ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಣ ರೇಖೆಯನ್ನು ದಾಟಲು ಯತ್ನಿಸುತ್ತಾ...

By Staff
|
Google Oneindia Kannada News
  • ಜಾನಕಿ
ಮೊನ್ನೆ ಮೊನ್ನೆ ಕುವೆಂಪು ಶತಮಾನೋತ್ಸವ ಪ್ರಯುಕ್ತ ನೂರು ಪುಸ್ತಕಗಳು ಬಿಡುಗಡೆಯಾದವು. ಇನ್ಯಾರೋ ಐವತ್ತು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಪತ್ರಿಕಾಲಯಗಳಿಗೆ ವಾರಕ್ಕೆ ಏನಿಲ್ಲವೆಂದರೂ ಇನ್ನೂರೈವತ್ತು ಕನ್ನಡ ಪುಸ್ತಕಗಳು ಬರುತ್ತವೆ. ತಿಂಗಳಿಗೆ ಸಾವಿರದಂತೆ ವರುಷಕ್ಕೆ ಹನ್ನೆರಡು ಸಾವಿರ ಪುಸ್ತಕಗಳು ಬಿಡುಗಡೆಯಾಗುತ್ತವೆ. 2003ರಲ್ಲೂ ಕೂಡ ಸುಮಾರು ಎಂಟು ಸಾವಿರ ಪುಸ್ತಕಗಳು ಬಿಡುಗಡೆಯಾಗಿದ್ದವಂತೆ. ಖಾಸಗಿ ಪ್ರಕಾಶಕರ ಜೊತೆ ಯೂನಿವರ್ಸಿಟಿಗಳೂ ಸೇರಿ ಇಂಥ ಅಸಂಖ್ಯಪುಸ್ತಕಗಳನ್ನು ಹೊರತರುತ್ತಲೇ ಇವೆ. ಈ ಹತ್ತು ಹನ್ನೆರಡು ಸಾವಿರ ಪುಸ್ತಕಗಳ ಪೈಕಿ ಎಷ್ಟು ನೆನಪಲ್ಲಿ ಉಳಿಯುತ್ತದೆ? ಕಷ್ಟಪಟ್ಟು ನೆನಪಿಸಿಕೊಂಡರೆ ಕಳೆದೆರಡು ವರುಷಗಳಲ್ಲಿ ಬಂದ ಪುಸ್ತಕಗಳ ಪೈಕಿ ನೆನಪಾಗುವುದು ವೈದೇಹಿ ಬರೆದ ಬಿ.ವಿ. ಕಾರಂತರ ಆತ್ಮಚರಿತ್ರೆ, ಕೆ ಎಸ್‌ನ ಸಮಗ್ರಕಾವ್ಯ, ವಿಶ್ವೇಶ್ವರ ಭಟ್ಟರ ‘ನನ್ನ ಪ್ರೀತಿಯ ವೈಯನ್ಕೆ’ ಮುಂತಾದ ಏಳೆಂಟು ಪುಸ್ತಕಗಳಷ್ಟೇ. ಉಳಿದ ಪುಸ್ತಕಗಳ ಗತಿ ಏನಾಗುತ್ತದೆ ಅಂತ ಕೇಳಿದರೆ ಪ್ರಕಾಶಕರು ಸಿಟ್ಟಾಗುತ್ತಾರೆ. ಅವು ಲೈಬ್ರರಿ ಸೇರುತ್ತವೆ; ಗ್ರಾಮಾಂತರ ಪ್ರದೇಶದ ಲೈಬ್ರರಿಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿರುತ್ತವೆ. ಅವನ್ನು ಬರೆದ ಲೇಖಕ ಧನ್ಯನಾಗುತ್ತಾನೆ; ಪ್ರಕಟಿಸಿದ ಪ್ರಕಾಶಕ ಮಾನ್ಯನಾಗುತ್ತಾನೆ.

