• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತಿಯ ಸಿಟ್ಟು ಕೆಟ್ಟದು....

By Staff
|
  • ಜಾನಕಿ

jaanaki@india.com

ಅಮೆರಿಕಾದ ಸಾಹಿತ್ಯಕ್ಕೆ ಸಂಬಂಧಪಟ್ಟ ಕೆಲವು ಚಳವಳಿಗಳನ್ನು, ಕೆಲವೊಂದು ಅಪಾಯಗಳನ್ನು, ಕೆಲವು ಭರವಸೆಗಳನ್ನು ಕುರಿತು ಮಾತಾಡಲು ನನಗಿಷ್ಟ . ಇದನ್ನು ಸಂಪೂರ್ಣ ಮುಕ್ತ ವಾತಾವರಣದಲ್ಲಿ ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಹೇಳಬೇಕು ಅಂದುಕೊಂಡಿದ್ದೇನೆ. ಕೆಲವರ ಬಗ್ಗೆ ಕೊಂಚ ಅವಿನಯದಿಂದ ಮಾತಾಡುವುದು ಕೂಡ ಅನಿವಾರ್ಯ.

ನಾನು ಸೇಡು ತೀರಿಸಿಕೊಳ್ಳುವ ಇರಾದೆಯಿಂದ ಮಾತಾಡುತ್ತಿಲ್ಲ ಅನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇನೆ. ಒಳಿತೆಲ್ಲವೂ ನನ್ನ ಜೊತೆ ಸೌಹಾರ್ದದಿಂದಲೇ ವರ್ತಿಸಿದೆ. ನಾನು ಅಷ್ಟೇನೂ ಹೋರಾಟ ಮಾಡಿಲ್ಲ, ತೀರ ಬಡತನದಲ್ಲಿ ಬದುಕಿಲ್ಲ, ಔದಾರ್ಯಕ್ಕೆ ಕೊರತೆ ಇರಲಿಲ್ಲ. ಈ ಮಧ್ಯೆ ನನ್ನ ಕಾದಂಬರಿ ಓದಿದ ಒಬ್ಬರು ಒಂದು ಗುಂಪನ್ನೇ ನನ್ನ ಮೇಲೆ ಛೂ ಬಿಟ್ಟು ಹೊಡೆಸಲು ನೋಡಿದರು. ಇನ್ನೊಬ್ಬರು ಹೇಗಾದರೂ ಮಾಡಿ ಈ ಪ್ರಾಣಿಯನ್ನು ಜೈಲಿಗೆ ಕಳಿಸಬೇಕು ಎಂದು ಓಡಾಡಿ ಸುಸ್ತಾದರು. ನನ್ನನ್ನು ಬಲ್ಲ ಕೆಲವು ಪತ್ರಕರ್ತರು ಈತ ಸಾಹಿತಿಯೇ ಅಲ್ಲ ಎಂದು ಬರೆದರು. ಹೀಗೆ ಆಗೀಗ ನನ್ನತ್ತ ಅನೇಕರು ಕಲ್ಲೆಸೆದಿದ್ದಾರೆ. ಆದರೆ ನಾನೂ ಕೂಡ ಕಲ್ಲೆಸೆಯುವುದರಲ್ಲಿ ಹಿಂದೆಗೆದನವನಲ್ಲ. ಹೀಗಾಗಿ ಲೆಕ್ಕ ಅಲ್ಲಲ್ಲೇ ಚುಕ್ತಾ ಆಗಿದೆ.

ಅಮೆರಿಕಾದ ಬಗ್ಗೆ ನನ್ನ ತಕರಾರುಗಳೇನೂ ಇಲ್ಲ. ಅಮೇರಿಕಾದಲ್ಲಿ ಉದ್ಯಮ, ಆರ್ಥಿಕತೆ, ವಿಜ್ಞಾನ ಎಲ್ಲವೂ ಮುಂದುವರಿದಿದೆ. ಕಲೆ ಎಂದರೆ ಅಮೆರಿಕನ್ನರಿಗೆ ವಾಸ್ತುಶಿಲ್ಪ ಮತ್ತು ಸಿನಿಮಾ ಮಾತ್ರ. ಹೀಗಾಗಿ ಸಾಹಿತಿಯಾದ ನಾನು ಗೊಣಗುವುದು ಅನಿವಾರ್ಯ.

