ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ಲೇಖಕರನೆಲ್ಲ ನೂಕಾಚೆ ದೂರ...

By Staff
|
Google Oneindia Kannada News
ಕುವೆಂಪು ಓದಿದ್ದಾಯಿತು. ಅಡಿಗರನ್ನು ಅರಗಿಸಿಕೊಂಡಾಯಿತು. ಬೇಂದ್ರೆಯನ್ನು ಬದಿಗಿಟ್ಟಾಯಿತು. ಗೋಕಾಕರನ್ನು ‘ಗೋ’ ಎಂದಾಯಿತು. ಪುತಿನರ ಪುಟ ತಿರುಗಿಸಿ ನಡೆದದ್ದಾಯಿತು. ಕಾರಂತರನ್ನು ಕಡಿದುಹಾಕಿದ್ದಾಯಿತು. ಮಾಸ್ತಿಯವರನ್ನು ಓದಿದ್ದು ಜಾಸ್ತಿಯಾಯಿತು...

ಮುಂದೇನು ಓದಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಿದ್ದರೆ ಕೈಗೆತ್ತಿಕೊಳ್ಳಬಹುದಾದ ಒಳ್ಳೆಯ ಪುಸ್ತಕವೆಂದರೆ ಅರ್ಥಕೋಶ. ಆಡುಮಾತಲ್ಲಿ ನಿಘಂಟು.

ಬಿಡುವಿದ್ದಾಗೆಲ್ಲ ಮತ್ತೆ ಮತ್ತೆ ಓದುವುದಕ್ಕೆ ಡಿಕ್ಷನರಿಗಿಂತ ಒಳ್ಳೆಯ ಪುಸ್ತಕ ಮತ್ತೊಂದಿಲ್ಲ. ಓದುತ್ತಾ ಹೋದರೆ ಅದು ಮತ್ತೊಂದು ಜಗತ್ತಿಗೇ ನಮ್ಮನ್ನು ಒಯ್ಯುತ್ತದೆ. ಜಗತ್ತಿನ ಅತ್ಯುತ್ತಮ ಪತ್ತೇದಾರಿ ಸಾಹಿತ್ಯವಾಗಿಯೂ ನಿಘಂಟನ್ನು ಓದಬಹುದು. ಯಾವ ಪದ ಎಲ್ಲಿ ಹುಟ್ಟಿತು, ಎಲ್ಲಿ ಬೆಳೆಯಿತು, ಹೇಗೆ ನಮ್ಮ ಭಾಷೆಯಾಳಗೆ ನುಸುಳಿತು ಅನ್ನುವುದನ್ನು ನೋಡುತ್ತಿದ್ದರೆ ನಾವಾಡುವ ನುಡಿಯೇ ಕನ್ನಡ ನುಡಿ ಅನ್ನುವುದರಲ್ಲಿ ನಂಬಿಕೆ ಉಳಿಯುವುದಿಲ್ಲ. ಹಾಗೇ ಇಂಗ್ಲಿಷ್‌ ಕೂಡ ಇಂಗ್ಲಿಷ್‌ ಅಲ್ಲ ಅನ್ನುವುದು ಗೊತ್ತಾಗುತ್ತದೆ.

