ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣತೆ ಹಚ್ಚುತ್ತೇನೆ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ!

By ಜಯನಗರದ ಹುಡುಗಿ
|
Google Oneindia Kannada News

ಚಿಕ್ಕಂದಿನಿಂದ ದೀಪಾವಳಿ ಹಬ್ಬವೆಂದರೇ ಏನೋ ಆಕರ್ಷಣೆ. ದೀಪಗಳ ಸಾಲುಗಳಂತೇನೋ, ಪಟಾಕಿಗಳ ಸದ್ದಿಗಂತೇನೋ, ಅಥವಾ ಮನೆಯಲ್ಲಿ ಮಾಡುತ್ತಿದ್ದ ಬಗೆ ಬಗೆ ಭಕ್ಷ್ಯ ಗಳಿಗಂತೇನೋ ಹಬ್ಬ ಬಹಳ ಇಷ್ಟ.

ಜ್ಞಾನದ ಬೆಳಕಿನ ಉತ್ಸವ ದೀಪಾವಳಿ ಶುಭತರಲಿಜ್ಞಾನದ ಬೆಳಕಿನ ಉತ್ಸವ ದೀಪಾವಳಿ ಶುಭತರಲಿ

ಬೇರೆ ಹಬ್ಬಗಳಂತೆ ದೀಪಾವಳಿಗೆ ಅಷ್ಟೊಂದು ಕಟ್ಟುಪಾಡುಗಳು ಇಲ್ಲದಿದ್ದರಿಂದ ಅದು ಮಕ್ಕಳ ಹಬ್ಬವಾಗಿತ್ತು. ಎಣ್ಣೆ ಸ್ನಾನ ಬೆಳಗ್ಗೇನೆ ಮಾಡಬೇಕೆಂಬುದೊಂದು ಬಿಟ್ಟರೆ, ಮಿಕ್ಕಿದೆಲ್ಲ ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿತ್ತು.

Deepavali, the festival of lights

ದೀಪಾವಳಿ ಶುರು ಆಗುತ್ತಿದ್ದುದೆ ನೀರು ತುಂಬೋ ಹಬ್ಬದಿಂದ. ಶಾಲೆಯಿಂದ ಬರುವಷ್ಟರಲ್ಲಿ ಅಮ್ಮ ಅಜ್ಜಿ ಇಬ್ಬರೂ ಸೇರಿಕೊಂಡು ಮನೆಯ ಎಲ್ಲ ನೀರು ತುಂಬುವ ಜಾಗಗಳನ್ನ ಶುಚಿ ಮಾಡಲು ತಯಾರಾಗುತ್ತಿದ್ದರು. ಅದರಲ್ಲಿ ನನಗೆ ಬಹಳ ಕುತೂಹಲಕಾರಿಯಾಗಿ ಕಾಣುತ್ತಿದ್ದುದು ನಮ್ಮ ಮನೆಯ ಹಂಡೆ.

ಒಲೆ ಉರಿ ಹಾಕಿ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿಯೇ ಅಭ್ಯಾಸ ನಮಗೆಲ್ಲಾ. ಬಾಯ್ಲರ್ ಇದ್ದರೂ ಸಹ ಅದರ ಬಿಲ್ ಗೆ ಹೆದರಿಕೊಂಡು ಮನೆಯಲ್ಲಿ ಬಳಸಿ ಬಿಸಾಡಿದ ಕಾಗದಗಳು, ತೆಂಗಿನ ಚಿಪ್ಪು, ಮತ್ತಿನೇನೂ ಉರಿಸಬಹುದೋ ಅವೆಲ್ಲವನ್ನು ಉರಿಸುತ್ತಿದ್ದೆವು. ಈ ಹಂಡೆಗೆ ವರ್ಷಕೊಮ್ಮೆ ಮಾತ್ರ ಶುಚಿಯಾಗುವ ಭಾಗ್ಯ.

ಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳುಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳು

ಈ ಒಲೆ ನಮ್ಮ ಕಡಿಮೆ ಅಂಕಗಳನ್ನ ತೆಗೆದುಕೊಂಡ ಟೆಸ್ಟ್ ಪೇಪರ್ ಗಳನ್ನ ಬಚ್ಚಿಡುವ ಜಾಗವಾಗಿರುತ್ತಿತ್ತು. ತಂಗಿ ವಿಪರೀತ ಜಾಣೆಯಾಗಿದ್ದರಿಂದ ಅವಳಿಗೆ ಆ ತೊಂದರೆ ಇರುತ್ತಿರಲ್ಲಿಲ್ಲ. ನನಗೆ ಸಂಗೀತ ಸ್ಪರ್ಧೆಗೆ ಹೋಗಿ ನಾಲ್ಕೈದು ಪಾಠಗಳು ಮಿಸ್ ಆಗಿ, ನಾನು ಓದದೆ ಹೋಗಿ ಯೂನಿಟ್ ಟೆಸ್ಟ್ ನಲ್ಲಿ ಯಾವಾಗಲಾದರೂ 10 ಅಂಕಕ್ಕೆ 3 ಅಥವಾ 4 ಬಂತೋ, ಆ ಉತ್ತರ ಪತ್ರಿಕೆ ಮನೆಗೆ ಕೊಟ್ಟರೋ, ಖಂಡಿತಾ ಮರುದಿವಸ ಒಲೆಉರಿಯ ಹಂಡೆಯ ಸ್ನಾನವೇ.

Deepavali, the festival of lights

ಒಲೆಗೂ ಕಾಗದದ ಕಪ್ಪು ಇಷ್ಟವಿಲ್ಲದ್ದಕ್ಕೇನೋ ಅದು ಬೇಕಂತ 10ಕ್ಕೆ 3 ಬಂದ ಜಾಗವನ್ನ ಮಾತ್ರ ಸುಡದೆ ಆಚೆ ಬಿಸಾಡುತ್ತಿತ್ತು. ಅಲ್ಲಿಗೆ ಮನೆಗೆ ಬಂದ ಮೇಲೆ ದೊಡ್ಡ ಪೂಜೆ. ಸಮಾಜಶಾಸ್ತ್ರದಲ್ಲಿ ಖಾಯಂ ಆಗಿ ಕಡಿಮೆ ಅಂಕ ತೆಗೆದುಕೊಳ್ಳುತ್ತಿದ್ದ ನನಗೆ ಈ ಒಲೆ ಸಿಕ್ಕಾಪಟ್ಟೆ ತೊಂದರೆ ಕೊಟ್ಟಿದ್ದಿದೆ. ಈ ಎಲ್ಲ ಸತ್ಯಗಳು ಈ ಹಬ್ಬದ ದಿವಸವೇ ಆಚೆ ಬರುತ್ತಿದ್ದದ್ದು. ಅಲ್ಲಿಗೆ ನೀರು ತುಂಬೋ ಹಬ್ಬ ನನ್ನ ಕಣ್ಣಲ್ಲಿ ನೀರು ತುಂಬೋ ಹಬ್ಬವಾಗುತ್ತಿದ್ದರಲ್ಲಿ ಸಂದೇಹವೇ ಇರಲ್ಲಿಲ್ಲ.

ತಾತ ತೀರ ಕಾಗದವನ್ನ ಸುಡುವುದನ್ನ ನೋಡಿ ಸಿಕ್ಕಾಪಟ್ಟೆ ಬಯ್ಯುತ್ತಿದ್ದರು. ಅವರಿಗೆ ಅನ್ನ ಹಾಕಿದ್ದು, ಈ ಮನೆ ಕಟ್ಟಿದ್ದು ಎಲ್ಲ ಪತ್ರಿಕೆಯಲ್ಲಿ ದುಡಿದಿದ್ದರಿಂದಲೇ ಎಂಬ ಗೌರವ ಬೇರೆ.

