• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಞಾಪಕ ಚಿತ್ರಶಾಲೆಯಲ್ಲಿ ಹಳೆಪಳೆಯ ಮುಖಗಳು

By Staff
|
 • ಜಾನಕಿ
 • ಬರೆವಣಿಗೆಯಲ್ಲಿ ಎರಡು ಥರ; ಆಹಾ ಎಷ್ಟು ಚೆನ್ನಾಗಿದೆ ಕವಿತೆ. ಸೊಗಸಾಗಿದೆ ಕತೆ ಅನಿಸುವಂತೆ ಬರೆಯುವುದು ಒಂದು. ಆಹಾ ಎಷ್ಟು ಚೆನ್ನಾಗಿ ಬರೆದಿದ್ದಾನೆ ಅನ್ನಿಸುವುದು ಮತ್ತೊಂದು. ಆಹಾ ಎಷ್ಟು ಚೆನ್ನಾಗಿದೆ ಕವಿತೆ ಅನ್ನಿಸಿದರೆ ಕವಿತೆ ಗೆಲ್ಲುತ್ತದೆ, ಕವಿಯೂ ಗೆಲ್ಲುತ್ತಾನೆ. ಆಹಾ ಎಷ್ಟು ಚೆನ್ನಾಗಿ ಬರೆದಿದ್ದಾನೆ ಅನ್ನಿಸಿದಾಗ ಕವಿತೆ ಸೋಲುತ್ತದೆ, ಆ ಕ್ಷಣಕ್ಕೆ ಕವಿ ಗೆಲ್ಲುತ್ತಾನೆ.

  ಒಬ್ಬ ಬರಹಗಾರನ ಕಷ್ಟ ಇದೇ. ಆತ ಬರಹದ ಮೇಲೆ ತನ್ನ ನೆರಳು ಕೂಡ ಸುಳಿಯದಂತೆ ಬರೆಯಬೇಕಾಗುತ್ತದೆ. ತನ್ನ ಅನುಭವದ ಭಾರ ಕೃತಿಯನ್ನು ಜಗ್ಗದಂತೆ ನೋಡಿಕೊಳ್ಳಬೇಕಾಗುತ್ತದೆ. ಆ ಕಾರಣಕ್ಕೇ ಅನುಭವದಿಂದ ಒಳ್ಳೆಯ ಕೃತಿ ಬರುತ್ತದೆ ಅನ್ನುವುದು ಸುಳ್ಳು. ಅನುಭವದಿಂದಲೇ ಅನೇಕ ಬಾರಿ ಬರಹ ಸೋಲುವುದುಂಟು.

  ಹಾಗೇ, ಒಬ್ಬ ಲೇಖಕ ತನ್ನ ಛಾಪು ಮೂಡುವಂತೆ ಬರೆಯುವುದೂ ಅಷ್ಟು ಒಳ್ಳೆಯದಲ್ಲ. ನನ್ನ ಶೈಲಿಯಿಂದಲೇ ಅದು ನನ್ನ ಬರಹ ಎಂದು ಓದುಗರು ಗುರುತಿಸುತ್ತಾರೆ ಎಂದು ಕೆಲವರು ತುಂಬ ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು. ಆದರೆ ಹಾಗೆ ಶೈಲಿಯಿಂದ ಗುರುತಿಸಿಕೊಳ್ಳುವುದೂ ಕೂಡ ಅಷ್ಟೇ ಕೆಟ್ಟದ್ದು. ಶೈಲಿಯಿಂದ ಗುರುತಿಸಿಕೊಳ್ಳುವ ಲೇಖಕ, ಕ್ರಮೇಣ ಚಿಂತನಾಕ್ರಮದಿಂದ, ವಿಚಾರಧಾರೆಯಿಂದ, ಮಂಡನಾವಿಧಾನದಿಂದ ಕೂಡ ಗುರುತಿಸಿಕೊಳ್ಳುತ್ತಾನೆ. ಬರಬರುತ್ತಾ ಆ ಶೈಲಿಯೇ ರಾಜಕೀಯ ಪಕ್ಷದ ಗುರುತಿನಂತೆ ಕಾಣಿಸತೊಡಗುತ್ತದೆ. ಒಬ್ಬ ಗಾಯಕನನ್ನು ದನಿಯ ಮೂಲಕ ಗುರುತು ಹಿಡಿದರೆ ಅದು ಸರಿ, ರಾಗದ ಮೂಲಕ ಗುರುತು ಹಿಡಿದರೆ? ಅದು ಆ ಗಾಯಕನ ಮಿತಿ. ಲೇಖಕನ ವಿಚಾರದಲ್ಲೂ ಹಾಗೆ.

