ನಾವು ಮೊದಲ ಬಾರಿಗೆ ಸ್ಯಾಂಟ್ರೋ ಕಾರು ಕೊಂಡ ಕಥೆ!

By: ಜಯನಗರದ ಹುಡುಗಿ
Subscribe to Oneindia Kannada

ಈ ವಾರ ನನ್ನ ಖಾಸಗಿ ಕಥೆಯನ್ನ ಹೇಳಲಿಕ್ಕೆ ಬಯಸುತ್ತೇನೆ. ಜಯನಗರದಲ್ಲಿ ಆವಾಗಿನ ಕಾರು ಕೊಳ್ಳುವ ಜನ, ಕಾರು ಕಲಿತುಕೊಂಡ ಪರಿ ಮತ್ತು ನಾನು ಕಲಿಯುವಾಗ ಪಡುವ ಪಡಿಪಾಟಲು. ಇವೆಲ್ಲದರ ಸಾಮ್ಯತೆ ವ್ಯತ್ಯಾಸ ಈ ವಾರದ ಅಂಕಣ.

ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬ ನಮ್ಮದು. ಒಂದು ಟಿವಿಎಸ್ champ, ಅದಾದ ನಂತರ ಕೈನೆಟಿಕ್ ಹೋಂಡಾದಲ್ಲಿ ನಾಲ್ಕು ಜನ ಕುಳಿತು ಹೋಗುತ್ತಿದ್ದ ನೆನಪು ಇನ್ನು ಹಸಿರಾಗಿದೆ. ನಾವು ನಾಲ್ಕು ಜನ, ಜೊತೆಗೆ ಅಜ್ಜಿ ತಾತರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಲುವಾಗಿ ಕಾರು ಕೊಳ್ಳುವ ಬಗ್ಗೆ ಮಾತಾಯಿತು. ನಾನು ಅಂಗಡಿಯಲ್ಲಿ ಟೊಮ್ಯಾಟೋ ತಗೊಂಡಷ್ಟೆ ಸುಲಭ ಎಂದು ಕೊಂಡಿದ್ದೆ ಕಾರು ಕೊಳ್ಳುವುದು. ಲಕ್ಷದ ಬಗ್ಗೆ ಲೆಕ್ಕವೂ ಗೊತ್ತಿರಲಿಲ್ಲ. ಎಲ್ಲರಿಗೂ ತಿಂಗಳಿಗೆ ಒಂದು ಲಕ್ಷ ಸಂಬಳ ಬರುತ್ತದೆ ಎಂದು ತಿಳಿದ್ದಿದ್ದೆ. ಅಪ್ಪ ದೊಡ್ಡ ಹುದ್ದೆಯಲ್ಲಿದ್ದರು ಎಂಬ ಅರಿವಿದ್ದರೂ ಸಹ, ಕಾರು ನಮಗೆ luxuryಯೇ.[ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು]

ಅಂತೂ ಇಂತೂ ಅಪ್ಪ ಕಾರು ತೆಗೆದುಕೊಳ್ಳಲು ಮನಸ್ಸು ಮಾಡಿದ್ದರು. ಅಪ್ಪ ಹೂ ಅಂದಿದ್ದು ನಾನು ಇಡೀ ಊರಿಗೆ ಕಾರು ಕೊಂಡೆವು ಅನ್ನುವ ಮಟ್ಟಿಗೆ ಹೇಳಿಕೊಂಡು ಬಂದಿದ್ದೆ. ಅಪ್ಪ 20 ವರ್ಷ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು ಸಹ ಸಾಲ ಕೊಡಲು ವಿಪರೀತ ತಕರಾರು ಮಾಡಿದ್ದರು. ಅದಿಲ್ಲ ಇದಿಲ್ಲ, ಸರ್ಕಾರಿ ಕೆಲ್ಸಕ್ಕೆ ಸೇರಿದವರ ಪಾಡಂತೂ ಹೇಳತೀರದು. ಸಾಲ ಪಡೆಯಬೇಕೆಂದರೆ ಅದಕ್ಕೊಂದು ಪಟ್ಟಿ, ಆಮೇಲೆ ಯಾರ್ಯಾರಿಗೆ eligibility ಇದೆ ಅನ್ನೋದು.

