ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತೆ ಮತ್ತು ರಾಜಕಾರಣ; ಮಧ್ವರದ್ದೊಂದು ರಾಮಾಯಣ

By Staff
|
Google Oneindia Kannada News
ಕವಿಗೆ ಏನಾದರೂ ಮಾಡಬೇಕು ಅನ್ನುವ ವಿಚಿತ್ರ ಉತ್ಸಾಹ ರಾಜಕಾರಣಿಗಳನ್ನು ಯಾಕೆ ಅಮರಿಕೊಳ್ಳುತ್ತದೆಯೋ ಗೊತ್ತಿಲ್ಲ. ಯಾವುದೇ ಸಾಹಿತಿಯ ಯಾವುದೇ ಪುಸ್ತಕವನ್ನು ಓದದ ರಾಜಕಾರಣಿ ಕೂಡ ಸಾರ್ವಜನಿಕವಾಗಿ ತಾನೊಬ್ಬ ಸಾಹಿತ್ಯ ಪ್ರೇಮಿ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಾನೆ. ಪತ್ರಿಕೆಯಲ್ಲಿ ವಾರವಾರ ಪ್ರಕಟವಾಗುವ ಕತೆಗಳಿಂದ ಹಿಡಿದು, ಕಥಾಸಂಕಲನಗಳ ತನಕ ಯಾವುದನ್ನೂ ತಿರುವಿಹಾಕದ ಮನುಷ್ಯನ ಹತ್ತಿರ ಹೋಗಿ ‘ನಿಮಗೆ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲ’ ಅಂದುನೋಡಿ. ಆತ ಕೆಂಡಾಮಂಡಲ ಸಿಟ್ಟಾಗುತ್ತಾನೆ.

ಅದು ಸಾಹಿತ್ಯಕ್ಕಿರುವ ಶಕ್ತಿ. ಸಾಹಿತ್ಯ ಮತ್ತು ಕಲೆಯನ್ನು ಓಲೈಸುವುದು ತಮ್ಮ ಕರ್ತವ್ಯ ಎಂದು ಇವತ್ತಿನ ಮಂತ್ರಿಗಳೂ ಅಂದುಕೊಂಡಿದ್ದಾರೆ. ಆ ಪರಂಪರೆ ಬಂದದ್ದು ನಮ್ಮ ರಾಜರುಗಳ ಚರಿತ್ರೆಯಿಂದ. ಪ್ರತಿಯಾಬ್ಬ ಮಹಾರಾಜನ ಚರಿತ್ರೆ ತೆಗೆದುನೋಡಿದರೂ, ಆತ ಸಾಹಿತ್ಯ ಪ್ರಿಯನಾಗಿದ್ದ, ಸಂಗೀತ ಮತ್ತು ಕಲೆಯ ಆರಾಧಕನಾಗಿದ್ದ. ಆತನ ಆಸ್ಥಾನಗಳಲ್ಲಿ ಕವಿಗಳಿಗೆ ವಿಶೇಷ ಮನ್ನಣೆಯಿತ್ತು. ಆತ ನವರತ್ನಗಳೆಂದು ಕರೆಯಬಹುದಾದ ಒಂಬತ್ತು ಮಂದಿ ಕವಿಗಳನ್ನು ಹೊಂದಿದ್ದ ಎಂದೆಲ್ಲ ಬರೆದದ್ದು ಕಣ್ಣಿಗೆ ಬೀಳುತ್ತದೆ.

