• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಞಾನೋದಯ ಎಂಬ ಪರಮ ಅಜ್ಞಾನದ ಸ್ಥಿತಿಯ ನೆನೆದು...

By Staff
|
  • ಜಾನಕಿ
ಸುಮಾರು ವರುಷಗಳ ಕಾಲ ಬುದ್ಧ ತಪಸ್ಸು ಮಾಡಿದ ನಂತರ ಅವನಿಗೆ ಜ್ಞಾನೋದಯವಾಯಿತು. ಬಾಹುಬಲಿ ಕೂಡ ಕಾಡಿನಲ್ಲಿ ಕಠಿಣ ತಪಸ್ಸು ಮಾಡಿದ ನಂತರ ಆತನಿಗೆ ಕೇವಲಜ್ಞಾನ ಪ್ರಾಪ್ತಿಯಾಯಿತು. ನಮ್ಮ ಋಷಿಗಳೂ ಮುನಿಗಳೂ ತಪಸ್ವಿಗಳೂ ಕಾಡಿನಲ್ಲಿ ಒಂಟಿಕಾಲಲ್ಲಿ ನಿಂತು ದೇವರನ್ನು ಒಲಿಸಿ ಬೇಕಾದ ವರ ಪಡೆದುಕೊಂಡಿದ್ದಾರೆ. ಜ್ಞಾನ ವೈರಾಗ್ಯಗಳನ್ನು ಸಿದ್ಧಿಸಿಕೊಳ್ಳುವುದಕ್ಕೆ ತಪಸ್ಸು ಮಾಡಿದವರಿದ್ದಾರೆ. ಮಲತಾಯಿ ಮನೆಯಿಂದ ಆಚೆ ದೂಡಿದಳು ಅನ್ನುವ ಕಾರಣಕ್ಕೆ ಧ್ರುವಕುಮಾರ ಕಾಡಿಗೆ ಹೋಗಿ ತಪಸ್ಸು ಮಾಡಿ ಧ್ರುವ ನಕ್ಪತ್ರವೇ ಆದ ಕತೆಯಿದೆ. ವರುಷಾನುಗಟ್ಟಲೆ ತಪಸ್ಸು ಮಾಡಿದರೂ ದೇವರ್ಷಿಯಾಗಲೇ ಪಾಡುಪಟ್ಟ ವಿಶ್ವಾಮಿತ್ರನಿದ್ದಾನೆ.

ಇವರನ್ನೆಲ್ಲ ಓದುತ್ತಿದ್ದರೆ ಅಚ್ಚರಿಯೂ ವಿಷಾದವೂ ಏಕಕಾಲಕ್ಕೆ ಮೂಡುತ್ತದೆ. ಅಷ್ಟಕ್ಕೂ ಜ್ಞಾನೋದಯ ಆಗುವುದು ಅಂದರೇನು? ಜ್ಞಾನೋದಯ ಯಾಕೆ ಆಗಬೇಕು? ಜ್ಞಾನೋದಯ ಆದ ತಕ್ಪಣ ಏನೇನು ಬದಲಾವಣೆ ಆಗುತ್ತದೆ. ಜ್ಞಾನೋದದಿಂದ ಏನನ್ನು ಸಾಧಿಸಿದಂತಾಯಿತು?

Journey to Enlightenment!ಇದನ್ನು ಜ್ಞಾನೋದಯ ಆದವರನ್ನು ಕೇಳಬೇಕು. ಆದರೆ ಜ್ಞಾನೋದಯ ಆದವರು ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಘಟ್ಟವನ್ನು ಮೀರಿರುತ್ತಾರೆ. ಜ್ಞಾನೋದಯ ಆಗದೇ ಇರುವವರಿಗೆ ಅದರ ಕಷ್ಟಸುಖಗಳು ಗೊತ್ತಿರುವುದಿಲ್ಲ.

