ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ಮಹಾ ಪ್ರಾರ್ಥನೆಗಳ ನಡುವೆ ಒಂದು ಆರ್ತನಾದ!

By Staff
|
Google Oneindia Kannada News
  • ಜಾನಕಿ
ಕೊನೆಯ ದೃಶ್ಯ;

ಆಕೆ ಯಾವ ಧಾವಂತವೂ ಇಲ್ಲದವಳ ಹಾಗೆ, ಯಾವ ಭಯವೂ ಇಲ್ಲದವಳ ಹಾಗೆ ಹೊರಟು ನಿಲ್ಲುತ್ತಾಳೆ. ಮುಂಚೆ ಕಳವಳದ ಕೊಳವಾಗಿದ್ದ ಕಣ್ಣುಗಳೀಗ ಶಾಂತ ಸರೋವರ. ಆ ಕಣ್ಣಂಚಿಗೆ ಕಾಡಿಗೆ ಹಚ್ಚಿಕೊಳ್ಳುತ್ತಾಳೆ. ಕಾಲಿಗೆ ಚಪ್ಪಲಿ ಮೆಟ್ಟುತ್ತಾಳೆ. ಸೂಟ್‌ಕೇಸ್‌ಹಿಡಕೊಂಡು ಬಂದ ಮಗನ ಕೈ ಹಿಡಿದುಕೊಂಡು ಮೆಟ್ಟಿಲಿಳಿಯುತ್ತಾಳೆ.

ಆತ ಪ್ರಶ್ನೆಗಳೆಲ್ಲ ಸತ್ತವನಂತೆ ನೋಡುತ್ತಾ ನಿಂತಿದ್ದಾನೆ. ನಾನು ಎಲ್ಲಿಗೆ ಹೋಗುತ್ತಿದ್ದೇನೆ ಅಂತ ನಿನಗೆ ಹೇಳಬೇಕಾಗಿಲ್ಲ, ಆದರೂ ಹೇಳುತ್ತಿದ್ದೇನೆ ಅನ್ನುವ ಔದಾರ್ಯದಲ್ಲೇ ಹೇಳುತ್ತಾಳೆ; ಮನೆ ಕಡೆ ಹುಷಾರು. ಮುಂದಿನ ಬಾಗಿಲು ತೆರೆದಿಡಬೇಡಿ. ಹಿಂದಿನ ಬಾಗಿಲಲ್ಲೇ ಓಡಾಡಿ.

ಆತ ಹಿಂದಿನ ಬಾಗಿಲಲ್ಲೇ ಓಡಾಡಬೇಕಾದ ಕೆಲಸ ಮಾಡಿದ್ದಾನೆ ಕೂಡ. ಆತನ ಅಸ್ತಿತ್ವವನ್ನು ಧಿಕ್ಕರಿಸಿಯೂ ಧಿಕ್ಕರಿಸದ ಹಾಗೆ, ನಿರಾಕರಿಸಿಯೂ ನಿರಾಕರಿಸದ ಹಾಗೆ ಆಕೆ ಸುಮ್ಮನೆ ನಡೆದು ಹೋಗುತ್ತಾಳೆ. ಅವಳ ಆ ವರ್ತನೆಯಲ್ಲಿ ಮಾನವೀಯತೆ ಇದೆ, ಆತ್ಮವಿಶ್ವಾಸವೂ ಇದೆ. ನಿನ್ನ ಸಣ್ಣತನ, ಮೃಗೀಯತೆ ನನಗೆ ಗೊತ್ತಾಗಿದೆ ಅನ್ನುವುದನ್ನು ಆತನಿಗೆ ಆಕೆ ಏನೂ ಹೇಳದೆ ಮನವರಿಕೆ ಮಾಡಿಕೊಡುತ್ತಾಳೆ.

