ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಆರೋಗ್ಯ ನನಗೆ ಚೆನ್ನಾಗಿ ಗೊತ್ತು!

By Staff
|
Google Oneindia Kannada News
  • ಜಾನಕಿ
What does this mean for my health?ಬೆಳಗ್ಗೆ ಎದ್ದು ವಾಕಿಂಗ್‌ ಮಾಡಿ. ಒಂದು ಗಂಟೆ ವಾಕಿಂಗ್‌ ಮಾಡಿದರೆ ನೀವು ಮೂರೂವರೆ ಮೈಲು ನಡೆದಿರುತ್ತೀರಿ. ಮೂರೂವರೆ ಮೈಲು ಅಂದರೆ ಸರಿಸುಮಾರು 5.6 ಕಿಲೋಮೀಟರ್‌. ದಿನಕ್ಕೆ ಇಷ್ಟು ದೂರ ನಡೆದರೆ ವಾರಕ್ಕೆ ಏನಿಲ್ಲವೆಂದರೆ ಒಂಬೈನೂರು ಕ್ಯಾಲರಿ ಕರಗಿರುತ್ತದೆ. ಇದೇ ವೇಗದಲ್ಲಿ ಸಾಗಿದರೆ ತಿಂಗಳಿಗೆ ಮೂರರಿಂದ ನಾಲ್ಕು ಕೇಜಿ ಇಳಿದುಹೋಗುತ್ತೀರಿ..’

ಜಗತ್ತಿನ ಅತ್ಯುತ್ತಮ ಹಾಸ್ಯಲೇಖನ ಹೀಗೆ ಶುರುವಾಗುತ್ತದೆ. ಇದನ್ನು ಯಾರ ಮುಂದೆ ಹೇಳಿದರೂ ಅವರು ಅತ್ಯಾಸಕ್ತಿಯಿಂದ ಕೇಳಿಸಿಕೊಳ್ಳುತ್ತಾರೆ. ತಕ್ಷಣವೇ ಬೆಳಗ್ಗೆ ಎದ್ದು ವಾಕಿಂಗು ಹೋಗುವ ನಯನ ಮನೋಹರ ಚಿತ್ರ ಕೇಳುವವರ ಕಣ್ಮುಂದೆ ಬಂದು ಹೋಗುತ್ತದೆ. ಚುಮುಚುಮು ಮುಂಜಾನೆ, ಹುಲ್ಲಿನ ಮೇಲೆ ಬಿದ್ದು ಮಿರುಗುತ್ತಿರುವ ಮಂಜಿನ ಹನಿಗಳು, ಮರದ ಮರೆಯಲ್ಲಿ ಪಂಚಮದಲ್ಲಿ ಹಾಡುವ ಕೋಗಿಲೆ, ಹಿತವಾದ ತಂಗಾಳಿಗೆ ಎದೆಯಾಡ್ಡಿ ನಡೆಯತ್ತಿದ್ದರೆ ಪುಟಿಯುವ ಜೀವನೋತ್ಸಾಹ...

‘ಅಷ್ಟೇ ಅಲ್ಲ...ಬೆಳಗ್ಗಿನ ಹೊತ್ತು ಓಜೋನ್‌ ಲೇಯರ್‌ ತುಂಬ ಕೆಳಗಿರುತ್ತದೆ. ಆಕ್ಸಿಜನ್‌ ಲೆವೆಲ್ಲೂ ಜಾಸ್ತಿಯಿರುತ್ತದೆ...’ ಮಾತು ಹೀಗೆ ಮುಂದುವರಿಯುತ್ತದೆ.

