ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರ

By ಜಯನಗರದ ಹುಡುಗಿ
|
Google Oneindia Kannada News

ಹೋದವಾರ ನಾನು ಕಬಿನಿಗೆ ಹೋದ ಕಥೆಯನ್ನ ಓದಿದ್ರಿ. ಹಿಂದಿನ ದಿವಸ ದೋಣಿಯಲ್ಲಿ ಆನೆಗಳು, ಜಿಂಕೆ, ಪಕ್ಷಿಗಳನ್ನೆಲ್ಲಾ ನೋಡಿದ್ವಿ. ಹುಲಿಯನ್ನ ನೋಡೋಕೆ ಕಾತುರದಿಂದ ಕಾಯ್ತಿದ್ದೆ. ಯಾವುದಾದರೂ ಒಂದು ವಸ್ತು ಅಥವಾ ವಿಷಯವನ್ನ ತುಂಬಾ ಇಷ್ಟಪಟ್ಟು ಆಸೆಯಿಂದ ಕಾತುರದಿಂದ ನೋಡಲೇಬೇಕು ಎಂದು ಕನಸು ಕಾಣುತ್ತಿರುತ್ತೇವೋ ಅದು ನಿಮ್ಮ ಕಣ್ಣು ಮುಂದೆ ಬಂದಾಗ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆದರೆ ಅದನ್ನೇ ಸಿಕ್ಕಾಪಟ್ಟೆ ಆಸೆ ಪಟ್ಟು ಕಾದು ಅದು ಸಿಗದೆ ಇರುವ ನಿರಾಸೆಯು ದೊಡ್ಡದೇ. ಈ ಪರಿಸ್ಥಿತಿಯಲ್ಲಿ ನಾ ಇದ್ದೆ.

ಅಗಾಧ ವಿಸ್ಮಯ ಹುಟ್ಟುಹಾಕುವ ಕಾಡಿನ ಮೌನ!ಅಗಾಧ ವಿಸ್ಮಯ ಹುಟ್ಟುಹಾಕುವ ಕಾಡಿನ ಮೌನ!

ಹುಲಿಯ ಬಗ್ಗೆ ಅಷ್ಟು ಕುತೂಹಲ ಬಂದಿದ್ದು ನನಗೆ ಚಿಕ್ಕ ವಯಸ್ಸಿನಲ್ಲಿ, ಕನ್ನಡ ತರಗತಿಯಲ್ಲಿ ರಮಾ ಮಿಸ್ ಹೇಳಿಕೊಟ್ಟ ಪುಣ್ಯಕೋಟಿ ಪದ್ಯದಿಂದ. ಆ ಪದ್ಯದಲ್ಲಿ ಹುಲಿಯ ಆರ್ಭಟ, ಮುಗ್ಧ ಹಸುಗಳಿಗೆ ಅಟ್ಟಹಾಸ ತೋರಿಸೋದು, ಪುಣ್ಯಕೋಟಿಯ ಮೇಲೆ ಎರಗೋದು ಇವೆಲ್ಲಾ ಕೇಳಿ ಎಂಥಹ ಪ್ರಾಣಿಯೆಂದೆನ್ನುಕೊಳ್ಳುತ್ತಾ ಇದ್ದೆ. ನಂತರ ಟೀವಿಯಲ್ಲಿ ಬರುತ್ತಿದ್ದ ನ್ಯಾಷನಲ್ ಜಿಯೋಗ್ರಾಫಿಕ್ ನಲ್ಲಿ ಹುಲಿ ಬೇಟೆಯಾಡೋದನ್ನ ತೋರಿಸುತ್ತಿದ್ದದ್ದು, ಅದೊಂದೆ ಜಿಂಕೆಗಳ ಗುಂಪನ್ನ, ಕಾಡೆಮ್ಮೆಗಳ ಗುಂಪನ್ನ ಚದುರಿಸೋದನ್ನ ನೋಡೋದೆ ಆಶ್ಚರ್ಯವಾಗುತ್ತಿತ್ತು.