When we bought our news car Santro

ಇಷ್ಟೆಲ್ಲಾ ತೊಂದರೆ ತಾಪತ್ರಯಗಳನ್ನು ದಾಟಿಕೊಂಡು ಅಂತೂ ನಮ್ಮ ಮನೆಗೆ ಸ್ಯಾಂಟ್ರೋ ಕಾರು ಬಂತು. ತಮಾಷೆ ಎಂದರೆ ಯಾರಿಗೂ ಓಡಿಸಲಿಕ್ಕೆ ಬರುತ್ತಿರಲಿಲ್ಲ! ಅಪ್ಪನ ವಿಪರೀತ ಕೆಲಸದ ನಡುವೆ ಅಪ್ಪ ಕಲಿಯುವುದಕ್ಕೆ ಸಮಯ ಇರಲಿಲ್ಲ. ಅಮ್ಮ ಕಲಿಯೋದಕ್ಕೆ ಶುರು ಮಾಡಿದ್ದರು. ನಮಗೆ ವಿಪರೀತ ಖುಶಿ. ಅಮ್ಮ ಗಾಡಿಯಲ್ಲಿ ನಮ್ಮನ್ನ ಶಾಲೆಗೆ ಬಿಡುತ್ತಿದ್ದಳು, ಇನ್ನು ಮುಂದೆ ಕಾರು ಅಂತ ವಿಪರೀತ ಸಂತೋಷದಿಂದ ಇದ್ದೆವು.[ಬೆಂಗಳೂರಿನ ಕನ್ನಡಪ್ರೇಮಿ ಆಟೋ ಚಾಲಕರ ಕಥೆ!]

ಜಯನಗರ ಆವಾಗ ಖಾಲಿ ರಸ್ತೆಗಳಿಂದ ತುಂಬಿತ್ತು. 4ನೇ ಬ್ಲಾಕ್ ಬಿಟ್ಟರೆ ಮಿಕ್ಕಿದ್ದೆಲ್ಲ ಬ್ಲಾಕ್ ಗಳಲ್ಲಿ ಅಷ್ಟೊಂದು ಜನ ಓಡಾಡುತ್ತಿರಲಿಲ್ಲ. ಖಾಲಿ ರಸ್ತೆಯಲ್ಲಿ ಅಮ್ಮ ತುಂಬಾ ಚೆನ್ನಾಗಿ ಕಾರು ಓಡಿಸಲು ಕಲಿತುಕೊಂಡರು. ಮನೆಯವರೆಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ, ಅಮ್ಮ ಅಪ್ಪನಿಗಿಂತ ಮೊದಲು ಕಾರು ಕಲಿತಿದ್ದಕ್ಕೆ!

ಅವಳು ತಾತ ಅಜ್ಜಿಯರನ್ನು ಕೋರಿಸಿಕೊಂಡು ಎಲ್ಲ ಕಡೆ ಕರೆದುಕೊಂಡು ಹೋಗುತ್ತಿದ್ದರು. ನನ್ನ ಸೊಸೆ ಕರೆದುಕೊಂಡು ಬಂದಳು ಎಂದು ಹೆಮ್ಮೆಯಿಂದ ತಾತ ಹೇಳಿಕೊತ್ತಿದ್ದರು. ಅಜ್ಜಿಗೆ ಕಾರೆಂದರೆ ಊರೋರನೆಲ್ಲ ಕೂಡಿಸಿಕೊಂಡು ಹೋಗುವ ಸಾಧನ. ಒಮ್ಮೊಮ್ಮೆ ಅವರ ವೈಶಾಲ್ಯತೆ ಯಾವ ಮಟ್ಟಿಗೆ ಇರುತ್ತಿತ್ತು ಅಂದರೆ ಮನೆಯವರೆ ಆಟೋದಲ್ಲಿ ಹೋಗಬೇಕಾಗಿ ಬರುತ್ತಿತ್ತು.[ನನ್ನ ಹಣೆಗೆ ಗಲ್ಲಕೆ ಮುತ್ತನ್ನು ರಾಜಣ್ಣ ಕೊಟ್ಟಾಗ!]

