ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರುತ ದೂರ ದೂರ... ಏರೋ ಇಂಡಿಯಾದ ನೆನಪುಗಳು!

ನಿಮ್ಮ ಮಕ್ಕಳ್ಳನ್ನು ಸಹ ವೈಜ್ಞಾನಿಕ ಮನೋಭಾವದೊಂದಿಗೆ ಬೆಳೆಸಿ. ನಮ್ಮೂರು ಬೆಂಗಳೂರಿಗೆ ರಾಜ ಮಹಾರಾಜರ ಯೋಗವಿಲ್ಲದಿದ್ದರೂ ಬಹಳಷ್ಟು ವಿಜ್ಞಾನಿಗಳ ಸುಯೋಗವಿದೆ. ಅದನ್ನ ಹುಡುಕಿಕೊಂಡು ಹೋಗುವ ಕನಸು ನನಸಾಗಲಿ.

By ಜಯನಗರದ ಹುಡುಗಿ
|
Google Oneindia Kannada News

1998ನೇ ಇಸವಿ, ಅಪ್ಪ ಮನೆಗೆ ಬಂದು ನಾಳೆ ಬೆಳಿಗ್ಗೆ ಬೇಗ ತಯಾರಾಗು, ಒಂದು ಚಮತ್ಕಾರ ನೋಡೋಣ ಅಂತ ಹೇಳಿ ಅವರ ಕೆಲಸದಲ್ಲಿ ತೊಡಗಿದ್ದರು. ಸರಿ ನಾನು ಏನಪ್ಪ ಅಂತ ಕಾಯುತ್ತ ಇದ್ದೆ. ಅಪ್ಪ ಡಿಆರ್ ಡಿಓದಲ್ಲಿ ವಿಜ್ಞಾನಿಯಾಗಿದ್ದರು. ಅದು ಏನು ಅಂತಾನು ನನಗೆ ಗೊತ್ತಿರಲಿಲ್ಲ.

ಮತ್ತೆ ತಾತನ ಹತ್ತಿರ ಇದರ ಬಗ್ಗೆ ವಿಚಾರಿಸಿದೆ. ತಾತ ಒಂದು ದೊಡ್ಡ ಹಾಳೆ ತೆಗೆದು ಅದರಲ್ಲಿ ಭಾರತದ ಭೂಪಟ ಬರೆದು, ಗಡಿ ರೇಖೆ ಎಲ್ಲವನ್ನು ಬಿಡಿಸಿ ಇದರ ರಕ್ಷಣೆಗೆ ಬೇಕಾದ ಯುದ್ಧ ವಿಮಾನ, ಕ್ಷಿಪಣಿ ಇವೆಲ್ಲವನ್ನು ತಯಾರು ಮಾಡುವ ಕೆಲಸ ನಿನ್ನ ಅಪ್ಪನದ್ದು. ದೇಶ ಸೇವೆ ಮಾಡುತ್ತಿರುವ ನಿನ್ನ ಅಪ್ಪನ ಬಗ್ಗೆ ಗೊತ್ತಿಲ್ಲವ ನಿನಗೆ? ಎಂದಾಗ ನನಗೆ ಇನ್ನು ರೋಮಾಂಚನ. ನನ್ನಪ್ಪ ಹೀರೋ ಅಂತ![ನಿಮಗೆ ಕನ್ನಡ ಬರುತ್ತಾ? ಅಂತ ಕೇಳುವ ಮೊದಲು...]

Proud memories of Aero India in Bengaluru

ಸರಿ ನಾಳೆಗು ಇದಕ್ಕು ಏನು ಸಂಬಂಧ ತಾತ ಅಂತ ಕೇಳಿದಾಗ, ನಾಳೆ ಏರೋ ಶೊ. ನಿನ್ನಪ್ಪ ತಯಾರು ಮಾಡಿದ ವಿಮಾನಗಳು ಆಕಾಶದಲ್ಲಿ ಹಾರಾಡುವುದನ್ನು ನೀನು ನೋಡಬಹುದು. ಬೇರೆ ದೇಶದ ಯುದ್ಧ ವಿಮಾನಗಳು, ಆಕಾಶದಲ್ಲಿ ನಡೆಯುವ ರಂಗಿತರಂಗ ಇವೆಲ್ಲವನ್ನು ಸವಿಯಬಹುದು. ದೊಡ್ಡ ವ್ಯಕ್ತಿಗಳೆಲ್ಲ ಬರುತ್ತಾರೆ. ಇದು ನಮ್ಮ ಬೆಂಗಳೂರಲ್ಲಿ ಮಾತ್ರ ನಡೆಯುವುದು... ಅಂತೆಲ್ಲ ಹೇಳಿದಾಗ ಒಹೋ ಅಂತ ಖುಶಿಯಾಗಿದ್ದೆ.

