ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ

By ಜಯನಗರದ ಹುಡುಗಿ
|
Google Oneindia Kannada News

Recommended Video

ಸದ್ಯದಲ್ಲೇ ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ ಆರಂಭ | Oneindia Kannada

ಅಂತೂ ಕಡೆಯ ಕಾರ್ತಿಕ ಸೋಮವಾರ ಬಂದಿದೆ, ಬಸವನಗುಡಿಯ ಕಡೆ ನಮ್ಮ ಪಯಣ ಶುರುವಾಗಲೇ ಬೇಕು. ಯಾಕಂತ ಕೇಳಿದ್ರಾ ಬೆಂಗಳೂರಿನಲ್ಲಿ ನಡೆಯುವ ಕಡಲೆಕಾಯಿ ಪರಿಷೆಯನ್ನ ನೋಡೋದಕ್ಕೆ ಹೋಗಲೇಬೇಕು.

ಈ ಹಬ್ಬ ಒಂದು ಥರಹ ನಮ್ಮ ನಗರದ ಹಳ್ಳಿಯ ಚರಿತ್ರೆಯನ್ನ ಬಿಚ್ಚಿಡುವ ಒಂದು ಪ್ರಕ್ರಿಯೆ. ಬಸವನಗುಡಿಯ ಕಥೆಯೂ ಅಷ್ಟೆ ವಿಸ್ಮಯಕಾರಿ. ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ ಇದೆಲ್ಲಾ ನಮ್ಮ ನಗರದ ಮಧ್ಯ ಭಾಗವಿರುವ ಬಡಾವಣೆಯಲ್ಲಿ ನಡೆಯತ್ತೆ ಎಂದರೆ ನಂಬೋದೆ ಅಸಾಧ್ಯ.

ಬಸವನಗುಡಿ ಕಡ್ಲೇಕಾಯಿ ಪರಿಷೆ, ಹಳ್ಳಿಯ ಚಿತ್ರ, ಹರೆಯದ ಸಂತಸಬಸವನಗುಡಿ ಕಡ್ಲೇಕಾಯಿ ಪರಿಷೆ, ಹಳ್ಳಿಯ ಚಿತ್ರ, ಹರೆಯದ ಸಂತಸ

ದೊಡ್ದ ಬಸವನ ಬಗ್ಗೆಯೂ ಒಂದು ಕಥೆಯಿದೆ. 1537ರಲ್ಲಿ ಕೆಂಪೇಗೌಡರಿಗೆ ಸಿಕ್ಕ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದರಂತೆ. ಇದರ ಸುತ್ತ ಮುತ್ತ ಹಳ್ಳಿಗಳಾದ ಸುಂಕೇನಹಳ್ಳಿ, ಮಾವಳ್ಳಿ, ದಾಸರಹಳ್ಳಿ, ಗುಟ್ಟಹಳ್ಳಿಯಲ್ಲಿ ಯಥೇಚ್ಚವಾಗಿ ಕಡಲೆಕಾಯಿಯನ್ನ ಬೆಳೆಯುತ್ತಿದ್ದರಂತೆ. ಪ್ರತಿ ಹುಣ್ಣಿಮೆಗೂ ಒಂದು ಬಸವ ಬಂದು ಅವರ ಬೆಳೆಗಳನ್ನೆಲ್ಲಾ ನಾಶ ಮಾಡಿದುದರ ಪರಿಣಾಮ ಬಹಳ ನಷ್ಟ ಅನುಭವಿಸಬೇಕಾಗಿ ಬಂತಂತೆ.

ಬಡವರ ಬಾದಾಮಿ ಹಬ್ಬಕ್ಕೆ, ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿಬಡವರ ಬಾದಾಮಿ ಹಬ್ಬಕ್ಕೆ, ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ

ಸರಿ ಯಥಾಪ್ರಕಾರ ನಂದಿಯ ಮೊರೆ ಹೋಗಿ, ಅವರು ಬೆಳೆದ ಮೊದಲ ಬೆಳೆಯನ್ನ ದೇವರಿಗೆ ಅರ್ಪಿಸಿ, ನಂತರ ಮಾರಾಟಕ್ಕೆ ಇಡೋದು ನಡೆದುಬಂದ ಸಂಪ್ರದಾಯ. ಈಗಲೂ ಬಸವನಿಗೆ ಕಡಲೆಕಾಯಿ ಅಭಿಷೇಕ ನಡೆಯೋದು ನೋಡಬಹುದು. ಇನ್ನು ಈ ಬಸವನಿಗೂ ಸ್ವಾರಸ್ಯಕರ ಕಥೆಯಿದೆ. ನೀವು ದೇವಸ್ಥಾನಕ್ಕೆ ಹೋದರೆ ಬಸವನ ತಲೆ ಮೇಲೆ ಒಂದು ಗೂಟ ನೋಡಬಹುದು, ಬಸವನ ಮೂರ್ತಿ ವಿಪರೀತವಾಗಿ ಬೆಳೆಯುವುದನ್ನು ನಿಲ್ಲಿಸಲು ಇದು ಮಾಡಲಾಯಿತಂತೆ. ಹೀಗೆ ಚಿತ್ರ ವಿಚಿತ್ರವಾದ ಕಥೆಗಳು ಹೊಂದಿರುವ ಜಾಗವಿದು.

