ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಗಿದ್ದರೆ ನಾನೇಕೆ ಓದಬೇಕು?

By Staff
|
Google Oneindia Kannada News
ನಾನೇಕೆ ಓದುತ್ತೇನೆ ?

ಈ ಪ್ರಶ್ನೆಗೆ ಇವತ್ತು ಉತ್ತರ ಹುಡುಕುವುದು ಕಷ್ಟ . ಕೇವಲ ಖುಷಿಗೋಸ್ಕರ ಓದುವುದಕ್ಕೆ ಇವತ್ತು ಯಾರಿಗೂ ಪುರುಸೊತ್ತಿಲ್ಲ. ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಅನ್ನುವುದನ್ನು ಯಾರೂ ನಂಬುವುದಿಲ್ಲ. ಓದುವುದರಿಂದ ಜೀವನಪ್ರೀತಿ ಹೆಚ್ಚಾಗುತ್ತದೆ ಎನ್ನುವವರು ಸಿಗುವುದಿಲ್ಲ. ಮನರಂಜನೆಗಾಗಿ ಬೇರೆ ಮಾಧ್ಯಮಗಳಿವೆ. ನಮಗೆ ಬೇಕಾದದ್ದು ಮಾಹಿತಿ ಮಾತ್ರ ಅನ್ನುವವರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಒಂದು ಜೀವನಚರಿತ್ರೆಯನ್ನೋ ಒಂದು ಕಾದಂಬರಿಯನ್ನೋ ಇಡಿಯಾಗಿ ಓದಿ ಸುಖಿಸುವ ಅಗತ್ಯ ಯಾರಿಗೂ ಕಂಡುಬರುತ್ತಿಲ್ಲ.

ಹಾಗೆ ಹೇಳಿದರೆ ಇದನ್ನು ಕೇವಲ ವಾದಕ್ಕಾಗಿ ಹೇಳಲಾಗುತ್ತಿದೆ ಎಂದು ವಾದಿಸುವವರಿದಿದ್ದಾರೆ. ಅಂಕಿ-ಅಂಶಗಳನ್ನು ಕೊಟ್ಟು ಇಂತಿಷ್ಟು ಮಂದಿ ಪುಸ್ತಕ ಓದೇ ಓದುತ್ತಾರೆ ಎಂದು ಹೇಳುವವರಿದ್ದಾರೆ. ಆದರೆ ಅಂಕಿ-ಅಂಶಗಳಿಗಿಂತ ಮುಖ್ಯವಾಗಿ ಗಮನಿಸಬೇಕಾದ ಅಂಶ ಇನ್ನೊಂದಿದೆ. ಅದು ಇವತ್ತಿನ ಓದುಗರಿಗೆ ಇಷ್ಟವಾಗುವ ಸಾಹಿತ್ಯ ಸೃಷ್ಟಿಯಾಗುತ್ತಿದೆಯೇ ಎನ್ನುವ ಪ್ರಶ್ನೆ.

ಕೆ. ಎಸ್‌. ನರಸಿಂಹಸ್ವಾಮಿ ತೀರಿಕೊಂಡಾಗ ಅವರ ಹಾಡುಗಳ ಮೂಲಕವೇ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವೊಂದು ನಡೆಯಿತು. ಅಲ್ಲಿಗೆ ಬಂದಿದ್ದವರೆಲ್ಲ ಮಧ್ಯವಯಸ್ಕರು; ಅವರನ್ನು ಕರೆತರಬೇಕಾದ ಅನಿವಾರ್ಯಕ್ಕೆ ಬಂದಿದ್ದ ಬೆರಳೆಣಿಕೆಯ ತರುಣ-ತರುಣಿಯರು. ಕೆ. ಎಸ್‌.ನ. ಮೂರು ತಲೆಮಾರಿನ ಜವ್ವನಿಗರನ್ನೂ ದಂಪತಿಗಳನ್ನೂ ಆಪ್ತವಾಗಿ ಆವರಿಸಿಕೊಂಡವರು. ಅವರು ಇವತ್ತಿನ ಏರುಜವ್ವನೆಯರಿಗೇಕೆ ಇಷ್ಟವಾಗುವುದಿಲ್ಲ ?

ನವತರುಣ-ತರುಣಿಯರ ಬಳಿ ಉತ್ತರ ಸಿದ್ಧವಾಗಿದೆ; ‘ಕೆಎಸ್‌ನ ನಿಮ್ಮ ಕಾಲಕ್ಕೇ ಸರಿ. ಅವರು ಬರೆದದ್ದನ್ನು ನಾವೂ ಓದಿ ಹತ್ತಿರವಾಗೋದಕ್ಕೆ ಯತ್ನಿಸಿದೆವು. ಆದರೆ ನಮಗ್ಯಾಕೋ ಅದು ರುಚಿಸಲೇ ಇಲ್ಲ. ತುಂಬ ಔಟ್‌ಡೇಟೆಡ್‌ ಕವಿ ಅವರು. ಅಂಥ ಸೂಕ್ಪ್ಮ ಸಂವೇದನೆಗಳು ಈಗ ಯಾರಲ್ಲೂ ಇಲ್ಲ.’

