• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಸುಂದರಿ

By Staff
|
  • ಜಾನಕಿ
ಪ್ರಾಣೇಶಾಚಾರ್ಯರು ಆತಂಕದಲ್ಲಿ , ನಿರೀಕ್ಷೆಯಲ್ಲಿ ಕಾದರು!

***

ಟಿ. ನರಸೀಪುರದ ಚೆಲುವಾಂಬ ಅಗ್ರಹಾರದ ಗೋವಿಂದಾಚಾರ್ಯರ ಮಗ ಪ್ರಾಣೇಶಾಚಾರಿ ಇಲೆಕ್ಟ್ರಿಕಲ್‌ ಡಿಪ್ಲೊಮಾ ಓದಿದ ನಂತರ ವಾಪಸ್ಸು ಟಿ. ನರಸೀಪುರಕ್ಕೇ ವಾಪಸ್ಸು ಬರುತ್ತಾನೆ ಅನ್ನುವ ನಂಬಿಕೆ ಗೋವಿಂದಾಚಾರ್ಯರಿಗೆ ಇರಲಿಲ್ಲ. ಆದರೆ ಬೆಂಗಳೂರಿನ ಚಳಿಯನ್ನ ಸಹಿಸುವ ಶಕ್ತಿ ಪ್ರಾಣೇಶಾಚಾರಿಯ ಶ್ವಾಸಕೋಶಗಳಿಗೆ ಇರಲಿಲ್ಲವಾಗಿ, ಆತ ಟಿ. ನರಸೀಪುರದ ಹೆಸರಿಲ್ಲದ ಬೀದಿಯಲ್ಲೊಂದು ಇಲೆಕ್ಟ್ರಿಕಲ್ಸ್‌ ತೆರೆಯಬೇಕಾಗಿ ಬಂತು.

ನರಸೀಪುರದ ಬಣ್ಣ ಮಾಸಿದ ರವಕೆಯ ಮಡಿವಂತ ಹೆಂಗಸರು ತಂದುಕೊಡುತ್ತಿದ್ದ ಮಿಕ್ಸಿಗಳನ್ನು ಆದಷ್ಟೂ ಕಡಿಮೆಗೆ ರಿಪೇರಿ ಮಾಡಿಕೊಡುತ್ತಾ, ಬೋರ್‌ವೆಲ್‌ ಪಂಪಿನ ಮೋಟರುಗಳನ್ನು ವೈಂಡಿಂಗು ಮಾಡುತ್ತಾ ಪ್ರಾಣೇಶಾಚಾರಿ ಜೀವನದಲ್ಲಿ ಸೆಟ್ಲಾಗಲು ಹರಸಾಹಸ ಮಾಡುತ್ತಿದ್ದ ದಿನಗಳಲ್ಲಿ ಆ ಅನಾಹುತ ನಡೆದು ಹೋಯಿತು. ನರಸೀಪುರದ ರಾಜಾರಾಯರ ಮನೆಯಲ್ಲೊಂದು ಹಳೆಯ ಕಾಲದ ಹಿತ್ತಾಳೆಯ ಬಾಯ್ಲರ್‌ ಇತ್ತು. ಅದು ತುಕ್ಕು ಹಿಡಿದು ಬಣ್ಣ ಕಳೆದುಕೊಂಡು ಅನಾದಿಕಾಲದಿಂದ ಹೊಗೆ ಹಿಡಿಸಿಕೊಂಡ ಬಚ್ಚಲ ಹಂಡೆಯ ರೂಪ ತಾಳಿತ್ತು. ಕರೆಂಟು ಇಲ್ಲದ ದಿನಗಳಲ್ಲಿ ಅದನ್ನೇ ಒಲೆಯ ಮೇಲಿಟ್ಟು ರಾಜಾರಾಯರ ಎರಡನೆಯ ಹೆಂಡತಿ ಬಿಸಿನೀರು ಕಾಯಿಸುತ್ತಿದ್ದಳು ಅನ್ನುವ ಜೋಕು ಕೂಡ ನರಸೀಪುರದಲ್ಲಿ ಚಾಲ್ತಿಯಲ್ಲಿತ್ತು. ಹೀಗಾಗಿ ಆ ಬಾಯ್ಲರನ್ನು ರಿಪೇರಿ ಮಾಡುವ ಸಾಹಸಕ್ಕೆ ನರಸೀಪುರ ಮತ್ತು ಸುತ್ತ ಹತ್ತೂರಿನ ಯಾವ ಇಲೆಕ್ಟ್ರಿಷಿಯನ್ನರೂ ಕೈಹಾಕುತ್ತಿರಲಿಲ್ಲ.

