• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಕ್ಷಸೀಯ ಖಾರದ ಗುಣವಿರುವ ಮೆಣಸಿನಕಾಯಿಯ ಪುರಾಣ

By ಜಯನಗರದ ಹುಡುಗಿ
|

ಬೆಂಗಳೂರಿನಲ್ಲಿ ತಂಪು ತಂಪು ಮಳೆ. ಆಫೀಸಿನಿಂದ ವಾಪಸ್ಸು ಬರೋವಾಗ ಅದರ ಹತ್ತಿರವೇ ಇದ್ದ ಮೆಣಸಿನಕಾಯಿ ಬಜ್ಜಿ ಗಾಡಿಯಲ್ಲಿ ಬಜ್ಜಿ ತಿನ್ನುತ್ತಾ ಹಾಗೆ ದಪ್ಪ ಮೆಣಸಿನಕಾಯಿಯನ್ನ ಮನೆಗೆ ತೆಗೆದುಕೊಂಡು ಹೋಗುವಾಗ ಮೆಣಸಿನಕಾಯಿಯ ಬಗ್ಗೆ ವಿಚಿತ್ರ ಕುತೂಹಲ ಹುಟ್ಟಿಕೊಂಡಿತು.

ಬಾರ್ಸಿಲೋನಾದಲ್ಲಿದ್ದಾಗ ಅಲ್ಲಿ ದಪ್ಪ ಮೆಣಸಿನಕಾಯಿಯನ್ನ ಬೆಲ್ ಪೆಪ್ಪರ್ಸ್ ಅಂತಿದ್ರು. ಇಲ್ಲಿ ಮೆಣಸಿನಕಾಯಿ ಅಂತಾರೆ. ಎರಡಕ್ಕೂ ಏನು ಸಂಬಂಧ? ಹೀಗೆಲ್ಲಾ ಮಳೆಯಲ್ಲಿ ಯೋಚಿಸಿಕೊಂಡು ಮನೆಗೆ ಬರುತ್ತಿರುವಾಗ ಅರ್ಧ ಓದಿ ಮುಗಿಸಿದ್ದ "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ" ಪುಸ್ತಕ ಕೈಗೆ ಸಿಕ್ಕಿತು. ಈ ಪುಸ್ತಕದಲ್ಲಿ ಒಂದೊಂದು ತರಕಾರಿ ಕಾಯಿ ಪಲ್ಯೆ ಹೇಗೆ ನಮ್ಮ ನೆಲಕ್ಕೆ ದಾಳಿ ಇಟ್ಟಿತ್ತು ಎಲ್ಲ ಸವಿವರವಾಗಿದೆ.

ದಿನನಿತ್ಯ ಹೊಟ್ಟೆ ಸೇರುವ ಕಾಯಿಪಲ್ಯಗಳು ಬಂದಿದ್ದೆಲ್ಲಿಂದ?

ಕೊಲಂಬಸ್ ಹುಡುಕಿಕೊಂಡು ಹೋದದ್ದು ಈಸ್ಟ್ ಇಂಡಿಯಾ ದ್ವೀಪಾವಳಿ; ಅಲ್ಲಿ ಬೆಳೆಯುತ್ತಿದ್ದ ಮೆಣಸು ಬೆಳೆಯನ್ನು ವಶಪಡಿಸಿಕೊಳ್ಳುವುದಕ್ಕೆ. ವಿಧಿ ಅವನನ್ನ ಕೊಂಡೊಯ್ದದ್ದು ದಕ್ಷಿಣ ಅಮೆರಿಕ; ಆದರೂ ಮೆಣಸಿಗಿಂತಲೂ ಘಾಟು ಖಾರಗಳನ್ನೊಳಗೊಂಡ ಮೆಣಸಿನಕಾಯಿಯನ್ನ ದೊರಕಿಸಿಕೊಟ್ಟಿತ್ತು.

