ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಯ ಸಲೀಸು ಅಂದುಕೊಂಡಿರುವ ಯುವ ಕವಿಗಳಿಗೆ...

By * ಜಾನಕಿ
|
Google Oneindia Kannada News

Gopalakrishna Adiga
ಮೊನ್ನೆ ಯಾರೋ ಹೇಳಿದರು: ಹೊಸದಾಗಿ ಬರೆಯಲು ಶುರುಮಾಡಿರುವ ಲೇಖಕರೆಲ್ಲ ಪದ್ಯ ಬರೆಯುತ್ತಾರೆ. ಒಂದು ಲೇಖನವನ್ನೋ ಕತೆಯನ್ನೋ ಬರೆಯಲು ತುಂಬ ಸಮಯ ಬೇಕಾಗುತ್ತದೆ. ಆದರೆ ಪದ್ಯ ಹಾಗಲ್ಲ. ಎಲ್ಲೆಂದರಲ್ಲಿ ಥಟ್ಟನೆ ಬರೆದುಬಿಡಬಹುದು. ದೀಪಾವಳಿ ವಿಶೇಷಾಂಕಕ್ಕೋ, ಇನ್ಯಾವುದೋ ಸಂಕಲನಕ್ಕೋ ಪದ್ಯ ಕೇಳಿದರೆ ಕೂಡಲೇ ಕಳಿಸುತ್ತಾರೆ. ಅದೇ ಕತೆಯನ್ನೋ ಪ್ರಬಂಧವನ್ನೋ ಕೇಳಿದರೆ ತಡಮಾಡುತ್ತಾರೆ. ಕವಿತೆಯೆಂದರೆ ಸಂಗ್ರಹವಾಗಿ ಹೇಳುವುದು ಅನ್ನುವ ನಂಬುಗೆ ಹೊಸ ಕಾಲದ ಕವಿಗಳಲ್ಲಿದೆ. ಬಹುಶಃ ಅದು ಎಲ್ಲ ಕಾಲದ ತರುಣ ಕವಿಗಳಲ್ಲೂ ಇತ್ತೆಂದು ಕಾಣುತ್ತದೆ.

ಕವಿತೆಯ ಮೂಲಕ ಏನು ಹೇಳಬೇಕು ಅನ್ನುವುದು ಕೂಡ ಮೊದಲೇ ನಿರ್ಧಾರವಾಗಿಬಿಟ್ಟಂತೆ ಅನೇಕರು ಬರೆಯುತ್ತಾರೆ. 'ಸಬ್ಜೆಕ್ಟು ರೆಡಿಯಾಗಿದೆ. ಬರೆಯೋದು ಮಾತ್ರ ಬಾಕಿ. ಒಂದೆರಡು ದಿನದಲ್ಲಿ ಬರೆದುಕೊಡುತ್ತೇನೆ" ಅಂತ ಅನೇಕ ಕವಿಗಳು ಹೇಳುವುದುಂಟು. ಆಧುನಿಕ ಸಂದರ್ಭದಲ್ಲಿ ನಾನು ಸ್ವತಂತ್ರಳು ಅಂದುಕೊಂಡಿರುವ ಮಹಿಳೆ ಸೂಕ್ಷ್ಮವಾಗಿ ಹಿಂದಿನ ಕಾಲಕ್ಕಿಂತ ಹೆಚ್ಚು ಶೋಷಣೆಗೆ ಒಳಗಾಗಿದ್ದಾಳೆ. ಇದರ ಬಗ್ಗೆ ಒಂದು ಪದ್ಯ ಬರೀತಿದ್ದೀನಿ ಅಂತ ಕವಿಯಾಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಹಾಗೇ ಹೇಳಿ ಕೇಳಿ ಬರುವುದು ಕವಿತೆಯಾಗುತ್ತದಾ ? ಕವಿತೆಯ ಮೂಲಕ ಏನನ್ನು ಹೇಳಬೇಕೋ ಅದನ್ನು ನಾಲ್ಕು ಸಾಲಲ್ಲೋ ಒಂದು ಪ್ಯಾರದಲ್ಲೋ ಹೇಳಿಬಿಡಬಹುದಾದರೆ ಕವಿತೆ ಯಾಕೆ ಬೇಕು ? ಅದನ್ನು ಹಾಗೇ ಮಾತಲ್ಲೇ ಹೇಳಿ ಸುಖವಾಗಿರಬಹುದಲ್ಲ ? ಪದ್ಯವೆಂಬುದು ಕವಿತೆಯೆಂಬುದು ಒಂದು ಮಾಧ್ಯಮ ಮಾತ್ರವಾ ? ಅದು ಕೇವಲ ಒಂದು ಪ್ರಕಾರವಾ ? ಹಾಗೆ ಹೇಳುವುದನ್ನು ಹೀಗೆ ಹೇಳುವ ಒಂದು ವಿಧಾನವಾ ?

