• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಷ್ಟಾವಧಾನದಲ್ಲಿ ಇಷ್ಟವಾಗುವುದು ಅಪ್ರಸ್ತುತ ಪ್ರಸಂಗ

By ಜಯನಗರದ ಹುಡುಗಿ
|

ಒಂದು 15 ವರ್ಷದ ಹಿಂದಿನ ಮಾತು. ಉದಯ ಟಿವಿಯಲ್ಲಿ ಪರಿಚಯ ಎಂಬ ಕಾರ್ಯಕ್ರಮ ಬರುತ್ತಿತ್ತು. ಅಪ್ಪನ ಸಂದರ್ಶನವೂ ಮಾಡಿದ್ದರು. ಅದಾದ ಕೆಲವು ದಿವಸದ ಹಿಂದೆಯೋ ಅಥವಾ ನಂತರವೋ ಶತಾವಧಾನಿ ಡಾ ಆರ್ ಗಣೇಶ್ ಅವರ ಸಂದರ್ಶನವೂ ಇದೆ ಎಂದು ಪ್ರೋಮೋ ಬಂತು. ಗಣೇಶ್ ಅಂಕಲ್ ಎಂದು ವಿಚಿತ್ರ ಖುಷಿ.

ಅವರ ಹೆಸರಿಗಿಂತ ಅವರ ಬಿರುದೇ ದೊಡ್ಡದು, ಅಥವಾ ಅದರ ಅರ್ಥವೂ ಗೊತ್ತಿರದ ವಯಸ್ಸು. ಅವರಾಡಿದ್ದ ಪ್ರತಿ ಮಾತೂ ಆತ್ಯಂತ ಎಚ್ಚರದಲ್ಲಿ ಕೇಳಿಸಿಕೊಂಡೆ. ಎಲ್ಲಿ ಇಂಜಿನಿಯರಿಂಗ್, ಎಲ್ಲಿ ಮೆಟಲರ್ಜಿ, ಎಲ್ಲಿ ಕನ್ನಡ, ಎಲ್ಲಿ ಸಂಸ್ಕೃತ, ಎಲ್ಲಿ ಪದ್ಯ ಗದ್ಯ ಯಾವುದು ಎಲ್ಲಿ ಕನೆಕ್ಟ್ ಆಗುತ್ತದೆ ಎಂಬ ಸಂಶಯ ಮೂಡುತ್ತಲೇ ಇತ್ತು. ಒಂದಷ್ಟು ಬಾರಿ ಅಂಕಲ್ ಅಪ್ಪನ ಗೆಳೆಯರಾದ ಕಾರಣ ಮನೆಗೆ ಬರುತ್ತಿದ್ದರು. ಬಂದಾಗ ಅಷ್ಟೆ ನಮ್ರತೆಯಿಂದ ಪ್ರೀತಿಯಿಂದ ಮಾತಾಡಿಸಿದ್ದು ಬಿಟ್ಟರೆ ವಿದ್ವಾಂಸರ ಹತ್ತಿರ ಮಾತಾಡಿದ್ದು ಕಡಿಮೆ.

ಮಂಕುತಿಮ್ಮನ ಕಗ್ಗ ಮತ್ತು ಪಕೋಡಪ್ರಿಯ ಗುಂಡಪ್ಪ

ಮೊದಲ ಬಾರಿಗೆ ಅವಧಾನ ನೋಡಿದ್ದು ನಾನು 8ನೇ ತರಗತಿಯಲ್ಲಿದ್ದಾಗ ಅನ್ನಿಸ್ಸುತ್ತೆ. ಆಗ ವಿದ್ವಾನ್ ವೇಣುಗೋಪಾಲರ ಮನೆಯಲ್ಲಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು, ರಾಘವೇಂದ್ರ ಹೆಗಡೆ ಮುಂತಾದವರೆಲ್ಲಾ ಇದ್ದರು. ಅರ್ಥವಾದದ್ದು ಕಡಿಮೆಯೇ.