ನಾಳೆ ಬೆಳಿಗ್ಗೆ ಆಯಿತು. ಫೆಬ್ರವರಿಯಾದ್ದರಿಂದ ಬಿಸಿಲು ತಿಳಿಯಾಗಿತ್ತು. ಅಪ್ಪ ನನಗೆ ಹಳೇ ಕೂಲಿಂಗ್ ಗ್ಲಾಸ್ ಹಾಗೂ ಮತ್ತು ಡಿಆರ್ ಡಿಓದ ಟೋಪಿ ಕೊಟ್ಟು ಗಾಡಿಯ ಮೇಲೆ ನಮ್ಮ ಪಯಣ ಯಲಹಂಕ ಏರ್ ಫೋರ್ಸ್ ಬೇಸ್ ಗೆ. ನಾನು ಅಪ್ಪ ಅಮ್ಮನ ಮಧ್ಯ ನಮ್ಮ ಕೈನೆಟಿಕ್ ಹೋಂಡದಲ್ಲಿ ಕುಳಿತುಕೊಂಡು ಜಯನಗರದಿಂದ ಅಲ್ಲಿಗೆ ಹೋಗೋ ಅಷ್ಟರಲ್ಲಿ ನನಗೆ ನಿದ್ದೆಯೇ ಬಂದಿತ್ತು. ಆದರೂ ಅಲ್ಲಿ ಹೋದಾಗ ಮೈ ಝುಮ್ ಅನ್ನೋದೋಂದು ಬಾಕಿ. [ಮುಂದಿನ ಏರೋ ಇಂಡಿಯಾ ಎಲ್ಲಿ, ಬೆಂಗಳೂರಿನಲ್ಲಿ ಇನ್ಮುಂದೆ ಶೋ ಇಲ್ಲ?]

Proud memories of Aero India in Bengaluru

ಅಪ್ಪ ಹಾಗೂ ಅಪ್ಪನ ಸ್ನೇಹಿತರು, ಎಲ್ಲ ಸಣ್ಣ ಮಕ್ಕಳಂತೆ ಅವರು ಮಾಡಿದ ಕೆಲಸವನ್ನ ಬಂದವರೆಲ್ಲರಿಗೆ ವಿವರಿಸುತ್ತಿದ್ದರು. ಇಡೀ ಭಾರತದ ರಕ್ಷಣಾ ವ್ಯವಸ್ಥೆಯ ಒಂದು ನೋಟವಾಗಿತ್ತು. ಅಪ್ಪನಿಗೆ ಕೆಲವರು ಬೆನ್ನು ತಟ್ಟಿ, very good ಅಂದಾಗ ನಾನು ಅವಕ್ಕಾದೆ. ನಂತರ ಆಕಾಶದೆಡೆಗೆ ನಮ್ಮ ನೋಟ. ಸೂರ್ಯ ಕಿರಣ ಬಂತು ಅಪ್ಪನಂತು ಅಲ್ಲಿ ನೋಡು ಇದರ ಹಾರಾಟ ಅಂದಾಗ ವಿಮಾನಗಳು ಹೀಗೆಲ್ಲ ಆಡುತ್ತಾವ ಅಂತ ಭಯ. ಅಪ್ಪನಿಗೆ, ಅಪ್ಪ ಇದು ಬಿದ್ದೋಗಲ್ವ ಅಂತ ಎಲ್ಲ ಕೇಳಿ ನಗೆಪಾಟಲಿಗೊಳಗಾಗಿದ್ದೆ. ಅಮ್ಮ ಸಹ ಇದೆಲ್ಲವನ್ನ ನನಗೆ ವಿವರಿಸುತ್ತಿದ್ದಳು.[ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!]

