• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಂತ್ರ + ದ್ವೇಷ + ದರ್ಪ = ದೇವೇಗೌಡ

By ಜೆ.ಎಸ್. ನಾರಾಯಣ ರಾವ್ (ಜೆಸುನಾ)
|

ಮೊದಲನೆ ದೃಶ್ಯ

ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಸಮಯ. ಆಗ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದರು. ಕಾಂಗ್ರೆಸ್ ಪ್ರತಿಪಕ್ಷದ ಮೊದಲ ಸ್ಥಾನದಲ್ಲಿತ್ತು. ಈ ಹೊತ್ತಿಗೆ ವೀರಪ್ಪ ಮೊಯಿಲಿ ಮಾಜಿ ಮುಖ್ಯಮಂತ್ರಿಗಳಾಗಿಬಿಟ್ಟಿದ್ದರು. ಸದನ ಬೆಳಗ್ಗೆ ಆರಂಭಗೊಂಡಾಗಿನಿಂದಲೂ ಗದ್ದಲದ ವಾತಾವರಣವನ್ನೇ ಪಡೆದುಕೊಂಡಿತ್ತು. ಅಧಿಕೃತ ಕಲಾಪಗಳಾದ ಪ್ರಶ್ನೋತ್ತರ, ಶೂನ್ಯ ವೇಳೆಯೆಲ್ಲಾ ಮುಗಿದ ಮೇಲೆ ಕಾಂಗ್ರೆಸ್ ಗಂಭೀರ ವಿಷಯವೊಂದನ್ನು ಕೈಗೆತ್ತಿಕೊಂಡು ಆಡಳಿತ ಪಕ್ಷದ ನೀರಿಳಿಸುವ ಕೆಲಸದಲ್ಲಿ ನಿರತವಾಗಿತ್ತು.

ಒಂದು ಹಂತದಲ್ಲಿ ವೀರಪ್ಪ ಮೊಯಿಲಿ ಎದ್ದು ನಿಂತು ದೇವೇಗೌಡರ ಸರ್ಕಾರವನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಳ್ಳತೊಡಗಿದರು. ಇದರಿಂದ ಸಹಜವಾಗಿಯೇ ಗೌಡರು ಕೆರಳಿದರು. ಅದೇ ಕೋಪದಲ್ಲೇ ಎರಡೂ ಕೈಗಳನ್ನು ತಮ್ಮ ಬಾಯಿಯ ಬಳಿ ಇಟ್ಟುಕೊಂಡು, ನಾಗಸ್ವರ ಊದುವಂತೆ ಅಭಿನಯ ಮಾಡುತ್ತಾ ಇಂಥದನ್ನೆಲ್ಲ ನನ್ನ ಮುಂದೆ ಊದುವುದು ಬೇಡ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು. ಗೌಡರ ಈ ಕ್ರಿಯೆ ಮೇಲುನೋಟಕ್ಕೆ ಯಾರಿಗೂ ಏನೂ ಅನ್ನಿಸದೇ ಇರಬಹುದು. ಆದರೆ ಒಂದು ಹಿಂದುಳಿದ ಜಾತಿಯ ವೃತ್ತಿಯನ್ನು ಹಿಡಿದು ಅವರ ಜಾತಿಯನ್ನೇ ಹೀಯಾಳಿಸುವ ಹಿಂದಿನ ಮನೋಧರ್ಮ ಎಂಥವರನ್ನೂ ನೋಯಿಸುವಂಥದೆ.

ಒಬ್ಬ ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತವಾಗಿರಬೇಕಿದ್ದ ಗೌಡರು ವಿವೇಕರಹಿತರಾಗಿ ವರ್ತಿಸಿದ ಈ ಪರಿಕ್ರಮಕ್ಕೆ ಇಡೀ ವಿರೋಧಿ ಪಾಳೆಯ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತು. ಮೊನಚು ಮಾತುಗಳು ಗೌಡರತ್ತ ತೂರಿ ಬರತೊಡಗಿದವು.

