ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿಯೆಂಬ ಮಾಯಾಜಿಂಕೆಯೂ ಮನಸ್ಸೆಂಬ ವೈದೇಹಿಯೂ!

By Staff
|
Google Oneindia Kannada News
  • ಜಾನಕಿ
ಜಗತ್ತಿನಲ್ಲಿ ಎಲ್ಲಾ ಥರದ ವ್ಯಕ್ತಿಗಳ ಕಷ್ಟಗಳನ್ನೂ ಪಟ್ಟಿಮಾಡಲಾಗಿದೆ. ಆ ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ ನಿಗದಿಮಾಡಲಾಗಿದೆ. ದಾನಧರ್ಮ ಮಾಡಿದವನಿಗೆ ಪರಲೋಕದಲ್ಲಿ ಪುಣ್ಯವಾದರೂ ಬರುತ್ತದೆ. ಕೊಲೆ ಮಾಡಿದವನು ಪತ್ರಿಕೆಯ ಮುಖಪುಟದಲ್ಲಿ ಮಿಂಚಬಹುದು. ಕೋರ್ಟಿನ ಕಟಕಟೆಯಲ್ಲಿ ನಿಂತು ತಾನೇಕೆ ಕೊಲೆ ಮಾಡಿದೆ ಅಂತ ಧೈರ್ಯವಾಗಿ ಹೇಳಿಕೊಳ್ಳಬಹುದು. ಅವನ ಮೇಲೂ ಅನೇಕರಿಗೆ ಅನುಕಂಪ ಹುಟ್ಟಬಹುದು.

ಆದರೆ ಪ್ರೀತಿ ಮಾಡುವವರಿದ್ದಾರೆ ನೋಡಿ; ಅವರ ಪಾಡು ಯಾರಿಗೂ ಬೇಡ. ಅವರನ್ನು ಗೌರವಿಸುವ ಮಂದಿ ಬಹುಶಃ ಈ ಜಗತ್ತಿನಲ್ಲೂ ಇಲ್ಲ, ಪರಲೋಕದಲ್ಲೂ ಇಲ್ಲ. ಪ್ರೀತಿ ಮಾಡಿದ ಅನ್ನುವ ಕಾರಣಕ್ಕೆ ಸ್ವರ್ಗಕ್ಕೆ ಹೋದ ಒಬ್ಬ ಭಕ್ತನ ಕತೆಯನ್ನು ಹೇಳಿನೋಡೋಣ. ಮಡಕೆ ಮಾಡಿದ ಕುಂಬಾರ, ವ್ಯಾಪಾರ ಮಾಡಿದ ಧರ್ಮವ್ಯಾಧ, ಹೆಂಡತಿಗೆ ಕೊಡಬಾರದ ಕಷ್ಟ ಕೊಟ್ಟ ಹರಿಶ್ಚಂದ್ರ- ಮುಂತಾದವರೆಲ್ಲ ಸ್ವರ್ಗಸ್ಥರಾಗಿರಬಹುದು. ಆದರೆ ಪ್ರೀತಿ ಮಾಡಿದವರಿಗೆ ಆ ಭಾಗ್ಯ ಇಲ್ಲವೇ ಇಲ್ಲ.