Lakshman Rao Poetry and Kannada Books tragedy!ಇಂಥ ಪುಸ್ತಕಗಳ ಪೈಕಿ ಕವನ ಸಂಕಲನಗಳ ಸಂಖ್ಯೆ ಏನಿಲ್ಲವೆಂದರೂ ಶೇಕಡಾ ಮೂವತ್ತು. ಕಡಿಮೆಯೆಂದರೂ ಮೂರು ಸಾವಿರ ಕವನ ಸಂಕಲನಗಳು ವರುಷವೊಂದಕ್ಕೆ ಬಿಡುಗಡೆ ಆಗುತ್ತವೆ. ಅವುಗಳಲ್ಲಿ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳು ಪ್ರಕಟಿಸುವ ಕವನ ಸಂಕಲನಗಳು ತೀರಾ ಕಡಿಮೆ. ಸದ್ಯಕ್ಕಂತೂ ಲೋಹಿಯಾ ಪ್ರಕಾಶನ ಮತ್ತು ಸಿವಿಜಿ ಪಬ್ಲಿಕೇಷನ್‌ ಬಿಟ್ಟರೆ ಮತ್ಯಾವ ಪ್ರಕಾಶನ ಸಂಸ್ಥೆಗಳೂ ಹೊಸಬರ ಕವನ ಸಂಕಲನ ಪ್ರಕಟಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ . ಇಷ್ಟೊಂದು ಕವನ ಸಂಕಲನಗಳೂ, ಕವಿತೆಗಳೂ ಬಿಡುಗಡೆಯಾಗುತ್ತಿದ್ದರೂ ಥಟ್ಟನೆ ನೆನಪಿಸಿಕೊಳ್ಳಲು ಕಳೆದ ಐದಾರು ವರುಷಗಳಲ್ಲಿ ಬಂದ ಯಾವ ಕವಿತೆಯೂ ಬಾಯಿಗೇ ಬರುವುದಿಲ್ಲ .

ಈ ಮಧ್ಯೆ ಎರಡು ವಾದಗಳು ಬಂದುಹೋದವು. ಅಗಾಧವಾದ ಸಂಖ್ಯೆಯಲ್ಲಿ ಪುಸ್ತಕಗಳು ಬರತೊಡಗಿದರೆ ಕ್ರಮೇಣ, ಒಳ್ಳೆಯ ಗುಣಮಟ್ಟದತ್ತ ಜನರಿಗೆ ಆಸಕ್ತಿ ಹುಟ್ಟುತ್ತದೆ ಅನ್ನುವುದು ಒಂದು ವಾದ. ಕ್ವಾಂಟಿಟಿಯಿಂದ ಕ್ವಾಲಿಟಿ ಅನ್ನುವ ಹಳೆಯ ವಾದ ಇದು. ಆದರೆ ಹೀಗೆ ಹೇಳುತ್ತಿದ್ದವರೇ ಹಿಂದೆ ಕ್ವಾಂಟಿಟಿಯನ್ನು ವಿರೋಧಿಸಿದವರು. ‘ಹಾಗೆಲ್ಲ ಹುಚ್ಚಾಪಟ್ಟೆ ಬರೀಬಾರದು. ಒಳ್ಳೆಯ ಐದೋ ಆರೋ ಪದ್ಯಗಳನ್ನು ಬರೆಯಿರಿ ಸಾಕು; ದೇವನೂರು ಎಷ್ಟೊಂದು ಕಡಿಮೆ ಬರೆದಿದ್ದಾರೆ, ಜಾನ್‌ಡನ್‌ ಬರೆದದ್ದು ಕೆಲವೇ ಪದ್ಯಗಳನ್ನು’ ಅಂತ ವಾದಿಸಿದವರೇ ಇವತ್ತು ಕ್ವಾಂಟಿಟಿಯ ಬಗ್ಗೆಯೂ ಮಾತಾಡುತ್ತಿದ್ದಾರೆ.

