• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಕ್ಕಿ ಹಾರುತಿದೆ ನೋಡಿದಿರಾ!

By Staff
|
  • ಜಾನಕಿ
ಯಾರು ಅವಿದ್ಯೆಯನ್ನು ಉಪಾಸನೆ ಮಾಡುತ್ತಾರೋ ಅವರು ಕತ್ತಲಲ್ಲಿರುತ್ತಾರೆ. ಯಾರು ವಿದ್ಯೆಯಲ್ಲಿ ನಿರತರಾಗಿದ್ದಾರೋ ಅವರು ಇನ್ನೂ ಹೆಚ್ಚಿನ ಕತ್ತಲೆಯಲ್ಲಿ ಇರುತ್ತಾರೆ.

ಈಶಾವಾಸ್ಯ ಉಪನಿಷತ್ತಿನ ಈ ಮಾತು ಬೆಚ್ಚಿಬೀಳಿಸುವಂತಿದೆ. ಇದಕ್ಕೆ ಸಂಬಂಧಿಸಿದ ಇದರ ಉಲ್ಲೇಖಗಳನ್ನೆಲ್ಲ ಬದಿಗಿಟ್ಟು ಈ ಎರಡು ಸಾಲುಗಳನ್ನಷ್ಟೇ ಓದಿ. ಇದರ ವಿರೋಧಾಭಾಸದಲ್ಲಿ ಜೀವನದ ಅರ್ಥವಿದೆ. ಅವಿದ್ಯೆ ಮತ್ತು ವಿದ್ಯೆ ಎರಡೂ ಒಂದೇ. ಅದರಲ್ಲೂ ವಿದ್ಯೆ ಅವಿದ್ಯೆಗಿಂತ ಕೆಟ್ಟದ್ದು ಅನ್ನುವ ಅರ್ಥವನ್ನು ಹೊರಡಿಸುವಂತಿದೆ ಈ ಸಾಲು.

ತುಂಬ ಓದಿಕೊಂಡವನು ತಿಳಿದುಕೊಳ್ಳದೇ ಹೋದಾಗ ಹೀಗಾಗುವುದು ಸಹಜ. ಓದು ಬೇರೆ ತಿಳುವಳಿಕೆ ಬೇರೆ. ಅರಿತುಕೊಳ್ಳುವುದಕ್ಕೆ ಶಾಸ್ತ್ರ , ತಿಳಿದುಕೊಳ್ಳುವುದಕ್ಕೆ ಉಪನಿಷತ್ತು ಅನ್ನುವ ಮಾತಿದೆ. ಶಾಸ್ತ್ರವನ್ನು ಓದಿಕೊಂಡವನು ಬುದ್ಧಿವಂತನಾಗುತ್ತಾನೆ. ಅದನ್ನ ಮೀರಿದವನು ಜ್ಞಾನಿ ಅನ್ನಿಸಿಕೊಳ್ಳುತ್ತಾನೆ.