'ಮೊಯಿಲಿ ಅವರ ಜಾತಿ ಹಿಡಿದು ನಾನೆಲ್ಲಿ ಅವಮಾನಿಸಿದೆ? ನನ್ನ ತಂದೆಯೂ ತಲೆಗೆ ಹೂ ಮುಡಿಯುತ್ತಿದ್ದರು. ಅದನ್ನು ಅವಮಾನ ಅಂತ ಭಾವಿಸಲು ಸಾಧ್ಯವೆ?' ಎಂದು ತಿಪ್ಪೆ ಸಾರಿಸುವ ಕೆಲಸದಲ್ಲಿ ಇನ್ನಿಲ್ಲದಂತೆ ಗೌಡರು ನಿರತರಾದರು. ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡತನವನ್ನೇನೂ ಅವರು ಪ್ರದರ್ಶಿಸಲಿಲ್ಲ. ಮೊಯಿಲಿ ನಿಜಕ್ಕೂ ಎತ್ತರದ ವ್ಯಕ್ತಿ. ಹೀಗಾಗಿ ಅವರು ಪ್ರಕರಣವನ್ನು ಬೆಳೆಸಲು ಹೋಗಲಿಲ್ಲ.

ಇದು ದೇವೇಗೌಡರ ವ್ಯಕ್ತಿತ್ವದ ಒಂದು ಮುಖ ಮಾತ್ರ. ಅವರು ಎಂದೂ ಸಹೋದ್ಯೋಗಿ ರಾಜಕಾರಣಿಗಳಿಗೆ ಬೆಲೆಯನ್ನಾಗಲೀ, ಗೌರವವನ್ನಾಗಲೀ ಕೊಟ್ಟವರೇ ಅಲ್ಲ. ಗೌಡರು ರಾಜಕೀಯವಾಗಿ ಎಂದೂ ಎತ್ತರದ ಮನೋಸ್ಥಿತಿಗೆ ಏರಲೇ ಇಲ್ಲ. ಒಂದು ಗ್ರಾಮ ಪಂಚಾಯಿತಿ ಅಧ್ಯಕ್ಷನಂತೆಯೇ ಅವರು ಈಗಲೂ ವರ್ತಿಸುತ್ತಿದ್ದಾರೆ. ಈ ಮಾತನ್ನು ಅವರ ನಿಕಟ ಸಹೋದ್ಯೋಗಿಗಳೇ ಅನೇಕ ಬಾರಿ, ಅನೇಕ ಕಡೆಗಳಲ್ಲಿ ಹೇಳಿದ್ದಾರೆ. ಇದು ಗೌಡರ ಕಿವಿಗೂ ಬಿದ್ದಿದೆ. ಪ್ರಯೋಜನ ಏನು? ಗೌಡರಂತೂ ಸುಧಾರಿಸುವ ಇಸಂ ಅಲ್ಲ. ಇಂಥ ದೇವೇಗೌಡರಿಗೆ ಮುಖ್ಯಮಂತ್ರಿ ಪದವಿಯನ್ನು ಯಾರೂ ಕೊಡಲಿಲ್ಲ. ಅದನ್ನವರು ಕಿತ್ತುಕೊಂಡರು. ಹೇಗೆ?

ಎರಡನೇ ದೃಶ್ಯ

ನಿರೀಕ್ಷಿಸಿದ್ದಂತೆಯೇ ಜನತಾದಳ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸೂತ್ರ ಹಿಡಿಯಲು ಮುಂದಾಯಿತು. ಮುಖ್ಯಮಂತ್ರಿ ಯಾರಾಗಬೇಕು ಎಂಬ ಜಿeಸೆಯೇ ಇರಲಿಲ್ಲ. ಜೆ.ಎಚ್. ಪಟೇಲರೇ ಮುಖ್ಯಮಂತ್ರಿಯೆಂದು ರಾಮಕೃಷ್ಣ ಹೆಗಡೆಯವರೇ ನಿರ್ಧರಿಸಿದ್ದರು. ಆದರೆ ಪಕ್ಷದ ಬಹುತೇಕ ನಾಯಕರು ಹೆಗಡೆಯವರೇ ಮುಖ್ಯಮಂತ್ರಿಯಾಗಬೇಕೆಂಬ ಪಟ್ಟು ಹಿಡಿದಿದ್ದರು. ಇದರ ನಿರ್ಧಾರದಲ್ಲಿ ಪಾಲ್ಗೊಳ್ಳಲೆಂದು ಬಿಜು ಪಟ್ನಾಯಕ್ ಬೇರೆ ಬಂದಿಳಿದಿದ್ದರು.