ಯಾರನ್ನಾದರೂ ದಾರಿಯಲ್ಲಿ ತಡೆದು ನಿಲ್ಲಿಸಿ ನಿಮ್ಮನ್ನು ಕೊಲೆ ಮಾಡ್ತೀನಿ ಅಂತ ಹೇಳಿ ನೋಡಿ. ಅವರು ಅಷ್ಟೇನೂ ಗಾಬರಿಯಾಗುವುದಿಲ್ಲ. ಜಾತಸ್ಯ ಮರಣಂ ಧ್ರುವಂ ಎನ್ನುವ ಆಧ್ಯಾತ್ಮ ಬಲ್ಲವರು ಅವರು. ಹೋಗಯ್ಯಾ, ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇಬೇಕು. ಅದೇ ಯಾರನ್ನಾದರೂ ನಿಲ್ಲಿಸಿ ‘ಐ ಲವ್‌ ಯೂ’ ಅಂತ ಹೇಳಿನೋಡಿ. ಜಗತ್ತೇ ಸರ್ವನಾಶವಾದಂತೆ ಹುಯಿಲಿಡುವುದಕ್ಕೆ ಆರಂಭಿಸುತ್ತಾರೆ. ಆ ಮೂರು ಇಂಗ್ಲಿಷ್‌ ಪದಗಳಲ್ಲಿ, ಮೂರೂ ಮುಕ್ಕಾಲು ಕನ್ನಡ ಪದಗಳಲ್ಲಿ ಅದೆಂಥ ಶಕ್ತಿಯಿದೆಯೋ ನನಗಂತೂ ಗೊತ್ತಿಲ್ಲ.

ಹಾಗೆ ನೋಡಿದರೆ ಗಂಡಸರೆಲ್ಲ ತಮ್ಮ ಜೀವಮಾನದ ಅತ್ಯುತ್ತಮ ವರುಷಗಳನ್ನು ಯಾವುದಾದರೊಂದು ಹುಡುಗಿಗೆ ‘ಐ ಲವ್‌ ಯೂ’ ಅಂತ ಹೇಳುವುದನ್ನು ರಿಹರ್ಸಲ್‌ ಮಾಡುತ್ತಾ ಕಳೆದುಬಿಡುತ್ತಾರೆ. ಹುಡುಗಿಯರು ಅಂಥದ್ದೊಂದು ಶಬ್ದ ತಮ್ಮ ಕಿವಿಗೆ ಬಿದ್ದಾಗ ಹೇಗೆ ಪ್ರತಿಕ್ರಿಯಿಸಬೇಕು ಅನ್ನುವುದನ್ನು ಯೋಚಿಸುತ್ತಾ ಕಳೆಯುತ್ತಾರೆ. ಅಷ್ಟಕ್ಕೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಅನ್ನುವವನು ಏನು ಅನ್ನಬಾರದ್ದು ಅಂದಿರುತ್ತಾನೆ ಅಂತ ಯೋಚಿಸಿ.

ಅದನ್ನು ಜಗತ್ತು ಯಾವತ್ತೋ ಯೋಚಿಸಿದೆ. ಪ್ರೀತಿಸುವವರನ್ನು ಮತ್ತು ಪ್ರೀತಿಸಿ ಅನ್ನುವವರನ್ನು ಜಗತ್ತು ಸುಮ್ಮನೆ ಬಿಟ್ಟಿಲ್ಲ. ನಿನ್ನ ನೆರಮನೆಯವರನ್ನು ಪ್ರೀತಿಸು ಅಂತ ಯೇಸು ಶಿಲುಬೆಯೇರಿದ್ದಕ್ಕೆ ಬೇರೆ ಕಾರಣಗಳಿದ್ದರೆ ಅವು ಪ್ರಾಸಂಗಿಕ ಅಷ್ಟೇ. ಪ್ರೀತಿ ಮಾಡಿದವರೆಲ್ಲ ಗೋರಿಯಾಗಿಯೋ, ವಿಷಕುಡಿದೋ, ಸಮುದ್ರಕ್ಕೆ ಬಿದ್ದೋ ಸಾಯುವುದನ್ನು ನಾವು ಓದಿದ್ದೇವೆ.