ಆ ಕಾಲದಲ್ಲಿ ಯೂರೋಪಿಯನ್ನರಿಗೆ ಪರಿಚಯವಾದ್ದದ್ದು ಪೆಪ್ಪರ್(ಮೆಣಸು). ಮೆಣಸಿನಕಾಯಿ ಪರಿಚಯವಾದಾಗ ಅದನ್ನು ಗುಣವಾಚಕವಾಗಿ ಪೆಪ್ಪರ್ ಎಂದೇ ಕರೆದರು. ನಾವು ಮಾಡಿದ್ದಾದರು ಬೇರೆ ಏನಲ್ಲ. ಮೆಣಸಿಗಿರುವ ರುಚಿಯೆ ಕ್ಯಾಪ್ಸಿಕಮ್ಗೂ ಇರುವುದರಿಂದ ಮೆಣಸಿನಕಾಯಿ ಎಂದೆವು. ಮೊಟ್ಟ ಮೊದಲ ಈ ಅದಲು ಬದಲನ್ನು ಆರಂಭಿಸಿದವರು ಕೊಲಂಬಸನೊಡನಿದ್ದ ನಾವಿಕ ಸಂಗಡಿಗರೇ. ಕ್ಯಾಪ್ಸಿಕಮನ್ನು ಕಚ್ಚಿದೊಡನೆಯೇ ಮೆಣಸಿನ ನೆನಪು ಉಂಟಾಗಿ ಅದೇ ಹೆಸರನ್ನು ಇದಕ್ಕೆ ಅಂಟಿಸಿಬಿಟ್ಟರು.

ನಮಗೆ ಬಹುಕಾಲದಿಂದಲೂ ಪರಿಚಿತವಾಗಿರೋದು ಖಾರದ ಮೆಣಸಿನಕಾಯಿಗಳೇ. ಅವು ಉದ್ದವೇ ಆಗಲಿ, ಕುಳ್ಳೇ ಆಗಲಿ, ದುಂಡೇ ಆಗಲಿ ಹುಟ್ಟು ಗುಣ ಸುಟ್ಟರೂ ಹೋಗದು. ಹಸಿ ಕಾಯಾದರೂ, ಒಣಕಾಯಾದರೂ, ನೇರವಾಗಿ ಕಚ್ಚಿದರೂ, ಧೂಳು ಮಾಡಿದರೂ, ನೀರಿನೊಡನೆ ರುಬ್ಬಿದರೂ ಖಾರಖಾರವೇ.

ಅಡುಗೆಯೆಂಬ ಕಲೆಯನ್ನು ಕಲಿಯುವ ಅವಶ್ಯಕತೆ ಇದೆಯಾ?

ಇದರ ಉಪಯೋಗ ಸಾಂಬಾರ ಸಾಮಗ್ರಿಯಾಗಿ ಮಾತ್ರವಲ್ಲ 16ನೇ ಶತಮಾನದಲ್ಲಿ ಯುದ್ಧಾಸ್ತ್ರವೂ ಆಗಿತ್ತು. ಮೆಣಸಿನಕಾಯಿಯ ಹೊಗೆ ಎಬ್ಬಿಸಿ ಶತ್ರುಗಳನ್ನ ಹಿಂದಟ್ಟುವುದು ದಕ್ಷಿಣ ಅಮೆರಿಕಾದ ಮೂಲನಿವಾಸಿಗಳು ಈಗಲೂ ಆಚರಿಸುತ್ತಿರುವ ಪದ್ಧತಿ. 1963ರಲ್ಲಿ ಬೌದ್ಧರಿಗೂ ಸರ್ಕಾರಕ್ಕೂ ದಕ್ಷಿಣ ವಿಯೆಟ್ನಾಮಿನಲ್ಲಿ ಜಗಳ ಏರ್ಪಟ್ಟಿತ್ತು. ಆಗ ಬೌದ್ಧ ಭಿಕ್ಷುಗಳು ನಿಂಬೆ ಹಣ್ಣಿನ ರಸದಲ್ಲಿ ಮೆಣಸಿನಕಾಯಿಪುಡಿಯನ್ನ ಕದಡಿ ಸ್ಪ್ರೇ ಬಂದೂಕಗಳಲ್ಲಿ ತುಂಬಿಟ್ಟುಕೊಂಡು ಸರ್ಕಾರವನ್ನ ಎದುರಿಸಲು ಸಿದ್ಧರಾದರು.