ತನ್ನ ಕತೃತ್ವ ಶಕ್ತಿಯ ಮೇಲೆ ಅಗಾಧವಾದ ಆತ್ಮವಿಶ್ವಾಸ ಇಟ್ಟುಕೊಂಡ ಪ್ರಾಣೇಶಾಚಾರಿ ರಾಜಾರಾಯರ ಬಾಯ್ಲರು ರಿಪೇರಿ ಮಾಡಲು ಒಪ್ಪಿಕೊಂಡ. ಅದಕ್ಕೋಸ್ಕರ ಕಟ್ಟಿಂಗ್‌ಪ್ಲಯರು, ಟೆಸ್ಟರು ಹಿಡಕೊಂಡು ಅವರ ಮನೆಗೂ ಹೋದ. ಅವನು ರಾಜಾರಾಯರ ಬಾಯ್ಲರು ರಿಪೇರಿ ಮಾಡಲು ಒಪ್ಪಿಕೊಂಡಿದ್ದಕ್ಕೆ ಮೂಲ ಕಾರಣ ರಾಜಾರಾಯರ ಎರಡನೆಯ ಹೆಂಡತಿ ಚಂದ್ರಮತಿಯ ಮೇಲಿನ ವ್ಯಾಮೋಹ ಅಂತ ಪ್ರಾಣೇಶಾಚಾರಿಯ ಗೆಳೆಯರು ಆಮೇಲೆ ತಮಾಷೆ ಮಾಡಿಕೊಂಡರು.

ರಾಜಾರಾಯರ ಮನೆಯ ಬಾಯ್ಲರು ಸ್ವಿಚ್‌ ಹಾಕಿದರೂ ತೆಗೆದರೂ ಷಾಕ್‌ ಹೊಡೆಯುತ್ತಿತ್ತು. ಅದನ್ನು ರಿಪೇರಿ ಮಾಡುವ ಸಲುವಾಗಿ ಪ್ರಾಣೇಶಿ ಮನೆಯ ಮೇನ್‌ ಸ್ವಿಚ್‌ ಆಫ್‌ ಮಾಡಿಸಿ ಕೆಲಸ ಶುರುಮಾಡಿದ. ತುಕ್ಕುಹಿಡಿದ ಕಾಯ್ಲನ್ನು ತೆಗೆದು ಸ್ಯಾಂಡ್‌ಪೇಪರಿನಿಂದ ಅದನ್ನು ಗಸಗಸ ಉಜ್ಜಿ ಹೊಳಪು ಮಾಡಿದ. ಮೂರು ಗಂಟೆಗಳ ಅವಿರತ ಶ್ರಮದ ನಂತರ ಬಾಯ್ಲರು ಒಂದು ಹದಕ್ಕೆ ಬಂದಿದೆ ಎನ್ನಿಸಿತು. ಸ್ವಿಚ್‌ ಹಾಕಿ ಕಾಯುತ್ತಾ ಕೂತರೆ ಹನ್ನೆರಡು ನಿಮಿಷದ ನಂತರ ನೀರು ಕುದಿದು ಮರಳುತ್ತಿತ್ತು!

