• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನುಜನನ್ನು ಕುಬ್ಜನನ್ನಾಗಿಸುವ ಸಾಗರದಾಳದ ಅನೂಹ್ಯ ಜಗತ್ತು

By ಜಯನಗರದ ಹುಡುಗಿ
|

ಪೋರ್ಟ್ ಬ್ಲೇರಿನ ದೇಶಭಕ್ತಿ ಭಾವನೆಯಿಂದ ನಾವು ತೆರಳಿದ್ದು ಹಾವ್ ಲಾಕ್ ದ್ವೀಪಕ್ಕೆ. ಹಾವ್ ಲಾಕ್ ದ್ವೀಪವನ್ನ ಈಗ ಸ್ವರಾಜ್ಯ ದ್ವೀಪವೆಂದೆ ನಾಮಕರಣ ಮಾಡಿದ್ದಾರೆ. ಹಾವ್ ಲಾಕ್ ದ್ವೀಪವನ್ನ ಸರ್ ಹೆನ್ರಿ ಹಾವ್ ಲಾಕ್ ಎಂಬ ಬ್ರಿಟಿಷ್ ಮಿಲಿಟರಿ ಅಧಿಕಾರಿಯ ಸ್ಮರಣಾರ್ಥ ಇಟ್ಟಿರುವ ಹೆಸರು. 1857ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವಿರುದ್ಧ ಹೋರಾಡಿದವನು. ಈಗ ಸುಭಾಷ್ ಚಂದ್ರ ಬೋಸ್ ಎಂಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಸ್ಮರಣಾರ್ಥವಾಗಿ ಹೆಸರು ಬದಲಾಯಿಸಿದ್ದಾರೆ.

ಸರಿ ತಪ್ಪುಗಳ ವಿಶ್ಲೇಷಣೆಯಲ್ಲಿಯೇ ಪತ್ರಿಕೆಗಳು ಮುಳುಗಿವೆ. ಹೆಸರಿನ ಯಾವ ಬವಣೆಯೂ ಇಲ್ಲದೆ ಸ್ವರಾಜ ದ್ವೀಪ ಶುಚಿಯಾಗಿ, ತಿಳಿ ನೀಲಿಯಾದ ಸಮುದ್ರದೊಂದಿಗೆ ಹೊಳೆಯುತ್ತಿದೆ. ಈ ತಿಳಿ ನೀಲಿ ಸಮುದ್ರ ಎಷ್ಟು ಸಾವುಗಳನ್ನ ಕಂಡಿದ್ಯೋ, ಅದೆಷ್ಟು ಜನಾಂಗ, ಪೀಳಿಗೆಯನ್ನ ಕಂಡಿದ್ಯೋ ಗೊತ್ತಿಲ್ಲ.. ಭಾರತದ ಒಂದೆ ಒಂದು ಜ್ವಾಲಾಮುಖಿ ಪರ್ವತವಿರುವುದು ಅಂಡಮಾನಿನಲ್ಲಿಯೇ. ಇವೆಲ್ಲವನ್ನು ಇರಿಸಿಕೊಂಡಿದ್ದರೂ ಜನ ಇಲ್ಲಿಗೆ ಬರೋದು ಸ್ಕೂಬಾ ಡೈವಿಂಗಿಗಾಗಿಯೇ.

