• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ರೂ ಕಳ್ರೆ ಅಂತ ಕೂತರೆ ನಮಗಿಂತ ಮೈಗಳ್ಳರಿಲ್ಲ, ವೋಟ್ ಹಾಕಿ!

By ಜಯನಗರದ ಹುಡುಗಿ
|

ಐದು ವರ್ಷಗಳ ಹಿಂದೆ ಲೋಕಸಭೆಯ ಚುನಾವಣೆಗೆ ಮತದಾನ ಮಾಡುವ ಮೊದಲ ಅವಕಾಶ ನನಗೆ ಸಿಕ್ಕಿತ್ತು. ಆಗಷ್ಟೆ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ್ದೆ. ಮೊದಲ ಬಾರಿ ಓಟು ಹಾಕುವ ಹುಮ್ಮಸ್ಸು. ಚಿಕ್ಕವಳಿದ್ದಾಗ ಅಜ್ಜನ ಜೊತೆ ಹೋಗಿ ಬೆರಳಿಗೆ ಇಂಕ್ ಹಾಕಿಸಿಕೊಂಡು ಬರುತ್ತಿದ್ದೆ.

ನನಗೆ ತಾತನೇ ಆದರ್ಶವಾದ ಕಾರಣ, ಅವರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು, "ಗುಡ್ಡಿ ನಮ್ಮ ನಾಯಕನನ್ನ ಆರಿಸುವ ಜವಾಬ್ದಾರಿಯನ್ನ ಚೆನ್ನಾಗಿ ನಿಭಾಯಿಸಬೇಕು, ನಮ್ಮಂತೆಯೇ ನಾಯಕರೂ ಇರುತ್ತಾರೆ, ಯಾವುದೇ ಕಾರಣಕ್ಕೂ ನಮ್ಮ ವೋಟನ್ನ ಮಾತ್ರ ಮಿಸ್ ಮಾಡಬಾರರು ನೋಡು" ಎಂದು ಹೇಳುತ್ತಿದ್ದರು.

ಕರ್ನಾಟಕದ ಮತದಾರರೆಷ್ಟು?, ಅಂಕಿ-ಸಂಖ್ಯೆಗಳ ವಿವರ

ಮನೆಯಲ್ಲಿ ರಾಜಕೀಯ ಚರ್ಚೆಗಳಾಗುತ್ತಿದ್ದ ಕಾರಣ, ಯಾರು, ಯಾವ ಪಾರ್ಟಿ ಏನು ಎತ್ತ ಎಲ್ಲವೂ ಗೊತ್ತಿರುತ್ತಿತ್ತು. ಜನತಾದಳ ಒಡೆದಾಗ ಚಕ್ರ ದಳವೋ ಇಲ್ಲ ಬಾಣ ದಳವೋ ಎಂದು ಕೇಳುವಷ್ಟು ನಮಗೆ ವಿಚಾರಗಳನ್ನ ಕಲಿಸಿಕೊಟ್ಟಿದ್ದರು ತಾತ. ಇದನ್ನೇ ಮನಸಲ್ಲಿಟ್ಟುಕೊಂಡು ಹೋದ ಚುನಾವಣೆಯಲ್ಲಿ ಟೀವಿಯಲ್ಲಿ ಬರುವ ಇರೋ ಬರೋ ಡಿಬೇಟುಗಳು, ಪತ್ರಿಕೆಯ ಲೇಖನಗಳು, ನಮ್ಮ ಕ್ಯಾಂಡಿಡೇಟಿನ ವಿವರಗಳು, ಅವರ ಕಥೆಗಳೆಲ್ಲವನ್ನ ತಿಳಿದುಕೊಳ್ಳುತ್ತಾ ಹೋದೆ.