ಹೀಗೆ ರಾಜಾರಾಯರ ಬಾಯ್ಲರಿಗೂ ಪ್ರಾಣೇಶಾಚಾರಿಗೂ ಒಂದು ಅವಿನಾಭಾವ ಸಂಬಂಧ ಶುರುವಾಯಿತು. ಹದಿನೈದು ದಿನಕ್ಕೊಮ್ಮೆ ಹೋಗಿ ಬಾಯ್ಲರು ರಿಪೇರಿ ಮಾಡಿ ಕಾಫಿ ಕುಡಿದು ಬರುವುದು ಮೊದಲಾಯಿತು. ಅಂಥ ಒಂದು ದಿನದಲ್ಲೇ ಪ್ರಾಣೇಶನನ್ನು ರಾಜಾರಾಯರ ಮೂರನೇ ಮಗಳು ಕೀರ್ತನಾ ತಬ್ಬಿ ಮುದ್ದಾಡಿದ್ದು. ಅದೊಂದು ಘಳಿಗೆಯಲ್ಲಿ ಏನಾಯಿತು ಅನ್ನುವುದೂ ಪ್ರಾಣೇಶನಿಗೆ ಅರ್ಥವಾಗಿರಲಿಲ್ಲ. ಇದ್ದಕ್ಕಿದ್ದಂತೆ ಆಕೆಗೆ ಅದೇನಾಯಿತು, ಆಕೆ ತನ್ನನ್ನೇ ಏಕೆ ಆರಿಸಿಕೊಂಡಳು. ಅವಳ ಜೊತೆಗೆ ಕಳೆದ ಆ ಇಪ್ಪತ್ತೆಂಟು ನಿಮಿಷಗಳು ನಿಜಕ್ಕೂ ತನ್ನ ಬದುಕಿನ ಭಾಗ ಹೌದಾ?

ಪ್ರಾಣೇಶಾಚಾರಿಗೆ ಅರ್ಥವಾಗಿರಲಿಲ್ಲ. ಆ ಘಟನೆ ನಡೆದ ಮೇಲೆ ಆತ ಅವಳನ್ನು ನೋಡಲೂ ಇಲ್ಲ. ಕೀರ್ತನಾ ಊರು ಬಿಟ್ಟು ಓಡಿ ಹೋದ ಸುದ್ದಿ ಮಾತ್ರ ತುಂಬ ದಿನಗಳ ಕಾಲ ಟಿ. ನರಸೀಪುರದ ಗಾಳಿಯಲ್ಲಿ ಬೆರೆತಿತ್ತು.

***

ಇವೆಲ್ಲ ನಡೆದು ಆರೆಂಟು ವರುಷಗಳಾಗಿವೆ. ಚಂದ್ರಮತಿ ಕರೆಂಟಿಲ್ಲದ ಒಂದು ಅಪರಾಹ್ನ ಬಾಯ್ಲರಿನಿಂದ ನೀರು ತೋಡುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಕರೆಂಟು ಬಂದು ಅದುರಿಬಿದ್ದು ಸತ್ತಿದ್ದೂ ಆಗಿದೆ. ಪ್ರಾಣೇಶಿ ಮದುವೆಯಾಗಿ ಪ್ರಾಣೇಶಾಚಾರ್ಯ ಎಂದು ಗೌರವದಿಂದ ಕರೆಸಿಕೊಳ್ಳುತ್ತಿದ್ದಾನೆ.

ಊರಿಗೆ ಟೀವಿಯೂ ಬಂದು ಪ್ರಾಣೇಶಾಚಾರ್ಯ ಕೇಬಲ್‌ ಟೀವಿಯನ್ನೂ ನಡೆಸುತ್ತಾನೆ. ಅಪ್ಪ ಕಾಯಿಲೆ ಬಿದ್ದಾಗ, ಅವರ ಬದಲಾಗಿ ತಾನೇ ಪೌರೋಹಿತ್ಯಕ್ಕೂ ಹೋಗಿ ಬರುತ್ತಾನೆ.