ಯಾಕೆ ಪ್ರೀತಿ ಅಷ್ಟೊಂದು ಭಯ ಹುಟ್ಟಿಸುತ್ತದೆ? ಅದು ಸಾವಿನ ಹಾಗೆ ಅನ್ನುವವರಿದ್ದಾರೆ. ಗರಗಸದ ಹಾಗೆ ಬರುತ್ತಾ ಕೊಯ್ಯುತ್ತದೆ, ಹೋಗುತ್ತಾ ಕೊಯ್ಯುತ್ತದೆ ಅನ್ನುತ್ತಾರೆ. ಆದರೆ ಯಾರು ಏನೇ ಹೇಳಿ, ಪ್ರೀತಿ ನಮ್ಮ ಮೂಲಸ್ವರೂಪವನ್ನು ಬದಲಾಯಿಸುತ್ತದೆ ಅನ್ನುವುದಂತೂ ಖಂಡಿತಾ. ಪ್ರೀತಿಸದವರನ್ನು ಕ್ಪಣಾರ್ಧದಲ್ಲಿ ಕಚ್ಚಿ, ಹರಿದು, ಚಿಂದಿ ಮಾಡಬಲ್ಲ ಡಾಬರ್‌ಮನ್‌ ಪ್ರೀತಿಸುವವರ ಚಾಟಿಯೇಟು ತಿಂದುಕೊಂಡು ಬಿದ್ದಿರುವುದನ್ನು ನೀವು ನೋಡಿಲ್ಲವೇ? ಬಹುಶಃ ಪ್ರೀತಿ ಪ್ರತಿಭಟಿಸುವ ಶಕ್ತಿಯನ್ನೇ ಕೊಲ್ಲುತ್ತದೆ. ಗುಲಾಮರನ್ನಾಗಿಸುತ್ತದೆ. ನಾವು ಪ್ರೀತಿಸಿ ಗುಲಾಮರಾಗುತ್ತೇವೋ ಗುಲಾಮರಾಗುವುದನ್ನೂ ಪ್ರೀತಿಸುತ್ತೇವೋ ಗೊತ್ತಿಲ್ಲ.

ಪ್ರೀತಿ ಭಯಾನಕ ಅನ್ನುವುದಂತೂ ಸುಳ್ಳಲ್ಲ. ಮದುವೆಯಾದವರು ಯಾವ ಹುಡುಗಿಯ ಹತ್ತಿರ ಕೂಡ ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳುವ ಧೈರ್ಯ ಮಾಡುವುದಿಲ್ಲ. ಯಾಕೆಂದರೆ ಪ್ರಾಮಾಣಿಕವಾಗಿ ಎರಡು ಸಲ ಪ್ರೀತಿಸುವುದು ಸಾಧ್ಯವೇ ಇಲ್ಲ. ಎರಡನೇ ಸಾರಿ ಒಂದು ಹುಡುಗಿಗೆ ಐ ಲವ್‌ಯೂ ಅಂತ ಒಬ್ಬ ಹೇಳಿದ ಅಂದರೆ ಒಂದೋ ಅವನು ಅಪ್ರಾಮಾಣಿಕ ಅಥವಾ ಹುಚ್ಚ. ಎರಡೂ ಅಲ್ಲದಿದ್ದರೆ ತನ್ನನ್ನು ತಾನು ಹಿಂಸಿಸಿಕೊಳ್ಳುವ ಕಾಯಿಲೆಗೆ ತುತ್ತಾಗಿರುವ ಸೇಡಿಸ್ಟ್‌.