  ಉದಾಹರಣೆಗೆ ಯಶವಂತ ಚಿತ್ತಾಲರು. ಅವರ ಕತೆಯನ್ನು ಮೂರು ಪುಟ ಓದುವುದರೊಳಗೆ ನಿಮಗೆ ಇದು ಚಿತ್ತಾಲರ ಬರವಣಿಗೆ ಎನ್ನುವುದು ಗೊತ್ತಾಗಿಬಿಡುತ್ತದೆ. ಅವರು ಶೈಲಿಯಲ್ಲಿ ವಿವರಗಳಲ್ಲಿ ಮತ್ತು ಒಮ್ಮೊಮ್ಮೆ ಭಾವುಕತೆಯಲ್ಲೂ ಅದೇ ಚಿತ್ತಾಲರಾಗಿ ಉಳಿಯುತ್ತಾರೆ. ಕಂಬಾರರು ತಮ್ಮ ಭಾಷೆಯ ಬಳಕೆಯಿಂದ ಗುರುತಾದರೆ ಚಿತ್ತಾಲರು ಗುರುತಾಗುವುದು ಭಾವದಿಂದ. ಅದೇ ಕಾರಣಕ್ಕೆ ಅವರ ನಂತರದ ಕಾದಂಬರಿಗಳನ್ನು ಓದುವುದು ಕಷ್ಟ . ಅದೇ ಬೀದಿಯಲ್ಲಿ ಅವರು ಸುತ್ತಾಡುತ್ತಿರುವಂತೆ ಭಾಸವಾಗುತ್ತದೆ.

  ಇದಕ್ಕೆ ತದ್ವಿರುದ್ಧವಾದ ಉದಾಹರಣೆ ಡಿವಿಜಿಯವರದ್ದು. ಅವರು ಬರೆದ ಕೃತಿಗಳನ್ನೆಲ್ಲ ಒಂದೊಂದಾಗಿ ನೋಡುತ್ತಾ ಬನ್ನಿ. ಬಾಳಿಗೊಂದು ನಂಬಿಕೆಯನ್ನು ಬರೆದ ಡಿವಿಜಿಯವರೇ ಅನ್ತಃಪುರಗೀತವನ್ನೂ ಬರೆದಿದ್ದಾರೆ. ಎರಡನ್ನೂ ಪ್ರತ್ಯೇಕವಾಗಿ ಓದಿದರೆ ಅವನ್ನು ಒಬ್ಬನೇ ವ್ಯಕ್ತಿ ಬರೆದಿದ್ದಾನೆ ಅಂತ ಊಹಿಸುವುದೂ ಕಷ್ಟ . ಮಹಾಚುನಾವಣೆಯಂಥ ಕೃತಿಯ ಜೊತೆಗೇ ಉಮರನ ಒಸಗೆಯಿದೆ. ಸಂಸ್ಕೃತಿಯ ಕುರಿತಾದ ಕೃತಿಯಾಂದಿಗೇ ವಿದ್ಯಾರಣ್ಯ ವಿಜಯವಿದೆ. ಇವೆಲ್ಲಕ್ಕೂ ಕಳಸವಿಟ್ಟಂತೆ ‘ಮಂಕುತಿಮ್ಮನ ಕಗ್ಗ’ವಿದೆ.

  ಇವೆಲ್ಲಕ್ಕಿಂತ ಕುತೂಹಲ ಹುಟ್ಟಿಸುವುದು ಡಿವಿಜಿಯವರು ಬರೆದ ವ್ಯಕ್ತಿಚಿತ್ರಗಳು. ನಾವು ಭೇಟಿಯಾದ, ಮಾತಾಡಿದ, ನಮ್ಮ ಸಂಸರ್ಗಕ್ಕೆ ಬಂದ ವ್ಯಕ್ತಿಯನ್ನು ನಾವು ಏಕಾಂತದಲ್ಲಿ ನೆನಪಿಸಿಕೊಳ್ಳುತ್ತೇವಲ್ಲ , ಅಂಥ ಬರಹಗಳು ಅವು. ಅದು ಹೊಗಳಿಕೆಯಲ್ಲ , ಟೀಕೆಯಲ್ಲ , ಟಿಪ್ಪಣಿಯೂ ಅಲ್ಲ. ಗೆಳೆಯನ ಬಗ್ಗೆ ಮತ್ತೊಬ್ಬ ಗೆಳೆಯನ ಹತ್ತಿರ ಹೇಳಿಕೊಂಡು ಸಂಭ್ರಮಿಸಿದಂಥ ಬರಹಗಳು.