ನಮ್ಮ ನಾಡಿನಲ್ಲಿಯೂ ಅಂದರೆ 18ನೇ ಶತಮಾನದ ಕೊನೆಯಲ್ಲಿ ಬೆಂಗಳೂರು, ಮೈಸೂರು ಜಿಲ್ಲೆಗಳು ಯುದ್ಧಭೂಮಿಗಳಾಗಿದ್ದವು. ಮದರಾಸಿನಿಂದ ಈ ಜಿಲ್ಲೆಗಳಿಗೆ ಬಿಳಿಯರ ಸೈನ್ಯ ಬಂದಿಳಿಯುತ್ತಿತ್ತು. ಪರಂಗಿ ಸಿಪಾಯಿಗಳ ಸ್ವಾತಂತ್ರ್ಯ ಅಟ್ಟಹಾಸಗಳು ಎಲ್ಲೆ ಮೀರಿ ಪ್ರದರ್ಶನವಾಗುತ್ತಿದ್ದವು. ಆಗ ಭಯಗೊಂಡು ಜನ ಊರು ಬಿಟ್ಟು ಓಡುತ್ತಿದ್ದರಂತೆ. ವಯಸ್ಸಾದವರು, ರೋಗಿಗಳು ಮಾತ್ರ ಊರಿನಲ್ಲಿ. ಆ ಅಜ್ಜಿಗಳು ಮಾಡಿದ ಉಪಾಯವೇ ಈ ಮೆಣಸಿನಪುಡಿಯನ್ನ ಅವರೆ ಮೇಲೆ ಚೆಲ್ಲೋದು.

ಈ ರಾಕ್ಷಸೀಯ ಗುಣವನ್ನ ಪಡೆದ ಮೆಣಸಿನಕಾಯಿ ಶಿಕ್ಷಾವಿಧಿಯ ಮಾಧ್ಯಮವಾಗಿಯೇ ಮೆರೆಯಿತು. ಮಧ್ಯ ಅಮೇರಿಕಾದ ಮಾಯಾ ಜನಾಂಗದಲ್ಲಿ ಕನ್ಯೆಯೊಬ್ಬಳು ಯುವಕನ ಮೇಲೆ ಕಣ್ಣು ಹೊರಳಿಸಿದಾಗ ಅವಳ ತಾಯಿಯಾದವಳು ಮಗಳ ಕಣ್ಣುಗಳೊಳಗೆ ಮೆಣಸಿನಕಾಯಿ ಪುಡಿಯನ್ನ ತುಂಬಿ ದಂಡಿಸುವ ಪದ್ಧತಿಯಿತ್ತು. ಅದೇ ಖಂಡದ ಕಾರಿಬ್ ಆದಿನಿವಾಸಿಗಳು ನರಭಕ್ಷಕರು; ಶತ್ರುಗಳನ್ನು ಕೊಂದು ಹೆಣವನ್ನ ತಿನ್ನುತ್ತಿದ್ದರು. ಸೆರೆಯಾಳುಗಳನ್ನು ಗಾಯಗಳಿಂದ ಚಿತ್ರಹಿಂಸೆಗೊಳಪಡಿಸಿ ಗಾಯದೊಳಕ್ಕೆ ಮೆಣಸಿನಕಾಯಿಪುಡಿಯನ್ನ ತೂರಿಸಿ 'ಒಗ್ಗರಣೆ' ಹಾಕಿ ಬೇಯಿಸಿ ತಿನ್ನುತ್ತಿದ್ದರು.

ವೆಸ್ಟ್ ಇಂಡೀಸಿನ ಜನ ಮೆಣಸಿನಕಾಯಿ ಸಾರದ ತೀಕ್ಷ್ಣತೆಯನ್ನ ಪರೀಕ್ಷಿಸುವ ವಿಧಾನ ವಿಚಿತ್ರವೇ ಸರಿ. ಊಟಕ್ಕೆ ಕುಳಿತಾಗ ಸಾರದ ತೊಟ್ಟನ್ನು ಟೇಬಲ್ ಕ್ಲಾತ್ ಮೇಲೆ ಇಡುತ್ತಾರೆ. ಆ ಜಾಗ ಸುಟ್ಟು ತೂತು ಬಿದ್ದರೆ ಸರಿ. ಇಲ್ಲದ್ದಿದ್ದರೆ "ಬೇರೆ ತಾ" ಎಂದು ಮನೆಯಾಕೆಗೆ ಹೇಳುತ್ತಾರೆ. ಇನ್ನು ನಮ್ಮ ನೆರೆಯ ಆಂಧ್ರದವರಂತೂ ಖಾರಕ್ಕೆ ಅನ್ವರ್ಥ ನಾಮ. ನನ್ನ ಅಮ್ಮನ ಮನೆಕಡೆಯವರು ಪಾವಗಡದ ಹತ್ತಿರದ ಊರಿನವರು. ಅವರ ಖಾರದ ಪರಮಾವಧಿಯನ್ನ ನೋಡಿ ನಮಗೇ ಕಣ್ಣಲ್ಲಿ ನೀರು ಬರೋದೊಂದು ಬಾಕಿ.

