• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಣ್ಣುತನದ ಸಂಭ್ರಮವನ್ನು ಇಮ್ಮಡಿಗೊಳಿಸುವ ಮದರಂಗಿ!

By ಜಯನಗರದ ಹುಡುಗಿ
|

ಒಂದು ತಿಂಗಳ ಹಿಂದೆ ಅತ್ತಿಗೆಯ ಕರೆ. ಅವರ ಮಗನ ಉಪನಯನ ಕಾರ್ಯಕ್ರಮದ ಶೆಡ್ಯೂಲ್ ತಿಳಿಸುತ್ತಿದ್ದರು. ಹೆಣ್ಣು ಮಕ್ಕಳಿಗೆ ಹೂವಿಳ್ಯ, ಎಲ್ಲರಿಗೂ ದೇವರ ಸಮಾರಾಧನೆ ಇವೆಲ್ಲದರ ಜೊತೆ "ಅವತ್ತೇ ಮೆಹೆಂದಿ ಇದೆ ಕಣೆ" ಅಂದಾಗ ನಾನು ಒಮ್ಮೆ ಹಾ ಏನು ಎಂದು ಒಂದು ಕ್ಷಣ ಅವಕ್ಕಾದೆ.

ಮದುವೆ ನಡೆಯುತ್ತಿದೆಯೋ ಅಥವಾ ಮುಂಜಿಯೋ ಎಂದು ಅಂದುಕೊಳ್ಳುತ್ತಿದ್ದಾಗಲೇ, ಅಮ್ಮ ತನ್ನ ಸೋದರತ್ತೆಯ ಮೊಮ್ಮಗನ ಮುಂಜಿಗೂ ಮೆಹೆಂದಿ ಮಾಡಿದ್ದರು ಎಂದು ನೆನಪಿಸಿದ್ದಳು. ನಮ್ಮ ಶಿಸ್ತಿನ ಸಂಪ್ರದಾಯದ ಮನೆತನಗಳು ಸ್ವಲ್ಪ ಹೊಸತನಕ್ಕೆ ತೆರೆದುಕೊಳ್ಳುತ್ತಿರುವ, ಖುಷಿಯಾಗಿ ಸಂಭ್ರಮ ಪಡುವ ಶಾಸ್ತ್ರಗಳು ಸೇರ್ಪಡೆಗೊಳ್ಳುತ್ತಿರುವುದು ಒಂದು ಕಡೆ ಸಂತೋಷ ಪಡುವಂಥದ್ದು.

ಚೆನ್ನಾಗಿರೋದೆಲ್ಲಾ ಆಚೆ ಕಡೆಯಿಂದಾನೆ ಬಂದಿರೋದು!

ಈ ಮೆಹೆಂದಿ ಒಂದು ಥರಹ ಜನರೆಲ್ಲಾ ಸೇರಿ ಸಂಭ್ರಮಿಸುವ ಹಾಡಿ ಕುಣಿಯುವ ಒಂದು ಕಾರ್ಯಕ್ರಮ. ಯಾವುದೇ ಭೇದಭಾವವಿಲ್ಲದೇ ರೀತಿ ರಿವಾಜಿನ ಗೊಡವೆಯಿಲ್ಲದೇ ಹೆಣ್ಣುಮಕ್ಕಳೆಲ್ಲ ಒಟ್ಟಾಗಿ ಸೇರಿ ನಲಿಯುವ ಪರಿ ಅನನ್ಯವಾದುದು.