ಅಂದರೆ?

ತಾರುಣ್ಯದ ಸಂವೇದನೆಗಳೂ ಬದಲಾಗಿಹೋಗಿದ್ದಾವಾ?

‘ಹೌದು. ನಮ್ಮೂರ ಬಂಡಿಯಲಿ ನಿಮ್ಮೂರ ಬಿಟ್ಟಾಗ ಓಡಿದುದು ದಾರಿ ಬೇಗ’ ಅಂತ ಬರೆದಿದ್ದಾರೆ. ಈಗ ಬಂಡಿ ಎಲ್ಲಿದೆ? ಕಾರಲ್ಲಿ ಝಮ್ಮಂತ ಹೋಗಿ ಬರುತ್ತೇವೆ? ಬಸ್ಸಲ್ಲಿ ಚೆನ್ನಾಗಿ ನಿದ್ದೆ ಹೊಡೀತಾ ಊರಿಗೆ ಹೋಗುತ್ತೇವೆ’.

ಅದೆಲ್ಲ ಸರಿ. ಕಾರನ್ನೋ ಬಸ್ಸನ್ನೋ ಬಂಡಿ ಅಂದುಕೊಳ್ಳಬಹುದಲ್ಲ?

‘ಆದರೆ ಏರುತ ಇಳಿಯುತ ರಾಯರು ಬಂದರು ದೂರದ ಊರಿಂದ. ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ ಅಂದರೆ ನಮಗೆ ಹ್ಯಾಗೆ ಅರ್ಥವಾಗಬೇಕು? ಈಗ ಆಕೆ ಪೀರಿಯಡ್ಸ್‌ನಲ್ಲಿದ್ದರೂ ಜೊತೆಗೇ ಇರುತ್ತಾಳೆ. ನಮ್ಮ ಹತ್ತಿರವೇ ನ್ಯಾಪ್‌ಕಿನ್‌ ತರಿಸುತ್ತಾಳೆ.’

ಅದೆಲ್ಲ ನಿಮ್ಮಿಬ್ಬರ ನಡುವಿನ ಹೊಂದಾಣಿಕೆಗೆ ಸಂಬಂಧಿಸಿದ್ದು. ಆದರೆ ನರಸಿಂಹಸ್ವಾಮಿ ಬರೆದಂಥ ಮೃದುವಾದ ಭಾವನೆಗೆ ಅವಕಾಶವೇ ಇಲ್ಲ ಅಂತೀರಾ? ಯಾವತ್ತೂ ನಿಮಗೆ ಹಾಗೆಲ್ಲ ಅನ್ನಿಸಲೇ ಇಲ್ಲವೇ?

‘ಇಲ್ಲ. ಮೊದಲ ದಿನ ಮೌನ... ಅಳುವೇ ತುಟಿಗೆ ಬಂದಂತೆ.. ಅನ್ನುವ ಸಾಲು ನನಗೆ ಹೇಗೆ ಹೊಂದಬೇಕು? ನನ್ನ ಹತ್ತಿರ ಮೊಬೈಲಿದೆ. ಗಂಡನ ಮನೆಗೆ ಬಂದ ತಕ್ಷಣ ಫೋನ್‌ ಮಾಡಿ ಅಮ್ಮನ ಹತ್ತಿರ ಮಾತಾಡಿದೆ. ಮತ್ತೆರಡು ಸಾರಿ ತಂಗಿ ಫೋನ್‌ ಮಾಡಿದ್ಳು. ಸುಮ್ನೆ ತರಲೆ ಮಾಡ್ತಾಳೆ ಅಂತ ರಿಸೀವ್‌ ಮಾಡ್ಲಿಲ್ಲ. ತುಂಟ ಮೆಸೇಜ್‌ ಕಳಿಸಿದ್ದಾಳೆ’