ನಂತರ ಬಂದಿದ್ದು ಜಾಗ್ವಾರ್, ಸುಖೊಇ, ಮತ್ತು ಮಿರಾಜ್. ಅಪ್ಪ ಇದೆಲ್ಲದರ ವಿವರ ಕೊಟ್ಟಾಗ ನಾನು ತಲೆ ತಿರುಗಿ ಬೀಳೋದೊಂದು ಬಾಕಿ. ವಿಮಾನ ಅಸಲಿಗೆ ಹೇಗೆ ಹಾರಟ ಮಾಡುತ್ತದೆ ಅಂತಾನೂ ನನಗೆ ಗೊತ್ತಿರಲಿಲ್ಲ. ಅವೆಲ್ಲವನ್ನು ಅಪ್ಪ ಸರಳಗನ್ನಡದಲ್ಲಿ ವಿವರಿಸುತ್ತಿದರು. ಅಲ್ಲಿ ನಾನು ಮೊದಲ ಬಾರಿಗೆ ಜಾರ್ಜ್ ಫರ್ನಾಂಡೀಸ್ ಹಾಗು ಅಬ್ದುಲ್ ಕಲಾಮ್ರನ್ನು ಕಂಡಿದ್ದು. ಅಪ್ಪ ಕಲಾಮ್ ರನ್ನು ತೋರಿಸಿ ಇವರೆ ನಮ್ಮ ಬಾಸ್ ಅಂದಾಗ ನಾನು ಇಷ್ಟು ಸರಳತೆಯಾ ಅಂತ ಅಂದಿದ್ದೆ. ಆಶ್ಚರ್ಯ ಆಗಿದ್ದು ಅವರು ನಾವೆಲ್ಲ ಮಕ್ಕಳ ಹತ್ತಿರ ಬಂದು ನಿಮ್ಮ ಅಪ್ಪ ಅಮ್ಮಂದಿರ ಸಾಧನೆ ನೋಡಿದ್ರಾ ಅಂದಾಗ, ಅಬ್ಬ ಎಷ್ಟು ಸಕ್ಕತ್ ಬಾಸ್ ಅಪ್ಪ ನಿಂಗೆ ಅಂತ ನಾನು ಕುಣಿದು ಕುಪ್ಪಳಿಸಿದ್ದೆ.

ದೇಶದ ರಕ್ಷಣೆಗಾಗಿ ಜನ ಗಡಿ ಕಾಯುತ್ತಾರೆ ಎಂದು ಗೊತ್ತಿತ್ತು, ವಿಮಾನಗಳು ಹಾರಾಡುತ್ತದೆ ಅಂತಲೂ ಗೊತ್ತಿತ್ತು. ಅದನ್ನ ಮಾಡೋದಕ್ಕೆ ಅಪ್ಪ ಪರಿಶ್ರಮ ಪಡುತ್ತಾರೆ ಎಂದು ತಿಳಿಯುತ್ತಿರಲಿಲ್ಲ. ಅಪ್ಪ ಯಾವಾಗಲೂ ಮನೆಗೆ ತಡವಾಗಿ ಬಂದಾಗ ತಾತ ಒಂದು ಮಾತನ್ನು ಅನ್ನದಿದ್ದನ್ನ ನೋಡಿ ಕೋಪ ಬರುತಿತ್ತು. ಆದರೆ ಅಪ್ಪನ ಈ ಕೆಲಸದ ವಾತಾವರಣ ನೋಡಿ ನನಗೆ ಅಪ್ಪನ ಬಗ್ಗೆ ಕುತೂಹಲ ಜಾಸ್ತಿ ಆಯಿತು. ದಿನಾ ಅಪ್ಪ ಮನೆಗೆ ಬಂದಾಗ ಇವತ್ತೇನು ಕಂಡು ಹಿಡಿದೆ ಅಪ್ಪ ಅಂತ ತಲೆ ತಿನ್ನುತ್ತಿದ್ದೆ. ಅಮ್ಮ ಅದೇನು ಬದನೆಕಾಯಿಯ ಅಂತ ಸುಮ್ಮನಾಗಿಸಿದ್ದ ಮೇಲೆಯೆ ನಾನು ತಾತನ ಹತ್ತಿರ ಕಥೆ ಕೇಳೋದಕ್ಕೆ ಹೊರಡುತ್ತಿದ್ದೆ. ಪತ್ರಿಕೆಯಲ್ಲಿ ಅಗ್ನಿಯ ಹೊಸ ಪರೀಕ್ಷೆ ಎಂದಾಗೆಲ್ಲ ನಾನು ಇಡೀ ಶಾಲೆಗೆ ನನ್ನ ಅಪ್ಪನೆ ಇದು ಮಾಡಿದ್ದು ಅಂತ ಸಾರುತ್ತಿದ್ದೆ.

