• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆನಪಿನ ಹಂಗಿಲ್ಲದ ನದಿ, ಗಿರೀಶ ಹಾಗೂ ಒಡಕಲು ಬಿಂಬ

By Staff
|
  • ಜಾನಕಿ
‘ಆ ಹೆಳವಿಯನ್ನು ನಾನು ದ್ವೇಷಿಸುತ್ತಿದ್ದೆ. ಯಾವಾಗಲೂ ದ್ವೇಷಿಸುತ್ತಿದ್ದೆ. ಆಕೆ ಹುಟ್ಟಾ ನನ್ನ ವೈರಿಯಾಗಿದ್ದಳು. ನಾನು ಆಕೆ ಸಾಯೋ ಹಾದಿಯನ್ನೇ ಕಾಯುತ್ತಿದ್ದೆ’

‘ಮತ್ತು ಅವಳು ಇದನ್ನು ಮೊದಲಿನಿಂದಲೇ ಕಂಡುಕೊಂಡಿದ್ದಳು’.

‘ಅದೇ... ಅದೇ...ನನಗೆ ಹೊಟ್ಟೆಯುರಿದಿದ್ದು ಅದೇ ಕಾರಣಕ್ಕಾಗಿ. ನನಗೆ ಗೊತ್ತಿಲ್ಲದಂಥ ನನ್ನ ಅಂತರಂಗವನ್ನು ಆಕೆ ಗುರುತಿಸಿದ್ದಳು. ಅದನ್ನು ಬೇಟೆಗಾರ್ತಿಯ ಏಕಾಗ್ರತೆಯಿಂದ ಅಭ್ಯಾಸ ಮಾಡಿದ್ದಳು. ಕಣ್ಣುಕುಕ್ಕುವ ಶೈಲಿಯಲ್ಲಿ ಬಣ್ಣಿಸಿದ್ದಳು. ಈ ಸಲನೂ ಅವಳ ಕೈಯೇ ಮೇಲಾಗಿತ್ತು. ಸತ್ತಮೇಲೂ ಚಿತೆಯ ಆಚೆಯಿಂದ ಮಾಲಿನಿ ಪ್ರಲೋಭನೆ ಒಡ್ಡುತ್ತಿದ್ದಳು. ‘ಈ ಸುಂದರ ಕೃತಿಯನ್ನು ಹರಿದು ಹಾಕು. ಸುಟ್ಟುಬಿಡು’ ಅಂತ. ಆದರೆ ಹಾಗೆ ಮಾಡಿದ್ದರೆ ನಾನು ನನ್ನ ಕಣ್ಣಲ್ಲೇ ಕೀಳಾಗುತ್ತಿದ್ದೆ. ಕ್ಪುದ್ರಳಾಗುತ್ತಿದ್ದೆ. ‘ಹಾಗೆ ಮಾಡದೇ ಕಾದಂಬರಿಯನ್ನು ಪ್ರಕಟ ಮಾಡಿಬಿಟ್ಟಿದ್ದರೆ ಅತ್ತಿಗೆ ಯಾರು ಅನ್ನೋದು ಎಲ್ಲರಿಗೂ ಗೊತ್ತಾಗಿಬಿಡುತ್ತಿತ್ತು. ನೀನು ಜಗತ್ತಿಗೇ ನಗೆಪಾಟಲಾಗುತ್ತಿದ್ದೆ. ಆಕೆ ನಿನ್ನನ್ನು ಸರಿಯಾಗಿ ಇರಿಕಿನಲ್ಲಿ ಸಿಗಿಸಿ ಹೋಗಿದ್ದಳು.’

‘ನಾನು ಗೆಲ್ಲಲೇ ಬೇಕಾಗಿತ್ತು. ಆದರೆ ಅದಕ್ಕಾಗಿ ಅವಳಿಗೆ ಕನಸು ಮನಸಿನಲ್ಲೂ ಹೊಳೆದಿರದಂಥಾ ಒಂದು ಹೊಂಚು ಅತ್ಯಗತ್ಯವಾಗಿತ್ತು. ಒಂದೇ ಹೊಡೆತಕ್ಕೆ ಎಲ್ಲ ತೊಡಕುಗಳನ್ನೂ ಅಳಿಸಿಬಿಡಬೇಕಾಗಿತ್ತು. ಇಲ್ಲದಿದ್ದರೆ ನನಗೆ ಉಳಿಗಾಲ ಇರಲಿಲ್ಲ. ಈ ಸಲ ನನಗೆ ಒಂದು ಮಾತ್ರ ಅನುಕೂಲ ಇತ್ತು. ಆಕೆ ಸತ್ತು ಹೋಗಿದ್ದಳು. ನಾನು ಬದುಕಿದ್ದೆ. ನಾನು ಆ ಕಾದಂಬರಿಯನ್ನು ನನ್ನ ಹೆಸರಿನಲ್ಲಿ ಪ್ರಕಟ ಮಾಡಿಬಿಟ್ಟೆ. ಕೊನೆಗೆ ನಾನೇ ಗೆದ್ದೆ’.

