• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಸುನಾಮಿ ಅಲೆ ಮತ್ತು ಅಲೆಮಾರಿ ಬದುಕು!

By Staff
|
  • ಜಾನಕಿ
ನಾವು ಒಂದೊಂದೇ ಅಚ್ಚರಿಗಳನ್ನು ಕಳೆದುಕೊಳ್ಳುತ್ತಿದ್ದಂತೆ ಮತ್ತೊಂದು ಅಚ್ಚರಿಯನ್ನು ಪ್ರಕೃತಿ ನಮ್ಮ ಮುಂದೆ ತಂದಿಡುತ್ತದೆ. ಹಾಗೆ ತಂದಿಡುವ ಮೂಲಕ ನಾವು ತುಂಬ ತಿಳಿದುಕೊಂಡವರು ಮತ್ತು ನಮಗೆ ಯಾರೂ ಸಾಟಿಯಿಲ್ಲ ಅನ್ನುವ ಉಡಾಫೆಯನ್ನು ಅಳಿಸಿಹಾಕುತ್ತದೆ. ನಮ್ಮ ಓದು, ಸಂಪತ್ತು, ಸೌಂದರ್ಯ, ತಂತ್ರಜ್ಞಾನ ಎಲ್ಲದರ ಅಹಂಕಾರವನ್ನೂ ಒಂದು ಸುನಾಮಿ ಅಲೆ ಒಂದೇ ಏಟಿಗೆ ಸುಳ್ಳು ಮಾಡಬಲ್ಲದು. ನಮ್ಮನ್ನು ಮಣಿಸಬಲ್ಲ ಶಕ್ತಿ ಇರುವುದು ಪ್ರಕೃತಿಗೆ ಮಾತ್ರ. ನಾವು ನಮ್ಮ ಸುತ್ತ ಕಟ್ಟಿಕೊಂಡಿರುವ ಭ್ರಮೆಯ ಗೋಡೆಗಳನ್ನು ಕೆಡಹುವ ಶಕ್ತಿಯೂ ಈ ಪ್ರಕೃತಿಯ ವಿಸ್ಮಯಕ್ಕಿದೆ.

Tsunami waves and mystery of Life!ಹಾಗಂತ ಮಾತಾಗುತ್ತಿತ್ತು. ಸಾವಿರಾರು ಮಂದಿಯ ಸಾವಿನಿಂದ ನಾವು ಪಾಠ ಕಲಿಯುತ್ತೇವೆ ಅನ್ನುವುದು ಕೂಡ ಅಹಂಕಾರದ ಮಾತೇ. ಅವರ ಸಾವಿನಿಂದ ಪಾಠ ಕಲಿಯುತ್ತೇನೆ ಅನ್ನುವುದಕ್ಕೆ ನೀನ್ಯಾರು? ನಿನಗೇನು ಸಾವಿರಾರು ವರುಷ ಆಯುಷ್ಯ ಇದೆ ಅಂದುಕೊಂಡಿದ್ದೀಯಾ? ಒಂದು ಆರ್ಡಿನರಿ ಅಲೆ ನಿನ್ನನ್ನೂ ಕಣ್ಮರೆಯಾಗಿಸೀತು ಎಂದು ಪ್ರಕೃತಿ ನಗುತ್ತಿರುವುದು ನಮಗ್ಯಾರಿಗೂ ಗೊತ್ತೇ ಆಗುವುದಿಲ್ಲ.

