ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನದಿಯ ನೆನಪಿನ ಹಂಗು ಮತ್ತು ಗುಂಗಿನಲ್ಲಿ..

By Staff
|
Google Oneindia Kannada News
And Quiet flows the Dawn..

ಡಾನ್‌ ನದಿ ಮೆಲ್ಲಗೆ ಹರಿಯುತ್ತಿದೆ ಅನ್ನುವ ಅರ್ಥಕೊಡುವ ಆ ಹೆಸರು ಮತ್ತೆ ಮತ್ತೆ ಕಾಡುತ್ತದೆ. ನದಿಗೆ ಸಂಬಂಧಪಟ್ಟ ಸಂಗತಿಗಳೇ ಹಾಗೆ. ಅವು ಜೀವ ಹಿಂಡಿ ಹಿಪ್ಪೆಮಾಡುತ್ತವೆ. ಒಮ್ಮೆ ಭರಪೂರ ಮತ್ತೊಮ್ಮೆ ಸಪೂರ, ಒಮ್ಮೆ ಮೈತುಂಬಿಕೊಂಡು ಮತ್ತೊಮ್ಮೆ ಗುಪ್ತಗಾಮಿನಿಯಾಗಿ, ಒಮ್ಮೆ ರಕ್ತವರ್ಣದ ರಕ್ಕಸಿಯಾಗಿ ಮತ್ತೊಮ್ಮೆ ಅವರ್ಣನೀಯ ರಾಜಕುಮಾರಿಯಾಗಿ ಹರಿಯುವ ನದಿಗೆ ಮೈಯೆಲ್ಲ ಕಾಲು. ಅಗ್ನಿಗೆ ಮೈಯೆಲ್ಲ ನಾಲಗೆ ಇದ್ದ ಹಾಗೆ!

ಹುಟ್ಟಿದೂರಲ್ಲಿ ನದಿಯಿಲ್ಲ ಅನ್ನುವ ಸಾಲು ಮೊನ್ನೆ ಕಣ್ಣಿಗೆ ಬಿತ್ತು. ಈ ನಾಣ್ಣುಡಿಯನ್ನು ಹೆಣ್ಣಿಗೆ ಹೋಲಿಸುವುದು ಸುಲಭ. ತಲಕಾವೇರಿಯಲ್ಲಿ ಸಣ್ಣಗೆ ಚಿಲುಮೆಯಾಗಿ ಕಣ್ತೆರೆಯುವ ಕಾವೇರಿ ಭಾಗಮಂಡಲದ ತನಕ ಗುಪ್ತಗಾಮಿನಿ. ಆಮೇಲೆ ಆಕೆ ಕೊಡಗನ್ನು ಮುಟ್ಟಿಯೂ ಮುಟ್ಟದ ಹಾಗೆ ಹರಿಯುತ್ತಾಳೆ. ಹೀಗಾಗಿ ಕೊಡವರ ಪಾಲಿಗೆ ಕಾವೇರಿ ಕೊಟ್ಟ ಹೆಣ್ಣು. ದುಬಾರೆಯನ್ನು ದ್ವೀಪಮಾಡಿ, ಕುಶಾಲನಗರಕ್ಕೆ ದೀಪವಾಗಿ, ಪಿರಿಯಾಪಟ್ಟಣವನ್ನು ಹರಸಿ ಕೊನೆಗೆ ಆಕೆ ಸೇರುವುದು ಮೈಸೂರನ್ನು.

ಎಲ್ಲರ ಬದುಕೂ ನದಿಯ ಹಾಗೆ. ಹರಿಯುತ್ತಲೇ ಇರುವುದು ಮೂಲಸೆಲೆ. ನಡುವೆ ಬಂದು ಸೇರಿಕೊಳ್ಳುವ ಉಪನದಿಗಳು ಹತ್ತಾರು, ನೂರಾರು. ಅವುಗಳ ನೆನಪೆಲ್ಲವನ್ನೂ ಒಗ್ಗೂಡಿಸಿಕೊಂಡು ಬದುಕು ಮುಂದಕ್ಕೆ ಸಾಗುತ್ತದೆ. ಕೊನೆಗೂ ಹಂಬಲ ಒಂದೇ ಒಂದು; ಯಾವುದಾದರೂ ಕಡಲನ್ನು ಸೇರುವುದು.

ಅಷ್ಟಕ್ಕೂ ಕಡಲನ್ನು ಸೇರುವ ತವಕ ಯಾಕೆ ಅನ್ನುವುದೇ ಅರ್ಥವಾಗುವುದಿಲ್ಲ. ಜಿ. ಎಸ್‌. ಶಿವರುದ್ರಪ್ಪ ಬರೆದ ಹಾಡು ಕೇಳಿ;

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಸೇರಬಲ್ಲೆನೆ ಒಂದು ದಿನ..

