• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡವ ಕಾಪಾಡು ನನ್ನ ಆನಂದಾ...

By Staff
|
Google Oneindia Kannada News
  • ಜಾನಕಿ
ಮಳೆಯಾಗುತ್ತಿದೆ. ಮಳೆ ಸುರಿಯುತ್ತಿದೆ. ಮಳೆ ಬೀಳುತ್ತಿದೆ. ಮಳೆ ಜಡಿಯುತ್ತಿದೆ. ಮಳೆ ಹೊಡಿಯುತ್ತಿದೆ. ಮಳೆ ಬರುತ್ತಿದೆ...

ಆಷಾಡದ ಆಗಸದಿಂದ ಕಾದ ಭೂಮಿಗೆ ಬೀಳುವ ಹನಿಯನ್ನು ಹೀಗೆಲ್ಲಾ ಹೇಳುವ ಶಕ್ತಿ ಇರುವುದು ಕನ್ನಡಕ್ಕೆ ಮಾತ್ರ. ಇಂಗ್ಲಿಷ್‌ನಲ್ಲಿ ಈ ಎಲ್ಲಾ ಅಭಿವ್ಯಕ್ತಿಗೆ ಒಂದೇ ಪದ; Its raining. ಈ ಒಂದು ಪದವನ್ನು ಕಲಿತರೆ ಸಾಕು, ಇಂಗ್ಲಿಷ್‌ ಕರತಲಾಮಲಕ. ಹೇಳುವುದನ್ನು ನಿಖರವಾಗಿ, ಸರಿಯಾಗಿ ಹೇಳಿಬಿಟ್ಟರೆ ಮುಗೀತು. ಅದಕ್ಕೆ ಸಾಹಿತ್ಯಿಕತೆ ಬೇಕಿಲ್ಲ. ಕಲೆಗಾರಿಕೆ ಬೇಕಿಲ್ಲ.

ಇಂಗ್ಲಿಷ್‌ನಲ್ಲಿ ಕಲೆ ಮತ್ತು ಸಾಹಿತ್ಯ ಇಲ್ಲ. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲ. ಡಿವಿಜಿ ಇದನ್ನು ಒಂದೇ ಸಾಲಿನಲ್ಲಿ ಹೇಳಿಬಿಟ್ಟರು : ‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವಕೆ...’

Feel the flavor of Kannada and rejoiceಮಾಧ್ಯಮದ ಪ್ರಶ್ನೆ ಬಂದಾಗೆಲ್ಲ ನಮಗೆ ಈ ಸಾಲು ನೆನಪಾಗಬೇಕು. ನಮ್ಮ ಜೀವನಕ್ಕೆ ಹತ್ತಿರವಾದ ಭಾಷೆ ಕನ್ನಡ. ನಾವು ಹೇಳುವುದೆಲ್ಲವನ್ನೂ ಕನ್ನಡದ ಮೂಲಕವೇ ಹೇಳಬೇಕು. ಕಲಿಯುವುದನ್ನು ಇಂಗ್ಲಿಷಿನ ಮೂಲಕ ಕಲಿಯೋಣ. ಅದರಲ್ಲಿ ತಪ್ಪಿಲ್ಲ. ಹೀಗೆ ಮಾಡೋದರಿಂದ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಬರುತ್ತದೆ. ಎರಡೂ ಭಾಷೆಯ ಅನುಕೂಲಗಳನ್ನು ಪಡೆದುಕೊಂಡಂತಾಗುತ್ತದೆ. ಜ್ಞಾನದ ದಿಗಂತ ವಿಸ್ತಾರವೂ ಆಗುತ್ತದೆ. ಆದರೆ ಇವತ್ತು ಹಾಗಾಗುತ್ತಿಲ್ಲ. ಇಂಗ್ಲಿಷ್‌ಭಾಷೆಯ ಮೋಹ, ಕನ್ನಡ ಪ್ರೀತಿಯನ್ನು ಮೀರಿಸುತ್ತಿದೆ. ಅದು ಅಪಾಯಕಾರಿ. ಅಡುಗೆ ಮನೆಯ ಭಾಷೆ ಕನ್ನಡ ಅಂತ ಹೇಳುತ್ತಿರುವ ಹೊತ್ತಿಗೇ ಅಡುಗೆ ಮನೆಯಲ್ಲೂ ಕೊತ್ತಂಬರಿ ಸೊಪ್ಪು, ಬದನೆಕಾಯಿ, ತೊಂಡೆಕಾಯಿ, ಬಾಳೆಕಾಯಿ ಇಲ್ಲ. ಅಲ್ಲಿರುವುದು ಗ್ರೀನ್‌ ಚಿಲ್ಲಿ, ಕಾಲಿಫ್ಲವರ್‌, ಕ್ಯಾಬೇಜು ಮತ್ತು ಕ್ಯಾರೆಟ್‌. ಇಡ್ಲಿ ಮತ್ತು ದೋಸೆಯ ಜಾಗಕ್ಕೆ ನೂಡಲ್ಸ್‌ ಮತ್ತು ಕಾರ್ನ್‌ಫ್ಲೇಕ್ಸ್‌ ಬಂದಿದೆ. ಮಕ್ಕಳು ನಿದ್ದೆ ಹೋಗುವುದಿಲ್ಲ. ಬದಲಾಗಿ, ದೆ ಗೋ ಟು ಬೆಡ್‌!ಮೀಯುವುದನ್ನು ಬಿಟ್ಟು, ದೆ ಸಿಂಪ್ಲಿ ಟೇಕ್‌ ಬಾತ್‌. ಮನೆಗಳಲ್ಲಿ ಬಚ್ಚಲು ಮನೆಯಿಲ್ಲ. ಬಾತ್‌ರೂಮ್‌ ಇದೆ!