Freedom from Freedom!! Metaphysical Notesಶಾಸ್ತ್ರ ಎಂದರೆ ನಮ್ಮ ದೈನಂದಿನ ಕಾರ್ಯಗಳಿಗೆ ಬೇಕಾದ ಜ್ಞಾನ. ಉದಾಹರಣೆಗೆ ವೈದ್ಯಶಾಸ್ತ್ರ , ಸಮಾಜಶಾಸ್ತ್ರ, ಕಾನೂನು, ಅಕೌಂಟೆನ್ಸಿ, ಮಾಹಿತಿ ತಂತ್ರಜ್ಞಾನ. ಇದನ್ನು ಯಾರು ಬೇಕಾದರೂ ಓದಿ ತಿಳಿದುಕೊಳ್ಳಬಹುದು. ಓದಿ ತಿಳಿದುಕೊಳ್ಳದೇ ಹೋದರೂ ಅದು ಪುಸ್ತಕದಲ್ಲಿ ಸಿಗುತ್ತದೆ. ಯಾವಾಗ ಬೇಕಾದರೂ ಓದಬಹುದು. ಆದರೆ ಉಪನಿಷತ್ತು ನೀಡುವ ತಿಳುವಳಿಕೆ ಅಂಥದ್ದಲ್ಲ. ಅದನ್ನು ಯಾವಾಗ ಬೇಕಾದರೂ ಓದಿ ತಿಳಿದುಕೊಳ್ಳಲಾಗುವುದಿಲ್ಲ. ಅದು ಮನಸ್ಸಿನ ಒಳಹೊಕ್ಕುವುದಕ್ಕೊಂದು ಸುಮುಹೂರ್ತ ಬೇಕಾಗುತ್ತದೆ. ಶಾಸ್ತ್ರದ ಮೂಲದ ಜ್ಞಾನವನ್ನೂ ಪಡೆದುಕೊಳ್ಳುವ ಹಾಗಿದ್ದರೆ ಬುದ್ಧ ಜ್ಞಾನೋದಯ ಆಗುವುದಕ್ಕೆ ಅಷ್ಟೊಂದು ವರುಷ ಕಾಯಬೇಕಾಗಿರಲಿಲ್ಲ.

ಇದನ್ನೇ ನಮ್ಮ ಹಿರಿಯರು ಕಲೆ ಅಂತ ಕರೆದರು. ಅರುವತ್ತನಾಲ್ಕು ವಿದ್ಯೆಗಳಲ್ಲಿ ಎಲ್ಲಕ್ಕೂ ಕಲೆಯ ಸ್ವರೂಪ ಕೊಟ್ಟರು. ಕಲೆಯನ್ನು ಕಲಿಯಬಹುದೇ, ಕಲಿಸಬಹುದೇ ಅಥವಾ ಅದು ಮೈಗೂಡಬೇಕೆ ಅನ್ನುವುದು ಬೇರೆ ಪ್ರಶ್ನೆ. ಹಾಗೆ ನೋಡಿದರೆ ಕಲೆ ಜ್ಞಾನದ ಹಾಗೆ ಒಳಗಿನಿಂದ ಬರುವಂಥದ್ದು, ವಿಜ್ಞಾನ ಹೊರಗಿನಿಂದ ಬರುವಂಥದ್ದು. ಆದ್ದರಿಂದಲೇ ವಿಜ್ಞಾನದಲ್ಲಿ ಹೊಸದನ್ನು ಕಂಡುಹಿಡಿಯುತ್ತಾರೆ, ಅದು ಸಂಶೋಧನೆ. ಕಲೆಯಲ್ಲಿ ಹೊಸದನ್ನು ಸೃಷ್ಟಿಸುತ್ತಾರೆ, ಅದು ಸೃಜನಶೀಲತೆ. ಸಂಶೋಧನೆ ಅಂದರೆ ಇದ್ದಿದ್ದನ್ನು ಹುಡುಕುವುದು. ವಿಜ್ಞಾನ ಶೂನ್ಯದಿಂದ ಏನನ್ನೂ ಸೃಷ್ಟಿಸಲಾರೆವು ಅನ್ನುತ್ತದೆ. ಆದರೆ ಕಲೆ ಶೂನ್ಯದಿಂದಲೇ ಸೃಷ್ಟಿಸುತ್ತದೆ.