ಆದರೆ ನಮ್ಮ ದೇಶಕ್ಕೆ ಕಾಲಿಟ್ಟ ಹೊಸತರಲ್ಲಿ ನಮ್ಮ ನಾಲಗೆ ಅದರ ದಾಸಾನುದಾಸನಾಗಿ ಬಿಟ್ಟಿತು; ಅದುವರೆಗೂ ಖಾರದ ರುಚಿಯನ್ನು ಈಯುತ್ತಿದ್ದ ಮೆಣಸು ಶುಂಠಿಗಳನ್ನು ತ್ಯಜಿಸಿತು(ವೈದಿಕ ಕರ್ಮಗಳಲ್ಲಿ ಹೊರತು). ಸರ್ವಕಾಲದಲ್ಲೂ ತಿನಿಸು ಉಣಿಸುಗಳ ಒಡನಾಡಿಯಾಯಿತು. ಮನೆಯಲ್ಲಿ ಮೆಣಸಿನ ಪುಡಿ ಮಾಡೋದು ಒಂದು ದೊಡ್ಡ ಅಭಿಯಾನವೇ ನಡೆಯುತ್ತಿರುತ್ತದೆ. ಪುಡಿಗಳು ಅಡ್ಜೆಸ್ಟ್ ಆಗದೇ ಮನೆಯಲ್ಲಿ ಜಗಳಗಳೇ ನಡೆದಿವೆ. ಯಾವುದಾದರೊಂದು ರೂಪದಲ್ಲಿ ಮೆಣಸಿನಕಾಯಿಯನ್ನು ತಿಂದು ತಿಂದು ತಿನ್ನದಿದ್ದರೇ ತಲೆನೋವು ಅಂಟಿಕೊಳ್ಳುತ್ತದೆ, ಜೀರ್ಣಶಕ್ತಿ ಮಂದವಾಗುತ್ತದೆ. ಕೈಕಾಲುಗಳ ಸ್ವಾಧೀನತೆ ಉಡುಗುತ್ತದೆ. ಎಂದೂ ಅನುಭವಿಸದಂಥ ದೈಹಿಕ ರೋಗಗಳೂ ಮಾನಸಿಕ ಅಸ್ತವ್ಯಸ್ತಗಳೂ ಮುತ್ತುತ್ತವೆ. ಇವೆಲ್ಲ withdrawal syndromeಗಳು.

ವಯಸ್ಸಾದ ಅಜ್ಜ ಅಜ್ಜಿಯರಿಗೆ ಮೆಣಸಿನಕಾಯಿ ಖಾರದ ಉಪಯೋಗವನ್ನ ಬಿಟ್ಟುಬಿಡಬೇಕು, ಮೂಲವ್ಯಾಧಿಗೆ ಅದೇ ಮದ್ದು. ಅಂದಾಗ ದೊಡ್ಡವರು ಹೇಳೋದು ಅವರನ್ನ ಬಯ್ಯೋದೇ ಜಾಸ್ತಿ. ದೇವರ ಸೃಷ್ಟಿಯಲ್ಲಿರುವ ಷಡ್ರಸ. ಷಡ್ರಸೋಪೇತವಾದ ಆಹಾರ ಮೈಯನ್ನು ಸೇರಬೇಕೆನ್ನುತ್ತದೆ ನಮ್ಮ ಧರ್ಮಶಾಸ್ತ್ರ. ಅದರಲ್ಲಿ ಯಾವುದಾದರೂ ಒಂದು ರಸ ಇಲ್ಲದೆ ಹೋದರೂ ದೇಹದ ಆರೈಕೆಗೆ ಕುಂದು ಬರುತ್ತದೆ.

