• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು...

By Staff
|
  • ಜಾನಕಿ
ನನ್ನ ಕೈಯ ಹಿಡದಾಕಿ

ಅಳು ನುಂಗಿ ನಗು ಒಮ್ಮೆ

ನಾನೂನೂ ನಕ್ಕೇನಠ

ಬೇಂದ್ರೆ ಬರೆದರು, ನಾವು ಓದಿದೆವು, ನಾವೂ ನಕ್ಕೆವು.

ಅತ್ತಾರೆ ಅತ್ತು ಬಿಡು

ಹೊನಲು ಬರಲಿ

ನಕ್ಯಾಕ ಮರಸತೀ ದುಃಖ

ಬೇಂದ್ರೆ ಬರೆದರು, ನಾವು ಓದಿದೆವು. ನಾವೂ ಅತ್ತೆವು.

**

ಯಾರೋ ನಗಿಸುತ್ತಾರೆ. ಯಾರೋ ಅಳಿಸುತ್ತಾರೆ. ಯಾರೋ ನೋಯಿಸುತ್ತಾರೆ, ಯಾರೋ ‘ಮಾಯಿ’ಸುತ್ತಾರೆ, ಯಾರೋ ಹುಟ್ಟಿಸುತ್ತಾರೆ. ಯಾರೋ ಬಾಳಿಸುತ್ತಾರೆ. ಯಾರೋ ಗೆಲ್ಲಿಸುತ್ತಾರೆ. ಯಾರೋ ತೇಲಿಸುತ್ತಾರೆ. ಯಾರೋ ಸೋಲಿಸುತ್ತಾರೆ. ಇನ್ಯಾರೋ ಮುಳುಗಿಸುತ್ತಾರೆ. ಬದುಕು ಮಾಯೆಯ ಮಾಟ. ಬದುಕು ನೊರೆತೆರೆಯಾಟ!

ಇನ್ನೊಬ್ಬರು ಯಾಕೆ ಮುಖ್ಯವಾಗುತ್ತಾರೆ ಜೀವನದಲ್ಲಿ ? ಎಲ್ಲರ ಬದುಕಲ್ಲೂ ಇದು ಹೀಗೇನಾ? ಅದು ನಿಸ್ವಾರ್ಥ ಸುಖವಾ? ಅಹಂಕಾರವಾ? ಪ್ರೀತಿಯಾ?

ಗಂಡ ಸಿಗರೇಟು ಸೇದಿದರೆ ಹೆಂಡತಿಗೆ ಸಿಟ್ಟು ಬರುತ್ತದೆ. ಅದು ಕೇವಲ ಆರೋಗ್ಯದ ಪ್ರಶ್ನೆ ಅಲ್ಲ ಅನ್ನುವುದು ಆಕೆಗೂ ಗೊತ್ತು. ಒಂದು ಸಿಗರೇಟಿಗಿಂತ ಅಪಾಯಕಾರಿಯಾದ ಮಸಾಲೆದೋಸೆಯನ್ನೂ ಆಕೆಯೇ ಮಾಡಿಕೊಟ್ಟಿರುತ್ತಾಳೆ. ಅದೇ ಥಿಯೇಟರಲ್ಲಿ ಕೂತು ರಜನೀಕಾಂತ್‌ ಸಿಗರೇಟು ಸೇದುವ ಶೈಲಿಯನ್ನು ಮೆಚ್ಚುತ್ತಾಳೆ. ಪಕ್ಕದ ಮನೆಯ ಹುಡುಗ ಮಹಡಿಯಲ್ಲಿ ನಿಂತು ಸಿಗರೇಟು ಸೇದುತ್ತಿದ್ದರೆ ‘ಅದೆಷ್ಟು ಸಿಗರೇಟು ಸೇದ್ತಾನ್ರೀ ಹುಡುಗ’ ಅನ್ನುತ್ತಾಳೆ. ಆ ದನಿಯಲ್ಲಿ ಮೆಚ್ಚುಗೆಯಿದ್ದಂತೆ ಅನ್ನಿಸಿ ಗಂಡ ಗೊಣಗುತ್ತಾನೆ.‘ಅಯ್ಯೋ ಬಿಡೇ. ಅವನ ವಯಸ್ಸಲ್ಲಿ ನಾವು ಅದಕ್ಕಿಂತ ಜಾಸ್ತಿ ಸೇದ್ತಾ ಇದ್ವಿ’!

