• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!

By ಜಯನಗರದ ಹುಡುಗಿ
|

ಮೊನ್ನೆ ನನ್ನ ಮ್ಯಾಕ್ ನ "ಜಯನಗರದ ಹುಡುಗಿ" ಫೊಲ್ಡರ್ ನಲ್ಲಿ ಕಂಡಿದ್ದು 50 ಲೇಖನಗಳಿವೆ ಎಂದು. ಒಂದು ನಿಮಿಷ ಆಶ್ಚರ್ಯವಾಯಿತು. ಸತತವಾಗಿ 50 ವಾರಗಳು ನಾನು ಮಾಡಿದ ಮೊದಲ ಕೆಲಸವಿದು.

ಇನ್ನೂ ನೆನಪಿದೆ ಚಿಕ್ಕವಳಿದ್ದಾಗ "ನೀ ಏನಾಗ್ತೀಯಾ?" ಎಂದು ಕೇಳಿದಾಗ ಮೊದಮೊದಲು ಇಂಜಿನಿಯರ್ ಆಗ್ತೀನಿ, ನಂತರ ಕನ್ನಡ ಟೀಚರ್ ಆಗ್ತೀನಿ, ಪತ್ರಕರ್ತೆ ಆಗ್ತೀನಿ, ಆದಾದ ನಂತರ ಬರಹಗಾರ್ತಿ ಆಗ್ತೀನಿ ಎಂದು ಹೇಳುತ್ತಿದೆ. ಇಷ್ಟರಲ್ಲಿ 3 ಆಗಿದ್ದೀನಿ ಎಂಬ ಖುಷಿ ಇದೆ.

ಒನ್ಇಂಡಿಯಾ ಕನ್ನಡ ಮೊದಲು "ದಟ್ಸ್ ಕನ್ನಡ" ಅಂತರ್ಜಾಲ ಪತ್ರಿಕೆಯಾಗಿತ್ತು. ನಾನು ಚಿಕ್ಕವಳಿಂದಲೂ ಅದನ್ನ ಓದುತ್ತಿದ್ದೆ. ಶ್ರೀವತ್ಸ ಜೋಶಿಯವರ ಅಂಕಣದಿಂದಲೇ ನನಗೆ ಈ ಮಿಂದಾಣ ಪರಿಚಯವಾಗಿದ್ದು. ಅಲ್ಲೆಲ್ಲೋ ಅಮೆರಿಕಾದಲ್ಲಿದ್ದಾರಂತೆ, ಅಲ್ಲಿಂದ ಕನ್ನಡ ಬರೆಯುತ್ತಾರಂತೆ ಎಂಬೆಲ್ಲಾ ವಿಷಯಗಳ ಜೊತೆಜೊತೆಗೆ ಕನ್ನಡವನ್ನ ನಮ್ಮ ಕೀಲಿಮಣೆಗೆ ಹಾಗೂ ಕಂಪ್ಯೂಟರ್ ಗೆ ಕಲಿಸುವ ಬಗೆಯನ್ನ ಅಪ್ಪ ಪ್ರತಿವಾರ ಅವರ ಲೇಖನಕ್ಕೆ ಮಾಡುತ್ತಿದ್ದರು.

ಜರ್ಮನ್ ಅಜ್ಜ ಕತಲಾನ್ ಅಜ್ಜಿಯ ಅಮರ ಪ್ರೇಮ!

