ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸುಕಂಗಳ ರಾಜಕಾರಣಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ

By Staff
|
Google Oneindia Kannada News

Former Chief Minister of Karnataka S.M.Krishna
ಎಸ್.ಎಂ.ಕೃಷ್ಣ (ಕಲೆ : ಬಿ.ಜಿ.ಗುಜ್ಜಾರಪ್ಪ)
ಎಸ್.ಎಂ.ಕೃಷ್ಣ ಎಂದೂ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡುವುದೇ ಇಲ್ಲ. ಇಬ್ಬನಿಯ ಪರದೆಯ ನಡುವೆ ತೂರಿಕೊಂಡು ಹಸಿರು ಹುಲ್ಲುಗಾವಲಿನ ಮೇಲೆ ಆಹ್ಲಾದಕರ ವಾಕಿಂಗ್ ಮಾಡಬಯಸುವ ಪ್ರಫುಲ್ಲ ಮನಸ್ಸು ಅವರದ್ದು. ಕರ್ನಾಟಕ ರಾಜಕೀಯದಲ್ಲಿ ಕೃಷ್ಣರಿಗಿಂತ ಶೋಕಿಲಾಲ ರಾಜಕಾರಣಿ ಮತ್ತೊಬ್ಬರು ಸಿಗಲಿಕ್ಕಿಲ್ಲ. ರಾಜಕೀಯ ರಂಗಮಂಚದಲ್ಲಿ ಏನೆಲ್ಲಾ ಆಗುತ್ತಿದ್ದರೂ ಏನೂ ಆಗದವರಂತೆ ಇರುವುದು ಕೃಷ್ಣ ಅವರಿಗೆ ಮಾತ್ರ ಸಾಧ್ಯವೇನೋ.

* ಜೆ.ಎಸ್. ನಾರಾಯಣ ರಾವ್ (ಜೆಸುನಾ)

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಿಂದೆ ಒಂದು ಕಾಲದಲ್ಲಿ ವಿಧಾನಸಭೆಯ ಸ್ಪೀಕರ್ ಸಹ ಆಗಿದ್ದರು. ಅವರು ಹೀಗೆ ಸ್ಪೀಕರ್ ಆಗಿದ್ದ ಒಂದು ದಿನ ಪತ್ರಿಕಾ ವರದಿಗಾರರು ಸುದ್ದಿ ಶಿಕಾರಿಗೆಂದು ವಿಧಾನಸೌಧದಲ್ಲಿ ದೈನಂದಿನ ರೌಂಡಿನಲ್ಲಿದ್ದರು. ಮಧ್ಯಾಹ್ನ ಹನ್ನೆರಡರ ಸುಮಾರಿನಲ್ಲಿ ವರದಿಗಾರರು ಮೊಗಸಾಲೆಯಲ್ಲಿ ಅಡ್ಡಾಡುತ್ತಿದ್ದಾಗ ಸಹಜವಾಗಿಯೇ ಸ್ಪೀಕರ್ ಕಚೇರಿ ಬಳಿಗೆ ಬಂದು ತಲುಪಿದರು. ಹಾಗೇ ಅಲ್ಲಿ ಎದುರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ಕಂಡು ಹೌಹಾರಿದರು.

ನಮ್ಮ ಎದುರಿಗೆ ಸ್ಪೀಕರ್ ಎಸ್.ಎಂ. ಕೃಷ್ಣ ಬರುತ್ತಿದ್ದರು. ಅವರು ಒಂದು ಬಿಳಿ ನಿಕ್ಕರ್, ಟೀಶರ್ಟ್ ಹಾಕಿಕೊಂಡು ಕೈಲಿ ಒಂದು ರ್‍ಯಾಕೆಟ್ ಹಿಡಿದು ತಮ್ಮ ಕಚೇರಿಯ ಒಳಗೆ ಹೋದರು. ವರದಿಗಾರರ ದಂಡೂ ಅವರನ್ನು ಹಿಂಬಾಲಿಸಿತು.

