟುವಟಿಕೆಯೆಂದರೆ ತಮ್ಮ ಕ್ಷೇತ್ರದ ಜನರಿಗೆ ಕಾರ್ಖಾನೆಗಳಲ್ಲಿ ಉದ್ಯೋಗ ಕೊಡಿಸುವುದು.

ಹೇಗಂತಿರಾ? ಅವರ ಹಿಡಿತದಲ್ಲಿ ಬೃಹತ್ ಕಾರ್ಖಾನೆಗಳೇ ಇತ್ತಲ್ಲ? ಹೀಗಾಗಿ ತಮ್ಮ ಕ್ಷೇತ್ರದ ಪ್ರತಿ ಮನೆಗೆ ಒಂದು ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಇದಕ್ಕಾಗಿ ತಮ್ಮ ಕಚೇರಿಯಲ್ಲಿ ಇಬ್ಬರು ಗುಮಾಸ್ತರನ್ನು ವಿಶೇಷವಾಗಿ ನೇಮಿಸಿಕೊಂಡಿದ್ದರು. ಇಂಥ ವ್ಯವಸ್ಥೆ ಬೇರೆ ಯಾವ ಸಚಿವರೂ, ಅಷ್ಟೇ ಯಾಕೆ ಯಾವ ಮುಖ್ಯಮಂತ್ರಿಗಳೂ ಹೊಂದಿರಲಿಲ್ಲ. ಮುಖ್ಯಮಂತ್ರಿಗಳು ಅಥವಾ ಸಚಿವರಿಂದ ಯಾರಾದರೂ ಶಿಫಾರಸು ಪತ್ರ ತಂದರೂ ಅದು ಕಸದ ಬುಟ್ಟಿಗೆ ಹೋಗುತ್ತದೆ. ಉದ್ಯೋಗ ಏನಿದ್ದರೂ ದೇಶಪಾಂಡೆ ಕ್ಷೇತ್ರದವರಿಗೆ ಮಾತ್ರ.

ಈ ಮಹಾಶಯರು ಬಹಳ ಅಪರೂಪಕ್ಕೆ ಪತ್ರಿಕಾಗೋಷ್ಠಿ ಕರೆಯುವುದೂ ಉಂಟೆನ್ನಿ. ಒಂದು ವಿಚಿತ್ರವೆಂದರೆ ಅವರ ಕನ್ನಡ ಅಥವಾ ಇಂಗ್ಲಿಷ್ ಬಹಳಷ್ಟು ಪತ್ರಕರ್ತರಿಗೆ ಅರ್ಥವೇ ಆಗುವುದಿಲ್ಲ. ಎಲ್ಲವನ್ನೂ ಅಂದಾಜಿನ ಮೇಲೆ ಬರೆದುಕೊಳ್ಳುವುದುಂಟು.

ಒಂದು ಬಾರಿ ಹೀಗಾಯಿತು...

ಪತ್ರಿಕಾಗೋಷ್ಠಿಯನ್ನು ವಿಧಾನಸೌಧದ ತಮ್ಮ ಕಚೇರಿಯಲ್ಲೇ ಕರೆದಿದ್ದರು. ಎಲ್ಲ ಪತ್ರಿಕೆಗಳ ವರದಿಗಾರರು ಬಂದಿದ್ದರೂ ದೇಶಪಾಂಡೆಯವರು ಕೇಳಿದರು: ಪಿಟಿ ಹಿಂದೂ ಬಂದಿಲ್ಲಲ್ಲ? ಅವ್ರು ಬರೋವರ್ಗೂ ಕಾಯೋಣು. ಬಹಳ ಹೊತ್ತು ಕಾದರೂ ಪಿ.ಟಿ.ಐ. ಮತ್ತು ಹಿಂದೂ ಪತ್ರಿಕೆ ವರದಿಗಾರರು ಬರಲೇ ಇಲ್ಲ. ಅವರಿಬ್ಬರೂ ಸೇರಿ ಸಚಿವರ ಬಾಯಲ್ಲಿ ಪಿಟಿ ಹಿಂದೂ ಎಂಬ ಒಂದೇ ಪದವಾಗಿ ಅನರ್ಥಕ್ಕೆ ದಾರಿ ಮಾಡಿಕೊಟ್ಟಿತ್ತು. ಅವರು ಬರದ ಕಾರಣ ಸಚಿವರು ಪತ್ರಿಕಾಗೋಷ್ಠಿಯನ್ನೇ ರದ್ದುಪಡಿಸಿ ಹೊರನಡೆದುಬಿಟ್ಟರು!

