• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೂರಿ ಕತೆಗಳು : ಬಿಳಿ ಹಗಲ ಕೊನೆಯಲ್ಲೊಂದು ಬಣ್ಣದ ಬಿಲ್ಲು

By Staff
|
  • ಜಾನಕಿ
ಗುಡ್ಡಗಳೆಲ್ಲಾ, ಪ್ರತಿಧ್ವನಿಸುವ ಹಾಗೆ ಕೂಗಿದ ‘ನನಗೆ ಕಣ್ಣು ಬೇಕೂ’.

ಸಾವಿರಾರು ಜೊತೆ ಕಣ್ಣುಗಳು ಎದುರಿಗೆ ರಾಶಿಯಾಗಿ ಬಿದ್ದವು.

ಖುಷಿಯಿಂದ ಒಂದು ಜೊತೆ ಕಣ್ಣುಗಳನ್ನು ಸಿಕ್ಕಿಸಿಕೊಂಡು ನೋಡಿದ.

ಬರೇ ಬಣ್ಣಗಳು, ಸಂಗೀತಗಳು.

ಗಾಬರಿಯಾಗಿ ಕಿತ್ತು ಮತ್ತೊಂದು ಜೊತೆ ಸಿಕ್ಕಿಸಿಕೊಂಡ.

ಅಳು ಬಂತು. ಅಳತೊಡಗಿದ.

ಕೀಳಲು ನೋಡಿದ. ಆ ಕಣ್ಣುಗಳು ಕಿತ್ತು ಬರಲೇಯಿಲ್ಲ.

ಅವನು ಅಳುತ್ತಾ ಮುಂದೆ ನಡೆದಂತೆ, ಅವನ ಹಿಂದೆ ಬಿದ್ದ ಪ್ರತಿ ಕಣ್ಣೀರಿನ ಹನಿಯೂ ಒಂದೊಂದು ಕಣ್ಣಾಗಿ ಉದ್ದಕ್ಕೂ ಕಣ್ಣುಗಳ ಸಾಲು. ಎಲ್ಲಾ ಕಣ್ಣುಗಳೂ ಆಳುತ್ತಿದ್ದವು.

*

ಎಸ್‌.ಸುರೇಂದ್ರನಾಥ್‌, ಗೆಳೆಯರ ಪಾಲಿಗೆ ಸೂರಿ, ಅವರ ಮೊದಲನೆಯ ಕಥಾ ಸಂಕಲನ ‘ನಾತಲೀಲೆ’ಯಲ್ಲಿರುವ ಒಂದು ಪುಟ್ಟ ಕತೆ ಇದು. ಅಳುವ ಕಣ್ಣಿನಿಂದ ಬಿದ್ದ ಒಂದೊಂದು ಹನಿಯೂ ಕಣ್ಣಾಗಿ, ಕಣ್ಣೂ ಕಂಬನಿ ಸುರಿಸುವ ಕಲ್ಪನೆಯೇ ಎಷ್ಟು ಭಯಾನಕವಾಗಿದೆ ಯೋಚಿಸಿ. ನಮ್ಮ ವರ್ತಮಾನದ ನಿರರ್ಥಕತೆ ಮತ್ತು ದುರಂತವನ್ನು ಸುರೇಂದ್ರನಾಥ್‌ ಸೆರೆ ಹಿಡಿಯುವುದೇ ಇಂಥ ರೂಪಕಗಳ ಮೂಲಕ.