ದೇಶಭಕ್ತಿ ಎಲ್ಲಾ ಬದ್ನೆಕಾಯಿ ಅನ್ನೋರು ಅಂಡಮಾನ್ ನೋಡಬೇಕು

ನಾವಿದ್ದದ್ದು ಬೇರ್ ಫುಟ್ ಅಂಡಮಾನ್ ಎಂಬ ಅಪ್ಪಟ ಕನ್ನಡಿಗರ ಜಾಗದಲ್ಲಿ. ಆ ಜಾಗದವರದ್ದೇ ರಾಧಾನಗರ ಬೀಚ್ ಆದ್ದರಿಂದ ಎಲ್ಲೂ ಗಲೀಜು, ಕೊಳಕು ಮತ್ತು ಪುಂಡರ ಗುಂಪು ಕಾಣಿಸಲ್ಲಿಲ್ಲ. ಸ್ಕೂಬಾ ಮಾಡುವವರು ತುಂಬಾ ಜನ ಇಲ್ಲೇ ಇಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಸ್ಕೂಬಾ ಮರುದಿವಸ ಮಾಡಬೇಕಿದ್ದರೆ ಹಿಂದಿನ ದಿವಸ ನಮಗೆ ಯಾವ ಖಾಯಿಲೆ ಇಲ್ಲ ಎಂದು ದೃಢಪಡಿಸಬೇಕಾಗುತ್ತದೆ. ಶ್ವಾಸ ಕೋಶದ ಖಾಯಿಲೆ, ಕುಡಿತ, ಸಿಗರೇಟಿನ ಅತಿಯಾದ ಸೇವನೆ, ಹೃದಯ ಸಂಬಂಧಿತ ಖಾಯಿಲೆಗಳು, ಕೈ ಕಾಲಿನಲ್ಲಿ ಆಳವಾದ ಗಾಯಗಳು ಇಂಥ ಸುಮಾರು ವಿಷಯಗಳನ್ನ ನೋಡಿ ಅದ್ಯಾವುದು ಇಲ್ಲ ಎಂದಮೇಲೆಯೇ ಅವರು ಮರುದಿವ್ಸ ನಿಮ್ಮನ್ನ ನೀರಿಗಿಳಿಸೋದು.

ವಾಹ್ ಎನಿಸುವ 'ಇಂಥ' ಸ್ಕೂಬಾ ಡೈವಿಂಗ್ ಪ್ರವಾಸೋದ್ಯಮ ಮಂಗ್ಳೂರಲ್ಲಿ

ಒಂದು ವೆಟ್ ಸೂಟ್, ಆಮ್ಲಜನಕ ಸಿಲೆಂಡರ್, ಡೆಡ್ ವೈಟ್, ಬ್ರೀತಿಂಗ್ ಪೈಪ್ ಮತ್ತು ಏರ್ ಗೇಜ್ ಕೊಟ್ಟು ಮುಖ ಮತ್ತು ಮೂಗು ಮುಚ್ಚುವ ಮಾಸ್ಕ್ ಕೊಡುತ್ತಾರೆ. ಮೊದಲು ಆ ಮಾಸ್ಕಿನ ಶುಚಿ ಕೆಲಸ. "ಜೆನರ್ಸ್ಲಿ ಸ್ಪ್ಲಿಟ್" ಎಂದು ನಮ್ಮ ತರಬೇತುಗಾರ್ತಿ ಮಿಯಾ ಹೇಳಿದಳು. ನಮ್ಮ ಎಂಜಿಲೇ ಮಾಸ್ಕಿನ ಡಿ ಫಾಗ್ ಏಜೆಂಟ್. ಅದಷ್ಟನ್ನು ಮಾಡಿ, ಮಾಸ್ಕ್ ಶುಚಿಗೊಳಿಸಿ ಏರಿಸಿಕೊಂಡರೆ ಮೂಗೂ ಸಹ ಮುಚ್ಚತ್ತೆ. ಬಾಯಲ್ಲಿ ಉಸಿರಾಡುವ ತರಬೇತಿ ಶುರುವಾಯಿತು.

ನನ್ನ ಸಾವಿಗೆ ಶಂಭು ಕಾರಣ!

ನನ್ನ ಸಾವಿಗೆ ಶಂಭು ಕಾರಣ!

