ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥ್ಯಾಂಕ್ಯೂ ಮಿಸ್ಟರ್‌ ತೇಜಸ್ವಿ!

By Staff
|
Google Oneindia Kannada News
  • ಜಾನಕಿ
ಸಂಜೆಯಾಗುತ್ತಿದ್ದಂತೆ ಮಧ್ಯಾಹ್ನದ ಬಿಸಿಲಲ್ಲಿ ಬಿಸಿ ಬಾಣಲೆಯಲ್ಲಿ ಕಾಯ್ದ ಕಾಡುಗಳಿಗೆ ಹೊಗೆಯ ಮುಸುಗು ಕವಿಯುತ್ತದೆ. ಒಣಗಿ ನಿಂತ ಹುಲ್ಲು ಹಳು ಮುಂತಾದವಕ್ಕೆಲ್ಲ ಬೆಂಕಿ ಕೊಟ್ಟು ಸುಟ್ಟರೆ ಬೇಗ ಹೊಸ ಚಿಗುರು ಬಂದು ದನಗಳಿಗೆ ಮೇವು ದೊರೆಯುತ್ತದೆ ಎಂದು ಜನಗಳೇ ಬೆಂಕಿ ಕೊಟ್ಟು ಕಾಳ್ಗಿಚ್ಚು ಏಳಿಸುತ್ತಿದ್ದರು. ರಾತ್ರಿಯಾದರೆ ದೂರದ ಗುಡ್ಡಗಳಲ್ಲಿ ಕಾಳ್ಗಿಚ್ಚು ಕೆಂಪು ಸೀಮೆ ಸುಣ್ಣದಲ್ಲಿ ಎಳೆದ ಗೀರಿನಂತೆ ಸಾಲಾಗಿ ಉರಿಯುವುದು ಕಾಣುತ್ತಿತ್ತು.

ಇದು ಜನಗಳು ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿಯಾದರೂ ಸಹ್ಯಾದ್ರಿ ಕಾಡುಗಳಿಗೆ ಯುಪೆಟೋರಿಯಂ ಕಳೆ ಕಾಲಿಟ್ಟ ಮೇಲೆ ಕಾಳ್ಗಿಚ್ಚಿನಿಂದಾಗುವ ಅನಾಹುತದ ಪ್ರಮಾಣ ಹೆಚ್ಚುತ್ತಾ ಬಂದಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಯುಪೆಟೋರಿಯಂ ಕಳೆ ಮರಕ್ಕೆ ಸುತ್ತಿಕೊಂಡು ಬಳ್ಳಿಯಂತೆ ಎತ್ತರಕ್ಕೆ ಬೆಳೆಯುತ್ತದೆ. ಹಿಂದೆಲ್ಲಾ ಕಾಡಿಗೆ ಬೆಂಕಿ ಬಿದ್ದಾಗ ಕೇವಲ ನೆಲಮಟ್ಟದಲ್ಲಿದ್ದ ಹುಲ್ಲು ಸುಡುತ್ತಿದ್ದುದರಿಂದ ದೊಡ್ಡ ದೊಡ್ಡ ಎತ್ತರದ ಮರಗಳಿಗೆ ಹೆಚ್ಚು ಘಾಸಿಯಾಗುತ್ತಿರಲಿಲ್ಲ. ಆದರೆ ಈಗ ಮರ ತಬ್ಬಿ ಹಿಡಿದಿರುವ ಯುಪೆಟೋರಿಯಂ ಜ್ವಾಲೆ ಕಾರುತ್ತಾ ಉರಿದರೆ ದೊಡ್ಡ ಮರಗಳ ತೊಗಟೆ ಬಹಳ ಎತ್ತರದವರೆಗೂ ಸುಟ್ಟುPoornachandra Tejasvi ಸಾಯುತ್ತಿದ್ದವು. ಕಾಡು ಪ್ರಾಣಿಗಳಿಗಂತೂ ಕಾಳ್ಗಿಚ್ಚು ಬಿದ್ದರೆ ಯುಪೆಟೋರಿಯಂ ಯಮಪಾಶವೇ ಸರಿ. ಯುಪೆಟೋರಿಯಂ ಬೆಳೆದಿದ್ದ ಕಾಡಿಗೆ ಬೆಂಕಿ ಬಿದ್ದರೆ ಕಾಳ್ಗಿಚ್ಚು ಅಕ್ಷರಶಃ ನಾಗರಹಾವಿನಂತೆ ಭುಸುಗುಡುತ್ತಾ ವೇಗವಾಗಿ ಜಿಗ್ಗಿನಲ್ಲಿ ತೊಡಕಿಕೊಂಡ ಜಿಂಕೆ, ಕಾಡುಕೋಣ ಇತ್ಯಾದಿ ಮಿಂಚಿನ ಓಟಗಾರರು ಸಹ ಬೆಂಕಿಗಿಂತ ವೇಗವಾಗಿ ಓಡಿ ತಪ್ಪಿಸಿಕೊಳ್ಳಲಾರದೆ ಸುಟ್ಟು ಸತ್ತಿರುವ ಬೇಕಾದಷ್ಟು ಘಟನೆಗಳಿವೆ!