ಅವಧಾನವೆಂದರೆ ಏಕಾಗ್ರತೆ. ಎಂಟು ದಿಕ್ಕುಗಳಿಂದ ಬರುವ ಪ್ರಶ್ನೆಗೆ ಅಷ್ಟಾವಧಾನವೆಂದು. ಹತ್ತು ದಿಕ್ಕುಗಳಿಂದ ಬರುವ ಪ್ರಶ್ನೆಗಳಿಗೆ ದಶಾವಧಾನವೆಂದೋ ಹಾಗೆಯೇ ಶತಾವಧಾನ, ಸಹಸ್ರಾವಧಾನ ನಡೆಯುತ್ತದೆ. ಮನಸ್ಸಿನ ಏಕಾಗ್ರತೆ, ಸಮಚಿತ್ತ, ಒಟ್ಟೊಟ್ಟಿಗೆ ಕೆಲಸಗಳನ್ನ ಮಾಡುವುದು ಎಲ್ಲವನ್ನ ಪರೀಕ್ಷೆ ಮಾಡುವ ಕ್ರಮವಂತು ಬಹಳ ಚೆನ್ನಾಗಿಯೇ ಇರುತ್ತದೆ. ಇಲ್ಲಿ ಪೃಚ್ಛಕ ಅಂದರೆ ಪ್ರಶ್ನೆ ಕೇಳುವವರು. ಎಂಟು ಜನ ವಿಧವಿಧವಾದ ಪ್ರಶ್ನೆಗಳನ್ನ ಕೇಳುತ್ತಾರೆ. ಮಧ್ಯೆ ಮಧ್ಯೆ ಅವರ ಏಕಾಗ್ರತೆ ಭಂಗ ಮಾಡುವವರೊಬ್ಬರು.

ಅಷ್ಟಾವಧಾನವೊಂದರಲ್ಲಿ ಅಷ್ಟ-ಅಂದರೆ ಎಂಟು ಜನ ಪೃಚ್ಛಕರಿರುತ್ತಾರೆ. ಐದು ಸುತ್ತಿನಲ್ಲಿ ನಡೆಯುವ ಅವಧಾನದಲ್ಲಿ ಮೊದಲ ಸುತ್ತು ಎಲ್ಲ ಪೃಚ್ಛಕರೂ ಒಬ್ಬರಾದ ನಂತರ ಒಬ್ಬರು ಸರದಿಯಲ್ಲಿ ಅವಧಾನಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಾರೆ. ಹಾಗೆಯೇ ಅವರು ಪ್ರಶ್ನೆ ಕೇಳುತ್ತಿದ್ದಂತೆಯೇ ಅವಧಾನಿಗಳು ಒಂದೊಂದು ಸಾಲು ಪದ್ಯರೂಪದಲ್ಲಿ ಉತ್ತರವನ್ನು ಕೊಡುತ್ತಾ ಹೋಗುತ್ತಾರೆ.

ಬೆಂಗಳೂರಿನ ಯುವ ಸಾಹಿತ್ಯ ಪ್ರೇಮಿಗಳ ಕನ್ನಡ 'ಕಹಳೆ'!

ಮುಂದಿನ ಸುತ್ತುಗಳಲ್ಲಿ ಎಲ್ಲ ಪ್ರಶ್ನೆಗಳನ್ನೂ ಸರಿಯಾಗಿ ನೆನಪಿನಲ್ಲಿ ಇಟ್ಟುಕೊಂಡು ಅವಧಾನಿಗಳು ಉಳಿದ ಮೂರು ಸಾಲಿನ ಉತ್ತರ ಕೊಡಬೇಕು. ಈ ನಾಲ್ಕು ಸುತ್ತುಗಳು ಪೂರ್ಣವಾದರೆ ಕೊನೆಗೆ ಐದನೇ ಸುತ್ತಿನಲ್ಲಿ ಆ ನಾಲ್ಕೂ ಸಾಲುಗಳನ್ನು ಒಟ್ಟುಗೂಡಿಸಿ ಹೇಳಬೇಕು. ಇದಕ್ಕೆ ಧಾರಣ ಎನ್ನುತ್ತಾರೆ. ಅವಧಾನಿಗಳು ಪದ್ಯಗಳನ್ನು ರಚಿಸಲು ಯಾವ ಬರಹದ ಸಾಮಗ್ರಿಗಳನ್ನೂ ಬಳಸುವಂತಿಲ್ಲ. ಅವರು ಇವಿಷ್ಟನ್ನೂ ಮನಸ್ಸಿನಲ್ಲೇ ನಿರ್ವಹಿಸಬೇಕು.