ಬಾರ್ಸಿಲೋನಾದಲ್ಲಿದ್ದಾಗ ನನ್ನ ಪಕ್ಕದ ರೂಮಿನ ಮೊರಕ್ಕೋ ಮತ್ತು ಕಝಕ್ ಹುಡುಗಿಯನ್ನ ಬೆಸೆದಿದ್ದು ಇದೇ ಮದರಂಗಿ. ಅವರ ಈದ್ ಹಬ್ಬಕ್ಕೆ, ನನ್ನ ಗೌರಿ ಹಬ್ಬಕ್ಕೆ ಚೆಂದವಾದ ಮೆಹೆಂದಿ ಕಲೆಸಿ ಕೈ ಮೇಲೆ ಥರಥರದ ಚಿತ್ತಾರ ಬಿಡಿಸುತ್ತಿದ್ದರು. ನಮ್ಮ ದೇಶದಿಂದಲೇ ಬಂದ ನಮ್ಮ ಕಲೆ ನನಗೆ ಒಂದು ಚೂರು ಬರದೇ ಇದ್ದದ್ದು ಬೇಜಾರೂ ಆಯಿತು. ಒಂದು ಸಣ್ಣ ಎಳೆಯನ್ನೂ ಹಾಕಕ್ಕೆ ಬರದೆ ತೊಪ್ಪೆ ತೊಪ್ಪೆಯಾಗಿ ಎರಡು ಚುಕ್ಕೆಯಿಟ್ಟು ಗೌಹಾರಳ ಈದಿಗೆ ನಾಂದಿ ಹಾಡಿದ್ದೆ.

ಬೆಂಕಿಯಿಂದ ಜನಿಸಿದವಳು, ಬೆಂಕಿಯಲ್ಲಿಯೇ ಬೆಂದವಳು ನಾನು!

ಮದರಂಗಿ ಹೆಣ್ಣುತನದ ಸಂಭ್ರಮಗಳನ್ನ ಇಮ್ಮಡಿಗೊಳಿಸಿದರೆ ಈ ಮೆಹೆಂದಿ ಹಾಕುವ ಜನರು ಇನ್ನೂ ಕುತೂಹಲ ಮೂಡಿಸುವವರು. ನಮ್ಮ ಜಯನಗರದ ಮಾರುಕಟ್ಟೆಯಲ್ಲಿ ಸುಮಾರು 2000 ಅಥವಾ 2005ನೇ ಇಸವಿಯಲ್ಲಿ ಫುಟ್ ಪಾತಿನ ಮೇಲೆ ಎಲ್ಲೆಂದರಲ್ಲಿ ಮೆಹೆಂದಿ ಅಥವಾ ಮದರಂಗಿ ಹಾಕುವ ಹೊಸ ವ್ಯಾಪಾರವನ್ನ ನಾನು ಕಂಡೆ. ಕನ್ನಡ ಬರದಿದ್ದ ಒಂದು ನಾಲ್ಕೈದು ಜನ ಹುಡುಗರು ಸಣ್ಣ ಕೋನುಗಳಲ್ಲಿ ಮೆಹೆಂದಿ ತುಂಬಿಕೊಂಡು "ಏಕ್ ಹಾಥ್ ಡಾಲೋ, ದೂಸ್ರಾ ಹಾಥ್ ಮುಫ್ತ್" ಎಂದು ಕೂಗುತ್ತಲೇ ಇರುತ್ತಿದ್ದರು. ಹಿಂದಿ ಅಷ್ಟೇನೂ ಬರದ ನಮ್ಮಂತವರ್ರಿಗೆ ದೂಸ್ರ ಬರೀ ಕ್ರಿಕೆಟಿನಲ್ಲಿ ಮಾತ್ರ ಗೊತ್ತಿತ್ತು.

