• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಂದರ ಮುಂಜಾವಿನ ಮೌನದಲಿ ಸಿಕ್ಕಿದ್ದು ಬರೀ ಸದ್ದು!

By ಜಯನಗರದ ಹುಡುಗಿ
|

ಬೆಂಗಳೂರಿನಲ್ಲಿ ಸಂಕ್ರಮಣದ ನಂತರ ಬಿಸಿಲು ಮೆತ್ತಗೆ ಬರೋದಕ್ಕೆ ಶುರು ಮಾಡುತ್ತದೆ. ಆಗ 'ಅಲೆಕ್ಸಾ' ಏಳಿಸೋಕೆ ಮುನ್ನವೇ ಎಚ್ಚರವಾಗಬಹುದು ಎಂಬ ಆಸೆಯಿಂದ, ನಾನು ಹಬ್ಬದ ನಂತರ ಬಿರುಸು ನಡಿಗೆಯನ್ನ ಶುರು ಮಾಡೋಣವೆಂದು ಅಂದುಕೊಂಡು, ನನ್ನ ಈ ಕೆಲಸವನ್ನ ಮುಂದಕ್ಕೆ ಹಾಕುತ್ತಿದ್ದೆ.

ವರ್ಷಕ್ಕೆ 6 ತಿಂಗಳು ನೆಗಡಿ ಅಂತಲೇ ಮೂಗು ಒರೆಸಿಕೊಳ್ಳುವ ನನಗೆ ಛಳಿಯನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬೇಸಿಗೆ ನನಗೆ ಬಹು ಇಷ್ಟವಾದ ಮಾಸ. ಒಮ್ಮೊಮ್ಮೆ ಬೇಸಿಗೆಯಲ್ಲಿಯೂ ನೆಗಡಿ ಬಂದು ನನ್ನ ಸಂತೋಷವನ್ನೆಲ್ಲಾ ಹೀರಿಕೊಳ್ಳುತ್ತದೆ. ಇಷ್ಟೆಲ್ಲಾ ಯೋಚನೆ - ಯೋಜನೆಗಳನ್ನ ಮಾಡಿ ನಾನು ನಡಿಗೆಯನ್ನ ಶುರು ಮಾಡಬೇಕೆಂದು ನಿರ್ಧಾರ ಮಾಡಿದೆ.

ಸವಿಯುವ ಗುರಿಯೊಂದಿಗೆ ಸಾಗಲಿ ಬದುಕಿನ ಓಟ!

ಬೆಂಗಳೂರಿನಲ್ಲಿ ಬೆಳಗು ಶುರುವಾಗೋದು ಕೋಳಿ ಕೂಗಿನಿಂದಲ್ಲ, ಕಸದ ಗಾಡಿಯವಳ ಶಬ್ದದಿಂದ. ಕಸದೋಳು ಬಂದಳು, ಮನೇಲಿ ಕಸ ತುಂಬಿಲ್ಲ, ಒಣ ಕಸವನ್ನ ಬೇರ್ಪಡಿಸಿಲ್ಲ, ಕೆಲಸದೋಳಿಗೆ ಪಾತ್ರೆ ಹಾಕಬೇಕು, ಹಾಲಿಲ್ಲ... ಅದು ಇದರ ನಡುವೆ ಒಂದು ಬೇರೆ ಪ್ರಪಂಚ ನಮ್ಮ ಮನೆಯ ಹತ್ತಿರದ ರಸ್ತೆಗಳಲ್ಲಿ ಅಥವಾ ಪಾರ್ಕುಗಳಲ್ಲಿ ಬಡಬಡನೆ ನಡೆಯುವ ಓಟ ಅಥವಾ ನಡೆಯುವ ಜನಗಳಲ್ಲಿ ಕಾಣಸಿಗುತ್ತದೆ.

