• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಷ್ಟೊಂದು ದೊಡ್ಡವರು ಇಷ್ಟೆಲ್ಲ ಸಿಂಪಲ್ ಆಗಿರೋಕೆ ಹೇಗೆ ಸಾಧ್ಯ?

By ಜಯನಗರದ ಹುಡುಗಿ
|

ಶಾಲೆಯಲ್ಲಿ ಓದುತ್ತಿದ್ದ ಸಂದರ್ಭ, ಒಂದೊಮ್ಮೆ ಅಪ್ಪ ಬಂದು "ವ್ಯಾಸರಾಯರ ಮನೆಗೆ ಈ ಭಾನುವಾರ ಹೋಗಬೇಕು, ಎಲ್ಲಾರೂ ರೆಡಿಯಾಗಿರಿ" ಎಂದು ಹೇಳಿದ್ದರು. ದೊಡ್ಡ ಕವಿಗಳು, ಸಾಹಿತಿಗಳು ಎಂಬುದಷ್ಟೆ ನನಗೆ ಗೊತ್ತಿತ್ತು. ಸುಮಾರು ದೊಡ್ಡವರ ಸಂಭಾಷಣೆಗಳು ಅಷ್ಟೇನೂ ಅರ್ಥವಾಗದಿದ್ದ ಕಾರಣ ನಾನು ಬರೋದಕ್ಕೆ ಹಿಂದೇಟು ಹಾಕುತ್ತಿದ್ದೆ.

ಹಂಗಾಗೂ ನಾನು ಪ್ರತಿ ಭಾವಗೀತೆ ಸ್ಪರ್ಧೆಯಲ್ಲಿ ಹಾಡುತ್ತಿದ್ದ "ನೀನಿಲ್ಲದೇ ನನಗೇನಿದೆ" ಹಾಡನ್ನ ಅವರೆ ಬರೆದ್ದಿದ್ದು ಅನ್ನೋದನ್ನ ತಿಳಿದುಕೊಂಡಿದ್ದೆ. ದೊಡ್ಡವರನ್ನ ಹೇಗೆ ಮಾತಾಡಿಸೋದು, ಅಥವಾ ಸಾಹಿತ್ಯ ಹಾಗೂ ಹೀಗೂ ಚರ್ಚೆ ಮಾಡಿಬಿಡುತ್ತಾರಾ ಎಂದು ಒಲ್ಲದ ಮನಸ್ಸಿನಿಂದಲೇ ಅಪ್ಪ, ಅಮ್ಮ, ತಂಗಿಯ ಜೊತೆ ಹೋದೆ.

ಭಾವಗೀತೆಗಳ ಕವಿ ವ್ಯಾಸರಾವ್‌ ವಿಧಿವಶ

ಇದಕ್ಕೂ ಮುನ್ನ ಅಪ್ಪ "ಆಳ್ವಾಸ್ ನುಡಿಸಿರಿ"ಗೆ ಮೂಡಬಿದ್ರಿಗೆ ಹೋದಾಗ ಅಲ್ಲಿ ಅವರು, ಬಿ ಆರ್ ಲಕ್ಷ್ಮಣರಾಯರು, ಅ ರಾ ಮಿತ್ರರು ಬೇರೆ ಗೋಷ್ಠಿಗೆ ಬಂದಿದ್ದರಂತೆ. ಅಲ್ಲಿ ಎಲ್ಲರೂ ಅವರವರ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದವರು. ಹಂಗಾಗಿಯೋ ಅಪ್ಪನ ವಿಜ್ಞಾನದ ವಿಷಯವನ್ನ ಬಹು ಆಸಕ್ತಿಯಿಂದ ಕೇಳಿ ಎಲ್ಲವನ್ನು ತಿಳಿದುಕೊಂಡು ಮನೆಗೂ ಆಹ್ವಾನಿಸಿದ್ದರಂತೆ. ಅಪ್ಪ ಪದೇ ಪದೇ ಉಸುರುತ್ತಿದ್ದದ್ದು "ಅವರು ತುಂಬಾ ಸಿಂಪಲ್, ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ" ಎಂದು. ನನಗ್ಯಾಕೋ ಹೇಗೆ ದೊಡ್ಡವರು ಹಾಗಿರಕ್ಕೆ ಸಾಧ್ಯ ಎಂಬ ಪ್ರಶ್ನೆ.