ಹಳ್ಳಿಯ ವಾತಾವರಣ ಜಾತ್ರೆಯ ಸಡಗರ

ಹಳ್ಳಿಯ ವಾತಾವರಣ ಜಾತ್ರೆಯ ಸಡಗರ

ನಗರದಲ್ಲಿಯೇ ಹುಟ್ಟಿಬೆಳೆದ ನನಗೆ 2 ದಿವಸ ಹಳ್ಳಿಯ ವಾತಾವರಣ ಜಾತ್ರೆಯ ಸಡಗರ ಮೊದಲ ಬಾರಿಗೆ ಕಂಡದ್ದು ಇಲ್ಲಿ. ಅಮ್ಮ ಚಾಮರಾಜಪೇಟೆಯಲ್ಲಿ ಬೆಳೆದವರಾಗಿದ್ದರಿಂದಲೇನೋ ಅವಳಿಗೆ ಈ ಪರಿಷೆಯ ಮೇಲೆ ವಿಪರೀತ ಒಲವು. ಚಿಕ್ಕವರಿದ್ದಾಗ ಕರೆದುಕೊಂಡು ಹೋಗುತ್ತಿದ್ದಳು. ಕಡಲೆಕಾಯಿಗಿಂತ ಜಾಸ್ತಿ ಬೆಂಡು, ಬತ್ತಾಸು, ಚುರುಮುರಿ, ಅದ್ಯಾವ್ದೋ ದೊಡ್ಡ ಬಲೂನ್, ಪೀಪಿ, ಜೈಂಟ್ ವೀಲ್, ಕೊಲಂಬಸ್ ಇವೆಲ್ಲಾ ಸಿಕ್ಕಾಪಟ್ಟೆ ಆಕರ್ಷಣೀಯವಾಗಿತ್ತು. ಸೋಪ್ ನೀರಿಂದ ಗುಳ್ಳೆಗಳನ್ನ ಬಿಡೋದನ್ನ ಕೊಡಿಸೋದಕ್ಕೆ ಆಗುತ್ತಿದ್ದ ಮಾತುಕತೆ, ಅದು ಮುಗಿದ ನಂತರ ತಂಗಿಯ ಹತ್ತಿರ ಕಿತ್ತುಕೊಂಡು ಊದುವಾಗ ಆಗುತ್ತಿದ್ದ ಜಗಳ ನಾ ಮರೆಯಲಸಾಧ್ಯ.

ಆಹಾ ಎಂಥೆಂಥಾ ದೃಶ್ಯವಾಳಿಗಳು...

ಆಹಾ ಎಂಥೆಂಥಾ ದೃಶ್ಯವಾಳಿಗಳು...

ಮೊದಲ ಬಾರಿಗೆ ಕೊಲಂಬಸ್ ಆಡಿದ್ದು ಅಲ್ಲಿಯೇ. ಇದೊಂಥರಹದ ರೋಲರ್ ಕೋಸ್ಟರ್ ಆಟ. ಅಲ್ಲಿ ತಲೆ ತಿರುಗದೆ ಸುಮ್ಮನೆ ಕಿರುಚದೆ ಕೂರೋದು ದೊಡ್ಡ ಸಾಹಸ. ಇಲ್ಲಿ ಅನುಭವಿಸಿದ ಮಜಾ ಯಾವ ವಂಡರ್ಲಾ ಕೊಡೋದಕ್ಕೆ ಸಾಧ್ಯವಿಲ್ಲ. ಇನ್ನು ಆ ಜೈಯಂಟ್ ವೀಲ್ ಕಥೆಯಂತೂ ಇನ್ನೂ ಮಜಾ. ಮಕ್ಕಳಿಗೆ ಭಯ, ಅಪ್ಪ ಅಮ್ಮ ಅವರ ಮಕ್ಕಳ ಭಯವನ್ನ ಹೋಗಲಾಡಿಸುವ ಪಣ ತೆಗೆದುಕೊಂಡು ವಿಪರೀತವಾಗಿ ಅವರನ್ನು ತಳ್ಳೋದೊಂದೆ ಬಾಕಿ. ಮಕ್ಕಳ ಹಾರಾಟ, ಚೀರಾಟ ಕೇಳಲು ಎರಡು ಕಿವಿ ಸಾಲದು. ಅಲ್ಲೇ ತಲೆ ತಿರುಗಿ ಬಿದ್ದ ಮಕ್ಕಳು, ಅಳುವ ಮಕ್ಕಳು, ಆಹಾ ಎಂಥೆಂಥಾ ದೃಶ್ಯವಾಳಿಗಳು... ಇವೆಲ್ಲವೂ ನೋಡಲು ಸಿಗೋದು ಅಲ್ಲಿಯೇ.