ಹಿಂದೆ ಮತ್ತು ಈಗಲೂ ಅವರು ರಾಮಕೃಷ್ಣ ಹೆಗಡೆ ಅವರ ಭಕ್ತಶ್ರೇಷ್ಠ. ಇದಕ್ಕೊಂದು ಉದಾಹರಣೆಯನ್ನು ಇಲ್ಲಿ ದಾಖಲಿಸಬಹುದು. ದೇವೇಗೌಡರ ರಾಜಕೀಯ ಚಿತ್ರಹಿಂಸೆ ತಾಳಲಾಗದೆ ರಾಮಕೃಷ್ಣ ಹೆಗಡೆ ಅವರು ಪ್ರತ್ಯೇಕವಾಗಿ ಲೋಕಶಕ್ತಿಯನ್ನು ಹುಟ್ಟುಹಾಕಿದಾಗ ದೇಶಪಾಂಡೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರೊಂದಿಗೆ ಸೇರಿಕೊಂಡವರಲ್ಲಿ ಬಹು ಮುಖ್ಯರು. ಆಗ ಜೆ.ಎಚ್. ಪಟೇಲ್ ಮುಖ್ಯಮಂತ್ರಿ. ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುವವರೆಗೂ ಲೋಕಶಕ್ತಿಯ ಎಲ್ಲ ಸಭೆ, ಸಮಾರಂಭಗಳಿಗೆ ದೇಶಪಾಂಡೆಯವರೇ ತಮ್ಮ ಖಜಾನೆಯಿಂದ ವೆಚ್ಚ ಮಾಡಿದ್ದು. ರಾಮಕೃಷ್ಣ ಹೆಗಡೆ ಅವರೊಂದಿಗಿದ್ದಾಗ ನಿಜದ ಅರ್ಥದಲ್ಲಿ ಸಮಾಜವಾದಿಯಾಗಿದ್ದರು. ಈಗ ಅದರ ಲಕ್ಷಣಗಳೇ ಕಂಡುಬರುತ್ತಿಲ್ಲ. ಬಹುಶಃ ಕಾಂಗ್ರೆಸ್ ಹುಲ್ಲುಗಾವಲಿನ ಮಹಿಮೆ ಇರಬೇಕು. ಹಾಗಾಗಿಯೇ ಅವರೀಗ ಹೆಚ್ಚು ಹೆಚ್ಚಾಗಿ ಮಠಾಧೀಶರನ್ನು ಸಾಧು ಸಂತರನ್ನು ಭೇಟಿಯಾಗುತ್ತಾರೆ. ಅವರ ಕಾಲಿಗೆ ಬೀಳುತ್ತಾರೆ. ಯಾಕಿರಬಹುದು?

ಈಗ್ಗೆ ಕೆಲವು ವರ್ಷಗಳಿಂದ ಮುಖ್ಯಮಂತ್ರಿಯಾಗಬೇಕೆಂಬ ಗೀಳು ದೇಶಪಾಂಡೆಯವರಲ್ಲಿ ಹುಟ್ಟಿ, ಈಗದು ಹೆಮ್ಮರವಾಗಿಬಿಟ್ಟಿದೆ. ಕಾಂಗ್ರೆಸ್ ಹೈಕಮಾಂಡಿಗೆ ಕಾಲಕಾಲಕ್ಕೆ 'ಆಹಾರ' ಸರಬರಾಜು ಮಾಡುತ್ತಿರುವುದರಿಂದ ದೆಹಲಿಯಲ್ಲೂ ಇವರು ಸಲ್ಲುವವರೆ. ಒಂದು ಬಾರಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಳ್ಳಲಿದ್ದಾರೆ ಎಂಬ ಸ್ಥಿತಿ ನಿರ್ಮಾಣಗೊಂಡಿತ್ತು. ದೇಶಪಾಂಡೆ ಜಾಗೃತರಾದರು. ಗುಲ್ಬರ್ಗಾ ಕಡೆಯಿಂದ ಧರ್ಮಸಿಂಗ್ ಅವರೂ ಮೈಕೊಡವಿಕೊಂಡು ಎದ್ದುನಿಂತರು.