ಇದರ ಒಳಹೊಕ್ಕಿದ್ದು ನನಗೆ ಒಂದು ಥರಹದ ವಿಶೇಷವಾದ ಅನುಭವವನ್ನುಂಟು ಮಾಡಿತ್ತು. ಮೊದಲ ದಿವಸ ನಾನು ಪಾರ್ಕಿಗೆ ಹೊರಟೆ. ಅಲ್ಲಿದ್ದ ಜನ, ಬೀದಿ ನಾಯಿಗಳೆಲ್ಲವೂ ನಾನು ಹೊಸಬಳು ಎಂಬ ಮುಖಚರ್ಯೆಯನ್ನ ತೋರಿಸಿದ್ದರು. ನಾನು ನನ್ನ ಪಾಡಿಗೆ ನಡಿಗೆ ಶುರು ಮಾಡಿದೆ. ಹಿಂದಿದ್ದ ಆಂಟಿ ಇನ್ನೊಂದು ಆಂಟಿಗೆ ತಮ್ಮ ಸೊಸೆಯ ಬಗ್ಗೆ ಇಷ್ಟುದ್ದದ ದೂರು ಪಟ್ಟಿಯನ್ನ ಒಪ್ಪಿಸುತ್ತಿದ್ದರು.

ಮುಂದೆ ಹೋದರೆ ನನ್ನಷ್ಟೆ ವಯಸ್ಸಿನ ಹುಡುಗಿ ಅವಳ ಅತ್ತೆಯ ಬಗ್ಗೆ ದೂರುತ್ತಿದ್ದಳು. ನಂತರ ಅಂಕಲ್ ತಮ್ಮ ಬಾಸಿನ ಬಗ್ಗೆ ಹಿಗ್ಗಾಮುಗ್ಗಾ ಬಯ್ಯುತ್ತಿದ್ದರು. ಅವರ ಕೈಯಲ್ಲಿ ವಿಷ್ಣು ಸಹಸ್ರನಾಮದ ಮಂತ್ರಗಳು ಜೋರಾಗಿ ಬರುವ ಫೋನ್ ಬೇರೆ ಇತ್ತು. ಅಲ್ಲಲ್ಲಿ ಓಡುವ ಜನರನ್ನ ನಾಯಿ ಅಟ್ಟಿಸಿಕೊಂಡು ಬೇರೆ ಹೋಗುತ್ತಿತ್ತು. ಒಂದೆರಡು ಮಕ್ಕಳು ಕಿತ್ತಾಡುತ್ತಿದ್ದವು.

ಬೆಳಗ್ಗೆ ಬೆಳಗ್ಗೆ ಏನಿದು ಅಂತ ನಾನು ಆ ಪಾರ್ಕನ್ನು ಬಿಟ್ಟು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹೊರಟೆ. ಅಲ್ಲಿ ನನಗೆ ಕೊಂಚ ನೆಮ್ಮದಿಯೆನಿಸಿತ್ತು. ದೂರುವ ಜನರಿಂದ ದೂರ ಬಂದು ಮಹಮ್ಮದ್ ರಫಿಯ ಸುಮಧುರ ಗೀತೆಗಳಿಗೆ ಕಿವಿಯಾದೆ.

ಬೆಳಗ್ಗೆ 7 ಘಂಟೆಗೆ ಶಾಲೆಯ ವ್ಯಾನ್ ಗಳು, ಅದರಲ್ಲಿ ಮಕ್ಕಳು ಹತ್ತಿದ್ದರು. ಒಂದು ಮಗುವಂತೂ ಒಂದು ಕೈಯಲ್ಲಿ ಬಾಳೆಹಣ್ಣು, ಇನ್ನೊಂದು ಕೈಯಲ್ಲಿ ಬ್ಯಾಗ್, ಅಪ್ಪ ಮಗುವನ್ನು ತೀರ ದರ ದರ ಎಳೆದುಕೊಂಡು ಹೋದ್ದದ್ದನ್ನು ಕಂಡೆ. ಅಂತಾರಾಷ್ಟ್ರೀಯ ಶಾಲೆಯ ವ್ಯಾನ್ ನಲ್ಲಿ ಮಗುವನ್ನ ಕುಳ್ಳಿರಿಸಿದರು. ಅವರ ಮನೆಯಿಂದ ಶಾಲೆ 35 ಕಿ ಮೀ ಅಷ್ಟು ದೂರವಿದೆ ಎಂದು ಅದರ ವಿಳಾಸವನ್ನ ಓದಿ ತಿಳಿಯಿತು. ಪಕ್ಕದ ರಸ್ತೆಯಲ್ಲಿಯೇ ಒಳ್ಳೆ ಶಾಲೆಯಿದೆಯಲ್ಲಾ ಎಂದು ನಾ ಅಂದುಕೊಂಡು ನಕ್ಕೆ. ನನ್ನ ಇಂಜಿನಿಯರಿಂಗ್ ಕಾಲೇಜು 35 ಕಿಮೀ ಇದ್ದದ್ದನ್ನೇ ನಾನು ಬೈದುಕೊಂಡು 7 ಘಂಟೆಗೆ ಬಸ್ಸು ಹತ್ತುತ್ತಿದ್ದೆ. ತೀರ 6-7 ವಯಸ್ಸಿನ ಮಕ್ಕಳಿಗೆ ಈ ಶಿಕ್ಷೆ ಕಂಡು ದಂಗಾದೆ.