Girish Kasaravalliಅದೆಲ್ಲಿಂದ ಬಂತೋ ಆ ಹೆಣ್ಣಿಗೆ ಆ ಆತ್ಮವಿಶ್ವಾಸ? ಪರಮಪುರುಷನಂತೆ ಹಾರಾಡುತ್ತಿದ್ದ ಆ ಗಂಡನಿನ ಅಹಂಕಾರ ಆ ಕ್ಷಣ ನಿರಪಯೋಗಿ ಅನ್ನಿಸಿತಲ್ಲ! ಒಂದೇ ಒಂದು ರಾತ್ರಿ ಬೆಳಗಾಗುವುದರೊಳಗೆ ಇಂಥ ಬದಲಾವಣೆ ಹೇಗೆ ಸಾಧ್ಯವಾಗಿರಬಹುದು? ತನ್ನ ಹೆಂಡತಿ ಹೋಗುತ್ತಿರುವುದು ಎಲ್ಲಿಗೆ ಅಂತ ಕೇಳುವ ಕನಿಷ್ಠ ಧೈರ್ಯವನ್ನೂ ಆತ ಕಳೆದುಕೊಂಡು ಬಿಟ್ಟಿದ್ದಾನೆ.

ಒಂದು ಮಹತ್ವದ ಬದಲಾವಣೆ ಯಾವ ಅಬ್ಬರವೂ ಇಲ್ಲದೇ, ರಕ್ತ ಪಾತವೂ ಇಲ್ಲದೇ ನಡೆದುಹೋಗಿದೆ. ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಹೆಣ್ಣು ಹೀಗೆ ಕೂಡ ದಕ್ಕಿಸಿಕೊಳ್ಳಬಲ್ಲಳು ಅನ್ನುವುದನ್ನು ಆಕೆ ತುಂಬ ಸೂಕ್ಷ್ಮವಾಗಿ ತೋರಿಸಿ ಕೊಡುತ್ತಾಳೆ. ಅವನ ಸಣ್ಣತನ, ಕ್ಷುದ್ರತೆ ಮತ್ತು ಅಸಹಾಯಕತೆಯನ್ನು ಅವನ ಮುಖಕ್ಕೆ ರಾಚುವಂತೆ ಮಾಡುವ ಮೂಲಕ ಆಕೆ ತನ್ನನ್ನು ತಾನು ಪಡೆದುಕೊಳ್ಳುತ್ತಾಳೆ. ತನ್ನ ಮೌನದಲ್ಲಿ ಆತನನ್ನು ಕಂಗೆಡಿಸುತ್ತಾಳೆ. ನೀನಿಲ್ಲದೆ ಕೂಡ ನಾನು ಬದುಕಬಲ್ಲೆ ಅಂತ ತೋರಿಸಿಕೊಡುತ್ತಾಳೆ.