****

ಆರೋಗ್ಯದ ಬಗ್ಗೆ ಮಾತಾಡುವುದು ಮಾನವನ ಅತ್ಯಂತ ಉಲ್ಲಾಸದಾಯಕ ಕ್ಷಣಗಳಲ್ಲಿ ಒಂದು. ನೀವು ತಲೆನೋವು ಅಂತ ಹೇಳಿನೋಡಿ, ತಲೆನೋವಿಗೆ ಸಂಬಂಧಿಸಿದ ಅಸಂಖ್ಯ ಚಿಕಿತ್ಸೆಗಳು, ಔಷಧಿಗಳು, ವಿಧಾನಗಳು ನಿಮ್ಮ ಮುಂದೆ ಹಾಜರಾಗುತ್ತವೆ. ಇನ್ನೊಬ್ಬರ ಕಾಯಿಲೆಯ ವಿಚಾರದಲ್ಲಿ ಪ್ರತಿಯಾಬ್ಬರೂ ವೈದ್ಯರೇ. ಇನ್ನೊಬ್ಬರು ಮನೆ ಕಟ್ಟುತ್ತಿರುವ ಹೊತ್ತಿಗೆ ಪ್ರತಿಯಾಬ್ಬರೂ ವಾಸ್ತು ಶಾಸ್ತ್ರಜ್ಞರೇ. ತಲೆನೋವು ಅನ್ನುವುದೇನು ಅಂತ ಗೊತ್ತಿಲ್ಲದವನಿಂದ ಹಿಡಿದು, ಎಲ್ಲರಿಗೂ ತಲೆನೋವಾಗಿರುವ ವ್ಯಕ್ತಿಯ ತನಕ ಪ್ರತಿಯಾಬ್ಬರೂ ತಲೆನೋವಿಗೆ ಪರಿಹಾರ ಹೇಳುವವರೇ.

ಮೇಲಿನ ಉದಾಹರಣೆ ತೆಗೆದುಕೊಳ್ಳಿ. ದಿನಕ್ಕೆ ಎಂಟು ಮೈಲಿ ನಡೆಯೋದರಿಂದ ತಿಂಗಳಿಗೆ ಐದು ಕೇಜಿ ಕಡಿಮೆ ಆಗೋ ಹಾಗಿದ್ದರೆ, ಐವತ್ತು ಕೇಜಿ ಇದ್ದವರು ವರುಷದ ಕೊನೆಗೆ ಕರಗಿಹೋಗುತ್ತಾರಲ್ಲ? ಸೈಕಲ್ಲಿನಲ್ಲಿ ಪೇಪರ್‌ ಹಾಕುವವರಿಗೆ, ತರಕಾರಿ ಮಾರುವವರಿಗೆ, ರೈತರಿಗೆ ಯಾವ ಕಾಯಿಲೆಯೂ ಬರಬಾರದಲ್ಲ? ಸಿಗರೇಟು ಸೇದದೇ ಇರುವವರು ಶತಾಯುಷಿಯಾಗಬೇಕಲ್ಲ?

ಅದು ಹಾಗಾಗುವುದಿಲ್ಲ. ಮಾತಾಡಿದಷ್ಟು ಸರಳವೂ ಅಲ್ಲ. ಆರೋಗ್ಯದ ಬಗ್ಗೆ ಮಾತಾಡುವುದು ಕೂಡ ಒಂದು ಚಟ. ನಮ್ಮನ್ನು ಕಾಡುವುದು ಕಾಯಿಲೆಯಲ್ಲ, ಅದರ ಕುರಿತು ಆಡುವ ಮಾತು, ಬರುತ್ತಿರುವ ಲೇಖನ, ಸಿಗುವ ಪುಕ್ಕಟೆ ಸಲಹೆಗಳೇ ಕಾಯಿಲೆಗಿಂತ ಭೀಕರ. ಬೊಜ್ಜನ್ನು ಹೇಗಾದರೂ ಹೊತ್ತು ಸಾಗಿಸಬಹುದು. ಆದರೆ ಅದರ ಕುರಿತ ಕಾಮೆಂಟುಗಳನ್ನು ಹೊರುವುದು ಕಷ್ಟ.

