ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದ ಭಾರೀ ದುಬಾರಿ ಲು'ವ್ಯಾಕ್' ಕಾಫಿ!

By ಜಯನಗರದ ಹುಡುಗಿ
|
Google Oneindia Kannada News

ಬಾಲಿಯ ಜ್ವಾಲಾಮುಖಿಯ ಮಧ್ಯೆ ಸಿಕ್ಕಿಹಾಕೊಂಡಿದ್ದಾಗ, ವಿಮಾನಗಳು ಹಾರದೇ ಇದ್ದದ್ದನ್ನು ನೋಡಿ, ಕಾಫಿ ತೋಟವನ್ನ ನೋಡಿ ಬರಲು ನಮ್ಮ ಗೈಡ್ ಹೇಳಿದರು. ಸರಿ ಇಷ್ಟು ದೂರ ಬಂದು ಅದೂ ಮಾಡಿಲ್ಲ ಅಂದ್ರೆ ನಾಚಿಕೆಗೇಡು ಅಂತ ಹೊರಟ್ವಿ. ಮೊದಲೇ ಕಾಫಿ ಪ್ರಿಯೆ ಆದ ನಾನು ಇದಕ್ಕೆ ಮೊದಲು ಅಣಿಯಾಗಿದ್ದೆ.

ಚಪ್ಪರಿಸಿಕೊಂಡು ಓದಿ ನನ್ನ ಮತ್ತು ಚಾಕೋಲೇಟ್ ಕಥೆಯನ್ನು!ಚಪ್ಪರಿಸಿಕೊಂಡು ಓದಿ ನನ್ನ ಮತ್ತು ಚಾಕೋಲೇಟ್ ಕಥೆಯನ್ನು!

ಇಂಡೋನೇಷ್ಯಾದಲ್ಲಿ ಕಾಫಿಯನ್ನ ತೀರ ನಮ್ಮ ದಕ್ಷಿಣ ಭಾರತದವರ ಹಾಗೆಯೇ ಕುಡಿಯುತ್ತಾರೆ. ಕೊಂಚ ಹಾಲು, ಸಕ್ಕರೆಯೊಂದಿಗೆ. ಏನೇ ಆಗಲಿ ಈ ಯುರೋಪಿಯನ್ನರಿಗೆ ಕಾಫಿಯನ್ನ ಕುಡಿಯೋದಕ್ಕೆ ಬರಲ್ಲ. ಒಳ್ಳೆ ಸಣ್ಣ ಕಪ್ಪಿನಲ್ಲಿ ಕಪ್ಪಗಿನ ಕಷಾಯ ಕುಡಿಯೋಹಾಗೆ ಗಬಕ್ ಎಂದು ಒಂದೇ ಗುಟುಕಿನಲ್ಲಿ ಕುಡಿಯುತ್ತಾರೆ. ನಮ್ಮ ಹಾಗೆ ಸ್ಟೀಲ್ ಲೋಟದಲ್ಲಿ ಒಂದೊಂದೆ ಗುಟುಕೇರಿಸುತ್ತಾ ಏನೋ ಒಂದು ಮಹದಾನಂದವನ್ನ ಅನುಭವಿಸುವುದನ್ನು ಅವರು ಮಾಡುವುದಿಲ್ಲ. ಅದ್ಯಾವುದೋ ಪಿಂಗಾಣಿ ಕಪ್ಪಿನಲ್ಲಿ ಒಂದಕ್ಕೆ ಎರಡು ದುಡ್ಡು ಕೊಡುವುದೂ ಸಹ್ಯವಲ್ಲ ನನಗೆ.

ಸ್ವಿಸ್ ! ಮಾಡಬೇಡಿ ಮಿಸ್ !!ಸ್ವಿಸ್ ! ಮಾಡಬೇಡಿ ಮಿಸ್ !!

ಹೀಗಿದ್ದಾಗ ಇವರ ಕಾಫಿಯ ಚರಿತ್ರೆ ಏನು ಎಂದು ತಿಳಿಯಲು ಹೊರಟೆ. ಥೇಟ್ ನಮ್ಮ ತೋಟದ ಹಾಗೆ ಕಾಣುವ ಇವರ ತೋಟಗಳಲ್ಲಿ ಎಲ್ಲಾ ತರಹದ ಮಸಾಲೆ ಪದಾರ್ಥಗಳನ್ನ ಬೆಳೆದಿದ್ದರು. ತೋಟವನ್ನ ಸಂಭಾಳಿಸುವುದಕ್ಕೆ ಪುತ್ರ ಎಂಬ ಹುಡುಗ ಅವರ ದೇಶದ ಕಾಫಿ ಕಥೆಯನ್ನ ಹೇಳೋದಕ್ಕೆ ಶುರು ಮಾಡಿದ. ಹಾಗೆ ಹೋಗುವಾಗ ಅಲ್ಲೊಂದು ಗೂಡಿನಲ್ಲಿ ಮುಂಗುಸಿಯನ್ನ ಸಾಕಿದ್ದರು, ಸುಮಾರು ಮುಂಗುಸಿಗಳಿದ್ದವು.

ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!

ನಾನು ತೋಟದಲ್ಲಿ ಇವುಗಳು ಯಾಕೆ, ಎಂದೋ ಓದಿದ ಕಥೆಯಲ್ಲಿ ಇಲ್ಲಿ ಹಾವುಗಳು ಜಾಸ್ತಿ ಏನೋ ಎಂದೆಲ್ಲಾ ಅಂದುಕೊಳ್ಳುವಾಗ ಪುತ್ರ ಹೇಳಿದ್ದು ಇದು ಲುವಾಕ್ ಎಂಬ ಮುಂಗುಸಿ. ಇದರ ಸಹಾಯದಿಂದ ನಮ್ಮ ಕಾಫಿಗೆ ತುಂಬಾ ಬೆಲೆ ಇದೆ ಎಂದಾಗ ನನಗೆ ತುಂಬಾ ವಿಚಿತ್ರವೆನಿಸಿತು. ಮುಂಗುಸಿ ರೈತರ ಶತ್ರು ಎಂದು ಎಲ್ಲಾ ಕಡೆ ಮಾತಾಡುವಾಗ ಏನಿದು ಕಥೆ ಅಂತ ನೋಡುತ್ತಿದ್ದೆ.

ಲುವಾಕ್ ಕಾಫಿ ಅಲ್ಲಿನ ದುಬಾರಿ ಕಾಫಿ

ಲುವಾಕ್ ಕಾಫಿ ಅಲ್ಲಿನ ದುಬಾರಿ ಕಾಫಿ

ಲುವಾಕ್ ಕಾಫಿ ಅಲ್ಲಿನ ತುಂಬಾ ದುಬಾರಿ ಕಾಫಿ. ಇದರ ತಯಾರಿಕ ವಿಧಾನ ಏನು ಎಂದು ತಿಳಿಯುವ ಮನಸ್ಸಾಯಿತು. ಅಲ್ಲಿ ಬೆಳೆಯುವ ಎಲ್ಲಾ ಕಾಫಿ/ಟೀಯನ್ನ ಉಚಿತವಾಗಿ ಒಂದು ಲೋಟ ಕುಡಿಯಲು ಕೊಡುತ್ತಾರೆ. ಆದರೆ ಲುವಾಕ್ ಕಾಫಿಗೆ 50 ಸಾವಿರ ಇಂಡೋನೇಷ್ಯಾ ರುಪಾಯಾಗಳನ್ನ ನೀಡಬೇಕೆಂದು ಹೇಳಿದಾಗ ಏನಿದರ ಕಥೆ ಎಂದು ಕೇಳಿದೆ.

ಕಾಫಿ ಪುಡಿ ತಯಾರಿಸುವ ರೋಚಕ ಕಥೆ

ಕಾಫಿ ಪುಡಿ ತಯಾರಿಸುವ ರೋಚಕ ಕಥೆ

ಲುವಾಕ್ ಮುಂಗುಸಿಗೆ 3 ಘಂಟೆಗಳ ಪಚನ ಕ್ರಿಯೆ ಇದೆ. ಇದು ಏನು ಬೇಕಾದರೂ ತಿನ್ನುತ್ತದೆ. ತೋಟದಲ್ಲಿ ಬಿಟ್ಟರೆ ಕಾಫಿ ಬೀಜವನ್ನ ಸಹ ತಿನ್ನುತ್ತದೆ. ಆದರೆ ಅದು ಜೀರ್ಣವಾಗುವುದಿಲ್ಲ. ಹಾಗೆಯೇ ಆಚೆ ಬರತ್ತೆ. ಆಚೆ ಬಂದಾಗ ಕರಳು ಕೆಫೇನ್ ನ ಸುಮಾರು ಹೀರಿಕೊಂಡಿದ್ದರಿಂದ ಹಾಗೂ ಅದರ ಕರುಳಲ್ಲಿನ ಎಂಝೈಮ್ ಅದಕ್ಕೆ ಒಳ್ಳೆ ರುಚಿ ಕೊಡುವುದರಿಂದ ಇದಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇದರ ಮಲವನ್ನ ಹೆಕ್ಕುವ ಕೆಲಸಕ್ಕೇನೆ ಜನರನ್ನ ತೋಟಗಳಲ್ಲಿ ಇಟ್ಟುಕೊಂಡಿರುತ್ತಾರೆ.