ಆ ರಾಜರ ಚಾಳಿಯೇ ಇವತ್ತು ರಾಜಕಾರಣಿಗಳಿಗೂ ಅಂಟಿಕೊಂಟಿದೆ. ಮಂತ್ರಿಗಳೂ ತಾವೆಲ್ಲ ರಾಜರೇ ಅಂದುಕೊಂಡಿರೋದರಿಂದ ಕವಿಗಳಿಗೆ, ಸಾಹಿತ್ಯಕ್ಕೆ, ಸಂಗೀತಕ್ಕೆ ರಾಜಾಶ್ರಯ ಕೊಡುವುದು ತಮ್ಮ ಹೆಚ್ಚುಗಾರಿಕೆ ಅಂದುಕೊಂಡಿದ್ದಾರೆ. ಹೀಗಾಗಿ ಸಂದರ್ಭ ಸಿಕ್ಕಾಗೆಲ್ಲ ಮುಖ್ಯಮಂತ್ರಿಗಳಿಂದ ಹಿಡಿದು ಸಮಾಜಕಲ್ಯಾಣ ಸಚಿವರ ತನಕ ಪ್ರತಿಯಾಬ್ಬರೂ ಸಾಹಿತಿಗಳನ್ನು ಕೊಂಡಾಡುತ್ತಾರೆ.

ಆದರೆ ರಾಜರುಗಳ ಕವಿಪ್ರೀತಿಗೂ ರಾಜಕಾರಣಿಗಳ ಕಾವ್ಯಾಸಕ್ತಿಗೂ ಒಂದು ವ್ಯತ್ಯಾಸವಿದೆ. ನಮ್ಮ ಮಹರಾಜರುಗಳ ಆಸ್ಧಾನದಲ್ಲಿದ್ದ ಕವಿಗಳೆಲ್ಲ ಹೊಗಳುಭಟರು. ಅವರ ಕಾವ್ಯಗಳೆಲ್ಲ ಮಹಾರಾಜರನ್ನು ಸ್ತುತಿಸುವಂಥವುಗಳೇ. ರಾಜರ ಆಶ್ರಯ ಮತ್ತು ಆಸರೆಯಲ್ಲಿ ಜೀವ ಹಿಡಿದುಕೊಂಡಿದ್ದ ಕವಿಗಳಿಗೆ ರಾಜರನ್ನು ಹೊಗಳದೇ ಬೇರೆ ದಾರಿಯಿರಲಿಲ್ಲ. ಅವರು ತಮ್ಮ ಬೋಳೇಶಂಕರ ಮಹಾಪ್ರಭುವಿನ ಮೇಲೆ ಎಂಥಾ ಕೆಟ್ಟ ಪದ್ಯ ರಚಿಸಿ ಹಾಡಿದರೂ ಆಸ್ಥಾನದಲ್ಲಿದ್ದ ಇತರ ಕತ್ತೆಗಳು ಮೆಚ್ಚಿಕೊಳ್ಳಲೇಬೇಕಿತ್ತು. ಮಹಾರಾಜರ ಮೇಲೆ ಬರೆದ ಪದ್ಯವನ್ನು ಮೆಚ್ಚಿಕೊಳ್ಳದೇ ಇದ್ದರೆ ಮಹಾರಾಜರನ್ನೇ ಮೆಚ್ಚಿಕೊಳ್ಳದೇ ಇದ್ದಂತೆ!

ನಮ್ಮ ರಾಜಕಾರಣಿಗಳೂ ಕವಿಗಳಿಂದ ಅದನ್ನೇ ನಿರೀಕ್ಪಿಸುತ್ತಿದ್ದರೋ ಏನೋ? ಆದರೆ ಅವರ ದುರಾದೃಷ್ಟಕ್ಕೆ ಇದು ಪ್ರಜಾಪ್ರಭುತ್ವ. ಕವಿಗಳನ್ನು ಗದರಿಸುವಂತಿಲ್ಲ, ಓಲೈಸಿಕೊಂಡೇ ಬಾಳಬೇಕು. ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ ಎಂದು ಹಾಡುತ್ತಾ ಮಂತ್ರಿಗಳನ್ನೇ ಗೇಲಿ ಮಾಡುತ್ತಿದ್ದರೂ ಮಂತ್ರಿಗಳು ಹಲ್ಲು ಕಿರಿಯಬೇಕೇ ವಿನಾ ಹಲ್ಲು ಕಡಿಯಬಾರದು. ಇದರ ಮೇಲೆ ಬೇರೇನಾದರೂ ರಗಳೆ ಮಾಡಿದರೆ, ಕವಿತೆಯನ್ನು ದೂರಿದರೆ ಕವಿಗಳು ಸುಮ್ಮನಿರುತ್ತಾರಾ? ಕಂಡ ಕಂಡ ಪತ್ರಿಕೆಗಳಲ್ಲಿ ಕಂಡ ಕಂಡ ಶೈಲಿಯಲ್ಲಿ ಪದ್ಯಗಳನ್ನೋ ಪಾಷಾಣಗಳನ್ನೋ ಬರೆದು ಪ್ರಕಟಿಸುತ್ತಾರೆ. ಮಂತ್ರಿಗಳಿಗೆ ಇರುಸುಮುರುಸು ಮಾಡುತ್ತಾರೆ.