(ಗಿರೀಶ ಕಾರ್ನಾಡರ ‘ಒಡಕಲು ಬಿಂಬ’ ನಾಟಕದಿಂದ)

*

Girish Karnadಗಿರೀಶ ಕಾರ್ನಾಡರು ಮತ್ತೊಂದು ನಾಟಕ ಬರೆದಿದ್ದಾರೆ. ಒಂದೇ ಪಾತ್ರವಿರುವ, ತಾಂತ್ರಿಕವಾಗಿ ಶ್ರೀಮಂತವಾಗಿರುವ, ಎಲ್ಲರೂ ಅಷ್ಟು ಸುಲಭವಾಗಿ ಆಡಲಾಗದ ನಾಟಕ ಅದು. ಕಾರ್ನಾಡರು ಇತಿಹಾಸ ಪುರಾಣಗಳಿಗೆ ಮರಳದೇ ನಮ್ಮ ನಡುವಿನ ಸಂಗತಿಯಾಂದನ್ನು ಎತ್ತಿಕೊಂಡು ಬರೆದ ಎರಡನೆಯ ನಾಟಕ ಇದು. ಕಾರ್ನಾಡರ ಬಹುತೇಕ ನಾಟಕಗಳಲ್ಲಿರುವಂತೆ ಇಲ್ಲೂ ‘ಕಾಮ’ವೇ ಕೇಂದ್ರ.

ಮಂಜುಳಾ ನಾಯಕ ಎಂಬ ಕತೆಗಾರ್ತಿಯ The river has no memories ಕಾದಂಬರಿ ಜಗತ್ಪ್ರಸಿದ್ಧ ವಾಗಿದೆ. ಆ ಕಾದಂಬರಿ ಆಧಾರಿತ ಟೆಲಿಫಿಲ್ಮ್‌ ಇನ್ನೇನು ಪ್ರದರ್ಶನವಾಗಲಿದೆ. ಅದಕ್ಕೂ ಮುಂಚೆ ಟೀವಿಯಲ್ಲಿ ಲೇಖಕಿ ಮಂಜುಳಾ ನಾಯಕ ಕೃತಿಯ ಕುರಿತು ಮಾತನಾಡಬೇಕಾಗಿದೆ. ಆಕೆ ರೆಕಾರ್ಡಿಂಗ್‌ ರೂಮಿನಲ್ಲಿ ಕುಳಿತಿದ್ದಾಳೆ. ಟೀವಿ ಪರದೆಯ ಮೇಲೆ ಆಕೆಯ ಬಿಂಬ ಮೂಡಿದೆ. ಅಲ್ಲಿಂದ ನಾಟಕ ಶುರುವಾಗುತ್ತದೆ.

ನಾಟಕದ ಕತೆ ಇಷ್ಟು ; ಮಂಜುಳಾ ವಿ. ನಾಯಕ ಎಂಬ ಇಂಗ್ಲಿಷ್‌ ಪ್ರಾಧ್ಯಾಪಕಿ ಕನ್ನಡದಲ್ಲಿ ಸಣ್ಣಕತೆ ಬರೆದುಕೊಂಡಿದ್ದಾಕೆ. ಇದ್ದಕ್ಕಿದ್ದಂತೆ ಆಕೆ ಇಂಗ್ಲಿಷ್‌ ಕಾದಂಬರಿ ಬರೆಯುತ್ತಾಳೆ. ಅದರಲ್ಲಿ ‘ಬೆನ್ನುಹುರಿಯ ಕೆಳಭಾಗ ಹುಡಿಯಾಗಲಿಕ್ಕೆ ಹತ್ತಿದ’ ಮಾಲಿನಿಯಿದ್ದಾಳೆ. ಆಕೆ ಮಂಜುಳಾಳ ತಂಗಿ. ಆ ತಂಗಿ ಸಾವಿನ ಅನಿವಾರ್ಯತೆಯನ್ನು ಎದುರಿಸುತ್ತಾ ಬದುಕಿದ್ದು, ಆಕೆ ಯಾತನೆ ಪಟ್ಟದ್ದು ಕಾದಂಬರಿಯ ವಸ್ತು. ಇದನ್ನೂ ತಂಗಿಯ ಮೇಲಿನ ಪ್ರೀತಿಯನ್ನೂ ಗಂಡನಿಗೆ ಕೃತಜ್ಞತೆಯನ್ನೂ ಹೇಳಿ ಆಕೆ ಮಾತು ಮುಗಿಸುತ್ತಾಳೆ.