ಬಾವಿಯಾಳಗಡೆ ನೀರು ; ಮೇಲಕ್ಕಾವಿ;
ಆಕಾಶದುದ್ದಕ್ಕೂ ಅದರ ಕಾರಣ ಬೀದಿ;
ಕಾರ್ಮುಗಿಲ ಖಾಲಿ ಕೋಣೆಯ ಆಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ-
ಅಂತರ ಪಿಶಾಚಿ ಗುಡುಗಾಟ, ಸಿಡಿಲಿನ ಕಾಟ-
ಭೂತರೂಪಕ್ಕೆ ಮಳೆ ವರ್ತಮಾನ.
ಅಗೆದುತ್ತ ಗದ್ದೆಗಳ ಕರ್ಮ ಭೂಮಿಯ ವರುಣ;
ಭತ್ತ ಗೋಧುವೆ ಹಣ್ಣು ಬಿಟ್ಟ ವೃಂದಾವನ.

ಗುಡಿಗೋಪುರಗಳ ಬಂಗಾರ ಶಿಖರ. ಯಾವ ಮೇಷ್ಟ್ರು ಕೂಡ ಈ ಸಾಲುಗಳನ್ನು ಅರ್ಥಮಾಡಿಸಲಾರ. ಪದ್ಯ ಅರ್ಥವಾಗುವುದಕ್ಕೆ ಇರುವ ಸಂಗತಿಯೇ ಅಲ್ಲ. ಅದು ಅನುಭವಕ್ಕಷ್ಟೇ ದಕ್ಕುವ ಅಕ್ಷರಲೋಕ. ಏನೂ ಹೇಳದೇ ಎಲ್ಲವನ್ನೂ ಹೇಳುವುದು ಕವಿತೆಯ ಜಾಯಮಾನ. ಏನಾದರೂ ಹೇಳಲಿಕ್ಕೆಂದೇ ಹೊರಟರೆ ಅದು ಸುತ್ತೋಲೆಯಾಗುತ್ತದೆ. ಕರಪತ್ರವಾಗುತ್ತದೆ. ವರದಿಯೋ ಟೀಕೆಯೋ ಹೇಳಿಕೆಯೋ ಆಗುತ್ತದೆ. ಪದ್ಯ ಅದಾವುದೂ ಅಲ್ಲ. ಅದು ಮಂತ್ರದ ಹಾಗೆ ವೇದ್ಯವಾಗುವಂಥದ್ದು. ಅರ್ಥವನ್ನು ಮೀರಿದ್ದು.