ದೀಪಾವಳಿಯ ಹಿಂದಿದೆ ಹಲವಾರು ಪುರಾಣೈತಿಹಾಸಿಕ ಕತೆದೀಪಾವಳಿಯ ಹಿಂದಿದೆ ಹಲವಾರು ಪುರಾಣೈತಿಹಾಸಿಕ ಕತೆ

ಮರುದಿವಸ ನರಕ ಚತುರ್ದಶಿ. ಅವತ್ತು ಪಟಾಕಿಗಳ ವಿಂಗಡನೆ ಆಗುತ್ತಿತ್ತು. ಅಜ್ಜಿ ಬಂದು ತಲೆಗೆ ಸಿಕ್ಕಾಪಟ್ಟೆ ಎಣ್ಣೆ ಮೆತ್ತಿ, ಸೀಗೆಕಾಯಿ ಹಾಕಿ ಗಸಗಸ ಎಂದು ಅಮ್ಮ ತಿಕ್ಕುತ್ತಿದ್ದರು. ಸ್ನಾನ ಪೂಜೆ ಆಗಿ ನರಕ ಚತುರ್ದಶಿಗೆ ಕ್ರಿಷ್ನನ ಹಾಡು ಹಾಡಿಸಿದ ನಂತರ, ನಾನು ತಾತನಿಗೆ "ಇದೇನು ನರಕಕ್ಕೆ ಹೋಗೊ ದಿವಸನ ತಾತ, ನರಕ ಚತುರ್ದಶಿ" ಎಂದು ಪೆದ್ದಾಗಿ ಪ್ರಶ್ನೆ ಕೇಳಿದ್ದೆ.

Deepavali, the festival of lights

ನರಕಾಸುರನ ವಧೆಯಾಗಿದ್ದು, ಸತ್ಯಭಾಮೆ ಅವನ ಜೊತೆ ಇದ್ದದ್ದು ಇವೆಲ್ಲಾ ಕಥೆ ಹೇಳಿದ ನಂತರ, ಹೊಸ ಬಟ್ಟೆ ಹಾಕೊಂಡು, ಪಟಾಕಿಗಳನ್ನ ಮಕ್ಕಳಿಗೆ ವಯಸ್ಸಿಗನುಗುಣವಾಗಿ ಹಂಚುತ್ತಿದ್ದರು. ಬೆಳಗ್ಗೆ ಢಂಢಂ ಪಟಾಕಿ, ಸಂಜೆ ಸುರ್ ಸುರ್ ಬತ್ತಿ, ಹೂ ಕುಂಡ ಅಂಥವುಗಳು. ಈ ಹಬ್ಬಕ್ಕೆ ಮಾತ್ರ ದೊಡ್ಡವರು ಸಣ್ಣವರು ಎಂಬ ವ್ಯತ್ಯಾಸವಿಲ್ಲದೇ ಎಲ್ಲರೂ ಸಿಕ್ಕಾಪಟ್ಟೆ ಜಗಳ ಮಾಡಿ ಪಟಾಕಿ ಕಿತ್ತುಕೊಳ್ಳುತ್ತಿದ್ದದ್ದು.

ನನಗೆ ಸರ ಇಷ್ಟವಾಗುತ್ತಿತ್ತು, ತಂಗಿಗೆ ಬಿಜಲಿ ಸ್ನೇಹಿತೆಯರಿಗೆ ಮತ್ತೊಂದು. ಹೀಗೆ ಇವುಗಳ ಕೊಡುಕೊಳ್ಳುವಿಕೆಯ ನಂತರ ಬೇಜಾರಾದರೆ ಎಲ್ಲ ಪಟಾಕಿಗಳ ಮದ್ದು ತೆಗೆದು ಅದರ ಮೇಲೆ ಲಕ್ಷ್ಮಿ ಪಟಾಕಿಯನ್ನೊ ಅಥವಾ ಆಟಂ ಬಾಂಬನ್ನೋ ಇಟ್ಟು ಒಮ್ಮೆ ತಲೆಹರಟೆ ಮಾಡಲು ಹೋಗಿ ಅದರ ಮೇಲೆ ಗಾಜಿನ ಮುಚ್ಚಳ ಇಟ್ಟು ಅದು ಎಗರಿ ಎಲ್ಲರಿಗೂ ಏಟಾಗಿತ್ತು. ಅದಾದ ನಂತರ ತಾತ ಕಡ್ಡಾಯವಾಗಿ ನಮ್ಮ ಪಟಾಕಿ ಹೊಡೆಯುವ ವೇಳೆ ನಮ್ಮನ್ನ ನೋಡುತ್ತಲೇ ಇರುತ್ತಿದ್ದರು.

