ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಾಧ ವಿಸ್ಮಯ ಹುಟ್ಟುಹಾಕುವ ಕಾಡಿನ ಮೌನ!

By ಜಯನಗರದ ಹುಡುಗಿ
|
Google Oneindia Kannada News

ನಗರದಲ್ಲಿಯೇ ಹುಟ್ಟಿಬೆಳೆದ ನನ್ನಂಥವರಿಗೆ ಹಳ್ಳಿಯ ಸೊಬಗೇ ಆಶ್ಚರ್ಯ ಮೂಡಿಸುವಂಥದ್ದು. ಇನ್ನು ಕಾಡಿನ ಬಗ್ಗೆ ತಿಳಿದಿದ್ದು ಬಹಳ ಕಡಿಮೆಯೇ. ಪುಸ್ತಕದ ಹುಳುವಾದ ನನಗೆ ತುಂಬಾ ಖುಷಿ ಕೊಡುವ ವಿಷಯ ಒಂದು ಕಡೆ ಕೂತು ಪುಸ್ತಕ ಓದುವುದು.

ಕಾಡಿನಲ್ಲಿ ಸಿಕ್ಕಾಪಟ್ಟೆ ಓಡಾಡುವ, ದಣಿಯುವ ಕೆಲಸಗಳು ತುಂಬಾ ಇರುವುದರಿಂದ ಕಾಡಿನ ವಿಸ್ಮಯಗಳನ್ನ ತಿಳಿದೂ ನಾ ಸುಮ್ಮನಿದ್ದೆ. ಅಂತೂ ನಾ ಕಬಿನಿ ನದಿ ದಡದ ನಾಗರಹೊಳೆ ಕಾಡಿನ ಪರಿಮಿತಿಗೆ ಹೋಗಿದ್ದೆ. ಕಬಿನಿ ಅಥವಾ ಕಪಿಲಾ ನದಿ ಹುಟ್ಟೋದು ಕೇರಳದಲ್ಲಿ, ಹರಿಯೋದು ಕರ್ನಾಟಕದಲ್ಲಿ, ಸಮುದ್ರ ಸೇರೋದು ತಮಿಳುನಾಡಿನ ಕಡೆಯಿಂದ. ಒಟ್ಟಿನಲ್ಲಿ ಈ ಮಹಾತಾಯಿ ಸದಾ ನೀರಿಗಾಗಿ ಕಚ್ಚಾಡುವ 3 ರಾಜ್ಯಗಳನ್ನ ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಿದ್ದಾಳೆ.

ಮಾನವ ನಿರ್ಮಿತ ಎಲ್ಲೆಗಳನ್ನ ಮೀರಿ ಈ ನದಿ ಹರಿಯುತ್ತದೆ. ದಟ್ಟವಾದ ಅರಣ್ಯ, ಅಲ್ಲಿ ವಾಸಿಸುವ ಹುಲಿ, ಕರಿ ಚಿರತೆ, ಚಿರತೆಗಳ ಸಂಗಮ, ಆನೆಗಳು, ಕಾಡೆಮ್ಮೆಗಳು, ಜಿಂಕೆಗಳು, ಪಕ್ಷಿಗಳು, ಜಲಚರಗಳ ಸಮಾಗಮವನ್ನ ನೋಡುವುದು ವಿಸ್ಮಯವೇ. ನಾಗರಹೊಳೆ, ಬಂಡೀಪುರ ಅಭಯಾರಣ್ಯವಂತೂ ಕಣ್ಣಿಗೆ ಹಬ್ಬವೇ ಸರಿ.

