• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನಂತಮೂರ್ತಿ - ಕೃಷ್ಣ ಟೀವಿಯಲ್ಲಿ ಮಾತಾಡಿದ ನಂತರ...

By Staff
|
  • ಜಾನಕಿ

jaanaki@india.com

S.M. Krishnaಮತ್ತೊಂದು ಚುನಾವಣೆ ಹತ್ತಿರವಾಗುತ್ತಿದೆ. ಎಲ್ಲೆಲ್ಲೂ ಮತ್ತೆ ಉತ್ಸಾಹದ ದನಿ ಕೇಳಿಬರುತ್ತಿದೆ. ಶಂಕುಸ್ಥಾಪನೆಗಳು, ಘೋಷಣೆಗಳು, ಹೋರಾಟ, ಚಳವಳಿ ಮತ್ತೆ ಶುರುವಾಗಿದೆ. ಹಳ್ಳಿಗಳಿಗೆ ಇಡೀದಿನ ಕರೆಂಟು ಕೊಡುತ್ತೇವೆ, ನಗರದಲ್ಲಿ ಇಡೀ ದಿನ ನೀರು ಬಿಡುತ್ತೇವೆ ಮುಂತಾದ ಆಶ್ವಾಸನೆಗಳು ಪುಂಖಾನುಪುಂಖವಾಗಿ ಹೊರಬೀಳುತ್ತಿವೆ. ಇವೆಲ್ಲ ಚುನಾವಣೆ ಹತ್ತಿರ ಬಂದಾಗ ನೀಡಬೇಕಾದ ಆಶ್ವಾಸನೆಗಳಲ್ಲ , ಅಧಿಕಾರದಲ್ಲಿದ್ದಾಗ ಮಾಡಬೇಕಾಗಿದ್ದ ಕರ್ತವ್ಯಗಳು ಅನ್ನುವುದನ್ನು ರಾಜಕಾರಣಿಗಳೂ ಪತ್ರಿಕೆಗಳೂ ತುಂಬ ಸುಲಭವಾಗಿ ಮರೆಯುತ್ತವೆ. ಚುನಾವಣೆ ಎಂದರೆ ಪತ್ರಿಕೆಗಳಿಗೆ ಜಾಹೀರಾತು ಆದಾಯ ಹೆಚ್ಚಿಸಿಕೊಳ್ಳುವ, ಪತ್ರಿಕೆಯ ಪ್ರಸಾರ ಏರಿಸಿಕೊಳ್ಳುವ ಒಂದು ಸದವಕಾಶ. ಸಣ್ಣಪುಟ್ಟ ಪತ್ರಿಕೆಗಳಿಗಂತೂ ಸುಗ್ಗಿ. ಹೀಗಾಗಿ ಅವರು ಹೇಳಿದ್ದೂ ಇವರು ಹೇಳಿದ್ದೂ ಯಥಾವತ್ತಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಜನ ಮತ್ತದೇ ಗೊಂದಲಕ್ಕೆ ಬೀಳುತ್ತಾರೆ.

ಇಂಥದ್ದೆಲ್ಲ ನಡೆಯುವ ಹೊತ್ತಲ್ಲೇ ಯು. ಆರ್‌. ಅನಂತಮೂರ್ತಿ ಅವರು ಮುಖ್ಯಮಂತ್ರಿ ಎಸ್ಸೆಮ್‌ ಕೃಷ್ಣರ ಸಂದರ್ಶನ ಮಾಡಿದ್ದಾರೆ. ಒಬ್ಬ ಲೇಖಕ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಮೌನವಾಗಿರುವುದನ್ನು ಕಲಿತರೆ ಇಂಥ ಸಂದರ್ಶನಗಳನ್ನು ತುಂಬ ಆಸಕ್ತಿಯಿಂದ ನೋಡಬಹುದು. ಆದರೆ ಲೇಖಕನಿಗೆ ರಾಜಕೀಯ ಜವಾಬ್ದಾರಿಯೂ ಇರುತ್ತದೆ ಎಂದು ನಂಬಿದವರಿಗೆ ಇದನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕೆ ಕಾರಣಗಳು ಎರಡು;