ನಾನು ಚಿಕ್ಕವಳಿದ್ದಾಗ ಅಮ್ಮ ಎಳೆದುಕೊಂಡು ಹೋಗಿ ಸ್ವಿಮ್ಮಿಂಗ್ ಕ್ಲಾಸಿಗೆ ಸೇರಿಸಿದ್ದಳು. ಮಕ್ಕಳಾದ ಕಾರಣ ನಮ್ಮನ್ನ ಶಿಸ್ತಿಗೆ ಒಳಪಡಿಸಲು ಶಂಭು ಎಂಬ ಮಿಲಿಟೆರಿ ಟ್ರೈನರಿನ ಥರ ಇದ್ದವನನ್ನ ಜಯನಗರದ ಪಿ ಎಂ ಸ್ವಿಮ್ಮಿಂಗ್ ಸೆಂಟರಿನಲ್ಲಿ ನೇಮಿಸಲಾಯಿತು. ಮೊದಲ ದಿವಸ 3 ಅಡಿ ಆಳದ ಕೊಳದಲ್ಲಿ 45 ನಿಮಿಷ ಕಾಲು ಬಡಿಸಿ ಬಡಿಸಿ ಕಳಿಸಿದ್ದ. ಮರುದಿವಸ ಮುಖವನ್ನ ನೀರಿನೊಳಗೆ ಹಾಕಿ ಬಾಯಲ್ಲಿ ಉಸಿರಾಡುವ ತರಬೇತಿ. ನಾವೆಲ್ಲ ಹೆದರುತ್ತೀವಿ ಎಂದು ನಾವು ಸ್ವಲ್ಪ ಮುಖ ಒಳಗೆ ಹಾಕಿಕೊಂಡರೆ ಅವನು ಬಂದು ಕತ್ತು ಹಿಡಿದು ಮುಳುಗಿ ಸಂಖ್ಯೆ ಎಣಿಸುತ್ತಿದ್ದ. ಪ್ರತಿ ಸರ್ತಿ ಅವನ ಮುಖ ನೋಡಿದಾಗ ನನ್ನ ಸಾವು ಖಚಿತ ಅನ್ನಿಸುತ್ತಿತ್ತು. ಪ್ರತಿ ಕ್ಲಾಸಿಗೆ ಹೋಗುವ ಮುನ್ನ "ನನ್ನ ಸಾವಿಗೆ ಶಂಭು ಕಾರಣ" ಎಂದು ಬರೆದುಬಿಡಬೇಕು ಎನ್ನುವಷ್ಟು ಕೋಪ. ಆದರೆ ಬಿಡುತ್ತಲೇ ಇರುತ್ತಿರಲ್ಲಿಲ್ಲ. ಆ ಕಚಡಾ ಕ್ಲೋರಿನ್ ನೀರು ಮೂಗಿಗೆ, ಬಾಯಿಗೆ, ಕಿವಿಗೆ ಹೋಗಿ ಅಯೋಮಯವಾದರೂ ಕತ್ತು ಬಿಡುತ್ತಿರಲ್ಲಿಲ್ಲ.