ಆಗ 50 ರುಪಾಯಿಗೆ ಎರಡೂ ಕೈಗೆ ಮದರಂಗಿ ತುಂಬಿಸಿಕೊಂಡು ಬಂದು, ಅಪ್ಪನ ಹತ್ತಿರವೋ, ಅಮ್ಮನ ಹತ್ತಿರವೋ ಊಟ ತಿನ್ನಿಸಿಕೊಂಡು, ದಿಂಬಿನ ಮೇಲೆ ಒಂದು ಟವೆಲ್ ಹಾಸಿಕೊಂಡು ಮಲಗಿ ಬೆಳಗ್ಗೆ ಎದ್ದಾಗ ಬಣ್ಣ ಬಂದಿದೆಯೋ ಬಂದಿಲ್ಲವೋ ಎಂದು ನೋಡಿ ಬಂದಿಲ್ಲದಿದ್ದರೆ ಬೇಜಾರು ಮಾಡಿಕೊಂಡು ಮರುದಿವಸ ಶಾಲೆಗೆ ಹೋಗಬೇಕಾಗುತ್ತಿತ್ತು. ನಮ್ಮ ಹೆಣ್ಣು ತನದ ಈ ಹುಚ್ಚಾಟಗಳನ್ನ ಗಮನಿಸಿದ ಶಾಲೆಯ ಹೆಡ್ ಮಿಸ್ ಇಂದಿರಾ ನಾಯರ್ ಇನ್ನು ಮುಂದೆ ಮೆಹೆಂದಿಯನ್ನ ಹೆಣ್ಣುಮಕ್ಕಳು ಶಾಲೆಗೆ ಹಾಕಿಕೊಂಡು ಬರುವಂತಿಲ್ಲ ಎಂದು ಡೈರಿಯಲ್ಲಿ ಬರೆದು ಕಳಿಸಿಬಿಟ್ಟರು. ಅಲ್ಲಿಗೆ ಮನೆಯ ಹತ್ತಿರ ಮದುವೆಯಾಗುವವರ ಮನೆಯಲ್ಲಿ ಸಂಗೀತ ನೃತ್ಯ ಮೆಹೆಂದಿ ಇದ್ದರೂ ಮುಖ ಸಿಂಡರಿಸಿಕೊಂಡು ಕೂತಿರಬೇಕಾಗುತ್ತಿತ್ತು.

ನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕು

ನನಗೆ ಈ ಮೆಹೆಂದಿ ಭಯ್ಯಾಗಳು ಯಾಕೆ ಕನ್ನಡ ಮಾತಾಡುವ ಪ್ರಯತ್ನವೇ ಮಾಡುವುದಿಲ್ಲವೆಂದು ನೋಡುತ್ತಾ ಕೂತಿರುತ್ತಿದ್ದೆ. "ಹಮೆ ಕನ್ನಡ್ ನಹೀ ಆತಾ, ಸ್ವಲ್ಪ ಸ್ವಲ್ಪ ಬರ್ತಾ" ಎಂದು ಏನೇನೋ ಮಾತಾಡುತ್ತಿದ್ದರು. ಆಗ ಶಾರುಖ್ ಖಾನ್ ಸಿನೆಮಾ ನೊಡಿ ಅವನ ಹುಚ್ಚರಾಗಿದವಲ್ಲವಾ ಅದಕ್ಕೆ ಹಿಂದಿ ಮಾತಾಡುವವರೆಲ್ಲ ಶಾರುಖ್ ಹಾಗೆ ಕಾಣಿಸುತ್ತಿದ್ದರು. ನಾವೂ ಥೋಡಾ ಥೋಡ ಹಿಂದಿ ಮೇನ್ ಬಾತ್ ಕಾರ್ತಾ ಆಗಿದ್ದೆವು.