ಬಳೆ, ಸರ, ಕಿವಿಯೋಲೆಗಳ ಸಿಂಗಾರ

ಬಳೆ, ಸರ, ಕಿವಿಯೋಲೆಗಳ ಸಿಂಗಾರ

ಕೊಂಚ ದೊಡ್ಡವಳಾದ ಮೇಲೆ ಅಲ್ಲಿದ್ದ ಬಳೆ, ಸರ, ಕಿವಿಯೋಲೆಗಳ ಮೇಲೆ ಗಮನ ಹೋಗುತ್ತಿತ್ತು. ಥರಾವರಿ ಸಿಂಗರಿಸಿಕೊಳ್ಳಲು ಸಿಗುತ್ತಿದ್ದ ಆಭರಣಗಳು, ಚೆಂದದ ಉಗುರು ಬಣ್ಣಗಳು ಇವೆಲ್ಲಾ ನನ್ನ ಇಷ್ಟದ ವಸ್ತುಗಳಾಗಕ್ಕೆ ಶುರು ಮಾಡಿದ್ವು. ಅಪ್ಪ ಅಮ್ಮ ಶುರು ಮಾಡಿಸಿದ್ದ ಈ ಗೀಳು ಮುಂದೆ ಕಾಲೇಜಿನ ಮೆಟ್ಟಿಲು ಹತ್ತಿದಾಗ ಗೆಳೆಯ ಗೆಳತಿಯರ ಜೊತೆ ಓಡಾಡುವ ಒಂದು ಸಾಮೂಹಿಕ ಓತ್ಲಾ ಸಮಯವಾಯಿತು. ಕಾಲೇಜಿಂದ ಪಟ್ಟಾಗಿ ಹೋಗಿ ಅಲ್ಲಿ ಕಡ್ಲೆಕಾಯಿ ತಿಂದು, ಇನ್ನೆಲ್ಲಾ ಹಾಳು ಮೂಳನ್ನು ತಿಂದು ಹರಟೆ ಹೊಡೆಯುವ ಕೆಲಸ ಶುರು ಮಾಡಿದ್ವಿ.

ಯಾರೋ ಅಸಹಜವಾಗಿ ಮುಟ್ಟಿದ್ದರ ಅನುಭವ

ಯಾರೋ ಅಸಹಜವಾಗಿ ಮುಟ್ಟಿದ್ದರ ಅನುಭವ

ಅಲ್ಲಿದ್ದ ಜನ ಜಂಗುಳಿಯಲ್ಲಿಯೇ ಮೊದಲ ಬಾರಿ ಯಾರೋ ಅಸಹಜವಾಗಿ ಮುಟ್ಟಿದ್ದರ ಅನುಭವವಾಗಿದ್ದು. ಗೆಳತಿಗೂ ಸಹ ಅದೇ ಅನುಭವ ಆಗಿದ್ದನ್ನ ಕೇಳಿ ಬೆಚ್ಚಿಬಿದ್ದಿದ್ದೆ. ಅವತ್ತು ಸಂಜೆ ಮನೆಗೆ ಒಬ್ಬಳೇ ಬಸ್ ನಲ್ಲಿ ಹೋಗೋದಕ್ಕೆ ಆದ ಭಯ ಇನ್ಯಾವತ್ತು ಆಗಿಲ್ಲ. ಮುಂದಿನ ಬಾರಿ ಅಷ್ಟೊಂದು ಜನಜಂಗುಳಿ ಇದ್ದ ಜಾಗಕ್ಕೆ ಹೋಗೋದಕ್ಕೆ 10 ಬಾರಿ ಯೋಚನೆ ಮಾಡುವ ಸ್ಥಿತಿ ನಮ್ಮದಾಗಿತ್ತು. ನಂತರ ಮುಂದೆ ಯಾವುದೇ ವಿಪರೀತ ಜನವಿದ್ದ ಜಾಗಕ್ಕೆ ಸೇಫ್ಟಿ ಪಿನ್ ತೆಗೆದುಕೊಂಡು ಹೋಗೋದಕ್ಕೆ ಶುರು ಮಾಡಿದ್ವಿ. ಯಾರೆ ಅಸಹಜವಾಗಿ ಹತ್ತಿರ ಬಂದರೂ ಅವರಿಗೆ ಚುಚ್ಚುವ ಕೆಲಸ ನಮ್ಮದಾಗಿತ್ತು. ಹೀಗೆ ಮಾಡಿಕೊಂಡೆ ನಮ್ಮ ಪ್ರೀತಿಯ ಪರಿಷೆಯಲ್ಲಿ ಓಡಾಡಿದ್ದ ನೆನಪು ಇನ್ನೂ ಹಸಿರಾಗಿದೆ.