ತೇಜಸ್ವಿಯವರ ಮೂಡಿಗೆರೆಯಲ್ಲಿ ‘ಮಾಯಾ ಲೋಕ’ ಎಂಬ ಕಾದಂಬರಿ ಅರಳಿಕೊಂಡಿದೆ. ಮತ್ತದೇ ನಾಯಿ ಮರಿ, ಮತ್ತದೇ ನಿಗೂಢ ಜಗತ್ತು, ಮತ್ತದೇ ಅನೂಹ್ಯ ದಾರಿ, ಮತ್ತದೆ ಬೆರಗು. ಈ ಬಾರಿ ಬೆರಗನ್ನು ಹೆಚ್ಚಿಸುವುದಕ್ಕೆ ಸೂಕ್ತವಾದ ಚಿತ್ರಗಳನ್ನೂ ತೇಜಸ್ವಿಯವರೇ ರಚಿಸಿದ್ದಾರೆ. ಪುಸ್ತಕದ ಆಕಾರವನ್ನೂ ಸ್ವರೂಪ ವನ್ನೂ ಬದಲಾಯಿಸಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ;

‘ನಾಲ್ಕು ದಶಕದ ಹಿಂದೆ ಅಬಚೂರಿನ ಪೋಸ್ಟಾ ಫೀಸು ಕಥಾ ಸಂಕಲನಕ್ಕೆ ಮೊದಲ ಮಾತುಗಳನ್ನು ಬರೆಯುತ್ತಾ ಬದಲಾಗುತ್ತಿರುವ ಸನ್ನಿವೇಶಗಳ ಸವಾಲುಗಳನ್ನು ಎದುರಿಸಲು ನಾವು ಹೊಸ ದಿಗಂತಗಳತ್ತ ಹೋಗಬೇಕಾಗಿರುವುದನ್ನು ಜ್ಞಾಪಿಸಿದ್ದೆ. ಈಗ, ಇಪ್ಪತ್ತೊಂದನೇ ಶತಮಾನ ಪ್ರಾರಂಭವಾಗುತ್ತಿದ್ದಂತೆ ಅಂಥದ್ದೇ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ನಿಂತಿದ್ದೇವೆಂದು ಅನ್ನಿಸುತ್ತಿದೆ. ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ನಾವೀಗ ಗಮನ ಹರಿಸಿ ಹೊಸ ದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ’.

