• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುದ್ಧಿಜೀವಿಗಳ ಉಡಾಫೆಯೂ ಕನ್ನಡ ಜನಗಳ ಔದಾರ್ಯವೂ..

By Staff
|
  • ಜಾನಕಿ

jaanaki@india.com

ಬೆಂಗಳೂರು ಕಾಸ್ಮೋಪಾಲಿಟನ್‌ ಸಿಟಿ. ಇಲ್ಲಿ ಎಲ್ಲಾ ಭಾಷೆಯೂ ಸಮಾನ. ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು ಅನ್ನುವುದು ಫ್ಯಾಸಿಸ್ಟ್‌ ಧೋರಣೆ.

ಹೀಗೆ ಹಲವಾರು ಬುದ್ಧಿಜೀವಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಅದೃಷ್ಟವಶಾತ್‌ ಹೀಗೆ ಬೊಂಬಡ ಬಜಾಯಿಸುತ್ತಿರುವವರ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಅವರ ಸಿನಿಮಾಗಳನ್ನೂ ಯಾರೂ ನೋಡುತ್ತಿಲ್ಲ. ಹಾಗೆ ನೋಡಿದರೆ ಸೆನ್ಸಿಬಲ್‌ ಆಗಿ ಮಾತಾಡಿದ್ದು ಗಿರೀಶ್‌ ಕಾಸರವಳ್ಳಿ ಒಬ್ಬರೇ; ನಮ್ಮ ಉದ್ದೇಶ ಸರಿಯಾಗಿದೆ, ದಾರಿ ಸರಿಯಾಗಿಲ್ಲದೇ ಇರಬಹುದು. ನಮ್ಮ ಹೋರಾಟ ಪರಭಾಷಾ ಚಿತ್ರಗಳ ವಿರುದ್ಧವೇ ಹೊರತು, ಯಾವುದೇ ಒಂದು ಭಾಷೆಯ ವಿರುದ್ಧ ಅಲ್ಲವೇ ಅಲ್ಲ.

ಆದರೆ ಬುದ್ಧಿಜೀವಿಗಳು ಅದನ್ನು ಕೇಳಿಸಿಕೊಳ್ಳಲಿಲ್ಲ. ಅವರು ಇವತ್ತಿಗೂ ತಮ್ಮತಮ್ಮ ಸಿದ್ಧಾಂತಗಳ ಕಿಟಕಿಬಾಗಿಲುಗಳೇ ಇಲ್ಲದ ಕೋಣೆಯಾಳಗೆ ಬಂಧಿ. ಅವರ ಪ್ರಕಾರ ಭಾಷೆ ಮುಖ್ಯವಲ್ಲ, ಅಭಿವ್ಯಕ್ತಿ ಮುಖ್ಯ, ಕಲೆ ಮುಖ್ಯ. ಕನ್ನಡದ ಬಗ್ಗೆ ಭಾವುಕವಾಗಿ ಮಾತಾಡಿದರೆ ಅವರ ಕರುಳಿಗೆ ಕೊಳ್ಳಿ ಇಟ್ಟ ಹಾಗಾಗುತ್ತದೆ. ವಾಕ್‌ ಸ್ವಾತಂತ್ರದ ಬಗ್ಗೆ, ಕಾಸ್ಮೊಪಾಲಿಟನ್‌ ವ್ಯವಸ್ಥೆಯ ಬಗ್ಗೆ ಅವರು ಮಾತಾಡುತ್ತಾರೆ.

Different faces of Kannada Film crisis..ಆದರೆ ಸುಮ್ಮನೆ ಯೋಚಿಸೋಣ; ಇವತ್ತು ನಾವು ನೀವೆಲ್ಲ ಮಾತಿಗೆ ಕುಳಿತಾಗ ಕನ್ನಡ ಚಿತ್ರಗಳ ಬಗ್ಗೆ ಹತ್ತು ನಿಮಿಷವಾದರೂ ಮಾತನಾಡಬಹುದು. ಇಡೀ ವರುಷದಲ್ಲಿ ಬಿಡುಗಡೆಯಾಗುವ ನೂರು ಸಿನಿಮಾಗಳಲ್ಲಿ ಎರಡಾದರೂ ಖಂಡಿತಾ ಚೆನ್ನಾಗಿರುತ್ತದೆ. ಪತ್ರಿಕೆಗಳಲ್ಲಿ ನೋಡಿ ಮೆಚ್ಚಿಕೊಳ್ಳುವುದಕ್ಕೋ ಬೈಯುವುದಕ್ಕೂ ನಮ್ಮ ನಟರಿದ್ದಾರೆ. ರೀಮೇಕ್‌ ಮಾಡಿದಾಗ ನಮ್ಮ ನಿರ್ದೇಶಕರನ್ನು ಕನಿಷ್ಠ ಬೈದುಕೊಳ್ಳಬಹುದು. ತೀರ ಕೆಟ್ಟ ಸಿನಿಮಾಗಳನ್ನೂ ಕೊಟ್ಟರೆ, ಅವನ್ನು ನೋಡದೇ ನಿರಾಕರಿಸಬಹುದು.