ಪ್ರತಿಯಾಂದರಿಂದಲೂ ನಾವು ಏನನ್ನೋ ಪಡಕೊಳ್ಳುತ್ತೇವೆ ಅಥವಾ ಕಳಕೊಳ್ಳುತ್ತೇವೆನ್ನುವ ನಮ್ಮ ಅಹಂಕಾರದ ಬಗ್ಗೆ ಅಚ್ಚರಿಯೆನಿಸುತ್ತದೆ. ನಮ್ಮ ವಿನಯ ಕೂಡ ನಮ್ಮಲ್ಲಿ ಅಹಂಕಾರವಾಗಿಯೇ ಮೊಳೆಯುತ್ತದೆ. ವಿನಯದ ಮೂಲಕ, ಸಜ್ಜನಿಕೆಯ ಮೂಲಕ, ಶಾಂತಿಯ ಮೂಲಕ ನಾವು ಗೆಲ್ಲುವುದಕ್ಕೆ ಹೋಗುತ್ತೇವೆ. ಅಂತಿಮ ಉದ್ದೇಶ ಮತ್ತೊಬ್ಬನನ್ನು ಗೆಲ್ಲುವುದು, ಮಟ್ಟ ಹಾಕುವುದು. ಗಾಂಧೀಜಿ ಅದನ್ನು ಅಹಿಂಸೆಯ ಮೂಲಕ ಮಾಡಿದರು. ಅವರ ಅಹಿಂಸೆಯ ವಿಧಾನಗಳನ್ನು ಹತ್ತಿರದಿಂದ ಗಮನಿಸಿದವರಿಗೆ ಅದು ಕೂಡ ಕ್ರೌರ್ಯವೇ ಅನ್ನಿಸೀತು.

ಮೊನ್ನೆಯ ಸುನಾಮಿ ಅಲೆಯ ಅಟ್ಟಹಾಸವನ್ನೇ ತೆಗೆದುಕೊಳ್ಳಿ. ಅದನ್ನು ಅನೇಕರು ಅನೇಕ ರೀತಿಯಲ್ಲಿ ವಿಶ್ಲೇಷಿಸಿದರು. ಹಾಗೆ ವಿಶ್ಲೇಷಿಸುವ ಹೊತ್ತಿಗೆ ನಾವು ನಮ್ಮದೇ ಆದ ಮಾನದಂಡದಿಂದ ಮಾತಾಡುತ್ತೇವೆ ಅನ್ನುವುದು ಇನ್ನೂ ಕುತೂಹಲಕಾರಿ. ವಿಜ್ಞಾನದ ಶಕ್ತಿಯನ್ನು ಆಗಾಗ ಇಂಥ ಘಟನೆಗಳು ಮರೆಯುವಂತೆ ಮಾಡುತ್ತವೆ ಕೂಡ.

The extent of destruction Tsunami has causedವಿಜ್ಞಾನವಾಗಲೀ ಜ್ಯೋತಿಷ್ಯವಾಗಲೀ ಈ ದುರಂತದ ಸುಳಿವು ಕೂಡ ಕೊಟ್ಟಿರಲಿಲ್ಲ. ಅಲ್ಲೆಲ್ಲೋ ಸಮುದ್ರದಾಳದಲ್ಲಿ ನೆಲ ಕಿಂಚಿತ್ತು ಕಂಪಿಸಿದ್ದು ನಮ್ಮನ್ನು ಹೀಗೆ ಅಪ್ಪಳಿಸುತ್ತದೆ ಅಂತ ಯಾವನಾರೂ ಜ್ಯೋತಿಷಿ ಹೇಳಿದ್ದರೆ ವಿಜ್ಞಾನಿಗಳು ನಕ್ಕುಬಿಡುತ್ತಿದ್ದರು. ವಿಜ್ಞಾನ ಹೇಳಿದ್ದರೆ ಜ್ಯೋತಿಷಿಗಳೂ ಒಪ್ಪುತ್ತಿರಲಿಲ್ಲ.