The silence of the forest and the beauty of the nature

ಮೈಸೂರು - ಹೆಗ್ಗಡದೇವನಕೋಟೆ ದಾರಿಯಲ್ಲಿ ಹೊರಟ ನನಗೆ ಅಂತರಸಂತೆಯಲ್ಲಿಯೇ ಒಂದು ಆನೆಯ ದರ್ಶನವಾಯಿತು. ದೈತ್ಯಾಕಾರದ ದೇಹ, ಬಿಡುಬೀಸಾಗಿ ನಡೆದಾಡುತ್ತಿದ್ದ ಆನೆ. ಅದರ ಮುಂದೆ ಕಾರು, ಬಸ್ಸುಗಳೆಲ್ಲ ಪುಟಾಣಿ ಆಟಿಕೆಯಂತೆ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ನಂತರ ಅದರ ಕಾಲುಗಳಿಗೆ ಸರಪಳಿ ಕಟ್ಟಿದ್ದು, ಆನೆಯ ಮೇಲೆ ಮಾವುತ ಕಂಡಿದ್ದು ನೋಡಿ ಮನುಷ್ಯನ ಅಸ್ತಿತ್ವವನ್ನ ಗಟ್ಟಿ ಮಾಡಿತ್ತು.

ತಾತ ಹೇಳಿದ ಮೇಘು ಮತ್ತು ಅವರೆಕಾಳಿನ ಕಥೆ!ತಾತ ಹೇಳಿದ ಮೇಘು ಮತ್ತು ಅವರೆಕಾಳಿನ ಕಥೆ!

ಕಬಿನಿಯ ಕಾಡಿನಲ್ಲಿ ಮುಖ್ಯ ಆಕರ್ಷಣೆ ಹುಲಿ, ಚಿರತೆ ಹಾಗೂ ಕಪ್ಪು ಚಿರತೆ. ಸುಮಾರು 100 ಹುಲಿಗಳು, 80 ಚಿರತೆಗಳು ಹಾಗೂ ಇಡೀ ಕಾಡಿಗೆ ಒಂದೇ ಕಪ್ಪು ಚಿರತೆಯಿದೆ. ಇದು ಬಹುಮುಖ್ಯ ಆಕರ್ಷಣೆ. ಅಮೆರಿಕಾ ಯುರೋಪುಗಳಿಂದ ಜನ ನೋಡೋದಕ್ಕೆ ಬರುತ್ತಾರೆ. ನಾ ಹೋದಾಗ National Geographicನ ದೊಡ್ಡ ಗುಂಪು, ಯುರೋಪಿನಿಂದ ಒಂದು ದೊಡ್ಡ ಗುಂಪು ಬಂದಿತ್ತು.

The silence of the forest and the beauty of the nature

ಹುಲಿ ಗಣತಿ ನಡೆಯುತ್ತಿದ್ದರಿಂದ ತುಂಬಾ ಜನ ಸ್ವಯಂಸೇವಕರಾಗಿ ಬಂದಿದ್ದರು. ಇವೆಲ್ಲದರ ಮಧ್ಯ ನನ್ನ ಥರಹ ಮೊದಲ ಬಾರಿಗೆ ಕಾಡಿಗೆ ಬಂದು, ಆವಾಗಲೇ ಹುಲಿಯನ್ನ ನೋಡಲು ಉತ್ಸಾಹಕರಾಗಿ ಇದ್ದಂತ ಜನ ಸುಮಾರಿದ್ದೆವು.

ನಾನು ಮತ್ತು ಹೇಳಿದ ಹಾಗೆ ಕೆಲಸ ಮಾಡುವ ಅಲೆಕ್ಸಾ!ನಾನು ಮತ್ತು ಹೇಳಿದ ಹಾಗೆ ಕೆಲಸ ಮಾಡುವ ಅಲೆಕ್ಸಾ!

ಮೊದಲ ದಿವಸ ಕರೆದು ಹೋದದ್ದು ದೋಣಿಯಲ್ಲಿ. ಕಬಿನಿ ಹಿನ್ನೀರಿನಲ್ಲಿ ಮೊಸಳೆಗಳೇ ತುಂಬಿದ್ದ ನೀರಿನಲ್ಲಿ ಅಲ್ಲಿಗೆ ನೀರು ಕುಡಿಯಲು ಬರುವ ಪ್ರಾಣಿ ಪಕ್ಷಿಗಳನ್ನ ನೋಡೋದಕ್ಕೆ ಹೋದೆವು. ಅಕ್ಕ ಪಕ್ಕದಲ್ಲಿದ್ದ ಜನ ಎಷ್ಟೆಷ್ಟು ಬಾರಿ ಕಾಡಿಗೆ ಬಂದಿದ್ದರು, ಉದ್ದುದ್ದ ಕ್ಯಾಮೆರಾ ಲೆನ್ಸ್ ಗಳು, ಕಾಡಿನ ಬಗ್ಗೆ ಪೂರ್ತಿ ವಿವರಣೆಗಳನ್ನೆಲ್ಲಾ ತಿಳಿದು ಬಂದಿದ್ದರು.