ಆನಂದ್ ಲಾಲ್ ಕಾಶಿಯಿಂದ ಬೆಂಗಳೂರಿಗೆ 10 ವರ್ಷದ ಹಿಂದೆ ಬಂದಿದ್ದಂತೆ, 12ನೇ ತರಗತಿಯವರೆಗೆ ಓದಿ, ಹಿಂದಿ ಮೀಡಿಯಮ್ ಓದುವ ಮಾಣಿಗಳಿಗೆ ಅಲ್ಲಿ ಕೆಲಸ ಸಿಕ್ಕರೂ ಕಡಿಮೆ ಸಂಬಳವಾದ್ದರಿಂದ ಇಲ್ಲಿ ಬೆಂಗಳೂರಿಗೆ ಮೆಹೆಂದಿ ಕಲೆಯನ್ನ ತೆಗೆದುಕೊಂಡು ಬಂದರಂತೆ. ಫುಟ್ ಪಾತಿನ ಮೇಲೆ 4 ಕೋನು ಇಟ್ಟು ಶುರು ಮಾಡಿದ್ದ ಕೆಲಸ ಈಗ ಗಾಂಧಿ ಬಜಾರಿನ ಡಿವಿಜಿ ರಸ್ತೆಯಲ್ಲಿ ಒಂದು ಶೋ ರೂಮ್ ತೆರೆಯುವಷ್ಟು ದೊಡ್ಡದಾಗಿದೆ. ಥೋಡಾ ಥೋಡಾ ಹಿಂದಿಯಿಂದ ಈಗ ಕನ್ನಡ ಚೆನ್ನಾಗಿ ಬರತ್ತೆ ಅನ್ನುವವರೆಗೆ ಅವರ ವ್ಯಾಪಾರ ವೃದ್ಧಿಸಿದೆ. ಅವರಿವರ ಜೀವನದಲ್ಲಿ ಮದರಂಗಿ ಬಣ್ಣ ತುಂಬಿಸುವವರಿಗೆ ಬೆಂಗಳೂರಿಗೆ ಮಕ್ಕಳನ್ನ ಕರೆದುಕೊಂಡು ಬರುವಷ್ಟು ಸೌಕರ್ಯ ಇಲ್ಲ. ಹಂಗಾಗಿಯೂ 40 ಸಾವಿರ ತಿಂಗಳಿಗೆ ದುಡಿಯುವ ಶಕ್ತಿ ಇದೆ, ಇನ್ನೂ ದೊಡ್ಡ ಅಂಗಡಿ ಮಾಡುವ ಮನಸ್ಸಾಗಿದೆ ಎಂದು ಲಾಲ್ ಹೇಳುತ್ತಾರೆ. ಅವರೊಬ್ಬರೇ ಅಲ್ಲದೆ ಅವರ ಊರಿನ ಹುಡುಗರನ್ನೂ ಇಲ್ಲಿಗೆ ಕರೆತಂದು ಕಲೆ ಕಲಿಸಿ ಕನ್ನಡವನ್ನೂ ಕಲಿಸಿ ದಿನಕ್ಕೆ ಎಷ್ಟೆಷ್ಟೋ ಕೈಗಳಿಗೆ ಮದರಂಗಿಯ ಬಣ್ಣ ತುಂಬುವ ಕೆಲಸ ಮಾಡುತ್ತಿದ್ದಾರೆ.

ಕನಸುಗಳು ನನಸಾಗುತ್ತವೆ, ಕಾಣುವ ಧೈರ್ಯವಿದ್ದರೆ ಮಾತ್ರ!

ಮದರಂಗಿ ಹಾಕಿಸಿಕೊಂಡು ಬಂದ ಕೂಡಲೆ ಕೀ ಬೋರ್ಡ್ ಕುಟ್ಟಬೇಡ, ಬಣ್ಣಕ್ಕೆ ಅಮೃತಾಂಜನ ಹಚ್ಚಿಕೋ ಎಂದು ಅರ್ಧ ಘಂಟೆ ಕೂತು ನೋಡುವ ಅತ್ತೆಗೂ, ಇದು ಏನು ಡಿಸೈನ್ ಎಂದು ಕೈ ಹಿಡಿದು ನೋಡುವ ಗಂಡನಿಗೂ, ನಮ್ಮೆಲ್ಲರ ಡಿಸೈನ್ ಇದು ನೋಡುವ ಅಮ್ಮ - ತಂಗಿಗೂ, ಚೆನ್ನಾಗಿದೆ ಪುಟ್ಟ ಎಂದು ಹೇಳುವ ಅಪ್ಪನನ್ನ ಮಾತಿನಲ್ಲಿ ಬರೀ ಮದರಂಗಿಯ ರಂಗುಗಳೇ ತುಂಬಿವೆ. ಮನೆಯ ಒಂದು ಖುಷಿ ಸಮಾರಂಭ ಎಲ್ಲರನ್ನೂ ಹೇಗೆ ಬೆಸೆಯುತ್ತೇ ಅಲ್ಲವೇ?

English summary
Mehandi or madarangi is not just an art, which can enhance the beauty of woman, but it has become a culture, a celebration of womanhood, reason for bonding in Hindus. Not just in marriages, mehandi program is observed in other programs also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more