*

ಗಿರೀಶ ಕಾಸರವಳ್ಳಿ ನಿರ್ದೇಶಿಸಿದ ‘ಹಸೀನಾ’ ಐದು ಪ್ರಾರ್ಥನೆಗಳ ನಡುವಿನ ಆರ್ತನಾದದ ಹಾಗೆ ಭಾಸವಾಗುತ್ತದೆ. ಪ್ರಾರ್ಥನೆ ಅನ್ನುವುದು ಉತ್ತರೋತ್ತರ ಅಭಿವೃದ್ಧಿಗಾಗಿ, ಶ್ರೇಯಸ್ಸಿಗಾಗಿ, ಒಳಿತಿಗಾಗಿ ಮಾಡುವ ವಿನಂತಿ. ನಿಧಾನವಾಗಿ ಅದು ನಿರುದ್ಧಿ ಶ್ಯ ಕ್ರಿಯೆಯೂ ಆಗಬಹುದು ಅನ್ನುವುದನ್ನು ಕಾಸರವಳ್ಳಿ ಚಿತ್ರದುದ್ದಕ್ಕೂ ಹೇಳುತ್ತಾ ಹೋಗುತ್ತಾರೆ. ಪ್ರಾರ್ಥನೆ ಪ್ರತಿಭಟನೆಯೂ ಆಗುತ್ತದೆ. ಪ್ರಾರ್ಥನೆಯಾಗಿ ತಲುಪಿದಾಗ ಉತ್ತರ ಬರದಿದ್ದಾಗ ಅದನ್ನೇ ಪ್ರತಿಭಟನೆಯ ರೂಪದಲ್ಲಿ ಮುಂದಿಡುವ ಯತ್ನ ನಡೆಯುತ್ತದೆ. ಎರಡರ ಉದ್ದೇಶವೂ ಒಂದೇ; ಬೇಕಾದದ್ದನ್ನು ಪಡೆದುಕೊಳ್ಳುವುದಷ್ಟೇ ಅಲ್ಲ, ಬೇಡವೇ ಇದ್ದದ್ದನ್ನು ನಿರಾಕರಿಸುವುದು ಕೂಡ. ಒಳ್ಳೆಯದಾಗಲಿ ಅನ್ನುವ ಬೇಡಿಕೆಯಲ್ಲಿ ಕೆಟ್ಟದ್ದು ಆಗದಿರಲಿ ಅನ್ನುವ ಅರ್ಥ ಕೂಡ ಅಡಗಿದೆ. ಇಲ್ಲಿ ಪ್ರಾರ್ಥನೆ ಏಕಕಾಲಕ್ಕೆ ವಿನಂತಿಯೂ ಎಚ್ಚರಿಕೆಯೂ ಆಗುತ್ತದೆ. ಹೊತ್ತಿಗೆ ಸರಿಯಾಗಿ ನಡೆಯುವ ಪ್ರಾರ್ಥನೆಯ ನಡುವೆ ಹೊತ್ತಿಲ್ಲದ ಗೊತ್ತಿಲ್ಲದ ನಿರಂತರದ ಪ್ರಾರ್ಥನೆಯ ಕಲ್ಪನೆಯನ್ನೂ ಗಿರೀಶ್‌ ಮೂಡಿಸುತ್ತಾ ಹೋಗುತ್ತಾರೆ.

ಹಾಗೆ ನೋಡಿದರೆ ಕಾಸರವಳ್ಳಿ ಚಿತ್ರಗಳ ಪೈಕಿ ಬೇರೆಯೇ ಆಗಿ ನಿಲ್ಲುತ್ತದೆ ‘ಹಸೀನಾ’. ಇದು ಮೇಲ್ನೋಟಕ್ಕೆ ತಬರನ ಕತೆಯ ಇನ್ನೊಂದು ರೂಪದಂತೆ, ‘ತಾಯಿ ಸಾಹೇಬ’ದ ಮತ್ತೊಂದು ಸ್ವರೂಪದಂತೆ, ದ್ವೀಪದ ಉತ್ಕಟವಾದ ಜೀವನೋತ್ಸಾಹ ಮತ್ತು ನಿರರ್ಥಕತೆ ಸಂಗಮದಂತೆ ಭಾಸವಾಗುವ ಚಿತ್ರ.

ದ್ವೀಪದ ದ್ವಂದ್ವ ಗಮನಿಸಿ; ನಾಗಿಯ ಮುಂದೆ ಅಪಾರವಾದ ಜಲರಾಶಿಯಿದೆ. ಅದು ಆಕೆಯ ಪಾಲಿಗೆ ಸಾವು. ಆ ಆಣೆಕಟ್ಟು ತುಂಬಿ ಹರಿದರೆ ಇನ್ನೆಲ್ಲೋ ಬದುಕು. ಜೀವನದ ಇಂಥ ಇಬ್ಬಂದಿತನವನ್ನು ಕಾಸರವಳ್ಳಿಯವರ ಹಾಗೆ ನಿರೂಪಿಸುತ್ತಾ ಹೋಗುವ ಮತ್ತೊಬ್ಬ ನಿರ್ದೇಶಕ ಇಲ್ಲ.