The silence of the forest and the beauty of the nature

ಚಿಕ್ಕವಳ್ಳಿದ್ದಾಗ ಬಂಡೀಪುರಕ್ಕೆ ಹೋದ್ದದ್ದು ಬಿಟ್ಟರೆ ನನಗ್ಯಾವ ಕಾಡಿನ ಅನುಭವವೂ ಇರಲ್ಲಿಲ್ಲ. ಒಮ್ಮೆ ರಂಗನತಿಟ್ಟುವಿನಲ್ಲಿ ನನ್ನ ಮುಂದೆಯೇ ದೋಣಿ ಮೊಗಚಿ, ಮೊಸಳೆಗಳು ಮನುಷ್ಯರನ್ನ ತಿಂದಿದ್ದನ್ನ ನೋಡಿದ್ದನ್ನ ಬಿಟ್ಟರೆ ನನಗ್ಯಾವ ದೋಣಿಯ ಅನುಭವವೂ ಇರಲ್ಲಿಲ್ಲ. ಇದ್ದ 18-140 ಎಮ್ ಎಮ್ ಝೂಮ್ ಲೆನ್ಸ್ ನಲ್ಲಿಯೇ ನಾನು ಹುಲಿ ಚಿರತೆಯನ್ನ ಹುಡುಕ ಹೊರಟೆ.

ಮೊದಲು ಕಂಡಿದ್ದು ಕೊಕ್ಕರೆಗಳು. ಅವು ಹಿಮಾಲಯದಿಂದ ಬಂದಿದ್ದವಂತೆ. ನೋಡಿ, ಪಕ್ಷಿಪ್ರಾಣಿಗಳಿಗೆ ಮಾನವ ನಿರ್ಮಿತ ಯಾವ ಗಡಿರೇಖೆಗಳು ಗೊತ್ತಿಲ್ಲ. ಅದರ ಪಾಡಿಗೆ ಅದರ ಜಾಡನ್ನ ಹಿಡಿದು ಬರತ್ತೆ. ಇವೆಲ್ಲವೂ ನಮಗಿಂತ ಮುಂಚೆ ಬಂದು ತಮ್ಮ ಅಸ್ತಿತ್ವವನ್ನ ಕಂಡುಕೊಂಡಿದ್ದವು ಎಂದು ಸಾರಿ ಸಾರಿ ಹೇಳುತ್ತದೆ. ಗರುಡ ಪಕ್ಷಿ, ರಣಹದ್ದುಗಳೆಲ್ಲವೂ ಅಲ್ಲಿ ಕಂಡೆ. ಹಿನ್ನೀರಲ್ಲಿ ಸುಮಾರು ಮರಗಳು ಮುಳುಗಿದೆ ಅವುಗಳಿಂದ ಕೊಂಬೆಗಳು ಮಾತ್ರ ಗೋಚರಿಸುತ್ತದೆ. ಅದರ ಮೇಲೆ ನೆಮ್ಮದಿಯಾಗಿ ಪಕ್ಷಿಗಳ ವಾಸಸ್ಥಾನವಿದೆ. ತದನಂತರ ಕಂಡಿದ್ದೇ ರಿವರ್ ಆಟರ್ಗಳು. ಇವು ಮುದ್ದಾದ ನೀರು ನಾಯಿಗಳು. ಅಲ್ಲಿ ಒಂದು ಕುಟುಂಬ ಮಕ್ಕಳಿಗೆ ಮೀನು ಹಿಡಿಯುವುದನ್ನ ಕಲಿಸುತ್ತಿತ್ತು. ಮುದ್ದಾಗಿ ಕಾಣುತ್ತಿತ್ತು.