ಇದು ಒಂದು ದಿನಚರಿಯಾದರೆ ಇನ್ನೂ ಅಲ್ಲೇ ಇದ್ದ ಸರ್ಕಾರಿ ಶಾಲೆಗೆ ಮಕ್ಕಳು ಬಂದೇ ಇರಲ್ಲಿಲ್ಲ. ಅದರ ಅಕ್ಕ ಪಕ್ಕದಲ್ಲೇ ಇದ್ದ ಮಕ್ಕಳೆಲ್ಲಾ ಆರಾಮಾಗಿ ಬೆಳಗ್ಗೆ ಬೆಳಗ್ಗೆ ನಾಯಿ ಮರಿಯನ್ನು ಸಾಕುವ ಪರಿಯನ್ನ ಕಲಿತ್ತಿದ್ದರು. ಆ ನಾಯಿ ಮರಿಯನ್ನು ಶಾಲೆಯ ಕೊಠಡಿಯಲ್ಲಿಯೇ ಬಚ್ಚಿಟ್ಟರೆ ಆಗುವ ಕಷ್ಟ ನಷ್ಟಗಳ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿತ್ತು. ಆ ವ್ಯಾನ್ ನಲ್ಲಿ ಕೂತ ಹುಡುಗ ಅದನ್ನೇ ಬೆರಗುಗಣ್ಣಿನಿಂದ ನೋಡುತ್ತಿದ್ದ. ಈ ಮಕ್ಕಳು ಆ ವ್ಯಾನ್ ನ ಆಗಾಧತೆ ಕಂಡು ಬೆರಗಾಗಿದ್ದರು. ಪ್ರಾಯಶಃ ಇಬ್ಬರು ಮಕ್ಕಳಿಗೂ ಒಬ್ಬರ ಹಾಗೆ ಇನ್ನೊಬ್ಬರಾಗಬೇಕೆಂಬ ಆಸೆಯಿತ್ತೇನೋ? ಗೊತ್ತಿಲ್ಲ.

ಎಲ್ಲರ ಮನೆಯ ಮುಂದೆಯೂ ಥರಾವರಿಯ ರಂಗೋಲಿಗಳು, ನೈಟಿ ಹಾಕಿಕೊಂಡ ಅಮ್ಮಂದಿರ ಕೂಗಾಟ, ಮಕ್ಕಳ ಅರಚಾಟಗಳ ನಡುವೆ ಅಜ್ಜ ಅಜ್ಜಿಯರು ಮೆತ್ತಗೆ ಕೈ ಹಿಡಿದುಕೊಂಡು ಅವರ ಬೆಳಗ್ಗಿನ ನಡಿಗೆಯಲ್ಲಿ ತೊಡಗಿದ್ದರು. ಅದರಷ್ಟು ಪರಿಶುದ್ಧವಾದ ಪ್ರೀತಿ ಪ್ರಾಯಶಃ ನಾನೆಲ್ಲೂ ಕಂಡಿಲ್ಲ. ಮುದ್ದಾಗಿ ಒಂದು ಸೌತೆಕಾಯಿ, 4 ಬದನೆಕಾಯಿ, ಒಂದು ಮೊಳ ಹೂವನ್ನು ಮನೆಗೆ ತೆಗೆದುಕೊಂಡು ಹೋಗುವ ಅವರ ಶಿಸ್ತು ನನಗೆ ತುಂಬಾ ಖುಷಿಯೆನಿಸಿತು.

