ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಟ್ಟಗಿದ್ರೆ ಉದ್ಧಾರ, ಇಲ್ಲದಿದ್ದರೆ ಪ್ರಾಣಿಗಳಂತೆ ನಾಶ ಗ್ಯಾರಂಟಿ!

By ಜಯನಗರದ ಹುಡುಗಿ
|
Google Oneindia Kannada News

ವಾರಾಂತ್ಯದಲ್ಲಿ ಎಂಜಿ ರೋಡಿನಲ್ಲಿ ನಡೆದ ಪುಸ್ತಕ ಬಿಡುಗಡೆಯ ನಂತರ ಅಲ್ಲೇ ಚರ್ಚ್ ಸ್ಟ್ರೀಟಲ್ಲಿ ನಮ್ಮೆಲ್ಲರಂತೆ ಬಿಡುಬೀಸಾಗಿ ನಿಂತಿದ್ದ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿಯವರನ್ನ ನೋಡಿ ಒಮ್ಮೆಲೇ ಅಶ್ಚರ್ಯವಾಯಿತು. ಅಲ್ಲಿದ್ದ ನಮ್ಮನ್ನೆಲ್ಲಾ ಎಲ್ಲೋ ಸಿಕ್ಕ ಹಳೆ ಗೆಳೆಯರಂತೆ ಮಾತಾಡಿಸಿದ್ದು ಕೌತುಕವೇ ಸರಿ. ದೊಡ್ಡ ಸಾಹಿತಿಗಳು ದೊಡ್ಡ ಮನುಷ್ಯರು ನಮ್ಮನ್ನ ಹೀಗೆಲ್ಲಾ ಮಾತಾಡಿಸಬಹುದು ಎಂಬ ಊಹೆಯೂ ಇರಲ್ಲಿಲ್ಲ.

ಎಂ ಜಿ ರೋಡ್ ಆಸುಪಾಸು ಸುಳಿದರೆ ಹೋಗಲೇಬೇಕಾದ ಒಂದು ಜಾಗ ಇದೆ. ಬುಕ್ ವರ್ಮ್ ಎನ್ನುವ ಅಂಗಡಿ. ಅಲ್ಲಿ ಇಲ್ಲಿ ತಡಕಾಡಿ ಆ ಪುಸ್ತಕಗಳ ರಾಶಿಗಳ ಮಧ್ಯ ಖುಷಿಯಿಂದ ತೆಗೆದುಕೊಂಡದ್ದು 'ಸೇಪಿಯನ್ಸ್' ಎನ್ನುವ ಪುಸ್ತಕ. ಜಗತ್ತಿನ ಎಲ್ಲಾ ಪುಸ್ತಕಗಳು ಅಲ್ಲಿ ಸಿಗುವಾಗ ಯಾಕೆ ಅದನ್ನೇ ತಗೊಂಡೆ ಅನ್ನುವ ಪಶ್ನೆಗೆ ಉತ್ತರವಿಲ್ಲ. ಆದರೆ ನನಗೊಂದು ಅಭ್ಯಾಸ ಇದೆ. ಪುಸ್ತಕಗಳ ರಾಶಿಯಲ್ಲಿ ಯಾವತ್ತೂ ಕಂಡು ಕೇಳರಿಯದ ಪುಸ್ತಕವನ್ನ ತೆಗೆದುಕೊಂಡು ಓದೋದು ಹವ್ಯಾಸ. ಯಾವ ಬಿಲ್ಡಪ್, ಪೂರ್ವಾಗ್ರಹಗಳಿಲ್ಲದೇ ಒಂದು ಪುಸ್ತಕ ಓದಿದಾಗಲೇ ಅದು ನಮಗೆ ದಕ್ಕೋದು. ಇಲ್ಲದ್ದಿದ್ದರೆ ಅರ್ಥವಾಗದಿದ್ದರೂ ಚೆನ್ನಾಗಿದೆ ಅಥವಾ ನಮಗಿಷ್ಟವಲ್ಲದವರು ಬರೆದ ಕಾರಣಕ್ಕೆ ಇಷ್ಟವಿಲ್ಲವೆನ್ನುವುದು ನಮಗೆ ಅನ್ನಿಸೋಕೆ ಶುರುವಾಗುತ್ತದೆ.