Nobel Laureate Sinclair Lewisಇತ್ತೀಚೆಗೊಂದು ಘಟನೆ ನಡೆಯಿತು. ನನಗೆ ಪ್ರಶಸ್ತಿ ಬಂದ ಸುದ್ದಿ ಪ್ರಕಟವಾಗುತ್ತಿದ್ದಂತೆ ಒಬ್ಬರು ತಮ್ಮಲ್ಲೇ ಗೊಣಗಿಕೊಂಡರು. ಅವರೊಬ್ಬ ಯೂನಿವರ್ಸಿಟಿ ಪ್ರೊಫೆಸರ್‌, ರೈತ ಮತ್ತು ಮುತ್ಸದ್ದಿ. ಅಮೆರಿಕನ್‌ ಸಾಹಿತ್ಯ ಅಕಾಡೆಮಿಯ ಸದಸ್ಯ. ಹಲವಾರು ವಿಶ್ವವಿದ್ಯಾಲಯಗಳು ಆತನಿಗೆ ಬಿರುದುಗಳನ್ನೂ ಪದವಿಗಳನ್ನೂ ಕೊಟ್ಟಿವೆ. ಸರಳವಾದ, ತಮಾಷೆಯ ಪ್ರಬಂಧಗಳನ್ನು ಬರೆಯುವ ಈತ, ಮೀನು ಹಿಡಿಯುವ ಖಯಾಲಿಗೆ ಹೆಸರಾದವನು. ಮೀನು ಹಿಡಿಯುವ ಸುಖದ ಬಗ್ಗೆ ಅನೇಕ ಪ್ರಬಂಧಗಳನ್ನು ಬರೆದಿದ್ದಾನೆ. ಹೊಟ್ಟೆ ಪಾಡಿಗೆ ಮೀನು ಹಿಡಿದು ಅವುಗಳನ್ನು ಬುಟ್ಟಿಗಳಲ್ಲಿ ಹೊತ್ತು ಮಾರುಕಟ್ಟೆಗಳಲ್ಲಿ ಮಾರುವ ಬೆಸ್ತರಿಗೆ ಮೀನು ಹಿಡಿಯುವುದು ಅಷ್ಟೇನೂ ಖುಷಿಯ ಕೆಲಸವಾಗಿರಲಿಕ್ಕಿಲ್ಲ. ಆದರೆ ಈ ಮಹಾನ್‌ ಸಾಹಿತಿಯ ಪ್ರಬಂಧಗಳಲ್ಲಿ ಮೀನು ಹಿಡಿಯುವುದನ್ನು ಒಂದು ಆಧ್ಯಾತ್ಮಿಕತೆಯ ಮಟ್ಟಕ್ಕೆ ಏರಿಸಲಾಗಿದೆ. ಅದೊಂದು ಪರಮಸುಖದ, ಬಹುಮುಖ್ಯ ಕ್ರಿಯೆ ಎಂಬಂತೆ ವರ್ಣಿಸಲಾಗಿದೆ. ಬಹುಶಃ ನಾವು ಯಾವುದನ್ನು ಮಾಡಲೇ ಬೇಕಾಗಿಲ್ಲವೋ ಅದನ್ನು ಮಾಡಿದರೆ ಅದು ಆಧ್ಯಾತ್ಮಿಕ ಅರ್ಥವನ್ನು ಪಡೆದುಕೊಳ್ಳುತ್ತದೋ ಏನೋ? ಉದಾಹರಣೆಗೆ ಶ್ರೇಷ್ಠ ಸಾಹಿತಿಯಾಬ್ಬ ತಾನು ಬರೆದ ಪತ್ರವನ್ನು ತಾನೇ ಪೋಸ್ಟ್‌ಬಾಕ್ಸಿಗೆ ಹಾಕಿ ಬಂದರೆ ಅದು ಆಧ್ಯಾತ್ಮಿಕತೆ. ತನ್ನ ಚಡ್ಡಿಯನ್ನು ತಾನೇ ತೊಳೆದುಕೊಂಡರೆ ಅದೂ ಆಧ್ಯಾತ್ಮಿಕತೆ. ಮನೆಯಲ್ಲಿ ಸಾಕಷ್ಟು ಆಳುಕಾಳುಗಳಿರುವ ಲೇಖಕ ತಾನೇ ಒಂದು ಕಪ್ಪು ಟೀ ಮಾಡಿಕೊಂಡರೆ ಅದೂ ಆಧ್ಯಾತ್ಮಿಕತೆಯ ಮಟ್ಟಕ್ಕೆ ಏರುತ್ತದೆ.