ಕಲೆ ನಮಗೇಕೆ ಬೇಕು ಅನ್ನುವ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಿದೆ. ಇದಕ್ಕಿಂತ ಅಪಾಯಕಾರಿ ಪ್ರಶ್ನೆ ಮತ್ತೊಂದಿಲ್ಲ. ಇವತ್ತು ಪತ್ರಿಕೆಗಳಲ್ಲಿ ಕಲಾವಿದರಿಲ್ಲ, ಡಿಸೈನರ್‌ಗಳಿದ್ದಾರೆ. ಅವರು ಪುಟವಿನ್ಯಾಸ ಮಾಡುತ್ತಾರೆ. ಅವರ ಮುಂದೆ ಒಂದಷ್ಟು ಮಾದರಿಗಳಿರುತ್ತವೆ. ಒಂದಷ್ಟು ಒಳ್ಳೆಯ ಫೋಟೋ ಕೊಟ್ಟರೆ ಒಂದು ಪುಟವನ್ನು ಸೊಗಸಾಗಿ ಕಟ್ಟಿಕೊಡಬಲ್ಲ ನಿಪುಣರು ಅವರು. ವಾಸ್ತುವಿಗೆ ಅನುಗುಣವಾಗಿ ಕಟ್ಟಿದ ಮನೆಯಂತೆ ಆ ಪತ್ರಿಕೆ ಸೊಗಸಾಗಿ ಕಾಣಿಸುತ್ತದೆ ಕೂಡ.

ಆದರೆ ಅಲ್ಲಿ ಓದುವುದಕ್ಕೇನಿರುತ್ತದೆ? ಕಲಾವಿದನ ಮಾಂತ್ರಿಕ ಸ್ಪರ್ಶ ಎಲ್ಲಿರುತ್ತದೆ? ಒಳ್ಳೆಯ ಫೊಟೋಗಳನ್ನು ಪ್ರಕಟಿಸುವುದು ಇವತ್ತಿನ ಪತ್ರಿಕೋದ್ಯಮ ಅಲ್ಲ. ಬೇರೆ ದೇಶಗಳಲ್ಲಿ ಇವತ್ತು ಓದುಗರು ಅಕ್ಷರಕ್ಕೆ ಹಪಹಪಿಸುತ್ತಾರೆ. ಫೋಟೋಗಳನ್ನು ಸುಟ್ಟುಹಾಕಿ. ನಮಗದು ಬೇಕಾಗಿಲ್ಲ. ನಮಗೆ ಓದಲು ಕೊಡಿ ಅಂತ ಕೇಳುತ್ತಿದ್ದಾರೆ. ಯಾಕೆಂದರೆ ಫೋಟೊಗಳ ಸ್ಥಾನವನ್ನು ಟೀವಿ ಆಕ್ರಮಿಸಿಕೊಂಡಿದೆ. ಸುಂದರವಾದ ಮಲೆನಾಡು ಅಂತ ಒಂದು ಪೋಟೋ ಪ್ರಕಟಿಸುವ ಹೊತ್ತಿಗೆ ಟೀವಿಯಲ್ಲಿ ಇಡೀ ಮಲೆನಾಡೇ ಪ್ರತಿಬಿಂಬಿಸಿರುತ್ತದೆ. ಬಹುತೇಕರ ಬಳಿ ಕಂಪ್ಯೂಟರ್‌ ಇದೆ. ಯಾವ ಫೊಟೋ ಬೇಕಿದ್ದರೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಅಷ್ಟಕ್ಕೂ ಫೊಟೋ ಅಲ್ಲೆಲ್ಲೋ ಇರುವುದನ್ನು ಇಲ್ಲಿ ತೋರಿಸುತ್ತದೆ ಅಷ್ಟೇ.

***

ಈ ಪ್ರಸ್ತಾಪ ಕಾರಣ ಥಟ್ಟನೆ ಹೊಳೆದ ಒಂದು ಪ್ರಶ್ನೆ. ನಾವೇಕೆ ಸದಾ ವಿಷಾದಗೀತೆಗಳನ್ನೇ ಇಷ್ಟಪಡುತ್ತೇವೆ? ಯಾಕೆ ಸದಾ ಸಾವಿನ ಬಗ್ಗೆಯೇ ಚಿಂತಿಸುತ್ತಿರುತ್ತೇವೆ. ಬದುಕನ್ನು ಸದಾ ಸಾವಿನ ಬೆಳಕಲ್ಲೇ ಯಾಕೆ ನೋಡುತ್ತೇವೆ?