ದೇವರನ್ನು ತಿಳಿಯುವ ವಿಜ್ಞಾನವೇ ಜ್ಯೋತಿಷ್ಯ ಅನ್ನುವುದು ಪುರಾತನ ನಂಬಿಕೆ. ಯಾವುದು ನಮ್ಮ ಮಟ್ಟಿಗೆ ಅನ್‌ಪ್ರಿಡಿಕ್ಟಬಲ್‌- ಅನೂಹ್ಯ ಆಗಿರುತ್ತದೋ ಆ ಶಕ್ತಿಯ ಬಗ್ಗೆ ನಮಗೆ ಗೌರವ, ಭಯ ಮತ್ತು ಆದರ. ಅಂಥ ಅನೂಹ್ಯತೆಯನ್ನು ನಾವು ಕಳೆದುಕೊಳ್ಳುತ್ತಲೇ ಬಂದಿದ್ದೇವೆ. ಉದಾಹರಣೆಗೆ ಇವತ್ತು ಸಾವು ಕೂಡ ಅನೂಹ್ಯವಲ್ಲ. ಅಪಘಾತಗಳೇನೂ ಆ್ಯಕ್ಸಿಡೆಂಟುಗಳಲ್ಲ. ಇದ್ದಕ್ಕಿದ್ದ ಹಾಗೆ ವ್ಯಾಪಿಸಿಕೊಂಡು ಸಾಯಿಸುವ ಅಂಟುರೋಗಗಳು ಇವತ್ತು ಇಲ್ಲ. ಯುದ್ಧವಂತೂ ಬಹುತೇಕ ಮಾಯವಾಗಿದೆ. ಇವತ್ತು ಹಸಿವು ಮತ್ತು ಅನಾರೋಗ್ಯ ಅಷ್ಟು ಸಂಖ್ಯೆಯಲ್ಲಿ ಕೊಲ್ಲುತ್ತಿಲ್ಲ. ಹೀಗಾಗಿ ನಾವೆಲ್ಲ ತುಂಬ ಸುಭದ್ರರು ಅನ್ನುವ ನಂಬಿಕೆ ಮೊಳೆತುಬಿಟ್ಟಿದೆ.

ಸುಮ್ಮನೆ ಯೋಚಿಸಿ; ಬೆಂಗಳೂರಿನಲ್ಲಿ ಇರುವ ಬದಲು ಆವತ್ತು ಮದರಾಸಿನಲ್ಲಿ ಇರುತ್ತಿದ್ದರೆ? ಸಮುದ್ರ ನಮ್ಮನ್ನು ಕೂಡ ಅದರ ತೆಕ್ಕೆಯಾಳಗೆ ಸೆಳೆದುಕೊಂಡು ಬಿಡುತ್ತಿತ್ತು. ಒಂದು ಅಲೆ ಎಲ್ಲ ಅಲೆಮಾರಿತನವನ್ನೂ ನಿವಾರಿಸುತ್ತಿತ್ತು. ಆದರೆ ಬೆಂಗಳೂರಿನಲ್ಲಿ ಸಣ್ಣ ಕಂಪನವಾಗಿ, ಮಂಗಳೂರಿನ ಕಡಲ ತೀರದಲ್ಲಿ ಒಂದೇ ಒಂದು ಅಲೆಯಾಗಿ ಸಾವು ತನ್ನ ಸೂಚನೆಯನ್ನು ನೀಡಿದೆ ಅಷ್ಟೇ. ಆದರೆ ಸಾವಿಗಿಂತ ಬದುಕಿನ ಸಂಭ್ರಮ ದೊಡ್ಡದು.

ಕಡಲು ಅದೆಷ್ಟೇ ಕ್ರೂರವಾಗಿ ವರ್ತಿಸಿದರೂ ನಾಳೆ ಅದೇ ಬೆಸ್ತರು ದೋಣಿ ಹತ್ತಿಕೊಂಡು ಕಡಲಿಗೆ ಇಳಿಯುತ್ತಾರೆ. ಕಡಲ ತೀರದಲ್ಲಿ ಮತ್ತೆ ಪ್ರೇಮಿಗಳು ಸೂರ್ಯಾಸ್ತಕ್ಕಾಗಿ ಕಾಯುತ್ತಾರೆ. ಮರಳಲ್ಲಿ ಗುಬ್ಬಿಗೂಡು ಕಟ್ಟುತ್ತಾ ಚಿಳ್ಳೆಪಿಳ್ಳೆಗಳು ನಗುತ್ತವೆ. ಮತ್ತೊಂದು ಸುನಾಮಿ ಅಲೆ ಬರುವುದಿಲ್ಲ ಎಂಬ ಭರವಸೆಯನ್ನು ಬದುಕು ಕಟ್ಟಿಕೊಡುತ್ತದೆ.