ದುರದೃಷ್ಟವೆಂದರೆ ಇದೇ ಇರಬೇಕು. ನಾಗಪ್ಪನವರ ಅಪಹರಣ, ಕಾವೇರಿ ಜಲವಿವಾದ, ಕರೀಂಲಾಲಾ ಹಗರಣ ಮುಂತಾದವು ತುರೀಯ ಸ್ಥಿತಿಗೆ ಮುಟ್ಟಿದಾಗ ಕಾರ್ಮೋಡದಲ್ಲಿ ಬಳುಕಿದ್ದ ಮಿಂಚಿನ ಗೆರೆ ಹಾಗೇ ಅದೃಶ್ಯವಾಗಿಬಿಟ್ಟಿತು. 2004ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ದೇಶಪಾಂಡೆಯವರ ತಲೆಯಲ್ಲಿ ಹೊಸ ಹುಳುವೊಂದು ಹೊಕ್ಕಿತ್ತು. ಮತ್ತೆ ಜನತಾದಳಕ್ಕೆ ವಾಪಸು ಹೋದರೆ ಹೇಗೆ? ಮುಂದಿನ ಚುನಾವಣೆಯಲ್ಲಿ ದಳ ಅಧಿಕಾರಕ್ಕೆ ಬಂದರೂ ಬರಬಹುದೆ? ಈ ಪ್ರಶ್ನೆಗಳು ಅವರನ್ನು ಮುಕುರಿಕೊಂಡಾಗ ಕೂಡಲೇ ದೇವೇಗೌಡರನ್ನು ಸಂಪರ್ಕಿಸಿದ್ದರು.

ದೇವೇಗೌಡರದ್ದು ಒಂದೇ ಕಂಡೀಷನ್. ಹಲವು ಕೋಟಿ ರೂಪಾಯಿಗಳನ್ನು ಪಾರ್ಟಿ ಫಂಡಿಗೆ ಕೊಟ್ಟರೆ ದಳದ ಬಾಗಿಲು ತೆಗೆಯುವುದಾಗಿ ಹೇಳಿದರೆಂಬುದು ಸುದ್ದಿ. ಹಲವು ಕೋಟಿ ರೂಪಾಯಿಗಳ ಬಂಡವಾಳ ಹೂಡಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಗಬೇಡವೇ? ದೇಶಪಾಂಡೆ ಇದನ್ನೇ ಗೌಡರಿಗೆ ಹೇಳಿದರು. ತನ್ನನ್ನೇ ಮುಖ್ಯಮಂತ್ರಿಯಾಗಿ ಆರಿಸುವುದಾದರೆ ಬಂಡವಾಳ ಹೂಡಲು ಸಿದ್ಧವೆಂದರು. ಸಿದ್ದರಾಮಯ್ಯನವರಿಗೆ ಅದಾಗಲೇ ಸಿಎಂ ಪೋಸ್ಟಿಗೆ ವಾಗ್ದಾನ ನೀಡಿದ್ದ ಗೌಡರು ಮತ್ತೊಂದು ಸಮಸ್ಯೆಯನ್ನು ಮೇಲೆಳೆದುಕೊಳ್ಳಲು ಹೇಗೆ ತಾನೆ ಸಾಧ್ಯ? ಹೀಗಾಗಿ ಆ ವ್ಯವಹಾರವೂ ಕುದುರಲಿಲ್ಲ ಎನ್ನಿ.

ಅಂತೂಇಂತೂ ಹೈಕಮಾಂಡ್ ಮನವೊಲಿಸಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಬಂದು ಕುಳಿತಿದ್ದಾರೆ. ಒಂದಂತೂ ಸತ್ಯ. ಅವರದ್ದೇ ಮಾತಿನಲ್ಲಿ ಹೇಳಬೇಕೆಂದರೆ ಷಿಎಮ್ಮು (ಸಿ.ಎಂ ಅಂದರೆ ಮುಖ್ಯಮಂತ್ರಿ) ಪದವಿ ಅವರನ್ನು ಹಗಲಿರುಳೂ ಕಾಡುತ್ತಲೇ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X