ತೆಳ್ಳಗಾಗಿ, ನೀವು ಐದು ಕೇಜಿ ಇಳಿಸಿದರೆ ಒಂದು ವರುಷ ಜಾಸ್ತಿ ಬದುಕುತ್ತೀರಿ ಅನ್ನುತ್ತಿದ್ದ ವೈದ್ಯರು, ನಲುವತ್ಮೂರನೇ ವಯಸ್ಸಿಗೆ ತೀರಿಕೊಂಡರು. ಅಪಘಾತದಲ್ಲಿ ಅಲ್ಲ, ಹೃದಯಾಘಾತದಿಂದ. ಅವರ ವಾಕಿಂಗು ಮತ್ತು ಡಯಟ್ಟು ಅವರ ಸಹಾಯಕ್ಕೆ ಬರಲಿಲ್ಲ. ಬದುಕಿದ್ದಷ್ಟು ದಿನವೂ ಆ ಅಸಾಮಿ ಸುಖದಲ್ಲಿ ಬದುಕಲೂ ಇಲ್ಲ. ಸಿಗರೇಟು ಸೇದಬೇಕು ಅನ್ನುವ ಆಸೆ ಮತ್ತು ಸೇದಬಾರದು ಅನ್ನುವ ನಿರ್ಧಾರದಲ್ಲಿ ಕೊನೆಗೂ ಗೆದ್ದದ್ದು ಸೇದಬಾರದು ಅನ್ನುವ ನಿರ್ಧಾರ. ಆ ಸಿಟ್ಟಿಗೆ ಸಿಗರೇಟು ಸೇದುವವರಿಗೆಲ್ಲ ಬಿಟ್ಟಿ ಭಾಷಣ.

ಅಷ್ಟಕ್ಕೂ ಯಾವುದೇ ಚಟಗಳಿಲ್ಲದೇ ಬದುಕಿದರೆ ಏನು ಲಾಭ? ಅಬ್ಬಬ್ಬಾ ಅಂದರೆ ಐದು ವರುಷ ಜಾಸ್ತಿ ಬದುಕಬಹುದು ತಾನೆ? ಎಪ್ಪತ್ತು ವರುಷ ಬದುಕುವ ವ್ಯಕ್ತಿ, ಎಪ್ಪತ್ತೆೈದು ವರುಷ ಬದುಕುತ್ತಾನೆ ಅಂತಿಟ್ಟುಕೊಳ್ಳೋಣ. ಆ ಕೊನೆಯ ಐದು ವರುಷಗಳನ್ನು ಆತ ಹಿಂಸೆಪಡುತ್ತಲೇ ಕಳೆಯುತ್ತಾನೆ. ಯಾಕಪ್ಪಾ ಬದುಕಿದ್ದೀನಿ ಅನ್ನಿಸಿಕೊಂಡೇ ಜೀವಿಸುತ್ತಾನೆ. ಅದರ ಬದಲು ಆ ಐದು ವರುಷಗಳನ್ನು ತನ್ನಿಚ್ಛೆಯಂತೆ ಯಾಕೆ ಕಳೆಯಬಾರದು?

ಇದು ವಾದ. ಎಪ್ಪತ್ತು ದಾಟಿದ ಹಿರಿಯರೊಬ್ಬರು ದಿನಕ್ಕೆ ಹತ್ತೆಂಟು ಸಿಗರೇಟು ಸೇದುತ್ತಿದ್ದರಂತೆ. ದಿನಾ ಸಿಗರೇಟು ಬಿಡಬೇಕು ಕಣಯ್ಯಾ ಅಂತ ಗೆಳೆಯನ ಹತ್ತಿರ ಹೇಳಿಕೊಳ್ಳುತ್ತಿದ್ದರಂತೆ. ಒಂದು ದಿನ ಬಂದವರೇ ‘ಇನ್ನು ಸಿಗರೇಟು ಬಿಡೋಕ್ಕಾಗಲ್ಲ ಕಣೋ’ ಅಂತ ಗೋಳಾಡಿದರಂತೆ. ಯಾಕೆ ಅಂತ ಕೇಳಲಾಗಿ ಅವರು ಹೇಳಿದ್ದಿಷ್ಟು; ‘ಸಿಗರೇಟು ಬಿಡಿ ಸಾರ್‌ ಅನ್ನುತ್ತಿದ್ದ ಡಾಕ್ಟರು ಚಿಕ್ಕ ವಯಸ್ಸಿಗೇ ಭಗವಂತನ ಪಾದ ಸೇರ್ಕೊಂಡ್ರು. ಇನ್ನು ಸಿಗರೇಟು ಬಿಡಿ ಅಂತ ಹೇಳೋರು ಯಾರಿದ್ದಾರೆ ಹೇಳು?’

