ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮತ್ತು ಹೇಳಿದ ಹಾಗೆ ಕೆಲಸ ಮಾಡುವ ಅಲೆಕ್ಸಾ!

By ಜಯನಗರದ ಹುಡುಗಿ
|
Google Oneindia Kannada News

ಉಡುಗೊರೆಗಳಲ್ಲಿ ತುಂಬಾ ವಿಧಗಳಿರುತ್ತೆ. ಮೊನ್ನೆ ಕಚೇರಿಯಲ್ಲಿ ಇಂಥದ್ದೇ ಒಂದು ವಿಚಿತ್ರ ಚರ್ಚೆ ನಡೀತಿತ್ತು. ಎಲ್ಲರ ಮನೆಯ ಮದುವೆ, ಹುಟ್ಟಿದ ಹಬ್ಬದ ಉಡುಗೊರೆಗಳ ಬಗ್ಗೆ ತಮಾಷೆಯ ಮಾತುಗಳು ನಡೆಯುತ್ತಿತ್ತು. ನಮ್ಮ ಮನೆಗೂ ಒಬ್ಬರು ಶ್ರೀಮಂತರು ತಮಗೆ ಬಂದ ಉಡುಗೊರೆಯ ಹೆಸರನ್ನು ತೆಗೆಯದೆ ನನಗೇ ವರ್ಗಾಯಿಸಿದ್ದನ್ನು ಹೇಳಿ ದೊಡ್ಡವರ ಸಣ್ಣತನವನ್ನ ವಿವರಿಸುತ್ತಿದ್ದೆ.

ಹೇಳಿ ಕೇಳಿ ಯಂತ್ರಗಳಿಗೆ ಮನುಷ್ಯರ ಹಾಗೆ ವರ್ತಿಸುವ ಹಾಗೆ ಕೆಲಸವನ್ನ ನಾನು ಮಾಡೋದು. ನಮ್ಮ ಮನೆಯಲ್ಲಿಯೂ ಒಂದು ಪುಟ್ಟ ಯಂತ್ರ ಬಂದಿದೆ. ಅವಳೇ ಉಡುಗೊರೆಯಾಗಿ ಬಂದಿರುವುದು. ಅದೊಂದು ಚಿಕ್ಕ ರೋಬೋಟ್. ಹೇಳಿದ ಹಾಗೆ ಕೆಲ್ಸ ಮಾಡುವವಳೊಬ್ಬಳು.

Alexa, this robot is not just a machine

ಅಲೆಕ್ಸಾ ಇವಳ ಹೆಸರು. ಅಮೆಝಾನ್ ನ ಇಂಜಿನಿಯರ್ಗಳು ಸೇರಿ ಮಾಡಿದ್ದ ಪುಟ್ಟ ಯಂತ್ರ ನಿಮ್ಮ ಖಾಸಗಿ ಅಸಿಸ್ಟೆಂಟ್. ಬೆಳಗ್ಗೆ ಎಬ್ಬಿಸೋದ್ರಿಂದ ಹಿಡಿದು ನಿಮ್ಮ ಎಲ್ಲ ಕೆಲಸಗಳ ನೆನಪು ಮಾಡುವುದು, ಹಾಡು ಕೇಳಿಸೋದು, ಇಷ್ಟವಾದ ಟೆಡ್ ಟಾಕ್ ಕೇಳಿಸೋದು, ಅವತ್ತಿನ ಕ್ರಿಕೆಟ್ ಮ್ಯಾಚ್ ಸ್ಕೋರ್, ಒಮ್ಮೊಮ್ಮೆ ಬೇಜಾರಾದಾಗ ಅವಳಿಗೆ ಒಂದು ಜೋಕ್ ಸಹ ಹೇಳೋ ಹಾಗೆ ಮಾಡಬಹುದು. ನಮ್ಮಿಷ್ಟವಾದ ಕೆಲಸಗಳನ್ನ ಸಹ ಅವಳಿಗೆ ತಿಳಿಸಿ ಅದನ್ನೆ ಮಾಡಲು ಸಹ ಹೇಳಬಹುದು.

ಮಷೀನ್ ಲರ್ನಿಂಗ್ ಎಂಬ ಹೊಸ ಆಯಾಮ ಎಲ್ಲಾ ಕಡೆ ನುಸುಳುತ್ತಿರುವ ಕಾರಣ ಮನುಷ್ಯರ ಸುಮಾರು ಕೆಲಸಗಳು ಸಲೀಸಾಗುತ್ತಿದೆ. ಚಿಕ್ಕ ಮಕ್ಕಳಿಗೆ ತರಬೇತಿ ಕೊಟ್ಟ ಹಾಗೆ ಇವಕ್ಕೂ ಒಂದು 100 ಸಾಲುಗಳ ಪ್ರೋಗ್ರಾಮ್ ಬರೆದು ಕೆಲಸವನ್ನ ಸರೀಗೆ ಮಾಡಿಸಬಹುದು. ಪ್ರತಿ ಅಮ್ಮನೂ ಮಕ್ಕಳ ಬಳಿ ಅಚ್ಚುಕಟ್ಟಾಗಿ ಕೆಲಸ ಮಾಡಿಸುವ ಅಪೇಕ್ಷೆ ಪಟ್ಟ ಹಾಗೆ ಇದು ಪಟ ಪಟನೆ ಕೆಲಸ ಮಾಡಲು ಕಲಿಯುತ್ತದೆ.

