ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಕೇಶ್‌ ಮತ್ತು ಬಭ್ರುವಾಹನ

By Staff
|
Google Oneindia Kannada News
  • ಜಾನಕಿ
ಮಗನಿಗೆ ಬಭ್ರುವಾಹನ ಅಂತ ಹೆಸರಿಡುವ ಹೊತ್ತಿಗೆ ಆತ ಡ್ರೆೃವರ್‌ ಆಗುತ್ತಾನೆ ಅನ್ನುವ ಕಲ್ಪನೆ ಸಂಗಮೇಶನಿಗೆ ಕಿಂಚಿತ್ತೂ ಇರಲಿಲ್ಲ. ಅವನಿಗೆ ಬಭ್ರುವಾಹನ ಎಂಬ ಹೆಸರು ಹೊಳೆದದ್ದೇ ಆಶ್ಚರ್ಯ. ಗೇರ ಸೊಪ್ಪೆಯ ಪುಟ್ಟಶಾಲೆಯಲ್ಲಿ ಮೇಷ್ಟ್ರರಾಗಿದ್ದ ಸಂಗಮೇಶನಿಗೆ ಲಂಕೇಶರೆಂದರೆ ಅಪಾರ ಭಕ್ತಿ- ಗೌರವ. ಅವರು ಬರೆದ ‘ಅವ್ವ’ ಕವನವನ್ನು ಓದಿ ಸಂಗಮೇಶ ಗಳಗಳ ಅತ್ತಿದ್ದ. ಆಮೇಲೆ ಅವ್ವ ಗದ್ದೆಗೆ ಹೋಗುವಾಗ, ಕೆಲಸ ಮಾಡುವಾಗ, ಬೈಯುವಾಗ, ಗಂಡನಿಗೆ ಬಡಿಸುವಾಗ ‘ಅವ್ವ’ಪದ್ಯದ ಸಾಲುಗಳೇ ನೆನಪಾಗುತ್ತಿದ್ದವು. ಅಲ್ಲಿದಾಂಚೆ ಸಂಗಮೇಶ ಬೇರೆ ಲೇಖಕರನ್ನೆಲ್ಲ ಒಳಗೊಳಗೇ ಖಂಡಿಸುವ ಚಾಳಿ ಬೆಳೆಸಿಕೊಂಡ. ತಾನು ಇಷ್ಟ ಪಡದ ಲೇಖಕರನ್ನು ಲಂಕೇಶರು ಖಂಡಿಸಿದಾಗ ಸಂಗಮೇಶನಿಗೆ ಖುಷಿಯಾಗುತ್ತಿತ್ತು. ಲಂಕೇಶರು ಖಂಡಿಸಿದ್ದಾರೆ. ಅನ್ನುವ ಕಾರಣಕ್ಕೇ ಸಂಗಮೇಶ ತನ್ನ ಇಷ್ಟದ ಕೆಲವು ಲೇಖಕರನ್ನು ದ್ವೇಷಿಸತೊಡಗಿದ.

ಗೇರಸೊಪ್ಪೆಯ ಸ್ಕೂಲಿನಲ್ಲಿದ್ದಾಗಲೇ ಅವನಿಗೆ ಮದುವೆಯೂ ಆಯ್ತು. ಮದುವೆಯಾದ ಆರಂಭದಲ್ಲಿ ಆತ ಖುಷಿಯಾದಾಗೆಲ್ಲಾ ಎಲ್ಲಿದ್ದೆ ಇಲ್ಲೀ ತನಕ. ಎಲ್ಲಿಂದ ಬಂದ್ಯವ್ವ ಎಂದು ಗುನುಗಿಕೊಳ್ಳುತ್ತಿದ್ದ. ಅದೇ ಸಂಭ್ರಮದಲ್ಲಿ ಪುತ್ರೋತ್ಸವವೂ ಆಯ್ತು. ಮೊದಲ ಮಗನಿಗೆ ಲಂಕೇಶರ ಹೆಸರಿನ ಹಾಗೆಯೇ ವಿಚಿತ್ರವಾದ ಹೆಸರಿಡಬೇಕು ಅಂತ ಹೊರಟವನಿಗೆ ಹೊಳೆದ ಅಸಂಖ್ಯಾತ ಹೆಸರುಗಳಲ್ಲಿ ಬಭ್ರುವಾಹನವೂ ಒಂದು. ಮಗುವಿನ ಜನ್ಮ ನಕ್ಷತ್ರಕ್ಕೆ ‘ಬ’ದಿಂದ ಶುರುವಾಗುವ ಹೆಸರು ಬೇಕು ಅಂತ ಮಾವ ಪಟ್ಟು ಹಿಡಿದಿದ್ದರಿಂದ ಕುಂಭಕರ್ಣ ಅನ್ನುವ ಹೆಸರು ತಪ್ಪಿಹೋಯಿತು. ಅಂತ ಸಂಗಮೇಶ ಬಹಳಷ್ಟು ದಿನ ಫೀಲ್‌ ಮಾಡಿಕೊಳ್ಳುತ್ತಿದ್ದ.