ಹೀಗೆ ಕಾಣದ ಕಡಲಿಗೆ ಮನಸ್ಸೇಕೆ ಹಂಬಲಿಸುತ್ತದೆ. ಕಡಲು ಸೇರಿದ ತಕ್ಷಣ ನದಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದಲ್ಲ ? ಅದು ಗೊತ್ತಿದ್ದೂ ನದಿ ಕಡಲು ಸೇರಲು ತುಡಿಯುತ್ತದಾ? ಅಥವಾ ಕಡಲನ್ನು ಸೇರುವುದು ನದಿಯ ಅನಿವಾರ್ಯ ಕರ್ಮವಾ?

ಮನಸ್ಸು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತದೆ. ನಾವು ಜೀವನವನ್ನು ಜೀವನದಿ ಎಂದು ಕರೆದು ಒಂದು ಅಪೂರ್ವ ರೂಪಕ ಸೃಷ್ಟಿಸಿದ ಸಂಭ್ರಮದಲ್ಲಿರುತ್ತೇವೆ. ಆದರೆ ನದಿಗೆ ನೆನಪುಗಳ ಹಂಗಿಲ್ಲ. ತಾನು ಹರಿದು ಬಂದ ಹಾದಿಯನ್ನಾಗಲೀ, ತನ್ನೊಳಗೆ ಮುಳುಗೆದ್ದವರನ್ನಾಗಲೀ, ತಾನು ಕೊಂದು ಮುಳುಗಿಸಿ ತೇಲಿಸಿದ ಜೀವಗಳನ್ನಾಗಲೀ ನದಿ ನೆನಪಲ್ಲೇ ಇಟ್ಟುಕೊಳ್ಳುವುದಿಲ್ಲ. ಅದಕ್ಕೇ ಎಲ್ಲಿಂದ ನೋಡಿದರೂ ನದಿಗೆ ಅದೇ ಮೈ. ಅದೇ ಸೆಳೆತ. ಪ್ರತಿಯಾಬ್ಬರಿಗೂ ನದಿ ಹೊಸದು.

ನದಿಯಿಲ್ಲದ ಊರು ನೋಡಿದ್ದೀರಾ? ಹಾಗೆ ನೋಡಿದರೆ ನದಿಯಿಲ್ಲದೆ ಊರು ಹುಟ್ಟಿಕೊಳ್ಳುವುದೇ ಇಲ್ಲ. ನಮ್ಮ ಎಲ್ಲಾ ನಾಗರಿಕತೆಗಳೂ ಮೈದಳೆದದ್ದು ನದಿಯ ದಡದಲ್ಲೇ. ಆದ್ದರಿಂದಲೇ ನಮ್ಮ ನೆನಪುಗಳಲ್ಲಿ ನದಿಗೊಂದು ವಿಶೇಷ ಸ್ಥಾನ. ನದಿಗೆ ನೆನಪುಗಳಿಲ್ಲದೇ ಇರಬಹುದು. ಆದರೆ ನಮ್ಮ ಧಮನಿಧಮನಿಯಲ್ಲಿ ನದಿಯ ನೆನಪು. ಆ ನೆನಪಲ್ಲೇ ನಿತ್ಯ ಜಳಕ. ಆ ಜಳಕಕ್ಕೆ ಮನ ಪುಳಕ.

***

ಪ್ರತಿಯಾಬ್ಬರ ಒಳಗೂ ಒಂದು ನದಿಯಿದೆ. ಅದು ಕೂಡ ಮನಬೇಸಗೆಗೆ ಒಣಗುತ್ತದೆ. ಭಾವಶ್ರಾವಣಕ್ಕೆ ಮೈದುಂಬಿಕೊಳ್ಳುತ್ತದೆ. ಗ್ರೀಷ್ಮಕ್ಕೆ ಬತ್ತಿ ನೀರಗೆರೆಯಾಗುತ್ತದೆ. ಗುಪ್ತವಾಗಿ ಮಳೆಗೆ ಕಾಯುತ್ತದೆ. ಯಾವ ಜೀವದ ಮಳೆ ಯಾವುದೆಂದು ಯಾರಿಗೆ ಗೊತ್ತು? ಮತ್ತೆ ಸಿಗುವ ಗೆಳೆಯ, ಹಳೆಯ ಫೋಟೋ ತೆಗೆದಾಗ ನೆನಪಾಗುವ ಗೆಳತಿ, ಒಂದು ಭಾವಗೀತೆ, ಯಾವುದೋ ಒಂದು ರಾಗ ಮಳೆಯಾಗಿ ಬಂದು ಮತ್ತೆ ಒಳಗಿನ ನದಿಗೆ ಮಹಾಪೂರ. ಅಲ್ಲಿಯ ತನಕ ಕಾಯುವುದಿದೆ ನೋಡಿ, ಅದುವೆ ಯಾತನೆ.