ನನಗೆ ಅಷ್ಟಾವಧಾನದಲ್ಲಿ ಇಷ್ಟವಾಗುವುದು ಅಪ್ರಸ್ತುತ ಪ್ರಸಂಗ. ಹೆಸರೇ ಹೇಳುವಂತೆ ಅನಾವಶ್ಯಕವಾಗಿ ಯಾವಾಗ ಬೇಡವೋ ಅವಧಾನಿಯ ಏಕಾಗ್ರತೆ ಭಂಗ ಮಾಡುವುದಕ್ಕೆ ಇರೋದು. ಒಮ್ಮೊಮ್ಮೆ ಪ್ರಶ್ನೆಗಳು ಅಸಂಬದ್ಧ, ತೀರ ಪರ್ಸನಲ್ ಆಗಿದ್ರೂ ನಕ್ಕು ಉತ್ತರ ಕೊಡಬೇಕು. ಒಂದು ಅವಧಾನದಲ್ಲಿ "ಅವಮಾನ ಎಂದರೆ ಮಾನ ಹೋದಂತೆ, ಅವಧಾನ ಎಂದರೆ ಏನು" ಎಂದು ಕೀಟಲೆ ಪ್ರಶ್ನೆ ಕೇಳಿದರೂ ನಗುವ ಉತ್ತರ ಕೊಡಬೇಕು. ಒಮ್ಮೊಮ್ಮೆ ಅವಧಾನಿಗಳೂ ಕೀಟಲೆಗಿಳಿಯುತ್ತಾರೆ.

ಮತ್ತೂ ಏಳು ಜನರು ಸಾಹಿತ್ಯದ ಪರಮ ಶಿಷ್ಯರು. ವ್ಯಾಕರಣದ ಪರಮ ಗುರುಗಳು. ಒಬ್ಬರು ಉದ್ದಿಷ್ಟಾಕ್ಷರಿ ಪ್ರವೀಣರು. ಅಂದರೆ ಪೃಚ್ಛಕ ಒಂದು ಸಂದರ್ಭವನ್ನು ಕೊಟ್ಟು ಛಂದೋಬದ್ಧ ಪದ್ಯ ರಚಿಸಿಕೊಳ್ಳಲು ಹೇಳುತ್ತಾರೆ. ಆಮೇಲೆ ಅವಧಾನಿಗಳು ಬೇರೆಯವರ ಪ್ರಶ್ನೆಗೆ ಉತ್ತರಿಸುತ್ತಿರುವಾಗ ಮಧ್ಯದಲ್ಲಿ ಯಾವುದೊ ಒಂದು ಸಾಲಿನ ಯಾವುದಾದರೂ ಒಂದು ಅಕ್ಷರ ಕೇಳುತ್ತಾರೆ.

ಸಂಖ್ಯಾಬಂಧದಲ್ಲಿ ಸಂಖ್ಯೆಗಳು, ಚೌಕದಲ್ಲಿ ಎಲ್ಲಿ ಕೂಡಿದರೂ ಇಂತಿಷ್ಟು ಸಂಖ್ಯೆ ಬರಬೇಕು. ಯಾವ ಬಾಕ್ಸ್ ನಲ್ಲಿ ಯಾವ ಸಂಖ್ಯೆ ಬರಬೇಕು ಎಂದು ಯಾವಾಗಬೇಕಾದರೂ ಕೇಳಬಹುದು.