ಹೀಗಿರುವಾಗ ಆ ಅನಾಹುತ ಸಂಭವಿಸಿಬಿಟ್ಟಿತು. ಒಂದು ಮುಸ್ಸಂಜೆ ಪ್ರಾಣೇಶಾಚಾರ್ಯ ಟೀವಿ ನೋಡುತ್ತಿರಬೇಕಾದರೆ ಅದರೊಳಗೆ ಕೀರ್ತನಾಳ ಮುಖ ಕಾಣಿಸಿ ಕೊಂಡಿತು. ಅಸಂಖ್ಯಾತ ಸುಂದರಿಯರ ನಡುವೆ ಈಜುಡುಗೆ ತೊಟ್ಟು ಕೊಂಡ ಕೀರ್ತನಾಳ ಮುಖ ಕಾಣಿಸುತ್ತಿದ್ದಂತೆ ಪ್ರಾಣೇಶಾಚಾರಿ ಗಾಬರಿ ಬಿದ್ದ. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅದೇ ಕೀರ್ತನಾ. ತಾನು ಆ ಅಪಸ್ಮಾರದ ಗಳಿಗೆಯಲ್ಲಿ ಮುಟ್ಟಿದ, ತಡವಿದ, ಸುಖಿಸಿದ, ಮತ್ತೆಂದೂ ಮರೆಯಲಾಗದಂಥ ಸುಗಂಧ ಉಳಿಸಿ ಹೋದ ಕೀರ್ತನಾ.

ಪ್ರಾಣೇಶಾಚಾರ್ಯ ನೋಡುತ್ತಿದ್ದಂತೆ ಕೀರ್ತನಾಳ ತಲೆಗೊಂದು ಕಿರೀಟ ಬಂತು. ಆಕೆ ವಿಶ್ವಸುಂದರಿ ಎಂದು ಘೋಷಿಸಲಾಯಿತು. ಪ್ರಾಣೇಶಾಚಾರ್ಯ ಉಮ್ಮಳಿಸಿದ. ಮಾರನೆಯ ದಿನದ ಪತ್ರಿಕೆಯ ತುಂಬ ಕೀರ್ತನಾಳದ್ದೇ ಫೊಟೋ. ಆಕೆ ನೀಡಿದ ಸಂದರ್ಶನ ಕನ್ನಡ ಕುವರಿಗೆ ವಿಶ್ವಸುಂದರಿ ಪಟ್ಟ ಎಂಬ ಸುದ್ದಿ. ಟಿ. ನರಸೀಪುರ ಸುದ್ದಿಗೆ ಬಂತು. ರಾಜಾರಾಯರ ಮನೆಗೆ ಟೀವಿಯವರು ಬಂದರು.

***

ಅದಾಗಿ ಆರು ತಿಂಗಳೊಳಗೆ ಕೀರ್ತನಾ ಅಖಂಡ ಭಾರತದ ತುಂಬೆಲ್ಲ ಸುದ್ದಿಯಾದಳು. ಸಿನಿಮಾ ಸಹಿ ಮಾಡಿದಳು. ಆಕೆಯ ಪೋಸ್ಟರುಗಳು ಊರ ಗೋಡೆಗಳನ್ನು ಅಲಂಕರಿಸಿದವು. ಜಾಹೀರಾತುಗಳಲ್ಲಿ ಆಕೆ ಕಾಣಿಸಿಕೊಂಡಳು. ಆಕೆಯ ಸಂಭಾವನೆ ಒಂದು ಕೋಟಿ ಎಂದು ಸುದ್ದಿಯಾಯಿತು. ದೇಶದ ಸಮಸ್ತ ಗಂಡಸರ ಕನಸುಗಳಲ್ಲಿ ಕೀರ್ತನಾ ಬಂದು ಹೋಗತೊಡಗಿದಳು.

***

ಪ್ರಾಣೇಶಾಚಾರ್ಯರ ಸಮಸ್ಯೆ ಶುರುವಾದದ್ದೇ ಆಗ. ಕೀರ್ತನಾಳ ಜೊತೆ ತಾನೊಂದು ಗಳಿಗೆ ಸುಖಿಸಿದ್ದೆ ಅನ್ನುವುದನ್ನು ಮರೆಯಲು ಅವರಿಗೆ ಸಾಧ್ಯವಾಗಲೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಈ ಸುದ್ದಿಯನ್ನು ಜಗತ್ತಿಗೆಲ್ಲ ಸಾರಬೇಕು ಅನ್ನುವ ಆಸೆ ಅದಮ್ಯವಾಗುತ್ತಿತ್ತು. ಹಾಗೆ ಹೇಳದೇ ಹೋದರೆ ತಾನು ಸುಖಿಸಿದ್ದೇ ಸುಳ್ಳು ಅನ್ನುವ ಭಾವನೆ ಅವರನ್ನು ಬೇಟೆಯಾಡತೊಡಗಿತು.