ಮೇಲೆ ಸೂಚಿಸಿದ ಗೋಪಾಲಕೃಷ್ಣ ಅಡಿಗರ 'ಭೂತ" ಕವನವನ್ನು ಓದುತ್ತಾ ಹೋಗಿ: ಹುಟ್ಟು 'ಸಾವು" ವಿಷಾದ, ಅವಮಾನ, ತಲ್ಲಣ, ನಿರಾಶೆ ಎಲ್ಲವೂ ಸುತ್ತಿ ಸುಳಿದು ಹೋಗುತ್ತವೆ. ಕೊನೆಯಲ್ಲಿ ಕಣ್ಣ ಮುಂದೆ ಅನೂಹ್ಯವಾದ ಚಿತ್ರವೊಂದು ಅನಾಯಾಸವಾಗಿ ಮೂಡತ್ತದೆ. ಭೂತರೂಪಕ್ಕೆ ಮಳೆ ವರ್ತಮಾನ ಅನ್ನುವ ಸಾಲಿಗೆ ಬರುವ ಹೊತ್ತಿಗೆ ಸಾವು ಬದುಕಾಗಿ ಮಾರ್ಪಾಟು ಹೊಂದಿರುತ್ತದೆ. ಇದು ಎಲ್ಲರಿಗೂ ಹೀಗೇ ಆಗಬೇಕೆಂದಿಲ್ಲ. ಕವಿತೆಯ ಶಕ್ತಿಯೇ ಅದು. ಅದು ಒಬ್ಬೊಬ್ಬರನ್ನು ಒಂದೊಂದು ತೆರವಾಗಿ ಸ್ಪರ್ಶಿಸುತ್ತದೆ:

ಮೈಯೆಲ್ಲ ಗಡಗುಟ್ಟುತ್ತಲಿದೆಯೇ?
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಸಿದವರಾರು?
ಯಾರೂ ಕಾಣದ ಆ ಮರೆಯಾಳಗೆ
ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿಯಿನ್ನೂ ಗುಣು-
ಗುಣಿಸುವ ಮಾಯೆಯೆಂಥದು ಹೇಳು.
ಏ ಗಾಳಿ,
ಆ ಕತೆಯ ನೊರೆದು ಮುಂದಕೆ ತೆರಳು

***

ಕವಿತೆಯೆಂದರೆ ಬದುಕು. ಬರೆದಿರುವುದು ಸಾವು. ಅಡಿಗರೊಮ್ಮೆ ಹೇಳಿದರು; ಕಾವ್ಯ ನನಗೆ ಜೀವನ್ಮರಣದ ಪ್ರಶ್ನೆ. ಬಹುಶಃ ಅದೇ ಸರಿ. ಹಸಿವೆಯ ಹಾಗೆ ಕಾಡದಿದ್ದರೆ, ದಾಹದ ಹಾಗೆ ಕಂಗೆಡಿಸದೇ ಇದ್ದರೆ, ಕಾಮದ ಹಾಗೆ ತಪ್ಪಿಸದೇ ಇದ್ದರೆ, ಸಾವಿನ ಹಾಗೆ ಮೋಹಿಸದೇ ಹೋದರೆ ಪದ್ಯ ಬರೆಯಬಾರದು. ಕವಿತೆ ಬರೆದು ಕವಿಯಲ್ಲ ಅನ್ನಿಸಿಕೊಳ್ಳುವ ಬದಲು, ಬರೆಯದೇ ಒಂದಲ್ಲ ಒಂದು ದಿನ ಕವಿಯಾದೇನು ಅಂತ ಕಾಯುವುದು ಮೇಲು.

ಕಾವ್ಯಕ್ಕೆ ವಿಚಿತ್ರವಾದ ಸಮಸ್ಯೆಗಳಿವೆ. ಅನಂತ ಮೂರ್ತಿಯವರ ಬರಹಗಳಲ್ಲಿ ಆಗುವ ಹಾಗೆ, ಎಷ್ಟೋ ಸಾರಿ ಗದ್ಯಕ್ಕೆ ಪಂದ್ಯದ ತಳಮಳಗಳನ್ನು ಹೊತ್ತುಕೊಳ್ಳುವ ಶಕ್ತಿಯಿದೆ. ಆದರೆ ಪದ್ಯ ಹಾಗಲ್ಲ. ಅದು ಗದ್ಯದ ಭಾರಕ್ಕೆ ಮುಳುಗುತ್ತದೆ. ಜಯಂತ ಕಾಯ್ಕಿಣಿ ಬರೆದ ಎಲ್ಲ ಕವಿತೆಗಳನ್ನೂ ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಕವಿಗಳ ಸಮಸ್ಯೆಯೆಂದರೆ ಅವರು ಗೊತ್ತಿರುವ ಸಂಗತಿಗಳ ಕುರಿತು ಬರೆಯುತ್ತಾರೆ. ಗೊತ್ತಿರುವುದರ ಕುರಿತು ಬರೆದದ್ದು ಯಾವತ್ತೂ ಕವಿತೆ ಆಗಲಾರದು. ಬರೆಯುವ ಹೊತ್ತಿಗೆ ಕವಿಗೂ ಗೊತ್ತಿಲ್ಲದ ಸತ್ಯಗಳ ಅನಾವರಣದಿಂದ. ಗೊತ್ತಿಲ್ಲದ್ದು ಗೊತ್ತಾಗುವ ಕ್ಷಣಕ್ಕೆ ಒಳ್ಳೆಯ ಉದಾಹರಣೆ ಲಂಕೇಶರ ಅವ್ವ;