ಅಷ್ಟು ಹೊತ್ತಿಗೆ ಟೀವಿ ಪರದೆಯ ಮೇಲಿರುವ ಅವಳದೇ ಬಿಂಬಕ್ಕೆ ಸ್ವಂತ ಅಸ್ತಿತ್ವ ಬಂದುಬಿಡುತ್ತದೆ. ಅದು ಮಾತಾಡತೊಡಗುತ್ತದೆ. ಮಂಜುಳಾ ವಿ. ನಾಯಕಳ ಅಂತರಂಗವನ್ನೂ ಅಂತರಾಳದ ಸತ್ಯಗಳನ್ನೂ ಬಯಲು ಮಾಡುತ್ತಾ ಹೋಗುತ್ತದೆ. ಆ ಕಾದಂಬರಿ ಬರೆದದ್ದು ಮಂಜುಳಾ ಅಲ್ಲ, ಅವಳ ತಂಗಿ ಮಾಲಿನಿ ಅನ್ನುವುದೂ, ಮಾಲಿನಿಗೂ ಮಂಜುಳಾಳ ಗಂಡ ಪ್ರಮೋದನಿಗೂ ಭಾವನಾತ್ಮಕವಾದ ನಂಟೊಂದು ಇತ್ತು ಅನ್ನುವುದೂ ಗೊತ್ತಾಗುತ್ತಾ ಹೋಗುತ್ತದೆ.

*

ಕಾರ್ನಾಡರ ಈ ನಾಟಕ ಏನನ್ನು ಹೇಳುತ್ತದೆ. ಇದರ ಆಶಯಗಳೇನು? ಪ್ರಮೋದನ ಆತ್ಮಾನುಕಂಪವನ್ನೇ, ಮಾಲಿನಿಯ ಬದುಕುವ ಛಲವನ್ನೇ, ಮಂಜುಳಾಳ ಸಹಜ ಅನುಮಾನಗಳನ್ನೇ? ಯಾವುದೂ ಸ್ಪಷ್ಟವಾಗದ ಕೃತಿ ಇದು. ಇದನ್ನು ಯಾವ ನಿಲುವಿನಿಂದ ನೋಡಬೇಕು ಅನ್ನುವುದೂ ಸ್ಪಷ್ಟವಿಲ್ಲ. ಈ ನಾಟಕದ ಎತ್ತರಕ್ಕೆ ಏರುವುದಕ್ಕೆ ಯಾವುದೇ ನಿಚ್ಚಣಿಕೆಗಳಿಲ್ಲ. ಅದು ಏರಬೇಕಾದಷ್ಟು ಎತ್ತರದಲ್ಲಿದೆಯೋ ಅನ್ನುವುದು ಕೂಡ ಸ್ಪಷ್ಟವಿಲ್ಲ.

ಹಾಗೆ ನೋಡಿದರೆ ಸಾಹಿತ್ಯದಲ್ಲೂ ನಾಟಕಗಳಲ್ಲೂ ಟೀವಿ ಸೀರಿಯಲ್ಲುಗಳಲ್ಲೂ ಸಾಕಷ್ಟು ಬಳಕೆಯಾಗಿರುವ ಆತ್ಮಸಂವಾದದ ತಂತ್ರ ಇದು. ಮನಸ್ಸಿನೊಂದಿಗೆ ಮಾತುಕತೆ ನಡೆಸುವುದು. ಹಾಗೆ ಮಾತಾಡುತ್ತಾ ಆಡುತ್ತಾ ಪಾತ್ರದ ಹುಳುಕುಗಳೂ ಸಣ್ಣತನಗಳೂ ಬಯಲಾಗುತ್ತಾ ಹೋಗುವ ಹಳೆಯ ನಿರೂಪಣಾ ವಿಧಾನ. ಇಲ್ಲೂ ಅಷ್ಟೇ, ತನ್ನ ಬಿಂಬದ ಜೊತೆಗೆ ಮಾತಾಡುತ್ತಾ ಮಂಜುಳಾ ನಾಯಕ , ತನ್ನ ಅಂತರಂಗವನ್ನು ಬಿಚ್ಚಿಡುತ್ತಾಳೆ.