ಅಲ್ಲಿಗೆ ಆ ಮಾತು ಮುಗಿಯುತ್ತದೆ. ಅದೇ ಜೊತೆಗೆ ಗೆಳೆಯನಿದ್ದರೆ ಮಾತು ಮುಂದುವರಿಯುತ್ತಿತ್ತು. ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ವಾಪಸ್ಸು ಹೋಗುತ್ತಾ ದಾರಿಯಲ್ಲಿ ಕದ್ದು ಸಿಗರೇಟು ಸೇದಿದ್ದು. ಬಾಯಿ ವಾಸನೆ ಬಂದೀತೆಂದು ಅಂಜುತ್ತ ಮನೆಗೆ ಹೋದದ್ದು. ಆಮೇಲಾಮೇಲೆ ಗೆಳೆಯರಿಗೆಲ್ಲ ಗೊತ್ತಾಗುವ ಹಾಗೆ ಗುಟ್ಟಾಗಿ ಸಿಗರೇಟು ಸೇದುತ್ತಿದ್ದುದು. ಆಗಿನ ಹಳೇ ಬ್ರಾಂಡುಗಳು. ಹಳೇ ಮೈಸೂರು ಮಂದಿಗೆ ನೇವಿಬ್ಲೂ, ಬೆಂಗಳೂರಿನ ಹುಡುಗರಿಗೆ ಪಾಸಿಂಗ್‌ ಷೋ, ದಕ್ಷಿಣ ಕನ್ನಡಿಗರಿಗೆ ಬ್ರಿಸ್ಟಾಲ್‌, ಹಾಸನದ ಹುಡುಗರಿಗೆ ಬರ್ಕ್‌ಲೀ, ಹುಬ್ಬಳ್ಳಿಯಲ್ಲಿ ಗೋಲ್ಡ್‌ ಫ್ಲೇಕ್‌ ಸ್ಮಾಲ್‌, ಭಯಸ್ತರಿಗೆ ಮೆಂಥಾಲ್‌, ಶೋಕಿಲಾಲರಿಗೆ ಮೋರ್‌, ಒರಟರಿಗೆ ವಿಲ್ಸ್‌...ಹೀಗೆ ಒಂದೊಂದು ಬ್ರಾಂಡಿನ ಜೊತೆಗೂ ಒಂದೊಂದು ನೆನಪು. ಬ್ರಾಂಡು ಬದಲಾಯಿಸಿ ಕೆಮ್ಮಿದ್ದು, ಬೀಡಿ ಸೇದಿ ಸುಖಿಸಿದ್ದು, ತುಂಡು ಸಿಗರೇಟು ಹೆಕ್ಕಿ ಸೇದಿದ ಅನಂತ ರಾತ್ರಿಗಳು, ಮೂರು ಮೈಲು ನಡೆದುಹೋಗಿ ಸುಡುಬಿಸಿಲಲ್ಲಿ ಸಿಗರೇಟು ತಂದದ್ದು.

ದುರದೃಷ್ಟವಶಾತ್‌ ಬಹುತೇಕ ಹೆಣ್ಣುಮಕ್ಕಳಿಗೆ ಇಂಥ ವೈವಿಧ್ಯಮಯ ನೆನಪುಗಳಿಲ್ಲ. ಯಾಕೆಂದರೆ ಅವರಿಗೆ ಹವ್ಯಾಸಗಳೂ ಇಲ್ಲ. ಅವರು ಕದ್ದು ಮುಚ್ಚಿ ಏನನ್ನೂ ಮಾಡುವುದಿಲ್ಲ. ಕದ್ದು ಮುಚ್ಚಿ ಮಾಡದ ಹೊರತು ಅದೊಂದು ರಸಾನುಭವ ಆಗಲಾರದು.