ನಮ್ಮ ಭಾಷೆಯದ್ದೇ ಆಗಿದ್ದಾಗ ಈ ಎಲ್ಲ ಸ್ವಾತಂತ್ರವೂ ಇರುತ್ತದೆ. ಅದಕ್ಕೆ ಕಾರಣ ದೇಸೀಯತೆ. ನಮ್ಮ ಗೆಳೆಯರ ಹಾಗೆ, ನಮ್ಮ ಮಕ್ಕಳ ಹಾಗೆ, ನಮ್ಮ ಗೆಳತಿಯ ಹಾಗೆ ನಮ್ಮ ಭಾಷೆಯ ಸಿನಿಮಾಗಳು ಕೂಡ. ಅವನ್ನು ತಿದ್ದುವ, ಬದಲಾಯಿಸುವ, ಇದ್ದ ಹಾಗೇ ಒಪ್ಪಿಕೊಳ್ಳುವ, ಪೂರಾ ನಿರಾಕರಿಸುವ ಎಲ್ಲಾ ಸ್ವಾತಂತ್ರವೂ ನಮಗಿರುತ್ತದೆ. ನಾವು ಒಪ್ಪದೇ ಹೋದರೆ ಕನ್ನಡ ಸಿನಿಮಾಗಳು ಓಡುವುದಿಲ್ಲ ಎಂಬ ಪ್ರಜ್ಞೆ ನಿರ್ಮಾಪಕನಿಗೂ ನಿರ್ದೇಶಕನಿಗೂ ಇರುತ್ತದೆ. ಹೀಗಾಗಿ ಕುಡಿದು ಬರುವ ಗಂಡ, ಹೆಂಡತಿಯನ್ನು ಓಲೈಸುವ ಹಾಗೆ ಕನ್ನಡದ ನಿರ್ಮಾಪಕ ನಿರ್ದೇಶಕರು ಪ್ರೇಕ್ಷಕರನ್ನು ಓಲೈಸುತ್ತಲೇ ಇರಬೇಕಾಗುತ್ತದೆ.

ಆದರೆ ಪರಭಾಷೆಯ ಚಿತ್ರಗಳ ಮೇಲೆ ನಮಗೆ ಯಾವ ಹಕ್ಕೂ ಇಲ್ಲ. ಅವುಗಳು ನಮ್ಮ ಅಭಿರುಚಿಗೆ ತಕ್ಕ ಹಾಗೆ ತಯಾರಾಗುವುದೂ ಇಲ್ಲ. ಅವುಗಳನ್ನು ಬದಲಾಯಿಸುವ ಶಕ್ತಿಯೂ ನಮಗಿರುವುದಿಲ್ಲ. ಕನ್ನಡದ ಪ್ರೇಕ್ಷಕರು ನೋಡುವುದಿಲ್ಲ ಎಂಬ ಕಾರಣಕ್ಕೆ ಇಂಗ್ಲಿಷ್‌ ಚಿತ್ರಗಳ ಶೈಲಿ ಬದಲಾಗುವುದಿಲ್ಲ. ಕನ್ನಡಿಗರಿಗೆ ಹಿಂಸೆಯೆಂದರೆ ಅಲರ್ಜಿ ಎಂಬ ಕಾರಣಕ್ಕೆ ತೆಲುಗು ಸಿನಿಮಾಗಳು, ರಕ್ತರಹಿತ ಚಿತ್ರಗಳಾಗಿ ರೂಪಾಂತರ ಹೊಂದುವುದಿಲ್ಲ. ಯಾಕೆಂದರೆ ಅವರಿಗೆ ಕನ್ನಡದ ಮಾರುಕಟ್ಟೆ ಮುಖ್ಯವೇನಲ್ಲ. ಇದೇನಿದ್ದರೂ ಬೋನಸ್‌ ಅಷ್ಟೇ.