ಮೊದಲನೆಯದಾಗಿ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ಅನಂತಮೂರ್ತಿ ಯಾಕೆ ಎಸ್ಸೆಮ್‌ ಕೃಷ್ಣರ ಸಂದರ್ಶನ ಮಾಡಬೇಕಾಗಿತ್ತು ? ಇದರಿಂದ ಕೃಷ್ಣರಿಗೆ ಲಾಭವಾಗಿದೆ ಎಂದಾಗಲೀ, ಅನಂತಮೂರ್ತಿಯವರು ಮುಜುಗರ ಹುಟ್ಟಿಸುವ ಪ್ರಶ್ನೆಗಳನ್ನು ಕೇಳಿಲ್ಲ ಎಂದಾಗಲೀ, ಈ ಸಂದರ್ಶನ ರಾಜಕೀಯದ ದಿಕ್ಕನ್ನೇ ಬದಲಾಯಿಸುತ್ತದೆ ಎಂದಾಗಲೀ ತಿಳಿಯಬೇಕಾಗಿಲ್ಲ. ಆದರೆ ಇಂಥದ್ದೊಂದು ಮಾತುಕತೆಯಲ್ಲಿ ಅನಂತಮೂರ್ತಿ ತೊಡಗಿಕೊಳ್ಳಬೇಕಾದ ಔಚಿತ್ಯ ಏನಿತ್ತು ಎಂಬ ಪ್ರಶ್ನೆಯನ್ನು ನಾವು ಸಾಹಿತ್ಯಕವಾಗಿ ಕೇಳಿಕೊಳ್ಳಬೇಕು.

ಈಗಾಗಲೇ ವಿಧಾನಸಭೆ ವಿಸರ್ಜನೆಯಾಗಿದೆ. ಹೀಗಾಗಿ ಅನಂತಮೂರ್ತಿ ಕೊಡುವ ಸಲಹೆಗಳನ್ನು ಸ್ವೀಕರಿಸುವ ಅನಿವಾರ್ಯತೆಯಾಗಲೀ ಅಗತ್ಯವಾಗಲೀ ಸಾಧ್ಯತೆಯಾಗಲೀ ಕೃಷ್ಣರಿಗಿಲ್ಲ. ಕೃಷ್ಣ ಆಡಳಿತದ ಓರೆಕೋರೆಗಳನ್ನು ವಿಮರ್ಶಿಸುವ ಸಂದರ್ಶನವಂತೂ ಅದಾಗಿರಲಿಲ್ಲ. ಆದರೆ ಇಬ್ಬರ ವರ್ಚಸ್ಸನ್ನೂ ವೃದ್ಧಿಸುವಂಥ ಪ್ರಚಾರವಂತೂ ಈ ಮುಖಾಮುಖಿಗೆ ಸಿಕ್ಕಿತು.

ಇದನ್ನು ಬಿಟ್ಟುಬಿಡೋಣ. ಮತ್ತೆ ಚುನಾವಣೆಯ ಗೊಂದಲಗಳಿಗೆ ಮರಳೋಣ. ಎಲ್ಲೆಲ್ಲೂ ಈಗ ಭಾರತ ಪ್ರಕಾಶಿಸುತ್ತಿರುವ ಸುದ್ದಿ. ಎಲ್ಲರ ಬಾಯಲ್ಲೂ ‘ಫೀಲ್‌ ಗುಡ್‌’ ಫ್ಯಾಕ್ಟರ್‌ನ ಮಾತು. ಅದೊಂದು ನುಡಿಗಟ್ಟೇ ಆಗಿಹೋಗಿದೆಯೇನೋ ಎಂಬಷ್ಟರ ಮಟ್ಟಿಗೆ ಆ ಮಾತನ್ನು ನಾವು ಬಳಸುವುದಕ್ಕೆ ಶುರುಮಾಡಿದ್ದೇವೆ. ಈ ಫೀಲ್‌ ಗುಡ್‌ ಫ್ಯಾಕ್ಟರ್‌ ಅಂದರೇನು?