The silence of the forest and the beauty of the nature
Photo Credit:

ತಕ್ಷಣ ಆನೆಯ ಹೂಂಕಾರ ಕೇಳಿತು. ಅಲ್ಲಿ ನೀರು ಕುಡಿಯೋಕೆ ಬಂದಿದ್ದ ಆನೆಗಳ ಗುಂಪನ್ನ ನೋಡಲು ಬಂದ ಜೀಪನ್ನ ಇವುಗಳು ಅಡ್ಡಹಾಕಿದ್ದವು. ಅಲ್ಲಿದ್ದ ಪುಟಾಣಿ ಮರಿಗೆ ರಸ್ತೆ ದಾಟಲು ಅನುಕೂಲವಾಗಲೆಂದು ಅದರ ಅಮ್ಮ ಅಡ್ಡಹಾಕಿತ್ತು. ಮನುಷ್ಯರ ಹಾಗೆ ಆನೆಗಳೂ ಸಹ ಸಿಕ್ಕಾಪಟ್ಟೆ ಮಕ್ಕಳನ್ನ ಕಾಪಾಡತ್ತೆಂದು ನಮ್ಮ ನ್ಯಾಚುರಲಿಸ್ಟ್ ತಿಳಿಸಿದ್ದರು. ಆನೆಗಳ ಗುಂಪಿನಲ್ಲಿ ಹೆಣ್ಣಾನೆಗಳು ಇರುತ್ತದೆ. ಅದರ ಜೊತೆ ಅದರ ಮರಿಗಳು. ಗಂಡಾನೆ ಒಬ್ಬನೇ ಗುಂಪನ್ನ ಹೊರಗಿಂದ ರಕ್ಷಣೆ ಮಾಡುತ್ತಾನೆ. ಮಕ್ಕಳ ಪೂರ್ತಿ ಜವಾಬ್ದಾರಿ ಅಮ್ಮನದ್ದೇ. ಥೇಟ್ ಮನುಷ್ಯರ ಹಾಗೆ.

ಗಂಡಾನೆಗೆ ಮದ ಬಂದು ಹುಚ್ಚುಚ್ಚಾಗಿ ಆಡುವ ಕಾರಣ ಅದನ್ನ ಹೊರಗಿಡೋದೆ ಹೆಣ್ಣುಗಳ ಕೆಲಸ. ಪುಟ್ಟ ಪುಟ್ಟ ಆನೆಗಳು ಅಮ್ಮನಿಂದ ಹುಲ್ಲನ್ನ, ಗಿಡಗಳನ್ನ ಮೆತ್ತಗೆ ಮುರಿದು ತಿನ್ನುವ ತರಬೇತಿಯನ್ನ ಪಡೆದುಕೊಳ್ಳುತ್ತದೆ. ಆನೆಗಳು ಆಹಾರ ಹುಡುಕುವ ದಾರಿಯನ್ನ ಸಹ ಮಕ್ಕಳಿಗೆ ತಿಳಿಸುತ್ತದೆ. ಇದಕ್ಕೆ ಮನುಷ್ಯನಿಗೂ ಆನೆಗೂ ಸಂಘರ್ಷವಾಗೋದು. ಅಮ್ಮ ಆನೆಯ ಕಾಲಕ್ಕೆ ಕಾಡಗಿದ್ದ ಜಾಗ ಮಗು ಆನೆಯ ಸಮಯಕ್ಕೆ ಕಾಫಿ ತೋಟವಾದರೆ ಮಗು ಆನೆ ಅದೇ ದಾರಿಯನ್ನ ಹಿಡಿಯುತ್ತೆ. ಅಲ್ಲಿ ರೊಚ್ಚಿಗೆದ್ದು ಆಹಾರ ಸಿಗದೆ ಕರೆಂಟು ಹೊಡೆಸಿಕೊಂಡು ತೋಟವನ್ನೆಲ್ಲಾ ಹಾಳು ಮಾಡಿ ಬರತ್ತೆ.