ಕಾಲು ಶತಮಾನದ ಬಳಿಕ;
ಜಗಳಗಂಟಿಯಾಗಿದ್ದ ಈ ಅವ್ವ ಈಗ ನನ್ನಲ್ಲಿ
ವಿನಯ ಮತ್ತು ಮೌನ.

ಹಾಗೆ ಗೊತ್ತಿಲ್ಲದೇ ಹುಟ್ಟಿದ್ದು ರಾಮಾಯಣ. ಗೊತ್ತಿಲ್ಲದೇ ಹುಟ್ಟಿದ್ದು ಕುಮಾರವ್ಯಾಸನ ಭಾರತ. ಬೇಂದ್ರೆಯ ಎಷ್ಟೋ ಕವಿತೆಗಳಿಗೆ ಗೊತ್ತಿಲ್ಲ. ಗುರಿಯಿಲ್ಲ. ತುಂಬ ಸರಳವಾಗಿ ಹೇಳಬೇಕೆಂದರೆ ಕೆಎಸ್‌ನ ಬರೆದದ್ದೂ ಅದೇ;

ಗೋರಿದೀಪದ ಕೆಳಗೆ ಹಲ್ಲಿ ಐದರ ಹರಕೆ
ತಳವಿರದ ತಟ್ಟೆಯಲ್ಲಿ ಐದು ಗೆಜ್ಜೆ
ಪಳಯುಳಿಕೆ ಕನಸಾಚೆಗೈದು ಬಣ್ಣದ ಹಸೆಗೆ
ಬಂದ ಸುಂದರಿ ನಿನಗೆ ಎಷ್ಟು ಲಜ್ಜೆ?

ಮಾತಿನಲ್ಲಿ ಹುಟ್ಟಿದ್ದು ಗದ್ಯ, ಆತ್ಮದಲ್ಲಿ ಹುಟ್ಟಿದ್ದು ಪದ್ಯ; ಒಳ್ಳೆಯ ಕವಿ ಮಾತಿಗಾಗಿ ತಡಕಾಡುತ್ತಾನೆ. ಥಟ್ಟನೆ ಹೊರಹೊಮ್ಮಿದರೆ ಅದು ಹಿರೇಮಗಳೂರು ಕಣ್ಣನ್‌ ಸಾಹಿತ್ಯವಾಗುತ್ತದೆಯೇ ಹೊರತು ಕವಿತ್ವ ಆಗುವುದಿಲ್ಲ. ಕವಿ ಏನನ್ನೋ ಹೇಳಹೊರಟಾಗ ಅದು ಅನುಭವವೂ ಆಗಿರುವುದಿಲ್ಲ. ಅನುಭಾವವೂ ಆಗಿರುವುದಿಲ್ಲ. ಅವೆರಡನ್ನೂ ಮೀರಿದ ಇನ್ನೇನೋ ಆಗಿ ಅವನಿಗೇ ಗೊತ್ತಾಗದ ಹಾಗೆ ಬರೆಸಿಕೊಂಡು ಬಿಡುತ್ತದೆ;

Nor dread nor hope attend
A dying animal;
A man awaits his end
Dreading and hoping all
Many times he died
Many times rose again
A great man in his pride
confronting murderous man
casts derision upon
Supersession of breath.
He knows death to the bone
Man has created death.