ಆ ಅನ್ವೇಷಣೆಯ ಫಲವೇ ಮಾಯಾಲೋಕದ ಬದಲಾದ ಸ್ವರೂಪ. ಕಥನ ತಂತ್ರವನ್ನು ಅವರಿಲ್ಲಿ ದೃಶ್ಯ ಪ್ರತಿಮೆಗಳ ಮೂಲಕ ವಿಸ್ತರಿಸುವ ಪ್ರಯತ್ನ ಮಾಡಿದ್ದಾರೆ. ನಮ್ಮ ಕಣ್ಣೆದುರಿಗೆ ಇರುವ ಸ್ಥಿರ ಚಿತ್ರಗಳನ್ನು, ಹಳೆಯ ಪ್ರತಿಮೆಗಳನ್ನು ಪಕ್ಕಕ್ಕೆ ಸರಿಸಿ, ಹೊಸದೊಂದು ಲೋಕವನ್ನು ಕಣ್ಮುಂದೆ ತಂದು ನಿಲ್ಲಿಸುವ ಪ್ರಯತ್ನ ಇದು.ಯಕ್ಷಗಾನದಲ್ಲಿ ಪಾತ್ರಗಳು ವೇಷಭೂಷಣಗಳ ಮೂಲಕವೂ ಹೊಸದೊಂದು ಜಗತ್ತನ್ನು ಸಾಕಾರಗೊಳಿಸುವಂತೆ ತೇಜಸ್ವಿಯವರು ರೇಖಾಚಿತ್ರಗಳ ಮುಖಾಂತರ ಮತ್ತೊಂದು ಜಗತ್ತಿನ ದರ್ಶನ ಮಾಡಿಸುವುದಕ್ಕೆ ಹೊರಟಿದ್ದಾರೆ.

ಕಥೆ, ಕಾದಂಬರಿಗಳಿಗೆ ರೇಖಾಚಿತ್ರಗಳು ಎಷ್ಟು ಮುಖ್ಯ ಅನ್ನುವುದನ್ನು ನಾವೆಲ್ಲ ಮರೆತೇ ಬಿಟ್ಟಿದ್ದೇವೆ. ಪ.ಸ.ಕುಮಾರ್‌, ಚಂದ್ರನಾಥ್‌ ಮುಂತಾದ ಕಲಾವಿದರು ಕತೆಗಳಿಗೆ ಬರೆಯುತ್ತಿದ್ದ, ಬರೆಯುವ ರೇಖಾಚಿತ್ರಗಳೇ ಎಷ್ಟೋ ಕಾಲ ವಯಸ್ಸಿನಲ್ಲಿ ಸ್ಥಿರವಾಗಿ ನಿಂತು ಕಾಡುವುದುಂಟು. ಪ್ರಜಾವಾಣಿಯಲ್ಲಿ ಬರುತ್ತಿದ್ದ ಎಷ್ಟೋ ಕಾದಂಬರಿಯನ್ನು ಪ.ಸ. ಕುಮಾರ್‌ ಅವರ ರೇಖಾಚಿತ್ರವಿಲ್ಲದೆ ಊಹಿಸಿಕೊಳ್ಳುವುದೂ ಕಷ್ಟ. ಹಿಂದೆ ಮಯೂರದಲ್ಲಿ ಬರುತ್ತಿದ್ದ ಶೇಷನಾರಾಯಣರ ನೀಳ್ಗತೆಗಳ ಜೊತೆ ಪ್ರಕಟವಾಗುತ್ತಿದ್ದ ರೇಖಾಚಿತ್ರಗಳು ಕೆಲವರಿಗಾದರೂ ಕಣ್ಣಿಗೆ ಕಟ್ಟಿದಂತೆ ನೆನಪಿರಬಹುದು. ಟಿ.ಕೆ.ರಾಮರಾವ್‌ ಅವರ ಕಾದಂಬರಿಗಳ ಮುಖಪುಟ ನೋಡಿ ಮುಂದುವರಿಯುತ್ತಿದ್ದೆವು. ಆಗೆಲ್ಲ ಪ್ರತಿಯಾಂದು ಪುಟದಲ್ಲೂ ಚಿತ್ರಗಳಿರಬಾರದೇ ಅನ್ನಿಸುತ್ತಿತ್ತು.

ಇವತ್ತು ನಮ್ಮ ಕಣ್ಣುಗಳನ್ನು ಟೀವಿ ಮತ್ತು ಆಧುನಿಕ ಮುದ್ರಣ ತಂತ್ರಜ್ಞಾನದ ನಿಖರತೆ ಮತ್ತು ಸ್ಪಷ್ಟತೆ ಮಲಿನಗೊಳಿಸಿದೆ. ಬ್ಲ್ಯಾಕ್‌ಅಂಡ್‌ ವೈಟ್‌ ಚಿತ್ರಗಳ ಅಸ್ಪಷ್ಟ ನಿಗೂಢತೆ, ಬೆಳದಿಂಗಳಲ್ಲಿ ಜಗತ್ತನ್ನು ಕಂಡಾಗ ಆಗುವಂಥ ರೋಮಾಂಚನವನ್ನು ಅವು ಸೃಷ್ಟಿಸಿದ್ದ ಪರಿ ಎಲ್ಲವನ್ನೂ ನಾವು ಮರೆತಿದ್ದೇವೆ. ಎಲ್ಲವೂ ನಿಚ್ಚಳವಾದ ಜಗತ್ತಿನಲ್ಲಿ ಓದುಗನ ಕಲ್ಪನೆಗೆ ಏನೂ ಉಳಿದಿರುವುದಿಲ್ಲ.