***

ಈ ಚಿತ್ರವನ್ನು ಮುಂದಿಟ್ಟುಕೊಂಡೇ ನಾವು ಬಿ. ಆರ್‌. ಲಕ್ಷ್ಮಣರಾವ್‌ ಸಮಗ್ರಕವಿತೆಗಳ ಸಂಕಲನ ‘ಕ್ಯಾಮೆರಾ ಕಣ್ಣು’ ನೋಡಬೇಕು. ಲಕ್ಪ್ಮಣ ರಾಯರ ‘ಗೋಪಿ ಮತ್ತು ಗಾಂಡಲೀನ ’, ಟುವ ಟಾರ, ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿಲಾ, ಅಪರಾಧಗಳ ಮನ್ನಿಸೋ, ಎಡೆ, ಇವಳು ನದಿಯಲ್ಲ , ಭಾವಗೀತೆ, ಹನಿಗವಿತೆ ಎಲ್ಲವೂ ಇಲ್ಲಿ ಸೇರಿದೆ. ಲಕ್ಪ್ಮಣರಾವ್‌ ಓದಬಹುದಾದ ಕವಿ. ಓದಿ ಸಂಭ್ರಮಿಸಬಹುದಾದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ ಅರ್ಥ ಇರುವ ಮತ್ತು ಅರ್ಥವಾಗುವ ಕವಿ. ಸಂಕೀರ್ಣ ಕವಿತೆಗಳನ್ನೂ ಮತ್ತೆ ಸರಳವಾಗಿ ಕಟ್ಟಬಲ್ಲ ಕವಿ. ಅಮ್ಮನ ಹೃದಯದಾಳದಲ್ಲಿ ಗಾಳಕ್ಕೆ ಸಿಕ್ಕಮೀನು ನಾನು; ವೃಥಾ ಗುದ್ದಾಡಿ, ಒದ್ದಾಡಿ ಸುಮ್ಮನಾಗುತ್ತೇನೆ ಎಂಬ ಮೊದಲ ಸಂಕಲನದ ನವ್ಯಕವಿತೆಯೇ ಆ ಮೇಲೆ ‘ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕಮೀನು ಮಿಡುಕಾಡುತಿರುವೆ ನಾನು’ ಎಂದು ಬಿ. ಆರ್‌. ಛಾಯಾ ಬಾಯಲ್ಲಿ ಭಾವಗೀತೆಯಾಗುತ್ತದೆ. ಆ ಮಟ್ಟಿಗೆ ಅವರು ಹಠಮಾರಿಯಲ್ಲ . ಅವರ ಬಹುತೇಕ ಪದ್ಯಗಳು ರೂಪಾಂತರ ಹೊಂದಿ ಮತ್ತೆ ಹಾಜರಾಗಿವೆ. ಹೀಗೆ ಅವರು ವಿಮರ್ಶಕರಿಗೂ ಕಾವ್ಯಪ್ರಿಯರಿಗೂ ಅಚ್ಚುಮೆಚ್ಚಿನ ಕವಿ. ಲಕ್ಷ್ಮಣರಾವ್‌ ತುಂಟ ಕವಿ ಅಂತ ಕರೆಸಿಕೊಂಡವರು. ಆ ಹಳೆಯ ಬಿರುದನ್ನು ಉಳಿಸಿಕೊಳ್ಳಲು ಅವರು ಈಗಲೂ ಅಲ್ಲಲ್ಲಿ ಆಗೀಗ ತುಂಟತನ ತೋರುವುದುಂಟು.