U.R. Anantha Murthyಅದನ್ನು ಹೇಳಬೇಕಾದವರು ನಮ್ಮ ಲೇಖಕರು. ಪತ್ರಿಕೆಗಳು ಪ್ರಕಟಿಸುವ ಬೋಳೆ ಜಾಹೀರಾತನ್ನೂ ಟೀವಿಗಳಲ್ಲಿ ಪ್ರಸಾರವಾಗುವ ಸುಳ್ಳು ಮಾತುಗಳನ್ನೂ ಜನ ನಂಬಕೂಡದು ಎಂದು ಎಚ್ಚರಿಸುವ ಶಕ್ತಿ ಇರುವುದು ನಮ್ಮ ಸಾಹಿತಿಗಳಿಗೆ. ಚುನಾವಣೆಯ ಪ್ರಣಾಳಿಕೆಗಳು ಎಷ್ಟು ಸುಳ್ಳು ಅನ್ನುವುದನ್ನೂ ಪತ್ರಿಕೆಗಳಲ್ಲಿ ಬರುತ್ತಿರುವ ಮಾತುಗಳು ಎಷ್ಟು ಪೊಳ್ಳು ಅನ್ನುವುದನ್ನೂ ಆಯಾ ಊರಿನ ಸಾಹಿತಿ ಪತ್ರಿಕೆಗಳ ಮೂಲಕವೇ ಬರೆದು ಎಚ್ಚರಿಸಬಹುದು. ಒಬ್ಬ ವರದಿಗಾರನಿಗೆ ಸಹಜವಾಗಿಯೇ ವರದಿಯ ಮಿತಿಯನ್ನು ದಾಟಿಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಒಬ್ಬ ಸಂಪಾದಕ ತನ್ನ ಸಂಪಾದಕೀಯದಲ್ಲಿ ಕೆಲವೊಂದು ಲಕ್ಷ್ಮಣರೇಖೆಗಳನ್ನು ದಾಟುವಂತಿಲ್ಲ. ಆದರೆ, ಓದುಗರ ಪತ್ರವೆಂಬ ಅಂಕಣಕ್ಕೆ, ಕಾವ್ಯಕ್ಕೆ, ಕತೆಗೆ, ವಿಡಂಬನೆಗೆ ಅಂಥ ಅಡ್ಡಿಯೇನಿಲ್ಲ.

ಹಾಗಿದ್ದರೂ ಅವರು ಅಂಥದ್ದನ್ನು ಬರೆಯುವುದಿಲ್ಲ. ಅಲ್ಲೊಬ್ಬರು ಕೆ.ಟಿ. ಗಟ್ಟಿ ಸಿಟ್ಟಿನಿಂದ ಆಗೊಂದು ಈಗೊಂದು ಲೇಖನ ಬರೆಯುತ್ತಾರೆ. ಇಲ್ಲೊಬ್ಬರು ತೇಜಸ್ವಿ ಯಾರಾದರೂ ಕೇಳಿದರೆ ಪ್ರತಿಕ್ರಿಯಿಸುತ್ತಾರೆ. ದೇವನೂರರ ಬಳಿ ಹೋಗಿ ಮಾತಾಡಿಸಿದರೆ ಕೆಂಡಕೋಪದಿಂದ ಉರಿದುಬೀಳುತ್ತಾರೆ. ಇವರನ್ನು ಬಿಟ್ಟರೆ ಬೆಂಗಳೂರಿನಲ್ಲಿ ಕುಳಿತ ಅಸಂಖ್ಯ ಸಾಹಿತಿಗಳು ರಾಜಕಾರಣದ ಮೊಗಸಾಲೆಗೆ ಮೊಗದಿರುಹಿ ಕೂತಿದ್ದಾರೆ. ತಮ್ಮ ಸುತ್ತಲೂ ನಡೆಯುತ್ತಿರುವ ಮಸಲತ್ತುಗಳು ತಮ್ಮ ಓದುಗರನ್ನು ಸಹ-ಜೀವಿಗಳನ್ನು ಪೀಡಿಸುತ್ತಿವೆ ಅನ್ನುವ ಕಲ್ಪನೆಯೂ ಅವರಿಗಿಲ್ಲ.