ಕುವೆಂಪು ಅವರ ಕವಿತೆಯನ್ನು ‘ನಾಡಗೀತೆ’ ಮಾಡಲು ಹೊರಟಿದ್ದರಲ್ಲಿ ಇದಕ್ಕಿಂತ ಹೆಚ್ಚಿನ ಪ್ರೀತಿಯಾಗಲೀ ಅಕ್ಕರೆಯಾಗಲೀ ಯಾವ ರಾಜಕಾರಣಿಗೂ ಇರುವುದಕ್ಕೆ ಸಾಧ್ಯವಿಲ್ಲ. ಕುವೆಂಪು ಏನೇನು ಬರೆದಿದ್ದಾರೆ ಅನ್ನುವುದು ನಮ್ಮ ರಾಜಕಾರಣಿಗಳಿಗೆ ಗೊತ್ತೇ ಇರುವುದಿಲ್ಲ. ಕುವೆಂಪು ಬಿಡಿ, ಕಾರಂತರು, ಬೇಂದ್ರೆ ಬರೆದ ಕವಿತೆಗಳನ್ನೂ ಅವರು ಓದಿರುವುದಿಲ್ಲ. ಕನ್ನಡದ ‘ಜನಪ್ರಿಯ ನಟ’ ವಿಷ್ಣುವರ್ಧನ್‌ ಸಂದರ್ಶನವೊಂದರಲ್ಲಿ ಕುವೆಂಪು ಬಗ್ಗೆ ತನಗೇನೂ ಗೊತ್ತಿಲ್ಲ ಅಂತ ಒಪ್ಪಿಕೊಂಡಿದ್ದರು. ಅವರೇ ನಟಿಸಿದ ‘ಹಂತಕನ ಸಂಚು’ ಚಿತ್ರದಲ್ಲಿ ಕುವೆಂಪು ರಚಿಸಿದ ‘ಜೀವನಾ ಸಂಜೀವನಾ’ ಹಾಡನ್ನು ಬಳಸಿಕೊಂಡಿದ್ದರು. ಅಷ್ಟು ಒಳ್ಳೆಯ ಗೀತೆ ಬರೆದವರು ಯಾರು ಎಂದು ತಿಳಿಯುವ ಉತ್ಸಾಹವೂ ಆಗ ಆ ನಟರಲ್ಲಿ ಇರಲಿಲ್ಲವೇ ಎಂದು ಕೇಳಬೇಡಿ. ಅವರಿಗೆ ಅದಕ್ಕೆಲ್ಲ ಪುರುಸೊತ್ತಿಲ್ಲ. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂದ ವರನಟನ ಮಗ ಶಿವರಾಜ್‌ಕುಮಾರ್‌ ‘ಚಿಗುರಿದ ಕನಸು’ ಚಿತ್ರದಲ್ಲಿ ನಟಿಸಲು ಒಪ್ಪಿದ ಸಂದರ್ಭದಲ್ಲಿ ಕತೆಯ ಬಗ್ಗೆ ಹೇಳುತ್ತಾ ‘One mr. karanth has written this story. He is very famous writer it seems’ ಎಂದ್ದಿದ್ದನ್ನೂ ಪತ್ರಿಕೆಗಳಲ್ಲೇ ಓದಿದ ನೆನಪು.