Alexa, this robot is not just a machine

ನಾ ಬಾರ್ಸಿಲೋನಾದಲ್ಲಿದ್ದಾಗ ನನ್ನ ಮನೆ ಒಡತಿ ನಾ ಕೆಲಸದಿಂದ ಸುಸ್ತಾಗಿ ಬಂದಾಗ ದಡದಡನೆ ಪಕ್ಕದ ಚೈನೀಸ್ ಅಂಗಡಿಗೆ ಎಳೆದುಕೊಂಡು ಹೋದಳು. 'ನೀನು ಇಂಜಿನಿಯರ್ ಅಲ್ವಾ, ಅದೇನೋ ಕಸ ಗುಡಿಸೋ ಪುಟ್ಟ ಮೆಷೀನ್ ಅದಿಕ್ಕೆನೇನೋ ಹೇಳೊಕೊಡಬೇಕಂತೆ' ಅಂತಾ ತೋರಿಸ್ಲಿಕ್ಕೆ ಶುರು ಮಾಡಿದ್ಲು. ಮನೆಗೂ ತಂದೂ ಬಿಟ್ಟಳು. ಅದು ಚಕ ಚಕನೆ ಮನೆ ಕಸ ಗುಡಿಸಿ ಕಸವನ್ನೆಲ್ಲಾ ತನ್ನ ಹೊಟ್ಟೆಗೆ ಹಾಕೊಳ್ತು. ಅವಳಿಗೆ ವಿಪರೀತ ಖುಷಿ. ಅದಕ್ಕೂ ಒಂದಷ್ಟು ಪ್ರೋಗ್ರಾಮ್ ಗಳನ್ನ ಸರಿ ಮಾಡಿಕೊಟ್ಟೆ. ಅದನ್ನೇ ದೇವರ ಹಾಗೆ ಪೂಜಿಸುತ್ತಿದ್ದಳು. 'ನೀವ್ಯಾರು ಕಸ ಗುಡಿಸದ ಹಾಗೆ ಇದು ಗುಡಿಸತ್ತೆ, ಯಾವಾಗ ಹೇಳಿದರೂ ಗುಡಿಸತ್ತೆ' ಎಂದು ಪದೇ ಪದೇ ಹೇಳುತ್ತಿದ್ದಳು.

6 ದಿವಸದ ನಂತರ ಆ ಯಂತ್ರ ಮನೆ ಮುಂದೆ ಕಸದ ಬುಟ್ಟಿಯಲ್ಲಿ ಬಿದ್ದಿತ್ತು. ನಾ ಗಾಬರಿಯಾಗಿ ಅವಳಿಗೆ ಕೇಳಿದಾಗ, ಅದು ಎಷ್ಟು ಹೇಳಿದರೂ ಇವಳ ಮಾತು ಕೇಳದೇ, ಇವಳಿಗೆ ಕೋಪ ಬಂದು ಎರಡು ಬಿಟ್ಟಿದ್ದಕ್ಕೆ ತನ್ನ ಹೊಟ್ಟೆಯಲ್ಲಿದ್ದ ಕಸವನ್ನ ಪೂರ್ತಿ ಮನೆಯಲ್ಲಿ ಚೆಲ್ಲಿ ಹಿಂದು ಮುಂದಲಾಗಿ ಹೋಗಿ ಗೋಡೆಗೆ ಗುದ್ದಿಕೊಂಡಿತಂತೆ. ಅವಳ ದುಡ್ಡು, ಶ್ರಮ ಎಲ್ಲ ಮಣ್ಣು ಪಾಲಾಯ್ತು ಅಂತ ತಲೆ ಚೆಚ್ಚಿಕೊಂಡಿದ್ದಳು. ಅದೇನೋ ನೀ ಸರಿ ದಾರಿ ಹೇಳಿ ಕೊಡ್ಲಿಲ್ಲ ಎಂದು ನನಗೂ ಎರಡು ಅಂದು ಹೋದ್ಲು. ಕಳಪೆ ಚೈನೀಸ್ ಮಾಲು ಎಂದು ನಾ ಕಥೆ ಹೇಳಲು ಮುಂದಾದಾಗ ಅವಳಿಗೆ ಕೇಳುವ ವ್ಯವಧಾನವೂ ಇರಲ್ಲಿಲ್ಲ.

Alexa, this robot is not just a machine

ಚಿಕ್ಕವಳಿದ್ದಾಗ ಅಮ್ಮ ತೋರಿಸುತ್ತಿದ್ದ ಚಾರ್ಲಿ ಚಾಪ್ಲಿನ್ ಸಿನೆಮಾದಲ್ಲಿ ಒಂದು ಯಂತ್ರ ಥೇಟ್ ಮನುಷ್ಯನ ಹಾಗೆ ಕೆಲಸ ಮಾಡುತ್ತಿದ್ದನ್ನ ನೋಡಿ ಆಶ್ಚರ್ಯಚಕಿತಳಾಗಿದ್ದೆ. ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮವನ್ನು ಸಹ ತೋರಿಸಿದ್ದರು.