ಮತ್ತೆ ಅದೇ ಹಳೆಯ ಪ್ರಶ್ನೆಗೆ ಬರೋಣ; ಇನ್ನೊಬ್ಬರು ನಮಗೆ ಯಾಕೆ ಮುಖ್ಯವಾಗುತ್ತಾರೆ?ಬೆಳಗ್ಗೆ ಎದ್ದೊಡನೆ ಫೋನ್‌ ಮಾಡುವ ವ್ಯಕ್ತಿಗೆ ನಾವೇಕೆ ನೇರವಾಗಿ‘ನನಗೆ ನಿಮ್ಮ ಜೊತೆ ಮಾತಾಡುವುದಕ್ಕೆ ಇಷ್ಟವಿಲ್ಲ. ಇನ್ನು ಫೋನ್‌ ಮಾಡಬೇಡಿ’ ಅಂತ ಹೇಳಲಾಗುವುದಿಲ್ಲ. ನಡುರಾತ್ರಿ ಕವಿ ಫೋನ್‌ ಮಾಡಿ ಕವಿತೆ ಓದುತ್ತೇನೆ ಎಂದರೆ ‘ನಂಗೆ ಕವಿತೆಯೂ ಇಷ್ಟವಿಲ್ಲ. ನಿಮ್ಮ ದನಿಯನ್ನೂ ಕೇಳಲಾರೆ’ ಅಂತ ಫೋನ್‌ ಕುಕ್ಕಲಾಗುವುದಿಲ್ಲ. ಕೈ ತುಂಬ ಕೆಲಸ ಇದ್ದಾಗಲೂ ಯಾಕೆ ನಗು ನಟಿಸುತ್ತಾ ಮಾತಾಡುತ್ತೇವೆ. ಸಾಮಾನ್ಯವಾಗಿ ನಾವೇಕೆ ಸಿಟ್ಟು ಮಾಡಿಕೊಳ್ಳುವುದಿಲ್ಲ ? ಸಿಟ್ಟು ಬಂದಾಗ ಶಾಂತಿ ನಟಿಸುತ್ತಾ, ಶಾಂತಿಯಿಂದಿರಬೇಕಾದ ಹೊತ್ತಲ್ಲಿ ಸಿಟ್ಟಾಗುತ್ತಾ, ಪ್ರೀತಿಸಬೇಕಾದ ಹೊತ್ತಲ್ಲಿ ದ್ವೇಷಿಸುತ್ತಾ, ದ್ವೇಷಿಸಬೇಕಾದವರನ್ನು ಪ್ರೀತಿಸುವಂತೆ ನಟಿಸುತ್ತಾ ಯಾಕೆ ಕಾಲ ಕಳೆಯುತ್ತೇವೆ?

ಅದು ಸಮಾಜಮುಖಿ ನಿಲುವು ಅನ್ನುತ್ತದೆ ಇತಿಹಾಸ. ಜಗತ್ತಿನಲ್ಲಿ ಎರಡೇ ಎರಡು ಥರದ ಜನ. ಸುಖ ಪಡುವವರು ಮತ್ತು ಸುಖವಾಗಿಡುವವರು. ಒಂದು ಬೆಳಗ್ಗೆಯಿಂದ ಸಂಜೆ ತನಕ ನೀವು ಆಡುವ ಪ್ರತಿಯಾಂದು ಮಾತನ್ನೂ ಬರೆದಿಡಿ. ಮಾಡುವ ಒಂದೊಂದು ಕೆಲಸಕ್ಕೂ ಲೆಕ್ಕ ಇಡಿ. ಅದರಲ್ಲಿ ನಿಮಗೋಸ್ಕರ ಏನೇನು ಮಾಡಿದ್ದೀರಿ ಅಂತ ಲೆಕ್ಕ ಹಾಕಿ. ನೋಡುತ್ತಾ ಹೋದರೆ ನಾವು ನಮಗಾಗಿ ಏನನ್ನೂ ಮಾಡಿರುವುದಿಲ್ಲ. ನಮಗಾಗಿ ಮಾಡುವುದನ್ನೂ ಬೇರೆಯವರಿಗಾಗಿ ಮಾಡಿರುತ್ತೇವೆ. ಅತ್ತೆ ಏನನ್ನುತ್ತಾರೋ ಅಂತ ಸೊಸೆ ಒಳ್ಳೆಯ ಅಡುಗೆ ಮಾಡುತ್ತಾಳೆ. ಬಾಸ್‌ ಏನನ್ನುತ್ತಾನೋ ಅನ್ನುತ್ತಾ ಟೈಪಿಸ್ಟ್‌ ಕೊನೆಯ ಲೆಟರನ್ನು ಎಂಟೂವರೆ ತನಕ ಕೂತು ಟೈಪ್‌ ಮಾಡಿರುತ್ತಾಳೆ. ಗಿರಾಕಿ ಕೈ ಬಿಟ್ಟು ಹೋಗುತ್ತಾನೇನೋ ಅನ್ನುವ ಭಯಕ್ಕೆ ಟೀವಿ ಅಂಗಡಿಯವನು, ಸರ್ವೀಸ್‌ ಇಂಜಿನಿಯರನ್ನು ಕಳುಹಿಸಿಕೊಡುತ್ತಾನೆ. ಪ್ರತಿಯಾಂದೂ ದಾಕ್ಷಿಣ್ಯಕ್ಕೆ ನಡೆಯುವ ವ್ಯವಹಾರಗಳು.