ಜ್ಞಾನೋದಯದ ಸ್ಥಿತಿ, ಯಾರು ಏನೇ ಹೇಳಿದರೂ, ಅಂಥ ಸುಖಕರವಾದದ್ದೇನೂ ಅಲ್ಲ ಅನ್ನಿಸುತ್ತದೆ. ಅದು ಎಲ್ಲವನ್ನೂ ಮೀರಿ ನಿಲ್ಲುವ ಒಂದು ಅವಸ್ಥೆ. ಅಪ್ಪ ಬೈದರೆ ಸಿಟ್ಟಾಗುವ ಬದಲು, ಆತನಿಗೆ ಬೈಯುವುದಕ್ಕೆ ಪ್ರಚೋದನೆ ಏನು ಎಂದು ಚಿಂತಿಸುವ ಕೂರುವುದರಲ್ಲಿ ಸುಖವಿರೋದಕ್ಕೆ ಸಾಧ್ಯವಾ? ಪಂಚೇಂದ್ರಿಯಗಳಿಂದಲೂ ಅರಿಷಡ್ವರ್ಗದಿಂದಲೂ ಸಿಗುವ ಸಂತೋಷಗಳ ಮೂಲವನ್ನು ತಿಳಿದುಕೊಂಡು ಬಿಟ್ಟರೆ ಅದಕ್ಕಿಂತ ಬೋರು ಹೊಡೆಸುವ ಸ್ಥಿತಿ ಮತ್ತೊಂದಿದೆಯಾ?

ಜ್ಞಾನೋದಯ ಅನ್ನುವುದು ಇದು ಇಷ್ಟೇ ಅನ್ನಿಸುವ ಒಂದು ಸ್ಥಿತಿ ತಾನೆ? ಎಲ್ಲವನ್ನೂ ತಿಳಿದುಕೊಂಡ ಗಳಿಗೆ ಯಾಕಾದರೂ ಬದುಕಬೇಕು? ಬದುಕೆಂದರೆ ಹುಡುಕುತ್ತಾ ಹೋಗುವುದು ತಾನೆ? ಹುಡುಕುತ್ತಿದ್ದದ್ದು ಕೈಗೆ ಸಿಕ್ಕಿಬಿಟ್ಟರೆ ಅಲ್ಲಿಗೆ ಬಂದ ಉದ್ದೇಶ ಸಾಧಿಸಿದಂತಾಯಿತು. ಜ್ಞಾನೋದಯ ಆದ ನಂತರ ಹುಡುಕಾಟವೇ ಇಲ್ಲವಲ್ಲ? ಅದು ಮೋಕ್ಷದ ಸ್ಥಿತಿ. ಮೋಕ್ಷ ಅಂದರೆ ಅಂತಿಮಘಟ್ಟ. ಪಯಣದ ಕೊನೆ.

ತುಘಲಕ್‌ ನಾಟಕದಲ್ಲಿ ತುಘಲಕ್‌ ಹೇಳುತ್ತಾನೆ; ‘ನನಗೆ ಮತ್ತೆ ಅಜ್ಞಾನಿ ಆಗಬೇಕು ಅನ್ನಿಸುತ್ತದೆ. ಮತ್ತೆ ಎಲ್ಲವನ್ನೂ ಓದಬೇಕು ಅನ್ನಿಸುತ್ತದೆ. ಹೀಗೆ ಅಜ್ಞಾನಿಯಾಗುವ ಆಸೆ ಜ್ಞಾನೋದಯವಾದ ಎಲ್ಲರನ್ನೂ ಒಂದಲ್ಲ ಒಂದು ಕ್ಷಣ ಕಾಡಿರಲಿಕ್ಕಿಲ್ಲ ಅಂತ ನಂಬುವುದು ಹೇಗೆ?’