***

ಭೂಕಂಪ ಮತ್ತು ಪ್ರವಾಹ ಹೇಗೆ ದೇವರ ಮಹಿಮೆಯನ್ನು ನೆನಪಿಸಿಕೊಳ್ಳುವುದಕ್ಕೆ ನೆಪ ಆಗಬಲ್ಲದು ಅನ್ನುವುದನ್ನೂ ಇಲ್ಲಿ ಹೇಳಬೇಕು. ಯಾವ ವಿಜ್ಞಾನಿಗಾದರೂ ಇದನ್ನು ಹೇಳುವುದು ಸಾಧ್ಯವಾಯಿತೇ? ಅನ್ನುವುದೀಗ ಎಲ್ಲರ ಮುಂದಿರುವ ಪ್ರಶ್ನೆ. ಯಾವ ಜ್ಯೋತಿಷಿಗೆ ಕೂಡ ಇದನ್ನು ಮುಂಗಾಣುವ ಶಕ್ತಿ ಇರಲಿಲ್ಲವಲ್ಲ ಅನ್ನುವುದು ಮತ್ತೊಂದು ಅನುಮಾನ. ಹೀಗಾಗಿ ವಿಜ್ಞಾನ ಮತ್ತು ಜ್ಯೋತಿಷ್ಯ ಎರಡೂ ಸಮಾನವಾಗಿ ಟೊಳ್ಳು ಅನ್ನುವುದು ಸಾಬೀತಾಗಿದೆ ಅಂತ ಒಬ್ಬರು ವಾದಿಸುತ್ತಾರೆ.

ಅವರ ಪ್ರಕಾರ ನಮ್ಮನ್ನು ಕಾಪಾಡುವುದು ನಮ್ಮ ಮನಸ್ಸು. ಅದೆಲ್ಲಿಗೋ ಹೊರಟು ನಿಂತಾಗ ಇದ್ದಕ್ಕಿದ್ದಂತೆ ಮನಸ್ಸಿಗೆ ಬೇಡ ಅನ್ನಿಸಿಬಿಡುತ್ತದಲ್ಲ, ಆಗ ಹೋಗದಿದ್ದರೆ ಬದುಕುತ್ತೇವೆ ಅನ್ನುವುದು ಕೆಲವರ ವಾದ. ಇದು ವಿಜ್ಞಾನ ಮತ್ತು ಜ್ಯೋತಿಷ್ಯಕ್ಕಿಂತಲೂ ಚಂಚಲವಾದ ಮನಸ್ಸನ್ನು ನಂಬು ಅಂತ ಹೇಳಿದಂತೆ. ಹಾಗೆ ಹೋಗದೆ ಉಳಿಯುವುದಕ್ಕೆ

ನೂರಾರು ಕಾರಣಗಳಿರಬಹುದು. ಮನಸ್ಸಿಗೆ ಹಾಗೆ ಅನ್ನಿಸುವುದಕ್ಕೂ ಕಾರಣಗಳು ಅನೇಕ ಇರಬಹುದು.

ಒಂದು ವೇಳೆ ಮನಸ್ಸು ಹೇಳಿದಂತೆ ಕೇಳು ಅನ್ನುವುದಾದರೂ ಮನಸ್ಸು Instinctive ಆಗಿ ಏನು ಹೇಳುತ್ತದೆ ಅಂತ ತಿಳಿಯುವುದಕ್ಕೇ ಸಾಧ್ಯವಾಗದೇ ಹೋಗಬಹುದು. ಈಗಿನ ಮನಸ್ಸುಗಳು ಎಷ್ಟು ಕರಪ್ಟ್‌ ಆಗಿವೆ ಎಂದರೆ ಯಾರಿಗೂ ಏನೂ ಅನ್ನಿಸುವುದೇ ಇಲ್ಲ. ಒಂದು ವೇಳೆ ಏನಾದರೂ ಅನ್ನಿಸಿದರೆ, ಏನು ಅನ್ನಿಸಬೇಕು ಅನ್ನುವ ಲೆಕ್ಕಾಚಾರದಿಂದ ಹುಟ್ಟಿದ ಅನಿಸಿಕೆ ಅದಾಗಿರುತ್ತದೆ.

