• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಉರಿ' ಸಿನೆಮಾ ನೋಡಿದ ನಂತರ ಹಳೆಯ ನೆನಪುಗಳ ಮೆರವಣಿಗೆ

By ಜಯನಗರದ ಹುಡುಗಿ
|

ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ ನಡೆಯುತ್ತಿದೆ. ಪ್ರತಿ ವಾಟ್ಸಾಪಿನ ಗುಂಪಿನಲ್ಲಿಯೂ ಮಾತು ಇದರ ಬಗ್ಗೆಯೇ. ಶಾಲೆಯ ಗುಂಪುಗಳಲ್ಲಿಯೂ ಅದೇ. ಒಂದು ಹಳೇ ಫೋಟೋಗಳನ್ನ ಹಾಕಿ ಮಾತಾಡೋಡು, ಇಲ್ಲ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳೋದು, ಯಾರದ್ದೋ ಮದುವೆ, ಮನೆಯ ಒಕ್ಕಲಿಗೆ ಆಹ್ವಾನ ಅಷ್ಟೆ. ಸುಮಾರು 10 ವರ್ಷದ ಹಿಂದೆ ಶಾಲೆ ಮುಗಿಸಿದ ಗೆಳೆಯರನ್ನ ಅತಿಯಾಗಿ ಆಸಕ್ತಿ ಹುಟ್ಟಿಸೋದು ಈ ರಾಜಕಾರಣವೇ. ಒಬ್ಬ ಎಡ, ಮತ್ತೊಬ್ಬ ಬಲ, ಮತ್ತೊಬ್ಬ ಮತ್ತಿನೇನೋ, ಇನ್ನೊಬ್ಬ ದೇಶ, ಭಾಷೆ ಎಂದು ಹೇಳುವವರೆಲ್ಲಾ ದಡ್ಡರು ಅದು ಇದು ಎಂಬ ಅರ್ಥವಿಲ್ಲದ ಮಾತುಗಳಿಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುತ್ತದೆ.

ನೌಕಾಪಡೆಯಲ್ಲಿ 3 ಜನ ಸ್ನೇಹಿತರು ಆಫೀಸರುಗಳಾಗಿರುವ ಕಾರಣ ಯುದ್ಧದಲ್ಲಿ ರಾಜಕೀಯವನ್ನ ತರಲು ತುಂಬಾ ಜನ ಸ್ನೇಹಿತರು ಹಿಂಜರಿಯುತ್ತಾರೆ. ಅವರ ಬದ್ಧತೆಗೆ ಧಕ್ಕೆ ತರುವ ಕೆಲಸ ಮಾಡಬಾರದೆಂಬ ಕಿಂಚಿತ್ ಬುದ್ಧಿಯಿರುವ ಕಾರಣ ಇವೆಲ್ಲ ಮಾತಾಡೋಕೆ ಹೋಗೋಲ್ಲ. ನಮ್ಮ ಹಾಗೆ ಇಂಜಿನಿಯರಿಂಗ್, ಪ್ಲೇಸ್ಮೆಂಟ್ ಎಂದು ಓಡಾಡಿಕೊಂಡಿದ್ದ ಅವರಿಗೆ ದೇಶಪ್ರೇಮ ಯಾವಾಗ ಬಂದಿತ್ತು ಎಂಬ ಐಡಿಯಾನೂ ಇಲ್ಲ. ನಾವೆಲ್ಲಾ ನಮಗೆ ಬೇಕಾದ ಪ್ಯಾಕೇಜ್ ಸಿಕ್ಕಿಲ್ಲ ಎಂಬ ಅಲವತ್ತುಕೊಳ್ಳುತಿರುವಾಗ ಅವರೆಲ್ಲಾ ಇನ್ನು ಮೂರು ತಿಂಗಳ ತರಬೇತಿಯ ನಂತರ ಸಿಗುವ ಬಗ್ಗೆ ಮಾತಾಡುತ್ತಿದ್ದರು. ನಮಗೆ ಅದ್ಯಾವುದರ ಪರಿವೆಯೂ ಇರಲ್ಲಿಲ್ಲ. ವರ್ಷಕ್ಕೊಮ್ಮೆ ಮಾತ್ರ ಆಗಾಗ ಸಿಗುವ ಅವರು ಕೆಲಸದ ಬಗ್ಗೆ ಕಿಂಚಿತ್ತೂ ಮಾತಾಡುವಹಾಗಿಲ್ಲ. ಸಮಯ ಪಾಲನೆ, ಶಿಸ್ತು ಮತ್ತು ಎಲ್ಲರನ್ನ ಮಾತಾಡಿಸುವ ಪರಿಯೇ ನಮಗೆ ಆಶ್ಚರ್ಯಚಕಿತರನ್ನಾಗಿಸುತ್ತದೆ.

