• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನನಿತ್ಯ ಹೊಟ್ಟೆ ಸೇರುವ ಕಾಯಿಪಲ್ಯಗಳು ಬಂದಿದ್ದೆಲ್ಲಿಂದ?

By ಜಯನಗರದ ಹುಡುಗಿ
|

ನಾನು ಅಡಿಗೆ ಮಾಡುವಾಗ ತಕರಾರು ಆಗುವ ಎರಡು ವಿಷಯ, ಉಪ್ಪು ಎಷ್ಟು ಹಾಕೋದು? ಖಾರವೆಷ್ಟು? ಎಂದು. ಖಾರಕ್ಕೆ ಮೆಣಸಿನಕಾಯಿಯ ಲೆಕ್ಕ ಮಾಡದೇ ಒಮ್ಮೊಮ್ಮೆ ಮಿತಿ ಮೀರಿ ಹಾಕಿ ಅತ್ತಿದ್ದು ನಾ ಬಾರ್ಸಿಲೋನಾದಲ್ಲಿಯೇ. ಅಜ್ಜನ ತಿಥಿಯಲ್ಲಿ ವ್ರತ ಎಂದೇನೋ ಮೆಣಸಿನ ಅಡಿಗೆ ಮಾಡುವಾಗ ತಿನ್ನಲಾರದೆ ತಿನ್ನುವ ಪರಿಸ್ಥಿತಿ.

"ಯಾವನ್ ಕಂಡು ಹಿಡಿದನೋ ಈ ಮೆಣಸು?" ಎಂದು ಬೈದುಕೊಂಡದ್ದು ಇದೆ. ಮೆಣಸಿನಕಾಯಿ ನಮ್ಮ ದೇಶದ್ದು, ಮೆಣಸು ಇನ್ನೆಲಿನ್ನದ್ದೋ ಸುಮ್ನೆ ನಮ್ಮ ಕರ್ಮ ಎಂದು ಆಗಾಗ ಅನ್ನುತ್ತಿದ್ದಾಗ ಅಪ್ಪ ಮೆಣಸು ನಮ್ಮದು, ಮೆಣಸಿನಕಾಯಿ ದಕ್ಷಿಣ ಅಮೇರಿಕಾದ್ದು ಎಂದಾಗ ನಾ ನಂಬಲು ತಯಾರಿರಲ್ಲಿಲ್ಲ.

ಅಜ್ಜನ ಲೈಬ್ರರಿಯಲ್ಲಿ ಹುಡುಕಿ ಅಪ್ಪ ಪುಸ್ತಕದ ತನ್ನ ಕಾಪಿ ಕೊಟ್ಟಾಗಲೇ, ನನಗೆ ನಾವು ತಿನ್ನುವ ಎಷ್ಟೋ ತರಕಾರಿಗಳು, ಸೊಪ್ಪು, ಸೊದೆ, ಗೆಡ್ಡೆಗಳು(ಮಡಿಗೆ ಬರುವುದು ಸಹ) ಅದರ ಹುಟ್ಟು ದಕ್ಷಿಣ ಅಮೇರಿಕಾದಲ್ಲಿಯೆ. ಬಿಜಿಎಲ್ ಸ್ವಾಮಿಯವರು 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ" ಹೆಸರಿನ ಪುಸ್ತಕವನ್ನೇ ಬರೆದಿದ್ದಾರೆ. ಅಲ್ಲಿರುವ ಒಂದೊಂದು ಮಾಹಿತಿ ಓದಿದಾಗಲೂ ನಾ ದಂಗು ಬಡಿದು ಕೂತೆ.