ದುರಂತಗಳು ದೇವರ ಮೇಲಿನ ನಂಬಿಕೆಯನ್ನು ಹೆಚ್ಚಿಸಬೇಕೋ ಕಡಿಮೆ ಮಾಡಬೇಕೋ ಅನ್ನುವುದು ಅಷ್ಟು ದೊಡ್ಡ ಪ್ರಶ್ನೆಯೇನಲ್ಲ. ಆದರೆ ನಮ್ಮ ಕ್ಷಣಿಕತೆಯನ್ನು ಈ ದುರಂತಗಳು ತೋರಿಸಿಕೊಡುತ್ತವೆ. ಯಾರು ಕೂಡ ಶಾಶ್ವತ ಅಲ್ಲ ಅನ್ನುವ ಸತ್ಯವನ್ನು ಮತ್ತೆ ಮತ್ತೆ ಹೇಳುತ್ತಾ ಹೋಗುತ್ತವೆ. ಆದರೆ ಅಷ್ಟೊಂದು ಮಂದಿ ಕಣ್ಮುಂದೆ ಬದುಕಿಗೆ ಎರವಾಗಿದ್ದರ ಮೂಲಕ ಪಾಠ ಕಲಿಯಬೇಕಾದ ಅನಿವಾರ್ಯತೆ ಇದೆಯಾ? ಆ ಹಕ್ಕು ನಮಗಿದೆಯಾ? ಆ ಪಾಠ ಕಲಿಯುವುದಕ್ಕೆ ನಾವು ಬದುಕಿ ಉಳಿಯಬೇಕಾದರೂ ಯಾಕೆ? ಈ ಪ್ರಶ್ನೆಗಳು ಮತ್ತೆ ಮತ್ತೆ ಉದ್ಭವವಾಗುತ್ತವೆ. ಅವಕ್ಕೆ ಎಲ್ಲೂ ಉತ್ತರ ಸಿಗುವುದಿಲ್ಲ. ಸಿನಿಮಾಗಳಲ್ಲಿ ನಡೆಯುವಂತೆ ಯಾರೋ ಒಬ್ಬರು ಆತ್ಮಹತ್ಯೆ ಮಾಡಿಕೊಂಡು ಬದುಕಿರುವ ದುಷ್ಟನ ಮನಃ ಪರಿವರ್ತನೆಗೆ ಕಾರಣವಾಗುವ ಹುಂಬತನಕ್ಕೂ ದುರಂತಗಳು ನಮ್ಮನ್ನು ಮಾನವೀಯರನ್ನಾಗಿಸುತ್ತವೆ ಅನ್ನುವ ನಂಬಿಕೆಗೂ ಅಂಥ ದೊಡ್ಡ ವ್ಯತ್ಯಾಸ ಏನಿಲ್ಲ.