ಇದೇನು ಸರ್! ಕಚೇರಿಗೆ ಈ ಅವತಾರದಲ್ಲಿ ಬಂದಿದೀರಿ? ಪತ್ರಕರ್ತರ ಆಶ್ಚರ್ಯಭರಿತ ಪ್ರಶ್ನೆಯಿದು.

ಹ್ಞಾ! ಬ್ಯಾಡ್‌ಮಿಂಟನ್ ಆಡೋಕೆ ಹೋಗಿದ್ನಲ್ಲ, ಕೆಲ್ಸ ಇತ್ತು ಅಂತ ಹಾಗೇ ಆಫೀಸಿಗೆ ಬಂದ್ ಬಿಟ್ಟೆ ಎಂದು ಯಥಾಪ್ರಕಾರ ತಣ್ಣನೆಯ ಉತ್ತರ ನೀಡಿದರು.

ಸ್ಪೀಕರ್ ಕಚೇರಿಗೆ ತನ್ನದೇ ಆದ ಘನತೆ, ಗೌರವ ಇರುತ್ತದೆಂಬ ಅಂಶ ಕೃಷ್ಣರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಆದರೆ ಅವರು ಅದನ್ನು ಸ್ವಾಭಾವಿಕವಾಗಿ ತೆಗೆದುಕೊಂಡಿದ್ದರಷ್ಟೆ.

ಇನ್ನೊಂದು ಫ್ಲಾಷ್‌ಬ್ಯಾಕ್ ದೃಶ್ಯ: ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸ್ವರ್ಣಯುಗ' ಅದು. ಅವರ ಸಂಪುಟದಲ್ಲಿ ಕೃಷ್ಣ ಕೈಗಾರಿಕಾ ಸಚಿವರಾಗಿದ್ದರು. ವಯಸ್ಸು ಬೇರೆ ಚಿಕ್ಕದು. ಉತ್ಸಾಹ ಊರೆಲ್ಲಾ ಹರಡಿಕೊಂಡಿತ್ತು. ಆಗ ದೇಶದಲ್ಲಿ ಪೆಟ್ರೋಲ್ ಉತ್ಪನ್ನಗಳಿಗೆ ಬರಗಾಲ ಬಡಿದುಕೊಂಡಿತ್ತು. ಭಾರತ ಪಾಕಿಸ್ತಾನ ಯುದ್ಧದ ಕಾರ್ಮೋಡ. ಹೀಗಾಗಿ ಕೇಂದ್ರ ಸರ್ಕಾರ ಮಿತವ್ಯಯ ನೀತಿಯನ್ನು ಜಾರಿಗೆ ತಂದಿತ್ತು. ಅದು ರಾಜ್ಯಗಳಿಗೂ ಅನ್ವಯಿಸಿದ್ದರಿಂದ ದೇವರಾಜ ಅರಸರು ಎಲ್ಲಾ ಸರ್ಕಾರಿ ವೆಚ್ಚಗಳ ಮೇಲೆ ಕತ್ತರಿ ಆಡಿಸತೊಡಗಿದರು. ಆ ಕತ್ತರಿಗೆ ಸಚಿವರು ಬಳಸುವ ಪೆಟ್ರೋಲೂ ಹೊರತಾಗಿರಲಿಲ್ಲ. ಸರಿ, ಕೃಷ್ಣ ಹೊಸ ಮಾರ್ಗ ಕಂಡುಕೊಂಡರು. ಕೂಡಲೇ ಅದೊಂದು ದಿನ ಬೆಳಿಗ್ಗೆ ಆಗ ಬೆರಳೆಣಿಕೆಯಷ್ಟಿದ್ದ ಪತ್ರಿಕಾ ವರದಿಗಾರರು, ಛಾಯಾಗ್ರಾಹಕರನ್ನು ಕರೆಸಿದರು. ಪೆಟ್ರೋಲ್ ಉಳಿಸಲು ತಾವು ಸೈಕಲ್‌ನಲ್ಲೇ ವಿಧಾನಸೌಧದಲ್ಲಿನ ಕಚೇರಿಗೆ ಹೋಗುವುದಾಗಿ ಘೋಷಿಸಿ ಸೈಕಲ್ ಹತ್ತಿ ಹೊರಟೇಬಿಟ್ಟರು.