ಲಂಕೇಶರಿದ್ದರು; ಪ್ರತಿಯಾಂದು ಚುನಾವಣೆ ಬಂದಾಗಲೂ ತಮ್ಮ ಪತ್ರಿಕೆಯ ಮೂಲಕ ತಮ್ಮ ನಿಲುವೇನು ಅನ್ನುವುದನ್ನು ಖಡಾಖಂಡಿತವಾಗಿ ಹೇಳುತ್ತಿದ್ದರು. ಬಿ. ವಿ. ವೈಕುಂಠರಾಜು ಕೂಡ ಅದರಲ್ಲಿ ಹಿಂದೆ ಬಿದ್ದವರಲ್ಲ. ಅವರ ರಾಜಕೀಯ ಒಲವುನಿಲುವುಗಳೇನೇ ಇದ್ದರೂ ಭ್ರಷ್ಟರನ್ನು ತೀರಾ ಸಹಿಸಿಕೊಂಡವರೇನಲ್ಲ. ಡಿ. ಆರ್‌. ನಾಗರಾಜ್‌ ತಮ್ಮ ಲೇಖನಗಳಲ್ಲಿ ಆಗೀಗ ರಾಜಕೀಯದ ಒಳಸುಳಿಗಳನ್ನು ಚರ್ಚಿಸುವುದಿತ್ತು. ಕೆ. ವಿ. ಸುಬ್ಬಣ್ಣ ಒಂದು ಪತ್ರ ವಗಾಯಿಸಿ ತಮ್ಮ ಅಸಮಧಾನ ತೋಡಿಕೊಳ್ಳುತ್ತಿದ್ದರು. ಕಾರಂತರು ಬದುಕಿದ್ದಾಗ ಪ್ರತಿಯಾಂದು ಪತ್ರಿಕೆಗೂ ಪತ್ರ ಬರೆದು ಖಂಡಿಸುತ್ತಿದ್ದರು.

ಅಷ್ಟೇ ಅಲ್ಲ, ಕಾರಂತರು, ಅಡಿಗರು ಚುನಾವಣೆಗೂ ನಿಂತರು. ಲಂಕೇಶರು ಪಕ್ಷ ಕಟ್ಟಿದರು. ಇದನ್ನೆಲ್ಲ ಆವತ್ತು ಟೀಕಿಸಿದವರಿದ್ದಾರೆ. ಆದರೆ ಇವತ್ತಿನ ನಿರ್ಲಕ್ಷ ್ಯ ಮತ್ತು ನಿರ್ಲಿಪ್ತತೆಯನ್ನು ಕಂಡಾಗ ಅಡಿಗರೂ ಲಂಕೇಶರೂ ಮಾಡಿದ್ದೇ ಸರಿಯೇನೋ ಅನ್ನಿಸುತ್ತದೆ. ಕನಿಷ್ಠ ರಾಜಕೀಯ ಪ್ರಜ್ಞೆಯಾದರೂ ಅವರಿಗಿತ್ತು. ತನ್ನನ್ನೂ ರಾಜಕೀಯ ಬೇಕೋ ಬೇಡವೋ ಒಳಗೊಳ್ಳುತ್ತದೆ ಅನ್ನುವುದು ತಿಳಿದಿತ್ತು. ಭ್ರಷ್ಟತೆ ತಮ್ಮನ್ನೆಲ್ಲ ಕ್ಷುದ್ರರನ್ನಾಗಿಸುತ್ತದೆ ಎನ್ನುವ ಅರಿವು ಮತ್ತು ಅದನ್ನು ಅದರ ವರಸೆಯಲ್ಲೇ ವಿರೋಧಿಸಬೇಕು ಎಂಬ ಕ್ರಿಯಾಶೀಲತೆಯಿತ್ತು.