*

ಕನ್ನಡದ ಶಕ್ತಿಯನ್ನು ಯಾಕೆ ಮರೆಯಬೇಕು, ಕಡೆ ಗಣಿಸಬೇಕು? ಕನ್ನಡ ಒಂದೇ ಅಲ್ಲ ; ಯಾವುದೇ ಪ್ರಾದೇಶಿಕ ಭಾಷೆಯ ಶಕ್ತಿಯನ್ನು ಯಾಕೆ ನಿರಾಕರಿಸಬೇಕು?ಇಂಗ್ಲಿಷ್‌ ನಮಗೆ ಏನೇನನ್ನೂ ಕಲಿಸುತ್ತದೆ. ಏನೇನನ್ನೋ ಹೇಳಿಕೊಡುತ್ತದೆ. ಆದರೆ ಅದು ಹೇಳಿಕೊಟ್ಟ ದ್ದೆಲ್ಲ ಕೇವಲ ಹೊಟ್ಟೆ ಪಾಡಿಗಷ್ಟೇ ಸೀಮಿತ. ವಿಜ್ಞಾನದ ಸೂತ್ರಗಳನ್ನೂ, ತಂತ್ರಜ್ಞಾನದ ಸೂಕ್ಷ್ಮಗಳನ್ನೂ ಇಂಗ್ಲಿಷ್‌ನಲ್ಲಿ ಕಲಿಯದೇ ಬೇರೆ ವಿಧಿಯಿಲ್ಲ. ಯಾಕೆಂದರೆ ಅದು ಹುಟ್ಟಿದ್ದೇ ಆ ಭಾಷೆಯಲ್ಲಿ. ಅದನ್ನು ನಾವೂ ತಿಳಿದುಕೊಳ್ಳುವ ಮೂಲಕ ನಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಸಮಕಾಲೀನ ರಾಗೋಣ. ಆದರೆ ನಮ್ಮನ್ನು ನಾವು ಅಭಿವ್ಯಕ್ತಿಗೊಳ್ಳುವಾಗ ಆ ಭಾಷೆ ಯಾಕೆ? ಅದರಲ್ಲಿ ವ್ಯವಹಾರ ಮಾತುಗಳನ್ನು ಬಿಟ್ಟರೆ, ಓದಿ-ಕಲಿತ ನಾಲ್ಕಾರು ಸಾಲುಗಳನ್ನು ಬಿಟ್ಟರೆ, ಇನ್ನೇನಾದರೂ ಹೇಳಲು ಸಾಧ್ಯವೇ?ಬೇಕಿದ್ದರೆ ಇಂಗ್ಲಿಷ್‌ ಮಾತಾಡುವ ಮಂದಿಯ ಜೊತೆ ಒಂದಷ್ಟು ಹೊತ್ತು ಹರಟೆ ಹೊಡೆದು ನೋಡಿ; ಅವರ ಮಾತಲ್ಲಿ ಅವೇ ಪದಗಳು ಮತ್ತೆ ಮತ್ತೆ ಬಂದು ಹೋಗುತ್ತವೆ. ತಮಗೆ ಗೊತ್ತಿರುವ ಸೀಮಿತ ಪದಗಳನ್ನು ಬಳಸಿ ಅವರು ಮಾತನಾಡುತ್ತಾರೆ. ಇದ್ದಕ್ಕಿದ್ದಂತೆ ಅವರನ್ನು ಹಳ್ಳಿಗೆ ಕರೆದೊಯ್ದು ದಾಸವಾಳ ಹೂವನ್ನೋ, ಸಂಜೆಮಲ್ಲಿಗೆಯನ್ನೋ ತೋರಿಸಿ ಅದರ ಹೆಸರನ್ನು ಇಂಗ್ಲಿಷ್‌ನಲ್ಲಿ ಹೇಳಿ ನೋಡೋಣ ಅಂದರೆ ಗಾಬರಿಯಾಗುತ್ತಾರೆ!