ಮಾರನೇ ದಿನ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಕೃಷ್ಣ ಸೈಕಲ್ ಮೇಲೆ ಹೋಗುತ್ತಿರುವ ಚಿತ್ರ ಹಾಗೂ ಸುದ್ದಿ ಪ್ರಕಟವಾಯಿತು. ಒಂದೇ ದಿನದಲ್ಲಿ ಕೃಷ್ಣ ಆದರ್ಶ ಸಚಿವರಾದರು. ಅನಂತರ ಜನ ಅದನ್ನು ಮರೆತರು. ಅವರಿಗೂ ಮೊದಲೇ ಕೃಷ್ಣ ಅವರೇ ಸೈಕಲ್ಲನ್ನೂ ಮರೆತಿದ್ದರು!

ಇದು ಎಸ್.ಎಂ. ಕೃಷ್ಣ ಅವರ ವ್ಯಕ್ತಿತ್ವದ ಲಘು ಪರಿಚಯ. ಅವರು ಎಂದೂ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡುವುದೇ ಇಲ್ಲ. ಇಬ್ಬನಿಯ ಪರದೆಯ ನಡುವೆ ತೂರಿಕೊಂಡು ಹಸಿರು ಹುಲ್ಲುಗಾವಲಿನ ಮೇಲೆ ಆಹ್ಲಾದಕರ ವಾಕಿಂಗ್ ಮಾಡಬಯಸುವ ಪ್ರಫುಲ್ಲ ಮನಸ್ಸು ಅವರದ್ದು.

ಆಕರ್ಷಕ ಬಣ್ಣಗಳ ಉಡುಪು, ರುಚಿಯಾದ ಆಹಾರ; ಹಾಗೆಯೇ ಸುಸಂಸ್ಕೃತ ಗೆಳೆಯರು ಅವರ ದೈನಂದಿನ ಬದುಕಿನ ಅವಿಭಾಜ್ಯ ಅಂಗಗಳು. ಅವರದ್ದು ಮೃದು ಸ್ವಭಾವದ ರಾಜಕಾರಣ. ಏನೇ ಮಾತನಾಡಬೇಕಾದರೂ ಕೂಡಲೇ ಪ್ರತಿಕ್ರಿಯಿಸುವುದಿಲ್ಲ. ಯೋಚಿಸಿ, ನಿಧಾನವಾಗಿ ಒಂದೊಂದೇ ಪದವನ್ನು ತಕ್ಕಡಿಯಲ್ಲಿ ಹಾಕಿ ತೂಗಿ ನೋಡುತ್ತಲೇ ಮಾತು ಮುಂದುವರಿಸುತ್ತಾರೆ. ಹೀಗೆ ಮಾಡುವಾಗ ಎದುರು ಕುಳಿತ ವ್ಯಕ್ತಿಯ ಬಾಡಿಲಾಂಗ್ವೇಜ್' ಅನ್ನೂ ಗಮನಿಸುತ್ತಿರುತ್ತಾರೆ. ಮಾತು ಇಷ್ಟವಿಲ್ಲ ಎಂದೆನಿಸಿದಾಗ ಒಂದು ಕಿರು ನಗೆಯನ್ನಷ್ಟೇ ಉಕ್ಕಿಸಿ ಅದರಲ್ಲೇ ಹಲವು ಅರ್ಥಗಳನ್ನು ಕೂರಿಸುತ್ತಾರೆ. ಇಂಥ ಕೃಷ್ಣ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷಗಳ ಕಾಲ ಆಡಳಿತ ನಡೆಸಿದರು. ಇಷ್ಟು ಸುದೀರ್ಘ ಸಮಯದಲ್ಲಿ ಅದೆಷ್ಟು ಘಟನೆಗಳು ಘಟಿಸಿ ಹೋದವು! ಇಷ್ಟೆಲ್ಲದರ ನಡುವೆಯೂ ಏನೂ ಆಗದವರಂತೆ ಮೇಲ್ನೋಟಕ್ಕೆ ಕೃಷ್ಣ ಕಂಡಿದ್ದರೂ ವಾಸ್ತವ ಸ್ಥಿತಿ ಹಾಗಿರಲಿಲ್ಲ.