ಇವತ್ತು ಅದಿಲ್ಲ. ಸಾಹಿತ್ಯಲೋಕದ ಮುಂಚೂಣಿಯಲ್ಲಿ ನಿಂತಿರುವ ಯಾರೂ ರಾಜಕೀಯವಾಗಿ ತಮ್ಮ ನಿಲುವುಗಳನ್ನು ಪ್ರದರ್ಶಿಸಲು ಹಿಂಜರಿಯುತ್ತಿದ್ದಾರೆ. ಅನಂತಮೂರ್ತಿ, ಶಿವರುದ್ರಪ್ಪ, ಕಾರ್ನಾಡ್‌, ಕಂಬಾರ - ಇವರೆಲ್ಲ ಯಾವ ಪಕ್ಷಕ್ಕೆ ಸೇರಿದವರು ಅನ್ನುವುದು ಗೊತ್ತಾಗುತ್ತಿಲ್ಲ. ಅವರ ನಿಲುವೇನು ಅನ್ನುವುದು ಸ್ಪಷ್ಟವಾಗುವುದಿಲ್ಲ. ಕಮ್ಯೂನಲ್‌ ಧೋರಣೆಯನ್ನು ವಿರೋಧಿಸುವುದು, ಮೂಲಭೂತವಾದದ ವಿರುದ್ಧ ಹೋರಾಡುವುದು ನಮ್ಮ ಆದ್ಯತೆ ಎಂದು ಸಾಂಕೇತಿಕವಾಗಿ ಮಾತಾಡುವುದನ್ನು ಸಾಹಿತಿಗಳು ಕಂಠಪಾಠಮಾಡಿದ್ದಾರೆ. ತೊಗಾಡಿಯನಿಗೆ ರಾಜಕೀಯವಾಗಿ ವ್ಯಕ್ತವಾದಷ್ಟು ವಿರೋಧ ಸಾಂಸ್ಕೃತಿ ಲೋಕದಿಂದ ವ್ಯಕ್ತವಾಗಲಿಲ್ಲ. ನರೇಂದ್ರ ಮೋದಿಯ ವಿಚಾರದಲ್ಲೂ ಅಷ್ಟೇ.

ಇವತ್ತಿನ ಆತಂಕಗಳನ್ನೇ ನೋಡಿ. ನಮ್ಮ ವಿಜಯಗಳನ್ನೂ ಉತ್ಸಾಹವನ್ನೂ ಸಮತೋಲಗೊಳಿಸಲು ಅಷ್ಟೇ ಪ್ರಮಾಣದ ಅಪಾಯಗಳೂ ನಮ್ಮ ಮುಂದಿವೆ. ನಗರಗಳು ಆಧುನಿಕವಾಗುತ್ತಿವೆ; ಗ್ರಾಮಗಳು ಮತ್ತಷ್ಟು ಹಿಂದುಳಿಯುತ್ತಿವೆ. ಬೆಂಗಳೂರಿನಂಥ ನಗರದಲ್ಲಿ ಒಬ್ಬ ವ್ಯಕ್ತಿ ಬಿಡಿಎ ಕಛೇರಿಯ ಮುಂದೆ ನಿಂತು ಒಂದು ದಿನದಲ್ಲಿ ಸಂಪಾದಿಸುವ ಮೊತ್ತವನ್ನು ತರೀಕೆರೆಯ ತನ್ನ ಮೂರೆಕರೆ ಹೊಲವನ್ನು ಉತ್ತು, ಬಿತ್ತು, ಬೆಳೆತೆಗೆಯುವ ರೈತ ಒಂದು ವರುಷದಲ್ಲಿ ಸಂಪಾದಿಸುತ್ತಿಲ್ಲ. ಬೆಂಗಳೂರಿನ ಲಂಚಕೋರನ ಕಳಂಕಿತ ಆತ್ಮ ಪಾಪಪ್ರಜ್ಞೆ ಅನುಭವಿಸುವುದಿಲ್ಲ ; ಪುಟ್ಟ ಮನೆ ಕಟ್ಟಿಕೊಂಡು ಸಣ್ಣಪ್ರಮಾಣದಲ್ಲಿ ಯಾವುದಾದರೊಂದು ಬೆಳೆ ಬೆಳೆಯುತ್ತಾ ಮಣ್ಣನ್ನೇ ನಂಬಿ ಬದುಕುವ ವ್ಯಕ್ತಿಯಾಬ್ಬನ ಕಷ್ಟ ಮತ್ತು ಕಡುಬಡತನ ಬೆಂಗಳೂರಿನಂಥ ನಗರದಲ್ಲಿ ಬದುಕುವ ಸುಖಜೀವಿಗಳನ್ನು ತಟ್ಟದಂತೆ ನೋಡಿಕೊಳ್ಳುವುದೇ ತನ್ನ ಏಕೈಕ ಕಾಯಕ ಎಂದು ಸರ್ಕಾರ ಭಾವಿಸಿಕೊಂಡಂತೆ ಅದರ ವರ್ತನೆಯಿದೆ.