***

ಜ್ಞಾನ ಅಂದರೆ ಬೆಳಕು. ಹೀಗಾಗಿ ಜ್ಞಾನೋದಯ ಅಂದರೆ ಸೂರ್ಯೋದಯ. ತಮಸೋಮಾ ಜ್ಯೋತಿರ್ಗಮಯ ಎನ್ನುವ ಆಶಯದ ಅಂತಿಮ ಸ್ಥಿತಿ. ಬೆಳಕನ್ನು ಕಂಡವನಷ್ಟೇ ಅನುಭವಿಸಬಲ್ಲ. ಕತ್ತಲಲ್ಲಿ ಇರುವವನಿಗೆ ಬೆಳಕಿನ ಬಗ್ಗೆ ಹೇಳಲಾಗುವುದಿಲ್ಲ. ಬೆಳಕನ್ನು ವಿವರಿಸುವ ಮೂಲಕ ದಾಟಿಸಲಿಕ್ಕೂ ಆಗುವುದಿಲ್ಲ. ಅದನ್ನು ಕಣ್ಣಿಂದಲೇ ಕಾಣಬೇಕು. ಜ್ಞಾನೋದಯದ ಸ್ಥಿತಿಯೂ ಅದೇ. ಪರಮಹಂಸರೇನೋ ವಿವೇಕಾನಂದನ ನೆತ್ತಿಯ ಮೇಲೆ ಕೈಯಿಟ್ಟು ಅವರಿಗೊಂದು ವಿಚಿತ್ರ ಅನುಭವ ಆಗುವ ಹಾಗೆ ಮಾಡಿರಬಹುದು. ಆದರೆ ಅಷ್ಟು ಸುಲಭವಾಗಿ ಜ್ಞಾನ ಒಂದು ಜೀವದಿಂದ ಮತ್ತೊಂದು ಜೀವಕ್ಕೆ ದಾಟುವುದಿಲ್ಲ. ಮಹಾತ್ಮಗಾಂಧಿಯ ಜೊತೆಗಿದ್ದವರಿಗೆ ಅವರ ಗುಣ ಸೋಂಕಲಿಲ್ಲ. ರಾಮನ ಜೊತೆಗಿದ್ದವರು ಪುರುಷೋತ್ತಮರಾಗುವುದಿಲ್ಲ.

ಬುದ್ಧ ಹೇಳಿದ್ದನ್ನೇ ತೆಗೆದುಕೊಳ್ಳಿ. ಆಸೆಯೇ ದುಃಖಕ್ಕೆ ಮೂಲ. ಇದು ನಮ್ಮ ಪಾಲಿಗೆ ಒಂದು ಶುಷ್ಕ ಹೇಳಿಕೆ ಮಾತ್ರ. ಅದನ್ನು ಭಾಷಣಗಳಲ್ಲಿ ಬಳಸಬಹುದು ಅಷ್ಟೇ. ಯೋಚಿಸಿ ನೋಡಿ; ಆಸೆಯೇ ದುಃಖಕ್ಕೇ ಮೂಲ. ಸರಿ, ಮುಂದೇನು? ಎಂಬ ಪ್ರಶ್ನೆ ನಮಗೆ ಎದುರಾಗುತ್ತದೆ. ಜ್ಞಾನೋದಯ ಅಂದರೆ ಪ್ರಶ್ನೆಗಳೇ ಇಲ್ಲದ ಸ್ಥಿತಿ. ಹೌದಾ?

ಹಾಗೆ ನೋಡಿದರೆ ಅಜ್ಞಾನದಲ್ಲೇ ಸುಖವಿದೆ. ಅಜ್ಞಾನ ಎಂಬ ಕತ್ತಲೆಯನ್ನು ಜ್ಞಾನವೆಂಬ ಬೆಳಕಿನ ಕೋಲು ಹೊಡೆದೋಡಿಸುತ್ತದೆ ಅನ್ನುವುದೇನೋ ನಿಜ. ಆದರೆ ಜ್ಞಾನದಿಂದ ಏನು ಪ್ರಯೋಜನ? ಜ್ಞಾನವೆಂದರೆ ಏನು? ತಿಳಿವಾ? ತಿಳುವಳಿಕೆಯಾ? ಮಾಹಿತಿಯಾ? ಬುದ್ಧಿವಂತಿಕೆಯಾ? ದರ್ಶನವಾ?