ಹಳೆತನ ಬಿಟ್ಟು ಹೊಸತನಕ್ಕೆ ತೆರೆದುಕೊಂಡಿರುವ ಅಜ್ಜಿಯರು

ನೂರಕ್ಕೆ ತೊಂಬತ್ತು ಪಾಲು ಭಾರತ ಭೂಮಾತೆ ಕೊಟ್ಟ ಕಾಯಿಪಲ್ಯಗಳನ್ನೂ ಗೆಡ್ಡೆ ಗೆಣಸು, ಹಣ್ಣು ಹಂಪಲುಗಳನ್ನೂ ತಿಂದು ತೃಪ್ತಿ ಪಟ್ಟುಕೊಂಡಿದ್ದ ನಮ್ಮ ಹೊಟ್ಟೆಯಳಗೆ, ಹದಿನಾರನೆ ಶತಮಾನದಿಂದ ಈಚೆಗೆ ಕಡಲಾಚೆಯಿಂದ ಕಾಲಿಟ್ಟ ಸಸ್ಯಜನ್ಯ ತಿನಿಸುಗಳು ಒದಗಿ ಬಂದವು. ಅವುಗಳಿಗೆ ನಮ್ಮ ನಾಲಿಗೆ ಲೊಟಗೆ ಹೊಡೆಯಿತು, ಹೊಟ್ಟೆ ತಾಳ ಹಾಕಿತು. ಹೀಗೆ ಬಂದ 50-100 ವರ್ಷಗೊಳಗಾಗಿ ಆಮದು ಸಸ್ಯಗಳ ಫಲವೇ ನಮ್ಮ ದೈನಂದಿನ ತಿನಿಸುಗಳಲ್ಲಿ ಮೇಲುಗೈಯಾಯಿತು. ಭಾರತೀಯ ಮಡಿಲಿನಲ್ಲಿ ಬೇರು ಬಿಟ್ಟಿತು, ಬೆಳೆಯಿತು, ಸಾಗುವಳಿಗೆ ಒಗ್ಗಿತ್ತು. ಮಡಿಲ ವಿಸ್ತಾರದ ಬಹುಭಾಗವನ್ನು ಅಕ್ರಮಿಸಿಕೊಂಡಿತು. ಅದುವರೆಗೂ ನಮ್ಮ ಹೊಟ್ಟೆ ಪಾಡನ್ನು ನಿರ್ವಹಿಸಿಕೊಂಡು ಬಂದಿದ್ದ ಕಾಯಿ ಪಲ್ಯ ಹಣ್ಣು ಹಂಪಲುಗಳು ತೆರೆಯ ಹಿಂದೆ ಸರಿದವು. 'ಸೀಮೆ' ಆಹಾರ ವಸ್ತುಗಳು ಬಹಿರಂಗಕೆ ಇಳಿದವು.

ನಾನು ಬಾರ್ಸಿಲೋನಾದಲ್ಲಿದ್ದಾಗ ಸದಾ ರಾಂಬ್ಲಾ ಹತ್ತಿರದ ಪೋರ್ಟ್ ಆಫ್ ಕೊಲಂಬಸ್ ಗೆ ಹೋಗುತ್ತಿದ್ದೆ. ಅಲ್ಲಿ ಕೊಲಂಬಸ್ ಭಾರತಕ್ಕೆ ಹೋಗುತ್ತೇನೆ ಎಂದು ಅಮೇರಿಕಾಕ್ಕೆ ಹೋಗಿ ಮಾಡಿದ ಗೊಂದಲಕ್ಕೆ ಒಂದು ಸ್ಮಾರಕ ಕಟ್ಟಿದ್ದರು. ನಾನು ಯೋಚಿಸುತ್ತಿದ್ದೆ ಈ ಕೊಲಂಬಸ್ ಇಲ್ಲಿ ಬಂದಿದ್ದರೆ ನಮ್ಮ ಹೊಟ್ಟೆಯ ಕಥೆ ಬೇರೆಯದೇ ಆಗಿರುತ್ತಿತ್ತು. ಇವರ ಥರ ಬರಿ ಟೊಮಾಟೊ, ಸಾಲ್ಸಾ ಅಂದುಕೊಂಡಿರುತ್ತಿದ್ದೆವಾ ಅನ್ನೋದು ಯೋಚಿಸುತ್ತಿದೆ.

ಸ್ವಲ್ಪ ಹೊತ್ತು ಮಹಾರಾಣಿಯಾಗಿಸುವ ವಿಭಿನ್ನ ಪ್ರಪಂಚ!

15ನೇ ಶತಮಾನದಿಂದ ನಮ್ಮ ಭಾರತಕ್ಕೆ ವಲಸಿಗರು, ಬಹು ಮುಖ್ಯವಾಗಿ ಯುರೋಪಿನಿಂದ ಆಗಮಿಸುವುದಕ್ಕೆ ಶುರು ಮಾಡಿದ್ದರು. ಅದರಲ್ಲಿ ವಾಸ್ಕೊ ಡಿ ಗಾಮಾ ಮುಖ್ಯವಾದವನು. 1467ಜುಲೈ 8ನೇ ತಾರೀಖು ಲಿಸ್ಬನಿನ ಜನಸಮೂಹ ಟೇಗಸ್ ದಡದಲ್ಲಿ ಗುಂಪು ಗೂಡಿತ್ತು. ಚರ್ಚಿನ ಪಾದ್ರಿಗಳು ಶಾಂತಿ ಮಂತ್ರಗಳನ್ನು ಘೋಷಿಸಿದರು. ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ದಕ್ಷಿಣದ ತುದಿಯನ್ನ ಬಳಸಿ, ಹತ್ತು ತಿಂಗಳಾದ ಮೇಲೆ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಕಲ್ಲಿಕೋಟೆಯಲ್ಲಿ ಮೇ 20, 1498ರಂದು ಲಂಗರು ಬಿಟ್ಟಿತು. ಇದು ಆಗಾಗಲೇ ನಮ್ಮೊಡನೆ ವ್ಯಾಪಾರೋದ್ಯಮ ಬೆಳೆಸಿಕೊಂಡಿದ್ದ ಅರಬ್ಬರಿಗೆ ಹಿಡಿಸುತ್ತಿರಲ್ಲಿಲ್ಲ. ಅವರಿಬ್ಬರಿಗೆ ತಕರಾರು ಏರ್ಪಟ್ಟಿತ್ತು. ಆದರೆ ಈ ವಾಸ್ಕೋ ಡಿ ಗಾಮ ಅಲ್ಲಿನ ರಾಜ ಜಾಮೋರನ್ ಜೊತೆಗೆ ಒಪ್ಪಂದ ಮಾಡಿಕೊಂಡ. ಇದಿಷ್ಟಾಗಿದ್ರೆ ನಮ್ಮ ಹೊಟ್ಟೆಯ ಕಥೆ ಬೇರೆಯದೇ ಆಗುತ್ತಿತ್ತು.