The silence of the forest and the beauty of the nature

ಇನ್ನು ಮೊಸಳೆಯೋ, ಕಲ್ಲಿಗೂ ಅದಕ್ಕೂ ವ್ಯತ್ಯಾಸವೇ ಇಲ್ಲದಂತೆ ಬಿದ್ದುಕೊಂಡಿತ್ತು. ಅದನ್ನ ನೋಡಿ ನಾ ದಂಗಾದೆ. ಅಲ್ಲೇ ಪಕ್ಕದಲ್ಲಿ ಜಿಂಕೆಗಳು, ಸಂಬಾರ್ ಜಿಂಕೆಗಳು ಒಟ್ಟೊಟ್ಟಾಗಿ ನೀರು ಕುಡಿಯುತ್ತಿದ್ದವು. ನಮ್ಮ ನ್ಯಾಚುರಲಿಸ್ಟ್ ಹೇಳಿದ್ದು, ಜಿಂಕೆಗಳ ಸಂತತಿ ಜಾಸ್ತಿ ಇದ್ದಷ್ಟು ಹುಲಿ, ಚಿರತೆಗಳಿಗೆ ಕಷ್ಟವಿಲ್ಲವೆಂದು. ಅಲ್ಲಲ್ಲಿ ಒಮ್ಮೊಮ್ಮೆ ಜಿಂಕೆಗಳು, ಲಂಗೂರ್ ಸದ್ದು ಜಾಸ್ತಿಯಾಂದಂತೆ ಹುಲಿ ಬಂತೋ, ಚಿರತೆ ಬಂತೋ ಎಂದು ಎದ್ದೆದ್ದು ನೋಡುತ್ತಿದ್ದೆ.

ಕಾಡಿನಲ್ಲಿ ಪ್ರಾಣಿಗಳನ್ನ ಹುಡುಕೋದು ಅಷ್ಟು ಸುಲಭವಲ್ಲ. ಅವತ್ತು ನನಗೆ ಹುಲಿ, ಚಿರತೆ ಸಿಗಲೇ ಇಲ್ಲ. ಮನುಷ್ಯ ತನ್ನ ಗತ್ತು, ಇಲ್ಲಸಲ್ಲದ ದೊಡ್ಡ ಸ್ಥಾನಗಳಿಗೆ ಇಲ್ಲಿ ಬೆಲೆಯೇ ಇಲ್ಲ. ನಾವ್ಯಾರಾದರೂ ಸರಿಯೇ, ಎಷ್ಟೆ ಕಷ್ಟ ಪಟ್ಟರೂ ಸರಿಯೇ ನಮಗೋಸ್ಕರ ಪ್ರಾಣಿಗಳು ಕಾದು ಕೂರಲ್ಲ ನೋಡಿ.

The silence of the forest and the beauty of the nature

ರಾತ್ರಿ ಸಾರನ್ನ ತಿನ್ನೋವಾಗ ಎಲ್ಲರ ಮಾತು ಕೇಳುತ್ತಿತ್ತು. ಪಕ್ಕದ ಟೇಬಲ್ ನಲ್ಲಿ ಕೂತ ಜನಕ್ಕೆ ಹುಲಿ ಕಂಡಿತ್ತಂತೆ. ಅಲ್ಲಿಯೇ ಹಿಂದೆ, ಇದು 10ನೇ ಬಾರಿ ಬರುತ್ತಿರೋದು ಹುಲಿ ಕಾಣಲ್ಲಿಲ್ಲ ನೋಡಿ ಎಂದ ಜನರ ಮಧ್ಯೆ ನಾನು ಕೂತಿದ್ದೆ. ನಾಳೆ ಅತ್ತ ಕಡೆಯ ಪಯಣವೋ ಇತ್ತ ಕಡೆಯೋ ಎಂದು ಕಣ್ಣುಮುಚ್ಚಿಕೊಂಡೆ. ಕನಸಲ್ಲಿ ಹುಲಿ ಕಂಡಿತು. ಬೆಳಗ್ಗೆ ನಿಜವಾಗಲೂ ಹುಲಿ ಕಂಡಿತು. ಆ ರೋಚಕ ಕಥೆ ಮುಂದಿನ ವಾರ!

English summary
Have you ever been to Kabini forest? If not visit the forest and enjoy the nature, at least once in a life time. Many people have sighted Tiger in Kabini. Meghana Sudhindra writes about the first venture into the wild forest and her quest for the Tiger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X