'ಉರಿ' ಸಿನೆಮಾ ನೋಡಿದ ನಂತರ ಹಳೆಯ ನೆನಪುಗಳ ಮೆರವಣಿಗೆ

ಸಹಾಯಕ್ಕೆ ಬಂದ ಬಾಲ್ಯದಲ್ಲಿ ಕಲಿತ ಸ್ವಿಮ್ಮಿಂಗ್

ಸಹಾಯಕ್ಕೆ ಬಂದ ಬಾಲ್ಯದಲ್ಲಿ ಕಲಿತ ಸ್ವಿಮ್ಮಿಂಗ್

ಇದೇ ರಿಪೀಟ್ ಎಂದು ಕೊಂಡು ಇವ್ನ್ಯಾರೋ ಶಂಭು ಅಣ್ಣನ್ನೋ ತಮ್ಮನೋ ಎಂದು ನೋಡುತ್ತಿದ್ದರೆ ಗೊಗೋ "ನಿಮಗೆ ನೆಗಡಿ ಬಂದಾಗ ಬಾಯಲ್ಲಿ ಉಸಿರಾಡಿದ ಹಾಗೆ ಇಲ್ಲೂ ಮಾಡಬೇಕು, ಈ ಬ್ರೀತಿಂಗ್ ಪೈಪಿನಲ್ಲಿ ಊದಿ ಅಷ್ಟೆ" ಎಂದು ಅರಾಮಾಗಿ ಹೇಳಿದ. ಇದನ್ನೆ ಚಿಕ್ಕ ಮಕ್ಕಳಿಗೆ ಕೊಡೋದಕ್ಕೆ ಏನು ಧಾಡಿಯಾಗಿತ್ತು ಪಿ ಎಂ ಸ್ವಿಮ್ಮಿಂಗ್ ಸೆಂಟರಿಗೆ ಎಂದು ಬೈದುಕೊಂಡು ಇದರಲ್ಲಿ ಸರಾಗವಾಗಿ ಉಸಿರಾಡಿದೆ. ಆಮೇಲೆ "ಹೆಡ್ ಇನ್ ವಾಟರ್" ಅಂದ ತಕ್ಷಣ ನನಗೆ ಶಂಭುವಿನ ಕತ್ತು ಹಿಡಿತ ನೆನಪಾಗಿ ಭಯದಿಂದ ಎದ್ದೇಳುತ್ತಿದ್ದೆ. ಆ ಸ್ವಿಮ್ಮಿಂಗ್ ಕ್ಲಾಸಿನ ಭಯ ಎಷ್ಟಿತ್ತೆಂದರೆ ಈಗಲೂ 2ರಿಂದ 3 ನಿಮಿಷ ಜಾಸ್ತಿ ತಲೆಯಿಂದ ನೀರು ಮುಖದ ಮೇಲೆ ಬಿದ್ದರೆ ನನಗೇನೋ ಆಯ್ತು ಎಂದು ಎದೆ ಢವ ಢವ ಬಡಿದುಕೊಳ್ಳುತ್ತದೆ.

ಅಂತೂ ಪಿ ಎಂ ಸ್ವಿಮ್ಮಿಂಗ್ ಸೆಂಟರಿನಲ್ಲಿ ಲೆವೆಲ್ 1 ಸ್ವಿಮ್ಮಿಂಗ್ ಕಲಿತ ಮೇಲೆ ಅಲ್ಲಿ 14 ಅಡಿಯಿಂದ ಜಂಪ್ ಮಾಡಿಸಿ ಡೈವ್ ಹೇಳಿಕೊಡುತ್ತಾರೆ. ಆವಾಗಲೂ ಪೂರ್ತಿ ಆಳಕ್ಕೆ ಬಿದ್ದು ಮತ್ತಿನ್ಯಾರದ್ದೋ ಸ್ವಿಮ್ಮಿಂಗ್ ಡ್ರೆಸ್ ಹಿಡಿದು ಮೇಲಕ್ಕೆ ಬಂದಿದ್ದು ನೆನಪಿದೆ. ಇವೆಲ್ಲದರ ಪರಿಣಾಮ ಉಸಿರಾಟದ ತರಬೇತಿಯಲ್ಲಿಯೇ 20 ನಿಮಿಷ ಕಳೆದೆ. ನೀರೆಂದರೆ ಭಯ ಎಂದು ಕಥೆ ಬಿಡುತ್ತಿದ್ದ ಅಕ್ಷರ ಆರಾಮಾಗಿ ಹತ್ತು ನಿಮಿಷದಲ್ಲಿಯೇ ಮುಗಿಸಿ ಡೈವಿಂಗ್ ಮಾಡಿಬಿಟ್ಟ.

ಅತಿ ಪಾಸಿಟಿವಿಟಿ, ಅತೀ ನೆಗೆಟಿವಿಟಿ ಜೀವನಕ್ಕೆ ಒಳ್ಳೆಯದಲ್ಲ!