ಇದು ಡಿವಿಜಿ ಹೇಳುತ್ತಿದ್ದ ಜೋಕು. ನಮ್ಮಲ್ಲಿ ತಮಾಷೆಯೆಂದರೆ ಆಯುಷ್ಯ ಬರೆಯುವವನು ಬ್ರಹ್ಮ ಅಂತಲೂ ನಂಬುತ್ತೇವೆ, ಅದನ್ನು ಸಿಗರೇಟು ಕಮ್ಮಿಮಾಡುತ್ತದೆ ಅಂತಲೂ ನಂಬುತ್ತೇವೆ. ಅಂದರೆ ಬ್ರಹ್ಮನಿಗಿಂತ ಸಿಗರೇಟಿನ ಮಹಿಮೆಯೇ ಜಾಸ್ತಿ ಆದಂತಾಯಿತಲ್ಲ? ಇಲ್ಲದಿದ್ದರೆ ಸಿಗರೇಟಿನಿಂದ ಬ್ರಹ್ಮ ಬರೆದ ಆಯಸ್ಸು ಕಮ್ಮಿ ಆಗೋದಾದರೂ ಹೇಗೆ?

*****

ಅಷ್ಟಕ್ಕೂ ವಾಕಿಂಗು ತಪ್ಪೇನಲ್ಲ. ಇದು ವಾಕಿಂಗಿನ ವಿರುದ್ಧವಾದ ವಾದವೂ ಅಲ್ಲ. ಆದರೆ ಗೆಳೆಯರೊಬ್ಬರು ಹೇಳುವ ಹಾಗೆ ಬದುಕುವುದಕ್ಕಾಗಿ ಆರೋಗ್ಯವಾಗಿರಬೇಕೇ ಹೊರತು, ಆರೋಗ್ಯವಾಗಿರಲಿಕ್ಕೇ ಬದುಕಬಾರದು. ಜೀವನವನ್ನು ಕ್ಯಾಲರಿಗಳಲ್ಲಿ ಅಳೆಯುತ್ತಾ ಕೂರುವುದಕ್ಕಿಂತ ಪೆಗ್ಗುಗಳಲ್ಲಿ ಅಳೆಯೋದು ಉತ್ತಮ ಅನ್ನುತ್ತಿದ್ದರು ವೈಯನ್ಕೆ. ನಾ ಸುಟ್ಟ ಸಿಗರೇಟಿನ ಲೆಕ್ಕ, ಯಮ ನೋಡಿ ನಕ್ಕ ಅಂತ ಬಿಳಿಗಿರಿ ಪದ್ಯ ಬರೆದಿದ್ದರು ಅಂತ ನೆನಪು.

ಬೆಂಗಳೂಲ್ಲಿನಂಥ ಮಹಾನಗರಗಳ ಅತ್ಯಂತ ಭೀಕರವಾದ ಕಾಯಿಲೆಯೆಂದರೆ ಆರೋಗ್ಯದ ಬಗ್ಗೆ ಯೋಚಿಸುವುದು, ಆರೋಗ್ಯದ ಬಗ್ಗೆ ಮಾತಾಡುವುದು, ಆರೋಗ್ಯದ ಬಗ್ಗೆ ಬರೆಯುವುದು ಮತ್ತು ಯಾರು ಏನು ಹೇಳಿದರೂ ಅದನ್ನು ಪಾಲಿಸುವುದು. ಪ್ರತಿಯಾಂದು ಜೀವವೂ ಒಂದು ವಿಶಿಷ್ಟ ಸೃಷ್ಟಿ. ಬೆಳಗ್ಗೆ ಎದ್ದು ಐದು ಲೀಟರ್‌ ನೀರು ಕುಡಿಯಿರಿ ಅನ್ನುವ ಸೂತ್ರ ಒಬ್ಬರಿಗೆ ಒಗ್ಗಬಹುದು, ಮತ್ತೊಬ್ಬರಿಗೆ ಒಗ್ಗದೇ ಇರಬಹುದು. ಅದನ್ನು ಎಲ್ಲರಿಗೂ ಅನ್ವಯಿಸುವುದರಿಂದ ಅನುಕೂಲಕ್ಕಿಂತ ಹಾನಿಯೇ ಜಾಸ್ತಿ. ಹಾಗೆ ಬೆಳಗ್ಗೆ ಎದ್ದು ಆಫೀಸಿಗೆ ಹೋದಷ್ಟೇ ನಿಷ್ಠೆಯಿಂದ ವಾಕಿಂಗು ಹೋಗಿ ಬಂದರೆ ಅದರಿಂದ ಅಂಥ ದೊಡ್ಡ ಪ್ರಯೋಜನವೂ ಆಗಲಿಕ್ಕಿಲ್ಲ. ಕೇವಲ ದೇಹ ಚೆನ್ನಾಗಿದ್ದರೆ ಸಾಕು ಅಂತ ಅದನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಕಷ್ಟಪಡುವುದು ಮೂರ್ಖತನ ಕೂಡ. ಕಾರನ್ನು ಸರ್ವೀಸು ಮಾಡಿಸಿದ ಹಾಗೆ ದೇಹವನ್ನೂ ಸರ್ವೀಸು ಮಾಡಿಸುತ್ತೇವೆ ಅಂದ ಹಾಗೆ. ದೇಹ ನಡೆಯುವುದು ಮನಸ್ಸಿನಿಂದ, ಮನಸ್ಸಿಗೆ ಬೇಕಾದದ್ದು ಸಹಜ ಉಲ್ಲಾಸ ಮತ್ತು ಲವಲವಿಕೆ. ಅದು ಸಿಗುವುದು ವಾಕಿಂಗಿನಿಂದಲೂ ಅಲ್ಲ, ಯೋಗಾಭ್ಯಾಸದಿಂದಲೂ ಅಲ್ಲ.