ನನಗೆ ಪ್ರಶಸ್ತಿ ಬಂದ ಸುದ್ದಿ ಕೇಳುತ್ತಲೇ ಆ ಮೀನುಗಾರ ಸಾಹಿತಿ ಒಂದು ಹೇಳಿಕೆ ಕೊಟ್ಟ ; ಅಮೆರಿಕಾದ ಸಾಹಿತ್ಯಿಕ ಸಂಘಸಂಸ್ಥೆಗಳನ್ನು ಹುರಿದು ಮುಕ್ಕಿದವನಿಗೆ ಪ್ರಶಸ್ತಿ ಕೊಟ್ಟಿದ್ದರಿಂದ ಇಡೀ ಅಮೆರಿಕಾಕ್ಕೆ ಅವಮಾನವಾಗಿದೆ ಎಂದ. ಆತನ ಉದ್ದೇಶ ಏನಿತ್ತೋ ಗೊತ್ತಿಲ್ಲ. ಪ್ರಶಸ್ತಿಯನ್ನೊಂದು ಅಂತಾರಾಷ್ಟ್ರೀಯ ವಿವಾದಕ್ಕೆ ಕಾರಣವಾಗುವಂತೆ ಮಾಡಿ ಅಮೆರಿಕಾ ಆ ಪ್ರಶಸ್ತಿಯನ್ನು ತೆಗೆದುಕೊಳ್ಳಕೂಡದು ಎಂದು ನನ್ನ ಮೇಲೆ ಒತ್ತಡ ತರುವುದು ಅವನ ಹುನ್ನಾರವಾಗಿತ್ತೋ ಏನೋ?

ತನ್ನ ಸಿಟ್ಟನ್ನು ಆತ ಸಾತ್ವಿಕವಾಗಿಯೇ ಕಾರಿಕೊಳ್ಳಬಹುದಾಗಿತ್ತು. ‘ನನಗೆ ಆತನ ಪುಸ್ತಕಗಳು ಖುಷಿ ಕೊಟ್ಟಿಲ್ಲ. ಆದರೂ ಆತನಿಗೆ ಪ್ರಶಸ್ತಿ ನೀಡುವ ಮೂಲಕ ಅಮೆರಿಕಾವನ್ನು ಗೌರವಿಸಿದಂತಾಗಿದೆ’ ಎಂದೇನಾದರೂ ಹೇಳಬಹುದಾಗಿತ್ತು. ಅಮೆರಿಕಾದ ಬಗ್ಗೆ ನಾನು ಮಾಡಿದ ಟೀಕೆಗಳನ್ನು ಆತ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದು ಕಾಣುತ್ತದೆ. ಆರ್ಥಿಕತೆ ಮತ್ತು ಅಕಾರದಲ್ಲಿ ತುಂಬ ಮುಂದುವರಿದಿರುವ ಅಮೆರಿಕಾ ಮನುಷ್ಯನ ಆಳದ ತಲ್ಲಣಗಳನ್ನು ಅರ್ಥಮಾಡಿಕೊಳ್ಳುವಂಥ ಒಂದು ನಾಗರಿಕತೆಯನ್ನು ಇನ್ನೂ ಕಂಡುಕೊಂಡಿಲ್ಲ ಎಂದು ನಾನು ಹೇಳಿದ್ದಕ್ಕೆ ಆತ ಆಘಾತಕ್ಕೊಳಗಾಗಬೇಕಿರಲಿಲ್ಲ.