ಸುರೇಂದ್ರನಾಥ್‌ ವಾಸ್ತವವನ್ನು ಸದಾ ಮೀರಲು ಯತ್ನಿಸುವ ಕಥೆಗಾರ. ಅವರು ಬರೆದ ಏಳೋ ಎಂಟೋ ಕತೆಗಳಲ್ಲಿ ಪ್ರತಿಯಾಂದು ಕೂಡ ಸದ್ಯದ ಸ್ಥಿತಿಯನ್ನು ಅದರ ಅತ್ಯಂತಿಕ ಸ್ಥಿತಿಗೆ ಒಯ್ಯುತ್ತದೆ. ಜೀವನದ ಸಹಜ ವ್ಯಾಪಾರಗಳಲ್ಲಿ , ಪ್ರಭೆ ಕಳೆದುಕೊಂಡ ದೈನಿಕದ ಆಗುಹೋಗುಗಳಲ್ಲಿ ಅವರಿಗೆ ಆಸಕ್ತಿಯಿಲ್ಲ. ಪ್ರತಿಯಾಂದನ್ನೂ ಅದರ ಅತಿರೇಕದ ತುದಿಗೆ ಒಯ್ದಾಗಲೇ, ಅದು ತನ್ನ ಎಲ್ಲಾ ಸತ್ವವನ್ನು ಬಿಟ್ಟು ಕೊಡುತ್ತದೆ ಅಂತ ನಂಬಿದವರ ಹಾಗೆ ಸುರೇಂದ್ರನಾಥ್‌ ಬರೆಯುತ್ತಾರೆ. ಹುರಗಡಲೀ ಮಾಸ್ತರರ ಸಂಕಟ, ಸುರೇಂದ್ರನಾಥ್‌ ಕತೆಯಲ್ಲಿ ಎಂಥ ಅದ್ಭುತ ರೂಪಕವಾಗಿ ಪಡಿಮೂಡಿದೆ ಗಮನಿಸಿ :

ಹುರಗಡಲೀ ಮೇಷ್ಟ್ರು‘ಕೋಟೆಯಾಳಗೆ ನುಸುಳಿ ಬಂದ ಶತ್ರುಗಳನ್ನು ವನಕೆವೋಬವ್ವ ಯದರಾಗೆ ಬಡುದ್ಲು’ ಅಂತ ಮಕ್ಕಳಿಗೆ ಪ್ರಶ್ನೆ ಹಾಕಬೇಕು. ಹೊಟ್ಟೆಯಾಳಗಿಂದ ಗಾಳಿ ವತ್ತರಿಸಿಕೊಂಡು ಬಂದ ಹಾಗಾಯ್ತು. ನಿಂತ ಭಂಗಿಯಲ್ಲೇ, ಯಾರಿಗೂ ಗೊತ್ತಾಗದಷ್ಟು ಸೂಕ್ಷ್ಮವಾಗಿ ಸೊಂಟವನ್ನು ಕೊಂಚ ಓರೆ ಮಾಡಿ, ಒಳಗೆ ತೆವಳಿ ಬರಲಿದ್ದ ಹೈದರಾಲಿ ಸೈನಿಕರನ್ನು ಒಂದು ಹತ್ತು ಸೆಕೆಂಡು ಹಾಗೇ ಕೋಟೆಯ ಹೊರಬದಿ ನಿಲ್ಲಿಸಿ, ತಾವು ಉಸಿರು ಬಿಗಿ ಹಿಡಿದು, ಗೋಡೆಯ ಮೇಲೆ ಸೀಮೆಸುಣ್ಣದಿಂದ ಬರೆಯುವಂತೆ, ಕೊಂಯ್ಯೆನ್ನುವ ಒಂದು ಸೂಕ್ಷ್ಮ ನಾದದಿಂದ ಗಾಳಿಯನ್ನು ಸೀಳಿ ಹಾಕಿದರು. ಹೊಟ್ಟೆಯೆಂಬ ಬಿರುಗಡಲು ಶಾಂತವಾದಂತೆ ಮುಖಮುದ್ರೆಯೂ ಶಾಂತವಾಯಿತು. ಪಾಠ ಮುಂದುವರೆಸುತ್ತಾ ಸೈನಿಕರನ್ನು ಒಳಬಿಡಲು ತಯಾರಾದರು. ‘ವಬ್ಬ ಸೈನಿಕ ವಳಗೆ ತಲೆಯಿಟ್ಟ. ವನಕೇನಗೆ ಬಡುದ್ಲು’ ಅಂತ ಹೇಳಿ ಇಡೀ ತರಗತಿಯನ್ನು ಒಂದು ಸಾರಿ ಕಣ್ಣಿನಿಂದ ಅಳೆದರು. ತಾವು ಗಾಳಿ ಸೀಳಿದ ಪರಿಣಾಮ ಇನ್ನೂ ತರಗತಿಗೆ ಆದಂತಿರಲಿಲ್ಲ.-(ನಾತಲೀಲೆ)