  D.V. Gundappaಡಾಕ್ಟರ್‌ ಗುಂಡಣ್ಣನವರ ಚಿತ್ರ ನೋಡಿ ;

  ಗುಂಡಣ್ಣನವರನ್ನು ನೋಡಿದ್ದವರು ಯಾರೂ ಅವರನ್ನು ಮರೆತಿರುವುದು ಅಸಂಭವ. ಅಷ್ಟು ಮನೋಮುದ್ರಕವಾದದ್ದು ಅವರ ವ್ಯಕ್ತಿಮಹಿಮೆ. ಸುಮಾರು 25-30 ವರ್ಷಗಳ ಕಾಲ ಅವರ ಹೆಸರು ನೂರಾರು ಮನೆಗಳಲ್ಲಿ ಪ್ರತಿದಿನವೂ ನಚ್ಚುಮೆಚ್ಚಿನ ಮಾತಾಗಿತ್ತು. ರೋಗ ಪ್ರಸಂಗಗಳಲ್ಲಿ ಮಾತ್ರವೇ ಅಲ್ಲ ಅವರ ನೆನಪು ಬರುತ್ತಿದ್ದದ್ದು ; ಎಂಥ ವಿಶೇಷ ಮಾನವ ಪ್ರಸಂಗ ಒದಗಿದರೂ ಆಗ ಆಪ್ತ ಬಂಧುಗಳ ಸ್ಮರಣೆ ಬಂದಂತೆ ಗುಂಡಣ್ಣನವರ ಸ್ಮರಣೆ ಬರುತ್ತಿತ್ತು.

  ಒಂದು ದಿನ ಸಂಜೆ ಸುಮಾರು ಏಳು ಗಂಟೆ ಇರಬಹುದು. ಒಬ್ಬಾನೊಬ್ಬ ಮುಸಲ್ಮಾನ್‌ ಸಾಹುಕಾರರು ಒಂದು ಸೊಗಸಾದ ಖಾಸ್‌ ಜಟಕಾದಲ್ಲಿ ಬಂದು ಚಿಕಿತ್ಸಾಲಯದ ಮುಂದೆ ಇಳಿದು ಬೊಬ್ಬೆ ಹಾಕುತ್ತಾ ಒಳಗೆ ಹೆಜ್ಜೆಯಿಟ್ಟರು. ಹಿಂದುಸ್ತಾನಿಯಲ್ಲಿ ‘ಬಹಳ ನೋವು ಮಹರಾಯರೇ, ಬಹಳ ನೋವು’ ಎಂದು ಕಿರಿಚಿದರು.

  ಗುಂಡಣ್ಣ ; (ಹಿಂದುಸ್ತಾನಿಯಲ್ಲಿ) ಎಲ್ಲಯ್ಯ ನೋವು?

  ಸಾಹುಕಾರ; ಬೆಟ್ಟಿನಲ್ಲಿ ಸ್ವಾಮಿ, ಬೆಟ್ಟಿನಲ್ಲಿ.

  ಗುಂಡಣ್ಣ ; ಯಾವ ಬೆಟ್ಟಿನಲ್ಲಿ ? ಎಲ್ಲಿಯ ಬೆಟ್ಟಿನಲ್ಲಯ್ಯ? (ಎಲ್ಲರಿಗೂ ನಗು)

  ಸಾಹುಕಾರ; ಎಡಗೈ ತೋರಿಸಿ - ಈ ನಡುಬೆರಳಿನಲ್ಲಿ.