ಅಷ್ಟರ ಮಟ್ಟಿಗೆ ಸಾಹಿತ್ಯ ಮತ್ತು ಸಾಹಿತಿ ನಮ್ಮಲ್ಲಿ ಅಲಂಕಾರದ ವಸ್ತು. ಅದು ಒಂದು ರೀತಿಯಲ್ಲಿ ಕನ್ನಡನಾಡಿನ ಸಂಸ್ಕೃತಿ ಇದ್ದಹಾಗೆ. ಎಲ್ಲರಿಗೂ ಎಲ್ಲ ಸೌಲಭ್ಯಗಳೂ ಬೇಕು; ಆಧುನಿಕತೆ ಬೇಕು; ವಿದೇಶಿ ವಸ್ತುಗಳು ಬೇಕು; ಐಷಾರಾಮ ಬೇಕು. ಅದರ ನಡುವೆಯೇ ಆಗಾಗ ಸಂಸ್ಕೃತಿ ಉಳಿಸಿ ಎಂದು ಕೂಗು ಹಾಕುತ್ತಿರಬೇಕು. ಹಾಗೆ ಹೇಳುತ್ತಿದ್ದರೆ ಆತ ಕನ್ನಡಪರ; ನಾಡಿನ ಪರ. ಸಾಹಿತ್ಯ ಕೂಡ ಅಷ್ಟೇ. ಯಾವುದನ್ನೂ ಓದಬೇಕಾಗಿಲ್ಲ, ಕೇವಲ ಹೇಳಿಕೊಂಡು ತಿರುಗಾಡಿಕೊಂಡಿದ್ದರೆ ಸಾಕು. ಸರ್ಕಾರ ವರುಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ನಡೆಸಿದರೆ ಆ ರಾಜ್ಯದಲ್ಲಿ ಸಾಹಿತ್ಯಕ್ಕೆ ಭಾರೀ ಮನ್ನಣೆ, ರಾಜಮರ್ಯಾದೆ. ಯಾವುದಾದರೂ ಸಾಹಿತಿಗೆ ಅಕಾಡೆಮಿ ಪ್ರಶಸ್ತಿಯನ್ನೋ ರಾಜ್ಯೋತ್ಸವ ಪ್ರಶಸ್ತಿಯನ್ನೋ ಕೊಟ್ಟರೆ ಅದು ಸಾಹಿತ್ಯಕ್ಕೆ ಸಲ್ಲಿಸುವ ಸೇವೆ.

ಇಂಥ ಸೇವೆ ಸಲ್ಲಿಸುವ ಸಲುವಾಗಿಯೇ ಕುವೆಂಪು ಅವರ ‘ಭಾರತ ಜನನಿಯ ತನುಜಾತೆ’ ಕವಿತೆಯನ್ನು ನಾಡಗೀತೆ ಮಾಡುವುದಕ್ಕೆ ಸರ್ಕಾರ ಕೈಹಾಕಿದ್ದು. ಹಾಗೆ ಮಾಡುವ ಮೂಲಕ ಎಲ್ಲರನ್ನೂ ಓಲೈಸಬಹುದು ಮತ್ತು ಸಾಹಿತ್ಯದ ಮೇಲಿರುವ ಸರ್ಕಾರೀ ಪ್ರೀತಿ ವ್ಯಕ್ತವಾಗಬಹುದು ಎಂದು ಸರಕಾರ ನಂಬಿತ್ತು ಕೂಡ. ಆದರೆ ನಾಡಗೀತೆ ಮಾಡುವುದರಿಂದ ಕವಿಗೆ ಯಾವ ಗೌರವವನ್ನೂ ತೋರಿಸಿದಂತೆ ಆಗುವುದಿಲ್ಲ ಎಂದು ಯೋಚಿಸುವ ಶಕ್ತಿ ಅಲ್ಲಿ ಯಾರಿಗೂ ಇರಲಿಲ್ಲ. ಅದರ ಬದಲು ಕುವೆಂಪು ಅವರ ಕೃತಿಗಳನ್ನು ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಮಾಡಿದಂತೆ ಕಡಿಮೆ ಬೆಲೆಗೆ ಮುದ್ರಿಸಿ ಮಾರಬಹುದಾಗಿತ್ತು. ಎಲ್ಲಾ ಶಾಲೆಗಳಿಗೂ ‘ಕುವೆಂಪು ಸಮಗ್ರ ಕೃತಿಸಂಗ್ರಹ’ವಿರುವ ಲೈಬ್ರರಿಯನ್ನು ಒದಗಿಸಬಹುದಾಗಿತ್ತು. ಕುವೆಂಪು ಅವರ ಕಾದಂಬರಿಗಳು ಎಲ್ಲರಿಗೂ ಸಿಗುವಂತೆ ಮಾಡಬಹುದಾಗಿತ್ತು. ಗಿರೀಶ್‌ ಕಾಸರವಳ್ಳಿಯಂಥ ನಿರ್ದೇಶಕರಿಗೆ ಕುವೆಂಪು ಅವರ ಒಂದು ಕಾದಂಬರಿಯನ್ನು ಧಾರಾವಾಹಿ ಮಾಡಿಕೊಡುವಂತೆ ಕೇಳಿಕೊಳ್ಳಬಹುದಿತ್ತು.