ಆ ಮೀನುಗಾರನ ಹೇಳಿಕೆಯ ಬಗ್ಗೆ ನಾನು ಇಷ್ಟೊಂದು ಸುದೀರ್ಘವಾಗಿ ಚರ್ಚಿಸಿದ್ದಕ್ಕೆ ಕಾರಣ ಅವನ ಹೇಳಿಕೆಗೆ ಮಹತ್ವ ಕೊಡಬೇಕು ಎಂಬ ಕಾರಣಕ್ಕಲ್ಲ. ಇವತ್ತು ಅಮೆರಿಕಾದ ಬಹುತೇಕ ಓದುಗರು ಮತ್ತು ಲೇಖಕರು ಭ್ರಮೆಯಲ್ಲಿದ್ದಾರೆ. ಅಮೆರಿಕಾವನ್ನು ವೈಭವೀಕರಿಸುವ ಸಾಹಿತ್ಯವಷ್ಟೇ ಒಳ್ಳೆಯ ಸಾಹಿತ್ಯ ಎಂದವರು ನಂಬುತ್ತಾರೆ. ಹೀಗಾಗಿ ತಪ್ಪುಗಳನ್ನೂ ಸದ್ಗುಣಗಳನ್ನೂ ಸಮಾನವಾಗಿ ವೈಭವೀಕರಿಸುತ್ತಾರೆ. ಒಬ್ಬ ಲೇಖಕ ಜನಪ್ರಿಯನೂ ನಂಬಿಕಸ್ತನೂ ಆಗಬೇಕಾಗಿದ್ದರೆ ಆತ ಅಮೆರಿಕನ್ನರ ಮನಸ್ಸಿನಲ್ಲಿದ್ದುದನ್ನೇ ಬರೆಯಬೇಕು. ಆತನ ಕಾದಂಬರಿಯ ನಾಯಕ ಕಡ್ಡಾಯವಾಗಿ ಎತ್ತರವಾಗಿರಬೇಕು, ಸುಂದರನಾಗಿರಬೇಕು, ಶ್ರೀಮಂತನೂ ಪ್ರಾಮಾಣಿಕನೂ ಆಗಿರಬೇಕು. ತುಂಬ ಚೆನ್ನಾಗಿ ಗಾಲ್‌ ಆಡಬೇಕು. ಪ್ರತಿಯಾಂದು ಹಳ್ಳಿಯಲ್ಲೂ ಪರಸ್ಪರ ಸೌಹಾರ್ದದಿಂದ ಬಾಳುವ ಸ್ನೇಹಪರ ನೆರೆಹೊರೆಯವರು ಇರಬೇಕು. ಹುಡುಗಿಯರು ಮದುವೆಗೆ ಮೊದಲು ಎಂಥ ಜಗಳಗಂಟಿಯರಾಗಿದ್ದರೂ ಮದುವೆಯ ನಂತರ ಸದ್ಗುಣ ಸಂಪನ್ನ ಗೃಹಿಣಿಯಾಗಿ, ಮಮತಾಮಯಿ ತಾಯಿಯಾಗಿ ರೂಪಾಂತರ ಹೊಂದಬೇಕು. ಅಮೆರಿಕಾ ಅಂದರೆ ನ್ಯೂಯಾರ್ಕ್‌ ಮತ್ತು ಆಸುಪಾಸಿನ ಪ್ರದೇಶವಷ್ಟೇ ಆಗಿರಬೇಕು. ಅಲ್ಲಿ ಎಲ್ಲರೂ ಕೋಟ್ಯಧೀಶರೇ ಆಗಿರಬೇಕು.