ಮುಂದಿನ ಸೀಟಿನಲ್ಲಿ ಯಾರು ಕೂರಬೇಕಾಗಿ ಬರುತ್ತದೆ ಎಂಬ ಜಗಳ. ಅಪ್ಪ ಓಡಿಸೋಕೆ ಕಲಿತಾದ ಮೇಲೆ ಖಾಯಂ ಆಗಿ ಅಮ್ಮ ಕುಳಿತುಕೊಳ್ಳುತ್ತಿದ್ದರು. ಅಮ್ಮ ಓಡಿಸಿದ್ದರೆ ಅಪ್ಪ, ತಾತ ಒಮ್ಮೊಮ್ಮೆ, ಅಜ್ಜಿ ಸಹ ಪಂಡರಿಬಾಯಿ ಡೈಲಾಗ್ ಹೊಡೆದು ಮುಂದಿನ ಜಾಗ ಗಿಟ್ಟಿಸಿಕೊಳ್ಳುತ್ತಿದ್ದರು. ತಂಗಿ ವಿಪರೀತ ಆಸಕ್ತಿಯೊಂದಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರಿಂದೇನೋ ಅವಳಿಗೂ ಜಾಗ ಸಿಗುತ್ತಿತ್ತು. ನನಗೆ ಇದ್ಯಾವ ಅವಕಾಶವು ಇರುತ್ತಿರಲ್ಲಿಲ್ಲ.

ನಂದಾ ಟಾಕೀಸ್ ಇದ್ದ ರಸ್ತೆಯಲ್ಲಿ ಹಾಯಾಗಿ ಅಮ್ಮ ಕಾರು ಕಲಿತ್ತಿದ್ದರು. ಇವಾಗ ಜಯನಗರದಲ್ಲಿ ಒಂದು ನಿಮಿಷ ಕಾರು ನಿಲ್ಲಿಸಿದರೂ ಊರು ಕಿತ್ತುಹೋಗುವ ಹಾಗೆ ಹಾರ್ನ್ ಮಾಡುತ್ತಾರೆ. ನಮ್ಮ ಇಡೀ ರಸ್ತೆಯಲ್ಲಿ ಮೂರು ಮನೆಯವರಲ್ಲಿ ಕಾರು ಇತ್ತು. ನಮ್ಮದು ನಾಲ್ಕನೆಯ ಮನೆಯಾಗುತ್ತದ್ದಲ್ಲ ಎಂದು ತುಂಬಾ ಹರ್ಷ ಪಟ್ಟಿದ್ದೆ. ಮುಂಚೆ ಎಲ್ಲರೂ ಒಟ್ಟಿಗೆ ಹೋಗುವ ಪರಿ ತುಂಬಾ ಆನಂದ ತರುತ್ತಿತ್ತು.

ಇವಾಗ ಆ ಕಾರು ಹೋಗಿ ಮತ್ತೊಂದು ದೊಡ್ಡ ಕಾರು ಬಂದಿದೆ, ಮನೆಯ ಮುಂದೆ ದೃಷ್ಟಿ ಬೊಂಬೆಯ ಹಾಗೆ. ಓಡಿಸಲು ಯಾರಿಗೂ ಆಸಕ್ತಿ ಇಲ್ಲ. ನಾನು ತಂಗಿ ಇಬ್ಬರು ಪೈಪೋಟಿಗೆ ಬಿದ್ದು ಕಾರು ಕಲಿತುಕೊಂಡ್ವಿ. ಕಲಿಯುವಾಗ ಹೇಳಿಕೊಡುವ ಮೇಡಮ್, ಜಯನಗರದ ಆಚೆ ಹೋಗಿ ಕಲಿಬೇಕು , ಜಾಗನೇ ಇಲ್ಲ ಕಲಿಯೋದಕ್ಕೆ, ನಡೀರಿ ಎಂದು ಊರಾಚೆ ಅದ್ಯಾವುದೋ ಹೆಸರೇ ಕೇಳದ ಹಳ್ಳಿಗೆ (ಜೆಪಿ ನಗರದ) ಹತ್ತಿರ ಕರೆದುಕೊಂಡು ಹೋಗಿ ಕಾರು ಕಲಿಸಿದರು.[ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!]