ಒಂದು ಸಾಹಿತ್ಯಕೃತಿ ಮಾಡಬೇಕಾದದ್ದು ಅದನ್ನೇ. ಅದು ಲೇಖಕನಿಗೂ ಅರಿವಾಗದಂತೆ ಸತ್ಯದ ಅನಾವರಣ ಮಾಡುತ್ತದೆ. ಈ ನಾಟಕದಲ್ಲೂ ಅಷ್ಟೇ, ಪೂರ್ವಾರ್ಧಕ್ಕೂ ಉತ್ತರಾರ್ಧಕ್ಕೂ ದಿಗಿಲುಗೊಳಿಸುವ ವ್ಯತ್ಯಾಸವಿದೆ. ಮಂಜುಳಾ ನಾಯಕ ಜಗತ್ತಿನ ಪಾಲಿಗೆ ಏನಾಗಿದ್ದಾಳೋ ಅವಳ ಪಾಲಿಗೆ ಅದಲ್ಲ. ಅವಳ ತಂಗಿ ಲೋಕದ ಕಣ್ಣಲ್ಲಿ ಏನಿದ್ದಾಳೋ, ಅವಳ ಕಣ್ಣಲ್ಲಿ ಹಾಗಲ್ಲ. ಈ ವೈರುಧ್ಯವೇ ನಾಟಕದ ಆತ್ಮ. ಆದರೆ ಇದರಾಚೆಗೆ ನಾಟಕ ಏನನ್ನು ಹೇಳುತ್ತದೆ?

ಈ ಪ್ರಶ್ನೆಗೆ ಉತ್ತರ ಇಲ್ಲ. ಒಂದು ಕೃತಿ ತನ್ನನ್ನು ಮೀರಿ ಬೆಳೆಯಬೇಕಾದರೆ ಅದು ನಮ್ಮದು ಅನ್ನಿಸಬೇಕು. ಮಂಜುಳಾ ನಾಯಕ ಮತ್ತು ಮಾಲಿನಿ ನಾಯಕರ ಕತೆ ತೀರ ಅಪರಿಚಿತ ಸನ್ನಿವೇಶದಂತೆ ಭಾಸವಾಗುತ್ತದೆ. ಒಂದು ಅಪರಿಚಿತ ಸನ್ನಿವೇಶ ಅಚ್ಚರಿಗೊಳಿಸಬಲ್ಲುದೇ ಹೊರತು, ಆಪ್ತ ವಾಗಲಾರದು. ಇಲ್ಲೂ ಅಷ್ಟೇ, ಆ ಆಪ್ತತೆ ಮಾಯವಾಗಿದೆ.

‘ನೀನು ಎಂಥ ಕೊಳಕಿ ಅನ್ನೋದನ್ನ ನಿನ್ನ ಮುಖಕ್ಕೆ ರಾಚೋದೇ ಅವಳ ಉದ್ದೇಶವಾಗಿದ್ದರೆ ಅವಳು ಪೂರ್ಣ ಯಶಸ್ವಿಯಾದಳು’ ಎನ್ನುತ್ತದೆ ಬಿಂಬ. ಅದು ನಾಟಕದ ಕೊನೆಕೊನೆಯ ಸಾಲು. ಕಾರ್ನಾಡರು ಅಷ್ಟನ್ನೇ ಹೇಳಹೊರಟಿದ್ದರೇ? ಒಂದು ವ್ಯಕ್ತಿತ್ವದ ಮತ್ತೊಂದು ಮುಖವನ್ನು ತೋರುವುದಷ್ಟೇ ಅವರ ಮನಸ್ಸಿನಲ್ಲಿತ್ತೇ?