*

ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣಕತೆಗಳ ಜಗತ್ತಿನಲ್ಲಿ ಅಂಥ ಸ್ಥಿತ್ಯಂತರವೇನೂ ಆಗಿಲ್ಲ. ಹೊಸದಾಗಿ ಕತೆಗಳನ್ನು ಬರೆಯುತ್ತಿರುವವರ ಪೈಕಿ ಬಹುತೇಕರು ಅದೇ ಹಳೆಯ ವಸ್ತು, ಶೈಲಿ ಮತ್ತು ತಂತ್ರವನ್ನು ನೆಚ್ಚಿಕೊಂಡವರೇ. ಐವತ್ತರ ಅಂಚಿನ ತರುಣ ಕತೆಗಾರರ ಪಟ್ಟಿಯಲ್ಲಿರುವ ಎಲ್ಲರಿಗೂ ತಮ್ಮ ನೆರಳೇ ಶತ್ರು. ಅಬ್ದುಲ್‌ರಶೀದ್‌ರಂಥ ಕೆಲವೇ ಕೆಲವರು ಆಧುನಿಕ ಸಂವೇದನೆಯನ್ನು ಹಿಡಿದಿಡಲು ಬೇಕಾದ ಪರಿಕರಗಳನ್ನು ಕಂಡು ಕೊಂಡಿದ್ದಾರೆ. ಉಳಿದವರೆಲ್ಲ ಅದೇ ಕಡಲು, ಬೇಲಿ, ದೋಣಿಗಳಲ್ಲಿ ಕಣ್ಣು ನೆಟ್ಟುಕಳೆದುಹೋಗಿದ್ದಾರೆ. ಸಾಮಾಜಿಕ ನ್ಯಾಯ, ಬಂಡಾಯ, ನೊಂದವರ ನುಡಿಯಾಗುವ ತುಡಿತ ಮುಂತಾದ ನುಡಿಗಟ್ಟುಗಳಿಗೆ ಬಲಿಯಾಗಿದ್ದಾರೆ. ಇದರಿಂದಾಗಿ ಕತೆ ಅನ್ನುವುದು ಅವರ ಪಾಲಿಗೆ ಕಲೆ ಆಗಿಲ್ಲ. ಆಯುಧವೋ ಮಾರ್ಗವೋ ಏಣಿಯೋ ಆಗಿಬಿಟ್ಟಿದೆ.

ಸೂರಿಯವರಿಗೆ ಅಂಥ ಯಾವ ಪೂರ್ವನಿರ್ಧಾರಗಳೂ ಇಲ್ಲ. ಅವರ ಮೂಲ ಆಸಕ್ತಿಯೆಂದರೆ ಮಾನವನ ಪಾಡು. ಆಧುನಿಕತೆಯ ವಿಕಾರಗಳನ್ನು ಅತ್ಯಂತ ಪ್ರಖರ ರೂಪಕಗಳ ಮೂಲಕ ಹೇಳಲು ಯತ್ನಿಸುತ್ತಾರೆ ಸೂರಿ. ಅದಕ್ಕಾಗಿ ಅವರು ಕೆಲವೊಮ್ಮೆ ತರ್ಕದ ಅಂಚಿನತನಕ ಹೋಗಬೇಕಾಗುತ್ತದೆ. ತರ್ಕವನ್ನು ಮೀರಬೇಕಾಗುತ್ತದೆ. ಕತೆಯೆಂದರೆ ಮೀರುವುದೇ ತಾನೇ?