ಅಲ್ಲಿಂದಲೇ ನಾನೂ ಕದ್ದು ಮುಚ್ಚಿ ಕನ್ನಡ ಬರೆಯಲು ಕಲಿತೆ. ಬರಹದಲ್ಲಿ ಒತ್ತಕ್ಷರ ಕೊಡುವುದನ್ನು ಕಲಿತ ನಂತರ ಹಾಗೂ ಹೀಗೂ ಕಷ್ಟಪಟ್ಟು ಲೇಖನ ಬರೆದ್ದಿದ್ರೂ ಅದು ಪ್ರಕಟಗೊಳ್ಳಲೇ ಇಲ್ಲ. ಇನ್ನೇನ್ ಮಾಡೋದು ಎಂದುಕೊಂಡು ಇನ್ನು ನನಗೆ ಥೀಟ, ಸಿಗ್ಮಾಗಳೇ ಗಟ್ಟಿ ಎಂದು ಇಂಜಿನಿಯರಿಂಗ್ ಕಲಿಯೋದ್ರಲ್ಲಿ, ಅದರ ಕೆಲಸದಲ್ಲಿ ಮುಳುಗಿದ್ದೆ. ಆಗಾಗ ವಸುಧೇಂದ್ರ, ಬಿವಿ ಭಾರತಿ, ಕುಸುಮಬಾಲೆ, ಪ್ರೀತಿ ನಾಗರಾಜ್, ಅಂಜಲಿ ರಾಮಣ್ಣ ಮತ್ತು ಜೋಗಿಯವರ ಲೇಖನಗಳನ್ನ, ಪುಸ್ತಕಗಳನ್ನ, ಕಾರಂತರನ್ನ, ಮಾಸ್ತಿಯವರನ್ನ, ಕುವೆಂಪು, ತೇಜಸ್ವಿಯವರನ್ನ ಓದುತ್ತಲೇ ಇದ್ದೆ.

2016ರಲ್ಲಿ ಬಾರ್ಸಿಲೋನಾಕ್ಕೆ ಓದಲು ಹೋದೆ. ಅಲ್ಲಿ ಪುಸ್ತಕಗಳೇ ನನ್ನ ಸಂಗಾತಿಗಳಾಗಿದ್ದವು. ಭಾಷೆ ಬರದಿದ್ದ ಕಾರಣಕ್ಕೆ ಮೊದಲಷ್ಟು ದಿವಸ ಸ್ವಲ್ಪ ಒಂಟಿತನವೂ ಕಾಡಿತ್ತು. ಪ್ರತಿಸಲವೂ ನಾನೇ ಆಯ್ದುಕೊಂಡ ಪ್ರೀತಿಯ ವಿಷಯದ ಮಾಸ್ಟರ್ಸ್ಗಿಂತ ಬೆಂಗಳೂರಿನಲ್ಲಿ ನಡೆಯುವ ಕಹಳೆ ಕವನ ವಾಚನಕ್ಕೋ, ಪದಯಾತ್ರೆಗೋ ಓಡಿ ಹೋಗಬೇಕನಿಸುತ್ತಿತ್ತು. ಮನೆಯ ಸೆಳೆತ ಜಾಸ್ತಿಯಾಗಿತ್ತು. ಕೆಲವಷ್ಟು ದಿನ ಕನ್ನಡ ಓದೋದನ್ನೇ ಬಿಟ್ಟಿದೆ.

ಅಪ್ಪನ ಲೇಖನಗಳನ್ನ ಓದಿ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ಬರೆಯುವವರೆಲ್ಲಾ ಬರಹಗಾರರು, ಸಾಹಿತಿಗಳಾಗಿದ್ದರಿಂದಲೋ ಏನೋ ಅವರ ಬರಹಗಳು ಕಣ್ಣಿಗೆ ರಾಚುತ್ತಿದ್ವು. ನಾ ಬರೆಯಬೇಕೆಂಬ ಹಂಬಲ ಹೆಚ್ಚಾಗಿತ್ತು. ದಿನಾ 'ಕನ್ನಡ ಗೊತ್ತಿಲ್ಲ' ಸಂಸ್ಥೆಯಲ್ಲಿ ಕನ್ನಡೇತರರಿಗೆ ವಾಟ್ಸ್ಯಾಪ್ ನಲ್ಲಿ ಕನ್ನಡ ಹೇಳಿಕೊಡುತ್ತಿದ್ದೆ, ಅದೇ ಮಿಂದಾಣದಲ್ಲಿ ಆಂಗ್ಲ ಭಾಷೆಯಲ್ಲಿ ಬೆಂಗಳೂರಿನ ಬಗ್ಗೆ, ನನ್ನ ಬಾಲ್ಯದ ಬಗ್ಗೆ ಬರೀತಿದ್ದೆ. ಅದರೂ ಇನ್ನೇನೋ ಬರೆಯಬೇಕು, ಇನ್ನೇನೋ ಮಾಡಬೇಕೆಂಬ ಹಂಬಲ. ಅಲ್ಲಿದ್ದಾಗ ನಾ ಕನ್ನಡ ಬರೆಯುವುದನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಾ ಇದ್ದೆ. ಈ ಎಲ್ಲಾ ಕಾರಣಗಳಿಂದಲೇನೋ "ಜಯನಗರದ ಹುಡುಗಿ" ಜನ್ಮ ತಾಳಿದ್ದು.