ಕ್ರಿಕೆಟ್‌, ಪಿಟಿ ಉಷಾ, ಗವಾಸ್ಕರ್‌, ವಿಶ್ವನಾಥ್‌ ಹೀಗೆ ಎಲ್ಲರಿಗೂ ಇಷ್ಟವಾಗುವ ಸಂಗತಿಗಳನ್ನೂ ಅವರು ಕಾವ್ಯಕ್ಕೆ ತಂದವರು. ಅವರ ರೂಪಕಗಳೆಲ್ಲ ಕಚಗುಳಿ ಇಡುವಂಥವು; ಲೇ, ನನ್ನ ಹಾವಾಡಿಸುವ ಬಾಲೇ, ಹರಿದಾಡಿಸುವ ನಾಲೇ, ಚೆಂಡಾಡಿಸುವ ಗೋಲೇ. ನಿನ್ನ ದೇಹವೇ ನಂದನವನ ನನ್ನ ಕಣ್ಣು ಅಲ್ಲಿ ಮನಸಾರೆ ಮೇಯುವ ತೊಂಡುದನ . ನಿನ್ನ ಕಟಿಯೇ ನನಗೆ ಪವಿತ್ರ ಗಂಗಾತಟಿ ಅಲ್ಲೇ ನನ್ನ ಪ್ರೇಮಯೋಗದ ಪರ್ಣಕುಟಿ ಲಕ್ಷ್ಮ್ಮಣರಾವ್‌ ಲೆಕ್ಕಾಚಾರದ ಕವಿಯಲ್ಲ . ಒಂದೊಂದು ಕವನವೂ ಭರವಸೆಯ ವ್ಯವಸಾಯ ಎಂಬಂತೆ ಅವರು ಬರೆಯಲಿಲ್ಲ . ಸಾಮಾಜಿಕ ಧೋರಣೆ , ಸಮಾನತೆ, ಧ್ಯೇಯ, ದ್ಧತೆಗಳನ್ನೆಲ್ಲ ಪಕ್ಕಕ್ಕಿಟ್ಟು ಅವರು ಖುಷಿಗೋಸ್ಕರ ಬರೆದರು. ಅವರ ಕವಿತಾಜಗತ್ತು ಆನಂದಮಯ. ಅವರದು ಜಗಹೃದಯ. ಖುಷಿ ಕೊಟ್ಟದ್ದು ಕಾವ್ಯ. ಸಾಮಾನ್ಯವಾಗಿ ಕಾವ್ಯಸಿದ್ಧಾಂತಗಳ ಕುರಿತು, ಕಾವ್ಯರಚನೆಯ ಬಿಕ್ಕಟ್ಟುಗಳ ಕುರಿತು, ಕಾವ್ಯಧರ್ಮದ ಕುರಿತು ಮಾತಾಡದ ಕವಿಗೆ ಅಂಥ ಮನ್ನಣೆ ಸಿಗುವುದಿಲ್ಲ . ಕವಿ ಕೇವಲ ಕವಿತೆ ಬರೆದರಷ್ಟೇ ಸಾಲದು , ತುಂಬ ಗಂಭೀರವಾಗಿ ಕಾವ್ಯದ ಕುರಿತು ಧ್ಯಾನಿಸುತ್ತಿರಬೇಕು ಎಂದು ನವ್ಯವಿಮರ್ಶಕರು ಬಯಸಿದಂತಿತ್ತು . ಲಕ್ಪ್ಮಣರಾವ್‌ ಅದಕ್ಕೆಲ್ಲ ತಲೆಹಾಕುವುದಕ್ಕೇ ಹೋಗಲಿಲ್ಲ . ಶರ್ಮರಷ್ಟು ಕಠೋರ ನಿಷ್ಠೆಯಿಂದಲೂ ಅಡಿಗರಷ್ಟು ಏಕಾಗ್ರತೆಯಿಂದಲೂ ನರಸಿಂಹಸ್ವಾಮಿಯವರಷ್ಟು ಭಾವುಕತೆಯಿಂದಲೂ ಲಕ್ಷ ್ಮಣರಾವ್‌ ಬರೆಯಲಿಲ್ಲ . ಅವರು ನಮ್ಮೆಲ್ಲರ ಪ್ರತಿನಿಧಿ. ಆ ಅರ್ಥದಲ್ಲಿ ಅವರ ಸಮಗ್ರಕಾವ್ಯದ ೆಸರು ಸೂಕ್ತ ; ಕ್ಯಾಮೆರಾ ಕಣ್ಣು ! (ತಲೆಯೆತ್ತಿದರೆ, ಮಹಡಿ ಕಟ್ಟೆಗೆ ಬೆನ್ನೊರಗಿ, ಮೈಮರೆತು, ಕಾಲೆತ್ತಿದ ಯುವತಿಯ ಬೆತ್ತಲೆ ಬಿಳಿ ಮೀನಖಂಡದವರೆಗೆ ಏರಿ ಎಲ್ಲೋ ಝಲ್ಲೆನಿಸಿ ನಿಲ್ಲುತ್ತದೆ ನನ್ನ ಕ್ಯಾಮೆರಾ ಕಣ್ಣು ). ಲಕ್ಷ್ಮಣರಾವ್‌ ಕಾವ್ಯಕ್ಕೆ ನರಹಳ್ಳಿ ವಿಸ್ತಾರವಾದ ಮುನ್ನುಡಿ ಬರೆದಿದ್ದಾರೆ. ಹಾಗೆ ನೋಡಿದರೆ ಲಕ್ಷ್ಮಣ ರಾವ್‌ ಕಾವ್ಯಕ್ಕೆ ಮುನ್ನುಡಿ ಬೇಕಿಲ್ಲ. ಅದು ಸ್ವಯಂ ಪ್ರಭೆಯುಳ್ಳದ್ದು.