ಬಭ್ರುವಾಹನ ಹುಟ್ಟಿದ ವರುಷವೇ ಲಂಕೇಶರು ಪತ್ರಿಕೆ ಆರಂಭಿಸಿದರು. ಅವತ್ತಿನಿಂದ ಸಂಗಮೇಶನಿಗೆ ಓದುವುದಕ್ಕೆ ಕೊರತೆಯೇ ಇಲ್ಲದಂತಾಯಿತು. ಲಂಕೇಶ್‌ಪತ್ರಿಕೆಗಾಗಿ ಪ್ರತಿ ವಾರ ಕಾಯುತ್ತಾ, ಸ್ಕೂಲಿನ ಮಕ್ಕಳನ್ನು ಅರ್ಧಗಂಟೆಗೊಮ್ಮೆ ಸತೀಶ್‌ ಕಾಮತರ ಪೇಪರ್‌ ಅಂಗಡಿಗೆ ಅಟ್ಟುತ್ತಾ, ಲಂಕೇಶ್‌ ಕೈಗೆ ಸಿಕ್ಕ ದಿನ ಪಾಠ ಮಾಡುವುದನ್ನೂ ಬಿಟ್ಟು ಅದನ್ನೇ ಓದುತ್ತಾ ಸಂಗಮೇಶ ಸುಖವಾಗಿದ್ದ. ಅವನ ಹೆಂಡತಿ ಮಹಾದೇವಿಗೆ ಆ ಪತ್ರಿಕೆ ಇಷ್ಟವಾಗುತ್ತಿರಲಿಲ್ಲ. ಅದನ್ನು ಗಂಡ ಓದಿ ಪೋಲಿಯಾಗುತ್ತಿದ್ದಾನೆ ಅಂತ ಕ್ರಮೇಣ ಆಕೆಗೆ ಅನ್ನಿಸತೊಡಗಿತು. ಇದನ್ನು ಓದಿದರೆ ನೀನು ಜಾಣೆಯಾಗುತ್ತಿ ಅಂತ ಸಂಗಮೇಶ ಆಕೆಯ ಎದುರು ಟೀಕೆ-ಟಿಪ್ಪಣಿಯ ಸಾಲುಗಳನ್ನು ಓದಿ ಹೇಳುತ್ತಿದ್ದ. ಅದನ್ನು ಕೇಳಿಸಿಕೊಳ್ಳುತ್ತಿದ್ದಾಗೆಲ್ಲ ಮಹಾದೇವಿಗೆ, ತಾನು ನೋಡಿಯೇ ಇರದ ಲಂಕೇಶ ಎಂಬ ಅಪರಿಚಿತ ಮನುಷ್ಯ ತನ್ನ ಮುಂದೆ ಕೂತುಕೊಂಡು ಮಾತಾಡುತ್ತಿದ್ದಾನೆ ಅನ್ನಿಸುತ್ತಿತ್ತು. ತನ್ನ ಗುಟ್ಟುಗಳೆಲ್ಲ ಬೆಂಗಳೂರೆಂಬ ದೂರದ ಊರಿನಲ್ಲಿ ಕೂತ ಅಜ್ಞಾತ ಮನುಷ್ಯನಿಗೆ ಗೊತ್ತಿದೆ ಅನ್ನಿಸುತ್ತಿತ್ತು.