ಯೇಟ್ಸನ ಈ ಪಂದ್ಯದ ಸೊಬಗನ್ನು ನೋಡಿ. ಇಲ್ಲಿಯ ಒಂದು ಅಕ್ಷರವನ್ನು ಕಿತ್ತರೂ ಕೂಡ ಇಡೀ ಪದ್ಯ ಅರ್ಥಕಳಕೊಳ್ಳುತ್ತದೆ. ಸಾವಿನ ನಿಗೂಢತೆಯನ್ನು ಮೀರಿ ನಿಲ್ಲುವ ಪ್ರಯತ್ನ ಇದಲ್ಲ. ಕೇವಲ ಚಿಂತನೆಗಳನ್ನೇ ಹರಳು ಗಟ್ಟಿರುವ ಈ ಸಾಲುಗಳನ್ನು ಒಟ್ಟಾಗಿ ಓದಿಕೊಂಡಾಗ ಅವು ಕೇವಲ ಚಿಂತನೆಗಳಷ್ಟೇ ಆಗಿ ಉಳಿಯುವುದಿಲ್ಲ. ಕೊನೆಯಲ್ಲಿ ಅರಿವಾಗುವ ಭಾವ ಇಡೀ ಕವಿತೆಯನ್ನು ಬೆಳಕಾಗಿಸುತ್ತದೆ. ಮನುಷ್ಯ ತನ್ನ ಯೋಚನೆಯಲ್ಲಿ ಬುದ್ಧಿವಂತಿಕೆಯಲ್ಲಿ, ಜ್ಞಾನದಲ್ಲಿ ಸಾಯುವ ಮೊದಲೇ ಸಾವನ್ನು ಕಾಣಬಲ್ಲ. ಅದರ ಭೀಕರತೆಯನ್ನು ಅರಿಯಲ್ಲ. ಆದರೆ ಪ್ರಾಣಿಗಳಿಗೆ ಸಾವೆಂಬುದೇ ಇಲ್ಲ. ಯಾಕೆಂದರೆ ಅವುಗಳಿಗೆ ಸಾವಿನ ಬಗ್ಗೆ ಏನೇನೂ ಗೊತ್ತಿಲ್ಲ!

ಒಂದು ಕವಿತೆಯಲ್ಲಿ ಒಬ್ಬ ಕವಿಯ ವ್ಯಕ್ತಿತ್ವ ಅಭಿವ್ಯಕ್ತಗೊಳ್ಳುತ್ತದೆ ಅನ್ನುವುದೂ ಸುಳ್ಳು. ಕವಿ ಯಾವುದು ಅಲ್ಲವೋ ಅದು ಕವಿತೆಯಾಗಿ ಮೂಡುತ್ತದೆ. ಹೀಗಾಗಿ ಬೇಂದ್ರೆ ಹೇಳಿದ್ದು ನಿಜ; ಬೇಂದ್ರೆಯಾಳಗೆ ಒಬ್ಬ ಕವಿಯಿದ್ದಾನೆ. ಆ ಕವಿ ಬೇಂದ್ರೆಯೇ ಆಗಿರಬೇಕಿಲ್ಲ. ಹಾಗೆ ನೋಡಿದರೆ ಯಾವ ಲೇಖಕನೂ ಇಡಿಯಾಗಿ ಅವನೊಬ್ಬನೇ ಆಗಿರುವುದಿಲ್ಲ. ಆತ ತನ್ನ ಕಾಲದ ಅಸಂಖ್ಯಾತ ರೂಪಕಗಳ, ಪ್ರತಿಮೆಗಳ, ತಲ್ಲಣಗಳ ಒಟ್ಟು ಮೊತ್ತ. ದೇವರು ರುಜು ಮಾಡಿದನು: ಕವಿ ಪರವಶನಾಗುತ ಅದ ನೋಡಿದನು! ಅಲ್ಲಿ ಬರೀ ಕುವೆಂಪು ಮಾತ್ರ ಇದ್ದಿದ್ದರೆ ಬಹುಶಃ ಅವರು ಪರವಶರಾಗುತ್ತಿರಲಿಲ್ಲ ; ಬರೀ ನೋಡುತ್ತಿದ್ದರು.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X