ನಾಟಕದ ಕೊನೆಯಲ್ಲಿ ಬಿಂಬ ಮತ್ತು ಪ್ರತಿಬಿಂಬ ಒಂದಾಗುತ್ತದೆ. ‘ನಾನು ಇಂಗ್ಲಿಷ್‌ ಲೇಖಕಿ ಮಾಲಿನಿ ನಾಯಕ. ನನ್ನ ಅಕ್ಕ ಸುಪ್ರಸಿದ್ಧ ಕನ್ನಡ ಕತೆಗಾರ್ತಿ. ನನ್ನ ಕಾದಂಬರಿಯನ್ನು ಓದಿದೊಡನೆ ನಾಶವಾಗಿ ಹೋಗಿ ನಾನಾಗಿ ಹೊಸ ಅವತಾರ ತಾಳಿದಳು. ಆದರೆ ನಾನು ಮಂಜುಳಾ ನಾಯಕ ಆಗಿಯೇ ಜೀವನವನ್ನು ಮುಂದುವರಿಸಬೇಕಾಗಿದೆ. After all, my passport, bank accounts, property and financial papers are all in that name. ಆದರೆ ಖರೆ ಹೇಳಬೇಕೆಂದರೆ ನಾನು ಮಾಲಿನಿ ನಾಯಕ. ನನ್ನ ಪ್ರತಿಭಾಶಾಲಿ ತಂಗಿ, ನನ್ನ ಗಂಡನನ್ನು ಪ್ರೀತಿಸಿದಾಕೆ, ಕನ್ನಡ ಬಲ್ಲಾಕೆ. ಇಂಗ್ಲಿಷಿನಲ್ಲಿ ಬೆಸ್ಟ್‌ ಸೆಲ್ಲರ್‌ ಬರೆದಾಕೆ...’ ಅನ್ನುತ್ತದೆ ಒಂದಾದ ಬಿಂಬ.

ಇಲ್ಲಿ ನಮಗೆ ಪ್ರತಿಭಾವಂತ ಕಾರ್ನಾಡರು ಸಿಗುತ್ತಾರೆ. ಒಂದು ಸಾಹಿತ್ಯ ಕೃತಿ ಹೇಗೆ ಒಂದು ವ್ಯಕ್ತಿತ್ವವಾಗಿ ರೂಪುಗೊಳ್ಳಬಲ್ಲದು, ತಂಗಿ ಹೇಗೆ ತಾನು ಬರೆದ ಕೃತಿಯ ಮೂಲಕವೇ ಅಕ್ಕನೊಳಗೆ ಪರಕಾಯ ಪ್ರವೇಶ ಮಾಡಿ ಜೀವಂತವಾಗಿ ಉಳಿದಳು. ಅಕ್ಕನ ವ್ಯಕ್ತಿತ್ವ ಹೇಗೆ ಒಂದು ಸೃಜನಶೀಲ ಕೃತಿಯ ಓದಿನಿಂದಾಗಿ ಸುಟ್ಟುಹೋಗಿ, ಆಕೆ ಮತ್ತೆ ತಂಗಿಯಾಗಿ ಹುಟ್ಟುವಂತಾಯಿತು ಮುಂತಾದ ಅಚ್ಚರಿಗೊಳಿಸುವ ರೂಪಕಗಳೆಲ್ಲ ಕೊನೆಯ ಆರೇಳು ಸಾಲುಗಳಲ್ಲಿ ಇಡಿಕಿರಿದಿವೆ.

ಒಂದು ಸಾಲಿನ ಅರ್ಥವಂತಿಕೆಗಾಗಿ ನೂರಾರು ಸಾಲುಗಳ ನಿರರ್ಥಕತೆ ಬೇಕಾ? ಅದೇ ಬದುಕಾ? ಒಂದು ಅರ್ಥಪೂರ್ಣ ಘಳಿಗೆಗಾಗಿ ನಾವು ಅಸಂಖ್ಯಾತ ವರುಷಗಳಲ್ಲಿ ಅರ್ಥಹೀನನಾಗಿ ಕಳೆಯುತ್ತೀವಾ?

ಮರೆತ ಮಾತು : ಕಾರ್ನಾಡರಿಗೆ ನೆನಪಿನ ಹಂಗಿಲ್ಲದ ನದಿಯ ಮೇಲೆ ಅದೆಂಥ ವ್ಯಾಮೋಹ. ಅವರ ಹಯವದನದಲ್ಲೂ ನದಿಗೆ ನೆನಪಿನ ಹಂಗಿಲ್ಲ ಅನ್ನುವ ಸಾಲು ಬರುತ್ತದೆ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X