ತೆರೆಯ ಮೇಲೆ ಬರಲಿದೆ ಉರಿ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್!

ಬಾರ್ಸಿಲೋನಾದಿಂದ ವಾಪಸ್ಸು ಬಂದಾಗ ನನಗೆ ಪ್ರತಿಯೊಬ್ಬ ಅನಿವಾಸಿ ಭಾರತೀಯನ ಹಾಗೆ ಈ ಗಡಿಗಳು, ಸೈನಿಕರ ಮರಣ ಬಹಳ ಕ್ಷುಲ್ಲಕ ಅನ್ನಿಸುತ್ತಿತ್ತು. ಅದ್ಯಾವ ದೇಶ, ಭಾಷೆಯ ಗಡಿಗೆ ನಾವಿಷ್ಟೆಲ್ಲ ಹೋರಾಡಬೇಕು, ಇರುವ ನಾಲ್ಕು ದಿವಸ ನಮಗಿದೆಲ್ಲಾ ಬೇಕಾ ಎನ್ನುವ ಪ್ರಶ್ನೆ. ಯುರೋಪಿನ ಬಹುತೇಕ ಗಡಿ ಸಮಸ್ಯೆಗಳು ಮತ್ತು ಯುದ್ಧಗಳು ಅಲ್ಲಿನ ಗದ್ದುಗೆಯ ಮೇಲಿದ್ದವನ ಅಧಿಕಾರದ ಲಾಲಸೆಗೆ ಆಗಿದ್ದು. ಒಂದೊಂದು ಮತದವರನ್ನ ಸುಟ್ಟು ಬೂದಿ ಮಾಡಿದ ವಿಶ್ವ ಯುದ್ಧದ ರೂವಾರಿಗಳಾದ ಯುರೋಪಿಯನ್ನರಿಗೆ ಭಾರತದ ಗಡಿ ಸಮಸ್ಯೆ ಬಗ್ಗೆ ಒಂದಷ್ಟು ಅರಿವಿಲ್ಲ ಎಂಬುದು ನನಗೆ ಅರಿವಾಗಿತ್ತು. ನನ್ನ ಬಾರ್ಸಿಲೋನಾ ಮನೆಯ ಅಪಾರ್ಟ್ಮೆಂಟಿನಲ್ಲಿ ಇದ್ದ ಅಜ್ಜ ವಿಶ್ವಯುದ್ಧದ ಬಗ್ಗೆ ಅನಾಸಕ್ತಳಾದ ನನಗೆ ಒಂದಷ್ಟು ಕಥೆಗಳನ್ನ ಹೇಳುತ್ತಿದ್ದರೂ ಅದರಲ್ಲಿ ರೋಚಕತೆಯೇ ಇರಲ್ಲಿಲ್ಲ. ನಮ್ಮ ಊರಿನ ಸುದ್ದಿ ನೋಡುತ್ತಿದ್ದರೆ ಬರೀ ಶೆಲ್ಲಿಂಗ್, ಯೋಧನ ಹತ್ಯೆ, ಅವೂ ಇವೂ ಎಲ್ಲಾ. ನಮ್ಮ ಗಡಿ ಬರೀ ರಕ್ತ ಸಿಕ್ತಮಯ.