Proud memories of Aero India in Bengaluru

ಐಟಿ ಸಿಟಿ ಬೆಂಗಳೂರು ಆಗುವುದಕ್ಕಿಂತ ಮೊದಲು ವಿಮಾನ ನಗರಿಯಾಗಿತ್ತು. ವಿಜ್ಞಾನ ನಗರಿಯೂ ಸಹ. ಇಲ್ಲಿ ಇಸ್ರೋ ಇದೆ, ಎಚ್ಎಲ್ ಇದೆ, ಡಿಆರ್ ಡಿಓ ಇದೆ, ಎಲ್ಲಕಿಂತ ಮಿಗಿಲಾಗಿ ನಮ್ಮ ಐಐಎಸ್ ಸಿ ಇದೆ. ಇದ್ದೆಲದರ ಸದುಪಯೊಗ ನಾನಂತು ಪಡೆದುಕೊಂಡೆ.

ಏರ್ ಶೋ ಮುಂಚೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಫೆಬ್ರವರಿಯಲ್ಲಿಯೆ ಸಾಮನ್ಯ ನಡೆಯುತಿತ್ತು. ಶಿಸ್ತಿನ ಸಿಪಾಯಿಗಳ ಹಾಗೆ ನಮ್ಮ ನಗರಿ ಸಜ್ಜಾಗುತ್ತಿತ್ತು. ಅಪ್ಪನ ಸಂಸ್ಥೆಯೆ ಇದನ್ನ ನಡೆಸುತ್ತಿದ್ದರಿಂದ ನಮಗೆ ನೋಡೊ ಸದವಕಾಶ. ಅಲ್ಲಿನ ಪೈಲೆಟ್ಗಳು, ದೊಡ್ಡ ವಿಮಾನಗಳು, ಅದು ಮಾಡುವ ಶಬ್ದ, ಅದರ ಬಗ್ಗೆ ವಿವರಣೆ, ಮನೆಯಲ್ಲಿ ಅದರ ಬಗ್ಗೆ ಮಾತು ಕೇಳಿ ನನಗೆ ಬಹಳ ಸಂತಸವಾಗುತ್ತಿತ್ತು. ಅಪ್ಪ ಎಂದಿಗೂ ಅಲ್ಲಿ ನಡೆಯುವ ಕೆಲಸದ ಬಗ್ಗೆ ಮನೆಯಲ್ಲಿ ಮಾತನಾಡುತ್ತಿರಲಿಲ್ಲ. ಮನೆಯವರೊಂದಿಗೆ ಸಹ ಮಾಡುವ ಕೆಲಸ ಹಂಚಿಕೋಬಾರದೆಂಬ ನಿಯಮ ಅಲ್ಲಿತ್ತು. ಅಪ್ಪ ಅದನ್ನ ಪಾಲಿಸುತ್ತಿದ್ದರು. ನಾನು ದಿನ ಅಪ್ಪ ಬರೋವರೆಗು ಕಾದು ಅವರು ಇಲ್ಲ ಅನ್ನೋವರೆಗು ಇದ್ದು ಸರಿ ಎಂದು ಮಲಗಿತ್ತಿದ್ದೆ.