ಈ ಯೋಗಾಭ್ಯಾಸ, ಧ್ಯಾನ ಮತ್ತು ವ್ಯಾಯಾಮ ಎಷ್ಟು ಕೃತಕ ಅನ್ನುವುದನ್ನು ಯೋಚಿಸಿ. ದೇಹಕ್ಕೆ ಅದಕ್ಕೆ ಸಹಜವಾದ ಒಂದು ಚಲನೆ ಇರುತ್ತದೆ. ಕೈ ಯಾವ ದಿಕ್ಕಿಗೆ ಬಾಗಬೇಕು. ಕಾಲನ್ನು ಎಷ್ಟು ಮಡಿಸಬೇಕು, ಕೈಯನ್ನು ಎಷ್ಟು ಚಾಚಬೇಕು ಅನ್ನುವುದನ್ನೆಲ್ಲ ಆಯಾ ವ್ಯಕ್ತಿಯ ಚಟುವಟಿಕೆಗಳೇ ನಿರ್ಧರಿಸುತ್ತವೆ. ಯೋಗಾಭ್ಯಾಸ ಅಂದರೆ ಕೈಕಾಲುಗಳನ್ನು ಪ್ರಯತ್ನಪೂರ್ವಕವಾಗಿ ತಿರುಚುವುದು, ಚಾಚುವುದು, ಎಳೆಯುವುದು. ಮನುಷ್ಯಮಾತ್ರರಿಗೆ ಅಸಾಧ್ಯವಾದ ಭಂಗಿಗಳನ್ನು ಪ್ರದರ್ಶಿಸುವುದು. ಅದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ ಅಂದ ಮೇಲೆ ಅದು ಸಹಜ ಅಲ್ಲವೇ ಅಲ್ಲ!

ನೀವು ಹುಲಿಯನ್ನು ಗಮನಿಸಿ ನೋಡಿ. ಅದರ ಹೊಟ್ಟೆ ಹೇಗಿರುತ್ತದೆ ಗಮನಿಸಿ. ಸಿಂಹದ ಹೊಟ್ಟೆಯೂ ಅಷ್ಟೇ. ಮಾಂಸಾಹಾರ ತಿನ್ನುವ ಹುಲಿ ಸಿಂಹಗಳನ್ನು ಯಾಕೆ ಬೊಜ್ಜು ಬಾಧಿಸುವುದಿಲ್ಲ ಯೋಚಿಸಿ. ಅವು ತಮ್ಮ ಅಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ. ಆಹಾರವನ್ನು ಅವುಗಳಿಗೆ ಯಾರೂ ಸರಬರಾಜು ಮಾಡುವುದಿಲ್ಲ. ಅದೇ ಪ್ರಾಣಿಸಂಗ್ರಹಾಲಯದಲ್ಲಿರುವ ಹುಲಿಯನ್ನೇ ನೋಡಿ; ಅದು ಯಾವತ್ತೂ ಅಲ್ಲಿ ತಂದಿಟ್ಟ ಮಾಂಸವನ್ನು ಮುಗಿಯಬೇಕು ಅನ್ನುವ ಕಾರಣಕ್ಕೆ ತಿನ್ನುವುದಿಲ್ಲ.