Must read book - Sapiens: A Brief History of Humankind

ಪುಸ್ತಕ ಕೊಂಡುಕೊಂಡದ್ದು, ಕಾಯ್ಕಿಣಿಯವರ ಬಗ್ಗೆ ಉತ್ಸಾಹದಿಂದ ಸೈಕಾಲಜಿಯನ್ನ ಓದುವ ಗೆಳತಿಗೆ ಹೇಳಿದಾಗ "ಎಲ್ಲಾ ಮನುಷ್ಯರೂ ಒಂದೇ ಕಣೆ. ನಾವೆಲ್ಲಾ ಒಂದೇ ಜಾತಿ ಕಣೆ. ಒಂದೇ ಥರಾನೆ ಇದ್ದಿದ್ದು. ನಾವು ಹಂತ ಹಂತವಾಗಿ ಈ ಥರಹ ಹುಚ್ಚಾಟಗಳನ್ನ ಕಂಡಿಕೊಂಡಿದ್ದು. ಅದಕ್ಕೆ ಸರಿಯಾಗಿ ನಾರ್ಮಲ್ ಆಗಿ ಆಡೋರೆಲ್ಲ ನಿನಗೆ ವಿಚಿತ್ರವಾಗಿ ಕಾಣಿಸ್ತಾರೆ. ಪುಸ್ತಕ ಓದು ಗೊತ್ತಾಗತ್ತೆ" ಅಂದಾಗ ಯಾವುದೋ ಭಯಂಕರ ಪುಸ್ತಕ ಕೈಗೆತ್ತುಕೊಂಡೆ ಎಂದು ಅನ್ನಿಸಿತು.

ಅಷ್ಟೊಂದು ದೊಡ್ಡವರು ಇಷ್ಟೆಲ್ಲ ಸಿಂಪಲ್ ಆಗಿರೋಕೆ ಹೇಗೆ ಸಾಧ್ಯ?ಅಷ್ಟೊಂದು ದೊಡ್ಡವರು ಇಷ್ಟೆಲ್ಲ ಸಿಂಪಲ್ ಆಗಿರೋಕೆ ಹೇಗೆ ಸಾಧ್ಯ?

ಈ ಪುಸ್ತಕ ಚರಿತ್ರೆಗೂ ಜೀವಶಾಸ್ತ್ರಕ್ಕೂ ಇರುವ ಅಗಾಧ ಸಂಬಂಧವನ್ನ ತಿಳಿಸುತ್ತದೆ. ಡಾ ಯುವಲ್ ನೊವಾಹ್ ಹರಾರಿ ಎಂಬ ಪ್ರೊಫೆಸರ್ ಬರೆದ್ದದ್ದು. ಮೊದಲ ಬಾರಿಗೆ ಎದೆ ಧಡಕ್ಕೆನಿಸುವ ವಿಷಯವೇನೆಂದರೆ, ಹೋಮೋ ಸೇಪಿಯನ್ಸ್ ಎಂದು ಕರೆಯಲ್ಪಡುವ ಮನುಷ್ಯನ ಜೊತೆಗೆ ಇನ್ನೂ 2 ಥರಹದ ಮನುಷ್ಯರಿದ್ದರಂತೆ. ಒಂದು ನಿಯಾಂಡ್ರೆಥಲ್ಸ್ ಮತ್ತು ಇಂಗ್ಲೀಷಿನ ಹಾಬಿಟ್ ಸಿನೆಮಾ ನೋಡಿದ್ರೆ ಸಿಗುವ ಪಾತ್ರಗಳ ಹಾಗೆ ಇದ್ದವಂತೆ. ಇದ್ರೆ ಏನು ಎಂದು ಕೇಳುವ ಪ್ರಶ್ನೆಗೆ ಉತ್ತರ, ಅತ್ಯಂತ ಬಲಿಶಾಲಿ ಮಾತ್ರ ಇರೋದಕ್ಕೆ ಸಾಧ್ಯ ಎನ್ನುವ ತರ್ಕ.

ನೀವು ಒಂದು ಕಾಡಿನಲ್ಲಿದ್ದೀರಿ ಅಂದುಕೊಳ್ಳಿ. ಅಲ್ಲಿ ಚಿರತೆಯೂ ಇರುತ್ತದೆ, ಹುಲಿಯೂ ಇರುತ್ತದೆ. ಎರಡೂ ಬೆಕ್ಕಿನ ಜಾತಿಯವೇ. ಆದರೆ ಹುಲಿ ಚಿರತೆಯನ್ನ ಬೇಟೆಯಾಡಿ ಕೊಲ್ಲುತ್ತದೆ, ಕಾಡನ್ನ ತನ್ನ ವಶ ಮಾಡಿಕೊಳ್ಳಲು. ಒಂದೇ ಜಾತಿಯ ಬೇರೆ ಬೇರೆ ವಿಧದ ಪ್ರಾಣಿಗಳಲ್ಲಿಯೇ ವೈರತ್ವ ಜಾಸ್ತಿ. ಇನ್ನು ಬುದ್ಧಿ ಬೆಳೆದ ಮನುಷ್ಯ ಕಡಿಮೆಯೇ?
ಇದೇ ವಾದವನ್ನ ಮಂಡಿಸಿ ಹೋಮೋ ಸೇಪಿಯನ್ಸ್ ಮಾತ್ರ ಉಳಿದಿರೋದು ಎಂಬ ಸತ್ಯ ಗೊತ್ತಾದಾಗ ಮೈ ರೋಮಾಂಚನವಾಗುತ್ತದೆ.