ಆದರೆ ಈ ಪೋರ್ಚುಗೀಸರು 1,500 ಕ್ರಾಬಲ್ ಎಂಬ ಮುಖ್ಯಾಧಿಕಾರಿಯೊಡನೆ 38 ನಾವೆಗಳನ್ನ ಅದರಲ್ಲಿ 1,500 ಜನ ಯೋಧರನ್ನ ತುಂಬಿಕೊಂಡು ಭಾರತಾಭಿಮುಖವಾಗಿ ಯಾನ ಮಾಡಿದ್ದರು. ದಕ್ಷಿಣಾಭಿಮುಖವಾಗಿ ಹೋಗುತ್ತಿದ್ದ ನಾವೆಗಳು ದಾರಿ ತಪ್ಪಿ ನೈರುತ್ಯ ದಿಕ್ಕಿನಲ್ಲಿ ಪ್ರಯಾಣವನ್ನ ಮುಂದುವರೆಸಿ ಬ್ರೆಝಿಲ್ ತಲುಪಿದರು. ಇವರಿಗೆ ಇದು ಬ್ಲೆಸ್ಸಿಂಗ್ ಇನ್ ದಿಸಗೈಸ್. ಅಲ್ಲಿ ಅವರು ಸೌದೆ, ಕುಡಿಯುವ ನೀರನ್ನು, ಆಹಾರ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳುವ ಕೇಂದ್ರ ಸ್ಥಾಪಿತವಾಯಿತು. ಅದಾದ ನಂತರ ಕಷ್ಟ ನಷ್ಟಗಳನ್ನ ಅನುಭವಿಸಿಕೊಂಡು 6 ನೌಕೆಗಳೊಂದಿಗೆ ದಕ್ಷಿಣ ಭಾರತಕ್ಕೆ ವಲಸೆ ಹೂಡಲು ನಾಂದಿಯಾಯಿತು. ಗೋವೆಯ ಕಡಲ ತೀರ, ಆಫ್ರಿಕಾದ ತೀರ ಪ್ರದೇಶಗಳು, ಜಪಾನ್, ಮಕಾವ್ ಹೀಗೆ ಎಲ್ಲಾ ಕಡೆ ಅವರು ವಲಸೆಗೆ ಹೋದರು.

ಹೀಗೆ ಪೋರ್ಚುಗಲ್ - ಭಾರತದ ಸಮುದ್ರ ಮಾರ್ಗದಲ್ಲಿ ಸುಮಾರು 165 ವರ್ಷಗಳು ಸುಮಾರು ನಾವೆಗಳು ಬಂದು ಹೋಗಿತ್ತು. ಮೊದಲು ಲಿಸ್ಬನಿಂದ ಬ್ರೆಝಿಲಿಗೆ ಹೋಗಿ, ಅಲ್ಲಿ ಆಹಾರಾದಿಗಳನ್ನ ಸಂಗ್ರಹಿಸಿ ತುಂಬಿಕೊಂದು ಗೋವೆಯನ್ನ ಸೇರುವುದು ಪೋರ್ಚುಗೀಸರು ಸಾಧಾರಣ ಕ್ರಮವಾಗಿತ್ತು. ನಂತರ ಅಲ್ಲಿಂದ ಇಲ್ಲಿಗೆ ಸಾಮಗ್ರಿಗಳು ವಿನಿಮಯ, ಸಂಸ್ಕೃತಿ ಸುಲಭವಾಗಿ ಒಂದರೊಡನೆಂದು ಕಲೆತವು. ಚೀನಾ, ಜಪಾನ್, ಪೆಸಿಫಿಕ್ ದ್ವೀಪಗಳು ಮೊದಲಾದ ಪೂರ್ವ ರಾಷ್ಟ್ರಗಳಿಂದ ಭಾರತಕ್ಕೆ, ಭಾರತದಿಂದ ಅಲ್ಲಿಗೆ ಸಸ್ಯೋತ್ತ್ಪನ್ನ, ಸಸ್ಯಗಳೂ ವಸ್ತುಗಳೂ ಸೇರಿವೆ.

