• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳಾ ದಿನಾಚರಣೆ ವಿಶೇಷ ಲೇಖನ: ವರ್ಷಕ್ಕೊಮ್ಮೆ ಅವಳ ದಿವಸ!

By ಜಯನಗರದ ಹುಡುಗಿ
|

ಗುರುವಾರ ವಿಶ್ವ ಮಹಿಳಾ ದಿನ. ಮನೆಯಲ್ಲಿ ನೆನಪಿಸಿಕೊಂಡು ಶುಭಾಶಯ ಹೇಳುವ ಜನರಿದ್ದಾರೆ. ಆಫೀಸಿನಲ್ಲಿ ಒಂದು ಹೂಗುಚ್ಛ ಕೊಟ್ಟು ಊಟಕ್ಕೆ ಕರೆದೊಯ್ಯುವ ಜನರೂ ಇದ್ದಾರೆ. ಮನೆಯಲ್ಲಿ, ಆಫೀಸಿನಲ್ಲಿ ನಡೆಸುವ ಈ ಆಚರಣೆಗಳ ನಡುವೆ ನಾವೂ ಎಷ್ಟೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಅನಿಸುವುದೂ ಅದೊಂದು ದಿನಕ್ಕೆ ಮಾತ್ರ.

ಈ ಮಹಿಳಾ ದಿನಾಚರಣೆ ಅಂದಾಕ್ಷಣ ನೆನಪು ಬರೋದು ನಮ್ಮ ಮನೆಗಳಲ್ಲಿ ಏನೂ ಅಪೇಕ್ಷೆ ಮಾಡದೆ ಕೆಲಸ ಮಾಡುವ ಅಮ್ಮಂದಿರು. ಎಲ್ಲರೂ ರಜೆ ಇರಬೇಕು, ಬಿಡುವಿರಬೇಕು, ಸಂಬಳ ಬರಬೇಕು ಎಂದು ಉಸುರುವ ಸಾಮಾಜಿಕ ನ್ಯಾಯ ನಮ್ಮ ಮನೆಯಲ್ಲೆ ಠುಸ್ಸೆಂದು ಕೈ ಕೊಡುತ್ತದೆ. ಅವಳಿಗೆ ಕೊಂಚ ಬಿಡುವು ಕೊಡುವ ಯೋಚನೆಯನ್ನೂ ಸಹ ನಾವು ಮಾಡುವುದಿಲ್ಲ. ಪ್ರಾಯಶಃ ಇದನ್ನು ಅವಳೇ ಎಸಗಿಕೊಂಡ ಸ್ವಯಂಕೃತ ಅಪರಾಧ ಎಂದೂ ನಾನು ತಿಳಿದುಕೊಳ್ಳುತ್ತೇನೆ.

ಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ

ಏನನ್ನೂ ಹೇಳದೆ ಎಲ್ಲಾ ಕೆಲಸವನ್ನು ತನ್ನ ಮೈಮೇಲೆ ಎಳೆದುಕೊಳ್ಳುವ ಹೆಂಗಸರಿಗೆ ತಮ್ಮನ್ನು ಬದಲಾವಣೆ ಮಾಡಿಕೊಳ್ಳುವ ಮನಸ್ಸು ಮಾತ್ರ ಬರುವುದಿಲ್ಲ. ಮಗ ಯಾವತ್ತೂ ಆ ಕೆಲಸ ಮಾಡಿಲ್ಲ... ಈಗಲೂ ಮಾಡಲ್ಲ.. ಈ ರೀತಿಯ ಭಾವನೆಯನ್ನು ಅಮ್ಮಂದಿರು ಹೊರಹಾಕದಿದ್ದರೆ ಮನೆಯಲ್ಲಿ ಬದಲಾವಣೆ ಬರೋದು ತುಂಬಾ ಕಷ್ಟ. ಸಮಾಜ ನಮಗೆ ಕಟ್ಟುಪಾಡು ಹಾಕಿದೆ. ನಾವು ಅದನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅಥವಾ ಈ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ಇವತ್ತು ತನ್ನ ಮಗಳಿಗೆ ಕೆಲಸ ಮಾಡಲು ಕಲಿಸುವ ಹೆಣ್ಣುಮಕ್ಕಳೇ ಜಾಸ್ತಿ ಆಗಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆ ನಾಗರೀಕರನ್ನಾಗಿ ನೋಡುವ ಪರಿ ಬದಲಿಸುವ ಪ್ರಯತ್ನ ಮಾಡಬೇಕಾಗಿದೆ..