‘ನಥಿಂಗ್‌ ಈಸ್‌ ಸೋ ಸೆಂಟಿಮೆಂಟಲ್‌. ಸುಮ್ನೆ ಹುಡುಗರು ಟೆನ್ಷನ್‌ ಮಾಡ್ಕೋತಾರೆ. ಹುಡುಗಿಯನ್ನು ತವರಿಗೆ ಕಳಿಸುವಾದ ಅಳೋದು ಕೇವಲ ಫಾರ್ಮಾಲಿಟಿ ಅಷ್ಟೇ. ಒಬ್ಬಳೇ ಮಗಳೆಂದು ನೀವೇಕೆ ಕೊರಗುವಿರಿ? ಒಬ್ಬಳೇ ಮಡದಿ ಎನಗೆ? ಹಬ್ಬದೂಟದ ನಡುವೆ ಕಣ್ಣೀರ ಸುರಿಸದಿರಿ, ಸುಮ್ಮನಿರಿ ಮಾವನವರೇ ಎಂಬ ಮಾತು ನಮಗಂತೂ ಹೊಂದೋಲ್ಲ ಬಿಡಿ’ ಅನ್ನುತ್ತಾರೆ ನವದಂಪತಿಗಳು.

ಅಲ್ಲಿಗೆ ಸಾಹಿತ್ಯ ತನ್ನ ಮಾಂತ್ರಿಕತೆ ಕಳಕೊಂಡಿದೆಯಾ? ಅಥವಾ ಕಳೆದ ಹತ್ತು ದಶಕಗಳಲ್ಲಿ ನಿಧಾನವಾಗಿ ಆದ ಬದಲಾವಣೆಯನ್ನು ಮೀರಿಸುವಂಥ ಬದಲಾವಣೆ ದಿಢೀರನೆ ಸಂಭವಿಸಿದೆಯಾ? ಅದನ್ನು ಹಿಡಿದಿಡುವ ಸಾಹಿತ್ಯ ನಮ್ಮಲ್ಲಿ ಸೃಷ್ಟಿಯಾಗುತ್ತಿಲ್ಲ ಅನ್ನೋಣವೇ? ಹಾಗಿದ್ದರೆ ಇದೇ ಹುಡುಗ-ಹುಡುಗಿಯರು ಮೆಚ್ಚಿ ಗುನುಗುನಿಸುವ ಇಂಗ್ಲಿಷ್‌ ಪಾಪ್‌ ಸಾಂಗುಗಳಲ್ಲಿ ಅಂಥ ಸಾಹಿತ್ಯ ಏನಿದೆ?

ಅದಕ್ಕೋಸ್ಕರವೇ ಒಂದು ಕೆಸೆಟ್‌ ತರಿಸಿ ಕಷ್ಟಪಟ್ಟು ಕೇಳಿದರೆ ಅದರಲ್ಲಿದ್ದದ್ದು ಇಷ್ಟೇ;

If I had to life without you near me
The days would all be empty
The nights would seem so long
Hold me now, touch me now I dont want to live without you
[Chorus] Nothings gonna change my love for you
You oughta know by now how much I love you
One thing you can be sure of
Ill never ask for more than your love
Nothings gonna change my love for you
You oughta know by now how much I love you

ಈ ಸರಳ ಸಾಲುಗಳೇ ಇವತ್ತಿನ ಇಂಗ್ಲಿಷ್‌ ಬಲ್ಲ ತರುಣ-ತರುಣಿಯರ ಪ್ರೇಮಗೀತೆ. ಇದಕ್ಕಿಂತ ಸಾವಿರ ಪಾಲು ಉತ್ತಮವಾದ ಹಾಡನ್ನು ನರಸಿಂಹಸ್ವಾಮಿ, ಬೇಂದ್ರೆ, ಕುವೆಂಪು ಬರೆದಿದ್ದಾರೆ ಅಂದರೆ ಒಪ್ಪುವುದಕ್ಕೆ ಹುಡುಗರು ತಯಾರಿಲ್ಲ. ಅವರೆಲ್ಲ ಬರೆದಿರಬಹುದು, ಅದರೆ ಅದನ್ನು ನಮಗೆ ಬೇಕಾದ ಫಾರ್ಮ್‌ನಲ್ಲಿ ಪ್ರೆಸೆಂಟ್‌ ಮಾಡುವುದೂ ಮುಖ್ಯ. ಜಾರ್ಜ್‌ ಬೆನ್ಸನ್‌ನ ಹಾಡು ಕೇಳುತ್ತಿದ್ದರೆ ನನಗದು ಪೂರ್ತಿಯಾಗಿ ಅರ್ಥವಾಗುತ್ತದೆ. ಅದು ನನ್ನ ಭಾಷೆಯಲ್ಲಿದೆ ಎನ್ನುತ್ತಾರೆ ಯೌವನಿಗರು.