ಸುಂದರ ಮುಂಜಾವಿನ ಮೌನದಲಿ ಸಿಕ್ಕಿದ್ದು ಬರೀ ಸದ್ದು!

ಈ ಕನಸಿಗೆ ಒತ್ತಾಸೆಯಾಗಿ ನಿಂತವರು ಶ್ಯಾಮ್ ಸುಂದರ್ ಮತ್ತು ಪ್ರಸಾದ್ ನಾಯಕ್, ಒನ್ಇಂಡಿಯಾದ ಎರಡು ಆಧಾರ ಸ್ತಂಭಗಳೆಂದರೇ ತಪ್ಪಿಲ್ಲ. ಇಬ್ಬರೂ ದೊಡ್ದ ಹುದ್ದೆಯಲ್ಲಿರುವವರು, ಪತ್ರಕರ್ತರು, ಹಲವಾರು ವರ್ಷಗಳ ಅನುಭವ ಇರುವವರು ಅಷ್ಟಾದರೂ ನಾ ಬರೆಯುವದನ್ನ ಓದಿ, ಪ್ರತಿಕ್ರಿಯೆ ನೀಡಿ, ತಿದ್ದಿ ತೀಡಿ 50 ವಾರಗಳ ಕಾಲ ಕರೆದುಕೊಂಡು ಬಂದವರು. ಶಾಲೆಯ ಮೇಷ್ಟ್ರ ಥರಹ ಒಂದೊಂದು ಹೆಜ್ಜೆಯನ್ನ ಇಡಿಸಿ ಮುನ್ನಡೆಸಿದವರು. ರಾತ್ರಿ 12 ಘಂಟೆ, 1 ಘಂಟೆಗೆಲ್ಲಾ ಒಮ್ಮೊಮ್ಮೆ ಲೇಖನ ಕಳಿಸಿದ್ದೂ ಇದೆ. ಒಂದು ದಿವಸವೂ ಬಯ್ಯದೇ ಕೋಪಗೊಳ್ಳದೇ ಅಲ್ಲಿದ್ದಾಗ, ಇಲ್ಲಿರುವಾಗ ಬಹಳ ಸಹನೆಯಿಂದ ವಿಷಯವನ್ನ ವಿಶ್ಲೇಷಣೆ ಮಾಡುವವರು ಇವರಿಬ್ಬರೇ. ಗುರು ಸಮಾನರಾಗಿ ಇವತ್ತಿಗೂ ಸಹ ಹೊಸ ಹೊಸ ಬರಹಗಾರರನ್ನ ಬೆಳೆಸುತ್ತಿದ್ದಾರೆ.