ಮಾಹಿತಿ ಯಾವತ್ತೂ ಜ್ಞಾನವಾಗಲು ಸಾಧ್ಯವೇ ಇಲ್ಲ. ಅದು ಕೇವಲ ಸಾಮಾನ್ಯ ಜ್ಞಾನ. ಬುದ್ಧಿವಂತಿಕೆ ಅಂದರೆ ಇಂಟೆಲಿಜೆನ್ಸು. ದರ್ಶನಕ್ಕೂ ಜ್ಞಾನಕ್ಕೂ ಸಂಬಂಧವಿಲ್ಲ, ದರ್ಶನವೆಂದರೆ ವಿಶನ್‌. ತಿಳುವಳಿಕೆ ಅಂದರೆ ನಾಲೆಡ್ಜು. ಇವುಗಳ ಪೈಕಿ ದರ್ಶನವೊಂದನ್ನು ಬಿಟ್ಟು ಉಳಿದೆಲ್ಲವನ್ನೂ ಸಂಪಾದಿಸಬಹುದು, ಪಡೆದುಕೊಳ್ಳಬಹುದು. ಆದರೆ ತಿಳಿವೆನ್ನುವ ಅರಿವೆನ್ನುವ ಜ್ಞಾನ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಅದಕ್ಕಾಗಿ ತಪಸ್ಸು ಮಾಡಬೇಕು.

ತಪಸ್ಸು ಅಂದರೇನು?

ಕಾಡಿನ ನಡುವೆ ಒಂಟಿಯಾಗಿ ಒಂಟಿಕಾಲಲ್ಲಿ ನಿಂತು ತಪಿಸಿದರೆ ಅದು ತಪಸ್ಸಾ? ಪರಿತಪಿಸುವುದರಲ್ಲೂ ತಪಸ್ಸಿದೆ ತಾನೆ? ಬದುಕಿಗೆ ವಿಮುಖನಾದಾಗ, ಬದುಕಿನಿಂದ ಆಚೆಗೆ ಹೊರಟಾಗಲೇ ಯಾಕೆ ಅದು ತಪಸ್ಸಾಗಬೇಕು? ಜೀವನ್ಮುಖಿಗೇಕೆ ಜ್ಞಾನೋದಯ ಆಗಬಾರದು. ಸಿದ್ಧಾರ್ಥ ಪ್ರಯಾಣ ಮಾಡುತ್ತಾ ಕಂಡ ವೃದ್ದಾಪ್ಯ, ರೋಗ, ಸಾವುಗಳು ಆತನ ಅಂತರಂಗದಲ್ಲಿ ಅಮೋಘ ಬದಲಾವಣೆಗೆ ಕಾರಣವಾದವು ಅನ್ನುತ್ತದೆ ಆಖ್ಯಾನ. ಆದರೆ ನಾವೆಲ್ಲ ಜರಾಮರಣಗಳನ್ನು ದಿನಾ ನೋಡುತ್ತಲೇ ಇದ್ದೇವಲ್ಲ? ಸಿದ್ಧಾರ್ಥನಿಗೆ ಅನ್ನಿಸಿದ ಹಾಗೆ ನಮಗೇಕೆ ಅನ್ನಿಸುವುದಿಲ್ಲ?

ಬಹುಶಃ ಹಾಗೇನಾದರೂ ಅನ್ನಿಸಿದ್ದರೆ ಈ ಸೃಷ್ಟಿಯೇ ಇರುತ್ತಿರಲಿಲ್ಲ! ಜ್ಞಾನ ಯಾವತ್ತಿದ್ದರೂ ಜೀವವಿರೋ! ಅದು ಜೀವನ್ಮುಖಿಯಾಗು ಅನ್ನುವುದಿಲ್ಲ, ಜೀವನ್ಮುಕ್ತನಾಗು ಅನ್ನುತ್ತದೆ. ನಾಳೆ ಮುದುಕನಾಗುತ್ತೇನೆ ಅನ್ನುವ ಭಯಕ್ಕೆ ಇವತ್ತೇ ಮುದುಕನ ಹಾಗೆ ವರ್ತಿಸುವುದಿದೆಯಲ್ಲ, ಅದು ವೈಪರೀತ್ಯ. ನಾಳೆ ಕಾಯಿಲೆ ಬರುತ್ತದೆ ಅನ್ನೋ ಹೆದರಿಕೆಗೆ ಇವತ್ತು ಕಾಯಿಲೆ ಬೀಳುವವರಿದ್ದಾರೆ. ನಾಳೆ ಸಾಯುತ್ತೇನೆ ಅಂತ ಇವತ್ತೇ ಬದುಕೋದನ್ನು ನಿಲ್ಲಿಸುವುದು ಜ್ಞಾನವಲ್ಲ, ಅಜ್ಞಾನ!