ಅಂತೂ ಅಜ್ಜಿ ಮನೆಯ ಎದುರಿನ ರೋಡಿನಲ್ಲಿರುವ ಅವರ ಮನೆಗೆ ಹೋದ್ವಿ. "ಕನ್ನಡ ಕವಿಗಳಲ್ವಾ ಅದಿಕ್ಕೆ ನೋಡು ಭುವನೇಶ್ವರಿ ನಗರದಲ್ಲಿ ಮನೆ" ಎಂದು ನಕ್ಕಾಗ, ಅಮ್ಮ "ಈ ತಲೆಹರಟೆ ಎಲ್ಲಾ ಅಲ್ಲಿ ಮಾತಾಡಬಾರ್ದು" ಎಂದು ಹೇಳಿದರು. ಅಲ್ಲಿ ಹೋದಾಗ ಯಾವುದೋ ಕಥೆಯ ಗಹನ ಚರ್ಚೆಯಲ್ಲಿದ್ದರು. ಲ್ಯಾಂಡ್ ಲೈನ್ ಕಾಲ ಆವಾಗಿನದ್ದು.

ಮನೆ ಒಳಗಿಂದ ಮೆಟ್ಟಲಿರುವ ಮನೆಯನ್ನ ನಾನು ನನ್ನ ದೊಡ್ಡಪ್ಪನ ಮನೆ ಮತ್ತು ನಮ್ಮ ಎದಿರು ಮನೆಯಲಷ್ಟೆ ನೋಡಿದ್ದೆ. ನನಗದು ಒಂಥರಾ ಯಾವಾಗಲೂ ಕುತೂಹಲ ಕೆರಳಿಸುವಂಥದ್ದು. ಮನೆಯೊಳಗಿನ ಮೆಟ್ಟಿಲಿರುವ ಮನೆಯವರು ತುಂಬಾ ಸಾಹುಕಾರರು, ಅವರ ಪಾಡಿಗೆ ಅವರು ಟೀವಿ ನೋಡಬಹುದು, ತುಂಬಾ ಪ್ರೈವೆಸಿ ಇರಬಹುದು ಎಂದೆಲ್ಲಾ ಎಣಿಸಿದ್ದೆ. ನಮ್ಮ ಮನೆಯಲ್ಲಿ ಮನೆಗೆ ಯಾರಾದರೂ ಬಂದ್ರೆ ಕಡ್ಡಾಯವಾಗಿ ಟೀವಿ ಬಂದ್ ಮಾಡಬೇಕಿತ್ತು. ಎಲ್ಲಾವೂ ಒಂದೇ ಹಾಲ್ ನಲ್ಲಿ ಆಗುತ್ತಿತ್ತಲ್ಲಾ. ಆವಾಗೆಲ್ಲಾ ನಾವೂ ಮಹಡಿಯನ್ನ ಒಳಗೆ ಕಟ್ಟಿ, ಮೇಲೆ ಮನೆ ಮಾಡಬೇಕೆಂಬ ಆಸೆಯಿತ್ತು. ನನ್ನ ಕಣ್ಣು ಮಹಡಿ ಮೇಲೆ ಇತ್ತು.

ಮಂಕುತಿಮ್ಮನ ಕಗ್ಗ ಮತ್ತು ಪಕೋಡಪ್ರಿಯ ಗುಂಡಪ್ಪ

ಅವರು ಕೆಳಗಿಳಿದು ಬಂದು ಥೇಟ್ ನಮ್ಮ ಯಾವುದೋ ಸೋದರ ಮಾವನಂತೆ ಓದು, ಇಷ್ಟವಾದ ತಿಂಡಿ ಎಲ್ಲದರ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಇಲ್ಲಿ ಅಪ್ಪ ಅವರಿಗೆ ಪರಿಚಯ, ಭೇಟಿ ಮಾಡಬೇಕೆಂದಿದ್ದು ಚರ್ಚೆಗೆ, ನಾವಿಲ್ಲಿ ಸ್ಟಾರ್ಗಳಾಗಿದ್ವಿ. ಕನ್ನಡ ಓದೋಕೆ ಬರತ್ತಾ, ಹಾಡೋಕೆ ಬರತ್ತಾ, ಅದು ಇದು ಪ್ರಶ್ನೆ. ಅವರ ಮನೆಯ ಮಕ್ಕಳೆಲ್ಲಾ ದೊಡ್ಡವರಾಗಿ ಫಾರಿನ್ ಅಲ್ಲಿ ಇದ್ದ ಕಾರಣ ನಾನು ನನ್ನ ತಂಗಿ ಇಬ್ಬರೂ ಚಿಕ್ಕ ಮಕ್ಕಳು ಅವರ ಮನೆಗೆ ಬಂದಿದ್ದು ಅವರಿಗೆ ಅತ್ಯಂತ ಖುಷಿ ತರಿಸಿತ್ತು. ನಮಗಿಷ್ಟವಾದುದ್ದರ ಮಾತೆ ಅಲ್ಲಿ.