ಅವರು ಚಿತ್ರದ ಮೂಲಕ ಮುಂದಿಡುವ ದ್ವಂದ್ವಗಳು ಅವರದ್ದೂ ಆಗಿರುವ ಸಾಧ್ಯತೆಯಿದೆ. ಅವರು ಎಲ್ಲೂ ಪರಿಪೂರ್ಣತೆಯನ್ನು ಪ್ರತಿಪಾದಿಸುವುದಕ್ಕೆ ಹೋಗುವುದಿಲ್ಲ. ಈ ಜೀವನ ಹೀಗಿದೆ ಅನ್ನುವುದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಅದು ಹೊರಡಿಸುವ ಅರ್ಥಗಳನ್ನು ನೀವೇ ಕಂಡುಕೊಳ್ಳಬೇಕು ಅನ್ನುವ ಧೋರಣೆ ಅವರದು. ‘ಹಸೀನಾ’ ಕೂಡ ಅಷ್ಟನ್ನೇ ಹೇಳುತ್ತದೆ. ಪ್ರೇಕ್ಷಕರ ಪಾಲಿಗೆ ಹೊಳೆದದ್ದು ತಾರೆ, ಉಳಿದದ್ದು ಆಕಾಶ.

*

Tara in Haseenaಮಾಸ್ತಿಯವರ ಸಣ್ಣಕತೆಗಳನ್ನು ನೆನಪಿಸುತ್ತದೆ ‘ಹಸೀನಾ’. ಆಕೆ ಆಟೋ ಡ್ರೆೃವರ್‌ ಯಾಕೂಬನ ಹೆಂಡತಿ. ಆತನಿಗೆ ಮೂವರು ಹೆಣ್ಣು ಮಕ್ಕಳು. ನಾಲ್ಕನೆಯ ಮಗು ಗಂಡಾಗಬೇಕು ಅನ್ನುವ ಆಸೆ ಅವನದು. ಅದೂ ಹೆಣ್ಣು ಮತ್ತು ಹೆರಿಗೆ ಬಾಣಂತನಕ್ಕೆ ಇದ್ದತ್‌ ಹಣ ಕೊಡಬೇಕು. ಅದನ್ನಾತ ಕೊಡುವುದಿಲ್ಲ. ಅದನ್ನು ಪಡೆದೇ ತೀರುತ್ತೇನೆ ಅಂತ ಆಕೆ ಮಸೀದಿಯ ಮುಂದೆ ಉಪವಾಸ ಕೂರುತ್ತಾಳೆ. ಪ್ರಾರ್ಥನೆ ಶುರುವಾಗುತ್ತದೆ. ಆಕೆಯ ಪ್ರಾರ್ಥನೆ ಯಾರನ್ನೂ ಮುಟ್ಟುವುದಿಲ್ಲ. ಆಕೆಗೆ ನ್ಯಾಯ ಸಿಗುವುದಿಲ್ಲ. ಅವಳು ಮಗಳನ್ನು ಕಳೆದುಕೊಳ್ಳುತ್ತಾಳೆ. ಮಗಳನ್ನು ಕಳೆದುಕೊಂಡ ಮೇಲೆ ಆಕೆಗೆ ಹಣಬೇಕಾಗಿಲ್ಲ.