ಪಕ್ಕದ ರಸ್ತೆಯ ಹುಡುಗರು ಬಿಜಲಿಯನ್ನು ಕೈಯಲ್ಲಿ ಹಚ್ಚಿ ಬಿಸಾಡಿದ್ದನ್ನ ನೋಡಿ ನಾನು ಮಾಡಲು ಹೋಗಿ ಮೊದಲ ಬಾರಿಗೆ ತಾತನ ಬಳಿ ಸಿಕ್ಕಾಪಟ್ಟೆ ಬೈಸಿಕೊಂಡಿದ್ದೆ. ಇದೆಲ್ಲದರ ನಂತರ ಕೈ ಕಾಲು ತೊಳೆದುಕೊಂಡು ಮನೆಯಲ್ಲಿ ಚೆಂದದ ಊಟ, ನಿದ್ದೆಯಾಗುತ್ತಿತ್ತು. ಸಂಜೆ ಮನೆ ಮಂದಿಯೆಲ್ಲಾ ಸೇರಿ ಸುರ್ ಸುರ್ ಬತ್ತಿ, ಭೂ ಚಕ್ರ, ಹೂ ಕುಂಡ ಎಲ್ಲವನ್ನು ಹೊಡೆಯುತ್ತಿದ್ದೆವು.

Deepavali, the festival of lights

ಅಮಾವಾಸ್ಯೆಗೆ ಪಟಾಕಿಯಿಲ್ಲ ಎಂದು ಅಜ್ಜಿ ಘೋಷಣೆ ಮಾಡುತ್ತಿದ್ದರಿಂದ ಅವತ್ತು ವಿಪರೀತ ತಳಮಳ, ದೀಪ ಮಾತ್ರ ಹಚ್ಚಬೇಕು ಅವತ್ತು ಅದೆಲ್ಲಾ ಮಾಡೊಹಾಗಿಲ್ಲ ಎಂದೆಲ್ಲಾ ಹೇಳಿದಾಗ ವಿಚಿತ್ರ ಕೋಪ. ನಮ್ಮ ಮನೆಯ ಎದುರಿಗಿದ್ದ ಉತ್ತರ ಭಾರತದವರು ಅವತ್ತೆ ಎಲ್ಲಾ ಪಟಾಕಿಗಳನ್ನ ಹೊಡೆಯುತ್ತಿದ್ದರು. ಇದೊಳ್ಳೆ ರಾಮಾಯಣ ಎಂದು ನಾನು ಸುಮ್ಮನಾಗುತ್ತಿದ್ದೆ.

ಆ ರಾತ್ರಿ ಅಜ್ಜಿ ನಮ್ಮ ಮನೆಯ ಹತ್ತಿರ ಇರುವ ಹಸು ಕಟ್ಟುವ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅಜ್ಜಿ ಅವರಿಗೆ ಅರಿಶಿನ ಕುಂಕುಮ ಕೊಟ್ಟು ಸೆಗಣಿಯನ್ನ ತೆಗೆದುಕೊಂಡು ಬರುತ್ತಿದ್ದರು. ನಾನು ಅಜ್ಜಿ ಅದೆಲ್ಲಾ ಕೈಯಲ್ಲಿ ಮುಟ್ತಾರಾ ಎಂದು ಹೌಹಾರಿದ್ದೆ. ಅಜ್ಜಿ "ನಮ್ಮ ಬಿಳಿಕೆರೆ ಮನೆಯಲ್ಲಿ ಎಷ್ಟು ಹಸು ಇತ್ತು ಗೊತ್ತಾ, ಹಸು ದೇವರು ಅದ್ರಲ್ಲೇನು ಬಾ" ಎಂದು ನಾಳೆ ಬಲೀಂದ್ರನ ಕೋಟೆ ಕಟ್ಟೋಕೆ ತೆಗೆದುಕೊಂಡು ಬರುತ್ತಿದ್ವಿ.