ಆದರೆ ಅದನ್ನೆಲ್ಲ ಬಿಟ್ಟು ನಾಡಗೀತೆ ಮಾಡುವ ಹುಂಬ ನಿರ್ಧಾರಕ್ಕೆ ಸರ್ಕಾರ ಕೈಹಾಕಿದೆ. ನಾಡಗೀತೆಯಾಗುತ್ತಿದ್ದಂತೆ ತಮ್ಮ ಹೆಸರೇಕಿಲ್ಲ ಎಂದು ಮಾಧ್ವರು ರಗಳೆ ತೆಗೆದಿದ್ದಾರೆ. ಹೆಸರು ಆರಂಭದಲ್ಲಿ ಇರಲಿಲ್ಲ, ಆಮೇಲೆ ಇತ್ತು, ಮತ್ತೆ ಕಿತ್ತರು ಎನ್ನುವುದು ಮಾಧ್ವರ ಆರೋಪ. ಒಬ್ಬ ಕವಿಯ ಕಾವ್ಯದಲ್ಲಿ ಮಧ್ವಾಚಾರ್ಯರ ಹೆಸರು ಪ್ರಸ್ತಾಪವಾಗುವುದು ಮುಖ್ಯ ಅಂತ ಮಾಧ್ವರಿಗೆ ಅನ್ನಿಸಿತು ನೋಡಿ, ಅದು ಕುವೆಂಪುವಿಗೆ ಮಾಧ್ವರು ಸಲ್ಲಿಸಿದ ಗೌರವ ಎಂದು ಭಾವಿಸಬಹುದು. ‘ಅವರ ಕಾವ್ಯದಲ್ಲಿ ಇಲ್ಲದೇ ಇದ್ರೇನಂತೆ, ಅದರಿಂದ ಮಧ್ವರಿಗೆ ಬಂದ ಕುಂದೇನು?’ ಎಂದು ನಿರ್ಲಕ್ಷ ್ಯ ಮಾಡದೇ ಇದ್ದದ್ದು ಕಾವ್ಯಪ್ರೀತಿಯಿಂದಲೋ ಕೇವಲ ಪ್ರತಿಷ್ಠೆಯಿಂದಲೋ ಅನ್ನುವುದು ತೀರ್ಮಾನ ಆಗುವುದಷ್ಟೇ ಬಾಕಿ.