ಸಮುದ್ರ ಹಾಸಿಗೆ ಒಂದು ರಂಗಮಂದಿರ

ಸಮುದ್ರ ಹಾಸಿಗೆ ಒಂದು ರಂಗಮಂದಿರ

ತಾಳ್ಮೆಯಿಂದ ಗೊಗೋ ಉಸಿರಾಟ ಕಲಿಸಿ ನೀರಿಗೆ ಕರೆದುಕೊಂಡು ಹೋದ. ಅಲ್ಲಿ ನನಗೆ ಮಾಯಾಜಾಲ ಕಂಡಿತು. ಇಡೀ ಸಮುದ್ರ ಹಾಸಿಗೆ ಒಂದು ರಂಗಮಂದಿರದ ಹಾಗೆ ಕಂಡಿತ್ತು. ಒಂದೊಂದು ಮೀನು, ಏಡಿ, ಆಕ್ಟೋಪಸ್ ಎಲ್ಲವೂ ದೊಡ್ಡ ನಟರಾಗಿದ್ದವು. ಬೇಕೆಂದಾಗ ಬೇಕಾದ ಬಣ್ಣ, ಪಾತ್ರಗಳನ್ನ ಮಾಡುತ್ತಿದ್ದವು. ಗೋಗೋ ಅಲ್ಲಿ ಕೈ ತೋರಿಸುತ್ತಿದ್ದರೆ, ಕಲ್ಲಿಗ್ಯಾಕೆ ಅಷ್ಟೊಂದು ಪ್ರಾಮುಖ್ಯತೆ ಎಂದು ನೋಡುತ್ತಿದ್ದರೆ ಅಲ್ಲಿ ಮೀನು ಕಣ್ಣು ಬಿಡುತ್ತಿತ್ತು. ಅಷ್ಟು ಚೆನ್ನಾಗಿ ಕೆಮೋಫ್ಲಾಜ್ ಆಗಿದ್ದವು. ಕೆಲವು ಕಡೆ ಹವಳದ ದಿಬ್ಬಗಳು ಹೊಳೆಯುತ್ತಿದ್ದವು, ಕೆಲವು ಬಣ್ಣ ಕಳೆದುಕೊಂಡು ಸತ್ತಿದ್ದವು. ಒಂದೊಂದು ಅಡಿ ಹೋಗುವಾಗಲೂ ಮೂಗು ಹಿಂಡಿಕೊಂಡು ಅಲ್ಲಿಂದ ಉಸಿರು ಬಿಟ್ಟು ಕಿವಿಯ ಒತ್ತಡವನ್ನ ಕಡಿಮೆ ಮಾಡಿಕೊಳ್ಳಬೇಕು.

ಕಚ್ಚಿದರೆ 4 ಸೆಕೆಂಡಿನಲ್ಲಿ ಗೋವಿಂದ

ಕಚ್ಚಿದರೆ 4 ಸೆಕೆಂಡಿನಲ್ಲಿ ಗೋವಿಂದ

ಹವಳದ ದಿಬ್ಬಗಳನ್ನ ಮುಟ್ಟೋದಕ್ಕೆ ಹೋದರೆ ಪಟ್ ಎಂದು ಗೊಗೊ ಹೊಡೆಯುತ್ತಿದ್ದ. ಅದರಲ್ಲಿ ಜಾಸ್ತಿ ವಿಷದ ಮೀನುಗಳು, ಏಡಿಗಳಿರುವುದು ಎಂದು. ಅವುಗಳ ನಂಜಿಗೆ ಪರಿಹಾರವಿಲ್ಲ. 4 ಸೆಕೆಂಡಿನಲ್ಲಿ ಪ್ರಾಣ ಹೋಗುತ್ತದೆ. ಮತ್ತೆ ಮತ್ತೆ ಮಾಡೋದಕ್ಕೆ ಹೋದಾಗ ಮೇಲೆ ಎಳೆದುಕೊಂಡು ಬಂದು ಮತ್ತೆ ಮಾಡಿದರೆ ನೀರಿನೊಳಗೆ ಹೋಗುವುದಕ್ಕೂ ಬಿಡುವುದಿಲ್ಲ ಎಂದು ಬೈದು ಮತ್ತೆ ನೀರಿನ ಆಳಕ್ಕೆ ಧುಮುಕಿಸಿದ.