ನಾವು ಚಿಕ್ಕಂದಿನಲ್ಲೇ ಮಕ್ಕಳಿಗೆ ಹೇಳತೊಡಗುತ್ತೇವೆ; ಬಡಿಸಿದ್ದನ್ನು ಪೂರ್ತಿ ತಿನ್ನಬೇಕು. ಅನ್ನ ಅಂದರೆ ದೇವರು. ವ್ಯರ್ಥ ಮಾಡಬಾರದು. ಹೀಗೆ ಹೇಳುವವರೇ ಒತ್ತಾಯ ಮಾಡಿ ಬಡಿಸುತ್ತಾರೆ.

ಹೆೋಟೆಲಿಗೆ ಹೋಗುತ್ತೇವೆ. ಅಲ್ಲಿ ರಾಜೋಪಚಾರ ಮಾಡಿಸಿಕೊಂಡು ತಿನ್ನುತ್ತೇವೆ. ಕೈ ತೊಳೆಯಲೂ ಎದ್ದು ಹೋಗದೆ, ಕೈತೊಳೆದ ನೀರಲ್ಲೇ ಬಾಯಿ ಒರೆಸಿಕೊಂಡು ಬಂದುಬಿಡುತ್ತೇವೆ.

***

ಕೊನೆಯದಾಗಿ, ಮಾತ್ರೆ ತೆಗೆದುಕೊಳ್ಳಬೇಡಿ ಅನ್ನುವ ಮತ್ತೊಂದು ಪುಕ್ಕಟೆ ಸಲಹೆ ಎಲ್ಲರೂ ಕೊಡುತ್ತಿರುತ್ತಾರೆ. ತಲೆನೋವು ಬಂದರೆ ಅನುಭವಿಸಿ, ಒದ್ದಾಡಿ, ಹಿಂಸೆಪಡಿ. ಆದರೆ ಮಾತ್ರೆ ತಗೋಬೇಡಿ. ಅದು ಜೀವವಿರೋಧಿ.

ಆದರೆ ನಾವು ಬದುಕುತ್ತಿರೋದೇ ಜೀವವಿರೋಧಿ ಪರಿಸರದಲ್ಲಿ. ತಲೆನೋವು ಬಂದಿರುವುದು ಹೊರಗಿನಿಂದ. ಅದಕ್ಕೆ ಮಾತ್ರೆ ತೆಗೆದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಪ್ರಕೃತಿಯ ಮಡಿಲಲ್ಲಿದ್ದಾಗ, ಸಹಜವಾಗಿ ಬಂದ ತಲೆನೋವು ಸಹಜವಾಗಿ ಹೊರಟು ಹೋಗಲಿ ಬಿಡಿ. ಆದರೆ ನಮ್ಮ ಒತ್ತಡ, ಮತ್ತು, ಹ್ಯಾಂಗೋವರ್‌, ಹೊಗೆ, ಧೂಳು, ಗದ್ದಲದಿಂದ ಬಂದ ತಲೆನೋವಿಗೆ ಮಾತ್ರೆ ಬೇಡ ಅಂದರೆ ಹೇಗೆ?

ಯೋಗಕ್ಷೇಮಂ ವಹಾಮ್ಯಹಂ ಅಂದ ಶ್ರೀಕೃಷ್ಣ.

ಈಗ ಪ್ರತಿಯಾಬ್ಬರೂ ಅದೇ ಮಾತು ಹೇಳಿಕೊಳ್ಳಬೇಕಾಗಿದೆ. ನನ್ನ ಆರೋಗ್ಯ ನನಗೆ ಬಿಡು, ನಿನ್ನ ಉಪದೇಶ ಸಾಕು!

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X