ಮೆಣಸನ್ನೋ ಶುಂಠಿಯನ್ನೋ ಮೆಣಸಿನ ಕಾಯಿಗೆ ಬದಲಾಗಿ ಉಪಯೋಗಿಸಬಹುದು ಎಂದೆಲ್ಲಾ ಕಥೆಗಳಾದಾಗ ಅಜ್ಜಂದಿರು ಹೇಳೋ ಮಾತೇ ನಗು ತರಿಸುತ್ತದೆ. "ದಿನಾ ಯಾರದ್ರೂ ಶ್ರಾದ್ಧದ ಊಟ ಮಾಡ್ತಾರಾ" ಎಂದು ನಗುತ್ತಾರೆ. ಈ ಮೆಣಸಿನ ಊಟ ಬರಿ ತಿಥಿಗಳಲ್ಲಿ ಮಾಡೋದು ಎಂದು ಖಾರವಾಗಿಯೇ ನುಡಿಯುತ್ತಾರೆ. ಯಾಕೆ ತೀರ ನಮ್ಮ ಅಜ್ಜನ ತಿಥಿಯಲ್ಲಿ ನಡೆಯುವ ವ್ರತದ ಅಡಿಗೆಯನ್ನ ತಿನ್ನೋಷ್ಟರಲ್ಲಿ ಎಲ್ಲಾರೂ ಹೈರಾಣಾಗಿರುತ್ತಾರೆ.

ಇನ್ನು ಮೆಣಸಿನಕಾಯಿಯ ಭಾರತೀಕರಣ ಇಷ್ಟಕ್ಕೇ ನಿಲ್ಲಲ್ಲಿಲ್ಲ. ಮೆಣಸಿನಕಾಯಿ ಬೆಳೆಯುವವರ ಮಾರುವವರ ಗೋತ್ರಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಬೇರ್ಪಟ್ಟಿವೆ. ತೆಲುಗಿನ "ಮಿರಪುಕಾಯಲ" ಕನ್ನಡದ "ಮೆಣಸಿನಕಾಯಿ" ಮನೆತನಗಳನ್ನ ಹೆಸರಿಸಬಹುದು.

ಆದ್ರೆ ಈ ಮೆಣಸಿನಕಾಯಿಯನ್ನ ವಿಪರೀತ ಹಚ್ಚಿಕೊಂಡಿದ್ದು ನಾನು ಯುರೋಪಿನಲ್ಲಿಯೇ ಅದೂ ಟಬೇಸ್ಕೋ ಸಾಸ್ ಎಂಬ ಅಮ್ರುತದೊಂದಿಗೆ. ಅಲ್ಲಿ ತೀರ ಸಪ್ಪೆ ಸಪ್ಪೆಯಾಗಿ ಊಟ ತಿಂಡಿ ಮಾಡುತ್ತಾರೆ. ಕಾರಣ ಭಾರತೀಯರಿಗೆ ಆ ಸಾಸ್ ಅಲ್ಲಿ ಅಚ್ಚುಮೆಚ್ಚು. ಇದರ ಹಿಂದಿನ ಕಥೆ ಅತೀ ಸ್ವಾರಸ್ಯಕರವಾಗಿದೆ. 1846-58ರಲ್ಲಿ ಮೆಕ್ಸಿಕೋಗೋ ಉತ್ತರ ಅಮೇರಿಕಾದವರಿಗೂ ಯುದ್ಧ ಸಂಭವಿಸಿ ಉತ್ತರ ಅಮೇರಿಕಾ ವಿಜಯಗೊಳಿಸಿತು. ಸ್ವದೇಶಕ್ಕೆ ಹಿಂತಿರುಗುವಾಗ ಅಮೇರಿಕ ಸೈನಿಕನೊಬ್ಬ ಮೆಕ್ಸಿಕೋ ದೇಶದ ತಬೇಸ್ಕೋ ಪ್ರದೇಶದಿಂದ ಮೆಣಸಿನಕಾಯಿ ಸಸಿಗಳನ್ನು ತಂದು ಮೆಕ್ ಇಲ್ ಹೆನ್ನಿ ಎಂಬ ಸಾಹುಕಾರನಿಗೆ ಕೊಟ್ಟ. ಈತ ಅವನ್ನು ಲೂಸಿಯಾನಾದ ಸ್ಟೇಟಿಗೆ ಸೇರಿದ ಅವೆರಿ ದ್ವೀಪದಲ್ಲಿ ಬೆಳೆಸಿದ. ಕಾಯಿಗಳಿಂದ ರಸೋಪೇತವಾದದೊಂದು ಗೊಜ್ಜು ತಯಾರಾಯಿತು. ಈ ವೇಳೆಗೆ ಅಮೇರಿಕ ಅಂತರ್ಯುದ್ಧದಲ್ಲಿ ತೊಡಗಿತು. ಅವನು ತನ್ನ ಹಣವನ್ನೆಲ್ಲಾ ಕಳೆದುಕೊಂಡ. ಯುದ್ಧ ಮುಗಿದ ಮೇಲೆ ಈತ ಹೊಸ ಜೀವನೋಪಾಯವನ್ನು ಹುಡುಕಬೇಕಾಯಿತು. ಹಿಂದಿನಂತಯೇ ಗೊಜ್ಜಿನ ಕಾರ್ಖಾನೆಯನ್ನು ಪುನರಾಂಭಿಸಿದ. ಮೊದಲಿಗಿಂತಲೂ ಹತ್ತರಷ್ಟು ಹಣ ಗಳಿಸಿದ. ಇವತ್ತಿಗೂ ವರ್ಷಂಪ್ರತಿ ಮಿಲಿಯನ್ ಬಾಟಲು ಟಬೇಸ್ಕೋ ಗೊಜ್ಜು ಮಾರಾಟವಾಗುತ್ತಿದೆ. ಇದು ಊಟದ ಜೊತೆ ಜೊತೆಗೆ ಔಷಧೀಯ ಗುಣಗಳನ್ನೂ ಅಂಟಿಸಿಕೊಂಡಿತ್ತು. ನರ ದೌರ್ಬಲ್ಯವೆ? ನಮ್ಮ ಟಬೇಸ್ಕೋ ಸಾಸನ್ನು ನೆಕ್ಕಿ, ತಲೆ ಶೂಲೆಯೇ? ಅದಕ್ಕೂ ಅದೇ ಸಾಸ್. ಗಂಟಲು ನೋವೆಂದು ಗೊಣಗಲೇಕೆ. ಅದನ್ನ ನೀರಲ್ಲಿ ಕಲಕಿ ಕುಡಿರಿ.