ಪ್ರಾಣಿ ಹಿಂಸೆಯೋ, ಮನುಷ್ಯನ ಹುಚ್ಚುತನವೋ

ಪ್ರಾಣಿ ಹಿಂಸೆಯೋ, ಮನುಷ್ಯನ ಹುಚ್ಚುತನವೋ

ಮುಂಚೆ ಸ್ವಾಭಾವಿಕವಾಗಿ ಇದು ನಡೆಯುತ್ತಿದ್ದ ಕಾರಣ ಚೆನ್ನಾಗಿತ್ತಂತೆ. ಆದರೆ ಈ ನಡುವೆ ಮುಂಗುಸಿಯನ್ನು ಪಂಜರದಲ್ಲಿ ಕೂಡಿಹಾಕಿ, ಅದಕ್ಕೆ ಬೇಕು ಬೇಕು ಅಂತಲೇ ತಿನ್ನಿಸಿ, ಅದರ ಮಲವನ್ನ ಹೆಕ್ಕುವ ಕೆಲಸ ಮಾಡುತ್ತಾರೆ. ಪ್ರಾಣಿ ಹಿಂಸೆಯೋ, ಮನುಷ್ಯನ ಹುಚ್ಚುತನವೋ ಎಂದು ತಲೆ ತಲೆ ಚೆಚ್ಚಿಕೊಂಡೆ. ಇದಕ್ಕೆ ದುಡ್ಡು ಬೇರೆ ಕೊಡಬೇಕು ಎಂದು ಸುಮ್ಮನೆ ಬಿಟ್ಟಿಯಾಗಿ ಕೊಡುವ ಬೇರೆ ಕಾಫಿಯನ್ನ ಕುಡಿಯುವ ಯೋಜನೆ ಹಾಕಿದೆ.

ಗ್ಯಾಸ್ಟ್ರಿಕ್ ಆಗುತ್ತದೆ ಕಾಫಿ ಕುಡಿಯಬೇಡಿ

ಗ್ಯಾಸ್ಟ್ರಿಕ್ ಆಗುತ್ತದೆ ಕಾಫಿ ಕುಡಿಯಬೇಡಿ

ಅಲ್ಲಿ ವೆನಿಲ್ಲಾ ಕಾಫಿ, ಚಾಕೊಲೇಟ್ ಕಾಫಿ, ಅಂತೆಲ್ಲಾ ಕಾಫಿಗಳು ಇದ್ದವು. ಜೊತೆಗೆ ಅವಕ್ಯಾಡೋ ಟೀ, ಲೆಮನ್ ಗ್ರಾಸ್ ಟೀ ಮುಂತಾದ ಟೀಗಳು ಇದ್ದವು. ಇಲ್ಲಿನ ಅರೇಬಿಕಾ ರೊಬೋಸ್ಟಾ ಕಾಫಿಗೆ ಚಿಕೋರಿ ಹಾಕುವುದಿಲ್ಲ. ಕಾಫಿ ತುಂಬಾ ಚೆನ್ನಾಗಿಯೇ ಇರುತ್ತದೆ. ಇಲ್ಲಿನ ಜನಕ್ಕೆ ಗ್ಯಾಸ್ಟ್ರಿಕ್ ಆಗುತ್ತದೆ ಎಂದು ಕಾಫಿ ಕುಡಿಯಬೇಡಿ ಎಂದು ಹೇಳಿದಾಗ ಆಗುವ ದುಃಖ ನಿಜವಾಗಲೂ ಅಸಹನೀಯ. ಆದರೆ ಅದಕ್ಕೆ ಕಾರಣ ಚಿಕೋರಿ ಎಂಬುದನ್ನು ತಿಳಿಯಬೇಕೆಂದು ಅಲ್ಲಿನ ಪುತ್ರ ಹೇಳಿದ್ದು ನಿಜವೆನಿಸಿತು.

ಒಂದು ಆಘಾತಕಾರಿ ವಿಷಯ ತಿಳಿಯಿತು

ಒಂದು ಆಘಾತಕಾರಿ ವಿಷಯ ತಿಳಿಯಿತು

ಮನೆಗೆ ಒಂದಷ್ಟು ಕಾಫಿ, ಟೀಯನ್ನ ಮನೆಗೆ ತೆಗೆದುಕೊಂಡು ಬಂದೆ. ಸಕ್ಕರೆ ರಹಿತ ಚಾಕೊಲೇಟ್ ಕಾಫಿ ನಮಗೆ ಬಹಳ ಪ್ರಿಯವಾಗಿದ್ದ ಕಾರಣ ಮನೆಗೂ ತೆಗೆದುಕೊಂಡು ಬಂದ್ವಿ. ಮನಸ್ಸಲ್ಲಿ ಆದ್ರೂ ತೀರ ಮುಂಗುಸಿಯ ದೇಹದಿಂದ ಹೊರಬರುವ ಬೀಜವನ್ನ ಪುಡಿ ಮಾಡಿ ಕಾಫಿ ಮಾಡಬೇಕೆಂದ ವಿಷಯ ಯಾಕೆ ಹೊಳೆಯಿತು ಎಂದು ಯೋಚಿಸುತ್ತಿದೆ. ನಂತರ ಒಂದು ಆಘಾತಕಾರಿ ವಿಷಯ ತಿಳಿಯಿತು.