Dictionary : Amazing world of words !ನಿಘಂಟು ಅನ್ನುವ ಹೆಸರೇ ವಿಚಿತ್ರ. ಯಸ್ಮಾದರ್ಥಾನ್ನಿಘಂಟಯತಿ ತಸ್ಮಾನಿಘಂಟುಃ ಎನ್ನುವುದು ನಿಘಂಟಿನ ಕುರಿತಾದ ವ್ಯಾಖ್ಯಾನ. ಯಾವುದರ ಅರ್ಥವನ್ನು ನಿರ್ಧಾರವಾಗಿ ತಿಳಿಸುತ್ತದೋ ಅದು ನಿಘಂಟು. ದಕ್ಷಿಣ ಕನ್ನಡದಲ್ಲಿ ನಿಘಂಟು ಎಂದರೆ ಖಂಡಿತಾ ಅನ್ನುವ ಅರ್ಥದಲ್ಲಿ ಇಂಗ್ಲಿಷಿನ definite ಎಂಬರ್ಥದಲ್ಲಿ ಬಳಕೆಯಾಗುತ್ತದೆ. ‘ನಿಘಂಟು ಬರುತ್ತೇನೆ’ ಎಂದರೆ ಯಾವ ಕಾರಣಕ್ಕೂ ಬರದೇ ಇರುವುದಿಲ್ಲ ಎಂದರ್ಥ. ಬಹುಶಃ ಕರ್ನಾಟಕದಲ್ಲಿ ನಿಘಂಟನ್ನು ಅಷ್ಟು ವ್ಯಾಪಕವಾಗಿ ಬಳಸುವವರು ದಕ್ಷಿಣ ಕನ್ನಡಿಗರೇ ಇರಬೇಕು; ಕನಿಷ್ಠ ಮಾತಲ್ಲಾದರೂ!

ನಮ್ಮಲ್ಲಿ ಡಿಕ್ಷನರಿ ನೋಡುವ ಅಭ್ಯಾಸ ಅಷ್ಟಾಗಿಲ್ಲ. ಯಾವುದೋ ಕತೆಯನ್ನೋ ಕಾದಂಬರಿಯನ್ನೋ ಕವಿತೆಯನ್ನೋ ಓದುವವರು ಕ್ಲಿಷ್ಟಪದ ಎದುರಾದಾಗ ಅದರ ಅರ್ಥ ಹುಡುಕುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಆ ಸಂದರ್ಭ ಯಾವ ಅರ್ಥವನ್ನು ಹೊರಡಿಸುತ್ತದೆ ಎಂದು ಗಮನಿಸಿಕೊಂಡು ಮುಂದಕ್ಕೆ ಹೋಗುತ್ತಾರೆ. ‘ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ’ ಎಂಬಲ್ಲಿ ಮಾಣೋ ಅನ್ನುವ ಪದಕ್ಕೇನು ಅರ್ಥ ಎಂದು ನಾವು ಹುಡುಕುವುದಕ್ಕೆ ಹೋಗುವುದಿಲ್ಲ. ಅರ್ಥಕ್ಕಿಂತ ಪ್ರಾಸಮುಖ್ಯ ಅಂದುಕೊಂಡು ಅದರ ಮುಂದಿನ ಸಾಲಿನಲ್ಲಿರುವ ದೇವರ ದಯೆ ಕಾಣೋ ಜೊತೆ ಮಾಣೋವನ್ನು ಸರಿಹೊಂದಿಸಿಕೊಂಡು ಸಂತೋಷಪಡುತ್ತೇವೆ.