ಕೆಲಸಕ್ಕೆ ಸೇರಿಕೊಂಡ ಮೊದಲ ತಿಂಗಳೆ bankನಿಂದ ಕಾರಿಗೆ ಸಾಲ ಕೊಡುವ ಎಲ್ಲಾ ಮಾಹಿತಿ ಬಂದಿತ್ತು. ಅಪ್ಪನಿಗೆ ತೋರಿಸಿ ನಕ್ಕಿದ್ದೆ. ನಮ್ಮ ರಸ್ತೆಯಲ್ಲಿ ಕನಿಷ್ಟ ಮನೆಗೆ ಎರಡು ಕಾರು ಇದೆ. ಪಾರ್ಕಿಂಗ್ ಮಾಡಲು ಇಬ್ಬರಿಗೊಬ್ಬರು ಪೈಪೋಟಿ ಪಟ್ಟುಕೊಂಡು ಜಗಳಕ್ಕೆ ಬೆಳಿಗ್ಗೆ ನಿಲ್ಲುತ್ತಾರೆ. ದಿನಾಗಲೂ ಆ ಕಾರನ್ನು ಒರೆಸಲಿಕ್ಕೆ ಒಬ್ಬರು, ಅದಿಕ್ಕೆ ಅಭಿಷೇಕ ಮಾಡುವ ಹಾಗೆ ನೀರು ಸುರಿದು ಸ್ವಚ್ಛ ಮಾಡುವುದು ಇದೆಲ್ಲ ತೀರ ಮಾಮೂಲಾಗಿದೆ. ಪಕ್ಕದ ಮಾಲ್ ಬಂದಮೇಲೆ, ನಮ್ಮ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಬೇಡಪ್ಪ ಎಂದು ಹೇಳಿದ ಅಜ್ಜಿಗೆ ರೋಡ್ ಏನು ನಿಮ್ಮಪ್ಪಂದ ಎಂದು ಗದರಿಸುವ ಜನರು ಜಾಸ್ತಿಯಾಗಿದ್ದಾರೆ.

ಬೆಂಗಳೂರಲ್ಲಿ ಟ್ರಾಫಿಕ್ ಜಾಸ್ತಿ ಎನ್ನುವ ರಸ್ತೆಯ ಅಂಕಲ್ ದಿನಾಗಲೂ ಎಸಿ ಕಾರನ್ನ ಒಬ್ಬರೆ ವೈಟ್ ಫೀಲ್ಡ್ ವರೆಗೂ ಓಡಿಸಿಕೊಂಡು ಹೋಗುತ್ತಾರೆ. ನಮ್ಮ ರಸ್ತೆಯಲ್ಲಿ ಅರ್ಧ ಜನ ಅಲ್ಲಿಗೇ ಹೋಗಿ ಕೆಲಸ ಮಾಡುವ ವಿಷಯ ತಿಳಿದರೂ ಸಹ ಕೇಳುವ ಗೋಜಿಗೆ ಅವರು ಹೋಗಿಲ್ಲ. ಇನ್ನು ನಾನು ಕೆಲಸಕ್ಕೆ ಸೇರಿದ ದಿನದಿಂದ ಬಿಎಂಟಿಸಿ ಬಸ್ ನಲ್ಲಿ ಹೋಗುತ್ತಿದ್ದರಿಂದ ಅಜ್ಜಿಗೆ ನನ್ನ ಕೆಲಸ ಪರ್ಮನೆಂಟಾ ಇಲ್ಲವಾ ಎಂಬ ಸಂಶಯ ಇವಾಗಲೂ ಕಾಡುತ್ತಿದೆ.

"ಅದೇನೆ, ಎಲ್ಲ ನಿನ್ನ ವಯಸ್ಸಿನವರೆಲ್ಲ ಕಾರಲ್ಲಿ ಹೋದರೆ ನೀನಿನ್ನು ಆಟೋ, ಬಸ್ ನಲ್ಲಿ ಹೋಗ್ತ್ಯ" ಎಂಬ ಅಜ್ಜಿ ಪ್ರಶ್ನೆಗೆ "ಇಲ್ಲ ಅಜ್ಜಿ ಬೆಂಗಳೂರಿನ ಟ್ರಾಫಿಕ್ ಗೆ ನನ್ನ ಕಾರು ಸೇರಿಸೋ ಅವಶ್ಯಕತೆ ಇಲ್ಲ" ಎಂಬ ಮಾತು ಅವರ ಕಿವಿಗೆ "ಈವಳ ಕೆಲಸ ಸರಿ ಇಲ್ಲ" ಎಂಬ ಅರ್ಥ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಹಾಗಿದ್ದರೆ, ಇಲ್ಲಿ ಬಾರ್ಸಿಲೋನಾದಲ್ಲಿ ಆರಾಮಾಗಿ ಮೆಟ್ರೋ, ಬಸ್, ಟ್ರಾಮ್ ಹಾಗೂ ನಡಿಗೆಯಲ್ಲಿ ಹಾಯಾಗಿ ಜೀವನ ಕಳಿಯುತ್ತಿದ್ದೀನಿ. ಇನ್ನು ನಿಮ್ಮ ಕಾರಿನ ಕಥೆ ಏನು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Meghana Sudhindra, studying Masters in Sound and Music Computation at Universitat Pompeu Fabra, Barcelona has shared her beautiful memories and experience of buying a new car for the first time in Jayanagar, Bengaluru.
Please Wait while comments are loading...