***

ಮೊನ್ನೆ ಒಬ್ಬರು ಹಿರಿಯರು ಒಂದು ವಾದ ಮುಂದಿಟ್ಟರು. ಜಗತ್ತಿನಲ್ಲಿರುವ ಅಸಂಖ್ಯ ಕೋಟಿ ಜನರಲ್ಲಿ ಒಬ್ಬರಿಂದ ಇನ್ನೊಬ್ಬರನ್ನು ಬೇರ್ಪಡಿಸುವುದು ಮುಖ ಚಹರೆ. ಒಂದು ಮುಖದಂತೆ ಇನ್ನೊಂದು ಮುಖ ಖಂಡಿತಾ ಇರುವುದಿಲ್ಲ. ಸತ್ತು ಬದುಕಿ ಹುಟ್ಟಿ ಆಗಿಹೋದ ಕೋಟ್ಯಂತರ ಮುಖಗಳನ್ನು ಮುಂದಿಟ್ಟುಕೊಂಡು ನೋಡಿದರೂ ಪ್ರತಿಯಾಂದು ಮುಖವೂ ಇನ್ನೊಂದಕ್ಕಿಂತ ಭಿನ್ನ. ಅಷ್ಟೊಂದು ತರಹೇವಾರಿ ಮುಖಗಳನ್ನು ತಯಾರಿಸುವುದು ಯಾವ ವಿಜ್ಞಾನಕ್ಕೆ ಸಾಧ್ಯ ಹೇಳಿ. ಯಾರದ್ದಾದರೂ ತಲೆ ಕತ್ತರಿಸಿ ಎಸೆದರೆ ದೇಹದಿಂದ ಗುರುತು ಹಿಡಿಯುವುದು ಸಾಧ್ಯವಿಲ್ಲವಷ್ಟೇ. ಅಂದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬನನ್ನು ಬೇರೆ ಮಾಡುವುದು ಅಂಗೈಯಗಲದ ಮುಖ ಮಾತ್ರ. ಇದು ಸಾಧ್ಯವಾದದ್ದು ಯಾವ ಶಕ್ತಿಯಿಂದ. ಅಂಗೈಯಗಲದಲ್ಲೇ ಕೋಟ್ಯಂತರ ಸಂಭಾವ್ಯತೆಗಳನ್ನು ಸಾಧಿಸುವುದು ವಿಜ್ಞಾನಕ್ಕೆ ಸಾಧ್ಯವಿದೆಯೇ?

ಅವರೇ ಮತ್ತೊಂದು ಪ್ರಶ್ನೆ ಮುಂದಿಟ್ಟರು; ನೀವು ಇಲ್ಲಿ ನಿಂತು ಅಮೆರಿಕಾದಲ್ಲಿರುವ ಯಾರಿಗೋ ಫೋನ್‌ ಮಾಡುತ್ತೀರಿ. ವೈರು, ಕೇಬಲ್ಲು ಏನೂ ಇಲ್ಲದೆ ನೀವು ಆಡಿದ ಮಾತು ಅವನನ್ನು, ಕೇವಲ ಅವನನ್ನು, ಮೊಬೈಲಿನ ಮೂಲಕ ತಲುಪುತ್ತದೆ. ಅಂದ ಮೇಲೆ ನಾನು ಇಲ್ಲಿ ನಿಂತು ಬೇಡಿಕೊಂಡದ್ದು ನನ್ನ ಇಷ್ಟದೈವವನ್ನು ಯಾಕೆ ತಲುಪಬಾರದು.

***

ಒಂದು ಸುನಾಮಿ ಅಲೆಯ ಹೊಡೆತ ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಜ್ಞಾನವನ್ನೂ ಜ್ಯೋತಿಷ್ಯವನ್ನೂ ಒಂದೇ ಕ್ಷಣದಲ್ಲಿ ತಳ್ಳಿಹಾಕಿದೆ. ನಾವು ಗೊಂದಲಗೊಂಡಿದ್ದೇವೆ. ಮನಸ್ಸು ಆ ದುರಂತದ ಛಾಯೆಯಲ್ಲಿ ನೀಲಿಗಟ್ಟಿದೆ.

ಬದುಕೆಂದರೆ ಇಷ್ಟೇನಾ? ಸೃಷ್ಟಿಯೆಂದರೆ ಇದೇನಾ?

ಡಿವಿಜಿ ಬರೆದ ಸಾಲುಗಳು ನೆನಪಾಗುತ್ತಿವೆ;

ಏನು ಪ್ರಪಂಚವಿದು। ಏನು ಧಾಳಾಧಾಳಿ।

ಏನದ್ಭುತಾಪಾರಶಕ್ತಿನಿರ್ಘಾತ-।।

ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?

ಏನರ್ಥವಿದಕೆಲ್ಲ?- ಮಂಕುತಿಮ್ಮ.

(ಸ್ನೇಹಸೇತು : ಹಾಯ್‌ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more