ಪದಗಳ ಅರ್ಥವನ್ನು ತಿಳಿದುಕೊಳ್ಳುವ ಸಂತೋಷವನ್ನು ವಿವರಿಸುವುದು ಕಷ್ಟ. ಪದಬಂಧ ಜನಪ್ರಿಯವಾಗಿರುವುದಕ್ಕೆ ನಮ್ಮಲ್ಲಿರುವ ಶಬ್ದಾಸಕ್ತಿಯೇ ಕಾರಣ. ಒಂದು ಶಬ್ದ ಹೇಗೆ ಹುಟ್ಟಿತು, ಆ ಅರ್ಥವನ್ನು ಹೇಗೆ ಪಡೆದುಕೊಂಡಿತು, ಅದರ ಅರ್ಥವಿಸ್ತಾರ ಏನಾಯಿತು? ಹೇಗೆ ಅರ್ಥವ್ಯತ್ಯಯವಾಯಿತು ಎನ್ನುವುದನ್ನೆಲ್ಲ ನಿಘಂಟು ಅಥವಾ ಪದಕೋಶ ಹೇಳುತ್ತದೆ. ಸಣ್ಣದೊಂದು ಬದಲಾವಣೆಯಿಂದಾಗುವ ಅರ್ಥ ವ್ಯತ್ಯಾಸವೂ ಕುತೂಹಲಕಾರಿ. ಉದಾಹರಣೆಗೆ ತಂಗಿ ಅಂದರೆ ಗೊತ್ತು , ಮಾತಂಗಿ ಅಂದರೆ? ಇತ್ತೀಚೆಗೆ ಯಾರೋ ಪ್ರಾಸಕ್ಕಾಗಿ ತಂಗಿಯ ಜೊತೆ ಮಾತಂಗಿ ಅನ್ನುವ ಪದವನ್ನೂ ಬಳಸಿದ್ದರು. ಮಾತಂಗಿ ಅಂದರೆ ಶಬರಿ, ಬೇಡಿತಿ. ಅದೊಂದು ಕುಲಸೂಚಕವಾದ ಪದ. ಬೇಡಿತಿಯ ರೂಪದಲ್ಲಿ ಕಾಣಿಸಿಕೊಂಡ ದೇವತೆಗೂ ಅದೇ ಹೆಸರು. ಮಾತಂಗ ಅಂದರೆ ಆನೆ, ಬೇಡ, ಶಬರ. ಆದರೆ ಹೆಣ್ಣಾನೆಗೆ ಮಾತಂಗಿ ಅನ್ನುವ ಪದ ಬಳಕೆಯಲ್ಲಿಲ್ಲ.

ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವುದಕ್ಕೆ ಇಳಿಜಾರಾದ ಮೆಟ್ಟಿಲುಗಳಂಥ ಆಸನ ವ್ಯವಸ್ಥೆ ಮಾಡಿರುತ್ತಾರಲ್ಲ. ಅದಕ್ಕೆ ಕನ್ನಡದಲ್ಲಿ ಏನು ಹೇಳುತ್ತಾರೆ ಗೊತ್ತೇ? ನಿಘಂಟು ಹುಡುಕುತ್ತಾ ಹೋಗಿ, ಮಾಡುವೆಟ್ಟ ಎಂಬ ಪದ ಸಿಗುತ್ತದೆ. ಅದು ತೀರಾ ಕನ್ನಡ ಅನ್ನಿಸಿದರೆ ಕೃತಕಾದ್ರಿ ಎಂಬ ಪದವನ್ನೂ ಕೊಟ್ಟಿದ್ದಾರೆ. ಅದರ ಅರ್ಥ ಕೃತಕವಾಗಿ ನಿರ್ಮಾಣವಾದ ಬೆಟ್ಟ. ಸ್ಟೇಡಿಯಂನ ಸುತ್ತಲ ಪ್ರದೇಶ ಬೆಟ್ಟದಂತೆ ಇಳಿಜಾರಾಗಿರುತ್ತದಲ್ಲ ?

ಕನ್ನಡದಲ್ಲೇ ಪದದ ಅರ್ಥ ಹುಡುಕುತ್ತಾ ಹೊರಟರೆ ಹತ್ತಾರು ನಿಘಂಟುಗಳು ಸಿಗುತ್ತವೆ. ಎಲ್ಲಕ್ಕಿಂತ ಹಳೆಯದೂ ಅರ್ಥಪೂರ್ಣವೂ ಆದ ಕಿಟೆಲ್‌ ಪದಕೋಶದಿಂದ ಹಿಡಿದು ಇತ್ತೀಚಿನ ಇಗೋ ಕನ್ನಡದ ತನಕ ಪದಗಳ ಅರ್ಥ, ಸ್ವಾರಸ್ಯ, ಮೂಲ, ವ್ಯುತ್ಪತ್ತಿ ತಿಳಿಸುವ ಪದಾರ್ಥ ಚಿಂತಾಮಣಿಯಿದೆ. ಸಮನಾರ್ಥಕ ಪದಕೋಶದಂತಿರುವ ಅಮರಕೋಶವಿದೆ. ಶಬ್ದಮಣಿದರ್ಪಣವಿದೆ.