ಮುಖ್ಯಮಂತ್ರಿಯಾಗಿ ಕೃಷ್ಣ ಅಧಿಕಾರ ವಹಿಸಿಕೊಂಡ ಕೂಡಲೇ ಪ್ರಸಿದ್ಧ ಚಿತ್ರನಟ ಡಾ. ರಾಜ್‌ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿದಾಗ ದಿಕ್ಕು ತಪ್ಪಿದ ಹರಿಣಿಯಂತಾಗಿದ್ದರು. ಅಧಿಕಾರವೇ ಕೈಬಿಟ್ಟು ಹೋಗಬಹುದಾಗಿದ್ದ ಈ ಸಂಕಷ್ಟದಿಂದ ಹೊರಬರುತ್ತಿದ್ದಂತೆಯೇ ನಿರಾಳವಾಗಿ ಉಸಿರುಬಿಟ್ಟಿದ್ದರು. ಇದು ಬಹಳ ಕಾಲ ಸ್ಥಾವರ ಸ್ಥಿತಿಯಲ್ಲೇನೂ ಇರಲಿಲ್ಲ. ಮಾಜಿ ಸಚಿವ ನಾಗಪ್ಪನವರನ್ನು ಅಪಹರಿಸುವುದರ ಮೂಲಕ ವೀರಪ್ಪನ್ ಕೃಷ್ಣರ ನಿದ್ರೆಯ ರಾತ್ರಿಗಳನ್ನೂ ದೋಚಿಕೊಂಡು ಹೋಗಿದ್ದ.

ಕೃಷ್ಣ ಅತ್ಯಂತ ಸೂಕ್ಷ್ಮ ಮನಸ್ಸಿನ ರಾಜಕಾರಣಿ. ಇಡೀ ರಾಜ್ಯದ ಬದುಕನ್ನು ಸೊಬಗುಗೊಳಿಸಬೇಕೆಂಬ ಕನಸು ಅವರದ್ದು. ದುರಂತವೆಂದರೆ ಅವರ ಕನಸಿನ ದೋಣಿಗೆ ತೂತು ಕೊರೆಯುತ್ತಿದ್ದವರಲ್ಲಿ ಕೆಲವರು ಅವರ ಸಹೋದ್ಯೋಗಿ ಹಿರಿಯ ಸಚಿವರೇ ಆಗಿದ್ದರು. ಇದರ ಅರಿವು ಬಹಳ ಸಮಯದವರೆಗೆ ಕೃಷ್ಣರ ಪ್ರeಗೆ ದಕ್ಕಲೇ ಇಲ್ಲ. ಜಾರಿಹೋದ ಸಮಯವನ್ನು ಬಾಚಿಕೊಳ್ಳಲು ಸಾಧ್ಯವಾಗುವಂತಿದ್ದರೆ ಅದೆಂಥ ಚೆನ್ನ!
ನಾಗಪ್ಪ ಕಾಡಿನಲ್ಲಿ ಹಿಂಸೆ ಅನುಭವಿಸುತ್ತಿದ್ದಾಗ ಕೃಷ್ಣ ಅವರೂ ಅದೇ ಸ್ಥಿತಿಯಲ್ಲಿದ್ದರು. ತನ್ನೊಳಗಿನ ಅಂತರಂಗವನ್ನು ಬಿಚ್ಚಿ ಹರಡಲು ಎದುರಿಗೆ ಅವರ ಸಹೋದ್ಯೋಗಿಗಳೇ ಇರಲಿಲ್ಲ. ಇಂಥ ಗಂಭೀರ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಪ್ರವಾಸಗಳಲ್ಲೇ ಇರುತ್ತಿದ್ದರು. ಶ್ರೀಕಂಠಯ್ಯ, ಘೋರ್ಪಡೆ, ಕಾಗೋಡು ತಿಮ್ಮಪ್ಪ, ದೇಶಪಾಂಡೆ, ರಂಗನಾಥ್, ಧರ್ಮಸಿಂಗ್ ಮುಂತಾದ ಹಿರಿಯ ಸಚಿವರು ಅವರದೇ ಲೋಕದಲ್ಲಿ ತಲ್ಲೀನರಾಗಿದ್ದರು. ಇವರು ಯಾರೂ ಕೃಷ್ಣರಿಗೆ ಹೆಗಲು ಕೊಡುವ ಮನಸ್ಸನ್ನೇ ಪ್ರದರ್ಶಿಸಲಿಲ್ಲ.

ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಹುಡುಗ; ಧೈರ್ಯವಂತ. ಮುಖ್ಯಮಂತ್ರಿಗಳಿಗೆ ಶಕ್ತಿಯಾಗಿ ನಿಂತಿದ್ದೇ ಈ ಶಿವಕುಮಾರ್. ಈತನ ಕೃಷ್ಣ ನಿಷ್ಠೆಯನ್ನು ಯಾವ ಕಾಲಕ್ಕೂ ಪ್ರಶ್ನಿಸುವಂತೆಯೇ ಇಲ್ಲ. ಆದರೆ ಒಬ್ಬನೇ ವ್ಯಕ್ತಿ ಎಷ್ಟೊಂದು ಭಾರ ಹೊರಲು ಸಾಧ್ಯ? ನಾಗಪ್ಪ ಪ್ರಕರಣದೊಂದಿಗೆ ಕಾವೇರಿ ಜಲ ವಿವಾದವೂ ಪೆಡಂಭೂತವಾಗಿ ಕೃಷ್ಣರನ್ನು ಅಮರಿಕೊಂಡಾಗ ಹೇಗಾಗಿರಬೇಡ? ನಿಜ, ಹೊಳೆಯುತ್ತಿದ್ದ ಕೃಷ್ಣರ ಮುಖ ಆಯಾಸದಿಂದ ಹೆಪ್ಪುಗಟ್ಟಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ಇದು ಯಾವುದೂ ಅವರ ಕಾರ್ಯಶೈಲಿಗೆ ಅಡ್ಡ ಬರಲಿಲ್ಲ. ಅವರ ಕನಸಿನ ಕರ್ನಾಟಕಕ್ಕಾಗಿ ಒಂದೇ ಗುರಿಯೊಂದಿಗೆ ದೌಡಾಯಿಸಿದರು.

ನಡುದಾರಿಯಲ್ಲೇ ನೇಪಥ್ಯಕ್ಕೆ ಸರಿಯುವ ವ್ಯಕ್ತಿತ್ವ ಕೃಷ್ಣ ಅವರದ್ದಲ್ಲ. ಎಲ್ಲವನ್ನು ಎದುರಿಸುತ್ತಲೇ ಅವಧಿಗೆ ಮೊದಲೇ ಚುನಾವಣೆ ಘೋಷಿಸಿದರು. ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಶಾಸಕರು ಆರಿಸಿ ಬರಲಿಲ್ಲ. ಕೇವಲ ಶಾಸಕನಾಗಿ ಹಿಂದೆ ಸರಿದು ನಿಂತರು. ಇದರ ಪರಿಣಾಮವೆಂದರೆ ಜಾತ್ಯತೀತ ಜನತಾದಳ- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದದ್ದು. ಈ ಸರ್ಕಾರದ ಮುಖ್ಯಮಂತ್ರಿ ಗಾದಿ ಧರ್ಮಸಿಂಗ್ ಅವರನ್ನು ಕೈಬೀಸಿ ಕರೆಯಿತು.

ನಿರೀಕ್ಷಿಸಿ : ಹರಕೆಯ ಕುರಿಯಾಗಿಯೇ ಅವತರಿಸಿರುವ ರಾಜಕಾರಣಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X