ಆದರೆ ಆಕೆಯ ಪ್ರತಿಭಟನೆ ಅನೇಕರಿಗೆ ಮಾದರಿಯಾಗುತ್ತದೆ. ತಾವೂ ಹೀಗೆ ಎದುರಿಸಿ ನಿಲ್ಲಬಹುದು ಅನ್ನುವುದು ಗೊತ್ತಾಗುತ್ತದೆ. ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ನೀಳ್ಗತೆಯಲ್ಲಿ ಬರುವ ದಾನಮ್ಮನೆಂಬ ಜೋರುಬಾಯಿಯ ಹೆಂಗಸಿನಿಂದಾಗಿ ಇಡೀ ಹಳ್ಳಿಯ ಹೆಣ್ಣುಮಕ್ಕಳು ದನಿ ಪಡೆದುಕೊಳ್ಳುವಂತೆ, ಹಸೀನಾಳ ಪ್ರತಿಭಟನೆಯ ಮೂಲಕ ಇಡೀ ಹಳ್ಳಿಯ ಮಾತು ಸತ್ತು ಹೋದ ಮಹಿಳೆಯರು ಹೋರಾಡುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ.

ಹಸೀನಾ ತುಂಬ ಭಾವುಕ ಚಿತ್ರ. ಕಾಸರವಳ್ಳಿಯವರ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ವಸ್ತು ಕಣ್ಣೀರು. ಅವರು ಅದನ್ನೆಂದೂ ಪೋಲು ಮಾಡಿದವರಲ್ಲ. ಆದರೆ ‘ಹಸೀನಾ’ ತನ್ನ ಸ್ವಾರ್ಥ, ದಿಟ್ಟತನ, ಬದುಕುವ ಆಸೆ, ಮಕ್ಕಳ ಮೇಲಿನ ಮುಂತಾದ ಭಾವನೆಗಳ ಮೂಲಕ ಸಾಕಾರಗೊಳ್ಳುತ್ತಾ ಹೋಗುತ್ತಾಳೆ.‘ನನಗೆ ಗಂಡ ಬೇಕಾಗಿಲ್ಲ, ಮೆಹರ್‌ ಹಣ ಕೊಡಿಸಿ’ಅನ್ನುವ ವಿನಂತಿಯಲ್ಲಿ ಆಕೆಯ ಅಸಹಾಯಕತೆಯಿದೆ. ಅಗರಬತ್ತಿ ಹೊಸೆದು ಮಗಳ ಕಣ್ಣಿನ ಆಪರೇಷನ್‌ ಮಾಡಿಸುತ್ತೇನೆ ಅನ್ನುವಲ್ಲಿ ಆಕೆಯ ಛಲವಷ್ಟೇ ಅಲ್ಲ, ಪ್ರೀತಿಯೂ ವ್ಯಕ್ತವಾಗುತ್ತದೆ. ಹೆಂಡತಿಯ ಮೇಲಿನ ಗಂಡನ ಸಿಟ್ಟನ್ನು ಆತ ದಿಕ್ಕಾ ಪಾಲಾಗಿ ಓಡಿಸುವ ಆಟೋದ ಮೂಲಕ ತೋರಿಸುತ್ತಾರೆ ಕಾಸರವಳ್ಳಿ. ಇದರ ನಡುವೆಯೇ ಪುಟ್ಟ ಮಗುವಿನ ಜವಾಬ್ದಾರಿ, ಕಣ್ಣಿಲ್ಲದ ಹುಡುಗಿಯ ಜೀವನೋತ್ಸಾಹ, ಜುಲೇಖಾ ಎಂಬ ಹೆಂಗಸಿನ ಸೋಗಲಾಡಿತನ ಎಲ್ಲವೂ ದಾಖಲಾಗುತ್ತದೆ.