ಅಷ್ಟಕ್ಕೂ ಕನ್ನಡಕ್ಕೊಂದು ನಾಡಗೀತೆ ಬೇಕಿತ್ತಾ ಎನ್ನುವ ಪ್ರಶ್ನೆಯನ್ನು ಮೊದಲು ಕೇಳಿಕೊಳ್ಳಬೇಕು. ಹೀಗೆ ಕಾಲಕಾಲಕ್ಕೆ ಒಬ್ಬೊಬ್ಬ ಲೇಖಕನನ್ನೂ ಒಂದೊಂದು ಜನಾಂಗಕ್ಕೋ ಪಂಥಕ್ಕೋ ಸೇರಿದವರನ್ನೂ ಸಂಪ್ರೀತಗೊಳಿಸಲು ಸರ್ಕಾರ ಅವರ ಹಾಡನ್ನು ನಾಡಗೀತೆ ಮಾಡುವುದನ್ನೋ ಬೀದಿಗೆ ಅವರ ಹೆಸರಿಡುವುದಕ್ಕೋ ವೃತ್ತಕ್ಕೆ ಅಂಥವರ ಹೆಸರಿಡುವುದನ್ನೋ ಮಾಡುತ್ತಿದ್ದರೆ ಕೊನೆಯಲ್ಲಿ ಸಾಹಿತಿ ಉಳಿಯುವುದು ಕೇವಲ ರಸ್ತೆಯಲ್ಲಿ ಮತ್ತು ಸರ್ಕಲ್ಲುಗಳಲ್ಲಿ ಮಾತ್ರ. ಕುವೆಂಪು ಅವರಂಥ ಸಾಹಿತಿಗಳ ಶತಮಾನೋತ್ಸವ ವರುಷದಲ್ಲಿ ಜಿಲ್ಲಾ ಕೇಂದ್ರಗಳಲ್ಲೋ ತಾಲೂಕು ಕೇಂದ್ರಗಳಲ್ಲೋ ಆ ಲೇಖಕರ ಕೃತಿಗಳ ಬಗ್ಗೆ ವಿಶೇಷ ಉಪನ್ಯಾಸ ಮಾಲೆಗಳನ್ನು ಏರ್ಪಡಿಸುವಂಥ ಸರಳ ಯೋಜನೆ ಕೂಡ ಸರ್ಕಾರಕ್ಕೆ ಹೊಳೆಯುವುದಿಲ್ಲ ಎನ್ನುವುದು ವಿಸ್ಮಯಕಾರಿ.

ಇದೀಗ ಕುವೆಂಪು ಹಾಡಿನಿಂದ ವಿವಾದ ಅವರು ನಂಬಿದ್ದ ಸಿದ್ಧಾಂತಗಳತ್ತ ತಿರುಗಿದೆ. ಕವಿತೆ ಎಂಬುವುದು ಪ್ರಜ್ಞಾಪೂರ್ವಕವಾದ ರಚನೆಯಲ್ಲ, ಅದು ಅಂತರಂಗದ ಚಿಲುಮೆ ಎನ್ನುವುದನ್ನು ಮರೆತು ಅದೊಂದು ವಿಲ್‌ಪತ್ರವೋ, ಅತ್ಯಂತ ಮುಖ್ಯವಾದ ಡಾಕ್ಯುಮೆಂಟೋ ಎಂಬಂತೆ ಜಗಳವಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಗಾಬರಿಯಾಗುತ್ತದೆ.

ಬಹುಶಃ ಇನ್ನು ಮುಂದೆ ಕವಿ ತನ್ನ ಕತೆ, ಕಾದಂಬರಿಗಳಲ್ಲೂ, ಕಾವ್ಯದಲ್ಲೂ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿಗುವಂತೆ ನೋಡಿಕೊಳ್ಳಬೇಕಾಗಬಹುದು. ಕವಿತೆಯನ್ನು ಮುದ್ರಿಸುವ ಮೊದಲು ಒಂದು ಸಮಿತಿಗೆ ತೋರಿಸಿ, ಆ ಸಮಿತಿ ಅದು ಪ್ರಜಾಪ್ರಭುತ್ವವನ್ನೂ ಜಾತ್ಯತೀತತೆಯನ್ನೂ ಎತ್ತಿ ಹಿಡಿಯುತ್ತದೆ ಎಂದು ಸರ್ಟಿಫಿಕೇಟ್‌ ನೀಡಬೇಕಾದ ಕಾಲವೂ ಬರಬಹುದು.

ಕವಿಗಳು ಯಾವುದಕ್ಕೂ ಹುಷಾರಾಗಿರುವುದು ಒಳ್ಳೆಯದು.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X