ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುವುದಕ್ಕಿಂತ ಮಿಗಿಲಾದ ಸುಖ ಮತ್ತೊಂದಿಲ್ಲ ಎಂದು ವಾದಿಸುತ್ತಾ...

By Staff
|
Google Oneindia Kannada News
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೆ।।
ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?।

ಈ ಎರಡು ಸಾಲುಗಳನ್ನಿಟ್ಟುಕೊಂಡು ಅರ್ಧಜೀವಮಾನ ಕಳೆಯಬಹುದು ಅಂತ ನಿಮಗೆ ಯಾವತ್ತಾದರೂ ಅನ್ನಿಸಿದೆಯಾ? ಚಂದ್ರನಲಿ ಚಿತ್ರಿಸಿದ ಚೆಲುವಿನ ಒಳಗುಡಿಯಿಂದ ಗಂಗೆ ಬಂದದ್ದು ಎಲ್ಲಿಗೆ? ಇದ್ದ ಕಡೆಗೇನೆ ಅನ್ನುವುದಾದರೆ ಆಕೆ ಇದ್ದ ಕಡೆ ಯಾವುದು? ಆಕೆ ಹೋಗಿದ್ದಾದರೂ ಎಲ್ಲಿಗೆ? ನಿನ್ನೊಲುಮೆಯಿಂದಲೇ ಬಾಳು ಬೆಳಕಾಗುವುದಕ್ಕೂ ಗಂಗೆ ಇದ್ದ ಕಡೆಗೇ ಬರುವುದಕ್ಕೂ ಏನು ಸಂಬಂಧ?

ಇದು ಅರ್ಥವಾಗದೇ ಉಳಿದಾಗಲೇ ಚೆಂದ. ಬೇಕಿದ್ದರೆ ನೋಡಿ, ನಿಮಗೆ ಎಂದಾದರೂ ಇದು ಅರ್ಥವಾಗಲಿಲ್ಲ ಎಂಬ ಕೊರಗು ಕಾಡಿದೆಯಾ? ಅರ್ಥ ಮಾಡಿಕೊಳ್ಳಬೇಕು ಅನ್ನಿಸಿದೆಯಾ? ಅರ್ಥವಾಗದಿದ್ದಾಗಲೇ ಅದು ಎಷ್ಟೊಂದು ಅರ್ಥಗಳನ್ನು ಹೊರಡಿಸುತ್ತದಲ್ಲ?

Reading for life and Loving itಇದೊಂದೇ ಅಲ್ಲ. ಕಣ್ಣಿಗೆ ನಿಲುಕದ ಜಗತ್ತೊಂದು ಪ್ರತಿಯಾಬ್ಬರೊಳಗೂ ಇರುತ್ತದೆ. ಅದನ್ನು ಪ್ರತಿಯಾಬ್ಬರೂ ತಮ್ಮ ತಮ್ಮ ಕಲ್ಪನೆಯಲ್ಲಿ ಕಾಣುತ್ತಿರುತ್ತಾರೆ. ಆ ಜಗತ್ತನ್ನು ಕಣ್ಣಾರೆ ಕಾಣಲು ಯತ್ನಿಸಿದ ತಕ್ಷಣವೇ ನಿರಾಸೆಯಾಗುತ್ತದೆ. ನಮ್ಮ ಕಲ್ಪನೆಯ ಲೋಕ ಎಷ್ಟೊಂದು ಸಮೃದ್ಧ ಮತ್ತು ಅದನ್ನು ನಮಗೆ ತೋರಿಸಿದವನ ಬದುಕು ಎಷ್ಟೊಂದು ನಿಸ್ಸಾರ ಅನ್ನಿಸಿ ಬೇಸರವಾಗುತ್ತದೆ.