***

ಜ್ಞಾನೋದಯ ಆದ ತಕ್ಪಣ ಬುದ್ಧನಿಗೆ ಏನು ಅನ್ನಿಸಿರಬಹುದು? ಅದೊಂದು ಬಿಡುಗಡೆಯ ಸ್ಥಿತಿಯೆಂದೇ? ಬಿಡುಗಡೆ ಯಾವುದರಿಂದ? ಜೀವನದಿಂದ, ಕಷ್ಟಗಳಿಂದ, ಸುಖದುಃಖಗಳಿಂದ? ಹಾಗೆ ಬಿಡುಗಡೆ ಹೊಂದಿದ ನಂತರ ಮತ್ಯಾಕೆ ಬದುಕಬೇಕು? ಉತ್ತರ ಬೇಕಿದ್ದರೆ ಮನಸ್ಸನ್ನು ನಾವು ಭಗವದ್ಗೀತೆಯ ಕಡೆ ತಿರುಗಿಸಬೇಕು. ಅಲ್ಲಿ ವಿಶ್ವರೂಪ ದರ್ಶನವಾದ ನಂತರ ಕೂಡ ಅರ್ಜುನ ಯುದ್ಧ ಮಾಡುತ್ತಾನೆ. ಇನ್‌ಫ್ಯಾಕ್ಟ್‌ ವಿಶ್ವರೂಪ ದರ್ಶನವಾದ ಮೇಲೇ ಅವನು ಯುದ್ಧ ಮಾಡುತ್ತಾನೆ. ಅಂದರೆ ಜ್ಞಾನ ಆತನನ್ನು ನಿಷ್ಕಿೃಯನನ್ನಾಗಿ ಮಾಡಿಲ್ಲ. ಆದರೆ ಅನೇಕ ಜ್ಞಾನಿಗಳ ವಿಚಾರದಲ್ಲಿ ಇದು ನಿಜವಲ್ಲ. ಅವರೆಲ್ಲ ಜ್ಞಾನೋದಯವಾದ ತಕ್ಪಣ ಬದುಕುವುದನ್ನೇ ಬಿಟ್ಟುಬಿಡುತ್ತಾರೆ. ಸುಮ್ಮನೆ ಇರುತ್ತಾರೆ. ಅಳಲಾರದೆ, ನಗಲಾರದೆ, ನಮ್ಮೊಡನಿದ್ದೂ ನಮ್ಮಂತಾಗದೆ!

ಎರಡು ಜ್ಞಾನೋದಯದ ಪ್ರಸಂಗಗಳು ನೆನಪಾಗುತ್ತವೆ. ಎರಡೂ ಝೆನ್‌ಗೆ ಸಂಬಂಧಿಸಿದ್ದು ;

ಒಬ್ಬ ಮುದುಕಿ ಝೆನ್‌ ಗುರುವಿನ ಬಳಿ ಬರುತ್ತಾಳೆ. ತನ್ನ ಅಷ್ಟೂ ವರುಷಗಳನ್ನೂ ಆಕೆ ಆ ಆಶ್ರಮದಲ್ಲಿ ಕಳೆದಾಕೆ. ಆಕೆಗೆ ಕೊನೆಗೂ ಜ್ಞಾನೋದಯ ಆಗಿರುವುದಿಲ್ಲ.

ಒಂದು ರಾತ್ರಿ ಆಕೆ ಉದ್ದ ಬಿದಿರಿನ ಎರಡೂ ತುದಿಗೆ ಕಟ್ಟಿದ ಕೊಡದಲ್ಲಿ ದೂರದ ಹಳ್ಳದಿಂದ ನೀರು ತರುತ್ತಿದ್ದಾಳೆ. ಹುಣ್ಣಿಮೆಯ ರಾತ್ರಿ ಅದು. ಅವಳ ಮುಂದಿರುವ ಕೊಡದಲ್ಲಿ ಪೂರ್ಣಚಂದ್ರನ ಬಿಂಬ ಪ್ರತಿಫಲಿಸುತ್ತಿದೆ. ಅದನ್ನೇ ನೋಡುತ್ತಾ ಸುಖಿಸುತ್ತಾ ಹೋಗುತ್ತಿದ್ದಾಗ ಬಿದಿರು ತುಂಡಾಗಿ ಕೊಡ ಒಡೆದು ಚೂರಾಗುತ್ತದೆ.