  ಗುಂಡಣ್ಣನವರು ಆ ಬೆರಳನ್ನು ಹಿಡಿದು ನೋಡಿದರು. ಆಮೇಲೆ ಇನ್ನೊಂದು ದೊಡ್ಡ ಎಲೆಕ್ಟ್ರಿಕ್‌ ದೀಪವನ್ನು ಹಾಕಿನೋಡಿ -

  ‘ಸಾಹುಕಾರರೇ ಬೆಳಗ್ಗೆ ಬನ್ನಿ ನೋಡೋಣ. ಈಗ ದೀಪದ ಬೆಳಕಿನಲ್ಲಿ ಇದು ಚೆನ್ನಾಗಿ ಕಾಣಿಸುವುದಿಲ್ಲ’ ಎಂದರು.

  ಸಾಹುಕಾರ; ಈಗ ನಾನು ಸಾಯುತ್ತೇನೆ.

  ಗುಂಡಣ್ಣ ; ಇಲ್ಲ, ನೀವು ಸಾಯುವುದಿಲ್ಲ. ನಾನು ಭರವಸೆ ಕೊಡುತ್ತೇನೆ. ಬೆಳಗ್ಗೆ ಬದುಕಿರುತ್ತೀರಿ.

  ಸಾಹುಕಾರ; ಇಲ್ಲ ಸ್ವಾಮಿ, ನಾನು ಈಗ ರೈಲಿಗೆ ಹೊರಟಿದ್ದೇನೆ. ಬೆಳಗ್ಗೆ ಈ ಊರಲ್ಲಿರುವುದಿಲ್ಲ.

  ಗುಂಡಣ್ಣ ; ಹಾಗಾದರೆ ಬೆರಳನ್ನು ...ದಲ್ಲಿ ಸಿಕ್ಕಿಸಿಕೊಳ್ಳಿ.

  ಅಲ್ಲಿದ್ದವರೆಲ್ಲ ನಕ್ಕರು. ಸಾಹುಕಾರರಿಗೆ ಕೋಪ ಬಂತು. ‘ಏನು ಸ್ವಾಮಿ. ಎಷ್ಟು ದಿವಸದಿಂದ ನಿಮ್ಮನ್ನು ನಂಬಿಕೊಂಡಿದ್ದೇನೆ. ಎಷ್ಟು ಸಲ ನಮ್ಮ ಮನೆಗೆ ಬಂದಿದ್ದೀರಿ. ಈಗ ನನಗೆ ಹೀಗೆ ಅವಮಾನ ಮಾಡುತ್ತೀರಲ್ಲ?’

  ಗುಂಡಣ್ಣ ; ಕೋಪ ಬೇಡ ಸಾಹೇಬರೇ. ನಾನು ಹೇಳಿದ್ದು ತಪ್ಪು ಮಾತು ಏನೂ ಅಲ್ಲ. ಇಲ್ಲಿ ನಗುತ್ತಿರುವ ಬೇಕೂಫರಿಗೆ ಸಂದರ್ಭ ಗೊತ್ತಿಲ್ಲ. ನಿಮ್ಮ ಬೆಟ್ಟಿನಲ್ಲಿ ಏನೋ ಏಳುತ್ತಿದೆ. ಅದಕ್ಕೆ ತಕ್ಕ ಚಿಕಿತ್ಸೆಯಲ್ಲಿ ಮೂರು ಅಂಶಗಳು ಸೇರಿರಬೇಕು; ಉಷ್ಣ, ತೇವ, ಒತ್ತಡ (heat, moisture, pressure). ಈ ಮೂರು ಅಂಶಗಳು ನಾನು ಹೇಳಿದ ಜಾಗದಲ್ಲಿ ಇರುತ್ತವೆ’.

  ಈ ವಿವರಣೆಯನ್ನು ಕೇಳಿ ಸಾಹುಕಾರರಿಗೂ ನಗುಬಂತು.

  ಇನ್ನೊಂದು ಪ್ರಸಂಗ ಕೇಳಿ. ಇದು ಎಚ್‌. ವಿ. ನಂಜುಂಡಯ್ಯನವರಿಗೆ ಸಂಬಂಧಿಸಿದ್ದು;