ಸೆಪ್ಟೆಂಬರ್ 16, 2016 ಬಾರ್ಸಿಲೋನಾಕ್ಕೆ ವಿಮಾನ ಹತ್ತಲು ಸಿದ್ಧಳಾಗುತ್ತಿದೆ. ಅವತ್ತು ಟಿವಿಯಲ್ಲಿ ದೊಡ್ಡ ಸುದ್ದಿ. 4 ಜನ ಶಸ್ತ್ರಧಾರಿ ಮಿಲಿಟೆಂಟ್ಸ್ ಉರಿಯಲ್ಲಿದ್ದ ಸೈನಿಕರ ರುಂಡ ಚಂಡಾಡಿದ್ದರು. ನಮ್ಮ ದೇಶಕ್ಕೆ ನುಗ್ಗಿ ನಮ್ಮನ್ನೇ ಸಾಯಿಸುವ ಭಯೋತ್ಪಾದನೆ ಮಾಡುವ ಧೈರ್ಯ ಅವರಿಗೆ ಹೇಗೆ ಬರುತ್ತಿದೆ ಎಂದೂ ಯೋಚಿಸುತ್ತಿದ್ದೆ. ಬಾರ್ಸಿಲೋನಾದ ಮೊದಲ ಬೆಳಗಿನ ದಿನ ಪತ್ರಿಕೆಯಲ್ಲಿ ಕಂಡಿದ್ದು ಇದೇ ದಾಳಿಯ ಚಿತ್ರಗಳು. ಪಕ್ಕದಲ್ಲೇ ಇದ್ದ ಪಾಕಿಸ್ತಾನಿ ಚಾಚಾನ ಅಂಗಡಿಯಲ್ಲಿ ಸಿಮ್ ತೆಗೆದುಕೊಳ್ಳುವಾಗ ಅವರು ಪಾಕಿಸ್ತಾನಿ, ನಾನು ಭಾರತೀಯಳು. ನಾವಿಲ್ಲಿ ಹಿಂದಿ ಮಾತಾಡುತ್ತಿದ್ದರೆ ನಮ್ಮ ದೇಶದಲ್ಲಿ ಗನ್ ಹಿಡಿದುಕೊಂಡು ಪ್ರಾಣ ಕಳೆದುಕೊಂಡು ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಯಾವತ್ತು ಬೆಂಕಿ ಹತ್ತಿಕೊಂಡು ಮತ್ತೆ ಕಾರ್ಗಿಲ್ ಆಗುತ್ತದೋ ಗೊತ್ತಿರಲಿಲ್ಲ. ಆದರೂ ನಾವಿಬ್ರು ಏನೂ ಆಗದಂತೆ ನಮ್ಮ ಕೆಲಸ ಮಾಡುತ್ತಿದ್ದೆವು. ಚಾಚಾ ಎಲ್ಲಿ ತರಕಾರಿ ತಗೋಬೇಕು, ಪುಸ್ತಕ ತಗೋಬೇಕು ಎಂದೆಲ್ಲಾ ಹೇಳುತ್ತಿದ್ದಾಗ ನಮ್ಮ ದೇಶಕ್ಕೆ ಎಲ್ಲಿ ನುಗ್ಗಬೇಕು ಎಂಬ ವಿಷಯ ಗೊತ್ತಿರುವ ಇವರಿಗೆ ಇನ್ನು ಇಲ್ಲಿ ಏನೇನು ಅನಾಹುತ ಮಾಡುತ್ತಾರೋ ಎಂದು ಬೈದುಕೊಳ್ಳುತ್ತಿದ್ದೆವು.