Deepavali, the festival of lights

ಬೆಳಗ್ಗೆ ಬಲಿ ಪಾಡ್ಯಮಿ, ಬಲೀಂದ್ರ ಚಕ್ರವರ್ತಿಯನ್ನ ವಾಮನ ತ್ರಿವಿಕ್ರಮನಾಗಿ ಪಾತಾಳಕ್ಕೆ ತಳ್ಳಿದ್ದರಿಂದ, ಅವನ ಪ್ರಜೆಗಳನ್ನ ಮತ್ತೆ ನೋಡೋಕೆ ಇದೊಂದು ದಿವಸ ಅನುವು ಮಾಡಿಕೊಟ್ಟಿದ್ದರಿಂದೇನೋ ಅವನಿಗೋಸ್ಕರ ಕೋಟೆ ಕಟ್ಟಿ, ರಂಗೋಲಿ ಇಟ್ಟು ಸ್ವಾಗತ ಮಾಡುತ್ತಿದ್ದರು. ದುರಹಂಕಾರ ತೋರಿಸಿದ್ದರೆ ಬಲೀಂದ್ರನ ಹಾಗೆ ನಾವು ಪಾತಾಳಕ್ಕೆ ಹೋಗಬೇಕೆಂದು ತಾತ ನುಡಿಯುತ್ತಿದ್ದರು.

Deepavali, the festival of lights

ಸ್ವಲ್ಪ ದೊಡ್ಡವರಾದ ಮೇಲೆ ಪಟಾಕಿಗಳನ್ನ ಹೊಡೆಯುವುದು ಕಡಿಮೆ ಮಾಡಿದ್ವಿ, ತಾತ ಸಹ ಸ್ವಲ್ಪ ಸ್ವಲ್ಪವೇ ಹಣತೆಯ ಮಹತ್ವ, ಕತ್ತಿಲಿನಿಂದ ಬೆಳಕಿಗೆ ಹೊರಡುವ ಮಾರ್ಗಗಳನ್ನ ತಿಳಿಸುತ್ತಿದ್ದರು. ಒಂದೈದು ವರ್ಷದಿಂದ ಪಟಾಕಿಗಳು ಮನೆಗೆ ಬರುತ್ತಿಲ್ಲ, ಹಣತೆಗಳನ್ನ ವಿಪರೀತ ಹಚ್ಚುತ್ತೇವೆ, ಇನ್ನು ಹೊಸ ಮನೆಗೆ ಬಂದ ನಂತರವೂ ದೊಡ್ಡ ಹಂಡೆಯನ್ನ ಕೊಡಲು ಮನಸಾಗದೆ ಅದು ಈಗ ಖಾಯಂ ಶೋ ಪೀಸ್ ಆಗಿ ಅದರ ಮೇಲೂ ದೀಪಗಳನ್ನ ಹಚ್ಚುತ್ತೇವೆ. ದೀಪಾವಳಿ ಮನದ ಅಂಧಕಾರವನ್ನ ಕಿತ್ತೊಗೆದು ಬೆಳಕನ್ನು ಬೀರಲಿ ಎಂದಾಶಿಸುತ್ತೇನೆ. ಹೋದ ವರುಷ ಬಾರ್ಸಿಲೋನದಲ್ಲಿ ಇದ್ದಾಗ ಮಿಸ್ ಆದ ದೀಪಾವಳಿ ಈ ವರ್ಷ ಬಹಳ ವೈಭವದಿಂದ ಆಚರಿಸುವ ಆಸೆ.. ನೋಡೋಣ.. ಹ್ಯಾಪಿ ಹಬ್ಬ!

English summary
Deepavali or Diwali is one of the favourite festivals of Hindus, especially for the children. Taking oil bath, bursting firecrackers, eating sweets, lighting lamps, meeting relatives... Let's celebrate the festival of lights and be safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X