ಫೋಟೊಗ್ರಫಿಗೂ ಚಿತ್ರಕಲೆಗೂ ಇರುವ ವ್ಯತ್ಯಾಸವೇ ಅದು. ಫೊಟೋಗ್ರಫಿ ಇದ್ದದ್ದನ್ನು ಇದ್ದಹಾಗೆ ತೋರಿಸುತ್ತದೆ. ಅದಕ್ಕೆ ಮನಸ್ಸಿನ ಅಗತ್ಯಗಳು ಗೊತ್ತಿಲ್ಲ. ನಿಗೂಢಗಳು ಗೊತ್ತಿಲ್ಲ. ಕಲ್ಪನೆಯ ಲವಲೇಶವೂ ಇಲ್ಲ. ಅದು ಕಂಡಿದ್ದನ್ನೆಲ್ಲ ಪಂಚನಾಮೆ ವರದಿಯ ಹಾಗೆ ಯಥಾವತ್ತಾಗಿ ದಾಖಲಿಸುತ್ತದೆ. ಆದರೆ, ಪೇಟಿಂಗ್‌ ಹಾಗಲ್ಲ. ಒಬ್ಬ ಕಲಾವಿದ ನೋಡುವ ಮರ, ಅವನ ಅನುಭವ, ಯಾತನೆ, ಸುಖ, ಸಂಕಟಗಳನ್ನು ಹಾದು ಕೃತಿಯಾಗಿ ಪಡಿಮೂಡುತ್ತದೆ. ಆದ್ದರಿಂದ ಕಲಾಕೃತಿ ರಕ್ತಮಾಂಸಗಳನ್ನು ತುಂಬಿಕೊಂಡು ನಳನಳಿಸಿದರೆ, ಫೊಟೋ ನೆರಳುಬೆಳಕಿನ ಆಟಕ್ಕಿಂತ ಎತ್ತರಕ್ಕೇರುವುದಕ್ಕೆ ನಿರಾಕರಿಸುತ್ತದೆ.

ಅಕ್ಷರದ ವಿಚಾರದಲ್ಲೂ ಇದು ನಿಜ:

ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ।
ಸರ್ಪಮಂದಿರವಂತೆ ಕಂಪಿನೊಡಲು
ಮಧುರ ವೀಣಾಗಾನ ನಿರ್ಮಿಸುವ ನಾಕದಲೆ
ರಾಗಗಳ ಸಿಂಚಿಸುವ ಬಹುದು ಸಿಡಿಲು

ಈ ಚಿತ್ರವನ್ನು ಕೆಮರಾದಲ್ಲಿ ಸೆರೆಹಿಡಿಯಿರಿ ನೋಡೋಣ. ಕೇತಕಿಯ ಬನ ಎಂದಾಗ ಮೂಡುವ ಕಲ್ಪನೆಯನ್ನು ತೋರಿಸುವುದು ಸಾಧ್ಯವೇ ಇಲ್ಲ ಬಿಡಿ. ಒಂದು ವೇಳೆ ತೋರಿಸಿದರೂ ಅದು ಪರಿಮಳಭರಿತವಾಗಿ ನಮ್ಮನ್ನು ತಟ್ಟಲಾರದು. ಸರ್ಪಮಂದಿರವಂತೆ ಕಂಪಿನೊಡಲು ಎಂದು ಎರಡು ಚಿತ್ರಗಳನ್ನು ಬೆಸೆಯುವುದಕ್ಕೆ ಯಾವ ದೃಶ್ಯಮಾಧ್ಯಮಕ್ಕೆ ಶಕ್ತಿಯಿದೆ ಹೇಳಿ? ಕೇತಕಿಯ ಬನಗಳಲ್ಲಿ ಓಡಾಡುತ್ತಿರುವ, ಎಣೆಯಾಡುತ್ತಿರುವ ಸರ್ಪಗಳನ್ನು ಕೂಡ ತೋರಿಸಬಹುದು ಅಂತಿಟ್ಟುಕೊಳ್ಳೋಣ. ಆದರೆ ಆ ಸರ್ಪಮಂದಿರ ಕಂಪಿನೊಡಲು ಅನ್ನುವುದನ್ನು ಹೇಗೆ ಹೇಳುತ್ತೀರಿ ದೃಶ್ಯಮಾಧ್ಯಮದಲ್ಲಿ?