ಯಾವುದೇ ಮಾರುಕಟ್ಟೆಯಲ್ಲಿ ಗ್ರಾಹಕ ಮುಖ್ಯವಾಗದೇ ಹೋದಾಗ ಆತನಿಗೆ ನಿರ್ಧರಿಸುವ ಶಕ್ತಿ ಇರುವುದಿಲ್ಲ. ಸಿನಿಮಾಗಳ ವಿಚಾರದಲ್ಲೂ ಇದೇ ಆಗಿ, ಅವರು ಕೊಟ್ಟ ಸಿನಿಮಾಗಳನ್ನು ನಾವೆಲ್ಲ ಕೂತು ನೋಡಿ ಅಭಿರುಚಿ ಕೆಡಿಸಿಕೊಂಡು ಆನಂದಿಸಬೇಕಾಗುತ್ತದೆ. ಇಷ್ಟ ಇದ್ರೆ ನೋಡಿ ಅನ್ನುತ್ತಾ ಪರಭಾಷಾ ನಿರ್ಮಾಪಕರು ಅವರ ಚಿತ್ರಗಳನ್ನು ಇಲ್ಲಿಗೆ ತಂದು ಎಸೆಯುತ್ತಾರೆ. ಇಲ್ಲಿ ಅವು ಗೆದ್ದರೂ ಸೋತರೂ ಅವರಿಗೆ ಅಂಥ ವ್ಯತ್ಯಾಸ ಆಗುವುದಿಲ್ಲ. ಬಂದರೆ ಐವತ್ತು ಲಕ್ಷ, ಹೋದರೆ ನಾಲ್ಕು ಕಾಸು ಅನ್ನುವ ಧೋರಣೆ ಅವರದು. ಕನಿಷ್ಠ ಹತ್ತು ಕೋಟಿ ಖರ್ಚು ಮಾಡಿ ಸಿನಿಮಾ ಮಾಡುವ ಅವರಿಗೆ ಈ ಐವತ್ತು ಲಕ್ಷ ಯಾವ ಲೆಕ್ಕವೂ ಅಲ್ಲ.

ಇದೊಂದೇ ಅಲ್ಲ. ಪರಭಾಷಾ ಚಿತ್ರಗಳು ಒಂದರ ಹಿಂದೊಂದರಂತೆ ಬರತೊಡಗಿದರೆ, ಸಿನಿಮಾನಟರ ಕುರಿತಾಗಿರುವ ಕನಿಷ್ಠ ಅಭಿಮಾನವನ್ನೂ ಪ್ರೀತಿಯನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ. ಒಬ್ಬ ಹೊರಗಿನ ಹೀರೋ ಯಾವತ್ತೂ ನಮ್ಮವನಾಗುವುದು ಸಾಧ್ಯವೇ ಇಲ್ಲ. ಎಷ್ಟೇ ಒಳ್ಳೆಯ ಸಿನಿಮಾ ಮಾಡಿದರೂ ವಿಷ್ಣುವರ್ಧನ್‌ ಇಷ್ಟವಾದಷ್ಟು ಚಿರಂಜೀವಿ ಇಷ್ಟವಾಗಲಾರ. ಇದಕ್ಕೆ ಏಕೈಕ ಅಪವಾದ ಎಂದರೆ ಕಮಲಹಾಸನ್‌. ಕೇವಲ ಕೆಲವರಷ್ಟೇ ಭಾಷೆಯ ಮಿತಿಯನ್ನು ಮೀರಿ ಬೆಳೆಯುತ್ತಾರೆ. ಪರಭಾಷೆಯ ಚಿತ್ರಗಳೇ ಕನ್ನಡ ಮಾರುಕಟ್ಟೆಯನ್ನು ತುಂಬಿಕೊಂಡು ಬಿಟ್ಟರೆ ಕೊನೆಗೆ ಕನ್ನಡದಲ್ಲಿ ನಟರೇ ಇಲ್ಲದಂಥ ಪರಿಸ್ಥಿತಿ ಎದುರಾಗಬಹುದು. ಇವತ್ತು ಒರಿಯಾದಲ್ಲಿ, ಮರಾಠಿಯಲ್ಲಿ, ಗುಜರಾತಿನಲ್ಲಿ ಜನಪ್ರಿಯ ನಟರೇ ಇಲ್ಲ. ಮರಾಠಿ ಮತ್ತು ಹಿಂದಿ ಒಂದೇ ಆಗಿಬಿಟ್ಟಿದೆ. ಉತ್ತರಭಾರತವನ್ನೂ ಪೂರ್ತಿಯಾಗಿ ಹಿಂದಿ ಆವರಿಸಿಕೊಂಡಿದೆ. ಭಾರತೀಯ ಚಿತ್ರರಂಗ ಅಂದರೆ ಹಿಂದಿ ಚಿತ್ರಗಳು ಎಂದು ಬೇರೆ ದೇಶಗಳ ಮಂದಿ ತಪ್ಪು ತಿಳಿಯುವಂತಾಗಿದೆ. ಆದರೆ ಹಿಂದಿ ಚಿತ್ರಗಳಿಗಿಂತ ಒಳ್ಳೆಯ ಸಿನಿಮಾಗಳು ಕನ್ನಡದಲ್ಲೂ ಬರುತ್ತವೆ ಅನ್ನುವುದನ್ನು ನಿರೂಪಿಸಲಿಕ್ಕೂ ಇವತ್ತು ಇಲ್ಲಿ ಅವಕಾಶಗಳಿಲ್ಲ.