ಮಹಡಿಯಲ್ಲಿನ ಚಿತ್ತ ನನಗಿನ್ನೂ ಹೋಗಿರಲ್ಲಿಲ್ಲ, ಯಾವಾಗ ಮಹಡಿ ಹತ್ತಿಸುತ್ತಾರೋ ಎಂದು ಕಾದಿದ್ದೆ. ಅಂತೂ ಬನ್ನಿ ಮನೆ ತೋರಿಸ್ತೀನಿ ಅಂದಾಗ ನನಗೆ ಖುಷಿಯೋ ಖುಷಿ.

ಅವರ ಮಹಡಿಯ ರೂಮುಗಳ ನಂತರ ಅದರ ಮೇಲಿದ್ದದ್ದು ಟೇರೇಸ್ ಗಾರ್ಡನ್. ಅದಂತೂ ಅವರು ಬಹು ಆಸಕ್ತಿಯಿಂದ ಪ್ರತಿಯೊಂದು ವಿವರವನ್ನ ಕೊಡುತ್ತಿದ್ದರು. ಸುಮಾರು 1 ಘಂಟೆಗಳ ಕಾಲ ಅಮ್ಮನಿಗೆ ಹೇಗೆಲ್ಲಾ ಮಾಡಬಹುದು ಎಂಬ ಸಲಹೆಯನ್ನ ಕೊಡುತ್ತಿದ್ದರು. ಸಾಹಿತ್ಯ, ಎಡ ಬಲ ಪಂಕ್ತಿ ಅವೂ ಇವೂ ಎಲ್ಲವನ್ನ ಮೀರಿ ಅವತ್ತು ಥೇಟ್ ನಮ್ಮ ಮನೆಯವರ ಥರ ಆಗಿದ್ದರು. ಅಷ್ಟು ಸಿಂಪಲ್ ಆಗಿರೋದಕ್ಕೆ ಹೇಗೆ ಸಾಧ್ಯ ಎಂಬುದು ನನ್ನ ಮನಸಲ್ಲಿ ಓಡುತ್ತಲೇ ಇತ್ತು. ಅಲ್ಲಿಗೆ ನಮ್ಮ ಭೇಟಿ ಮುಗಿಯಿತು. ನಂತರ ಅಜ್ಜಿ ಮನೆ, ಆಮೇಲೆ ಮನೆ.

ಒಂದಷ್ಟು ವರುಷದ ನಂತರ ನಾನೂ ಶಾಲೆ ಮುಗಿಸಿ, ಇಂಜಿನಿಯರಿಂಗೂ ಮುಗಿಸಿ ನಾವೆಲ್ಲಾ ಒಂದೇ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಅಪ್ಪ ಈ ಭೇಟಿಯನ್ನ ನೆನಪಿಸಿದ್ದರು. "ಅಯ್ಯೋ ನಿಮ್ಮ ಮಕ್ಕಳು ದೊಡ್ಡವಾರಾಗೋದ್ರಾ ಸುಧೀಂದ್ರ, ಚೆನ್ನಾಗಿದ್ವು ಚಿಕ್ಕಂದಲ್ಲೇ" ಎಂದು ಕೆನ್ನೆ ತಟ್ಟಿ ಹೋಗಿದ್ರು.