ಅದನ್ನೂ ತಳ್ಳಿಹಾಕುವಂತಿಲ್ಲ. ಈಗ ಸ್ನೇಹ ಮತ್ತು ಪ್ರೀತಿ ದೇಶಭಾಷೆಗಳ ಎಲ್ಲೆ ದಾಟಿದೆ. ಜಾತಿಯ ಹಂಗನ್ನು ಮೀರಿದೆ. ಹೀಗಾಗಿ ಸಾರ್ವತ್ರಿಕವಾದ ಒಂದು ಭಾಷೆ ಪ್ರೇಮಿಗಳಿಗೆ ಬೇಕಾಗಿದೆ. ಕನ್ನಡದಲ್ಲಿ ಪ್ರೇಮಿಸಲಿಕ್ಕೆ ಹೊರಡುವ ಹುಡುಗ ತನ್ನ ಮಿತಿಯಾಳಗೇ ಇರಬೇಕಾಗುತ್ತದೆ. ಕನ್ನಡದ ಹುಡುಗ ಪಂಜಾಬಿನ ಹುಡುಗಿಯನ್ನು ಪ್ರೀತಿಸಿದರೆ ಇಬ್ಬರಿಗೂ ಅರ್ಥವಾಗುವ ಒಂದು ಭಾಷೆಯಲ್ಲಿ ಅನುಸಂಧಾನ ಬೇಕಾಗುತ್ತದೆ. ನಮ್ಮ ಶಿಕ್ಷಣ ಆ ಇಬ್ಬರಿಗೂ ಅನುಕೂಲವಾಗುವ ಇಂಗ್ಲಿಷನ್ನು ಕೊಟ್ಟುಬಿಟ್ಟಿದೆ. ಅಲ್ಲಿಗೆ ಪಂಜಾಬಿಯೂ ಸಾಯುತ್ತದೆ; ಕನ್ನಡವೂ ಸಾಯುತ್ತದೆ. ಅವರಿಬ್ಬರೂ ಇಂಗ್ಲಿಷಲ್ಲಿ ಮಾತಾಡುತ್ತಾರೆ. ಮಕ್ಕಳು ಅರ್ಧ ಪಂಜಾಬಿ, ಅರ್ಧ ಇಂಗ್ಲಿಷ್‌ ಕಲಿಯುತ್ತವೆ. ಆದರೆ ಇಂಗ್ಲಿಷ್‌ ಮಾತನಾಡುತ್ತವೆ.

ಇದನ್ನೆಲ್ಲ ಮೀರಿಯೂ ಕನ್ನಡ ಬದುಕುವಂತೆ ಮಾಡುವುದು ಹೇಗೆ? ಕನ್ನಡದಲ್ಲಿ ಅರ್ಥಪೂರ್ಣ ಸಾಹಿತ್ಯ ಬಂದಿದೆ, ಬರುತ್ತಿದೆ ಎಂದು ನಂಬಿಸುವುದು ಹೇಗೆ? ಪ್ರೇಮಕ್ಕಿಂತ ಭಾಷೆ ದೊಡ್ಡದು ಎಂದು ಒಪ್ಪಿಸುವ ಶಕ್ತಿ ಯಾರಿಗಿದೆ?

ಈ ಹಿನ್ನೆಲೆಯಲ್ಲಿ ‘ನಾನೇಕೆ ಓದುತ್ತೇನೆ’ ಎಂಬ ಪ್ರಶ್ನೆಗೆ ಅರ್ಥ ಬರುತ್ತದೆ. ಒಬ್ಬ ಕನ್ನಡದ ಬರಹಗಾರ ಓದುವುದನ್ನು ಬರೆಯುವುದನ್ನು ಇವತ್ತು ಮತ್ತೊಬ್ಬ ಓದುತ್ತಾನೆ ಅನ್ನುವ ನಂಬಿಕೆಯಿಲ್ಲ. ಹೀಗಾಗಿ ಒಬ್ಬನೇ ಸಾಹಿತಿಯನ್ನು ಓದುವ ಇಬ್ಬರು ಮುಖಾಮುಖಿಯಾಗುವುದಿಲ್ಲ. ಯಾಕೆಂದರೆ ಎಂಥ ಶ್ರೇಷ್ಠ ಕೃತಿಯೇ ಆದರೂ ಸಾವಿರ ಪ್ರತಿ ಖರ್ಚಾಗುವ ಹೊತ್ತಿಗೆ ಏದುಸಿರುಬಿಡುತ್ತದೆ. ಐದು ಕೋಟಿ ಕನ್ನಡಿಗರ ಪೈಕಿ ಒಂದು ಕಾದಂಬರಿಯನ್ನು ಕೇವಲ ಒಂದು ಸಾವಿರ ಮಂದಿ ಓದುತ್ತಾರೆ. ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ .002 ಮಂದಿಗೆ ಮಾತ್ರ ಸಾಹಿತ್ಯ ಬೇಕು!

ಹಾಗಿದ್ದರೆ ನಾನೇಕೆ ಓದಬೇಕು?

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X