ಸುಮ್ಮನೆ ಒಂದು ಪದಕೋಶ ತೆಗೆದು ನೋಡುತ್ತಾ ಹೋಗಿ. ಶಿವ ಅನ್ನುವ ಪದ ಕಣ್ಣಿಗೆ ಬಿದ್ದರೆ ಅದಕ್ಕೆ ಸಂಬಂಧಪಟ್ಟ ಇತರ ಪದಗಳನ್ನೂ ಗಮನಿಸಿ. ಶಿವ ಅಂದರೆ ಮಂಗಳ, ಶುಭ, ತ್ರಿಮೂರ್ತಿಗಳಲ್ಲಿ ಒಬ್ಬ ಇತ್ಯಾದಿ ಅರ್ಥಗಳಿವೆ. ನೆಲ್ಲಿಗಿಡ ಮತ್ತು ಅದರ ಕಾಯಿ ಎಂಬ ನಮಗೆ ಅಷ್ಟಾಗಿ ಗೊತ್ತಿಲ್ಲದ ಅರ್ಥವೂ ಸಿಗುತ್ತದೆ. ಅದೇ ಮುಂದಿನ ಪದ ಶಿವಂಗಿ ಅಂದರೆ ಚಿರತೆಯ ಜಾತಿಗೆ ಸೇರಿದ ಒಂದು ಪ್ರಾಣಿ ಎಂದು ಗೊತ್ತಾಗುತ್ತದೆ. ಒಂದು ಬಗೆಯ ಸಸ್ಯಕ್ಕೂ ಶಿವಂಗಿ ಎನ್ನುತ್ತಾರೆ ಅನ್ನುವುದು ತಿಳಿಯುತ್ತದೆ.

ಮುಂದೆ ಶಿವನಿಗೆ ಸಂಬಂಧಿಸಿದ ಶಿವಕಲೆ, ಶಿವಗಣ. ಶಿವಗಣಾರಾಧನೆ, ಶಿವತಾಂಡವ ಮುಂತಾದ ಪದಗಳನ್ನು ನೋಡುತ್ತಾ ಬಂದಾಗ ಒಂದು ವಿಚಿತ್ರ ಪದ ಗೋಚರಿಸುತ್ತದೆ; ಶಿವದಾನ. ಹಾಗೆಂದರೆ ಶಿವನಿಗೆ ಕೊಟ್ಟ ದಾನ ಅಲ್ಲ, ಕಡೆದ ಮೊಸರು ಅರ್ಥಾತ್‌ ಮಜ್ಜಿಗೆ. ಅದು ಯಾಕೆ ಬಂತು ಅಂತ ಹುಡುಕುತ್ತಾ ಹೋದರೆ ಶಿವರಾತ್ರಿಯಂದು ಶಿವನ ಹೆಸರಿನಲ್ಲಿ ಹಂಚುವ ನೀರು ಮಜ್ಜಿಗೆ ಎಂದು ತಿಳಿಯುತ್ತದೆ. ಅಲ್ಲಿಂದ ಮುಂದಕ್ಕೆ ಹೊರಟರೆ ಶಿವಧಾತು ಎಂಬ ಪದ ಎದುರಾಗುತ್ತದೆ. ಅದಕ್ಕೆ ಅಮೃತ ಶಿಲೆ ಎಂದರ್ಥ. ಆದರೆ ಶಿವಭವನ ಅಂದರೆ ಶಿವಳ್ಳಿ ಬ್ರಾಹ್ಮಣರ ಹೊಟೆಲ್‌ ಅಲ್ಲ, ನರಿಯ ವಾಸಸ್ಥಾನ. ಇದು ವ್ಯಂಗ್ಯದಿಂದ ಬಂದ ಅರ್ಥ ಇರಬಹುದು. ಶಿವನ ದೇವಾಲಯಗಳು ಪೂಜೆಯಿಲ್ಲದೇ ಪಾಳುಬಿದ್ದಾಗ ಅಲ್ಲಿ ನರಿಗಳು ವಾಸಮಾಡುತ್ತಿದ್ದುದನ್ನು ಕಂಡವರು ಶಿವಭವನ ಎಂದು ಕರೆದಿರುವ ಸಾಧ್ಯತೆ ಇದೆ. ಆದರೆ ನಿಜಕ್ಕೂ ಗಾಬರಿಯಾಗುವುದು ಶಿವರಸ ಎಂಬ ಪದವನ್ನು ಕಂಡಾಗ. ಶಿವರಸ ಎಂದರೆ ಮೂರು ದಿನಗಳಷ್ಟು ಹಳೆಯದಾದ ಹುಳಿ ಬಂದಿರುವ ಅನ್ನದ ಗಂಜಿ.