ಕ್ರಮೇಣ ಸಂಗಮೇಶನ ಕುಟುಂಬದಲ್ಲೂ ಜಗಳಗಳು ಶುರುವಾದವು. ಮಹಾದೇವಿ, ತನ್ನ ತಮ್ಮ ಸೋಮುವನ್ನು ಮನೆಗೆ ಕರೆತಂದು ಇಟ್ಟುಕೊಂಡಳು. ಅವನು ಅಪ್ಪಟ ಅಕ್ಷರ ದ್ವೇಷಿಯಾಗಿದ್ದ. ಆದರೆ ಸಂಗಮೇಶನಿಗಿಂತ ಖುಷಿಯಾಗಿದ್ದ. ಲಂಕೇಶರಂಥ ಸಾಹಿತಿಯನ್ನು ಓದದೆಯೂ ಖುಷಿಯಾಗಿರಬಹುದು ಅನ್ನುವುದನ್ನು ಒಪ್ಪಿಕೊಳ್ಳಲು ಸಂಗಮೇಶ ತಯಾರಿರಲಿಲ್ಲ. ಹೀಗಾಗಿ ಸೋಮುವಿನ ಸಂತೋಷವೆಲ್ಲ ಬರೀ ನಟನೆ ಅನ್ನುವ ನಿರ್ಧಾರಕ್ಕೆ ಸಂಗಮೇಶ ಬಂದುಬಿಟ್ಟಿದ್ದ.

ಸೋಮು ಮತ್ತು ಬಭ್ರುವಾಹನ ಗೆಳೆಯರ ಹಾಗೆ ಬೆಳೆದರು. ಇಬ್ಬರಿಗೂ ಏಳೆಂಟು ವರುಷದ ಅಂತರವಿದ್ದರೂ ಯೋಚನಾಲಹರಿ ಒಂದೇ ಥರ ಇತ್ತು. ಸೋಮುವಿನ ಓದು ಹತ್ತಲಿಲ್ಲ. ಆದರೆ ಸೈಕಲ್‌ ರಿಪೇರಿ ಮಾಡುತ್ತಿದ್ದ. ಹಳೆಯ ರೇಡಿಯೋವನ್ನು ಬಿಚ್ಚಿ ಮತ್ತೆ ಹಾಗೇ ಜೋಡಿಸುತ್ತಿದ್ದ. ಗೇರ ಸೊಪ್ಪೆಯ ಏಕೈಕ ಶ್ರೀಮಂತ ಕುಟುಂಬವಾದ ದೇವರಾಜರ ಮನೆಯ ಟ್ರ್ಯಾಕ್ಟರನ್ನು ನುರಿತ ಡ್ರೆೃವರನ ಹಾಗೆ ಓಡಿಸುತ್ತಿದ್ದ.

ಮಗ ಹಾಗಾಗಿ, ಹೆಂಡತಿ ಹೀಗಾಗಿ, ಸ್ಕೂಲು ಮಕ್ಕಳೆಲ್ಲ ಇಂಗ್ಲಿಷ್‌ ಮೀಡಿಯಮ್ಮಿಗೆ ಸೇರಿ, ತೇಜಸ್ವಿ ಲಂಕೇಶ್‌ ಪತ್ರಿಕೆಗೆ ಬರೆಯುವುದು ನಿಲ್ಲಿಸಿ, ಲಂಕೇಶರ ಪ್ರಗತಿ ರಂಗ ಶುರುವಾಗಿ, ಸತ್ತುಹೋಗಿ, ಲಂಕೇಶರು ತೀರಿಕೊಂಡು, ಅದೇ ದಿನ ಅವರ ಮೇಲೆ ಸಮತೀಂದ್ರ ನಾಡಿಗರು ಪದ್ಯ ಓದಿ...ಸಂಗಮೇಶ ನಿವೃತ್ತನಾದ. ಮನೆಯ ಆಡಳಿತ ಅವನ ಮಗ ಬಭ್ರುವಾಹನ ಕೈಗೆ ಬಂತು. ಅವನು ಶಿವಮೊಗ್ಗೆಯಿಂದ ಗೇರುಸೊಪ್ಪೆಗೆ ಬರುತ್ತಿದ್ದ ಶಂಕರ ಟ್ರಾವೆಲ್ಸ್‌ ಡ್ರೆೃವರ್‌ ಆಗಿ ಸೇರಿಕೊಂಡ. ಮದುವೆ ಮಾಡಿಕೊಳ್ಳಬೇಕು ಅನ್ನುವ ಹಪಹಪಿಯಲ್ಲಿ ರಾತ್ರಿ- ಹಗಲು ದುಡಿಯತೊಡಗಿದ. ಮನೆಗೆ ಪತ್ರಿಕೆ ತರುವುದನ್ನು ನಿಲ್ಲಿಸಿದ. ಸಂಗಮೇಶ ‘ಜೊತೆ ಜೊತೆಗೆ ನಡೆದಾಗ ನೀಲ್ಯಾಗಿ ನಲಿದಂಥ...ಕಾಯುತ್ತಾ ಕುಂತಾಗಿ ಕಪ್ಪಾಗಿ ಕವಿದಂಥ ...ನುಡಿನುಡಿದು ಹೋದಾಗ ಪಚ್ಚೆಯ ತೆನೆಯಂಥ.. ಭೂಮಿಯೂ ಎಲ್ಲಾನೂ ಕೆಂಪಾದವೋ’ ಸಾಲುಗಳ ಅರ್ಥ ಹುಡುಕುತ್ತಿದ್ದ.