ಈ ಹಂತದಲ್ಲಿ ದೇವೇಗೌಡರು ಜಾಗೃತರಾದರು. ಒಂದಿಷ್ಟು ತೂಕಡಿಸಿದರೂ ಅಧಿಕಾರ ಕೈಬಿಟ್ಟು ಹೋಗುತ್ತದೆಂಬ ಅರಿವು ಬಂತು. ಕೂಡಲೇ ತಮ್ಮ ಮೂವರೂ ಮಕ್ಕಳನ್ನು ಕೂರಿಸಿಕೊಂಡು ತಂತ್ರ ರೂಪಿಸಿದರು. ಅದರ ಪರಿಣಾಮವೆಂದರೆ ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ಒಕ್ಕಲಿಗರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದು ಜನತಾದಳದ ಕಚೇರಿಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ದಳದ ಕಚೇರಿಯಲ್ಲಿ ಹೆಗಡೆ, ಬೊಮ್ಮಾಯಿ, ಪಟೇಲ್, ಬಿಜು ಪಟ್ನಾಯಕ್ ಮುಂತಾದ ಮುಖಂಡರು ಗಂಭೀರ ಚರ್ಚೆಯಲ್ಲಿ ಮಗ್ನರಾಗಿದ್ದರು. ಬಂದ ಜನ ಕಚೇರಿ ಬಾಗಿಲಿಗೆ ಬೀಗ ಹಾಕಿದರು. ಅವರು ಅಲ್ಲಿಗೇ ತೃಪ್ತಗೊಳ್ಳಲಿಲ್ಲ. ಫುಲ್ ಲೋಡಾಗಿ ತೂರಾಡುತ್ತಿದ್ದ ಜನ ಹೆಗಡೆ ಅವರ ವಂಶಾವಳಿಯನ್ನೇ ಅವಾಚ್ಯ ಶಬ್ದಗಳಿಂದ ಜಾಲಾಡುತ್ತಿದ್ದರು. ಬೊಮ್ಮಾಯಿ ಮತ್ತು ರಘುನಾಥರಾವ್ ದೇಶಪಾಂಡೆ ಉದ್ರಿಕ್ತ ಜನರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರೂ ಪ್ರಯೋಜನ ಕಾಣಲಿಲ್ಲ. ಕೊನೆಗೆ ಹೆಗಡೆ ಅವರೇ ಹೊರ ಬಂದು ಮನವಿ ಮಾಡಿದಾಗ ಜನ ಬಾಗಿಲಿಗೆ ಹಾಕಿದ್ದ ಬೀಗ ತೆಗೆದರು.

ಹೆಗಡೆ ನೇತೃತ್ವದ ಇಡೀ ಸಭೆ ವಿಧಾನಸೌಧದ ಸಮ್ಮೇಳನ ಸಭಾಂಗಣಕ್ಕೆ ಸ್ಥಳಾಂತರಗೊಂಡಿತು. ಪರಿಸ್ಥಿತಿ ಅಲ್ಲಿಯೂ ಭಿನ್ನವಾಗಿಯೇನೂ ಇರಲಿಲ್ಲ. ವಿಧಾನಸೌಧದ ಒಳಗೆ, ಹೊರಗೆ ಜನ ಜಮಾಯಿಸಿಬಿಟ್ಟಿದ್ದರು. ಕೆಲವರು ಸೌಧದ ಗುಮ್ಮಟವನ್ನೂ ಏರಿ ಕುಳಿತಿದ್ದರು! ಚಿತ್ರನಟ ಅನಂತನಾಗ್, ನಾಗೇಗೌಡ, ಸಿಂಧ್ಯ, ಎಂ.ಪಿ. ಪ್ರಕಾಶ್ ಮುಂತಾದವರು ಜನ ಸಮೂಹವನ್ನು ಸೀಳಿಕೊಂಡು ವಿಧಾನಸೌಧ ಪ್ರವೇಶಿಸಬೇಕಾದರೆ ಹರಸಾಹಸ ಮಾಡಬೇಕಾಯಿತು. ಇವರೆಲ್ಲರೂ ಜನರ ಅವಾಚ್ಯ ಶಬ್ದಗಳನ್ನು ನುಂಗಿಕೊಂಡೇ ಒಳಸೇರಿಕೊಂಡರು.

ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಬಗ್ಗೆ ನಾಯಕರಿಗೆ ಮನವರಿಕೆಯಾಗಿತ್ತು. ಜೆ.ಎಚ್. ಪಟೇಲರಂತೂ ಮುಖ್ಯಮಂತ್ರಿ ಗಾದಿ ತನಗೆ ಬೇಡವೇ ಬೇಡವೆಂದು ತಿರಸ್ಕರಿಸಿಬಿಟ್ಟರು. ಪಟೇಲ್ ಈ ನಾಡು ಕಂಡ ಅತ್ಯಂತ ಪ್ರತಿಭಾನ್ವಿತ ಹಾಗೂ ಸುಸಂಸ್ಕೃತ ರಾಜಕಾರಣಿ. ದಬಾದುಬಿ ರಾಜಕಾರಣ ಅವರು, ಹಾಗೂ ಹೆಗಡೆ, ಬೊಮ್ಮಾಯಿ ಅಂಥವರಿಗೆ ಹೇಳಿ ಮಾಡಿಸಿದ್ದಲ್ಲ. ಹೀಗಾಗಿ ಕೊನೆಗೆ ಅವರು ಒಂದು ನಿಲುವಿಗೆ ಬಂದು ನಿಂತರು.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಪತ್ರಕರ್ತರ ಕೊಠಡಿಯ ಪಕ್ಕದಲ್ಲೇ ಸಮ್ಮೇಳನ ಸಭಾಂಗಣ ಇದೆ. ಅದರೊಳಗಿನಿಂದ ಹೊರಬಂದ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಅವರು ದೇವೇಗೌಡರ ಅಕ್ಕಪಕ್ಕದಲ್ಲಿ ನಿಂತರು. ಗೌಡರ ಎರಡೂ ಕೈಗಳನ್ನು ಅವರಿಬ್ಬರು ಮೇಲೆತ್ತಿ ಜನಕ್ಕೆ ಭರವಸೆ ಕೊಟ್ಟಾಗ ಹೊರಗೆ ನೆರೆದಿದ್ದ ಜನ ಹರ್ಷೋದ್ಗಾರ ಮಾಡಿದರು. ಕೂಡಲೇ ಅಪಾರ ಪ್ರಮಾಣದಲ್ಲಿ ತಂದಿದ್ದ ಪಟಾಕಿಗಳನ್ನು ಸಿಡಿಸತೊಡಗಿದರು. ಅದರ ಶಬ್ದಕ್ಕೆ ವಿಧಾನಸೌಧ ನಡುಗಿ ಹೋದರೂ ಅದು ಕುಸಿದು ಬೀಳಲಿಲ್ಲ!

ಮುಖ್ಯಮಂತ್ರಿಯಾಗಿ ದೇವೇಗೌಡರ ದರ್ಬಾರು ಹೀಗೆ ಆರಂಭಗೊಂಡಿತು. ಇಲ್ಲೇ ಇನ್ನೊಂದು ಪ್ರಸಂಗವನ್ನೂ ಉಲ್ಲೇಖಿಸಿದರೆ ದೇವೇಗೌಡರ ಒಂದು ಸ್ಪಷ್ಟ ಚಿತ್ರ ಸಿಕ್ಕಂತಾಗುತ್ತದೆ.

ಮೂರನೇ ದೃಶ್ಯ

ಹುಬ್ಬಳ್ಳಿಯ 'ನವನಾಡು' ದಿನಪತ್ರಿಕೆಯ ಸಂಪಾದಕ ಡಾ.ಪಾಂಡುರಂಗ ಪಾಟೀಲರಿಗೆ ಸಮಸ್ಯೆಯೊಂದು ಎದುರಾಗಿತ್ತು. ಪತ್ರಿಕೆಗಾಗಿ ಕರ್ನಾಟಕ ಹಣಕಾಸು ನಿಗಮದಿಂದ ಸಾಲ ಪಡೆಯಲಾಗಿತ್ತು. ಹಿಂದಿನ ಆಡಳಿತ ಮಂಡಳಿ ಮಾಡಿದ್ದ ಸಾಲವದು. ಈಗ ಅಸಲಿಗಿಂತ ಬಡ್ಡಿಯೇ ಹಿಮಾಲಯ ಪರ್ವತದಷ್ಟೇ ಎತ್ತರಕ್ಕೆ ಬೆಳೆದಿತ್ತು. ಪತ್ರಿಕೆ ಸಂಕಷ್ಟದಲ್ಲಿತ್ತು. ಹೀಗಾಗಿ ಅಸಲು ಕಟ್ಟಲು ಅವರು ಸಿದ್ಧರಾಗಿದ್ದರು. ಬಡ್ಡಿ ಮನ್ನಾ ಆದರೆ ಸಾಕಾಗಿತ್ತು. ಗೌಡರ ಸಂಪುಟದಲ್ಲಿ ಜವಳಿ ಸಚಿವರಾಗಿದ್ದ ಸಿದ್ದನಗೌಡ ಪಾಟೀಲರು ನಾನಿದ್ದೇನೆ ಬನ್ನಿ' ಎಂದು ಪಾಂಡುರಂಗ ಪಾಟೀಲರಿಗೆ ಪಾನ್ ಕೊಟ್ಟು ಬೆಂಗಳೂರಿಗೆ ಕರೆಸಿಕೊಂಡರು.