ಮುಂದಿನ ಸಲ ನಾನೇ ಅಪ್ಪನ ಹತ್ತಿರ ಏರ್ ಶೋಗೆ ಹೋಗಬೇಕು ಎಂದು ನೆನಪಿಸಿದ್ದೆ. ಅಪ್ಪನಿಗೆ ಬಹಳ ಸಂತೋಷ. ಸರಿ ಮಗಳೆ ಎಂದು ಕರೆದುಕೊಂಡು ಹೋದರು. ಆ ವರ್ಷ ಮೊದಲ ಬಾರಿಗೆ ಬೇರೆ ದೇಶದವರು ಸಹ ಅವರ ವಿಮಾನವನ್ನ ವ್ಯಾಪಾರ ಮಾಡಲು ಬಂದಿದ್ದರು. ನಾನು ರಕ್ಷಣೆಯಲ್ಲಿಯು ಸಹ ವ್ಯಾಪಾರವೆ ಅಂತ ಯೋಚನೆ ಮಾಡಿಕೋತ ಬಂದಿದ್ದೆ. ಆ ವರ್ಷದಲ್ಲಿ ಎಚ್ಎಎಲ್ ನ ಧ್ರುವ ಹೆಲಿಕಾಪ್ಟರ್ ಮೊದಲ ಬಾರಿಗೆ ಹಾರಾಟ ಮಾಡಿತ್ತು.

Proud memories of Aero India in Bengaluru

ಅಪ್ಪ ಅದರ ಬಗ್ಗೆ ವಿವರಣೆ ನೀಡುತ್ತಿದ್ದರು. ಹೆಲಿಕಾಪ್ಟರ್ ಹಾಗು ವಿಮಾನದ ನಡುವಿನ ವ್ಯತ್ಯಾಸ, ಅದರ ರಚನೆ ಎಲ್ಲದರ ಬಗ್ಗೆ ಅಪ್ಪ ಹೇಳುತ್ತಲೇ ಹೋದರು. ನಾನು ಒಹೋ ಅಪ್ಪ ವಿಮಾನವಷ್ಟೆ ಅಲ್ಲ ಇವೆಲ್ಲವೂ ಗೊತ್ತ ಅಂತ ಕಣ್ಣು ಬಾಯಿ ಬಿಡುತ್ತಿದ್ದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಭಾರತದ ಹೊಸ ಆವಿಷ್ಕಾರವನ್ನ ಅಲ್ಲಿ ಪ್ರದರ್ಶಿಸಲಾಗುತ್ತಿತ್ತು. ಕಲಾಮ್ರನ್ನು , ಟಾಟಾ ಅವರನ್ನು ಕಂಡಿದ್ದು ಇಲ್ಲಿಯೇ. ಒಂದೊಮ್ಮೆ ಹೀಗೆ ಅಪ್ಪ ನಾನೇನೋ ಆ ಕೆಲಸ ಈ ಕೆಲಸ ಮಾಡಲ್ಲ ಅಂದಿದ್ದಕ್ಕೆ ಅವರ ಬಾಸ್ ಉದಾಹರಣೆ ಕೊಡುತ್ತಿದ್ದರು. ಕಲಾಮ್ ಸರ್ ಒಮ್ಮೆ ಸ್ವದೇಶ ನಿರ್ಮಿತ ವಿಮಾನದ ಇಂಜಿನ್ ನಲ್ಲಿ ತೊಂದರೆ ಕಂಡಾಗ 'Test Flight'ಗೆ ತಡ ಆಗುತ್ತದೆ ಅಂತ ಮೆಕ್ಯಾನಿಕ್ ತರಹ ವಿಮಾನದ ಕೆಳಗೆ ನುಗ್ಗಿ ಅದನ್ನು ಸರಿಪಡಿಸಿದ್ದರಂತೆ. ಯಾವ ಕೆಲಸವು ಹೆಚ್ಚಲ್ಲ ಕಡಿಮೆಯಲ್ಲ ಅಂತ ತಿಳಿಸಿ ಹೇಳುತ್ತಿದ್ದರು.