Must read book - Sapiens: A Brief History of Humankind

ಇನ್ನು ನಮ್ಮ ಜಾತಿ ಹುಟ್ಟಿದ ಸಮಯದಿಂದ ಬರೀ ಪ್ರಾಣಿಯನ್ನ ಹೊಡೆದು ತಿಂದು ಹೊಟ್ಟೆ ತುಂಬಿಸಿಕೊಂಡು ಇರುವವನಾಗಿದ್ದವನು 11,000 ವರ್ಷಗಳ ಹಿಂದೆ ಬೆಳೆ ಬೆಳೆಯೋದಕ್ಕೆ ಶುರು ಮಾಡಿದ್ದ, ತೀರ 500 ವರ್ಷಗಳ ಹಿಂದೆ ವಿಜ್ಞಾನ, 250 ವರ್ಷಗಳ ಹಿಂದೆ ಆದ ಇಂಡಸ್ಟ್ರಿಯಲ್ ಕ್ರಾಂತಿ, 50 ವರ್ಷಗಳ ಕೆಲಗ ಆದ ಐಟಿ ಕ್ರಾಂತಿ, ತದ ನಂತರದ ಬಿಟಿ ಕ್ರಾಂತಿಯಿಂದ ಚಿರಂಜೀವಿ ಸೈಬಾರ್ಗ್ಸ್ ಗಳು ಇರುವ ಸಮಯ ಹತ್ತಿರ ಬರುತ್ತದೆ ಎಂದು ಹೇಳಲು ಮರೆಯೋದಿಲ್ಲ.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಷ್ಟೇದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಷ್ಟೇ

ಇನ್ನು ಒಂದು ಬಹು ಮುಖ್ಯವಾದ ಅಂಶ ಇಲ್ಲಿ ಬರೋದು, ಮನುಷ್ಯ ಇಷ್ಟು ವರ್ಷ ಬಾಳಲು ಸಾಧ್ಯವಾದದ್ದು ಅವನ ಸಾಮರ್ಥ್ಯದಿಂದಲೇ ಹೊರತು ಅವನಿಗೆ ಈ ಭೂಮಿ ಹಕ್ಕಿನಿಂದ ಬಂದಿದ್ದಲ್ಲ. ಅದಕ್ಕೆ ಅವರು ಕೊಡುವ ಉದಾಹರಣೆಗಳು ಅನೇಕ. ಒಂದು ಪಕ್ಷಿ ಆಕಾಶದಲ್ಲಿ ಹಾರೋದು ತನ್ನ ಸಾಮರ್ಥ್ಯದಿಂದಲೇ ಹೊರತು ಹಾರುವ ಹಕ್ಕಿದೆ ಎಂದಲ್ಲ. ಇಲ್ಲಿ ತನ್ನ ಸಾಮರ್ಥ್ಯದಿಂದಲೇ ಮನುಷ್ಯನ ಅಳತೆಗೋಲು ಹೊರತು ಇನ್ಯಾವುದಲ್ಲ.

ಮತ್ತೆ ಉದ್ಭವವಾದ ಭಾಷೆ, ಅದಕ್ಕೆ ತಕ್ಕ ಹಾಗೆ ಧರ್ಮ, ಅದಕ್ಕೆ ತಕ್ಕ ಹಾಗೆ ಮತ ಪಂಗಡ ಇವೆಲ್ಲವೂ ಮನುಷ್ಯ ನಿರ್ಮಿತವಾದ್ದದ್ದು ಎಂದು ಸಾರಾಸಗಟಾಗಿ ಬರೀತಾರೆ. ನಮ್ಮ ಸಮಾನ ಮಿಥ್ಯೆಗಳು ನಮ್ಮನ್ನು ಒಗ್ಗೂಡಿಸುತ್ತದೆ, ಅದಕ್ಕೆ ನಮಗಿಷ್ಟೊಂದು ಜಾತಿ, ಮತ ಪಂಥಗಳಿರೋದು. ನಮ್ಮ ಕುಲದ ನೆಲೆಯೇನಾದರೂ ಹುಡುಕಿ ಹೊರಟರೆ ಎಲ್ಲರೂ ಒಂದು ಕಾಲದಲ್ಲಿ ಕಾಡಲ್ಲಿ ಆಹಾರಕ್ಕೆ ಹುಡುಕಾಡುತ್ತಿದ್ದರು ಎಂಬ ಸತ್ಯ ಅರಿವಾಗುತ್ತದೆ.