ಆ ನಿಟ್ಟಿನಲ್ಲಿ ಪ್ರಾಣೇಶಾಚಾರ್ಯರು ತಮ್ಮ ಜೀವನ ಗೆಳೆಯ ಪರಮೇಶಿಯ ಹತ್ತಿರ ತನ್ನ ಸಂಕೀರ್ತನಾ ಸಮಾರಂಭದ ವರದಿ ಒಪ್ಪಿಸಿದರು. ಪರಮೇಶಿ ಬಿದ್ದು ಬಿದ್ದು ನಕ್ಕ. ಅವಳ ಜೊತೆ ನಾನೂ ಮಲಗೀನಿ ಮಾರಾಯ. ಮೊನ್ನೆ ಮೊನ್ನೆ ನನ್ನ ಕನಸಲ್ಲೂ ಬಂದಿದ್ಳು ಅಂತ ಹೇಳಿ ಮತ್ತಷ್ಟು ನಕ್ಕ. ನನ್ನದು ಕನಸಲ್ಲ ಅಂತ ಹೇಳುವುದಕ್ಕೆ ಪ್ರಾಣೇಶಾಚಾರ್ಯರು ಯತ್ನಿಸಿದರು. ಆದರೆ ಅದನ್ನು ಪರಮೇಶಿ ನಂಬುವುದಿಲ್ಲ ಅನ್ನುವುದು ಅವರಿಗೆ ಖಾತ್ರಿಯಾಗಿತ್ತು.

ಆವತ್ತಿನಿಂದ ಪ್ರಾಣೇಶಾಚಾರ್ಯರನ್ನು ಅದೊಂದು ಪ್ರಶ್ನೆ ಕಾಡತೊಡಗಿತು. ತಾನು ಕೀರ್ತನಾಳ ಜೊತೆ ಮಲಗಿದ್ದು ಜಗಜ್ಜಾಹೀರಾಗಬೇಕು ಅನ್ನುವ ಹಪಾಹಪಿಯಲ್ಲಿ ಅವರು ನಿದ್ದೆಗೆಟ್ಟರು. ಅದಕ್ಕೋಸ್ಕರ ಮನಸ್ಸಿನಲ್ಲೇ ಹತ್ತಾರು ಉಪಾಯಗಳನ್ನು ಹುಡುಕಿದರು. ಪತ್ರಿಕೆಗಳಲ್ಲಿ ಹಾಕಿಸೋಣವೇ, ಟೀವಿಯಲ್ಲಿ ಹೇಳಿಸೋಣವೇ ಎಂಬಿತ್ಯಾದಿ ದಾರಿಗಳನ್ನು ಹುಡುಕಿದರು. ಆದರೆ ತಾನು ಆ ವಿಚಾರ ಮಾತಾಡಿದರೆ ನಗೆಗೀಡಾಗುತ್ತೇನೆ ಅನ್ನುವುದು ಅವರಿಗೆ ಕ್ರಮೇಣ ಗೊತ್ತಾಗುತ್ತಾ ಹೋಯಿತು. ಪ್ರಾಣೇಶಾಚಾರ್ಯರ ಕೀರ್ತನಾ ತೆವಲಿನ ಬಗ್ಗೆ ಆಗಲೇ ಗುಸುಗುಸು ಶುರುವಾಗಿತ್ತು.