ಯಾವ ಲೆಕ್ಕಾಚಾರವೂ ಇಲ್ಲದ, ಲಾಭವೂ ಇಲ್ಲದ ಒಳ್ಳೇತನಗಳು ಮತ್ತೊಂದಷ್ಟಿವೆ. ಜೊತೆಗಿರುವವರು ಏನನ್ನುತ್ತಾರೋ ಅನ್ನುವ ಭಯಕ್ಕೆ ನಾವೊಂದಷ್ಟು ಸಾಮಾಜಿಕ ನಡವಳಿಕೆಗಳನ್ನು ರೂಪಿಸಿಕೊಳ್ಳುತ್ತೇವೆ. ಹಾಗೆ ಮಾಡದೇ ಹೋದರೆ ಒಂಟಿ ಯಾಗುತ್ತೇವೇನೋ ಅನ್ನುವ ಭಯಕ್ಕೆ ಬೀಳುತ್ತೇವೆ. ಏನೇ ಮಾಡಿದರೂ ಮನುಷ್ಯ ಒಂಟಿ ಅನ್ನುವುದನ್ನು ಮರೆಯುತ್ತೇವೆ.

‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು’ಅನ್ನುವುದು ನಮ್ಮ ಪಾಲಿಗೆ ಜನಪ್ರಿಯ ವಾಕ್ಯ. ಬಹುಶಃ ಅದರ ಅರ್ಥ ಇಷ್ಟೇ. ಎಲ್ಲರಿಗೂ ಇಷ್ಟವಾಗುವಂತಿರು. ಹಾಗೇಕೆ ಇರಬೇಕು ಅನ್ನುವುದನ್ನು ನಾವು ಕೇಳಿಕೊಳ್ಳುವುದೇ ಇಲ್ಲ. ನಮ್ಮ ಮುಂದಿನ ಉದಾಹರಣೆ ನೋಡಿದರೆ ಗೊತ್ತಾಗುತ್ತದೆ; ಯಾರೂ ಯಾರ ಅಪ್ಪಣೆಗಾಗಲೀ, ಮಾತಿಗಾಗಲೀ, ಟೀಕೆಗಾಗಲೀ ಅಂಜದೇ ಇದ್ದರೋ ಅವರು ಅತ್ಯಂತ ಸುಖವಾಗಿಯೂ ಇದ್ದರು. ಉದಾಹರಣೆಗೆ ಶಿವರಾಮ ಕಾರಂತ.