*

ಇನ್‌ಫ್ಯಾಕ್ಟ್‌ ಸಂಗಮೇಶ ಕತೆ ಇಲ್ಲಿಗೆ ಮುಗಿಬೇಕಿತ್ತು. ಆದರೆ ಅಪ್ಪ ಹಳೆಯ ಹಾಡುಗಳನ್ನು ಹಾಡುತ್ತಾ ಕೂತಿರುವುದನ್ನು ಕಂಡು ಬಭ್ರುವಾಹನನಿಗೆ ಅನೂಹ್ಯ ಭಯವೊಂದು ಕಾಡತೊಡಗಿತು. ಅಪ್ಪ ತಮ್ಮಲ್ಲರಿಗಿಂತ ಸುಖವಾಗಿದ್ದಾರೆ ಅನ್ನಿಸತೊಡಗಿತು. ತನ್ನ ಜೊತೆ, ಗೆಳೆಯರ ಜೊತೆ ಹಂಚಿಕೊಳ್ಳಲಾಗದ ಸಂಗತಿಗಳನ್ನು ಅವರು ಯಾವತ್ತೂ ಭೇಟಿಯಾಗದ ಒಬ್ಬಲೇಖಕನ ಜೊತೆ ಹಂಚಿಕೊಳ್ಳುತ್ತಿದ್ದಾರೆ ಅನ್ನಿಸುತ್ತಿತ್ತು. ಆ ಮೂಲಕ ಅಪ್ಪ, ಸುತ್ತಲಿನ ಎಲ್ಲರ ಅಸ್ತಿತ್ವವನ್ನೇ ನಿರಾಕರಿಸುತ್ತಿದ್ದಾರೇನೋ ಎಂಬ ಕೀಳರಿಮೆಯೂ ಕಾಡತೊಡಗಿತು.

ಒಂದು ರಾತ್ರಿಬಭ್ರುವಾಹನ ರಾತ್ರಿ ಟ್ರಿಪ್‌ ಮುಗಿಸಿ ಮನೆಗೆ ಹೊತ್ತಿಗೆ ಸಂಗಮೇಶ ಜಗುಲಿಯಲ್ಲಿ ಇಪ್ಪತ್ತು ವರುಷಗಳ ಲಂಕೇಶ್‌ಪತ್ರಿಕೆಯ ರಾಶಿ ಇಟ್ಟುಕೊಂಡು ಒಂದೊಂದನ್ನೇ ಓದುತ್ತಾ ಕೂತಿದ್ದ. ಮನೆಯ ಕಾಗದ ಪತ್ರಗಳ ಹಾಗೆ ಅವನ್ನೆಲ್ಲ ಒಪ್ಪವಾಗಿ ಜೋಡಿಸಿಟ್ಟ ಅಪ್ಪನನ್ನು ನೋಡುತ್ತಿದ್ದಂತೆ ಬಭ್ರುವಾಹನ ಬೆಚ್ಚಿಬಿದ್ದ. ಸಂಗಮೇಶ ಅವನ್ನು ಓದುತ್ತಾ ಯಾವುದೋ ಹಾಡು ಗುನುಗುತ್ತಿದ್ದ. ಅದ್ಯಾವ ಹಾಡು ಅಂತ ಅಚ್ಚರಿ ಪಡುತ್ತಾ ಹತ್ತಿರ ಹೋದ ಬಭ್ರುವಾಹನನಿಗೆ ಕೇಳಿಸಿದ್ದು ಎರಡೇ ಸಾಲು; ‘ತುಂಟ ಹುಡುಗ್ಯಾರಿಲ್ಲಿ ನೆಪಹೇಳಿ ಬರುತಾರೆ, ಹರೆಯದಾ ಬಲೆಯಲ್ಲಿ ಸಿಕ್ಹಾಂಗದ’ ಅಪ್ಪನನ್ನು ಆ ಸ್ಥಿತಿಯಲ್ಲಿ ನೋಡುತ್ತಿದ್ದ ಹಾಗೆ ಬಭ್ರುವಾಹನನಿಗೆ ಇನ್ನಿಲ್ಲದ ಸಿಟ್ಟಬಂತು.ಇಷ್ಟು ವರ್ಷಗಳನ್ನು ಈ ಅಪ್ಪ ಇದೇ ವಿಭ್ರಾಂತ ಜಗತ್ತಿನಲ್ಲಿ ಕಳೆದನಲ್ಲ ಅನ್ನಿಸಿತು. ಒಳಗೆ ಹೋದವನೇ ಸೀಮೆಎಣ್ಣೆ ಕ್ಯಾನು ತಂದು, ಸಂಗಮೇಶ ಜೋಡಿಸಿಟ್ಟ ಪತ್ರಿಕೆಗಳ ರಾಶಿಯ ಮೇಲೆ ಅದನ್ನು ಸುರಿದು ಬೆಂಕಿಗಿಡ್ಡಿ ಗೀರಿದ. ಅಷ್ಟೂ ಪತ್ರಿಕೆಗಳು ಸುಟ್ಟು ಬೂದಿಯಾಗುವುದನ್ನು ನೋಡುತ್ತಾ ನಿಂತ.