ನಾ ಬರೆದದ್ದನ್ನು ಓದೋದು, ವಿಮರ್ಶೆ ಮಾಡಿ ಹೇಳೋದು ಅಮ್ಮ. ಚಿಕ್ಕ ವಯಸ್ಸಿಂದಲೂ ಕನ್ನಡ ಬರಹ ಕಲಿಸಿ ಅದನ್ನ ಒಂದಿಪ್ಪತೈದು ಬಾರಿ ಬದಲಿಸಲು ಹೇಳಿ, ಪಕ್ಕಾ ಮಾಡೋದು ಅಮ್ಮನೇ. ಜಯನಗರದ ಹುಡುಗಿಯ ಶಿಲ್ಪಿ ಎಂದರೇ ತಪ್ಪಾಗುವುದಿಲ್ಲ. ಲೇಖನ ಪ್ರಕಟವಾದ ನಂತರ, ಅಮ್ಮ ಓದಿ ಚೆನ್ನಾಗಿದೆ ಅಂದಾಗಲೇ, ಪರ್ವಾಗಿಲ್ಲ ಈ ವಾರ ಓಡತ್ತೆ ಎಂದು ಸಮಾಧಾನ ಆಗೋದು.

ಓ ‌ಗೊಮ್ಮಟೇಶ್ವರನೆ, ನಗ್ನತೆಗೆ ನಾಚದಿಹೆ; ಬತ್ತಲೆಗೆ ಬೆದರದಿಹೆ

ಅಪ್ಪ ಮಗಳೇನೆ ಮಾಡಿದರೂ ಮುಗುಳ್ನಗೆ ಬೀರುವ ಮನಸ್ಸು, ತಂಗಿ ಮಾತಾಡದೇ ಭಾವನೆ ವ್ಯಕ್ತಪಡಿಸೋಳು. ಇನ್ನು ಅಣ್ಣನ ಮಕ್ಕಳು ಆಗಾಗ "ವಂಡರ್ ಫುಲ್" ಎಂದು ಬರೆದಾಗ ಚಿಕ್ಕಮಕ್ಕಳಿಗೂ ಕನ್ನಡ ಓದುವ ಹವ್ಯಾಸವಿದೆಯಲ್ಲ ಎಂಬ ಖುಷಿ ತುಂಬಾ ಅಗುತ್ತದೆ. ನನಗೆ ಕನ್ನಡ ಹೇಳಿಕೊಟ್ಟ ಗುರುಗಳೂ ಫೇಸ್ ಬುಕ್ಕಿನಲ್ಲಿ ನಾ ಶೇರ್ ಮಾಡಿದ್ದನ್ನ ಓದಿ, ಅದಕ್ಕೆ ಒಂದಷ್ಟು ಮಾಹಿತಿಯನ್ನ, ವಿಮರ್ಶೆಯನ್ನ ಒದಗಿಸುತ್ತಾರೆ. ಅಜ್ಜ ಅಜ್ಜಿಯೂ ಸಹ ಅವರ ಪ್ರೀತಿಯ ರಸಧಾರೆಯನ್ನ ಹರಿಸೋದು ಮರೆತಿಲ್ಲ.

ಚೆಂದ ಬರಹವಿದ್ದಾಗ ಅದಕ್ಕೆ ಪ್ರೀತಿ, ಭಾರತಿ, ಅಂಜಲಿ, ಕುಂಟಾಡಿ ನಿತೇಶ್ ಬೆನ್ನು ತಟ್ಟಿ ಮುಂದೆಹೋಗುವ ಮಾತನ್ನಾಡಿದ್ದಾರೆ. ವಿನಯ, ಶಶಿಧರ, ಕೆಕೆ, ಶುಭಶ್ರೀ ಇವರಂತಹ ಹೊಸ ವ್ಯಕ್ತಿಗಳು ವಿಷಯಗಳ ಪರಿಚಯ ಜಯನಗರದ ಹುಡುಗಿಯಿಂದ ಆಗಿದೆ. ಕನ್ನಡ ಗೊತ್ತಿಲ್ಲ ತಂಡದ ರಂಜಕ್ಕ, ದೀನಕ್ಕ ಅರ್ಪಿತ್, ಅನೂಪ್ ಇವರೆಲ್ಲರೂ ಬೆನ್ನೆಲುಬಾಗಿ ನಿಂತವರು. ಒಂದು ಸಮಾರಂಭದಲ್ಲಿ ವಸುಧೇಂದ್ರರವರು ನನ್ನನ್ನ "ಜಯನಗರದ ಹುಡುಗಿ" ಎಂದೇ ಸಂಭೋದಿಸಿದ್ದು ನನ್ನ ಜೀವನದ ಅತ್ಯಂತ ಪ್ರೀತಿಯ ಕ್ಷಣ. ರಾಜಕುಮಾರ್ ಆಗ ತಾನೆ ನಟನೆ ಶುರುಮಾಡಿದ್ದವನನ್ನ ಹೊಗಳಿದಾಗ ಆಗುವ ಸಂತಸವಿದು.