ನನ್ನ ಮೂರನೆ ಏರ್ ಶೋ ಹೊತ್ತಿಗೆ ಭಾರತ ತನ್ನದೆ ಆದ ಯುದ್ಧ ವಿಮಾನ ನಿರ್ಮಾಣ ಮಾಡುತ್ತಿದೆ ಇಂಜಿನ್ ಸಹಿತ ಎಂದು ದಿನ ಪತ್ರಿಕೆಯಲ್ಲಿ ಓದಿ ಅಪ್ಪನಿಗೆ ಕೇಳಿದ್ದೆ. ಆವಾಗಲೇ ಅಪ್ಪ ಹೂ ಅಂದಿದ್ದು. ನಾನು ರಸ್ತೆ ಮೇಲೆ ಕುಣಿಯೋದೊಂದು ಬಾಕಿ. ತಾತ ಹಾಗೂ ನಾನು ಆ ವಿಮಾನ ನಿಜವಾಗಲೂ ಹಾರಟವನ್ನು ನೋಡುವುದನ್ನು ಕಾಯುತ್ತಿದ್ದೆವು.

2005ರ ಏರ್ ಶೋದಲ್ಲಿ ಭಾರತದ ಪ್ರತಿಭಾ ಪ್ರದರ್ಶನ ಹಿಂದೆಂದಿಗಿಂತಲೂ ತುಂಬಾ ಚೆನ್ನಾಗಿತ್ತು. ಸಾರಂಗ್ ಹೆಲಿಕಾಪ್ಟರ್ಗಳು ಸೂರ್ಯ ಕಿರಣದ ಹಾಗೆಯೆ ಎಲ್ಲ ತರಹ ಯೋಗಾಭ್ಯಾಸ ಆಕಾಶದಲ್ಲಿ ಮಾಡುತ್ತಿದ್ದವು. ಮೊದಲ ಬಾರಿಗೆ UAV ಸಹ ನೋಡಿದ್ದು ಅಲ್ಲಿಯೇ. ಸುಮಾರು ವಿಮಾನದ ಬಗ್ಗೆ ನನಗೆ ಚೆನ್ನಾಗೆ ತಿಳಿದಿತ್ತು. ಶಾಲೆಯಿಂದ ನಮಗೆ ಅಲ್ಲಿಗೆ ಕರೆದುಕೊಂಡು ಹೋದಾಗ ನಾನೆ ಎಲ್ಲ ವಿವರಗಳನ್ನು ನೀಡಿದ್ದೆ. ಬೆಂಗಳೂರಿನ ಸುಮಾರು ಇಂತಹ ಸಂಸ್ಥೆಗಳಿಗೆ ನಮ್ಮ ಶಾಲೆ ಹಾಗು ಅಪ್ಪ ಇಬ್ಬರು ಕರೆದುಕೊಂಡು ಹೋಗಿದ್ದರು. Fantasy Park, ಮಾಲ್ ಗಳಿಗೆ ನಮ್ಮ ಶಾಲೆಯ ಟ್ರಿಪ್ಗಳು ಸೀಮಿತವಾಗಿರಲಿಲ್ಲ.

ಬೆಂಗಳೂರಿನಲ್ಲಿ ನಡೆಯುವ 'open day' ಸಹ ಅಷ್ಟೇ ಆಕರ್ಷಣೀಯ. ಐಐಎಸ್ ಸಿ ಯಲ್ಲಿ ಪ್ರತಿ ವರ್ಷ ನಡೆಯುವ ಪ್ರದರ್ಶನ ಅಲ್ಲಿನ ಬೆಳವಣಿಗೆಗಳು ಎಲ್ಲವೂ ಬೆಂಗಳೂರಿನ ಮೆರುಗನ್ನು ಇನ್ನು ಹೆಚ್ಚಿಸುತ್ತದೆ. ಮುಂದೊದು ದಿನ ಅದೇ ಐಐಎಸ್ ಸಿ ಯಲ್ಲಿ ಕೆಲಸ ಮಾಡಲು ಸೇರಿಕೊಂಡಾಗ , ಕಲಾಮ್ ಸರ್ ನಮ್ಮ ಏರೋಸ್ಪೇಸ್ ಡಿಪಾರ್ಟ್ಮೆಂಟ್ಗೆ ಬಂದು ನಮೆಲ್ಲರ ಪಕ್ಕ ಕುಳಿತು ನಾವು ಮಾಡುವ ಕೆಲಸವನ್ನು ಹೊಗಳಿ, ಅದಕ್ಕೆ ತಕ್ಕ ಸಲಹೆಯನ್ನು ಕೊಟ್ಟು ಹೋದರು.