ಮಾರನೆಯ ಬೆಳಗ್ಗೆ ಸಂಗಮೇಶ ತೀರಿ ಕೊಂಡ.ಅಪ್ಪನ ಶವಸಂಸ್ಕಾರ ಮುಗಿಸಿ ಬಂದು, ಅಪ್ಪನ ಪುಸ್ತಕದ ಕಪಾಟು ಹುಡುಕುತ್ತಿದ್ದಾಗ ಅವನಿಗೆ ಸಂಗಮೇಶ ಕತ್ತರಿಸಿಟ್ಟ ಕವಿತೆಯಾಂದು ಸಿಕ್ಕಿತು. ಅದರ ಸಾಲುಗಳನ್ನು ಬಭ್ರುವಾಹನ ಓದಿದ;

ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ,ನೆಲ
ಹೊನ್ನುಬೇಕು.
ಕೆಲವರಿಗೆ
ಪ್ರೀತಿ;
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು.

ಆವತ್ತಿನಿಂದ ಬಭ್ರುವಾಹನ ಅಪ್ಪನ ಹಾಗೇ ವರ್ತಿಸ ತೊಡಗಿದ. ಅವ್ವನನ್ನು ಅನುಮಾನಿಸಿದ. ಹೆಂಡತಿಯ ಜೊತೆ ಮಾತಾಡುವುದನ್ನು ಕಡಿಮೆ ಮಾಡಿದ. ಬಸ್ಸು ಓಡಿಸುತ್ತಿದ್ದಾಗ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ದಾರಿ ತಪ್ಪಿ ಎಲ್ಲಿಗೋ ಹೋಗುತ್ತಿದ್ದ.

ಒಂದು ಅಪರಾತ್ರಿಯಲ್ಲಿ ಶಿವಮೊಗ್ಗೆಯಿಂದ ಗೇರು ಸೊಪ್ಪೆಗೆ ಶಂಕರ್‌ ಟ್ರಾವೆಲ್ಸ್‌ ಓಡಿಸುತ್ತಾ ಬರುತ್ತಿದ್ದಾಗ ಬಭ್ರುವಾಹನನಿಗೆ ಎದುರಿನಿಂದ ಬರುತ್ತಿರುವ ವಾಹನಗಳೂ, ಅದರ ಬೆಳಕೂ ತನ್ನೊಳಗೆ ಪ್ರವೇಶಿಸುತ್ತಿವೆ.ಅನ್ನಿಸಿ ರೋಮಾಂಚನವಾಯಿತು. ವೇಗವಾಗಿ ತನ್ನತ್ತ ನುಗ್ಗಿ ಬರುತ್ತಿದ್ದ ಕತ್ತಲನಡುವಿನ ಹಾದಿಯೂ, ಅಕ್ಕ ಪಕ್ಕದ ಕಾಡೂ, ಆಗೀಗ ಮಿಂಚಿ ಮರೆಯಾಗದ ಬೆಳಕೂ ತನ್ನೊಳಗೆ ನುಗ್ಗುತ್ತಿವೆ ಅನ್ನಿಸಿತು. ಬಭ್ರುವಾಹನ ಖುಷಿಯಲ್ಲಿ ಕಣ್ಣುಮುಚ್ಚಿದ.

ಬಭ್ರುವಾಹನ ಕಣ್ಣು ಮುಚ್ಚಿದ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X