ಹಿಂಗೆ ಈ ಮೆಣಸಿನಕಾಯಿಯ ಪುರಾಣ ನನಗೆ ಬಹು ಇಷ್ಟವಾಯ್ತು. ನಮ್ಮ ಭಾರತೀಯ ಭಾಷೆಗಳಲ್ಲಿ ಮೆಣಸಿಗೂ ಮೆಣಸಿನಕಾಯಿಗೂ ನಾಮಕರಣದಲ್ಲಾಗಲಿ ಬಳಕೆಯ ಪ್ರಮಾಣದಲ್ಲಾಗಲಿ ಏಕತೆಯಿದೆ. ಮೆಣಸಿಗಿದ್ದ ಹೆಸರನ್ನೇ ಅಥವಾ ಅದರ ರೂಪ ಭೇದವನ್ನೇ ಮೆಣಸಿನಕಾಯಿಗೂ ಬಳಸಿದ್ದೇವೆ. ಹಿಂದಿಯಲ್ಲಿ ಕಾಲಿ ಮಿರ್ಚ್, ಲಾಲ್ ಮಿರ್ಚಿ, ತೆಲುಗಿನಲ್ಲು ಮಿರಿಯಾಲು, ಮಿರುಪುಕಾಯಿ, ತಮಿಳಿನಲ್ಲಿ ಮಿಳಗು, ಮಿಳಗಾಯ್ ಹಿಂಗೆ ಇದರ ನಾಮಕರಣ ನಡೆದಿದೆ.

ತಣ್ಣಗಿನ ಮಳೆಯಲ್ಲಿ ಬಜ್ಜಿ ತಿನ್ನೋವಾಗ ಈ ಪುರಾಣ ಓದಿ ಖುಷಿ ಪಡಿ. ಇಷ್ಟ ಆದ್ರೆ ನನ್ನನ್ನೂ ನಿಮ್ಮ ಮನೆಗೆ ಬಜ್ಜಿ ತಿನ್ನಲು ಕರೆಯಿರಿ ಆಯ್ತಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A little extra like spicy is always good thing. The story of chili is very interesting. You don't find any home where chili is not used. An essay about chili by Meghana Sudhindra, Kannada columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more