ಹಾಗಿದ್ದವರು ನಟಿಸುವುದಿಲ್ಲ. ಪ್ರಾಣಿಗಳೂ ನಟಿಸುವುದಿಲ್ಲ. ನಾವು ದ್ವೇಷಿಸುತ್ತಾ ಪ್ರೀತಿಸುವಂತೆ ನಟಿಸುತ್ತೇವೆ. ಪ್ರೀತಿಸುವಂತೆ ನಟಿಸುತ್ತಾ ದ್ವೇಷಿಸುತ್ತೇವೆ. ಮೆಚ್ಚಿಕೊಳ್ಳುತ್ತಾ ಅಸಹ್ಯ ಪಡುತ್ತೇವೆ. ಅಸಹ್ಯ ಪಡುತ್ತಾ ಮೆಚ್ಚಿಕೊಳ್ಳುತ್ತೇವೆ. ಬಹುಶಃ ಈ ವೈವಿಧ್ಯ ಮನುಷ್ಯರಿಗಷ್ಟೇ ಸಾಧ್ಯ. ಅದು ಸಾಧ್ಯ ಆಗಿದ್ದರಿಂದಲೇ ನಮ್ಮಲ್ಲಿ ಕತೆಯಿದೆ, ಕವಿತೆಯಿದೆ, ನಾಟಕವಿದೆ, ಸಿನೆಮಾ ಇದೆ, ಲಲಿತ ಕಲೆಗಳಿವೆ. ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾ ಹೋದರೆ ಅಲ್ಲಿ ಕತೆಯೆಲ್ಲಿ ಹುಟ್ಟುವುದಕ್ಕೆ ಸಾಧ್ಯ?

ಹಾಗಿದ್ದರೆ, ಮುಚ್ಚಿಡುವುದು ಸರಿಯಾ? ಮುಚ್ಚಿಟ್ಟಾಗಲೇ ಬದುಕು. ಇನ್ನೊಬ್ಬರನ್ನು ಅರಿಯುವ ಪ್ರಯತ್ನವೇ ಬದುಕು. ನಮ್ಮನ್ನು ಅರ್ಥಮಾಡಿಕೊಳ್ಳುತ್ತಾ ಹೋಗುವುದೇ ಜೀವನ. ಬದುಕೆಂದರೆ ಪರಿಪೂರ್ಣತೆ ಅಲ್ಲ. ಶಿಸ್ತಲ್ಲ, ಪ್ರಾಮಾಣಿಕತೆ ಅಲ್ಲ. ಬದುಕು ಸರಿ ತಪ್ಪುಗಳ ಮೊತ್ತ. ನಾವು ಆ ಕ್ಷಣಕ್ಕೆ ಪ್ರತಿಕ್ರಿಯಿಸಿದ ರೀತಿ ಅಷ್ಟೇ. ಅಮ್ಮನನ್ನು ತುಂಬ ಪ್ರೀತಿಸುವ ಹುಡುಗನಿಗೆ ಅಮ್ಮನೇ ಶತ್ರು ಅನ್ನಿಸಬಹುದು. ಕುಡಿಯುವ ಗಂಡನನ್ನು ಕಂಡಾಗ ಹೆಂಡತಿಗೆ ಇವನನ್ನು ಮದುವೆ ಆಗಬಾರದಿತ್ತು ಅನ್ನಿಸಬಹುದು. ಮತ್ತೊಬ್ಬ ಸುಂದರಿಯನ್ನು ಕಂಡಾಗ ಗಂಡನಿಗೆ, ಛೇ ಅವಸರಪಟ್ಟೆ ಅನ್ನಿಸೀತು. ಅವೆಲ್ಲವೂ ಸರಿಯೇ?ಏನು ಅನ್ನಿಸಬಹುದು. ಅನ್ನುವುದು ಗೌಣ. ಅನುಸರಿಸಿಕೊಂಡು ಹೋದದ್ದು ಜೀವನ.

ಮತ್ತೆ ಒಳ್ಳೇತನ!

ಅದೊಂದು ಬೊಗಳೆ ಮಾತು. ಗುರು ಹೇಳಿದ ಹಾಗೆ ಕೇಳಿದರೆ ಶಿಷ್ಯ ಒಳ್ಳೆಯವನು; ಗುರುವಿನ ಪಾಲಿಗೆ... ಅಪ್ಪ ಹೇಳಿದ ಹಾಗೆ ಕೇಳಿದರೆ ಮಗ ಒಳ್ಳೆಯವನು; ಅಪ್ಪನ ಪಾಲಿಗೆ. ಆದರೆ ಮಗ ತನ್ನ ಪಾಲಿಗೆ ಒಳ್ಳೆಯವನಾಗುವುದು ಯಾವಾಗ? ಹೆಂಡತಿಗೆ ಸಿಟ್ಟು ಬರುತ್ತದೆ ಅಂತ ಗೆಳೆಯರ ಜೊತೆ ಸೇರಿದಾಗ ಸುಮ್ಮನುಳಿಯುವ ಆಸೆಬುರುಕ ಬ್ರಾಹ್ಮಣರ ಹುಡುಗ ಅಂತಿಮವಾಗಿ ತನಗೇ ತಾನೇ ಮೋಸ ಮಾಡಿಕೊಂಡಿರುತ್ತಾನೆ. ತನಗೆ ತಾನೇ ಮೋಸ ಮಾಡಿಕೊಂಡವನು ಪರಮಕ್ರೂರಿ.