  ನಂಜುಂಡಯ್ಯನವರು ಕೆಲವು ಕಾಲ ಶಿವಮೊಗ್ಗಿಯಲ್ಲಿದ್ದಾಗ ಬೆಂಗಳೂರಲ್ಲಿ ಒಂದು ಪ್ರಸಂಗ ನಡೆಯಿತು. ಒಬ್ಬಾನೊಬ್ಬ ಯುವಕ ಬಿ.ಎ. ಪ್ಯಾಸ್‌ ಮಾಡಿ ಸರಕಾರದ ಚಾಕರಿಗೆ ಅರ್ಜಿ ಹಾಕಿದ್ದ. ಆತ ಹೈಕೋರ್ಟಿಗೂ ಅರ್ಜಿ ಹಾಕಿದ್ದ. ಒಂದಾನೊಂದು ದಿನ ಹೈಕೋರ್ಟಿನ ಕಾರ್ಯಾಲಯದ ಮುಖ್ಯಾಧಿಕಾರಿಯು ಆತನನ್ನು ಇಂಟರ್‌ವ್ಯೂಗಾಗಿ ಆಹ್ವಾನಿಸಿದ. ಅವರ ನಡುವೆ ನಡೆದ ಮಾತುಕತೆ ಹೀಗಿದೆ;

  ಅಧಿಕಾರಿ; ನೀವು ಯಾವ ಜಾತಿಯವರು.

  ಯುವಕ; ನಾನು ಶ್ರೌತಿ.

  ಅಧಿಕಾರಿ; ಓಹೋ ಹಾಗೆಯೇ, ನಿಮ್ಮ ಜನ ಯಾರಾದರೂ ದೊಡ್ಡ ಅಧಿಕಾರಗಳಲ್ಲಿ ಇದ್ದಾರೋ?

  ಯುವಕ; ಯಾರೂ ಇಲ್ಲ,

  ಅಧಿಕಾರಿ; ಹಾಗೆಯೇ. ಅಯ್ಯೋ ಪಾಪ. ಇರಲಿ ಮುಂದಿನ ಶನಿವಾರ ಬನ್ನಿ. ನೋಡಿ ಹೇಳುತ್ತೇನೆ.

  ಯುವಕನು ಹೊರಟುಹೋದ ಮೇಲೆ ಆ ಅಧಿಕಾರಿಯು ಅದೇ ಚೀಫ್‌ ಕೋರ್ಟಿನಲ್ಲಿ ತನ್ನ ಸಹೋದ್ಯೋಗಿಯಾಗಿದ್ದ ಎಂ. ಎಸ್‌. ಪುಟ್ಟಣ್ಣರನ್ನು ಕರೆದು ಕೇಳಿದ.

  ಅಧಿಕಾರಿ; ಶ್ರೌತಿ ಅಂದರೆ ಯಾವ ಜನ ಸ್ವಾಮಿ?

  ಪುಟ್ಟಣ್ಣ; ಶ್ರೌತಿ ಅಂದರೆ ಶ್ರೋತ್ರಿಯ. ಶ್ರುತಿ ಅಂದರೆ ವೇದ. ಬ್ರಾಹ್ಮಣರಲ್ಲಿ ವೇದಾಧ್ಯಯನ ಸಂಪನ್ನರಾಗಿ ವೈದಿಕ ಕರ್ಮನಿಷ್ಠೆ ಇಟ್ಟುಕೊಂಡವರನ್ನು ಶ್ರೋತ್ರಿಯರು ಎಂದು ಕರೆಯುವುದು ಪದ್ಧತಿ.

  ಅಧಿಕಾರಿ; ಹಾಗಿದ್ದರೆ ಅವರು ಬ್ರಾಹ್ಮಣರೇ ಅಂತನ್ನಿ.

  ಪುಟ್ಟಣ್ಣ ; ಅಲ್ಲವೇ? ಅದರಲ್ಲಿಯೂ ಉತ್ತಮ ದರ್ಜೆಯ ಬ್ರಾಹ್ಮಣರು.

  ಅಧಿಕಾರಿ; ಸರಿಸರಿ. ಅದು ನನಗೆ ತಿಳಿದಿರಲಿಲ್ಲ. ಸುಮ್ಮನೆ ಕೇಳಿದೆ.