ಸರ್ಜಿಕಲ್ ಸ್ಟ್ರೈಕ್: ಮತ್ತೆರಡು ರೋಚಕ ವಿಡಿಯೋ ಬಿಡುಗಡೆ

ಹೀಗೆ ಆ ದಿವಸವೆಲ್ಲ ವಿಶ್ವವಿದ್ಯಾಲಯದಲ್ಲಿ ನಮ್ಮ ಮೊದಲ ತರಗತಿ ನಡೆಯುತ್ತಿದ್ದರೂ ನಾವೈದು ಜನ ಭಾರತೀಯರಿಗೂ ಎಷ್ಟು ಜನ ಸತ್ತಿದ್ದರು, ಮತ್ತೆ ಯುದ್ಧವಾಯ್ತಾ ಎಂಬ ಅಳುಕು. ನನ್ನ ಮೂರು ಸ್ನೇಹಿತರು ನೌಕಾಪಡೆಯಲ್ಲಿ ಸೇವೆ ಮಾಡುತ್ತಿರುವಾಗ ಅವರಿಗೆ ಯುದ್ಧದ ಸಂದೇಶ ಬಂದಿದೆಯಾ ಎಂಬುದೆಲ್ಲಾ ತಲೆಯಲ್ಲಿ ಕೊರೆಯುತ್ತಿತ್ತು. ತಿಂಗಳುಗಟ್ಟಲೆ ಫೋನಿಗೇ ಸಿಗದಿರುವ ಅವರನ್ನ ಸಂಪರ್ಕಿಸಲೇ ಸಾಧ್ಯವಿಲ್ಲ. ಹೀಗಿದ್ದಾಗ ಒಂದು ದಿನ ನನ್ನ ಚೈನೀಸ್ ಸಹಪಾಠಿ ಬಂದು "ಅಂತು ನಿಮ್ಮವರು ಏನ್ ಸಿಕ್ತೋ ಅದೇ ವಾಪಸ್ಸು ಕೊಟ್ರು" ಎಂದು ಇಂಟರ್ನೆಟ್ ಚೆಕ್ ಮಾಡಲು ಹೇಳಿದ. ನೋಡಿದರೆ ಯಾವತ್ತೂ ಅರಿಯದ ಸರ್ಜಿಕಲ್ ಸ್ಟ್ರೈಕ್ ಎಂಬ ಹೊಸ ಪದವನ್ನ ದೇಶದ ದೊಡ್ಡವರು ಉಚ್ಚರಿಸುತ್ತಿದ್ದರು. ನೋಡುತ್ತಾ ನೋಡುತ್ತಾ ದೊಡ್ಡ ಸುದ್ದಿಯಾಗಿ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಅದು ಸುದ್ದಿಯಾಗಿತ್ತು. ಅಂತೂ ಭಾರತ ಸ್ವಲ್ಪ ಎಚ್ಚೆತ್ತುಕೊಂಡಿತು ಎಂದು ನನ್ನ ಅಪಾರ್ಟ್ಮೆಂಟಿನ ತಾತ ಹೇಳಿದರು.

ಇವಿಷ್ಟು ನೆನಪಾಗಿದ್ದು ಉರಿ ಸಿನೆಮಾ ನೋಡಿ. ದೇಶಭಕ್ತಿಯ ಪರಾಕಾಷ್ಠೆಯನ್ನ ಇಲ್ಲಿ ತೋರಿಸಲಾಗಿದೆ. ತನ್ನ ತಂದೆ ಯುದ್ಧದಲ್ಲಿ ಮಡಿದಾಗ ಅವನ ಸೈನದ ತುಕಡಿಯ ಘೋಷಣೆ ಕೂಗಿ ಅತ್ತು ತನ್ನಪ್ಪನ್ನ ಸಂಸ್ಕಾರಕ್ಕೆ ಎಡೆ ಮಾಡಿಕೊಡುವ ಮಗಳ ಬಗ್ಗೆ ಕರುಳು ಚುರುಕ್ ಎನ್ನದಿದ್ದರೆ ಅದು ತಪ್ಪಲ್ಲ. ಕಂಪನಿಯಲ್ಲಿ ಕೆಲಸ ಹೋಯ್ತು, ಮದುವೆಯಲ್ಲಿ ಸುಖವಿಲ್ಲ, ಮಕ್ಕಳು ಊಟ ಮಾಡಲ್ಲ ಎಂದು ವಟ ವಟ ಕಿರುಚುವ ವಾಟ್ಸಾಪಿನ ಗುಂಪಿನಲ್ಲಿ "ಮೂರು ತಿಂಗಳು ಸಿಗುವುದಿಲ್ಲ" ಎಂಬ ಸೈನಿಕನ ಸಂದೇಶ. ನಮ್ಮ ಜೀವನದ ಎತ್ತ ಸಾಗುತ್ತಿದೆ ಎಂಬ ಜಿಜ್ಞಾಸೆಯಲ್ಲಿ ಈ ಲೇಖನ ಪೂರ್ಣಗೊಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uri bollywood movie made me to think in a different way, writes Jayanagarada Hudugi Meghana Sudhindra. She also remembers the days in Barcelona, when Surgical Strike had happened against Pakistan by Indian Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more