ಇನ್ನೊಂದು ವೈರುದ್ಧ್ಯ ನೋಡಿ. ನಮಗೆ ಅರ್ಥವಾಗದ ತಮಿಳು, ತೆಲುಗು ಸಿನಿಮಾಗಳನ್ನು ನೋಡಿ ನಾವು ಸಂತೋಷಿಸುತ್ತೇವೆ. ಸಿನಿಮಾ ನೋಡಿಯೇ ಭಾಷೆ ಕಲಿಯುತ್ತೇವೆ. ಎಷ್ಟೋ ಮಂದಿ ಹಿಂದಿ ಚಿತ್ರಗಳನ್ನು ನೋಡಿ ಹಿಂದಿ ಕಲಿತಿದ್ದಾರೆ. ರಾಮಾಯಣ ಪ್ರಸಾರವಾಗುತ್ತಿದ್ದ ದಿನಗಳಲ್ಲಿ ಅನಕ್ಷರಸ್ತರೂ ಕೂಡ ಒಂದು ಮಟ್ಟದ ಹಿಂದಿ ಕಲಿತಿದ್ದರು. ಆದರೆ, ಕನ್ನಡ ಸಿನಿಮಾಗಳನ್ನು ನೋಡುವ ಪರಭಾಷಿಗರಿಗೆ ಸಬ್‌ಟೈಟಲ್‌ ಬೇಕು ಅನ್ನಿಸುತ್ತದೆ. ಇದು ಕನ್ನಡದ ಬಗ್ಗೆ ಇರುವ ನಿರ್ಲಕ್ಷ್ಯ ಅಷ್ಟೇ.

ಈಗ ಅಷ್ಟಕ್ಕೂ ಆಗಿರುವುದಾದರೂ ಏನು? ಪರಭಾಷಾ ಚಿತ್ರಗಳು ಏಳು ವಾರ ನಂತರ ಬರಲಿ ಎಂಬ ಒಂದೇ ಒಂದು ನಿರ್ಧಾರಕ್ಕೆ ಅವರು ಯಾಕೆ ಕಂಗಾಲಾಗಬೇಕು? ಜೊತೆಯಾಗೇ ಬಿಡುಗಡೆ ಮಾಡಬೇಕು ಅನ್ನುವ ಹಠ ಯಾಕೆ? ಇದು ನಮ್ಮೂರು, ಇಲ್ಲಿ ಮೊದಲು ನಮ್ಮ ಸಿನಿಮಾ ಬಿಡುಗಡೆ ಆಗಲಿ. ಆಮೇಲೆ ನಿಮ್ಮ ಸಿನಿಮಾ ತನ್ನಿ ಅನ್ನೋದರಲ್ಲಿ ಏನು ತಪ್ಪಿದೆ?

ಥಿಯೇಟರ್‌ಗಳಿಗೆ ಸಿನಿಮಾ ಸಿಗೋಲ್ಲ ಅಂತ ಥಿಯೇಟರ್‌ ಮಾಲಿಕರು ಬೊಬ್ಬೆ ಹಾಕುತ್ತಿದ್ದಾರೆ. ಅವರು ತೆರಿಗೆ ಕದಿಯುತ್ತಾರೆ ಅನ್ನುವುದು ಕನ್ನಡ ನಿರ್ಮಾಪಕರು ದೂರುತ್ತಾರೆ. ಕನ್ನಡ ಸಿನಿಮಾಗಳಿಗೆ ಜನ ಬರೋಲ್ಲ, ಹೀಗಾಗಿ ನಮ್ಮ ಕ್ಯಾಂಟೀನಿಗೆ ವ್ಯಾಪಾರ ಆಗೋಲ್ಲ ಅಂತ ಥಿಯೇಟರ್‌ ಒಳಗೆ ಕ್ಯಾಂಟೀನ್‌ ಇಟ್ಟುಕೊಂಡವರು ಕೂಗಾಡುತ್ತಾರೆ. ಕನ್ನಡ ಎಂದರೆ ಎಲ್ಲರ ಪಾಲಿಗೂ ವ್ಯಾಪಾರ ಆಗಿಬಿಟ್ಟಿದೆ.