ಮನುಜನನ್ನು ಕುಬ್ಜ ಮಾಡುವ ಸಾಗರ

ಮನುಜನನ್ನು ಕುಬ್ಜ ಮಾಡುವ ಸಾಗರ

ಸಮುದ್ರದಲ್ಲಿ ಒಂದು ಅಗಾಧ ಮೌನವಿರುತ್ತದೆ. ದೇಹ ತುಂಬಾ ಹಗುರವಾಗಿರುತ್ತದೆ. ನೀವು ಕಂಡಿರದ ಲೋಕದಲ್ಲಿ ವಿಹಾರ ಮಾಡುವ ಖುಷಿಯನ್ನ ವರ್ಣನೆ ಮಾಡಲು ಅಸಾಧ್ಯ. ಆಳ ಆಳಕ್ಕೆ ಇಳಿದು ಆಕ್ಟೋಪಸ್ ಕಂಡ ಅಕ್ಷರ ಹೇಳಿದ್ದು "ಆ ಜೀವಿಗಳು ಎಷ್ಟು ಸೂಕ್ಷ್ಮವೆಂದು ತಿಳಿಯಿತು, ಇಲ್ಲಿ ಕೈ ಆಡಿಸಿದರೆ ಅವು ಅಡಗಿಕೊಳ್ಳುತ್ತದೆ. ಇನ್ನು ಹುಚ್ಚುಚ್ಚಾಗಿ ಬನಾನಾ ಬೋಟ್, ಜೆಟ್ ಸ್ಕೀಯಿಂಗ್ ಮಾಡಿದರೆ ಇನ್ನೇನು ಕಥೆ" ಎಂದು ಅಂದುಕೊಂಡು ಮೇಲಕ್ಕೆ ಬಂದನಂತೆ. ಆಕ್ಟೋಪಸ್ ಅನ್ನು ನಾನು ಬಾರ್ಸಿಲೋನಾದ ನನ್ನ ಮನೆಯೊಡತಿ ತನ್ನ ತವದ ಮೇಲೆ ಬೇಯಿಸಿಕೊಂಡು ತಿನ್ನುತ್ತಿದ್ದಿದ್ದನ್ನು ಕಂಡಿದ್ದೆ. ಹವಳದ ದಿಬ್ಬಗಳು ಮನುಷ್ಯನ ಹಾವಳಿಯಿಂದ ಬಣ್ಣ ಕಳೆದುಕೊಂಡು ನಿಂತಿದೆ. ಇನ್ನೂ ಮೂರು ವರ್ಷದ ನಂತರ ಮತ್ತೆ ಅವು ಅದೇ ಅದೇ ಬಣ್ಣಕ್ಕೆ ಮರಳಬಹುದು ನಮ್ಮ ಹುಚ್ಚನ್ನ ನಿಲಿಸಿದ್ದರೆ ಎಂದು ಮಿಯಾ ಹೇಳಿ ನಮ್ಮನ್ನ ಬೀಳ್ಕೊಟ್ಟಳು. ಮೇಲಿರುವುದೇ ನಮಗೆ ಗೊತ್ತಿಲ್ಲ, ಒಳಗಿರುವ ತಿಳಿಯನ್ನ ಹುಡುಕಿದಾಗ ಅದು ನಮ್ಮನ್ನ ಶುದ್ಧಗೊಳಿಸುತ್ತದೆ, ಕುಬ್ಜರನ್ನಾಗಿ ಮಾಡುತ್ತದೆ. ಒಮ್ಮೆ ಸಾಗರದಾಳಕ್ಕೆ ಇಳಿದು ನೋಡಿ, ನಮ್ಮ ಮೌಲ್ಯ ಅರಿವಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Scuba diving sport in Swaraj dweep in Andaman is amazing. It allows you to find the value of humanity beneath the sea. Jayanagarada Hudugi Meghana Sudhindra explores the life in the sea in Havelock Island.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more