ಇಂಗ್ಲಿಷಿನ ಮಿತಿ ಅದು. ಒಂದೊಂದು ಭಾಷೆಯೂ ಆ ನೆಲದಿಂದ ಹುಟ್ಟಿದ್ದು. ಇಂಗ್ಲಿಷಿನಲ್ಲಿ ವರ್ಡ್ಸ್‌ವರ್ಥ್‌, ದಿ ಡ್ಯಾಪೊಡಿಲ್ಸ್‌ ಎಂಬ ಪದ್ಯ ಬರೆಯಬಲ್ಲ. ಕನ್ನಡದಲ್ಲಿ ಅದು ಮೈಸೂರು ಮಲ್ಲಿಗೆಯೇ ಆಗಿ ಪಡಿ ಮೂಡಬೇಕು. ಡ್ಯಾಫೋಡಿಲ್ಸಿನ ಪರಿಮಳ ನಮ್ಮ ಮೂಗಿಗೆ ಅಡರುವುದೇ ಅಸಾಧ್ಯ. ಹಾಗೇ ಮಲ್ಲಿಗೆಯ ಕುರಿತು ಇಂಗ್ಲಿಷ್‌ನಲ್ಲಿ ಬರೆದ ಕವಿತೆ ಎಷ್ಟು ಕ್ರೂರವಾಗಿ ಕೇಳಿಸೀತು ಊಹಿಸಿ?

ಒಂದು ಭಾಷೆಯ ಸೊಗಸೇ ಬೇರೆ. ಅಲ್ಲಿನ ಜನ ಪದವೇ ಆ ಭಾಷೆಯ ತಕ್ಕ ವಾತಾವರಣವನ್ನು ನಿರ್ಮಿಸಿ ಕೊಂಡಿರುತ್ತದೆ. ಅದರದೇ ಆದ ಸಂಸ್ಕೃತಿ, ಆಚರಣೆ, ಸಂಭ್ರಮಗಳನ್ನು ಗೊತ್ತು ಮಾಡಿಕೊಂಡಿರುತ್ತದೆ. ಉದಾಹರಣೆಗೆ ಇಲ್ಲಿ ಮದುವೆಗೊಂದು ಹಾಡು, ಸೋಬಾನೆ, ಸುಪ್ರಭಾತ, ಹಸೆಹಾಡು, ಜನಪದದಲ್ಲಿ ಬರುವ ಬರುವ ಬೀಸುವ ಪದಗಳು, ಗದ್ದೆಯಲ್ಲಿ ನಾಟಿ ಮಾಡುವಾಗ ಹಾಡುವ ಪಾಡ್ಡನ, ಗದ್ದೆ ಉಳುವಾಗ ಹಾಡುವ ಓಬೇಲೇ, ಬೆಸ್ತರ ಓ ಬೇಲಿ ಲೇ ಸೋ...

ರಾಗವೂ ಅಷ್ಟೆ. ನಮ್ಮ ಭಾಷೆಯಷ್ಟೇ ವಿಶಿಷ್ಟವಾದದ್ದು ; ಅಮೃತವರ್ಷಿಣಿ, ಶಿವರಂಜನಿ, ಆನಂದಭೈರವಿ..ಇದನ್ನೆಲ್ಲ ಕಷ್ಟಪಟ್ಟು ಕಲಿತು ಮತ್ತೊಂದು ಭಾಷೆಯ ಮೂಲಕ ಮೀರುವುದು ಸಾಧ್ಯವೇ?ಮೀರುತ್ತೇವೆ ಅಂತ ಹೇಳಿಕೊಳ್ಳುವುದು ಕೂಡ ಎಂಥ ಭ್ರಮೆ, ಎಂಥ ಮೂರ್ಖತನ. ಇಂಗ್ಲಿಷ್‌ ಬಲ್ಲವರು ಕೂಡ ಕನ್ನಡದಲ್ಲೇ ಮಾತಾಡುತ್ತಿದ್ದರೆ ಕನ್ನಡ ಆ ಜ್ಞಾನದ ನೆರವಿನಿಂದ ಮತ್ತಷ್ಟು ಶ್ರೀಮಂತವೂ, ಸಮೃದ್ಧವೂ ಆಗುತ್ತದೆ ಅಂತ ಯಾಕೆ ಹೊಳೆಯುವುದಿಲ್ಲ. ಇಂಗ್ಲಿಷ್‌ ಕೇವಲ ಹೊಸ ಸಂಗತಿಗಳನ್ನು, ಕನ್ನಡದಲ್ಲಿ ಹೇಳಿಲ್ಲದ, ಹೇಳಲಾಗದ ಸಂಗತಿಗಳನ್ನು ತಿಳಿದುಕೊಳ್ಳುವ ಮಾಧ್ಯಮ ಮಾತ್ರ ಎಂದು ಭಾವಿಸಬಾರದು. ಆ ಒಣ ಭಾಷೆಯನ್ನೇ ಮಾತಿಗೂ ಯಾಕೆ ಬಳಸಬೇಕು?