*

ಫಜರ್‌, ಜೋಹಾರ್‌, ಅಸರ್‌, ಇಂಗ್ರಿದ್‌ ಮತ್ತು ಇಶಾನ್‌-ಹೀಗೆ ದಿನದ ಐದು ಪ್ರಾರ್ಥನೆಗಳನ್ನು ಇಟ್ಟುಕೊಂಡು ಕಾಸರವಳ್ಳಿ ಕತೆ ಹೇಳುತ್ತಾರೆ. ಆ ಐದು ಹೊತ್ತಿನ ಪ್ರಾರ್ಥನೆಯೂ ಅವರ ಪಾಲಿಗೆ ಒಂದೊಂದು ರೂಪಕವಾಗಿ ಬಿಟ್ಟಿದೆ. ಹಸೀನಾದ ಹೆಚ್ಚುಗಾರಿಕೆ ಇರುವುದೇ ಇಲ್ಲಿ. ಬೆಳಗಿನ ಪ್ರಾರ್ಥನೆಯ ಹೊತ್ತಿಗೆ ಮುದದಿಂದ ಶುರುಗೊಳ್ಳುವ ದಾಂಪತ್ಯದ ಮಧುರ ಕ್ಷಣ ಮಧ್ಯಾಹ್ನದ ಪ್ರಾರ್ಥನೆಯ ಸಮಯಕ್ಕೆ ಕೊಂಚ ಅಸಹನೀಯವಾಗುತ್ತದೆ. ಸೂರ್ಯಾಸ್ತದ ಹೊತ್ತಿಗೆ ಪೂರ್ತಿಯಾಗಿ ಬೆಳಕು ಕಳೆದುಕೊಂಡು ಗಂಡ ಹೆಂಡಿರಿಬ್ಬರೂ ಕತ್ತಲಲ್ಲಿ ನಿಂತಿರುತ್ತಾರೆ. ಪ್ರಾರ್ಥನೆ ಹೀಗೆ ನಿರರ್ಥಕವೂ ಆಗುತ್ತದೆ.

ಟಾಲ್‌ ಸ್ಟಾಯ್‌ ಹೇಳುವ ಹಾಗೆ ಎಲ್ಲಾ ಸುಖೀ ಕುಟುಂಬಗಳ ಸುಖಕ್ಕೆ ಒಂದೇ ಕಾರಣ, ದುಮ್ಮಾನಕ್ಕಷ್ಟೇ ಹಲವು ಕಾರಣ. ಕಾಸರವಳ್ಳಿ ಇಲ್ಲಿ ಹೇಳಹೊರಟಿರುವುದು ದುಮ್ಮಾನದ ಕತೆಯನ್ನು. ಅದರ ನಡುವೆಯೇ ಸುಮ್ಮಾನಗಳೂ ಇವೆ. ಕಣ್ಣಿಲ್ಲದ ಮಗಳ ನಗೆಯಲ್ಲಿನ ಬೆಳಕು, ಪುಟ್ಟ ಹುಡುಗಿಯ ಜವಾಬ್ದಾರಿ, ಹಸೀನಾಳ ಹಾಸ್ಯಪ್ರಜ್ಞೆ, ತಮಾಷೆ ಅಂದರೇನು ಗೊತ್ತಿಲ್ಲದ ಗಂಡನ ದುಗುಡ ಮತ್ತು ಆತಂಕ.

ಯಾರದೇ ಕೈಯಲ್ಲಿ ತುಂಬ ಬ್ಲಾಕೆಂಡ್‌ ವೈಟ್‌ ಆಗಬಹುದಾಗಿದ್ದ ಪಾತ್ರಗಳನ್ನು ಕಾಸರವಳ್ಳಿ ಇದು ಮತ್ತೊಂದು ಕುಟುಂಬದ ಮತ್ತೊಂದು ಚಿತ್ರ ಎನ್ನಬಹುದಾದಷ್ಟು ನಿಖರತೆಯಿಂದ ನಿಭಾಯಿಸಿದ್ದಾರೆ. ಅಲ್ಲಿ ಆಪ್ತತೆಯಿದೆ, ಅನುಕಂಪವಿದೆ, ಕರುಣೆಯನ್ನು ಆತ್ಮವಿಶ್ವಾಸ ಗೆಲ್ಲುತ್ತದೆ. ಎಲ್ಲವನ್ನೂ ಬದುಕು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