ಇದು ಆಯಾ ವ್ಯಕ್ತಿಯ ಕಲಾತ್ಮಕತೆಗೆ ಸಂಬಂಧಿಸಿದ್ದು. ಅತ್ಯಂತ ಪರಿಪೂರ್ಣ ಕಲೆ ಅಂದರೆ ಸಾವು. ಸಾವಿನಂಥ ಸೊಗಸಾದ ಆರ್ಟ್‌ವರ್ಕ್‌ ಮತ್ತೊಂದಿಲ್ಲ. ಅದು ಪ್ರತಿಯಾಂದು ಕೃತಿಗೂ ಒಂದು ಅದ್ಭುತವಾದ ಫಿನಿಷಿಂಗ್‌ ಟಚ್‌ ಕೊಡುತ್ತದೆ. ಅದನ್ನು ಊಹಿಸಿಕೊಂಡು ನಾವು ಬದುಕುತ್ತೇವೆ. ಸಾವು ಇಲ್ಲದೇ ಹೋಗಿದ್ದರೆ ಬಹುಶಃ ಬದುಕು ಇಷ್ಟು ಜೀವಂತಿಕೆಯಿಂದ ಕೂಡಿರುತ್ತಿರಲಿಲ್ಲ. ಯಾಕೆಂದರೆ ಜೀವಂತಿಕೆ ಮತ್ತು ನಿರ್ಜೀವವನ್ನು ಬೇರ್ಪಡಿಸುವ ಬಿಂದುವೇ ಇರುತ್ತಿರಲಿಲ್ಲ.

ಬೇಕಿದ್ದರೆ ನೋಡಿ; ಅತ್ಯಂತ ತೀವ್ರವಾಗಿ ಈ ಬದುಕನ್ನು ಅನುಭವಿಸುವ ಮಂದಿ ಎಲ್ಲರಿಗಿಂತ ಹೆಚ್ಚು ಫಿಲಾಸಫಿಕಲ್‌ ಆಗಿರುತ್ತಾರೆ. ಉದಾಹರಣೆಗೆ ಯೇಟ್ಸ್‌, ಬೋಧಿಲೇರ್‌. ಜ್ಞಾನವೈರಾಗ್ಯ ಅನ್ನುವ ಮಾತೊಂದು ನಮ್ಮಲ್ಲಿದೆ. ಜ್ಞಾನದ ಜೊತೆಗೆ ವೈರಾಗ್ಯವೂ ಬರಬೇಕು. ಆ ವೈರಾಗ್ಯ ಬಂದಾಗ ಜ್ಞಾನ ಏನೂ ಅಲ್ಲ ಅನ್ನುವುದು ಗೊತ್ತಾಗಬೇಕು. ಮತ್ತೆ ಅಜ್ಞಾನಿಯಾಗಬೇಕು ಅನ್ನಿಸಬೇಕು. ಅದು ಪದಬಂಧವನ್ನು ಬಿಡಿಸಿದಂತೆ. ಬಿಡಿಸುವ ಮುನ್ನ ಕುತೂಹಲ, ಬಿಡಿಸಿದ ನಂತರ ಮುಗಿಯಿತಲ್ಲ ಅನ್ನುವ ನಿರಾಸೆ.