ಅದೇ ಕಿಟೆಲ್‌ ಪದಕೋಶ ತೆರೆದು ನೋಡಿದರೆ ಅರ್ಥದ ಜೊತೆಗೆ ಅದಕ್ಕೆ ಸಂಬಂಧಿಸಿದ ಗಾದೆಗಳೂ ಸಿಗುತ್ತವೆ. ಶಿವರಾತ್ರಿ ಪದದ ಜೊತೆಗೇ ಏಕಾದಶೀ ಮನೆಗೆ ಶಿವರಾತ್ರಿ ಔತಣಕ್ಕೆ ಬಂದ ಹಾಗೆ ಎಂಬ ಗಾದೆಯಿದೆ. ಮಳೆ ಎಂಬ ಪದವನ್ನು ನೋಡುತ್ತಿದ್ದರೆ ಮಳೆಯಿಲ್ಲದ ಪೈರೂ ಮಾತೆಯಿಲ್ಲದ ಕೂಸೂ ಸಮ, ಮಳೆಯಿಲ್ಲದ ಬೆಳೆ ಮತಿಯಿಲ್ಲದ ಕೂಸೂ ಸಮ, ಮಳೇಗೆ ಹೆದರಿ ಹೊಳೇಗೆ ಹಾರಿದ ಹಾಗೆ, ಮಳೆಯಾದರೆ ಕೇಡಲ್ಲ, ಮಗನುಂಡರೆ ಕೇಡಲ್ಲ. ಮಳೆಗಾಲದ ಬಿಸಿಲು ನಂಬಬಾರದು, ನಗೆಗಾರನ ಮಾತು ನಂಬಬಾರದು.. ಹೀಗೆ ಹತ್ತಾರು ನುಡಿಗಟ್ಟುಗಳೂ ಸಿಗುತ್ತವೆ.

ಈಗಂತೂ ಕನ್ನಡದಲ್ಲಿ ನಿಘಂಟುಗಳ ಸುಗ್ಗಿ. ಹೊರಗಿನಿಂದ ಬಂದ ಪದಗಳ ಎರವಲು ಪದಕೋಶವಿದೆ. ಪುರಾಣದ ಪದ ಅರ್ಥಗಳನ್ನು ತಿಳಿಸುವಂಥ ಪುರಾಣ ಭಾರತ ಕೋಶವಿದೆ. ಪರಿಸರ ಕೋಶದಿಂದ ಹಿಡಿದು ಜಾನಪದ ಕೋಶದ ತನಕ ವಿವಿಧ ಪದಗಳ ಅರ್ಥ ತಿಳಿಸುವ ನಿಘಂಟುಗಳಿವೆ.

ಅರ್ಥವೂ ಇದೆ ಅರ್ಥಕೋಶವೂ ಇದೆ; ಅರಿಯುವ ಸ್ವಾರ್ಥ ಇದೆಯಾ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X