*

ಭಾಷೆಯ ಬಳಕೆಯಲ್ಲಿ ಅಸ್ಪಷ್ಟತೆಯಿದೆ. ತಾರಾ ಕನ್ಸಿಸ್ಟೆನ್ಸಿ ಉಳಿಸಿಕೊಂಡಿರುವ ಏಕೈಕ ಪದ ‘ಅಪರೇಸನನು’್ನ. ಆದರೆ ಹಸೀನಾಳಾಗಿ ಮೈದಳೆಯುವಲ್ಲಿ ಆಕೆ ತಮ್ಮ ಸರ್ವಸ್ವವನ್ನೂ ತೊಡಗಿಸಿಕೊಂಡಿದ್ದಾರೆ. ಕಾಸರವಳ್ಳಿಯವರ ಫೇವರಿಟ್‌ ದೃಶ್ಯಗಳು ಇಲ್ಲೂ ಬಂದಿವೆ. ಗುಡ್ಡದ ಏರುಹಾದಿಯಲ್ಲಿ ನಡೆಯುತ್ತಿರುವ ಮಗು, ಗೋಡೆಯ ಆಚೆ ಬದಿಯಿಂದ ಪಿಳಿಪಿಳಿ ಕಣ್ಣನ್ನಷ್ಟೇ ಮಿಟುಕಿಸುವ ಕಂದ, ಕುಳಿತ ಹಸೀನಾಳ ಎದುರು ಸಾಗಿ ಹೋಗುತ್ತಿರುವ ಅಸಂಖ್ಯಾತ ಕಾಲುಗಳು... ಹೀಗೆ. ಜೊತೆಗೆ ರಾಜಕೀಯ, ಸಣ್ಣತನ, ಹಟ, ಹುಂಬತನ ಎಲ್ಲವೂ ಸೇರಿ ‘ಹಸೀನಾ’ವನ್ನು ಕಟ್ಟುತ್ತದೆ.

ಮೊದಲ ಸಾರಿ ನೋಡಿದಾಗ ‘ಹಸೀನಾ’ ಮತ್ತೊಂದು ಗೋಳಿನ ಕತೆ ಅನ್ನಿಸಬಹುದು. ಅದು ಕಾಸರವಳ್ಳಿ ಸಮಸ್ಯೆಯಲ್ಲ. ನಮ್ಮ ಸಮಸ್ಯೆ. ನಾವು ಗೋಳಿನ ವೈಭವೀಕರಣವನ್ನು ನೋಡಿ ನೋಡಿ ಅದರ ಲಯವನ್ನು ಒಗ್ಗಿಸಿಕೊಂಡಿದ್ದೇವೆ.

ಸುಳ್ಳು ಸುಳ್ಳೇ ಕಾರಣಗಳಿಗೆ ದುಃಖಿಸಿದರೆ, ನಿಜವಾದ ಕಾರಣಕ್ಕೆ ದುಃಖಿಸುವ ಶಕ್ತಿಯನ್ನು ಕಳೆದು ಕೊಳ್ಳುತ್ತೇವಾ?

‘ಹಸೀನಾ’ವನ್ನು ಮತ್ತೊಮ್ಮೆ ನೋಡಬೇಕು. ನೋಡಿ ಮೂರು ದಿನ ಸುಮ್ಮನಿದ್ದು ಬಿಡಬೇಕು. ಅದು ಒಳಗಿಳಿಯುವ ತನಕ ಕಾಯಬೇಕು. ಮಡುಗಟ್ಟದ ಹೊರತು ಹರಿಯಲಾರದು. ಮಡುಗಟ್ಟಿದ್ದೂ ಹರಿಯಲಾರದು.

ವ್ಯತ್ಯಾಸ ಸ್ಪಷ್ಟವಾಗಿರಲಿ. ಕಾಸರವಳ್ಳಿಗೆ ಕಂಗ್ರಾಟ್ಸ್‌.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X