ಬೆಂಗಳೂರಿನಲ್ಲಿ ಇದ್ದದ್ದಕ್ಕು ಸಾರ್ಥಕ ಅನ್ನಿಸಿದ್ದು ಆವಾಗಲೆ. ನಿಮ್ಮ ಮಕ್ಕಳ್ಳನ್ನು ಸಹ ಇದೇ ಮನೋಭಾವದೊಂದಿಗೆ ಬೆಳೆಸಿ. ನಮ್ಮೂರಿಗೆ ರಾಜ ಮಹಾರಾಜರ ಯೋಗವಿಲ್ಲದಿದ್ದರೂ ಬಹಳಷ್ಟು ವಿಜ್ಞಾನಿಗಳ ಸುಯೋಗವಿದೆ. ಅದನ್ನ ಹುಡುಕಿಕೊಂಡು ಹೋಗುವ ಕನಸು ನನಸಾಗಲಿ. ಅಂದ ಹಾಗೆ, ಇಡೀ ಭಾರತದಲ್ಲಿ ಮೊದಲು ವಿದ್ಯುತ್ ಬಂದಿದ್ದು ಬೆಂಗಳೂರಿಗೆ. ಗ್ರೇಟ್ ಅಲ್ವಾ?

ಹೋದ ಎರಡು ವರ್ಷದ ಪ್ರದರ್ಶನ ಬಿಟ್ಟರೆ ನಾನೆಂದಿಗೂ ಇವೆರಡನ್ನು ತಪ್ಪಿಸುವುದಿಲ್ಲ. ರಾಮನವಮಿಯ ಸಂಗೀತ ಕಛೇರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವೈಜ್ಞಾನಿಕ ಮನೋಭಾವ. ಮತ್ತೆ ಬೆಂಗಳೂರಲ್ಲಿ ಏನಿದೆ ಅಂತ ಕೇಳೋವಾಗ ಇದನ್ನ ಮರೆಯದಿರಿ.

ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ವಿಪರೀತ ಬಹು ಮಹಡಿ ಕಟ್ಟಡ, ಈ ಪ್ರದರ್ಶನ ನೋಡೋದಕ್ಕೆ ಬರುವವರಿಂದ ವಿಪರೀತ ವಾಹನ ದಟ್ಟಣೆ ಆಗುತ್ತದೆ ಎಂದು ಜಾಗವನ್ನು ಬದಲಾಯಿಸಲು ಯೋಚಿಸಲಾಗುತ್ತಿತ್ತು. ಪ್ಯಾರಿಸ್, ಶಿಕಾಗೋ ನಂತರ ನಡೆಯುವ ಅತಿ ದೊಡ್ಡ ವಿಮಾನ ಪ್ರದರ್ಶನ ನಡೆಯುವುದು ನಮ್ಮ ಬೆಂಗಳೂರಿನಲ್ಲಿ. ಮುಂದಿನ ಸರತಿ ನಡೆದಾಗ ನೋಡಲು ಮರೆಯದಿರಿ.

ಅಂದ ಹಾಗೆ ಇಷ್ಟೆಲ್ಲ ನನಗೆ ಈಗಲೂ ನೆನಪಿರಲು ಕಾರಣ, ನನಗೆ ಆನೆಯ ಹಾಗೆ ಜ್ಞಾಪಕ(Elephant's memory) ಶಕ್ತಿ ಇದೆ. ಸುಮ್ಮನೆ ಬೈದಿದ್ರು, ಹೊಗಳಿದ್ರು ಪೂರ್ತಿ ನೆನಪಿರುತ್ತೆ. ಸುಮ್ನೆ ಹೇಳ್ದೆ ಅಷ್ಟೆ!

English summary
What is not there in Bengaluru, the first city to get electricity in India? It has ISRO, it has IISc, it has HAL, it has DRDO too. Have you ever seen Aero India? If not watch it, show it to your kids, make them get curious about Aero science. Writes Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X