In search of the majestic Tiger in Bandipur forest

ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ಜಾಸ್ತಿ ಜನ ಇದ್ದರೆ, ಒಗ್ಗಟ್ಟಿನಲ್ಲಿ ಬಲವಿದೆ ಎಂದೆಲ್ಲಾ ಹೇಳಿಕೊಡುತ್ತಿದ್ದನ್ನು ಕೇಳಿ ಇದೇನು ಈ ಹುಲಿ ಒಂದೇ ಬಂದು ಎಲ್ಲರನ್ನು ಚದುರಿಸಿ ಒಂದು ಜಿಂಕೆಯನ್ನೋ ಅಥವಾ ಕಾಡೆಮ್ಮೆಯನ್ನೋ ಕೊಂದು ತಿನ್ನುತ್ತಿತ್ತು. ಇಲ್ಲಿ ಒಗ್ಗಟ್ಟಿನ ಯಾವ ಬಲ ಕೆಲಸ ಮಾಡುತ್ತದೆ ಎಂದು ನನಗೆ ಆಗಾಗ ಸಂಶಯ ಕಾಡುತ್ತಿತ್ತು. ಹುಲಿ ಕಾಡೆಮ್ಮೆಗಿಂತ 4 ಪಟ್ಟು ಸಣ್ಣದಾಗಿದ್ದರೂ ಸಹ ಹೇಗೆ ಛಂಗನೆ ಹಾರಿ ಸಂಹಾರ ಮಾಡುತ್ತದೆ ಎಂಬ ಕುತೂಹಲ ನನಗ್ಯಾವಾಗಲೂ ಇತ್ತು. ಇಲ್ಲಿ ಒಗ್ಗಟ್ಟಿನಲ್ಲಿ ಬಲವಿದೆಯೋ ಅಥವಾ ಶಕ್ತಿಶಾಲಿಯಲ್ಲಿ ಬಲವಿದೆಯೋ ಎಂದು ನನಗೆ ಪ್ರಶ್ನೆ ಮೂಡುತ್ತಿತ್ತು. ಆಗಾಗ ಕಾಡೆಮ್ಮೆಗಳ ಗುಂಪು ಒಮ್ಮೊಮ್ಮೆ ಹುಲಿಯನ್ನ ಓಡಿಸುತ್ತಿದ್ದ ವಿಷಯ ಕೇಳುತ್ತಿತ್ತು. ಆದರೂ ಹುಲಿಯಷ್ಟು ಬಲಶಾಲಿ ಇನ್ಯಾವುದು ಇಲ್ಲದಹಂಗೆ ಕಂಡಿದ್ದು ನನಗೆ ಆಶ್ಚರ್ಯವೆನಿಸಿತು.

ತಾತ ಹೇಳಿದ ಮೇಘು ಮತ್ತು ಅವರೆಕಾಳಿನ ಕಥೆ!ತಾತ ಹೇಳಿದ ಮೇಘು ಮತ್ತು ಅವರೆಕಾಳಿನ ಕಥೆ!

ಸ್ವಲ್ಪ ದೊಡ್ಡವಳಾದ ನಂತರ ನನಗನ್ನಿಸಿದ್ದು, ನಮ್ಮ ಆಕಾರಕ್ಕಿಂತ ನಮ್ಮಲ್ಲಿರುವ ಮನೋಶಕ್ತಿ ಹಾಗೂ ಅನಂತ ಪ್ರಯತ್ನಗಳು ನಮ್ಮನ್ನು ಶಕ್ತಿವಂತರನ್ನಾಗಿ ಮಾಡುತ್ತದೆ ಎಂದು. ಹುಲಿಯ ವಿಷಯದಲ್ಲಿ ಅದು ನಿಜವಾಗಿತ್ತು. ತನಗಿಂತ 5 ಪಟ್ಟು 8 ಪಟ್ಟು ತೂಕವಿರುವ ಪ್ರಾಣಿಯನ್ನ ಬೇಟೆಯಾಡುವ ಅದರ ಶಕ್ತಿ ನಿಜವಾಗಲೂ ಒಪ್ಪುವಂಥದ್ದು. ಹುಲಿ ಪ್ರೀತಿಯ ಬಗ್ಗೆಯೂ ತಿಳಿದ್ದಿದ್ದೆ. ಕೆಲವರ ಪ್ರೀತಿ ವಿಪರೀತವಾಗಿರುತ್ತದೆ. ಉಸಿರಾಡಲು ಜಾಗವಿರದಷ್ಟು. ಆ ಥರಹದ ಹುಲಿ ಪ್ರೀತಿಯನ್ನ ನಾವೆಲ್ಲಾ ಕಂಡೆ ಕಂಡಿರುತ್ತೇವೆ. ಇಷ್ಟೆಲ್ಲಾ ಕುತೂಹಲ ಮೂಡಿಸಿದ್ದ ಪ್ರಾಣಿಯನ್ನ ನಾ ಒಮ್ಮೆ ನಿಜವಾಗಿಯೂ ನೋಡಬೇಕಿತ್ತು.