ಆಗ ದೇವೇಗೌಡರ ಅಧಿಕೃತ ನಿವಾಸ ಅನುಗ್ರಹ'ವಾಗಿತ್ತು. ಒಂದು ಬೆಳಗ್ಗೆ ಸಿದ್ದನಗೌಡರು ಪಾಟೀಲರೊಂದಿಗೆ ಗೌಡರನ್ನು ಕಾಣಲು ಮನೆಗೆ ಹೋದರು. ಗೌಡರು ಯಥಾಪ್ರಕಾರ ತಮ್ಮ ಬೋಳು ತಲೆಯ ಮೇಲೆ ಟವಲು ಹಾಕಿಕೊಂಡು ಕೂತಿದ್ದರು. ಸಿದ್ದನಗೌಡರು ಒಳಗೆ ಕಾಲಿಡುತ್ತಲೇ ಇಡೀ ಮೈಯನ್ನು ನೆಲಕ್ಕೆ ಬಗ್ಗಿಸಿ 'ನಮಸ್ಕಾರ್ರೀ ಸರ' ಎಂದರು.

ಗೌಡರು ತಲೆ ಎತ್ತದೆಯೆ ಏನೊ ಪಾಟೀಲ, ಇಷ್ಟು ದಿನ ಎಲ್ಲಿಗೆ ಹೋಗಿದ್ಯೋ?' ಎಂದು ದರ್ಪದಿಂದಲೇ ಧಮಕಿ ಹಾಕಿದರು.

ಹೀಂಗ ಭಾಳ ಕೆಲ್ಸ ಇತ್ರಿ ಸರ. ಬರೂಣಂದ್ರ ಬರೂಕಾಗ್ಲಿಲ್ರೀ ಸರ'. ಹಲ್ಲು ಗಿಂಜುತ್ತಾ ಸಿದ್ದನಗೌಡ ಪಾಟೀಲರು ವಿವರಿಸಿದರು.

ಏನೊ! ನನಗಿಂತ ನಿಂಗೇ ಕೆಲಸ ಜಾಸ್ತೀನ? ಎಂದು ಹಿಂದಿಗಿಂತ ದನಿ ಎತ್ತರಿಸಿ ಗೌಡರು ಕೇಳಿದಾಗ ಸಿದ್ದನಗೌಡ ತತ್ತರಿಸಿ ಹೋದರು.

ಹೆ! ಅದು ಹ್ಯಾಂಗ್ರಿ ಸರ? ನಿಮ್ಮ ಮುಂದೆ ನಾನು ಏನದೀನ್ರಿ ಸರ.'

ಸರಿ ಈಗೇನು ಬಂದಿದ್ದು?'

ಇವರು ಪಾಂಡುರಂಗ ಪಾಟೀಲ ಅಂತ. ನವನಾಡು ಸಂಪಾದಕರು ಅದಾರ್ರಿ ಸರ. ಕೆ.ಎಸ್.ಎಫ್.ಸಿ.ಯಿಂದ ಸಾಲ ತಗಂಡಾರ್ರಿ ಸರ. ಬಡ್ಡಿ ಕೊಡಾಕ ಆಗಂಗಿಲ್ರಿ. ಅಸಲು ಕಟ್ತಾರ, ಬಡ್ಡಿ ಮಾಫ್ ಮಾಡಬೇಕು' ಎಂದು ಸಿದ್ದನಗೌಡ ಎರಡೂ ಕೈಜೋಡಿಸಿ ಮನವಿ ಮಾಡಿದರು.