ಹೀಗಾಗಿಯೋ ಈ ನಡುವೆ ಭುವನೇಶ್ವರಿ ನಗರದ ಮಾರುಕಟ್ಟೆಯಲ್ಲಿ, ಅಥವಾ ಕತ್ತರಿಗುಪ್ಪೆ ವಾಟರ್ ಟ್ಯಾಂಕಿನ ಹತ್ತಿರದ ತರಕಾರಿ ಮಾರುಕಟ್ಟೆಯಲ್ಲಿ ಸುಮಾರು ಬಾರಿ ನೋಡಿದ್ದೆ. ಅಲ್ಲೂ ಸಹ ಬಟ್ಟೆ ಬ್ಯಾಗ್ ಅವರ ಹೆಗಲಿಗೆ, ಥೇಟ್ ನಮ್ಮ ಅಮ್ಮನ ಥರ ಚೌಕಾಸಿ ವ್ಯಾಪಾರ ಮಾಡಿ ಒಳ್ಳೆ ತರಕಾರಿಗಳನ್ನ ಆರಿಸಿಕೊಳ್ಳುತ್ತಿದ್ದರು. ಏನಪ್ಪಾ ಇಷ್ಟ್ ದೊಡ್ಡೋರು ಹಿಂಗೆಲ್ಲಾ ಇರ್ತಾರಾ ಎಂಬ ಪ್ರಶ್ನೆ ಪದೇ ಪದೇ ಕಾಡುತ್ತಿತ್ತು.

ಪ್ರತಿ ಬಾರಿ ಅವರನ್ನ ಅವರ ಮನೆಯ ಮುಂದೆ ಯಾವುದಕ್ಕೋ ಕಂಡಾಗ ಹೋಗಿ ಮಾತಾಡಿಸಿ "ನಿಮ್ಮ ಎಲ್ಲಾ ಹಾಡುಗಳನ್ನ ಕೇಳಿದ್ದೇನೆ, ಹಾಡಿದ್ದೇನೆ" ಎಂದು ಹೇಳುವ ಮನಸ್ಸಾಗುತ್ತಿತ್ತು. ಪ್ರತಿ ಬಾರಿಯೂ ಧೈರ್ಯ ಸಾಲದೇ, ಸುಮ್ಮನೆ ಆಟೋ ಪಾಸ್ ಆದಾಗೆಲ್ಲ ಅಲ್ಲಿದ್ದಾರಾ ಎಂದು ನೋಡುತ್ತಿದ್ದೆ. ಅಲ್ಲಿ ನೋಡಿದ ಮೇಲೆ ಸಂತೋಷ. ಮನಸಲ್ಲಿ ನೀನಿಲ್ಲದೇ ನನಗೇನಿದೆ ಎಂದು ಹಾಡಿಕೊಳ್ಳುತ್ತಿದ್ದೆ.

ಈ ಬಾರಿ "ಜಯನಗರದ ಹುಡುಗಿ" ಪುಸ್ತಕ ಬಿಡುಗಡೆ ಇದೆ ಎಂದು ಹೇಳಿ, ಅವರನ್ನೂ ಕರೆಯುವ ಮನಸ್ಸಾಗಿತ್ತು. ಆಮಂತ್ರಣ ಪತ್ರಿಕೆ ಬರಲಿ ಎಂದು ಕಾಯುತ್ತಿದ್ದೆ. ಇದೆಲ್ಲಾ ಕಥೆ ಹೇಳಿ ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡು, ಅವರ ಮುಂದೆ ನನ್ನ ಮೆಚ್ಚಿನ ಭಾವಗೀತೆಯನ್ನ ಬರೆದ ಕವಿಗಳಿಗೆ ನಮನ ಸಲ್ಲಿಸಲು ಹೋಗೋಣ ಎಂದುಕೊಂಡೆ. ಆದರೆ ಸಮಯ ಮೀರಿದೆ........

ಅವರನ್ನ ನೋಡಿದ ಭಾಗ್ಯ ನನ್ನದು, ಮಾತಾಡಿಸಿ ಅವರೊಟ್ಟಿಗೆ ಕಳೆದ ಸಮಯ ಮರೆಯೋದಕ್ಕೆ ಸಾಧ್ಯವೇ ಇಲ್ಲ. ಈಗ ಮನಸ್ಸಲ್ಲಿ ಹಾಡುವ ಹಾಡು "ನೀವಿಲ್ಲದೇ ನಮಗೇನಿದೆ".

English summary
The unforgettable Kannada poet MN Vyasa Rao, who passed away recently in Bengaluru. Meghana Sudhindra remembers the day when they had gone to meet the simple man, who has left behind rich legacy of Kannada poetry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more