ನಾನು ಕೆಲಸ ಮಾಡುತ್ತಿದ್ದ ಹಳೆ ಕಛೇರಿಯಲ್ಲಿ ನಮ್ಮ ಟೀಮ್ ನಲ್ಲಿ ಒಮ್ಮೆ ಗರ್ಭಿಣಿ ಹೆಣ್ಣು ತನ್ನ ರಜೆಯ ವಿಷಯ ತಿಳಿಸಲು ಬಂದಿದ್ದಳು. ಅವಳು ತಿಳಿಸಿ ಎದ್ದು ಹೋದ ನಂತರ ಅಲ್ಲಿನ ಮ್ಯಾನೇಜರ್ "ಮಗೂನ ಹೇರೋಕೆ ಇವರಿಗೆ ಸಂಬಳ ಕೊಡಬೇಕು. ರಜೆಯಲ್ಲಿದ್ದರೂ ಸಂಬಳ ಕೊಡಬೇಕು. Where is equality?" ಎಂದು ಕಿರುಚಾಡಿದ್ದನ್ನು ನಾನು ನೋಡಿದ್ದೇನೆ. ಹೆಣ್ಣು ಮಕ್ಕಳು ಇರೋದು ಗಂಡಂದಿರ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡೋಕೆ ಎಂದು ಆಗಾಗ ಹೇಳುತ್ತಿದ್ದ ಮ್ಯಾನೇಜರಿಗೆ ಹೆಣ್ಣು ಮಗು ಆದಾಗ ಆ ಮಗುವಿನ ಬಗ್ಗೆ ನಾನು ಖೇದ ಪಟ್ಟುಕೊಂಡೆ. ನಮಗೆ ಗೊತ್ತಿಲ್ಲದೇ ಬರುವ ಇಂತಹ ಮಾತುಗಳು ನಮ್ಮ ಜೀವನದಲ್ಲಿ ಏನೇನು ಪರಿಣಾಮ ಬೀರುತ್ತದೆ ಎಂದು ನಾವು ಯೋಚಿಸುತ್ತಾ ಹೋದರೆ ಅದಕ್ಕೆ ಎಲ್ಲೆಯೇ ಇಲ್ಲ.

ಗೆಳೆಯ ಸಿಕ್ಕಿದ್ದಾಗ, "ನನಗೆ ಸುಮ್ಮನೆ ಅಡುಗೆ ಮಾಡಿಕೊಡುವ ಹುಡುಗಿ; ಅವಳ ಅಸ್ತಿತ್ವವೇ ಇಲ್ಲದೇ, 'ನೀ ಹೇಳಿದಂಗೆ ಕೇಳಿಕೊಂಡು ಹೋಗ್ತೀನಿ' ಎನ್ನುವ ಹುಡುಗಿ ಬೇಡವೇ ಬೇಡ. ಅವಳು ಕೆಲಸ ಮಾಡಬೇಕು. ಇಬ್ಬರೂ ಸೇರಿ ಅಡುಗೆ ಮಾಡ್ತೀವಿ. ಜೀವನ ಸಾಗಿಸ್ತೀವಿ," ಎಂದ. ಈ ಮಾತುಗಳು ಕೇಳಿ ಕಣ್ಣಲ್ಲಿ ನೀರು ಬಂತು. ಅಂತಹ ಗಂಡಸರು ತುಂಬಾ ಕಡಿಮೆ. ಓದಿಗೂ ಅವರ ಮಾತಿಗೂ ಯಾವುದೇ ಸಂಬಂಧವಿಲ್ಲ ಎಂಬ ಅರಿವು ನನಗೆ ಗಂಡಸರನ್ನು ಕಂಡಾಗ ಆಗುತ್ತದೆ.