ಇನ್ನು ಮಧುರ ವೀಣಾನಾದ ಅನ್ನುವ ಸಾಲು. ಇಲ್ಲಿ ವೀಣಾನಾದ ಮಧುರ ಅಂತ ಕವಿ ಹೇಳಿದ್ದಾಗಿದೆ. ಹೀಗಾಗಿ ವೀಣೆಯನ್ನು ನೋಡದವನಿಗೂ ಅದರ ನಾದವನ್ನು ಕೇಳದವನಿಗೂ ಮಾಧುರ್ಯದ ಕಲ್ಪನೆಯಂತೂ ಬರುತ್ತದೆ. ಅದೇ ಒಬ್ಬ ಸುಂದರಿಯ ಕೈಯಲ್ಲಿ ವೀಣೆಯನ್ನು ಕೊಟ್ಟು ಹಿನ್ನೆಲೆಯಲ್ಲಿ ವೀಣಾನಾದ ಕೇಳಿಸಿನೋಡಿ. ವೀಣಾನಾದ ಇದೇನಾ ಅನ್ನುವ ನಿರಾಶೆ ಕೆಲವರನ್ನಾದರೂ ಕಾಡುತ್ತದೆ. ಹಾಗೆ ತೋರಿಸಿದಾಗ ಹಲವರಿಗೆ ಆ ಸುಂದರಿ ಇಷ್ಟವಾಗದೇ ಹೋಗಬಹುದು. ಕೆಲವರಿಗೆ ವೀಣೆಯಲ್ಲಿ ಕೇಳಿಬಂದ ರಾಗ ರುಚಿಸದೇ ಹೋಗಬಹುದು. ಮತ್ತೆ ಕೆಲವರಿಗೆ ವೀಣೆಯ ದನಿಗಿಂತ ಕೊಳಲೇ ವಾಸಿ ಅನ್ನಿಸಬಹುದು. ಆದರೆ ಓದುತ್ತಾ ಹೋದಾಗ ಅಂಥ ಯಾವ ತೊಂದರೆಗಳೂ ಇಲ್ಲ.

ನರಸಿಂಹಸ್ವಾಮಿಯವರ ಯಾವುದೇ ಕವಿತೆಗಳನ್ನು ತೆಗೆದುಕೊಳ್ಳಿ. ಅಲ್ಲಿ ಬರುವ ಚಿತ್ರಗಳೆಲ್ಲ ನಮ್ಮ ಒಬ್ಬೊಬ್ಬರ ಕಣ್ಮುಂದೆ ಒಂದೊಂದು ರೂಪದಲ್ಲಿ ಪ್ರತ್ಯಕ್ಷವಾಗುತ್ತವೆ. ಹೀಗಾಗಿ ಪ್ರತಿಯಾಬ್ಬರನ್ನೂ ಅವರವರ ಅನುಭವದ ನೆಲೆಯಲ್ಲೇ ತಾಕುತ್ತವೆ;

ಹೂ ಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು

ಎನ್ನುವುದನ್ನು ಒಬ್ಬೊಬ್ಬರು ಓದಿದಾಗಲೂ ಒಬ್ಬೊಬ್ಬರ ಮನಸ್ಸಿನಲ್ಲೊಂದು ಹೂಬನ ಮೂಡುತ್ತದೆ. ಒಬ್ಬೊಬ್ಬರ ಮನಸ್ಸಿನೊಳಗೊಂದು ನವಿಲು ನರ್ತಿಸುತ್ತದೆ. ಒಬ್ಬೊಬ್ಬರ ಕಿವಿಗೊಂದು ನರ್ತಿಸುವ ನವಿಲಿನ ದನಿ ಕೇಳಿಸುತ್ತದೆ. ಪ್ರತಿಯಾಬ್ಬರ ಹೊಂದಾಳೆಯೂ ಬೇರೆ, ಪರಿಮಳವೂ ಬೇರೆ, ಆ ಪರಿಮಳ ಉಯ್ಯಾಲೆಯಾಗುವ ರೀತಿಯೇ ಬೇರೆ. ಅದೇ ‘ಮೈಸೂರು ಮಲ್ಲಿಗೆ’ ಸಿನಿಮಾದಲ್ಲಿ ಸಾಕಾರಗೊಂಡಾಗ ನಮ್ಮೆಲ್ಲ ಕಲ್ಪನೆಗಳೂ ಗೂಟ ಬಡಿದು, ಸುಧಾರಾಣಿಯ ಮುಖವಾಗಿ ರೂಪುತಳೆಯುತ್ತದೆ. ಕ್ರಮೇಣ ಸುಧಾರಾಣಿ ಮದುವೆಯಾಗುತ್ತಾರೆ, ಮತ್ತೊಂದು ಮದುವೆಯಾಗುತ್ತಾರೆ. ಆಕೆಗೆ ಮಕ್ಕಳಾಗುತ್ತದೆ. ದಿನನಿತ್ಯ ತುಳಸಿಯಲ್ಲೋ ಮತ್ತೊಂದು ಸೀರಿಯಲ್ಲಲ್ಲೋ ಪ್ರತ್ಯಕ್ಷವಾಗಿ ಕಾಡುತ್ತಾರೆ. ಕೆಎಸ್‌ನ ಕವಿತೆ ಓದಿ ಸೃಷ್ಟಿಸಿಕೊಂಡ ಕಾವ್ಯರೂಪಕದ ಸುಂದರಿ ಮರೆಯಾಗಿ ಕೊನೆಗೆ ಉಳಿಯುವುದು ನಾವಿಷ್ಟಪಡದ ಮುಖ ಮಾತ್ರ.