ಇವತ್ತಿಗೂ ಅಮೆರಿಕನ್ನರ ಮನಸ್ಥಿತಿ ಬದಲಾಗಿಲ್ಲ. ಅಮೆರಿಕಾದ ಸಾಹಿತ್ಯಸಂಘಗಳಲ್ಲಿ ಇರುವವರೆಲ್ಲ ಇಂಥ ಲೇಖಕರೇ. ಅನಾದಿಕಾಲದಿಂದಲೂ ಇವರು ಬದಲಾಗಿಲ್ಲ. ಒಂದು ಫ್ಯಾಕ್ಟರಿಯಲ್ಲಿ ಐದೇ ಮಂದಿ ಕೆಲಸಗಾರರು ಇದ್ದಾಗಿನ ಸೌಹಾರ್ದ ಐದು ಸಾವಿರ ಮಂದಿ ಇದ್ದಾಗಲೂ ಇದೆ ಎಂದು ನಂಬಿ ಬರೆಯುತ್ತಾರೆ. ಅಮೆರಿಕಾ ಬೆಳೆದಿದ್ದರೂ ಈ ಲೇಖಕರ ದೃಷ್ಟಿಯಲ್ಲಿ ಅದಿನ್ನೂ 1880ರಲ್ಲೇ ಇದೆ. ಅಂಥ ಕಾದಂಬರಿಗಳನ್ನು ಅವರು ಬರೆದೂ ಬರೆದೂ ಎಸೆಯುತ್ತಾರೆ.

ಇಂಥ ಲೇಖಕರ ಸಂಗದಲ್ಲೂ ಸಂಘದಲ್ಲೂ ಇರುವ ಮೀನುಗಾರ ಸಾಹಿತಿ ನನ್ನನ್ನು ಟೀಕಿಸಿದ್ದರಿಂದ ನನಗೆ ಸಂತೋಷವೇ ಆಗಿದೆ; ನಾನು ಅವರೊಂದಿಗಿಲ್ಲವಲ್ಲ ಸದ್ಯ ಎಂಬ ಕಾರಣಕ್ಕೆ.

ಹೀಗೆ ಮಾತಾಡಿದವನು ಸಿಂಕ್ಲೇರ್‌ ಲೀವಿಸ್‌. ಆತ ನೊಬೆಲ್‌ ಪ್ರಶಸ್ತಿ ಸ್ವೀಕರಿಸುತ್ತಾ ಆಡಿದ ಮಾತುಗಳಿವು. ಅದುವರೆಗೂ ನೊಬೆಲ್‌ ಪ್ರಶಸ್ತಿ ಪಡಕೊಂಡವರು ತಮ್ಮ ದೇಶದ ಬಗ್ಗೆ, ತಮ್ಮ ಸಹಲೇಖಕರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ಧನ್ಯತೆಯೇ ಮೂರ್ತಿವೆತ್ತಂತೆ ವರ್ತಿಸಿದ್ದರೆ ಈತ ಹೀಗೆ ಸಿಟ್ಟಾದ.

ಸಾಹಿತಿಯ ಸಿಟ್ಟು ಕೆಟ್ಟದ್ದು.