ಸೂರಿಯವರ ಕಥೆಗಳನ್ನು ಮಾಂತ್ರಿಕ ವಾಸ್ತವತೆಯ ಕತೆಗಳೆಂದು ಕರೆಯುವುದು ಬೇಕಾಗಿಲ್ಲ. ಯಾಕೆಂದರೆ ನಮ್ಮಲ್ಲಿ ಮಾಂತ್ರಿಕ ವಾಸ್ತವತೆ ಅನ್ನುವುದು ಬೇಕಾಬಿಟ್ಟಿ ಬಳಕೆಯಾಗಿರುವ ಪದ. ಈ ಹೆಸರಿಟ್ಟುಕೊಂಡು ಮಾಂತ್ರಿಕತೆಯನ್ನೂ ವಾಸ್ತವವನ್ನೂ ಕಳೆದುಕೊಂಡ ಕತೆಗಳಿವೆ. ಹಾಗೆ ನೋಡಿದರೆ ಒಂದು ಕತೆ ನಮ್ಮ ನಡುವೆಯೇ ಹುಟ್ಟ ಬೇಕು. ಅಲ್ಲಿಂದ ಮತ್ತೊಂದು ಎತ್ತರಕ್ಕೆ ಏರಬೇಕು. ಪಕ್ಕದ ಬೀದಿಯಲ್ಲಿ ನಡೆಯಬಹುದಾದ ಸಂಗತಿಯೇ ಕತೆಯಾಗಿ ಪಡಿಮೂಡಬೇಕು.

ಆ ಮಟ್ಟಿಗೆ ಸೂರಿ ನಮ್ಮ ನಡುವಿರುವ ಕತೆಗಳನ್ನೇ ಹೆಕ್ಕಿ ಕೊಡುತ್ತಾರೆ. ಮಧ್ಯಮ ವರ್ಗದ ಯಾವುದೇ ಮನೆಗಳಲ್ಲಿ ನಡೆಯಬಹುದಾದ ಸಂಗತಿಗಳನ್ನು ಅಪೂರ್ವ ಭಾಷೆ, ಲವಲವಿಕೆಯ ನಿರೂಪಣೆ ಮತ್ತು ಚಾರಿತ್ರಿಕ ವ್ಯಂಗ್ಯದಿಂದ ಮತ್ತೊಂದು ಸ್ತರಕ್ಕೆ ಒಯ್ಯುತ್ತಾರೆ. ಮೇಲ್ನೋಟಕ್ಕೆ ತಮಾಷೆಯಾಗಿ ಕಾಣುವ ಕತೆಗಳ ಆಳದಲ್ಲಿ ದಟ್ಟ ವಿಷಾದವಿದೆ. ಗಾಢ ಅನುಕಂಪವಿದೆ. ಇದನ್ನು ಬದಲಿಸಬಹುದಾಗಿತ್ತೇನೋ ಅನ್ನುವ ಆಶಾವಾದ ಇದೆ.‘ನಾತ ಲೀಲೆ’ಕತೆಯನ್ನೇ ತೆಗೆದುಕೊಳ್ಳಿ. ಅಲ್ಲಿ ಗಂಡನ ನಾತವಲಯದಲ್ಲಿ ನರಳಿದ ಪತ್ನಿಯ ಚಿತ್ರ ಬರುತ್ತದೆ; ವಾಸ್ತವದ ಸಂಗತಿಯೆಂದರೆ ವರ್ಷಗಟ್ಟಲೆ ಪತಿ ದೇವರು, ಮನೆಯಲ್ಲಿದಷ್ಟೂ ಕಾಲವೂ ಪ್ರತಿ ಗಂಟೆಗೊಮ್ಮೆ ದಯಪಾಲಿಸುತ್ತಿದ್ದ ನಾತವಲಯಗಳಲ್ಲಿ ಮುಳುಗೇಳಿ ಆಕೆಯ ವಾಸನೇಂದ್ರಿಯಕ್ಕೆ ಪರಿಪರಿಯ ಪರಿಮಳಗಳನ್ನು ಗುರುತಿಸುವ ಶಕ್ತಿಯೇ ಉಡುಗಿ ಹೋಗಿತ್ತು. ಅದಕ್ಕೇ ಯಾವುದೇ ಹೂವಿನ, ಊದಿನಕಡ್ಡಿಯ ಗಂಧ ಆಕೆಗೆ ಥಟ್ಟನೇ ತಗುಲದೇ ಹೋದರೂ, ಯಾರಾದರೂ ಹೊರಗಿನಿಂದ ಬಂದಾಗ ‘ ಸಗಣೀ ಮೆಟ್ಟಿ ಬಂದಾರ, ಕಾಲು ತೊಳದು ಬರಕ್ಕೇಳಿ’ ಅಂತ ಬಂದವರ ಮರ್ಯಾದೆ ತೆಗೆದುಬಿಡುತ್ತಿದ್ದ..!’