ದಿನೇ ದಿನೇ ದುರ್ಬಲವಾಗುತ್ತಿರುವ ಗ್ರಾಮಾಂತರ ಕರ್ನಾಟಕ ಎಂಬ ಪಂಚಾಂಗದ ಮೇಲೆ ಬೆಂಗಳೂರೆಂಬ ಕಟ್ಟಡ ನಿಂತಿದೆ. ಅದಕ್ಕಿನ್ನೊಂದು ಮಹಡಿ ಏರಿಸುವುದನ್ನೇ ಪ್ರಗತಿ ಎಂದು ನಾವೆಲ್ಲ ಭಾವಿಸಿಕೊಂಡಿದ್ದೇವೆ. ಅದು ಯಾವಾಗ ಬೇಕಾದರೂ ಕುಸಿಯಬಹುದು ಎನ್ನುವುದು ಯಾರಿಗೂ ಹೊಳೆಯುತ್ತಿಲ್ಲ ಅಥವಾ ಆ ಬಗ್ಗೆ ಮಾತಾಡಲು ಎಲ್ಲರಿಗೂ ಭಯ.

ಆದರೆ ಆ ಭಯ ಲೇಖಕರಿಗೂ ಇರಬೇಕಾ? ತಾನಿರುವ ನೆಲ ಅಸಹನೀಯ ಅನ್ನಿಸಿದಾಗ ಆಡೆನ್‌ ಕವಿತೆ ಬರೆದು ಪ್ರತಿಭಟಿಸಿದ. ಗೋಪಾಲಕೃಷ್ಣ ಅಡಿಗರು ತೊಂಬತ್ತರ ದಶಕದಲ್ಲಿ ಮೇರಾ ಭಾರತ್‌ ಮಹಾನ್‌ ಘೋಷಣೆ ಕೇಳಿಬಂದಾಗ ಅದೇ ಹೆಸರಿನ ಕವಿತೆ ಬರೆದು ಲೇವಡಿ ಮಾಡಿದರು;

ಆತ್ಮಗಳಿಗೆ ಅಮೂರ್ತವಾದುದೆ ಪರಮ ಪೂಜ್ಯವೂ ಪುರುಷಾರ್ಥವೂ.

ಒಂದೆ ಕೊರಳಲಿ ಚೀರಿಕೊಳ್ಳಲಿ ಎಲ್ಲ ಭಾರತ ಭಕ್ತರೂ:

ಮೇರಾ ಭಾರತ ಮಹಾನ್‌!

ಎಂದು ಗೇಲಿ ಮಾಡಿದರು.

ನಿಷ್ಕರ್ಮದಾದರ್ಶಕ್ಕೆ ಏನೆಂಥ ಫಸಲು?