ಮುದುಕಿ ಅಚಾನಕ ಉಸುರುತ್ತಾಳೆ; ನೋ ವಾಟರ್‌ ನೋ ಮೂನ್‌. ನೀರಿಲ್ಲ, ಚಂದಿರನೂ ಇಲ್ಲ. ಆಕೆಗೆ ಜ್ಞಾನೋದಯ ಆಗುತ್ತದೆ.

ಇಂಥದ್ದೇ ಮತ್ತೊಂದು ಪ್ರಸಂಗ ಹೀಗಿದೆ;

ಒಬ್ಬ ತರಲೆ ವಿದ್ಯಾರ್ಥಿ. ಸದಾ ಮೇಷ್ಟರನ್ನು ಗೋಳಾಡಿಸುತ್ತಿರುತ್ತಾನೆ. ಮೇಷ್ಟರು ಈಗ ನಾನು ಏನು ಹೇಳುತ್ತಿದ್ದೇನೆ ಅಂತ ಬಲಗೈ ಹೆಬ್ಬೆರಳು ಎತ್ತಿದರೆ ಸಾಕು, ಆತನೂ ಅವರನ್ನು ಅಣಕಿಸುವಂತೆ ಬಲಗೈ ಹೆಬ್ಬೆರಳು ಎತ್ತುತ್ತಿರುತ್ತಾನೆ. ಇದನ್ನು ನೋಡಿ ನೋಡಿ ಬೇಸತ್ತ ಗುರು ಒಂದು ದಿನ ಹರಿತವಾದ ಚಾಕು ತಂದು ಅವನ ಬಲಗೈ ಹೆಬ್ಬೆರಳನ್ನು ಕತ್ತರಿಸಿ ಎಸೆಯುತ್ತಾನೆ.

ಮಾರನೆಯ ದಿನ ಪಾಠ ಶುರುವಾಗುತ್ತದೆ. ಗುರು ಹೆಬ್ಬೆರಳು ಎತ್ತುತ್ತಾನೆ. ತರಲೆ ಶಿಷ್ಯನೂ ಅಭ್ಯಾಸಬಲದಿಂದ ಹೆಬ್ಬೆರಳು ಎತ್ತುತ್ತಾನೆ. ಆಗ ತನಗೆ ಹೆಬ್ಬೆರಳೇ ಇಲ್ಲ ಅನ್ನುವುದು ಅವನಿಗೆ ಹೊಳೆಯುತ್ತದೆ. ಜ್ಞಾನೋದಯ ಆಗುತ್ತದೆ.

***

ಜ್ಞಾನವೈರಾಗ್ಯ ಸಿದ್ಯರ್ಥಂ... ಭಿಕ್ಪಾಂದೇಹಿಚ ಪಾರ್ವತಿ ಅನ್ನುತ್ತೇವೆ. ಜ್ಞಾನ ಮತ್ತು ವೈರಾಗ್ಯ ಒಂದೇ ಪ್ಯಾಕೇಜಿನಲ್ಲಿ ಬರುತ್ತದೆ. ಜ್ಞಾನ ದೊರಕಿಸಿಕೊಂಡ ತಕ್ಪಣ ಇದೆಲ್ಲ ಇಷ್ಟೇ ಗುರೂ ಅನ್ನೋ ವೈರಾಗ್ಯವೂ ಬರುತ್ತದೆ.

ಆದರೆ ಇದು ಬರಿ ಬೆಳಗಲ್ಲೋ ಅಣ್ಣಾ ಅನ್ನುವುದೇ ನಿಜವಾದ ಜ್ಞಾನ. ಅದು ಜೀವನ್ಮುಖಿ. ಬದುಕು ಅನ್ನುವುದು ಜ್ಞಾನವಾಗಲಿ, ಬದುಕು ಸಾಕು ಅನ್ನುವುದು ಅಜ್ಞಾನವಾಗಲಿ!

ಜ್ಞಾನೋದಯವಾಗಲಿ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X