ಸಾವನ್ನು ಎದುರಿಗಿಟ್ಟು ನೋಡದೇ ಹೋದರೆ ಈ ಬದುಕು ಎಷ್ಟು ನೀರಸವಾಗುತ್ತಿತ್ತು ಊಹಿಸಿ. ಇವತ್ತಲ್ಲ ನಾಳೆ ಸಾಯುತ್ತೇವೆ ಅನ್ನುವ ಭರವಸೆಯೆ ನಮ್ಮನ್ನು ಬದುಕುವುದನ್ನೂ ಪ್ರೇರೇಪಿಸುತ್ತದೆ. ಆ ಕಾರಣಕ್ಕೇ ಸಾವಿನಂಥ ಪ್ರೇರಕಶಕ್ತಿ ಮತ್ತೊಂದಿಲ್ಲ. ಸಾವು ಪ್ರೇರಕ ಶಕ್ತಿ ಆಗಿರದೇ ಹೋಗಿದ್ದರೆ, ಯಾರೂ ಬದುಕುತ್ತಲೇ ಇರಲಿಲ್ಲ. ನಾಳೆ ಸಾಯ್ತೀವಿ ಅನ್ನೋ ದುಃಖಕ್ಕೆ ಎಲ್ಲರೂ ಇವತ್ತೇ ಸಾಯುತ್ತಿದ್ದರು. ತ್ಸುನಾಮಿ ಅಲೆ ಬಂದು ಅಪ್ಪಳಿಸಿದ ಎರಡೇ ದಿನಕ್ಕೆ ಮತ್ತೆ ಸಮುದ್ರ ತೀರ ಗಿಜಿಗುಡುತ್ತದೆ. ಅಲ್ಲೊಂದು ಪ್ರೇಮ ಅರಳುತ್ತದೆ. ಅದು ಬದುಕನ್ನು ಕಟ್ಟುವ ಮಾತಾಡುತ್ತದೆ. ಹಿಂದಿನ ದಿನ ಸವರಿಕೊಂಡು ಹೋದ ಸಾವಿನ ಕೈಯಲ್ಲಿ ಮಾರನೆಯ ಬೆಳಗ್ಗೆ ಮಲ್ಲಿಗೆಯ ಮಾಲೆಯಿರುತ್ತದೆ.

ಅದಕ್ಕೇ ನಾವು ಈ ಬದುಕು ನಶ್ವರ ಅನ್ನುವ ಗೀತೆಗಳನ್ನು ಮೆಚ್ಚುತ್ತೇವೆ. ಶ್ರೀಮಂತ ಮತ್ತು ಕಡುಬಡವ ಇಬ್ಬರೂ ‘ಈ ಜೀವನ ಇಷ್ಟೇ ಗುರೂ. ಇವತ್ತು ಬಂದಿದ್ದನ್ನು ಅನುಭವಿಸೋಣ. ನಾಳೆ ಯಾರು ಬದುಕಿರ್ತೀವೋ ಯಾರಿಗೆ ಗೊತ್ತು’ ಅನ್ನುತ್ತಲೇ ಬದುಕುತ್ತಾರೆ. ಒಂದೊಂದು ದಿನವೂ ನಮ್ಮನ್ನು ಸಾವಿನರಮನೆಯ ಹೊಸ್ತಿಲಿನತ್ತ ಕರೆದೊಯ್ಯುತ್ತದೆ ಅಂಥ ಗೊತ್ತಿದ್ದೂ ತೀವ್ರವಾಗಿ ಬದುಕುತ್ತಾ ಹೋಗುತ್ತೇವೆ.

ಹಾಗೆ ನೋಡಿದರೆ ನಾವು ಪಶ್ಚಾತ್ತಾಪ ಪಡದಿರುವ ಏಕೈಕ ಕ್ರಿಯೆ; ಸಾವು. ಗೋರಿಯಲ್ಲಿ ಮಲಗಿದ ಯಾರೂ ‘ಛೇ, ಸಾಯಬಾರದಿತ್ತು ನಾನು’ ಅಂದುಕೊಳ್ಳುವುದಿಲ್ಲ. ಹೀಗಾಗಿ ಅದು ಎಲ್ಲರೂ ಕಾಯಾವಾಚಾಮನಸಾ ಒಪ್ಪಿಕೊಂಡು ಮಾಡುವ ಕೆಲಸ!

ಅಮರತ್ವದ ಆಶೆ ಮತ್ತು ಸಾವಿನ ಸೆಳೆತ- ಎರಡರಲ್ಲಿ ಯಾವುದು ನಮಗೆ ಹತ್ತಿರ. ಅಮರರಾಗುವ ಆಶಯದಲ್ಲೇ ಸಾವಿನ ಬೀಜ ಇದೆ.

I die because I do not die!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more