ಮಂತ್ರಿಯಾಗಲುಬಹುದು, ತಂತ್ರಿಯಾಗಲುಬಹುದು

ದಷ್ಟಪುಷ್ಟ ಪುಢಾರಿ ಭಜಂತ್ರಿ ಕಂತ್ರಿಯಾಗಲುಬಹುದು

ಭಷಣ ಭಾಷಣವಾಗಿ ಮೊಳಗಬಹುದು

ನಿರಪಾಯ ನಟನೆ, ಪ್ರೇಕ್ಪಕರ ಚಪ್ಪಾಳೆ

ಸಿಳ್ಳುಗಳ ನಡುವೆ ಅನುನಾಯಿಗಳ ವರಸೆ

ಎಂದು ತರಾಟೆಗೆ ತೆಗೆದುಕೊಂಡರು. ದೊಡ್ಡವರ ಸಹವಾಸ ಸಾಕೋ ಸಾಕು ಈ ದೇಶಕ್ಕೆ ಎಂದರು. ಚುನಾವಣೆ ಪ್ರಜಾತಂತ್ರಕ್ಕೆ ಜೀವಾಳ; ಅದು ನಡೆಯಲೇಬೇಕು ಕಾಲಕಾಲಕ್ಕೆ- ಅದೂ ನಮ್ಮ ಪ್ರಭು ವರ್ಗಕ್ಕೆ ಬೇಕಾದಾಗ ಎಂದು ಅವಗೆ ಮುನ್ನವೇ ಬಂದ ಚುನಾವಣೆಯನ್ನು ಹಂಗಿಸಿದರು. ಮತ ಬಹಳ ಮುಖ್ಯ ಮತಾತೀತರಿಗೂ ಕೂಡ ಎಂದು ವ್ಯಂಗ್ಯವಾಡಿದರು.

ಅವರು ಕಟಕಿಯಾಡುತ್ತಿದ್ದ ಈ ಸಾಲುಗಳನ್ನು ನೋಡಿ;

ಆಸ್ಥಾನಬಿಟ್ಟವಗೆ ಜಾಪಾಳ ಮಾತ್ರೆ

ಪ್ರತಿಪಕ್ಷ ನಾಯಕರು ಹೇಗೋ ನಾಪತ್ತೆ

ವಿಜ್ಞಾನಿಗಳಿಗೆ ಗರ ಕೆಲಸವಿರದ ಪಗಾರ

ಬಡಬಗ್ಗರಿಗೆ ಹೊಟ್ಟೆಕಿಚ್ಚಿನಕ್ಕಚ್ಚು

ಎಂಥೆಂಥವೋ ಸೂಜಿಮದ್ದುಗಳ ಚುಚ್ಚು

ನಡೆಯಲಾರದ ದೂರ ಹಿಡಿಯಲಾರದ ಬಸ್ಸು

ಕೈ ಮೀರಿಸುವ ಟ್ಯಾಕ್ಸಿ ಆಟೊರಿಕ್ಷಾ ;

ಬಿಲದಲ್ಲಿ ಸಿಂಬಿಸುತ್ತಿರುವುದಾದರೆ ಹಳ್ಳಿ

ದಿಳ್ಳಿಗಳ ವ್ಯತ್ಯಾಸ ತೀರ ಅಲ್ಪ.

ಅನಂತಮೂರ್ತಿಯವರು ಎಸ್ಸೆಮ್‌ ಕೃಷ್ಣರನ್ನು ಸಂದರ್ಶಿಸಿದ್ದನ್ನು ನೋಡಿದಾಗ ಇದೆಲ್ಲ ನೆನಪಾಯಿತು.

ಎಸ್ಸೆಮ್‌ ಕೃಷ್ಣ ಜೊತೆ ಮಾತಾಡುವಾಗ, ಬಹುಶಃ ಅನಂತಮೂರ್ತಿಯವರಿಗೂ ಅಡಿಗರು ನೆನಪಾಗಿರಬೇಕು;

ದಿಳ್ಳಿಯೇ ಮಾರುವೇಷಗಳೊಂದು ಮಳಿಗೆ

ಸಾರಿಗೆ ನಿರಾತಂಕ ಹಳ್ಳಿಗಳವರೆಗೆ

ಪಕ್ಷ ಪಕ್ಷಾಂತರದ ಗೋಸುಂಬೆಗಳಿಗೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more