ಒಳ್ಳೆಯದರ ಜೊತೆ ಕೆಟ್ಟದ್ದು ಇರೋದು ಜೀವನದ ವಾಡಿಕೆ. ಬರೆದಿದ್ದೆಲ್ಲವನ್ನು ಬಯ್ಯೋದು, ಅದಕ್ಕೆ ಕೊಕ್ಕೆ ಹಾಕುವವರು ಕಡಿಮೆ ಏನಿಲ್ಲ. ನಿಮ್ಮ ಮನೆಯವರಷ್ಟೆ ಕಷ್ಟ ಪಟ್ಟಿರೋದ, ಅಥವ ನಿನ್ನ ತಾತನ ಬಗ್ಗೆಯೇ ಬರವಣಿಗೆ ಯಾಕೆ ಅನ್ನುವವರಿಗೆ ನನ್ನ ಉತ್ತರ ಮುಗುಳ್ನಗೆಯಷ್ಟೆ. ಆದರೆ ನಿಮ್ಮ ಕಥೆಯನ್ನ ಸಹ ನೀವೆ ಬರೆಯಬಹುದು. ಅಭಿವ್ಯಕ್ತಿ ಮಾಧ್ಯಮಗಳು ವಿಪರೀತ ಇವೆ. ನಿಮ್ಮ ಭಾವನೆಯನ್ನ ನಾನು ಅಭಿವ್ಯಕ್ತಿಗೊಳಿಸೋದು ಉಚಿತವಲ್ಲ ಎಂಬುದು ನನ್ನ ಬಲವಾದ ನಂಬಿಕೆ.

ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರ

ಬರೆಯೋದಕ್ಕೆ ಮುಂಚೆ ಓದುವ ಹವ್ಯಾಸ ಹುಚ್ಚು ಹಿಡಿಸಿದ ತಾತ, ಅದನ್ನ ಇನ್ನೂ ಜಾಸ್ತಿ ಮಾಡಿಸಿ ಲೆಕ್ಕವೇ ಇರದಷ್ಟು ಪುಸ್ತಕ ಕೊಡಿಸಿ, ಅದಕ್ಕೆ ಲೆಕ್ಕವೇ ಇಡದಿರುವ ಅಪ್ಪನಿಗೆ ನನ್ನ ಪ್ರೀತಿಯ ಅಪ್ಪುಗೆ. ಆಗಾಗ ಅಜ್ಜಿ ತಾತ ಲೇಖನ ಓದೋದಕ್ಕೆ ಒಂದು ಸ್ಮಾರ್ಟ್ ಫೋನ್ ತಗೋಬೇಕು ಎಂದು ಮಾತಾಡಿಕೊಳ್ಳುವಾಗ ಕಣ್ಣೀರು ಹರಿಯುತ್ತದೆ. ಮನೆಯ ಒಂದು ಕೆಲಸವನ್ನ ನನಗೆ ಹಚ್ಚದೇ, ತನಗೆ ಕಷ್ಟವಾದರೂ ಸರಿಯೇ ನನ್ನ ಕೆಲಸ, ಬರವಣಿಗೆಯನ್ನ ಬಹಳ ಗೌರವಿಸಿ, ಅಣಿ ಮಾಡುವ ನನ್ನಮ್ಮನಂತಹ ಅಮ್ಮ ಪ್ರತಿ ಹೆಣ್ಣಿಗೂ ಸಿಗಲಿ ಎಂಬುದೇ ನನ್ನ ಕೋರಿಕೆ.