ಅದಕ್ಕೇ ಕಲಾಕೃತಿಗಳನ್ನು ಓದಬೇಕೇ ವಿನಾ, ನೋಡಬಾರದು! ನೋಡಿದ್ದು ಸಾಯುತ್ತದೆ. ಓದಿದ್ದು ಬೆಳೆಯುತ್ತಾ ಹೋಗುತ್ತದೆ.

***

ಓದೇ ಶ್ರೇಷ್ಠ ಮತ್ತು ಜೀವಕ್ಕೆ ಅತ್ಯಂತ ಹತ್ತಿರ ಅನ್ನುವುದನ್ನು ಬಹುಶಃ ಎಲ್ಲರೂ ಒಪ್ಪುತ್ತಾರೆ. ಅದರ ಬದಲು ಎಲ್ಲವನ್ನೂ ನೋಡುತ್ತಾ ನೋಡುತ್ತಾ ನಾವು ಸವಕಲಾಗುತ್ತಾ ಹೋಗುತ್ತೇವೆ. ಆಡಬಾರದ ಮಾತುಗಳನ್ನೆಲ್ಲ ಆಡಿಸುವ ಟೀವಿ ಕಣ್ಣಮುಂದಿದೆ. ಒಂದಿರುಳು ಕನಸಿನಲಿ ಕೇಳಬೇಕಾದ ಪ್ರಶ್ನೆಯನ್ನು ಹಾಡಹಗಲೇ ಕೇಳಿ ಹಾಳುಮಾಡುವುದು ಸೀರಿಯಲ್ಲುಗಳಿಗಷ್ಟೇ ಸಾಧ್ಯ. ತುಟಿಯಲೇನೋ ನಿಂದು ಕಣ್ಣಲೇನೋ ಬಂದು ಕೆನ್ನೆ ಕೆಂಪಾದುದಾಗ ಅನ್ನುವ ಅದ್ಭುತವಾದ ಚಿತ್ರಣ ತುಟಿಯಲ್ಲಿ ‘ನೀವಿಲ್ಲದೆ ಒಂದು ಕ್ಷಣ ಬದುಕಿರೋಕ್ಕಾಗಲ್ಲಾರೀ’ ಎಂಬ ಸವಕಲು ಮಾತಾಗಿ, ಕಣ್ಣಲ್ಲಿ ಗ್ಲಿಸರಿನ್‌ ನೀರಾಗಿ, ಕೆನ್ನೆಗೆ ಕೆಟ್ಟ ಬಣ್ಣವಾಗಿ ರೂಪಾಂತರ ಹೊಂದಿ ನಶಿಸಿಹೋಗುವುದನ್ನು ನಾವು ಯಾಕಾದರೂ ನೋಡಬೇಕು.

ನಾವು ಲೆಕ್ಕಾಚಾರದ ಜಗತ್ತನ್ನು ಕಣ್ಣಿಂದ ನೋಡೋಣ, ಭಾವನೆಯ ಜಗತ್ತನ್ನು ಒಳಗಣ್ಣಿಂದ ನೋಡೋಣ. ಅಲ್ಲಿ ಮೂಡುವ ಚಿತ್ರಗಳು ನಮ್ಮವೇ ಆಗಿರಲಿ. ನಮ್ಮ ಆತ್ಮೀಯರೇ ಅಲ್ಲಿ ಅಡ್ಡಾಡಲಿ.

ಮನದ ಮಾಮರದ ಕೊನಿಗೆ ಕೂತ ಕೋಗಿಲೆ ಅಲ್ಲಿ ನಿರಂತರ ಹಾಡುತಿರಲಿ!

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X