ಆದರೆ ಕಣ್ಣಿಗೆ ಕಾಣಿಸಿದ್ದಕ್ಕಿಂತ ಅವರ ಕವಿತೆ ಆಳವೂ ಆಗಿದೆ ಅನ್ನುವುದನ್ನು ನರಹಳ್ಳಿ ಸೊಗಸಾಗಿ ಹೇಳಿದ್ದಾರೆ. ಲಕ್ಷ್ಮಣರಾವ್‌ ಕವನ ಸಂಕಲನವನ್ನು ತಂದಿಟ್ಟುಕೊಂಡು ಆಗಾಗ ಒಂದು ಕವಿತೆಯನ್ನೋದಿ ಖುಷಿಪಟ್ಟು ‘ಬಾಳ ಗೆಳತಿಯೇ ಬಳಿ ಬಾ ಮತ್ತೆ ವಧುವಿನಂತೆ; ಹಳೆ ಸೀಶೆಯಾಳಿರುವ ಹೊಸ ಮಧುವಿನಂತೆ’ ಎನ್ನುವ ಸಾಲು ಗುನುಗುತ್ತಾ ಮನವನ್ನು ಜಾಲಿ ಬಾರು ಮಾಡಿಕೊಂಡು ಪೋಲಿ ಗೆಳೆಯರನ್ನು ನೆನೆಯುವುದಕ್ಕಿಂತ ಸುಖ ಮತ್ತೊಂದಿಲ್ಲ. ಅಂಥ ಸುಖ ಕೊಟ್ಟ ಲಕ್ಷ್ಮಣ ರೇಖೆಗಳಿಗೆ ನಮಸ್ಕಾರ.

ಒಂದು ಕೊನೆಯ ತುಂಟತನ ; ಕೆಲವರು ಬೆತ್ತಲಾದರೆ ಕಣ್ಣು ಧನ್ಯ; ಕೆಲವರು ಬೆತ್ತಲಾಗದಿರುವುದು ನಮ್ಮ ಪುಣ್ಯ.


ಪೂರಕ ಓದಿಗೆ-
ಲಕ್ಷ್ಮಣರಾವ್‌ ಹನಿಗವನಗಳು
ಲಕ್ಷ್ಮಣರಾವ್‌ ಬಗ್ಗೆ ರವಿ ಬೆಳಗೆರೆ ಏನು ಹೇಳ್ತಾರೆ ಗೊತ್ತಾ?


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X