ಪ್ರೀತಿಸುವುದು ಯಾಕೆ ಕಷ್ಟ ಅಂತ ಕೇಳಿಕೊಳ್ಳಿ. ಯಾರಾದರೊಬ್ಬರು ನಿಮ್ಮ ಬಳಿಗೆ ಬಂದು ಐ ಲವ್‌ ಯೂ ಎಂದಾಗ ನೀವು ಅದನ್ನು ಒಪ್ಪಿಕೊಂಡಿರೋ ಅಲ್ಲಿಗೆ ಸಂಬಂಧ ಸೃಷ್ಟಿಯಾದಂತೆ. ಅವರನ್ನು ನೀವೂ ಪ್ರೀತಿಸಬೇಕಾಗುತ್ತದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಅನ್ನುವ ಹೇಳಿಕೆಯಲ್ಲಿ ನೀನೂ ನನ್ನನ್ನು ಪ್ರೀತಿಸು ಅನ್ನುವ ಬೇಡಿಕೆಯೂ ಇದೆ. ನಾನು ನಿನ್ನನ್ನು ಸಾಯಿಸುತ್ತೇನೆ ಅನ್ನುವ ಹೇಳಿಕೆಯಲ್ಲಿ ಅಂಥ ಯಾವ ಕರಾರೂ ಇಲ್ಲ. ಹೀಗಾಗಿ ಪ್ರೀತಿಸುವುದಕ್ಕೆ ಒಪ್ಪುವುದೆಂದರೆ ನೀವೂ ಅದಕ್ಕೆ ಬಲಿಬಿದ್ದಂತೆಯೇ. ಸರಿ, ಪ್ರೀತಿಸ್ಕೋ ಹೋಗು ಅಂತ ಸುಮ್ಮನಿರುವಂತಿಲ್ಲ. ಪ್ರೀತ್ಸೋಣ ಬಾ ಅನ್ನಬೇಕು. ಅಲ್ಲಿಗೆ ಎಸ್ಸೆಮ್ಮೆಸ್ಸು ಬರೆದು, ಫೋನ್‌ ನಂಬರ್‌ ಟೈಪಿಸಿ ಸೆಂಡ್‌ ಬಟನ್‌ ಒತ್ತಿದ ಹಾಗೆ. ಮತ್ತೆ ಹಿಂದೆಗೆದುಕೊಳ್ಳುವುದು ನಿಮ್ಮ ಕೈಲಿಲ್ಲ. ಅದು ಸರ್ವರ್‌ಗೆ ಬಿಟ್ಟದ್ದು. ಪ್ರೀತಿ ಕೂಡ ಹಾಗೆಯೇ, ನಿರಾಕರಣೆ ಸರ್ವರಿಗೆ ಬಿಟ್ಟದ್ದು!

***

ಪ್ರೀತಿ ಅನಿವಾರ್ಯವಲ್ಲ, ಕಷ್ಟ. ಪ್ರೀತಿಸದೇ ವರ್ಷಾನುಗಟ್ಟಲೆ ಸಂತೋಷವಾಗಿ ಇದ್ದುಬಿಡಬಹುದು. ಪ್ರೀತಿಸುತ್ತಲೂ ಸಂತೋಷವಾಗಿರಬಹುದು. ಆದರೆ ಪ್ರೀತಿ ಏನೇನನ್ನೋ ಬೇಡುತ್ತದೆ. ಏನೇನನ್ನೋ ಕೊಡುತ್ತದೆ. ಸುಮ್ಮನಿದ್ದವರನ್ನು ಮದುವೆಗೆ ದೂಡುತ್ತದೆ. ಮದುವೆಯಾದರೆ ಪ್ರೀತಿ ಉಳಿಯುತ್ತದೆ ಅಂದುಕೊಳ್ಳುತ್ತಾರೆ. ಮದುವೆಯೆಂಬ ಪಂಜರದಲ್ಲಿ ಪ್ರೀತಿಯನ್ನು ಬಂಧಿಸಲು ಯತ್ನಿಸುತ್ತಾರೆ. ಆದರೆ ಗಿಣಿಯು ಪಂಜರದೊಳಿಲ್ಲ ಅನ್ನೋದು ಆಮೇಲೆ ಗೊತ್ತಾಗುತ್ತದೆ. ಆಮೇಲೆ ಬೇರೆ ಗಿಣಿಯ ಹುಡುಕಾಟ ಶುರುವಾಗುತ್ತದೆ. ದೂರ ನಾಡಿನ ಹಕ್ಕಿ, ಹಾರಿ ಬಾ ಗೂಡಿಗೆ ಅಂತ ಮನಸ್ಸು ಹಾಡುತ್ತದೆ.