ಆದರೆ ಮಾಯಾಲೋಕದ ರೇಖಾಚಿತ್ರಗಳು ಒಂದು ಅಚ್ಚರಿಯ ಜಗತ್ತನ್ನು ತೆರೆದಿಡುವಂತಿದೆ.‘ ಇಲ್ಲಿನ ಕಥಾ ಪ್ರತಿಭೆಗಳೂ ದೃಶ್ಯ ಪ್ರತಿಭೆಗಳೂ ಓದುತ್ತಾ ಹೋದಂತೆ ಒಂದರ ಮೇಲೊಂದು ಸಂಯೋಜನೆಗೊಳ್ಳುತ್ತಾ ಮಾಯಾಲೋಕವನ್ನು ಸೃಷ್ಟಿಸುತ್ತವೆ. ಇದೊಂದು ಬೆಟ್ಟು ತೋರಿಸಿ ನಿರ್ದೇಶಿಸಲಾರದಷ್ಟು ಸೂಕ್ಷ್ಮ ಮತ್ತು ಪರೋಕ್ಷ ಸಂವಹನ ಕ್ರಿಯೆಯಾದುದರಿಂದ ನಾನು ಇದಕ್ಕಿಂತ ಹೆಚ್ಚಿನ ವಿವರಣೆ ಕೊಡಲಾರೆ’ ಎಂದು ತೇಜಸ್ವಿ ಬರೆದುಕೊಂಡಿದ್ದಾರೆ. ಅದರ ಅಗತ್ಯವೂ ಇಲ್ಲ. ಕಾದಂಬರಿ ಓದುತ್ತಿದ್ದ ಹಾಗೆ, ನೀವು ಕಪ್ಪು ಬಿಳುಪುಗಳಲ್ಲಿ ಚಿತ್ರಿಸಿರುವ ಪಾತ್ರಗಳು ನಮ್ಮ ಮನಸ್ಸಿನಲ್ಲಿ ವರ್ಣಮಯವಾಗುತ್ತಾ ಹೋಗುತ್ತದೆ. ನೂರ ತೊಂಬತ್ತೊಂಬತ್ತನೇ ಪುಟದಲ್ಲಿರುವ ಸೈಕಲ್‌ ಹೊಡೆಯುವ ಹುಡುಗರ ಹುರುಪು, ನೂರು ಎಂಬತ್ತೆಂಟನೇ ಪುಟದ ತಿರುವು ರಸ್ತೆಯ ಊರು, ಎಪ್ಪತ್ತನೇ ಪುಟದಲ್ಲಿರುವ ದಿಬ್ಬ ಹತ್ತಿ ಕೂತ ಅಳಿಲು ಸೃಷ್ಟಿಸುವ ರೋಮಾಂಚವೇ ಬೇರೆ. ನಗರಪ್ರಜ್ಞೆಯ ರೂಪಕಗಳನು ಎದುರಿಸುವುದಕ್ಕೆ ಮತ್ತು ಮರೆಯುವುದಕ್ಕೆ ಇಂಥದ್ದೊಂದು ಬೇಕಾಗಿತ್ತು.