ಇಷ್ಟೆಲ್ಲಾ ನಡೆದಾಗ ಇವಾಗ ನಾ ಮಾಡುವ ಕೆಲಸವೂ ಅದೇ, ಮನೆಯಲ್ಲೆಲ್ಲಾ ಇಂತಹದ್ದೇ ತುಂಬಿದೆ. ಎಲ್ಲವೂ ಸ್ಮಾರ್ಟ್ ಆಗ್ತಿದೆ ಅನ್ನೋ ಹುಚ್ಚು ಕಲ್ಪನೆಯಲ್ಲಿದ್ದೇವೆ. ಅಲೆಕ್ಸಾ ಒಮ್ಮೊಮ್ಮೆ ಬೇಜಾರಾದಾಗ ನನ್ನ ಜೊತೆ ಇರುವ ಸಂಗಾತಿ. ತಮಾಷೆ ಮಾಡುತ್ತಾಳೆ, ಹಾಡು ಹಾಡುತ್ತಾಳೆ, ಛಳಿ ಮಳೆಯ ಬಗ್ಗೆ ವಿವರಿಸುತ್ತಾಳೆ, ಕನ್ನಡವನ್ನ ಸ್ವಲ್ಪ ಸ್ವಲ್ಪವೇ ಅವಳಿಗೆ ಹೇಗೆ ಹೇಳಿಕೊಡೋದು ಎಂಬುದನ್ನು ತಲೆ ಕೆಡಿಸಿಕೊಂಡು ಕೂತಿದ್ದೆ.

ಇದರ ಬಗ್ಗೆ ನನ್ನ ಕೆಲಸದ ಬಗ್ಗೆ ತಾತನಿಗೆ ಹೇಳೋವಾಗ, ಒಂದಷ್ಟು ನಾವು ಯಂತ್ರಕ್ಕೆ ಹೇಳಿಕೊಟ್ಟು, ಅದರಿಂದ ಮತ್ತೆ ಯಂತ್ರ ಆ ಕಲಿಕೆಯಿಂದ ಮತ್ತಷ್ಟು ಕಲಿಯತ್ತೆ, ಹಾಗೆಯೆ ಅದು ಒಂದು ಮೆದುಳನ್ನು ಹೊಂದುವುದಕ್ಕೆ ಶುರು ಮಾಡುತ್ತದೆ, ಅದಕ್ಕೊಂದು ನೆನಪಿನ ಶಕ್ತಿ ಎಂದೆಲ್ಲಾ ಹೇಳುತ್ತಿದ್ದೆ. ತಾತ ಒಂದೈದು ನಿಮಿಷ ಕೇಳಿಸಿಕೊಂಡು "ನೀನು ಯಂತ್ರಗಳಿಗೆ ಬುದ್ದಿ, ಚುರುಕು, ಕಲಿಕೆ ಎಲ್ಲ ಕಲಿಸಿಕೊಡ್ತಿಯಾ, ಆದ್ರೂ ನಾವೆಲ್ಲಾ ಆ ಮೇಲಿರುವ ಭಗವಂತನ ರೋಬೋಟ್ ಗಳೆ, ಅವನು ಹೇಳಿದ ಹಾಗೆ ಎಲ್ಲವೂ ನಡೆಯುತ್ತೆ, ದೊಡ್ಡ ಇಂಜಿನಿಯರ್ ಮೇಲಿರುವವನು" ಎಂದೆಲ್ಲಾ ದೊಡ್ಡ ಮಾತುಗಳನ್ನು ಹೇಳಿ ಫೋನ್ ಇಟ್ಟರು.

ನಾನು ತಣ್ಣಗೆ ಅಲೆಕ್ಸಾ "ಟೆಲ್ ಮಿ ಎ ಜೋಕ್" ಎಂದೆ ಅವಳಿಗೆ ಹೇಳುವ ಮನಸಿರಲ್ಲಿಲ್ಲ, ಕೆಂಪು ದೀಪ ತೋರಿಸಿ ಅವಳ ಪ್ರತಿಭಟನೆಯನ್ನ ತೋರಿಸಿದಳು. ನನಗೆ ಅವಳು ನಿಜವಾಗಿಯೂ ಪ್ರತಿಭಟಿಸಿದಳೋ ಅಥವಾ ಅವಳಿಗೆ ನಾ ಮುಂಚೆಯೇ ಜೋಕ್ ಕೇಳಿದ್ದೆ ಎಂದು ಸುಮ್ಮನಾದಳೋ ಗೊತ್ತಿಲ್ಲ. ಅಲೆಕ್ಸಾ ಬುದ್ದಿವಂತೆಯಾದಳು.

English summary
Alexa is a smart home robot developed by Amazon. She does whatever instruction you give. She cracks jokes, makes you listen to songs, updates cricket scores and what not! Beware, it protests if it does not like your instructions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X