ನಾನು ಓಟು ಹಾಕೋದು ನನ್ನ ದೊಡ್ಡ ಸಾಧನೆಯೆಂದು ಹಿರಿ ಹಿರಿ ಹಿಗ್ಗುತ್ತಿದ್ದೆ. ನಮ್ಮ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಂತೂ ಅಭ್ಯರ್ಥಿಗಳು ಒಬ್ಬರಿಗಿಂತ ಒಬ್ಬರು ದೊಡ್ಡವರೇ, ಅವರ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ ಇರುತ್ತಿದ್ದ ಕಾರಣ, ನಮ್ಮ ಚುನಾವಣೆಯನ್ನ ಎಲ್ಲರೂ ಒಂದು ಒಳ್ಳೆಯ ಅಭ್ಯರ್ಥಿಯ ಗೆಲುವುಗಿಂತ 3 - 4 ಒಳ್ಳೆ ಅಭ್ಯರ್ಥಿಯ ಸೋಲು ಎಂದು ಕರೆಯುತ್ತಿದ್ದರು. ಇಂಡಿಪೆಂಡೆಂಟ್ ಅಭ್ಯರ್ಥಿಗಳಲ್ಲಿಯೂ ವೈವಿಧ್ಯತೆ ಇರುತ್ತಿತ್ತು. ಹಾಗಿದ್ದೂ ಸಹ ಯಕಶ್ಚಿತ್ ಶೇ. 30ರಿಂದ 40 ಮಾತ್ರ ಮತದಾನವಾಗುತ್ತಿತ್ತು. ಅಷ್ಟೊಂದು ವಿದ್ಯಾವಂತರಿರುವ ಜಾಗದಲ್ಲಿ ಈ ಆಲಸ್ಯ ಏಕೋ ಎಂದು ಯಾವಾಗಲೂ ಪ್ರಶ್ನಿಸಿಕೊಳ್ಳುತ್ತೇನೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೋದ ಸಲದ ಚುನಾವಣೆಯಲ್ಲಿ ನನ್ನ 90 ವರ್ಷದ ಮುತ್ತಜ್ಜಿ ಎಂದಿನಂತೆ ಎದ್ದು ಸ್ನಾನ ಮಾಡಿ, ದೇವರಿಗೆ ನಮಸ್ಕಾರ ಮಾಡಿ ಕೈ ಹಿಡಿದುಕೊಂಡೇ ಹೋಗಿ ಮತ ಚಲಾಯಿಸಿ ಬಂದಿದ್ದರು. ಬೆಳಗ್ಗೆ ಏಳು ಘಂಟೆಗೆ ವಯಸ್ಸಾದವರು ಪಟ್ಟಾಗಿ ರೆಡಿಯಾಗಿ ಬಂದಿದ್ದರು. ನಮ್ಮಂತ ಚಿಕ್ಕವರು ಅರ್ಧ ನಿದ್ದೆಯಲ್ಲಿ ಎದ್ದು ಬಂದ ಕಣ್ಣುಗಳನ್ನಿಟ್ಟುಕೊಂಡು ನಿಂತಿದ್ದೆವು. ಅಜ್ಜಿ ಮನೆ ಬಿಡುವಾಗಲೇ ದೇವಸ್ಥಾನದಲ್ಲಿ ವೋಟಿಂಗ್, ಸ್ನಾನ ಗೀನ ಮಾಡಿಕೊಂಡೇ ಹೋಗಬೇಕು ಎಂದು ಹೇಳುತ್ತಲೇ ಇರುತ್ತಿದ್ದರು. ದೇವಸ್ಥಾನದಲ್ಲಲ್ಲ, ಅದರ ಪಕ್ಕದ ಸ್ಕೂಲಿನಲ್ಲಿ ಎಂದು ಭಂಡತನದಿಂದ ನಾವೂ ಕ್ಯೂನಲ್ಲಿ ನಿಂತಿದ್ದೆವು.