***

ಅಮೆರಿಕಾದಲ್ಲಿ ಕುಳಿತು ಕನ್ನಡದಲ್ಲಿ ಬರೆಯುತ್ತಿರುವ ಬಹುತೇಕ ಲೇಖಕರ ಮನಸ್ಥಿತಿಗೂ ಲೀವಿಸ್‌ ಹೇಳಿರುವ ಮೀನುಗಾರ ಸಾಹಿತಿಯ ಮನಸ್ಥಿತಿಗೂ ಅಂಥ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಕೆಲವೇ ಕೆಲವರನ್ನು ಬಿಟ್ಟರೆ ಉಳಿದವರೆಲ್ಲ ಇವತ್ತಿಗೂ ಅದೇ ಟ್ರಾಷ್‌ ಕತೆಗಳನ್ನು ಕವಿತೆಗಳನ್ನು ಬರೆಯುತ್ತಾರೆ. ಮಿಡಿಯೋಕರ್‌ ಆಗಿರುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದವರಂತೆ ಮಾತಾಡುತ್ತಾರೆ. ಭಾರತ ಬದಲಾಗಿದೆ, ಸಂಕೀರ್ಣವಾಗಿದೆ, ಪ್ರತಿಯಾಂದು ಹಳ್ಳಿಯಲ್ಲೂ ಒಂದೊಂದು ಮಹಾನಗರವಿದೆ ಎಂದು ನಂಬಲು ಅವರು ಸಿದ್ಧರಿಲ್ಲ. ಹಾಗೆ ನೋಡಿದರೆ ಕನ್ನಡದ ಬಹುತೇಕ ಲೇಖಕರೂ ಲೀವಿಸ್‌ರ ಮೀನುಗಾರ ಸಾಹಿತಿಯಂತೆ ಭ್ರಮೆಯಲ್ಲಿದ್ದಾರೆ. ಇವತ್ತು ಕೂಡ ‘ಸಾಹಿತ್ಯ ಮನುಷ್ಯ ಸಂಬಂಧಗಳ ಬಗ್ಗೆ ಹೇಳಬೇಕು’ ಎಂದು ಭಾಷಣ ಮಾಡುತ್ತಾರೆ. ಮನುಕುಲದ ಏಳಿಗೆಗೆ ಶ್ರಮಿಸುವುದೇ ಶ್ರೇಷ್ಠ ಸಾಹಿತ್ಯ ಎಂದು ಹೇಳಿಕೆ ಕೊಡುತ್ತಾರೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಕುವೆಂಪು ಸಾಲುಗಳನ್ನು ಉದ್ಧರಿಸುತ್ತಾರೆ. ಕುವೆಂಪು ಅವರ ಹೇಳಿಕೆಯನ್ನು ನೀವು ನಿಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತೀರಿ ಎಂದರೆ ಸಿಟ್ಟಾಗುತ್ತಾರೆ.

ದೂರ ನಿಂತು ಬರೆಯುವವರ ಕಷ್ಟಗಳನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಉದ್ದೇಶಪೂರ್ವಕವಾಗಿ ಎಲ್ಲವನ್ನೂ ಸರಳೀಕರಿಸಿದಾಗ ಸಮಸ್ಯೆಯಾಗುತ್ತದೆ. ಆಗ ಅಲೆಕ್ಸಾಂಡ್ರಾ ಸ್ಯಾಂಚೆಜ್‌ ಗಾವಿಟೋ ಬರೆದ ಎ ವುಮನ್ಸ್‌ ವೀಲ್‌ ಆಫ್‌ ಲೈಫ್‌ ಎಂಬ ಕೃತಿಯಲ್ಲಿ ಮಲ್ಲಿಕಾ ಸಾರಾಭಾಯ್‌ ಇರುತ್ತಾರೆ, ಮಾರ್ಗರೆಟ್‌ ಆಳ್ವಾ ಕೂಡ ಇರುತ್ತಾರೆ. ಭಾರತವನ್ನು ಪ್ರಕಾಶಿಸುವಂತೆ ಮಾಡಿದ ಹತ್ತು ಪ್ರಭೃತಿಗಳ ಪಟ್ಟಿಯಲ್ಲಿ ಐಶ್ವರ್ಯ ರೈ ಹೆಸರು ಇರುತ್ತದೆ. ಆಕೆ ಕನ್ನಡತಿ ಎಂಬ ಕಾರಣಕ್ಕೆ ಅಮೆರಿಕನ್ನಡಿಗರು ಸಂಭ್ರಮ ಪಡುತ್ತಾರೆ.

ಆ ಜಾಗದಲ್ಲಿ ಶೇಷಾದ್ರಿ ವಾಸು ಯಾಕಿರಬಾರದು ಎಂದು ಯಾರೂ ಕೇಳುವುದಕ್ಕೆ ಹೋಗುವುದಿಲ್ಲ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಇದನ್ನೂ ಓದಿ-

‘ಬರಹ’ ವಾಸುವೆಂಬ ‘ಗಣಕರತ್ನ’

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X