ದಾಂಪತ್ಯದ ವಿಕೃತಿಯನ್ನು ಸುಳ್ಳು ಸುಳ್ಳೇ ಹೊಂದಾಣಿಕೆಯನ್ನು ಹೆಣ್ಣಿನ ಅಸಹಾಯಕತೆಯನ್ನು ಸೂರಿ ಎಷ್ಟು ಸರಳವಾಗಿ ಹೇಳಿಬಿಡುತ್ತಾರೆ ನೋಡಿ. ಇಂಥದ್ದೇ ಚಿತ್ರ‘ಗುಪ್ತ ಸಮಾಲೋಚನೆ’ ಕತೆಯಲ್ಲೂ ಬರುತ್ತದೆ. ‘ಗಿರಿಜಾ ಕಲ್ಯಾಣ’ದಲ್ಲಿ ಎದುರಾಗುವ ಗಂಡ ಕೂಡ ಇಂಥದ್ದೇ ಸಂಕಟ ಅನುಭವಿಸುತ್ತಿರುವವನೇ. ಇಬ್ಬರ ನಡುವಿನ ಬದುಕು ಸಹ್ಯವಾಗುವ ಬಗೆಯನ್ನು ಬಗೆಯುತ್ತ ಹೋಗುತ್ತಾರೆ ಸೂರಿ. ಆ ಹುಡುಕಾಟದಲ್ಲೇ ದಾಂಪತ್ಯಕ್ಕೆ ಹೊಸದೊಂದು ಅರ್ಥ ಹೊಳೆದುಬಿಡುತ್ತದೆ.