ಅಹಂ ಬ್ರಹ್ಮಾಸ್ಮಿ ಅನ್ನುವುದರ ಅಂತರಂಗದ ಅರ್ಥ ಇದೇ. ನಾನು ಮುಖ್ಯ. ಉಳಿದವರೆಲ್ಲ ಅನಂತರ. ನಾನುಂಟೋ ಮೂರು ಲೋಕವುಂಟು. ನಾನು ತಪ್ಪೇ ಮಾಡುತ್ತಿರಬಹುದು, ಆದರೆ ಅದನ್ನು ಖುಷಿಯಿಂದ ಸ್ವಸಂತೋಷದಿಂದ ಮಾಡುತ್ತಿದ್ದೇನೆ. ಇನ್ನೊಬ್ಬನ ಸಂತೋಷಕ್ಕಾಗಿ ತಪ್ಪು ದಾರಿಯಲ್ಲಿ ನಡೆಯುವುದು ಒಳ್ಳೆಯ ನಿರ್ಧಾರ.

**

ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು. ಹಾಗಂತ ಕವಿ ಹಾಡಿದ. ಆ ಮಾತಲ್ಲಿ ಎಲ್ಲರ ಬದುಕಿಗೂ ಅನ್ವಯಿಸುವ ಒಂದು ಅರ್ಥಪೂರ್ಣ ತಿಳುವಳಿಕೆಯಿದೆ. ಅದನ್ನು ಪ್ರಶ್ನೆಗಳಲ್ಲಿ ಹೀಗೆ ವಿವರಿಸುತ್ತಾ ಹೋಗಬಹುದು.

ಇಲ್ಲೇ ಇರು ಅಂತ ಆತ ಯಾಕೆ ಹೇಳಿದ. ಆಕೆಯನ್ನೂ ಜೊತೆಗೆ ಕರೆದುಕೊಂಡು ಹೋಗಬಹುದಿತ್ತಲ್ಲ?

ಮಲ್ಲಿಗೆಯನು ತರುವೆನು ಅಂತ ಹೋದದ್ದೇನೋ ಸರಿ, ಆದರೆ ಮಲ್ಲಿಗೆ ಯಾರಿಗೆ ಇಷ್ಟ ? ಅವನಿಗೋ ಅವಳಿಗೋ? ಅವಳಿಗಿಷ್ಟ ಇದೆಯೋ ಇಲ್ಲವೋ ಅಂತ ಆತ ಕೇಳಿದ್ದಾನಾ?

ಅವಳಿಗೆ ಮಲ್ಲಿಗೆ ಇಷ್ಟವಾ? ಆತ ತನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಯಾದರೂ ಮಲ್ಲಿಗೆ ತರಲಿ ಅನ್ನುವ ಆಸೆಬುರುಕಿಯಾ?ಅಥವಾ ಆಕೆಗೆ ಅವನು ತರುವ ಮಲ್ಲಿಗೆ ಇಷ್ಟವಾ?

ಅವನು ಮಲ್ಲಿಗೆ ತರುತ್ತೇನೆ ಅಂತ ಹೋಗಿದ್ದು ಅವಳಿಗಾಗಿಯಾ? ಅವನಿಗಾಗಿಯಾ?ಗೊತ್ತಿಲ್ಲ.

ಆದರೆ ಅಲ್ಲಿಗೆ ಹೋಗಿ ಅವಳಿಗಾಗಿ ಮಲ್ಲಿಗೆ ತರುತ್ತೇನೆ ಅನ್ನುವ ನಿರ್ಧಾರದ ಹಿಂದಿನ ಸುಖವಷ್ಟೇ ಅವನದು.

ಅಷ್ಟೇ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X