ಪ್ರತಿವಾರ ಏನು ಬರೆಯಲಿ ಎಂದು ಯೋಚಿಸುವ ನನಗೆ ಅಗಾಧ ಮೌನವಿತ್ತು ಸಹಕರಿಸೋದು ರಾಮಕೃಷ್ಣ ಆಶ್ರಮ. ದೊಡ್ಡ ದೈವ ಭಕ್ತೆ ನಾನಲ್ಲ, ಅಥವಾ ನಾ ನಂಬುವ ದೈವಕ್ಕೆ ಸಾಲಂಕೃತವಾದ ಪೂಜೆ ಅಗತ್ಯವಿಲ್ಲ. ಇವೆಲ್ಲವೂ ಮೌನದಲ್ಲಿಯೇ, ಮನಸಲ್ಲಿಯೇ ಸಾಧ್ಯ ಎಂದು ತೋರಿಸಿಟ್ಟಿದ್ದು ಇಲ್ಲಿಯೇ.

ಮೇಘನಾಳನ್ನು ಜಯನಗರದ ಹುಡುಗಿಯಾಗಿ ಪರಿವರ್ತಿಸಿದ್ದು ನೀವು, ಓದುಗರ ವರ್ಗ. ಯಾವುದ್ಯಾವುದೋ ಊರಿಂದ ಮಿಂಚಂಚೆಯಲ್ಲಿ ಪತ್ರ ಬರೆದು, ಒಮ್ಮೊಮ್ಮೆ ಹೊಗಳಿ ಬೈದು ಮುನ್ನಡೆಸುವವರು ನೀವೆ. ನನ್ನ ಮೆಚ್ಚಿನ ಲೇಖಕ ಜೋಗಿಯವರು ಬರೆದಿರುವ ಹಾಗೆ, ನಮ್ಮ ಕತೆಯನ್ನೋ ಕಾದಂಬರಿಯನ್ನೋ ಯಾರಾದರೂ ಓದಿದರೆ, ಅವರ ಆಯುಷ್ಯದ ಒಂದಷ್ಟು ಹೊತ್ತನ್ನು ನಮಗೆ ಧಾರೆಯೆರೆದು ಕೊಟ್ಟಿರುತ್ತಾರೆ. ಆ ಕುರಿತು ನಮಗೆ ಕೃತಜ್ಞತೆ ಇರಬೇಕು. ಆ ಕಾರಣಕ್ಕೇ ಓದುಗರು, ಪ್ರೇಕ್ಷಕರು, ಕೇಳುಗರು ನಮ್ಮ ಆಯಸ್ಸಿಗೆ ಅವರ ಆಯಸ್ಸನ್ನೂ ಸೇರಿಸುವ ಅಶ್ವಿನಿದೇವತೆಗಳು. ಇಂತಹ ಅಶ್ವಿನಿ ದೇವತೆಗಳಿಗೆ ಪ್ರಣಾಮಗಳು.

ಇನ್ನೂ ಸಾಗುವ ಹಾದಿ ದೊಡ್ಡದಿದೆ, ಕೆಲಸಗಳು, ಜಾಸ್ತಿಯೇ ಬರೆಯುವ ಹುಚ್ಚು ಎಂದಿಗೂ ನನ್ನ ಬಿಡದಿರಲಿ. ನಿಮಗೆಲ್ಲಾ ಧನ್ಯವಾದ ಹೇಳಲಿಕ್ಕೆಂದೇ ಈ ಲೇಖನ! ಮುಂದಿನ ವಾರ ನಿಮ್ಮ ಮುಂದೆ ಹೊಸ ವಿಷಯದೊಂದಿಗೆ ಬರುತ್ತೇನೆ.

ನಮಸ್ಕಾರ

ಇತಿ ಜಯನಗರದ ಹುಡುಗಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jayanagarada Hudugi, Meghana Sudhindra has completed 50 beautiful articles, on variety of subjects on Oneinaid Kannada column. He has thanked all those who encouraged her to write in Kannada and supported.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more