ಮತದಾರರ ಪಟ್ಟಿಯಲ್ಲಿ 5 ಕೋಟಿ ಹೆಸರು: ಚುನಾವಣಾ ಆಯೋಗ

ವೀಲ್ ಚೇರಿನಲ್ಲಿ, ಕ್ರಚಸ್ ಹಿಡಿದುಕೊಂಡು, ಕಣ್ಣು ಆಪರೇಶನ್ ಮಾಡಿಸಿದ್ದ ಎಷ್ಟೋ ಜನ ವಯೋವೃದ್ಧರು ಬಹಳ ಕಟ್ಟುನಿಟ್ಟಾಗಿ ಬಂದು ಮತ ಚಲಾಯಿಸಿ ಹೋದರು. ವಾಪಸ್ಸು ಬಂದು ಇನ್ನೆಲ್ಲೋ ಹೋದಾಗ, ಒಬ್ಬರು ವಯಸ್ಸಾದವರು ಒಂದು ಮಾತನ್ನ ಹೇಳುತ್ತಿದ್ದರು, "ನೋಡಿ ಈಗಿನ ಕಾಲದವರು ಸ್ವಾತಂತ್ರ್ಯ ಹೋರಾಟ ನೋಡಿಲ್ಲ, ಎಮರ್ಜೆನ್ಸಿ ನೋಡಿಲ್ಲ. ಇವರಿಗೆ ದೇಶ ಕೈ ಬಿಟ್ಟು ಹೋಗೋದರ ಬಗ್ಗೆ ಆತಂಕಾನೇ ಇಲ್ಲ. ಎಲ್ಲವೂ ಸರೀಗಿಲ್ಲ ಅಂತ ಅನ್ನಿಸುವ ಕಾಲದಲ್ಲಿ ಬೇರೆ ದೇಶಕ್ಕೆ ಹೋಗಿ ಸೆಟಲ್ ಆಗ್ತಾರೆ. ಹೀಗಿದ್ದಾಗ ಮತದಾನ ಎಲ್ಲಿ ಮಾಡ್ತಾರೆ? ನಮ್ಮ ತರಹ ಸ್ವಾತಂತ್ರ್ಯವನ್ನ ಹೋರಾಡಿ ಪಡೆದವರಾಗಿದ್ದರೆ, ಒಂದಷ್ಟು ಜವಾಬ್ದಾರಿ ಇರುತ್ತಿತ್ತು ಬಿಡಿ" ಎಂದು ನಮ್ಮಂಥವರ ಮುಖಗಳನ್ನೇ ನೋಡುತ್ತಾ ಹೇಳುತ್ತಿದ್ದರು. ಸುಮ್ಮನೆ ಯಾಕೆ ಅಂತ ಇಂಕ್ ಮಾರ್ಕ್ ತೋರಿಸಿದ ಮೇಲೆ ಸುಮ್ಮನಾದರು.

ಇದೇ ಚರ್ಚೆ 5 ವರ್ಷದ ನಂತರ ಬಂದಿದೆ. ಈಗಲೂ ನಾವ್ಯಾಕೆ ಮತ ಹಾಕಬೇಕು ಎಂಬ ಉದ್ಧಟತನದ ಮಾತುಗಳನ್ನ ಸುಮಾರು ಜನ ಆಡುತ್ತಾರೆ. ನಮ್ಮ ಆಯ್ಕೆಯನ್ನ ನಾವು ಮಾಡುವುದಕ್ಕೆ ನಾವ್ಯಾಕೆ ಉದಾಸೀನ ಮಾಡಬೇಕು ಎಂಬುದೂ ನನಗೆ ಅರ್ಥವಾಗುವುದಿಲ್ಲ. ಒಂದು 10 ನಿಮಿಷದ ಕೆಲಸಕ್ಕೂ ನಮಗೆ ಬಿಡುವಿಲ್ಲದಿರುವುದು ನಮ್ಮ ಜೀವನದ ದೊಡ್ಡ ದುರಂತ. ನಮ್ಮ ಒಂದೊಂದು ಮತ ಒಬ್ಬ ಒಳ್ಳೆಯ ಅಭ್ಯರ್ಥಿಯನ್ನ ಆರಿಸುವ ಕೆಲಸಕ್ಕೆ ಸಹಕಾರಿಯಾಗಿರುತ್ತದೆ. ಪ್ರಶ್ನಿಸುವ ಅಧಿಕಾರವೂ ನಮಗೆ ಬರುತ್ತದೆ. ಅದು ಬಿಟ್ಟು ಎಲ್ರೂ ಕಳ್ರೇ ಎಂದು ಮನೆಯಲ್ಲಿ ಕೂತರೇ ನಮಗಿಂತ ಮೈಗಳ್ಳರು ಇನ್ಯಾರಿಲ್ಲ.

ಮುಂದಿನ ವಾರವೇ ನಮ್ಮ ಚುನಾವಣೆ, ನಮ್ಮ ಹಕ್ಕನ್ನ ಮರೆಯದೇ ಚಲಾಯಿಸೋಣ, ನಮ್ಮ ದೇಶದ ಭವಿಷ್ಯ ನಮ್ಮ ಕೈನಲ್ಲಿಯೇ ಇರುವುದು, ಇದು ಪ್ರಜೆಗಳ ಪ್ರಭುತ್ವವಿರುವ ದೇಶ, ಹೋಗಿ ಎಷ್ಟೆ ಕೆಲಸವಿಲ್ಲದಿದ್ದರೂ ಒಂದು 10 ನಿಮಿಷ ಇದಕ್ಕಾಗಿ ಶ್ರಮಿಸಿ...

English summary
Lok Sabha Elections 2019 : Don't you have 10 minutes to vote? Waste your valuable time, but don't waste your vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more