ಹಾಗೇ ಪ್ರತಿಯಾಬ್ಬರ ಒಳಗಿನ ನದಿಯೂ ಮೌನಿ. ಆ ನದಿಗೆ ಎಲ್ಲವೂ ಗೊತ್ತಿರುತ್ತದೆ. ಆದರೆ ಅದು ಏನನ್ನೂ ಹೇಳುವುದಿಲ್ಲ. ಗುಟ್ಟುಗಳನ್ನು ಮುಳುಗಿಸಿ, ನೆನಪುಗಳನ್ನು ಕರಗಿಸಿ, ಕೇವಲ ದೋಣಿಗಳನ್ನು ಮಾತ್ರ ಅದು ತೇಲಿಸುತ್ತದೆ. ಆ ದೋಣಿಯಲ್ಲಿ ಕುಳಿತು ಸಂಚಾರ ಮಾಡುವವರಿಗೆ ನದಿಯ ಒಳಗುಟ್ಟು ಅರ್ಥವೇ ಆಗುವುದಿಲ್ಲ. ನದಿಯ ಆಳವೂ ತಿಳಿಯುವುದಿಲ್ಲ. ಒಬ್ಬೊಬ್ಬರದು ಒಂದೊಂದು ಆಳ. ಆ ಆಳ ತಿಳಿಯದೇ ಇದ್ದಾಗಷ್ಟೇ ಬದುಕು ನಿರಾಳ.

ನದಿಗೆ ಮಾತು ಬಂದಿದ್ದರೆ ?

ಎಷ್ಟೊಂದು ಕತೆಗಳು ಹುಟ್ಟಿಕೊಳ್ಳುತ್ತಿದ್ದವು. ಎಷ್ಟೊಂದು ಪ್ರೇಮಕಾವ್ಯಗಳು ಅರಳುತ್ತಿದ್ದವು. ಎಷ್ಟು ಬೇಗುದಿಗಳು ಅರ್ಥವಾಗುತ್ತಿದ್ದವು. ಕನಿಷ್ಠ ನದಿಯ ನೀರಲ್ಲಿ ಕಣ್ಣೀರೆಷ್ಟು, ಮಳೆ ನೀರೆಷ್ಟು ಅನ್ನುವುದಾದರೂ ಅರ್ಥವಾಗುವ ಹಾಗಿದ್ದರೆ? ಇಡೀ ಮನುಕುಲದ ದುಃಖವೇ ಮಡುವಾಗಿ ಹರಿದಿದೆಯೇನೋ ಅನ್ನಿಸುವಂತೆ ವಿಷಾದದಿಂದ ಹರಿಯುವ ನದಿಗಳಿದ್ದಾವೆ. ಅವುಗಳ ಒಳಮನಸ್ಸೂ ನಮಗೆ ಅರ್ಥವಾಗುವುದಿಲ್ಲ.

ಯಾವುದಾದರೂ ನದಿಯ ಎದುರು ಒಂದಷ್ಟು ಹೊತ್ತು ಸುಮ್ಮನೆ ಕುಳಿತುಕೊಳ್ಳಿ. ನದಿಯನ್ನೇ ನೋಡುತ್ತಿರಿ. ನದಿಯ ಹರಿವಿನ ಜೊತೆಗೆ ನೋಟವೂ ಹರಿಯುತ್ತದೆ. ಮತ್ತೆ ಮರಳಿ ಮೂಲ ಬಿಂದುವಿಗೆ ಮರಳುತ್ತದೆ. ಹೀಗೆ ದೃಷ್ಟಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸಾಗುತ್ತದೆ. ಹಾಗೆ ಸಾಗುತ್ತಿದ್ದ ಹಾಗೆ ಈ ಜಗತ್ತು ಮರೆತುಹೋಗುತ್ತದೆ. ನದಿಯ ಸೆಳವಿನಲ್ಲಿ ಎಲ್ಲ ನೆನಪುಗಳೂ ಕೊಚ್ಚಿಕೊಂಡು ಹೋಗಿ ಪೂರ್ತಿ ಖಾಲಿಯಾಗುತ್ತೇವೆ.

ಅಂಥ ಧ್ಯಾನಸ್ಥ ಸ್ಥಿತಿ ಬೇರೆಲ್ಲೂ ನಮಗೆ ದಕ್ಕುವುದಿಲ್ಲ.

***

ಇದನ್ನೆಲ್ಲ ಸಿನಿಮಾ ಹಾಡಿನಲ್ಲೇ ಚಿ. ಉದಯಶಂಕರ್‌ ಎಷ್ಟು ಸರಳವಾಗಿ ಹೇಳಿದ್ದರು; ಹೃದಯದಲಿ ಇದೇನಿದು... ನದಿಯಾಂದು ಓಡಿದೆ..

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X