ಇನ್ನು ಇಲ್ಲಿ ನನಗೆ ಅತ್ಯಂತ ಶಾಕ್ ಕೊಟ್ಟ ವಿಷ್ಯ, ಲೇಖಕ ಬರೆಯುವ "ವ್ಯವಸಾಯ ಮನುಷ್ಯ ಜಾತಿಯ ಅತಿ ದೊಡ್ಡ ಆರ್ಗನೈಸ್ಡ್ ಕ್ರೈಮ್" ಎಂದು ಘಂಟಾಘೋಷವಾಗಿ ಬರೆಯುತ್ತಾರೆ. ಅಲ್ಲಿಂದಲೇ ಸಮಾಜ ಎಂಬ ಪರಿಕಲ್ಪನೆ ಬಂದ್ದದ್ದು, ಅಲ್ಲಿ ನಮ್ಮ ಲಿಮಿಟ್ ಶುರುವಾಯ್ತು ಎಂದು. ನಾವು ತಿನ್ನುವ ರೀತಿ, ನಮ್ಮ ಮನಸಿನಲ್ಲಿನ ಹೊಡೆದಾಟಗಳು, ಲೈಂಗಿಕತೆ ಎಲ್ಲವೂ ಆದಿಮಾನವನ ಬೇಟೆಗಾರ ಸ್ವಭಾವದಿಂದ ಬಂದ್ದದ್ದು ಎಂದು ಹೇಳುತ್ತಾರೆ. ಈಗಲೂ ಮನುಷ್ಯನ ಸುಖ ನಿಂತಿರೋದು ಒಳ್ಳೆ ಊಟ, ಅವನ ಮನಸ್ಸಿನ ಆನಂದ ಮತ್ತು ಅವನ ಲೈಂಗಿಕ ಸುಖದಲ್ಲಿಯೇ ಎಂದು ಬಲವಾಗಿ ನಂಬಿದ್ದಾರೆ. ಈಗಲೂ ಸಕ್ಕರೆಯಂಶ ಅಥವಾ ಕೊಬ್ಬಿನ ಅಂಶ ಅತಿಯಾಗಿರುವ ಆಹಾರಗಳೆ ಮನುಷ್ಯನ ಕಂಫರ್ಟ್ ಫುಡ್ ಎಂದರೆ ತಪ್ಪಾಗೋಲ್ಲ ಎಂದು ಜೀವನದ ಸತ್ಯಗಳನ್ನ ತಿಳಿಸುತ್ತಾರೆ.

ಇಷ್ಟೊಂದು ತಿಳಿದು ತಿಳಿದು ಮುಂದುವರೆದು ಮನುಷ್ಯ ಅಮರತ್ವಕ್ಕೆ ಎಡೆ ಮಾಡುತ್ತಾನೆ, ಆಸೆ ಪಡುತ್ತಾನೆ. ಇನ್ನು ದೇವರು, ದೆವ್ವ ಎಲ್ಲವೂ ಬಂದು ಹೋಗುತ್ತದೆ. ಕಡೆಗೆ ನಾವು ಬೆಳೆದು ಬಂದ ರೋಚಕ ಕಥೆಯನ್ನ ಓದಿ ನನಗನ್ನಿಸಿದ್ದು ಇಷ್ಟೆ, ಆಗಾಗ ಅವರ ಮೇಲೆ ಇವರ ಮೇಲೆ ಹಗೆ ಸಾಧಿಸೋದು, ಕೆಟ್ಟ ಕೆಟ್ಟದಾಗಿ ಬರೆಯೋದು, ಸಿದ್ಧಾಂತಗಳಿಗೆ ಹೊಡೆದಾಡೋದು, ಕೊಲೆ ಮಾಡೋದು, ನಮ್ಮ ಅಭಿಪ್ರಾಯವನ್ನ ಮತ್ತೊಬ್ಬರ ಮೇಲೆ ಹೇರೋದು ಇವೆಲ್ಲದರ ಮಧ್ಯ ಪಂಪ ಹೇಳಿದ್ದ "ಮನುಷ್ಯ ಜಾತಿ ತಾನೊಡೆ ವಲಂ" ಎಂದು ಅಂದುಕೊಂಡು ನೆಟ್ಟಗಿದ್ರೆ ಉದ್ಧಾರ ಆಗೋದು ಗ್ಯಾರಂಟಿ ಇಲ್ಲದಿದ್ದರೆ ಅಮರತ್ವ ಪಡೆಯೋಕೆ ಕಚ್ಚಾಡಿ ಪ್ರಾಣಿಗಳ ಹಾಗೆ ನಾಶವಾಗ್ತೀವಿ.

English summary
Must read book - Sapiens: A Brief History of Humankind by Yuval Noah Harari. Introduction by Meghana Sudhindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X