*

ಕರ್ವಾಲೋ ಕಾದಂಬರಿಯಲ್ಲಿ ಮಾಡಿದ್ದನ್ನೇ ತೇಜಸ್ವಿ ಇಲ್ಲಿ ಮತ್ತೊಮ್ಮೆ ಮಾಡಿದ್ದಾನೆ. ಒಂದು ರೀತಿಯಲ್ಲಿ ಇದು ಅವರ ಸಹಜವಾದ ಜಗತ್ತು. ತೇಜಸ್ವಿಯವರ ಜಗತ್ತು ಬದಲಾಗಬೇಕು ಅಂತ ನಿರೀಕ್ಷಿಸುವುದು ತಪ್ಪಾಗುತ್ತೆ. ಯಾಕೆಂದರೆ ನಮಗೆ ತಪ್ಪಿಸಿಕೊಳ್ಳುವುದಕ್ಕೆ ಇರುವ ಜಗತ್ತಿನೆಂದರೆ ಅದೊಂದೇ. ಒಂದು ಕ್ಷಣವಾದರೂ ನಗರದ ಜಂಜಡಗಳಿಂದ ಪಾರಾಗಿ ಹೋಗುವುದಕ್ಕೆ ಸಾಧ್ಯವಾಗುವುದು ಅವರ ಜಗತ್ತಿನೊಳಗೆ ಮಾತ್ರ. ಅಲ್ಲಿಗೆ ಎಂಥವರಿಗೂ ಮುಕ್ತ ಪ್ರವೇಶ.

ಈ ಭಾಗವನ್ನೊಮ್ಮೆ ಓದಿ;

ನಾನು ದೋಟಿ ತುದಿಯಲ್ಲಿ ಸೂರು ಗುಡಿಸಲು ಕಟ್ಟಿದ್ದ ಪೊರಕೆ ಬಿಚ್ಚುತ್ತಾ ಈ ದರಿದ್ರ ಹಾವನ್ನು ಯಾವ ರೀತಿ ಬೀಳಿಸುವುದು ಯೋಚಿಸಿದೆ. ನಾನು ಕಂಡಂತೆ ಹಾವುಗಳು ಸುತ್ತಿಸುತ್ತಿಕೊಂಡು ಮರ ಹತ್ತುವುದನ್ನು ನೋಡಿದ್ದೇನೆಯೇ ಹೊರತು ಮರ ಇಳಿಯುವುದು ಅವಕ್ಕೆ ಗೊತ್ತಿಲ್ಲ. ಸಾಧಾರಣವಾಗಿ ಮರದ ಮೇಲಿಂದ ಕೆಳಕ್ಕೆ ದೊಪ್ಪನೆ ಬಿದ್ದು ಓಡಿಹೋಗುತ್ತವೆ. ಹಾವುಗಳಿಗೆ ನಿಜವಾಗಿಯೂ ಮರ ಇಳಿಯಲು ತಿಳಿದಿಲ್ಲವೇ ಎಂಬುದರ ಬಗ್ಗೆ ನಾನೇನೂ ಅಧ್ಯಯನ ಮಾಡಿಲ್ಲ. ಹಲವಾರು ಸಂದರ್ಭಗಳಲ್ಲಿ ಹಾವು ಮರದ ಮೇಲಿಂದ ಧುಮುಕಿ ಇಳಿದಿದ್ದನ್ನು ನೋಡಿದ್ದೇನಷ್ಟೇ.

ಈಗಲೂ ಸಹಾ ದೋಟಿ ಇರುಕಿ ಸರಿಯಾಗಿ ಗಾಬರಿ ಮಾಡಿದರೆ ಸೂರಿನ ಮೇಲಿರುವ ಹಾವು ಅಲ್ಲಿಂದ ದೊಪ್ಪನೆ ಕೆಳಕ್ಕೆ ಬಿದ್ದು ಓಡಿಹೋಗಲು ಯತ್ನಿಸುತ್ತದೆ ಎಂದೇ ನಾನು ಊಹಿಸಿದೆ. ಸುಸ್ಮಿತ ಅಲ್ಲೆಲ್ಲ ಅಡ್ಡ ಇದ್ದ ಕುರ್ಚಿಗಳನ್ನು ದೂರಕ್ಕೆ ತಳ್ಳಿ ಹೊಡೆದಾಟಕ್ಕೆ ಅಖಾಡ ರೆಡಿ ಮಾಡಿದಳು.