In search of the majestic Tiger in Bandipur forest

ಬೆಳಗ್ಗೆ 6 ಘಂಟೆಗೆ ಕಬಿನಿಯ ಸಫಾರಿ ಜೀಪಿನಲ್ಲಿ ಕೂತೆ. ಸಿಕ್ಕಾಪಟ್ಟೆ ಛಳಿಯ ವಾತಾವರಣ. ಮಂಜು ಮುಸುಕಿತ್ತು. ದೊಡ್ಡ ದೊಡ್ಡ ಕ್ಯಾಮೆರಾ ಹಿಡಿದು ಬಂದ ನ್ಯಾಷನಲ್ ಜಿಯೋಗ್ರಫಿಕ್ ತಂಡದವರು, ಇನ್ಯಾವುದೋ ಪುಟಾಣಿ ಮಕ್ಕಳ ತಂಡ, ಸ್ವಲ್ಪ ದೊಡ್ಡವರಾದ ನಮ್ಮ ತಂಡ, ಹೀಗೆ ಒಂದು 10 ಜೀಪು ಹೊರಡೋಕೆ ಅಣಿಯಾಯ್ತು. ನಮ್ಮ ಜೀಪಿನಲ್ಲಿ ಬರೀ ಚಾಲಕ ಮಾತ್ರ ಬಂದ. ಬೇರೆಯವರ ಜೀಪಿನಲ್ಲಿ ಚಾಲಕನ ಜೊತೆ ನ್ಯಾಚುರಲಿಸ್ಟ್ ಸಹ ಇದ್ದರು. ನನಗಲ್ಲೆ ಹುಲಿ ಕಾಣಿಸೋಕೆ ಯಾವ ಥರಹದ ಸಿದ್ಧತೆ ನಾವು ಮಾಡಿಕೊಂಡಿಲ್ಲ ಎಂದು ಬೇಜಾರಾಯಿತು.

ನಮ್ಮ ಚಾಲಕ ಅಸ್ಲಮ್ "ಯಾವ್ಯಾವ ಪ್ರಾಣಿಗಳನ್ನ ತೋರಿಸ್ತೀರ ಮ್ಯಾಡಮ್" ಎಂದಾಗ, ನನಗೆ ಏನ್ ಹೇಳೋದು ಗೊತ್ತಾಗಲ್ಲಿಲ್ಲ. ಸರಿ ಇವತ್ತು ಜಿಂಕೆ ಕಥೆ ಎಂದುಕೊಂಡು ನನ್ನ ಪುಟಾಣಿ 140 ಜೂಮ್ ಲೆನ್ಸ್ ಕ್ಯಾಮೆರಾ ಹಿಡಿದು ಕೂತೆ. ಮದ್ವೆ ಮನೆ ಕ್ಯಾಮೆರಾ ಅಂತ ತಮಾಷೆಯನ್ನ ಸಹ ಮಾಡಿದ್ದರು ಅಸ್ಲಮ್. ಕೂತಾಗ ಕಾಡಿನ ಬಗ್ಗೆ, ಪ್ರಾಣಿಗಳ ದಿನಚರಿಯನ್ನ , ಅವುಗಳು ನೀರು ಕುಡಿಯುವ ಜಾಗವನ್ನ, ಬೇಟೆಯ ಕಥೆಗಳನ್ನ ತುಂಬಾ ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು. ಆ ರಸ್ತೆ, ಈ ರಸ್ತೆ ಎಂದು ಹುಡುಕಿಕೊಂಡು ಹೋಗಿ "ಇಲ್ಲಿ ನೋಡಿ ಹುಲಿಯ ಪಾದದ ಗುರುತುಗಳು, ಅದರ ಹಿಕ್ಕೆ, ಅದರ ಅರ್ಧ ತಿಂದ ಬೇಟೆ" ಎಂದೆಲ್ಲಾ ವಿವರಿಸುತ್ತಿದ್ದರು. ನನಗಲ್ಲಿ ಹುಲಿ ಕಾಣಿಸೋದು ಯಾವಾಗ ಎಂದು ತಳಮಳ ಶುರುವಾಗಿತ್ತು.