ಇನ್ನು ದತ್ತಪದಿಯಲ್ಲಿ ಪ್ರತಿ ಸಾಲಿಗೂ ಇಂತಹ ಶಬ್ದ ಇರಬೇಕೆಂದು ನಾಲ್ಕು ಶಬ್ದ ಕೊಡುತ್ತಾರೆ. ಸಂದರ್ಭವನ್ನೂ ಕೊಡುತ್ತಾರೆ. ಅವರು ಕೊಡುವ ಶಬ್ದ ಮತ್ತು ಸಂದರ್ಭಕ್ಕೆ ಯಾವ ಸಂಬಂಧವೂ ಇರುವುದಿಲ್ಲ. ಈ ರೀತಿ ತೊಡಕಿನಲ್ಲಿ ಸಿಕ್ಕದೆ ಒಂದೊಂದು ಸಾರಿ ಒಂದೊಂದು ಸಾಲನ್ನು ಹೇಳಿ ಕೊನೆಯಲ್ಲಿ ಇಡೀ ಶ್ಲೋಕವನ್ನು ಧಾರಣೆ ಮಾಡಬೇಕು. ಮಗ, ಮಚ್ಚ, ಲೋಫರ್ ಮತ್ತು ಐಲು ಶಬ್ದವನ್ನ ಕೊಟ್ಟು ಶ್ಯಾಮ ಮತ್ತು ಕುಚೇಲನ ಸ್ನೇಹವನ್ನ ವರ್ಣನೆ ಮಾಡುವ ಸಂದರ್ಭ ಕೊಡುತ್ತಾರೆ. ಎಲ್ಲಿ ದೇವರು ಎಲ್ಲಿ ಲೋಫರ್ ಅಥವಾ ಐಲು ಎಂಬ ಶಬ್ದ. ಇದೇ ದೊಡ್ಡ ಸವಾಲು.

ಆಶುಕವಿತ್ವದಲ್ಲಿ ನಾಲ್ಕು ಸುತ್ತುಗಳಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳುವ ಅವಕಾಶ ಇರುತ್ತದೆ. ಇದಕ್ಕೆ ಧಾರಣೆ ಇರುವುದಿಲ್ಲ. ವರ್ಣನೆಯಲ್ಲಿ ಒಂದು ಸುತ್ತಿನಲ್ಲಿ ಒಂದು ಪಾದವನ್ನು ಮಾತ್ರ ಹೇಳಿ ಕೊನೆಯಲ್ಲಿ ಪದ್ಯವನ್ನು ಧಾರಣೆಯಿಂದ ಹೇಳಬೇಕು.

ಇನ್ನು ಕಾವ್ಯವಾಚನದಲ್ಲಿ ಮಹಾಕಾವ್ಯದ ಶ್ಲೋಕವೊಂದನ್ನು ಉದ್ಧರಿಸಿ ಅದು ಯಾರು ಯಾರಿಗೆ ಹೇಳಿದ್ದು, ಯಾವ ಕಾವ್ಯದ್ದು ಎಂದೆಲ್ಲ ಕೇಳುತ್ತಾರೆ. ಅವಧಾನಿಗಳು ಆ ಕಾವ್ಯವನ್ನು ಗುರುತಿಸಿ ಅದರ ಸಂದರ್ಭವನ್ನು ವಿವರಿಸಿ ವ್ಯಾಖ್ಯಾನ ಮಾಡಬೇಕು.