ಒಬ್ಬರ ಮನೆ ಮೌನವಾಗಿದ್ದರೆ ಇನ್ನೊಬ್ಬರ ಮನೆ ವಿಪರೀತ ಶಬ್ಧ ಮಾಡುತ್ತಾ ಇರುತ್ತದೆ. ದಿನಪತ್ರಿಕೆ ಅಂಗಡಿ ನನಗೆ ಬಹು ಪ್ರಿಯವಾದ್ದದ್ದು. ದಿನಪತ್ರಿಕೆಗಳೆಲ್ಲಾ ಸಾಲಾಗಿ ಹರಡಿ, ಎಷ್ಟು ಕಡಿಮೆ, ಎಷ್ಟು ಜಾಸ್ತಿ ಪತ್ರಿಕೆಗಳು ಖರ್ಚಾಗತ್ತೆ ಎಂಬ ಅಂದಾಜು ಸಿಗುತ್ತದೆ. ಆದರೆ ಅದರ ಸುತ್ತಾ ಬರೀ ಸಿಗರೇಟು, ಬೀಡಿ ಸೇದುವ ಗಂಡಸರೇ ತುಂಬಿರುತ್ತಾರೆ. ಹೆಣ್ಣು ಮಕ್ಕಳು ಆ ಕಡೆ ಹೋದರೆ ಅವರನ್ನು ಅಡಿಯಿಂದ ಮುಡಿಯವರೆಗೆ ನೊಡೋದು ಅವರ ಕೆಲಸ. ಒಮ್ಮೊಮ್ಮೆ ಎಲ್ಲಿ ನನ್ನ ಬಟ್ಟೆ ಸರಿಯಿಲ್ಲವೋ ಎಂದು ಅನ್ನಿಸಿದ್ದೂ ಇದೆ.

ಆದ್ರೆ ನಡಿಗೆಯ ಉಡುಪಲ್ಲಿ ಮುಖ ಬಿಟ್ಟರೆ ಏನು ಕಾಣುವುದಿಲ್ಲ ಎಂಬ ಸತ್ಯವೂ ಗೊತ್ತಿರೋದೆ. ತದ ನಂತರ ಸಿಗುವ ಭಯಂಕರ ಬೀದಿ ನಾಯಿಗಳು ನನ್ನ ನಡಿಗೆಯನ್ನ ನಿಧಾನಗೊಳಿಸತ್ತೆ. ನಾಯಿಗಳೆಂದರೆ ವಿಪರೀತ ಭಯವಿರುವ ನನಗೆ, ಚಿಕ್ಕಂದಿನಲ್ಲಿ ಅವು ಅಟ್ಟಿಸಿಕೊಂಡು ಬಂದ ಕಹಿ ನೆನಪುಗಳಿರುವ ಕಾರಣ. ಅಲ್ಲೆಲ್ಲೋ ಪಕ್ಕದ ರಸ್ತೆಯಲ್ಲಿ ನಾಯಿಗಳು ಬರೋದನ್ನ ನೋಡಿದ್ರೆ ನಾನು ಆ ರಸ್ತೆಯನ್ನ ಬಿಟ್ಟು ಮತ್ತೆಲ್ಲೋ ನಡೆದಿರುತ್ತೇನೆ.

ಹೀಗೆ ನಡೆದು ನಡೆದು ಮನೆಯ ದಾರಿ ತಪ್ಪಿ ಗೂಗಲ್ ಮ್ಯಾಪ್ ಹಾಕಿ ಮನೆಗೆ ಹಿಂದಿರುಗಿದೆ. ಬೆಳ್ಳಗಿನ ಮೌನದಲ್ಲಿ ಕಳೆದುಹೋಗೋಣವೆಂದು ಹೋದೋಳಿಗೆ ಸಿಕ್ಕಿದ್ದು ಸದ್ದು, ಸದ್ದು ಮತ್ತು ಬರೀ ಸದ್ದೆ!

ಜಯನಗರದ ಹುಡುಗಿಗೇ ಏನು ಬರೆಯೋಣ ಎಂದು ಯೋಚಿಸಲು ಹೋದೆ, ಇದೇ ಬರೆದೆ.

English summary
Morning are supposed to be silent and away from noise. But, what is happening, especially in the cities like Bengaluru?Just to go a park expecting tranquility for a wonderful walking. You will be entering an entirely new world. Just experience it. An article by Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X