In search of the majestic Tiger in Bandipur forest

ಅಕ್ಕಪಕ್ಕದಲ್ಲಿ 7-8 ಸಲ ಹುಲಿಯನ್ನೇ ನೋಡಲು ಭಾರತದ ಸುಮಾರು ಕಾಡುಗಳಿಗೆ ಭೇಟಿ ಕೊಟ್ಟವರು ಇದ್ದರು. ಒಮ್ಮೆಯೂ ಅವರಿಗೆ ಕಂಡಿರಲ್ಲಿಲ್ಲವಂತೆ. ಈ ಥರಹದ ಪರಿಸ್ಥಿತಿಯಲ್ಲಿ ನನಗ್ಯಾವ ಪರಿ ತಲೆ ಕೆಟ್ಟಿತ್ತೆಂದರೆ "ಮತ್ತೆ ಮತ್ತೆ ನೋಡೋಕೆ ಹೀಗೆಲ್ಲಾ ಕಾಡಿಗೆ ಬರೋಕೆ ಎಲ್ಲಿಂದ ದುಡ್ಡು ಹೊಂದಿಸ್ಲಪ್ಪ" ಎಂದು ಅಲವತ್ತುಕೊಳ್ಳುತ್ತಿದ್ದೆ. ಕಾಡಿನ ಹವ್ಯಾಸ ಸಿಕ್ಕಾಪಟ್ಟೆ ಜೇಬಿಗೆ ಕತ್ತರಿ. ಇದು ನೆನಪಿಡಬೇಕಾದ ಸಂಗತಿ. ಅದಕ್ಕೆ ಒಮ್ಮೆ ಬಂದ ಜನ ಅವಾಗಲೇ ಅವರ ಕೆಲಸ ಮುಗಿಸಲು ಪ್ರಯತ್ನಿಸುತ್ತಾರೆ.

3 ಘಂಟೆಯ ಸಫಾರಿಯಲ್ಲಿ ಎರಡು ಘಂಟೆ ಅದಾಗಲೇ ಮುಗಿದಿತ್ತು. ಜಿಂಕೆ, ಪಕ್ಷಿಗಳು, ಕಾಡೆಮ್ಮೆ ಮಾತ್ರ ಕಾಣಿಸಿತು. ಅಲ್ಲಲ್ಲಿ ಕೋತಿಗಳ ಕೂಗು ಕೇಳಿಸಿ ಅಲ್ಲಿ ಎರಡು ಬಾರಿ ಹೋದರೂ ಹುಲಿ ಕಾಣಿಸಲಿಲ್ಲ. ಅಸ್ಲಾಮ್ ಕಡೆಗೆ ಅವರವರ ಅದೃಷ್ಟ ಎಂದು ಕೈಬಿಟ್ಟರು. ಇಡೀ ಕಾಡು ಮೌನವಾಗಿತ್ತು. ಜೀಪಿನ ಸದ್ದು ಮಾತ್ರ ಕೇಳುತ್ತಿತ್ತು. ದುಡ್ಡೆಲ್ಲಾ ಗೋವಿಂದ ಆಯ್ತು ಎಂದು ನಾನು ಬೇಜಾರಲ್ಲಿದ್ದೆ. ಆಗ ಜಿಂಕೆಗಳ ಕೂಗು ವಿಪರೀತವಾಗಿತ್ತು. ಬಾಲವನ್ನ ಎತ್ತರಿಸಿ ಕೋಗೋಕೆ ಶುರು ಮಾಡಿದ್ವು. ಆ ಜಾಡನ್ನ ಹಿಡಿದ ಅಸ್ಲಮ್ ಅದರ ಕಡೆಗೆ ಜೀಪನ್ನ ತಿರುಗಿಸಿದರು. ಅಲ್ಲೊಂದು ಎಡ ಅಥವಾ ಬಲವನ್ನ ತೆಗೆದುಕೊಂಡರೆ ಖಂಡಿತಾ ಹುಲಿ ಕಾಣತ್ತೆ ಎಂದು ಹೇಳಿದರು ಸಹ.