ಶಾಪ ತಟ್ಟ್ಬಾರ್ದು ಅಂತ ಇವಾಗ್ಲು ಬರ್ತೀವಿ

ಶಾಪ ತಟ್ಟ್ಬಾರ್ದು ಅಂತ ಇವಾಗ್ಲು ಬರ್ತೀವಿ

ಪರಿಷೆ ನಮ್ಮ ಕಾಸ್ಮೋಪಾಲಿಟನ್ ನಗರವನ್ನ ಎರಡು ದಿನದ ಮಟ್ಟಿಗೆ ಅಪ್ಪಟ ಹಳ್ಳಿಯಾಗಿ ಪರಿವರ್ತನೆ ಮಾಡುವುದು ತುಂಬಾ ಖುಷಿಕೊಡುವ ವಿಚಾರ. ಒಮ್ಮೊಮ್ಮೆ ಕಡ್ಲೆಕಾಯಿ ವ್ಯಾಪಾರಿಗಳನ್ನ ಮಾತಿಗೆಳೆದಾಗ ಅವರು ಹೇಳೋದು "ಶಾಪ ತಟ್ಟ್ಬಾರ್ದು ಅಂತ ಇವಾಗ್ಲು ಬರ್ತೀವಿ. ಆದ್ರೆ ಇವಾಗ ಬೆಲೆನೂ ಇಲ್ಲ, ಬೆಳೆನೂ ಸರಿಯಾಗಿಲ್ಲ, ಹೇಗೋ ಎರಡು ದಿವ್ಸ ಕಳೀತೀವಿ" ಅಂತ ಅಂದಿದ್ದು ಇನ್ನೂ ನೆನಪಿದೆ.

ಹುಡ್ಗೀರೇ... ಸೇಫ್ಟಿ ಪಿನ್ ಇಟ್ಕೊಳೋದ್ ಮರೀಬೇಡಿ

ಹುಡ್ಗೀರೇ... ಸೇಫ್ಟಿ ಪಿನ್ ಇಟ್ಕೊಳೋದ್ ಮರೀಬೇಡಿ

ಒಟ್ಟಿನಲ್ಲಿ ಅಲ್ಲಿನ ಜನರೂ ಸಹ ತಮ್ಮ ಮನೆಯ ಹಬ್ಬದ ಹಾಗೆ ಅಚರಿಸಿ ನಲಿಯುವ ಹಬ್ಬವೇ ಕಡ್ಲೆಕಾಯಿ ಪರಿಷೆ. ಬೆಂಗಳೂರು ಹಳ್ಳಿಯಾಗೋದನ್ನ ನೋಡಬೇಕಾದರೆ ಖಂಡಿತಾ ಮುಂದಿನ ಸೋಮವಾರ, ಮಂಗಳವಾರ ಬಸವನಗುಡಿಗೆ ಹೋಗಿ ಮಜಾಮಾಡಿ ಬನ್ನಿ. ಅಲ್ಲಿನ ಕಡ್ಲೆಕಾಯಿ, ಚುರುಮುರಿ, ಸರ, ಕಿವಿ ಓಲೆ, ಪೀಪಿ ಇವೆಲ್ಲವನ್ನು ಕೊಂಡು ತರಲು ಮರೀಬೇಡಿ, ಹಾಗೆಯೆ ಅಲ್ಲಲ್ಲಿ ಭವಿಷ್ಯ ಹೇಳುವ ರೋಬೋಟ್ ಸಹ ಇರತ್ತೆ, ಅಲ್ಲೂ ಮಜ ತಗೊಳ್ಳಿ, ಹುಡ್ಗೀರೇ... ಸೇಫ್ಟಿ ಪಿನ್ ಇಟ್ಕೊಳೋದ್ ಮರೀಬೇಡಿ ಆಯ್ತಲ್ಲ?

English summary
Kadlekai Parishe is one of the oldest festivals in Bengaluru. Farmers from villages all around Bengaluru come here to offer groundnut to Basava statue and sell. Bendu, battasu, bangles, soap bubbles, columbus... you can find everything here. Jayanagarada Hudugi recalls the old memories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X