ಇವೆಲ್ಲ ನಡೆಯುತ್ತಿರುವಾಗ 1520ರಲ್ಲಿ ಮೆಗಲ್ಲನ್ ಎಂಬಾತ ಸಮುದ್ರ ಮಾರ್ಗವಾಗಿ ಭೂಮಿಯನ್ನು ಸುತ್ತುವರೆದು ಬಂದ. ಪೆಸಿಫಿಕ್ ದ್ವೀಪಗಳು ಬೆಳಕಿಗೆ ಬಂದವು. ಸ್ಪೇನಿನವರು ಮೆಕ್ಸಿಕೋನಿಂದ ಫಿಲಿಪೈನ್ಸ್ ದ್ವೀಪಕ್ಕೆ ಸಮುದ್ರ ಮಾರ್ಗವನ್ನು ಸ್ಥಾಪಿಸಿದರು. ನಂತರ ಪೋರ್ಚುಗೀಸರು ಫಿಲಿಪೈನ್ಸ್ ನ ದಕ್ಷಿಣ ದ್ವೀಪ ಲೊಲುಕ್ಕಾದಲ್ಲಿ ವಲಸೆ ಬಿಟ್ಟಿದ್ದರು. ಹಿಂಗಾಗಿ ದಕ್ಷಿಣ ಅಮೇರಿಕಾ, ಮೆಕ್ಸಿಕೋ ಸಸ್ಯೋತ್ಪನ್ನ ಸಾಮಗ್ರಿಗಳು ಫಿಲಿಗೆ ಬಂತು ಅದು ಪೋರ್ಚುಗೀಸರ ಕೈ ಸೇರಿತು. ತದನಂತರ ಅದು ನಮಗೆ ದಕ್ಕಿತು. ಹೀಗೆ ನೂತನ ಖಂಡದ ಬೆಳೆಗಳು ಪ್ರಾಚೀನ ಖಂಡಕ್ಕೆ ಸಾಗಿದ ಸಂದರ್ಭವೂ, ಪ್ರಾಚೀನ ಪ್ರದೇಶಗಳ ಬೆಳೆಗಳು ನೂತನ ಖಂಡಕ್ಕೆ ಆಗಮಿಸಿದ ಸಂದರ್ಭವೂ ಏರ್ಪಟ್ಟಿದ್ದು 16ನೇ ಶತಮಾನದಿಂದ ಆಚೆಗೆ ಎಂಬುದನ್ನು ಮುಖ್ಯವಾಗಿ ನೆನಪಲ್ಲಿಟ್ಟುಕೊಳ್ಳಬೇಕು.

ಸುಮಾರು ನಾಲ್ಕು ಶತಮಾನದ ಕಾಲ ಪೋರ್ಚುಗೀಸರ ವ್ಯವಹಾರ ಸಂಬಂಧ ನಮ್ಮ ಸಾಗುವಳಿ ಬೆಳೆಗಳನ್ನ ಮಾರ್ಪಾಡಿಸಿದ್ದಲದೇ ನಮ್ಮ ಹೊಟ್ಟೆಯ ದಿನಚರಿಯನ್ನ ಮಾರ್ಪಾಡಿಸಿದ್ದಲ್ಲದೆ ನಮ್ಮ ಸಂಸ್ಕೃತಿಯ ಮೇಲೂ ತಕ್ಕಮಟ್ಟಿನ ಪ್ರಭಾವ ಒತ್ತಿತ್ತು.

ಮುಂದಿನ ಸಂಚಿಕೆಯಲ್ಲಿ ಮೆಣಸಿನಕಾಯಿ, ಟೊಮ್ಯಾಟೋ, ಆಲೂ, ನೆಲಗಡಲೆ, ಜೋಳ, ಗೋಡಂಬಿ, ಹುರಳಿ ಕಾಯಿ, ಸಿಹಿ ಗೆಣಸು, ಸೀತಾಫಲ, ಸಪೋಟ, ಸೀಬೆ, ಅನಾನಸ್, ಪಪ್ಪಾಯಿ ಇವೆಲ್ಲದರ ನಮ್ಮ ಹೊಟ್ಟೆಗೆ ಸೇರಿಕೊಂಡ ಕಥೆ, ಮಡಿ ಮೈಲಿಗೆ ಎಲ್ಲ ತಿಳಿಸ್ತೀನಿ. ಕಾಯ್ತೀರಾ ಅಲ್ವಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Where the green vegetables have come from? Are they all Indian grown? Who brought them to India? An interesting article down the history lane by Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more