In search of the majestic Tiger in Bandipur forest

ನಾವೆಲ್ಲಾ ಬಲಕ್ಕೆ ಶಬ್ದ ಬರ್ತಿದೆ ಎಂದರೆ ಅವರು ಚಕ್ಕನೆ ಎಡಕ್ಕೆ ತಿರುಗಿಸಿದರು. ನಾವು ಇಲ್ಲ ಆ ಕಡೆ ಅಂತ ವಾದ ಮಾಡೋಷ್ಟರಲ್ಲಿ ನಮ್ಮ ಜೀಪಿನ ಮುಂದೆ ಬಿಡುಬೀಸಾಗಿ ಹುಲಿ ತನ್ನ ಮೂತ್ರದಿಂದ ತನ್ನ ಸೀಮೆಯನ್ನ ಗುರುತು ಮಾಡುತ್ತಿತ್ತು. ಇದು ಬೇರೆ ಹುಲಿಗಳಿಗೆ ಒಳಗೆ ಬರಬಾರದೆಂಬ ಸೂಚನೆ. ಇನ್ನು ಜಿಂಕೆಗಳಿಗೆ ಅದು ಅಲ್ಲಿದೆ ಎಂಬ ಸೂಚನೆ. ಯಾವುದೇ ಭಯವಿಲ್ಲದೆ ಆರಾಮಾಗಿ ತನ್ನ ಕೆಲಸ ಮಾಡುತ್ತಿತ್ತು.

ಜೀಪಿನ ಸಪ್ಪಳ ಕೇಳಿ ಮುಖ ನಮ್ಮ ಕಡೆ ತಿರುಗಿಸಿ "ಮತ್ತೆ ಬಂದ್ರಾ ನರಮನುಷ್ಯರು" ಎಂದು ಆಸಕ್ತಿಯೇ ಇಲ್ಲದ ಹಾಗೆ ತನ್ನ ಕೆಲಸವನ್ನ ಮುಂದುವರಿಸಿತ್ತು. ಪದೇ ಪದೇ ನಮ್ಮ ಕಡೆ ತಿರುಗಿ ನೋಡಿ "ಎದ್ದು ಹೋಗ್ರೋ ಸಾಕು" ಎಂಬ ಮುಖಭಾವವನ್ನ ಪ್ರದರ್ಶನ ಮಾಡುತ್ತಿತ್ತು. ಯಾವುದೇ ಭಯವಿಲ್ಲದೆ ತನ್ನ ಜಾಗದಲ್ಲಿ ತಾನು ಆರಾಮಾಗಿ ಇತ್ತು. ನಂತರ ಛಂಗನೆ ಓಡಿ ಜಿಂಕೆಯನ್ನ ಹಿಡಿಯೋಕೆ ನೀರಿನ ಹತ್ತಿರ ಹೋಯ್ತು. ಅಷ್ಟು ಕಿರುಚಾಡಿ ಕಾಡಿಗೆಲ್ಲಾ ಸುದ್ದಿ ಮುಟ್ಟಿಸಿದ ಜಿಂಕೆಯೇ ಅದಕ್ಕೆ ಆಹಾರವಾಗಿಹೋಯ್ತು.

In search of the majestic Tiger in Bandipur forest

ಹುಲಿ ನೋಡಿದ ಮೇಲೆ ನಮಗ್ಯಾರಿಗೂ ಮಾತೆ ಬರಲ್ಲಿಲ್ಲ. ಅದರ ಅಗಾಧತೆ, ಅದರ ಬಿಂಕ, ಕೊಬ್ಬು, ಮನೋಭಾವ ಇವೆಲ್ಲವೂ ಮನುಷ್ಯ ತಾನು ಏನೂ ಅಲ್ಲ ಎಂಬ ಭಾವ ಪದೇ ಪದೇ ಮೂಡುತ್ತದೆ. ಬರೀ ಬುದ್ಧಿಯಿಂದ ಇಡೀ ಜಗತ್ತನ್ನ ಆಳುವ ನಾವೆಲ್ಲಿ ಕಾಡಿನಲ್ಲಿ ಬಿಡುಬೀಸಾಗಿ ಓಡಾಡುವ ಹುಲಿಯೆಲ್ಲಿ. ಟಿವಿಯಲ್ಲಿ ಪುಟ್ಟ ಬೆಕ್ಕಿನ ಹಾಗೆ ಕಾಣುವ ಹುಲಿ ಎದುರಿಗೆ ನಿಂತಾಗ ಒಂದು ಸೆಕೆಂಡ್ ಎದೆ ಬಡಿತ ನಿಂತಿದ್ದು ಸುಳ್ಳಲ್ಲ. ನೀವು ನೋಡಿಕೊಂಡು ಬನ್ನಿ.

English summary
There is a saying, only lucky people can get to see Tiger in the forest. Many people visit Bandipur forest to have a glimpse of Tiger, but return disappointed many times. Tiger is also not bothered about who comes and goes, it lives the life on it's own terms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X