ಈಕೆ ಗೃಹಿಣಿಯಲ್ಲ, ಇಡೀ ಮನುಕುಲವನ್ನೇ ಹೊತ್ತ ಜಗಜ್ಜನನಿ

ಬಹಳ ಓದಿರ್ತಾರೆ. ಸಂಬಳ ಬರುತ್ತದೆ. ಲೋಕ ಜ್ಞಾನವೂ ಇರುತ್ತದೆ. ಆದರೂ ಸಹ ಮಾತಿಗೂ ವಿದ್ಯೆಗೆ ಸಂಬಂಧವೇ ಇರುವುದಿಲ್ಲ ಎನ್ನುವಂತೆ ವರ್ತಿಸುತ್ತಾರೆ. ನೀವು ಯಾವುದೇ ಮನೆಯನ್ನು ನೋಡಿ, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋದರೆ, ಸಮಯ ಸಂದರ್ಭ ಏನೇ ಇದ್ದರೂ ಅಡುಗೆ ಕೆಲಸ ಹೆಣ್ಣುಮಕ್ಕಳದೇ; ಇಷ್ಟ ಇದೆಯೋ ಇಲ್ಲವೋ ಅವರದನ್ನು ಮಾಡಲೇಬೇಕು.

ಮನೆಯಲ್ಲಿ ಕಸ ಗುಡಿಸೋಕೆ ಹೆಣ್ಣಿಗೆ ಮಾತ್ರ ಹೇಳಿಕೊಟ್ಟು, ಗಂಡು ಮಕ್ಕಳಿಗೆ ಅದರ ಅವಶ್ಯಕತೆ ಇಲ್ಲ ಎನ್ನುವ ಎಲ್ಲರಿಗೂ ನನ್ನ ಧಿಕ್ಕಾರ. ಒಮ್ಮೊಮ್ಮೆ ನಾನು ಮತ್ತು ನನ್ನ ಗೆಳತಿಯರು ಮಾತಾಡಿಕೊಳ್ತೇವೆ, "ಎಲ್ಲರನ್ನೂ ಒಂದು 2 ವರ್ಷ ಹೊರದೇಶಕ್ಕೆ ಕಳುಹಿಸಿದರೆ ಎಲ್ಲಾ ಕೆಲಸ ಮಾಡಲು ಕಲೀತಾರೆ ಬಿಡೆ," ಎಂದು ನಕ್ಕು ಸುಮ್ಮಾನಾಗ್ತಿದ್ವಿ.

ದೇವತೆ ಎಂದು ಪೂಜಿಸುವ ಹೆಣ್ಣುಮಕ್ಕಳನ್ನು ಈಗಲೂ ಅಳೆಯುವುದು ಅವಳ ಬುದ್ಧಿಮತ್ತೆಯಿಂದ, ಅವಳ ಕಲೆಯಿಂದ, ಅವಳ ಸೌಂದರ್ಯದಿಂದ; ಅಲ್ಲದೇ ಅವಳ ಅಡಿಗೆ ಕಲೆ, ಮನೆ ನಡೆಸುವ ಕಲೆಯಿಂದಷ್ಟೇ ಎನ್ನುವುದು ಸತ್ಯ. ಮೊನ್ನೆ ನಾ ಅಂದುಕೊಳ್ಳುತ್ತಿದ್ದೆ, "ಎಲ್ಲರೂ ಊಟ ಮಾಡುತ್ತಾರೆ. ಆದರೆ ಅಡಿಗೆ ಕೆಲಸದ ಜವಬ್ದಾರಿಯನ್ನು ಮಾತ್ರ ಯಾಕೆ ಒಂದು ಗುಂಪಿಗೆ ಹೊರಿಸಲಾಗಿದೆ. ಒಮ್ಮೊಮ್ಮೆ ಈ ಅಸಮಾನತೆ ಕೋಪ ತರಿಸುತ್ತದೆ.