ಇನ್ನು ನಿಷೇಧಾಕ್ಷರಿಯೋ ಒಂದು ತರಹ ತೀರ ಪಿತ್ತ ನೆತ್ತಿಗೇರಿಸುವ ಕೆಲಸ. ನಾನು ಎನ್ನಲು ಹೋಗುವಾಗ ಮೊದಲಕ್ಷರ ನಾ ಅಂದಾಗ ನು ನಿಷೇಧ ಮಾಡುವ ಪ್ರಕ್ರಿಯೆ. ಈ ವಿಭಾಗದಲ್ಲಿ ಅವಧಾನಿಗಳು ಪೃಚ್ಛಕರು ಕೊಟ್ಟ ವಸ್ತುವಿಷಯವನ್ನು ಆಧರಿಸಿ ಪದ್ಯ ರಚಿಸಲು ಪ್ರಾರಂಭಿಸಬೇಕು. ಇದರಲ್ಲಿ ಪೃಚ್ಛಕರು ಅವಧಾನಿಗಳ ಪ್ರತಿ ಅಕ್ಷರಕ್ಕೆ ನಿಷೇಧವನ್ನು ಒಡ್ಡುತ್ತಾರೆ. ಹೀಗೆ ನಾಲ್ಕು ಸುತ್ತುಗಳಲ್ಲೂ ಮುಂದುವರೆದ ಮೇಲೆ ಅವಧಾನಿಗಳು ಸಾರ್ಥಕವಾದ ಪದ್ಯ ರಚನೆ ಮಾಡಿರಬೇಕು.

ಇನ್ನು ಸಮಸ್ಯಾ ಪೂರಣದಲ್ಲಿ ಪದ್ಯದ ಕೊನೆ ಸಾಲನ್ನು ಕೊಡುತ್ತಾರೆ. ಅವಧಾನಿಗಳು ಉಳಿದ ಮೂರು ಸಾಲುಗಳನ್ನು ರಚಿಸಿ ಅರ್ಥವತ್ತಾದ ಪದ್ಯ ರಚನೆ ಮಾಡಿ ಉತ್ತರ ನೀಡಬೇಕು. ಇಲ್ಲಿರುವ ಪ್ರಶ್ನೆಗಳಾದರೋ ತೀರ ಅಸಂಬದ್ಧವಾಗಿರುತ್ತದೆ. ಅವನ್ನು ಸರಿಯಾದ ರೀತಿಯಲ್ಲಿ ಪರಿಹರಿಸಬೇಕು. ಅಲ್ಲೆಲ್ಲೋ ರಾಮನಿಗೆ ದ್ರೌಪದಿಗೆ ಭೇಟಿ ಸಂದರ್ಭವೇರ್ಪಡಿಸಿದ ಹಾಗೆ.

ಒಮ್ಮೊಮ್ಮೆ ಇದೇ ಛಂದಸ್ಸು, ಇಷ್ಟೆ ಗಣಗಳು, ಇದೇ ಅಕ್ಷರ ಎಂದೆಲ್ಲಾ ಹಾಕಿ ಸವಾಲೊಡ್ಡಬಹುದು. ಓಪನ್ ಗ್ರೌಂಡ್ ನಲ್ಲಿ ಬೌಂಡರಿ ಬಾರಿಸಿದ ಹಾಗೆ.

ಇಂತಹ ಸ್ವಾರಸ್ಯವನ್ನ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ 2 ವಾರಗಳ ಹಿಂದೆ ಕಂಡೆ. 6 ಘಂಟೆಯ ಕಾರ್ಯಕ್ರಮಕ್ಕೆ 5.55ಕ್ಕೆ ಹೋದಾಗ ಆಚೆಯೂ ಒಂದೆರಡು ಸೀಟುಗಳು ಕಂಡದ್ದು ನಿಜವಾಗಲೂ ಖುಷಿಯೆನಿಸಿತು. ಅಲ್ಲೆಲ್ಲೋ ಟೀವಿಯಲ್ಲಿ ನಡೆಯುವ ಹುಚ್ಚರ ಸಂತೆಗಿಂತ ಇದು ವಾಸಿ ಎಂದುಕೊಂಡು ಜನ ಬಂದದ್ದು ನಾವು ಮುಂದಕ್ಕೆ ಹೋಗುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shatavadhani R. Ganesh is a practitioner of the art of avadhana, a polyglot, an author in Sanskrit and Kannada and an extempore poet in multiple languages. He has performed more than 1000 avadhanas, in Kannada, Sanskrit, Telugu, and Prakrit. Meghana Sudhindra shares her experience of listening to Shatavadhani Ganesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more