ಸೂರಿಯವರ ಕತೆಗಳು ಸುಖವಾಗಿ ಓದಿಸಿಕೊಳ್ಳುತ್ತವೆ. ಅವರದು ಗರಿಗರಿಯಾದ ಭಾಷೆ. ಕತೆಗಳನ್ನು ಓದುತ್ತಾ ಹೋದ ಹಾಗೆ ಮೊದಲು ಮೂಡುವುದು ಮುಗಳ್ನಗೆ. ನಂತರ ತಟ್ಟುವುದು. ಅವರು ಕಟ್ಟಿಕೊಡುವ ನಿಗೂಢ ಜಗತ್ತು. ಯಾವ ದಿವ್ಯದ ಪ್ರಭಾವಳಿಯೂ ಯಾವ ಪಾರಮಾರ್ಥದ ಸೋಂಕೂ ಇಲ್ಲದ ಸರ್ವೇಸಾಧಾರಣ ದೈನಿಕಕ್ಕೂ, ಅದರ ಎಲ್ಲ ವಾಸ್ತವವನ್ನು ಮೀರಿದ ಒಂದು ಆಯಾಮವಿದೆ. ಅನ್ನುವುದನ್ನು ಅವರು ಸ್ಥಾಪಿಸುತ್ತಾ ಹೋಗುತ್ತಾರೆ. ಶಿವನ ಗಿರಿಜೆ ಗೋಪಾಲರಾಯರ ತೆಕ್ಕೆಗೆ ಒದಗುತ್ತಾಳೆ. ಯಾರದೋ ಮಾತಿಗೆ ಹೆದರಿದವನು ತನ್ನ ನೆರಳಿಗೇ ಹೆದರತೊಡಗುತ್ತಾನೆ. ಗಂಡನಿಗೆ ನಿಜ ಹೇಳಿ ನಿರಾಳವಾಗೋಣ ಅಂದುಕೊಂಡ ಆಕೆಯನ್ನು ಸಾವು ಸ್ವಾಗತಿಸುತ್ತದೆ. ಸೀತಾರಾಮ ಶಾಸ್ತ್ರಿಗಳ ಕುರುವನ್ನು ಕೊನೆಗೂ ಅವರ ಹೆಂಡತಿಯೇ ಚಿವುಟಿ ಎಸೆಯುತ್ತಾಳೆ. ಇದರ ಸಾಂಕೇತಿಕತೆ ಗಮನಿಸಿ!

ಸೂರಿಯವರು ತಮ್ಮ ಕತೆಯ ವಸ್ತು ಮತ್ತು ಸನ್ನಿವೇಶಗಳನ್ನು ಹೊರಗಿನಿಂದ ಎರವಲು ತರುವುದಿಲ್ಲ. ನಮ್ಮ ಪರಿಚಿತ ಜಗತ್ತಿನಲ್ಲಿ ನಾವು ಕಾಣದ್ದನ್ನು ನಮಗೆ ತೋರಿಸಿ ಕೊಡುತ್ತಾರೆ. ಅಷ್ಟೇ. ಕತೆಗಾರನ ಶಕ್ತಿಯಿರುವುದೇ ಅಲ್ಲಿ. ನಮಗೆ ತೀರ ಅಪರಿಚಿತವಾದ ಒಂದು ಜಗತ್ತನ್ನು ತೋರಿಸಿ ಬೆರಗುಗೊಳಿಸುವುದು ಸುಲಭ. ಅದು ಸಂಶೋಧನೆಯ ಬೆರಗು. ಆದರೆ ನಮಗೆ ಗೊತ್ತಿರುವ ಜಗತ್ತನ್ನೇ ಮತ್ತೆ ತಿಳಿದು ಕೊಳ್ಳುವುದಿದೆಯಲ್ಲ, ಅದು ಅರಿವು.

*

ಸಣ್ಣ ಕತೆಗಳ ಜಗತ್ತು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಒಳ್ಳೆಯ ಸಣ್ಣ ಕತೆಗಾರರೆಲ್ಲ ಬರೆಯುವುದನ್ನು ಬಿಟ್ಟಿದ್ದಾರೆ. ಇವತ್ತಿಗೂ ಸಣ್ಣ ಕತೆಗಾಗಿ ಹುಡುಕಾಡಿದರೆ ಸಿಗುವುದು ನವ್ಯದ ಹೆಸರುಗಳೇ; ಲಂಕೇಶ್‌, ಆಲನಹಳ್ಳಿ, ಅನಂತಮೂರ್ತಿ, ಚಿತ್ತಾಲ, ದೇಸಾಯಿ,ಶರ್ಮ.