ಅಷ್ಟಕ್ಕೂ ಪ್ರೀತಿ ಅಂದರೇನು ಅನ್ನುವುದು ಯಾರಿಗಾದರೂ ಗೊತ್ತಿದೆಯಾ? ಸಿನಿಮಾಗಳಲ್ಲಿ ಪ್ರೀತಿಸುವುದು ಎಂದರೆ ಆತನೊಂದಿಗೆ ಡುಯೆಟ್ಟು ಹಾಡುವುದು, ನಿಜಜೀವನದಲ್ಲಿ ಹಾಡಿಲ್ಲ, ಬರೀಪಾಡು ಅಷ್ಟೇ. ಅವನ ಹಸ್ತಕ್ಪೇಪಕ್ಕೆ ಅವಳು ಒಡ್ಡಿಕೊಂಡರೆ ಅದು ಪ್ರೀತಿ. ಅವಳ ಬಾಯಿಮಾತಿಗೆ ಅವನು ತೆಪ್ಪಗಾದರೆ ಅದು ಪ್ರೀತಿ. ಅವನನ್ನು ಬಿಟ್ಟು ಬೇರೆ ಯಾರನ್ನೂ ನೋಡದಿದ್ದರೆ ಅದು ಪ್ರೀತಿ, ಅವಳ ಮೈಸೂರಿನ ಮೇಲಿರುವ ಕಣ್ಣು ಬೇರೆ ಯಾವ ಚಾಮುಂಡಿಬೆಟ್ಟಕ್ಕೂ ಹಾಯದಿದ್ದರೆ ಅದು ಪ್ರೀತಿ. ಪ್ರೀತಿಯೆಂಬುದು ಬೇಲಿ, ಮದುವೆ ಬರೀ ತಾಳಿ!

ಹಾಗಿದ್ದರೆ ಪ್ರೀತಿಸುವುದಕ್ಕೆ ನಾವೇಕೆ ಹಾತೊರೆಯುತ್ತೇವೆ. ಮೀರಾ ಯಾಕೆ ಅಷ್ಟು ಗಾಢವಾಗಿ ಇಲ್ಲಿಲ್ಲದ ಗಿರಿಧರನನ್ನು ಪ್ರೀತಿಸಿದಳು. ರಾಧಾ ಯಾಕೆ ಕೃಷ್ಣನನ್ನು ಹಂಬಲಿಸಿದಳು. ಅಕ್ಕಮಹಾದೇವಿಗೇಕೆ ಚೆನ್ನಮಲ್ಲಿಕಾರ್ಜುನನ ಹಂಗು? ಪ್ರೀತಿ ಅಲೌಕಿಕವಾಗಿದ್ದಾಗ ಭಕ್ತಿ, ಶಕ್ತಿ ಒಮ್ಮೊಮ್ಮೆ ಮುಕ್ತಿ. ಬರೀ ಲೌಕಿಕವಾಗಿದ್ದರೆ ಅನುರಕ್ತಿ!

ಹಾಗೆ ನೋಡಿದರೆ ಐ ಲವ್‌ ಯು ಎಂಬ ಮೂರಕ್ಪರವೇ ಅವಳ ಮೈಸೂರಿಗೆ, ಅವನ ಮನಸೂರೆಗೆ ರಹದಾರಿ. ಪ್ರೀತಿಸುವ ಮೂಲಕ ಗಂಡು ಅವಳ ದೇಹದ ಮೇಲೆ ಹಿಡಿತ ಸಾಧಿಸುತ್ತಾನೆ, ಹೆಣ್ಣು ಅವನ ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತಾಳೆ. ದೇಹಕ್ಕೆ ವಯಸ್ಸಾಗುತ್ತದೆ; ಆಮೇಲೆ ಬಿಟ್ಟೇನೆಂದರೂ ಬಿಡದೀ ಮಾಯೆ. ಮನಸ್ಸಿಗೆ ಬೇಸರವಾಗುತ್ತದೆ; ಯಾವ ಮೋಹನ ಮುರಳಿ ಕರೆದರೂ ಹೋಗುವಂತಿಲ್ಲ ತಾಯೆ!