ಇಂಥ ಪ್ರಶ್ನೆಗಳನ್ನು ಮುಂದಿಟ್ಟು ಕೊಳ್ಳದೇ ಹೋದರೆ ನಾವು ಒಳಗೊಳಗೇ ಕುಬ್ಜರಾಗುತ್ತಾ ಹೋಗುತ್ತೇವೆ. ನಮಗೆ ಬೇಸರವಾದಾಗ ಹಾಡಿಕೊಳ್ಳುವುದಕ್ಕೊಂದು ಹಾಡೂ ಇಲ್ಲದೇ ಹೋಗಬಹುದು. ಸಿಟ್ಟು ಬಂದಾಗ ಬೈಯುವುದಕ್ಕೊಂದು ಸಶಕ್ತ ಭಾಷೆಯಿಲ್ಲದಂತಾಗಬಹುದು. ಯಾವ ವಿಜ್ಞಾನವೂ ತಂತ್ರಜ್ಞಾನವೂ ಇಲ್ಲದ ದಿನಗಳಲ್ಲಿ ಈ ನೆಲದಿಂದ ಹುಟ್ಟಿದ ಅಸಂಖ್ಯಾತ ಜನಪದ ಗೀತೆಗಳಲ್ಲಿ ಇರುವ ಹೊಸತನ, ಯಾವ ವೈಜ್ಞಾನಿಕ ಸಂಶೋಧನೆಯಿಂದ ಸಾಧ್ಯವಾದೀತು. ವಿಜ್ಞಾನ, ಅನುಕೂಲಗಳನ್ನು ಮಾಡಿ ಕೊಡುತ್ತದೆ, ನೆಮ್ಮದಿಯನ್ನಲ್ಲ. ಸೌಲಭ್ಯಗಳನ್ನು ಕೊಡುತ್ತದೆ, ಸೌಖ್ಯವನ್ನಲ್ಲ.

*

ಸುಮ್ಮನೆ ಕುಳಿತು ಲೆಕ್ಕ ಹಾಕಿ. ಇವತ್ತು ಸಾಹಿತ್ಯ, ಕಲೆ, ಸಂಗೀತಗಳಲ್ಲಿ ಆಸಕ್ತಿ ಉಳಿಸಿಕೊಂಡಿರುವವರು ಗ್ರಾಮೀಣ ಪ್ರದೇಶದ ಹುಡುಗರು. ಕನ್ನಡವನ್ನಷ್ಟೇ ಬಲ್ಲವರು. ಇಂಗ್ಲಿಷ್‌ ಚೆನ್ನಾಗಿ ಮಾತಾಡಲು ಕಲಿತ ನಗರ ಪ್ರದೇಶದ ಹುಡುಗರು ಕತೆ ಬರೆಯುವುದಿಲ್ಲ, ಕವಿತೆ ಬರೆಯುವುದಿಲ್ಲ. ಮಹಾನಗರಕ್ಕೆ ಹಳ್ಳಿಯಿಂದ ಬಂದವರಷ್ಟೇ ಅಕ್ಷರದ ಮೇಲೆ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ಮಹಾನಗರದಲ್ಲಿ ಹುಟ್ಟಿ ಬೆಳೆದ ಮಂದಿಗೆ ಮಾತಿನ ಮೇಲೆ ನಂಬಿಕೆ. ಜೀವನ ಪಾವನವಾಗಲು ಮಾತು, ಗದ್ದಲ, ಬಿಡುವಿಲ್ಲದ ಜೀವನ, ಇಂಗ್ಲಿಷು ಸಾಕು ಎಂಬ ಮೂಢನಂಬಿಕೆ.