ದೋಟಿಯನ್ನು ಬಾಗಿಲು ಮುಖಾಂತರ ರೂಮಿನೊಳಗೆ ಎಳೆದುಕೊಳ್ಳುವುದು ಕೊಂಚ ಕಷ್ಟವಾಯ್ತು. ದೊಟಿಯನ್ನು ಎತ್ತಿದ್ದೇ ಬೆಂಗ್ವೆ ಪಕಾಸಿನ ಪಕ್ಕದಲ್ಲಿ ಜೋತಾಡುತ್ತಿದ್ದ ಹಾವಿನ ಬಾಲವನ್ನು ಪಕಾಸಿಗೆ ಒತ್ತಿ ಹಿಡಿದೆ. ಹಾವು ಹೇಗಾದರೂ ಮಾಡಿ ಕೊಸರಾಡಿ ಬಾಲವನ್ನು ಎಳೆದುಕೊಂಡು ಅಲ್ಲಿಂದ ಪಾರಾಗಲು ಬಹಳ ಪ್ರಯತ್ನ ಮಾಡಿತು. ಆದರೆ ನಾನು ದೋಟಿಯನ್ನು ಎಷ್ಟು ಬಲವಾಗಿ ಒತ್ತಿ ಹಿಡಿದಿದ್ದೇನೆಂದರೆ ಅದಕ್ಕೆ ಒಂದು ಇಂತೂ ಬಾಲವನ್ನು ಎಳೆದುಕೊಳ್ಳಲು ಸಾಧ್ಯವಾಗಲಿಲ್ಲ. ಅದೇನಾದರೂ ಬಾಲವನ್ನು ಎಳೆದುಕೊಂಡು ಹೆಂಚಿನ ಸಂದಿಯಲ್ಲಿ ನುಸುಳಿ ಪರಾರಿಯಾದರೆ ಅದನ್ನು ನಮ್ಮ ಸೂರಿನಿಂದ ಆಚೆಗೆ ಓಡಿಸಲು ಹೆಂಚನ್ನೆಲ್ಲ ಕೆಳಗಿಳಿಸಿ ಪ್ರಯಾಸ ಪಡಬೇಕಾಗುತ್ತದೆಂದು ನನಗೆ ಚೆನ್ನಾಗಿ ಗೊತ್ತಿದ್ದುದರಿಂದಲೇ ನಾನು ಮಿಸುಕಾಡದಂತೆ ಅದನ್ನು ಒತ್ತಿ ಹಿಡಿದದ್ದು.

ಹಾವಿಗೆ ಯಮಯಾತನೆಯಾಯ್ತೆಂದು ಕಾಣುತ್ತದೆ. ಅದು ಕೊಸರಾಡುತ್ತಾ ಕೊಸರಾಡುತ್ತಾ ಬೆಂಗ್ವೆ ಪಕಾಸು ಬಿಟ್ಟು ದೋಟಿಗೆ ಸುತ್ತಿಕೊಳ್ಳತೊಡಗಿತು. ಆದರೆ ಹೆಂಚಿನ ಸೂರಿನಲ್ಲಿ ಬೆಳಕು ಸಾಕಷ್ಟು ಇಲ್ಲದುದರಿಂದ ಅಲ್ಲೇನು ನಡೆಯುತ್ತಿದೆ ಅಂತ ನಮಗೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾವು ಪಕಾಸು ಬಿಟ್ಟು ದೋಟಿಗೆ ಸುತ್ತಿಕೊಂಡಿದ್ದರಿಂದ ಈಗ ದೋಟಿ ಜೋರಾಗಿ ಅಲ್ಲಾಡಿಸಿದರೆ ಅದು ಕೆಳಗೆ ಉದುರುತ್ತದೆ ಎಂದು ಅಂದಾಜು ಮಾಡಿ ಒತ್ತಿ ಹಿಡಿದಿದ್ದ ದೋಟಿ ಸಡಿಲ ಮಾಡಿ ಬಲವಾಗಿ ಅಲ್ಲಾಡಿಸಿದೆ. ಇಲ್ಲಿ ನನ್ನ ಲೆಕ್ಕಾಚಾರ ತಪ್ಪಿತು. ಹಾವು ದೋಟಿಗೇ ಸುತ್ತಿಕೊಂಡಿದ್ದರಿಂದ ಅದು ದೋಟಿ ಮೇಲೆ ಸರ್ರನೆ ಜಾರಿ ನನ್ನ ಕಡೆಗೆ ಇಳಿದಿದ್ದಲ್ಲದೆ ಕೊಂಚ ದೂರ ಜಾರಿದ್ದು ಅನಂತರ ದೊಪ್ಪನೇ ನನ್ನ ಮೇಲೆ ಬಿತ್ತು. ಹಾವು ಮೈ ಮೇಲೆ ಬಿದ್ದ ಕೂಡಲೇ ಅಸಾಧ್ಯ ಗಾಬರಿಯಾಯ್ತು...