***

ಕೊನೆಗೂ ಪ್ರಾಣೇಶಾಚಾರ್ಯರು ಹಿಡಿದ ಹಠ ಬಿಡದೇ ತನಗೂ ಕೀರ್ತನಾಗೂ ಸಂಬಂಧ ಇದೆ ಅಂತ ಸಾಧಿಸುವುದಕ್ಕೆ ಹೊರಟರು. ಕೀರ್ತನಾ ಶೂಟಿಂಗಿಗೆ ಹೋದಲ್ಲೆಲ್ಲ ಹಿಂಬಾಲಿಸಿದರು. ಅವಳ ಮನೆಯ ಮುಂದೆ ಕಾದುನಿಂತರು. ಕೀರ್ತನಾಳ ಸೌಂದರ್ಯಕ್ಕೆ ಮರುಳಾದ ಮಧ್ಯವಯಸ್ಕನೊಬ್ಬನಿಗೆ ಹುಚ್ಚು ಹಿಡಿದಿದೆ ಎಂದು ಸುದ್ದಿಯಾಗುವಷ್ಟರ ಮಟ್ಟಿಗೆ ಆಕೆಯ ಹಿಂದೆ ಬಿದ್ದರು. ಒಂದಲ್ಲ ಒಂದು ದಿನ ಆಕೆ ತನ್ನನ್ನು ನೋಡಬಹುದು. ಗುರುತಿಸಬಹುದು. ಹಾಗೆ ಗುರುತಿಸಿದ ದಿನ ಊರಮಂದಿಯೆಲ್ಲ ನಾನು ಅವಳ ಜೊತೆ ಸುಖಿಸಿದ್ದು ನಿಜವೆಂದು ಒಪ್ಪಬಹುದು ಎಂದು ಹಾರೈಸಿದರು.

ಹೀಗಿರಬೇಕಾದರೆ ಒಂದು ದಿನ ಕೀರ್ತನಾ ಇದ್ದಕ್ಕಿದ್ದ ಹಾಗೆ ಟಿ. ನರಸೀಪುರಕ್ಕೆ ಬಂದೇಬಿಟ್ಟಳು. ಆಕೆ ಬಂದ ಸುದ್ದಿ ಗೊತ್ತಾಗುತ್ತಿದ್ದಂತೆ ಪ್ರಾಣೇಶಾಚಾರ್ಯರು ರಾಜಾರಾಯರ ಮನೆಗೆ ಧಾವಿಸಿದರು. ಅಲ್ಲಿಗೆ ಆಗಲೇ ಪತ್ರಕರ್ತರು, ಟೀವಿಯವರು ಬಂದು ಸಂದರ್ಶನ ಮಾಡಿಕೊಂಡು ಹೋಗಿಯಾಗಿತ್ತು. ಮನೆಯಂಗಳ ನಿರ್ಮಾನುಷ್ಯವಾಗಿತ್ತು. ಬಹುಶಃ ಕೀರ್ತನಾ ಒಬ್ಬಳೇ ಮನೆಯಾಳಗಿದ್ದಾಳೆ. ಅವಳನ್ನು ಕರೆದು ಮಾತಾಡುವುದಕ್ಕೆ ಇದೇ ಸರಿಯಾದ ಸಮಯ ಅಂದುಕೊಳ್ಳುತ್ತಾ ಪ್ರಾಣೇಶಾಚಾರ್ಯರು ರಾಜಾರಾಯರ ಮನೆಯ ಕಾಲಿಂಗ್‌ಬೆಲ್ಲು ಒತ್ತಿದರು. ಇನ್ನೇನು ಅವಳು ಹೊರಗೆ ಬರುತ್ತಾಳೆ, ನನ್ನನ್ನು ಗುರುತಿಸುತ್ತಾಳೆ. ತನ್ನ ಜೊತೆ ಸುಖಿಸಿದ ಕ್ಷಣದ ಕುರುಹುಗಳು ಅವಳ ಕಣ್ಣಲ್ಲಿ ಮತ್ತೆ ಮಿಂಚುತ್ತದೆ. ಅಥವಾ ಅವಳ ಖ್ಯಾತಿ ಆ ನೆನಪನ್ನೇ ಅಳಿಸಿರಬಹುದೇ? ಇಂಥ ಘಳಿಗೆಗಳು ಅವಳ ಜೀವನದಲ್ಲಿ ಸಾಕಷ್ಟು ಬಂದು ಹೋಗಿರಬಹುದೇ?

***

ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕದಲ್ಲಿ ಕಾದರು.

(ಸ್ನೇಹಸೇತು: ಹಾಯ್‌ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more