ಇಂಗ್ಲಿಷ್‌ ಏನನ್ನೂ ಬರೆಸಿಕೊಳ್ಳುವುದಿಲ್ಲ. ಅದು ನಿಷ್ಕೃಯರನ್ನಾಗಿ ಮಾಡುತ್ತಾ ಹೋಗುತ್ತದೆ; ಸಾಂಸ್ಕೃತಿಕವಾಗಿ, ಕಲಾತ್ಮಕವಾಗಿ, ಸಾಹಿತ್ಯಕವಾಗಿ.

ಅದಕ್ಕಿಂತ ದೊಡ್ಡ ಅಪಾಯ ಇಂಗ್ಲಿಷ್‌ ಶಿಕ್ಷಣದ್ದು. ಅದು ನಮ್ಮ ಮೂಲಭೂತ ಸ್ವರೂಪವನ್ನೇ ಬದಲಾಯಿಸುತ್ತದೆ. ಎಲ್ಲರನ್ನೂ ಏಕರೂಪದಲ್ಲಿ ಕಡೆದಿಡುತ್ತದೆ. ಐದು ವರುಷ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತು ಹೊರಬಂದ ನೂರು ಮಕ್ಕಳ ಪೈಕಿ ಯಾರ್ಯಾರ ವೈಶಿಷ್ಟ್ಯ, ಹಿನ್ನೆಲೆ, ಆಸಕ್ತಿ ಏನೇನು ಅಂತ ಹೇಳಲಾಗುವುದಿಲ್ಲ. ಎಲ್ಲರೂ ಅದೇ ಆಗಿರುತ್ತಾರೆ. ಯೂನಿಫಾರ್ಮ್‌ ಕೇವಲ ಹೊರಗನ್ನಷ್ಟೇ ಯೂನಿಫಾರ್ಮ್‌ ಮಾಡುವುದಿಲ್ಲ, ಒಳಗನ್ನೂ ರಿಫಾರ್ಮ್‌ ಮಾಡುತ್ತದೆ.

*

ಇಂಗ್ಲಿಷಿನಲ್ಲಿ ಬರೆದ ಭಾರತೀಯ ಲೇಖಕರೆಲ್ಲ ಮಾತೃಭಾಷೆಯಲ್ಲಿ ಓದಿದವರು, ಆಮೇಲೆ ಇಂಗ್ಲಿಷಿನಲ್ಲಿ ಬರೆದವರು. ಇಂಗ್ಲಿಷ್‌ ಅವರಿಗೆ ಕೇವಲ ಮಾಧ್ಯಮವಷ್ಟೇ ಆಗಿತ್ತು. ಇಂಗ್ಲಿಷ್‌ನಲ್ಲಿ ಓದುವ ತರುಣರಿಗೆ, ಸಾಹಿತ್ಯದ ಅಗತ್ಯವೇ ಇದ್ದಂತೆ ತೋರುತ್ತಿಲ್ಲ. ಅವರ್ಯಾರೂ ಓದುತ್ತಿಲ್ಲ, ಬರೆಯುತ್ತಿಲ್ಲ. ಅಕ್ಷರ, ಅಮರತ್ವದಿಂದ ದೂರಾಗುತ್ತಿದೆ.

ಇಂಗ್ಲಿಷು ಬಲ್ಲ ಜಾಣರಿಗೆ ಒಂದು ಪ್ರಶ್ನೆ. ಜನ ಪದದ ಈ ಸಾಲನ್ನು ನೀವು ಇಂಗ್ಲಿಷಿನಲ್ಲಿ ಹೇಗೆ ಗ್ರಹಿಸುತ್ತೀರಿ?ಹೇಗೆ ಹಾಡುತ್ತೀರಿ?ಹೇಗೆ ಬರೆಯುತ್ತೀರಿ?

ಅಚ್ಚಚ್ಚ ಬೆಳದಿಂಗಳೇ! ನನ್ನೂರ ಹಾಲಿನಂಥ ಬೆಳದಿಂಗಳೇ!!

ತಿಂಗ್ಳು ತಿಂಗ್ಳೀಗೆ ತಿಂಗಳು ಮಾವನ ಪೂಜೆ
ಗರುಡಾನ ಪೂಜೆ ಗಣಪೂಜೆ! ತಿಂಗಳು ಮಾವ
ನಿನ ಪೂಜೆ ನಮಗೆ ಅನುಗಾಲ

ತಿಂಗಳು ಮಾವಾಗೆ ತಂಗೇರೇಳು ಮಂದಿ
ತಿಂಗು ತಿಂಗಳಿಗೆ ತವರೀಗೆ! ಹೊಯ್ತೀನೆಂದು
ತಿಂಗಳ ಬೆಳಕೆ ಹಗಲಾದೋ

(ಸೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X