ಏನಪ್ಪಾ ಆ ಆಘಾತಕಾರಿ ವಿಷಯ ಅಂದ್ರೆ

ಏನಪ್ಪಾ ಆ ಆಘಾತಕಾರಿ ವಿಷಯ ಅಂದ್ರೆ

ಇಂಡೋನೇಷ್ಯಾ ಮುಂಚೆ ಈ ಡಚ್ಚರ ಕಾಲೋನಿಯಾಗಿತ್ತಂತೆ. ಅವರೇ ಆ ತೋಟದ ಮಾಲೀಕರಾಗಿದ್ದರಂತೆ. ಅಲ್ಲಿನ ಜನರೇ ಕೆಲಸದಾಳುಗಾಳಾಗಿದ್ದರಂತೆ. ಜಗತ್ತಿನ ಅತ್ಯಂತ ಒಳ್ಳೆ ಕಾಫಿ ಬೀಜವನ್ನ ಕೆಲಸದಾಳುಗಳು ಉಪಯೋಗಿಸಬಾರದು ಎಂದು ಅವರಿಗೆ ಕಾಫಿಯನ್ನ ನಿಷೇಧ ಮಾಡಿದ್ದರಂತೆ. ಅವರ ನೆಲದಲ್ಲಿ, ಅವರೇ ನೀರು ಹಾಕಿ, ಕಷ್ಟ ಪಟ್ಟು ಬೆಳೆದ ಬೆಳೆಯನ್ನ ಅವರೇ ಉಪಯೋಗಿಸಬಾರೆದೆಂಬ ನಿಯಮ. ಆದರೂ ಜನ ಹೊಸ ದಾರಿಯನ್ನ ಕಂಡುಕೊಂಡರಂತೆ.

ತಯಾರಿಕೆಗಿಂತ ದೌರ್ಜನ್ಯದ ಕಥೆ ಇನ್ನೂ ಅಸಹ್ಯ

ತಯಾರಿಕೆಗಿಂತ ದೌರ್ಜನ್ಯದ ಕಥೆ ಇನ್ನೂ ಅಸಹ್ಯ

ಲುವಾಕ್ ಮುಂಗುಸಿ ಅಲ್ಲಿನ ಬಹಳ ಓಡಾಡುವ ಪ್ರಾಣಿಯಾಗಿದ್ದರಿಂದ ಅದು ಕಾಫಿ ಬೀಜವನ್ನ ತಿನ್ನುತ್ತಿದ್ದರಿಂದ, ಅದರ ಪಚನ ಕ್ರಿಯೆಯ ಅರಿವಿದ್ದರಿಂದ ಆ ಮಲವನ್ನ ಹೆಕ್ಕಿ, ಅದನ್ನ ಶುಚಿಗೊಳಿಸಿ ಕಾಫಿ ಬೀಜವನ್ನ ಪಡೆದು, ಕಾಫಿ ಕುಡಿಯುತ್ತಿದ್ದರಂತೆ. ಮುಂಚೆ ಕಾಫಿ ತಯಾರಿಸುವ ವಿಧಾನ ನೋಡಿ ಅಸಹ್ಯವಾಗುತ್ತಿತ್ತು. ಆದರೆ ಇದರ ದೌರ್ಜನ್ಯದ ಕಥೆ ಕೇಳಿ ಇನ್ನೂ ಅಸಹ್ಯವೆನಿಸಿತು. ಡಚ್ಚರನ್ನ ನೋಡಿ ತುಂಬಾ ಮೆಚ್ಚಿಕೊಂಡು ಲೇಖನ, ಊರಿನ ಸೌಂದರ್ಯ ಹೊಗಳಿದ್ದನ್ನ ನೋಡಿ ತಲೆ ಚೆಚ್ಚಿಕೊಂಡೆ. ಹೊರಗಿಂದ ನೋಡೋದೆಲ್ಲಾ ಚೆಂದ ಅಲ್ಲ ಅಲ್ವಾ?

English summary
Indonesian Luwak Coffee : The most expensive coffee in the world. Meghana Sudhindra writes how this coffee is grown and power is made. You will be surprised to know the interesting story behind it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X