***

ಇದು ಪ್ರೀತಿವಿರೋಧಿ ವಾದವಲ್ಲ. ಪ್ರೀತಿ ಸಿಗರೇಟಿನ ಹಾಗೆ. ಬೆಲೆ ಹೆಚ್ಚಾದರೂ, ಆಗಾಗ ಕೆಮ್ಮು ಬಂದರೂ, ಹೊಗೆ ಕಣ್ಣುತುಂಬಿ ಕಣ್ಣೀರು ಬಂದರೂ ಸೇದೇಸೇದುತ್ತೇವೆ. ಪ್ರೀತಿಸುವುದು ಆರಂಭದಲ್ಲಿ ಥ್ರಿಲ್ಲು. ಆಮೇಲೆ ಹವ್ಯಾಸ, ಅದಾದ ಮೇಲೆ ಚಟ. ಕೊನೆಕೊನೆಗೆ ತುಟಿ- ಬೆರಳುಗಳ ನಡುವಿನ ಜೂಟಾಟ. ಹೊಗೆ, ಕೆಮ್ಮು,ಕಿಡಿಹಾರಿ ತೂತಾದ ಶರಟು, ಬೇಕಾದಾಗ ಸಿಗದ ವಸ್ತು, ಪ್ರತಿಬಜೆಟ್ಟಿಗೂ ಏರುವ ಖರ್ಚು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಕ್ಕೊಳಗಾದ ಸಂಗತಿ!

ಮದುವೆಗೆ ಮೊದಲು ಹೇಗೆ ‘ಐ ಲವ್‌ ಯೂ’ ಎನ್ನುವುದು ಎಂಬ ಸಂಕಟ. ಮದುವೆಯಾದ ನಂತರ ‘ಐ ಲವ್‌ ಯೂ’ ಅನ್ನಬೇಕಲ್ಲ ಎಂಬ ಪ್ರಾಣಸಂಕಟ. ಮದುವೆಗೆ ಮೊದಲು ಎಲ್ಲಿ ಪ್ರೀತಿಸ್ತೀನಿ ಅಂದುಬಿಡ್ತಾನೋ ಎಂಬ ಭಯ. ಆಮೇಲೆ ಎಲ್ಲಿ ಪ್ರೀತಿಸ್ತೀನಿ ಅಂತ ಅನ್ನೋದಿಲ್ಲವೋ ಎಂಬ ಭಯ. ಮೊದಲು ಪ್ರೀತಿಸಲಿ ಅನ್ನೋ ಆಶೆ. ಪ್ರೀತಿಸೋದಿಲ್ಲ ಎಂಬ ಗುಮಾನಿ.

ಒಮ್ಮೆ ಐ ಲವ್‌ ಯೂ ಅಂದೆ. ಥ್ಯಾಂಕ್ಯೂ ಅನ್ನುವ ಉತ್ತರ ಬಂತು. ಮದುವೆಯಾದ ಮೇಲೆ ಅದನ್ನೇ ಅಂದೆ. ನೋ ಮೆನ್ಷನ್‌ ಪ್ಲೀಸ್‌ ಅನ್ನುವ ಉತ್ತರ ಬಂತು.

ಐ ಹೇಟ್‌ ಯೂ ಅಂದೆ. ಸೇಮ್‌ ಟು ಯೂ ಅಂತ ಮರುತ್ತರ ಬಂತು. ಸದ್ಯ, ಇಬ್ಬರೂ ಪರಸ್ಪರರನ್ನು ಪ್ರೀತಿಸುತ್ತಿಲ್ಲ. ಆದ್ದರಿಂದ ಸುಖವಾಗಿದ್ದೇವೆ ಅಂದುಕೊಂಡೆ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X