  ಇದಾದ ನಂತರ ಆತ ಮತ್ತೆ ಕೆಲಸ ಕೇಳಿಕೊಂಡು ಬರುತ್ತಾನೆ. ಆತನಿಗೊಂದು ಪರೀಕ್ಷೆ ಕೊಡುತ್ತಾನೆ ಅಧಿಕಾರಿ. ಅದರಲ್ಲೇನೋ ಕರಾಮತ್ತು ನಡೆಸಿದ್ದರಿಂದ ಶ್ರೋತ್ರಿಯನಿಗೆ ಕೆಲಸ ಸಿಗುವುದಿಲ್ಲ. ಆತ ಈ ಕೆಲಸ ಸಿಗದಿರಲು ಪುಟ್ಟಣ್ಣಯ್ಯನೇ ಕಾರಣ ಎಂದು ಆಗ್ರಹ ಕಾರುತ್ತಾನೆ. ತನಗೆ ಸಂಬಂಧವೇ ಇಲ್ಲದ ಸಂಗತಿಗೆ ತಾನು ಬಾಧ್ಯನಾದ ಸಂಗತಿ ಕೇಳಿ ಪುಟ್ಟಣ್ಣಯ್ಯನವರಿಗೆ ಬೇಸರವಾಗುತ್ತದೆ. ಆಗ ಅವರಿಗೆ ನಂಜುಂಡಯ್ಯನವರು ಒಂದು ಪತ್ರ ಬರೆಯುತ್ತಾರೆ;

  ಶ್ರೌತಿಗಳಿಗೆ ನಿಮ್ಮ ಮೇಲೆ ಕೋಪ ಬಂದದ್ದು ಸಹಜವಾಗಿಯೇ ಇದೆ. ನಿಮ್ಮನ್ನು ಆ ಅಧಿಕಾರಿ ಅರ್ಥವಿವರಣೆ ಕೇಳಿದಾಗ ನೀವು ಬೇರೆ ಅರ್ಥವನ್ನು ಯಾಕೆ ಹೇಳಲಿಲ್ಲ. ಶ್ರುತಿ ಅಂದರೆ ಮೇಳದಲ್ಲಿ ಹೊರಡುವ ಒಂದು ಜೊತೆಯ ಶಬ್ದ. ಶ್ರುತಿ ಹಿಡಿಯುವುದು ಎಂದರೆ ಓಲಗ ಊದುವುದು. ಆದ ಕಾರಣ ಶ್ರೌತಿ ಎಂದರೆ ಬಾಜಾಬಜಂತ್ರಿಯವರು. ಹೀಗೆಂದು ನೀವು ಅರ್ಥ ಹೇಳಬೇಕಾಗಿತ್ತು. ಹೀಗೆ ಹೇಳಿದ್ದಿದ್ದರೆ ಆತನಿಗೆ ಚಾಕರಿ ಸಿಗುತ್ತಿತ್ತು. ನೀವು ಅದನ್ನು ತಪ್ಪಿಸಿದಿರಲ್ಲ ? ಚಾಕರಿ ತಪ್ಪಿಸಿ ಜಾತಿ ಉಳಿಸಿದರೆ ಏನಾಯಿತು?

  ***

  ಇಂಥ ಪ್ರಸಂಗಗಳನ್ನು ಬರೆಯುವುದಕ್ಕೆ ಹಾಸ್ಯಪ್ರಜ್ಞೆಯಿದ್ದರೆ ಸಾಲದು. ಮಾನವೀಯತೆ ಬೇಕು. ಇನ್ನೊಬ್ಬರನ್ನು ಕೂಲಂಕಷವಾಗಿ ಗಮನಿಸುವ, ಪ್ರೀತಿಸುವ ಮನಸ್ಸು ಬೇಕು. ವ್ಯಕ್ತಿಕೇಂದ್ರಿತವಾಗುತ್ತಾ ನಡೆದಿರುವ ನಮಗೆ ಅಷ್ಟೆಲ್ಲ ತಾಳ್ಮೆ ಎಲ್ಲಿದೆ. ಯಾರಾದರೂ ತಮ್ಮ ಬಗ್ಗೆ ಹೇಳಲು ಶುರುಮಾಡಿದರೆ ನಮಗೆ ಅಸಹನೆಯಾಗುತ್ತದೆ. ಕತೆ ಕೇಳುವ ಬದಲು ‘ಬಂದ ವಿಷಯ ಹೇಳಿ, ಹೊರಟುಬಿಡಿ’ ಅನ್ನುತ್ತೇವೆ.

  ನಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ನೆನಪುಗಳೇ ಇಲ್ಲ !

  (ಸ್ನೇಹಸೇತು : ಹಾಯ್‌ ಬೆಂಗಳೂರ್‌)

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more