ನವ್ಯದ ನಂತರದ ಕತೆಗಾರರ ಪೈಕಿ ಥಟ್ಟನೆ ನೆನಪಿಗೆ ಬರುವುದು ತೇಜಸ್ವಿ, ದೇವನೂರು ಮುಂತಾದ ಕೆಲವು ಹೆಸರುಗಳು ಮಾತ್ರ. ಮತ್ತೆ ಮಾಸ್ತಿಯವರ ಕತೆಗಳತ್ತ ಮರುಳುವ ಚೈತನ್ಯ ಈಗಿನ ಓದುಗರಿಗೆ ಇಲ್ಲ. ಅನಂತ ಮೂರ್ತಿ ಕತೆಗಳ ಬೆಚ್ಚಿ ಬೀಳಿಸುವ ಗುಣ ಕಾಲಾಂತರಕ್ಕೆ ದಾಟಿಕೊಳ್ಳುವುದು ಕಷ್ಟ. ಲಂಕೇಶರ ಕತೆಗಳಲ್ಲಿ ದಟ್ಟವಾಗಿದ್ದ ಅವಮಾನ, ಹಿಂಜರಿಕೆಗಳನ್ನು ಮೀಸಲಾತಿ, ಹೊಸ ಶಿಕ್ಷಣ ಪದ್ಧತಿ ಹೋಗಲಾಡಿಸಿದೆ. ಆಲನ ಹಳ್ಳಿಯ ಇಂದ್ರಿಯಗಮ್ಯ ಪರಿಸರ ಈಗಿಲ್ಲ. ಚಿತ್ತಾಲರ ಕತೆಗಳ ತೊಡಕೂ ಅದೇ. ತೇಜಸ್ವಿ ಈಗಲೂ ಓದಿಸಿ ಕೊಳ್ಳುತ್ತಾರೆ. ಆದರೆ ಅವರು ಕತೆ ಬರೆಯುವುದನ್ನೇ ಬಿಟ್ಟಿಂತಿದೆ.

ಇಂಥ ಹೊತ್ತಲ್ಲಿ ಸುರೇಂದ್ರನಾಥ್‌ ಮುಂತಾದವರು ಕತೆ ಬರೆಯಲು ಆರಂಭಿಸಿದ್ದಾರೆ. ಇತ್ತೀಚೆಗೆ ‘ದೇಶಕಾಲ’ದಲ್ಲಿ ಸುರೇಂದ್ರನಾಥ್‌ ಅವರ‘ಗುಪ್ತ ಸಮಾಲೋಚನೆ’ ಮತ್ತು ವಿವೇಕ ಶಾನಭಾಗರ ‘ಶರವಣ ಸರ್ವೀಸಸ್‌’ ಪ್ರಕಟವಾಗಿತ್ತು. ಎರಡೂ ಕೂಡ ವಸ್ತುವಿನ ದೃಷ್ಟಿಯಿಂದ ಹೊಸ ಕತೆಗಳೇ.

ಮೇಷ್ಟ್ರುಗಳು ಕತೆ ಬರೆಯುತ್ತಿದ್ದ ಕಾಲ ಆಗಿ ಹೋಯಿತು. ಈಗ ಬರೆಯುತ್ತಿರವವರ ಪೈಕಿ ಹೆಚ್ಚಿನವರು ತಂತ್ರಜ್ಞಾನ, ಸಾಫ್ಟ್‌ವೇರ್‌, ಸಮೂಹ ಮಾಧ್ಯಮ ಮುಂತಾದ ಆಧುನಿಕ ಪ್ರೊಫೆಷನ್‌ಗಳನ್ನು ನಂಬಿದವರು. ಅವರಿಂದಾಗಿ ಆಧುನಿಕ ಸಂವೇದನೆ ಕಥಾ ಜಗತ್ತಿಗೆ ಹರಿದುಬರುತ್ತಿದೆ.

ಆ ಕಾರಣಕ್ಕೇ ‘ನಾತಲೀಲೆ’ ಇಷ್ಟವಾಗುತ್ತದೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X