ನನ್ನಪ್ಪ ಅಮ್ಮನಿಗೆ ನಾವಿಬ್ಬರೂ ಹೆಣ್ಣು ಮಕ್ಕಳೆಂದು ತುಂಬಾ ಜನ ಮರುಕ ಪಡುತ್ತಿದ್ದಾರೆ. ಈಗಲೂ ಅಪ್ಪನಿಗೆ "ಅಯ್ಯೋ ಸುಧೀಂದ್ರಂಗೆ ಇಬ್ಬರೂ ಹೆಣ್ಣು ಮಕ್ಕಳು. ಮುಂದೇನೋ ಪಾಪ" ಎಂದು ಈ 21ನೇ ಶತಮಾನದಲ್ಲಿಯೂ ಮಾತಾಡುವವರಿದ್ದಾರೆ. ಹೆಣ್ಣು ಮಕ್ಕಳ ತಂದೆ ತಲೆ ಬಾಗಬೇಕು ಎಂಬ ಅಸಹ್ಯದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ.

ಮಹಿಳೆಗೆ ಅನುಕಂಪದ ನುಡಿಗಳು ಬೇಡ, ಗೌರವ ಬೇಕು

ಹೆಣ್ಣು ಮೃದುವಾಗಿರಬೇಕು, ಶಾಂತವಾಗಿರಬೇಕು, ತ್ಯಾಗ ಮಾಡಬೇಕು, ತಲೆ ಬಗ್ಗಿಸಬೇಕು, ಜೋರಾಗಿ ಮಾತಾಡಬಾರದು ಎಂಬ ಹುಚ್ಚು ಕಟ್ಟುಪಾಡುಗಳನ್ನು ಇನ್ನಾದರೂ ಮುರಿಯಬೇಕಿದೆ. ಗಂಡು ಜೋರಾಗೇ ಇರಬೇಕು, ಹೆಣ್ಣು ಶಾಂತವಾಗಿರಬೇಕೆಂಬ ವಿಚಿತ್ರ ಮಾತುಗಳು ನನಗೆ ಅರ್ಥವಾಗುವುದಿಲ್ಲ.

ತನ್ನ ಕೆಲಸ ಕಾರ್ಯ, ತನ್ನ ಗೌರವವನ್ನು ಕಾಪಾಡಿಕೊಳ್ಳಲು ಹೆಣ್ಣು ಯಾವಾಗಲೂ ಮುಂದಾಗಬೇಕು. ಹೆಣ್ಣು ಎಂದು ಗೌರವ ಕೊಡುವುದಕ್ಕಿಂತ ಆಕೆಯೂ ಮನುಷ್ಯಳು ಎಂದು ಗೌರವಿಸುವ ಪದ್ಧತಿ ಶುರುವಾಗಬೇಕಿದೆ. ಈ ವಿಶ್ವ ಹೆಣ್ಣು ಮಕ್ಕಳ ದಿವಸದಂದಾದರೂ ಇದು ನಡೆಯಲಿ.

ಅಂದಹಾಗೆ ಈವತ್ತಿಗೆ ಜಯನಗರದ ಹುಡುಗಿ ಬರೆಯೋದಕ್ಕೆ ಶುರು ಮಾಡಿ ಒಂದು ವರ್ಷವಾಯ್ತು. ವರ್ಷದ ಪಯಣ ಹರ್ಷ ತಂದಿದೆ. ನಿಮ್ಮ ಗಮನ ನನ್ನ ಮೇಲೆ ಇರಲಿ .

ಸಿಗೋಣ.

ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!

English summary
Women's Day: Meghana Sudhindra from Barcelona written her opinion about woman on the eve of World Women's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more