ಈಗಲೂ ಗೌಡರು ತಲೆ ಎತ್ತದೆಯೆ ಪಾಟೀಲರು ಕೊಟ್ಟ ಮನವಿಯನ್ನು ತೆಗೆದುಕೊಂಡರು. ಅದರ ಮೇಲೆ ಒಮ್ಮೆ ಕಣ್ಣಾಡಿಸಿದರು. ಅದರ ಮೇಲೆ ರಂಗೋಲಿಯಂತೆ ಏನನ್ನೋ ಗೀಚಿದರು. ತಮ್ಮ ಸಮಸ್ಯೆ ಬಗೆಹರಿಯಿತು ಅಂತ ಪಾಟೀಲರು ಮತ್ತು ಸಚಿವ ಸಿದ್ದನಗೌಡರು ಸಂತಸದಿಂದ ಹೊರಬಂದರು. ಇದಾಗಿ ಒಂದು ವಾರದ ನಂತರ ಹಣಕಾಸು ನಿಗಮದಿಂದ ಒಂದು ತಗಾದೆ ಪತ್ರ ನವನಾಡುಗೆ ಬಂದಿತು. ಅದರಲ್ಲಿ ಅಸಲು ಮತ್ತು ಬಡ್ಡಿ ಸಮೇತ ಇಂತಿಷ್ಟು ದಿನದಲ್ಲಿ ಚುಕ್ತಾ ಮಾಡಬೇಕೆಂದು ತಿಳಿಸಿತ್ತು. ತಪ್ಪಿದರೆ ಸಂಸ್ಥೆಯ ಮುದ್ರಣ ಘಟಕವನ್ನು ಹರಾಜಿಗೆ ಇಡಲಾಗುವುದೆಂದು ಎಚ್ಚರಿಸಲಾಗಿತ್ತು. ಕೊನೆಗೆ ಆದದ್ದು ಹಾಗೆ ಅನ್ನಿ.

ಅನಂತರ ಗೊತ್ತಾಯಿತು. ಸಂಪೂರ್ಣ ಹಣ ವಸೂಲಿ ಮಾಡುವಂತೆ ದೇವೇಗೌಡರು ಹಣಕಾಸು ಸಂಸ್ಥೆಗೆ ಆದೇಶಿಸಿದ್ದರೆಂದು! ಇಲ್ಲಿ ಬರೆದ ಎಲ್ಲ ಘಟನೆಗಳಿಗೂ ಈ ಕಾಲಮಿಷ್ಟ ಪ್ರತ್ಯಕ್ಷ ಸಾಕ್ಷಿಯಾಗಿದ್ದ.

ಕೊನೆಯ ದೃಶ್ಯ

ಸನ್ ಎರಡು ಸಾವಿರದ ಐದು ಮತ್ತು ಆರನೇ ವರ್ಷಾಬ್ದಗಳಲ್ಲಿ ಕಾಂಗ್ರೆಸ್ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂತು. ಈ ಸಮ್ಮಿಶ್ರ ಸರ್ಕಾರ ಇದ್ದದ್ದೆ ಒಂದೂವರೆ ವರ್ಷ. ಇಷ್ಟು ಕಾಲ ಕಾಂಗ್ರೆಸ್ ಕಂಗಾಲು ಸ್ಥಿತಿಯಲ್ಲಿ ಇರುವಂತೆ ಮಾಡುವಲ್ಲಿ ದೇವೇಗೌಡರು ಯಶಸ್ಸು ಕಂಡರು. ಕೊನೆಗೊಂದು ದಿನ ಈ ಸರ್ಕಾರಕ್ಕೆ ಉಸಿರುಗಟ್ಟಿಸಿ ಸಾಯಿಸಿ ತಮ್ಮ ಮಗ ಎಚ್.ಡಿ. ಕುಮಾರಸ್ವಾಮಿಯನ್ನು ಬಿಜೆಪಿ ಮೈತ್ರಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ಹಾದಿ ಮಾಡಿಕೊಟ್ಟು ಮಗನನ್ನೇ ಮುಖ್ಯಮಂತ್ರಿಯಾಗಿಸಿದ ಮಹಾತಂತ್ರ ರಾಜಕಾರಣಿ ಎಂದು ಲೋಕೋತ್ತರ ಪ್ರಸಿದ್ಧಿ ಪಡೆದರು.

ಮುಂದಿನ ರಾಜಕಾರಣಿ : ಯಾರಿಗೂ ಸಲಾಮು ಹೊಡೆಯದ ಮಾದರಿ ಹೆಣ್ಣು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Noted veteral journalist J.S. Narayana (Jesuna) has pen portrayed former Prime Minister Haradanahalli Doddegowda Devegowda as he has seen him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more