ಪರಭಾಷೆ ಚಿತ್ರಗಳನ್ನು ಈ ಅಖಂಡ ಬುದ್ಧಿಜೀವಿಗಳು ಪ್ರೋತ್ಸಾಹಿಸುತ್ತಾ ಹೋದರೆ ಆಗುವ ಅಪಾಯಗಳನ್ನು ಯಾರೂ ಲೆಕ್ಕಹಾಕಿದಂತಿಲ್ಲ. ನಿಧಾನವಾಗಿ ಒರಿಯಾ ಚಿತ್ರರಂಗದಂತೆಯೋ ಬೋಜ್‌ಪುರಿಯಂತೆಯೋ ಗುಜರಾತಿಯಂತೆಯೋ ಕನ್ನಡ ಚಿತ್ರರಂಗವೂ ಜೀರ್ಣಾವಸ್ಥೆಗೆ ಬಂತು ಅಂತಿಟ್ಟುಕೊಳ್ಳಿ. ಆಗ ನಾವೆಲ್ಲ ಕಂಡುಗೊತ್ತಿರದ ಯಾವನೋ ನಿರ್ದೇಶಕ ಮಾಡಿದ ಸಿನಿಮಾಗಳನ್ನು ನೋಡಬೇಕಾಗುತ್ತದೆ. ಅನ್ಯಗ್ರಹದ ಜೀವಿಗಳಂತೆ ಕಾಣುವ ನಟರು ನಟಿಸಿದ ಚಿತ್ರಗಳನ್ನು ನೋಡಬೇಕಾಗುತ್ತದೆ. ಕನ್ನಡದಲ್ಲಿ ಕತೆ ಬರೆವವರು, ಹಾಡು ಬರೆವವರು, ನಿರ್ದೇಶನ ಬಲ್ಲವರು ಅದಕ್ಕೆ ಅವಕಾಶವಿಲ್ಲದೆ ಸುಮ್ಮನೆ ಕೂತಿರಬೇಕಾಗುತ್ತದೆ. ನಮ್ಮ ಲೇಖಕರ ಕಾದಂಬರಿ ಸಿನಿಮಾ ಆಗುವುದಂತೂ ದೂರವೇ ಉಳಿಯುತ್ತದೆ. ದಿನ ಬೆಳಗ್ಗೆ ಯಾವ ಪತ್ರಿಕೆ ತೆರೆದರೂ ಅದು ಟೈಮ್ಸಾಫಿಂಡಿಯದ ಥರ ಕಾಣಿಸಿ ದಿಗ್ಭ್ರಮೆಗೊಳಿಸುವ ಅಪಾಯವಿದೆ!

ಥಿಯೇಟರ್‌ಗಳು ಕಲ್ಯಾಣಮಂಟಪಗಳ ಹಾಗೆ. ಅಲ್ಲಿ ಯಾವ ಜಾತಿಯವರ, ಯಾವ ಪಂಗಡದವರ ಮದುವೆ ನಡೆಯುತ್ತದೆ ಅನ್ನುವುದು ಅದರ ಮಾಲೀಕನಿಗೆ ಮುಖ್ಯವಾಗಕೂಡದು. ತನ್ನ ಬಾಡಿಗೆ ಬಂದರೆ ಸಾಕು, ಯಾರ ಮದುವೆಯಾದರೆ ಆತನಿಗೇನಂತೆ? ಇದೇ ಧೋರಣೆ ಥಿಯೇಟರ್‌ ಮಾಲಿಕರದೂ ಆಗಬಾರದೇಕೆ? ಪರಭಾಷಾ ಚಿತ್ರಗಳನ್ನೇ ಪ್ರದರ್ಶಿಸುತ್ತೇನೆ ಅಂತ ಮೊಂಡು ಹಿಡಿಯುವ ಥಿಯೇಟರ್‌ ಮಾಲೀಕರು ಕರ್ನಾಟಕದಲ್ಲಿದ್ದಾರೆ ಅಂದರೆ ನಂಬುತ್ತೀರಾ?

ಇದು ನಮ್ಮ ಔದಾರ್ಯ ಆಗಬೇಕೇ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌ !)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more