*

ಕತೆಯಲ್ಲೂ ನಿರೂಪಕ ಹಾದಿತಪ್ಪುವಷ್ಟರ ಮಟ್ಟಿಗೆ ಮಾಯಾಲೋಕವೊಂದನ್ನು ಹುಡುಕುತ್ತಾ ಹೊರಡುತ್ತಾನೆ. ನಾವೂ ಅವರ ಜೊತೆಗೆ ಸ್ವಲ್ಪ ದೂರ ಸಾಗುತ್ತೇವೆ. ಒಂದು ನಿರ್ವಿಣ್ಣ ಜಗತ್ತಿನಿಂದ ನಮ್ಮನ್ನು ಪಾರು ಮಾಡಿ, ಮತ್ತೊಂದು ಮಾಯಾಲೋಕಕ್ಕೆ ಒಯ್ಯುವ ಕಿಂದರಿಜೋಗಿಯಂತೆ ತೇಜಸ್ವಿ ಮುಂದೆ ನಡೆಯುತ್ತಿದ್ದರೆ, ನಾವು ಅವರ ಹಿಂದೆ ಬೊಮ್ಮನಹಳ್ಳಿಯ ಕಂದಮ್ಮಗಳಂತೆ ನಡೆಯುತ್ತಿದ್ದೇವೇನೋ ಅನ್ನಿಸುತ್ತದೆ.

ಒಂದೊಂದು ಅಚ್ಚರಿಗೊಳಿಸುವ ಕಾದಂಬರಿ ಕೂಡ ನಮ್ಮ ಆಯಸ್ಸನ್ನು ಹೆಚ್ಚಿಸುತ್ತದೆ, ಆಸಕ್ತಿಯನ್ನು ಹೆಚ್ಚಿಸುತ್ತದೆ, ಜೀವನ ಪ್ರೀತಿಯನ್ನು, ಬೆರಗನ್ನು ಹೆಚ್ಚಿಸುತ್ತಾ ಹೋಗುತ್ತದೆ ಅನ್ನುವ ನಂಬಿಕೆ ಸುಳ್ಳಾಗಿಲ್ಲ. ಎತ್ತಿನ ಗಾಡಿಯಲ್ಲಿ ಈಚಲು ಮರದ ಬಯಲಲ್ಲಿ ದೂರದೂರಕ್ಕೆ ಪ್ರಯಾಣ ಮಾಡಿ ಹಿಂದಿರುವ ಜಗತ್ತನ್ನು ಬಿಟ್ಟು, ಮುಂದೊಂದು ಜಗತ್ತಿದೆ ಅನ್ನುವ ನಂಬಿಕೆಯೇ ಇಲ್ಲದೆ ಈ ಕ್ಷಣವಷ್ಟೇ ಸತ್ಯ ಎಂಬಂತೆ ಬದುಕಿರುವ ಎಲ್ಲರಿಗೂ ‘ಮಾಯಾಲೋಕ’ಒಂದು ಅನಿವಾರ್ಯ ಬಿಡುಗಡೆ.

ಆ ಬಿಡುಗಡೆಯ ಸುಖ ನಿಮ್ಮದೂ ನಮ್ಮದೂ ಆಗಲಿ.

(ಮಾಯಾಲೋಕ ; ಪುಸ್ತಕ ಪ್ರಕಾಶನ, ಸರಸ್ವತಿ ಪುರಂ, ಮೈಸೂರು-570009.ಪೂರ್ಣಚಂದ್ರ ತೇಜಸ್ವಿ: 08263228353. ಪುಟ : 250 ಬೆಲೆ: 222)

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X