• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೊಬೆಲ್‌ ಪ್ರಶಸ್ತಿ ವಿಜೇತ ಸಾಹಿತಿಗಳ ಮಾಲಿಕೆ-7

By Staff
|
  • ಜಾನಕಿ

jaanaki@india.com

ಅದು ಶುರುವಾದದ್ದು ಒಂದು ರಾತ್ರಿ. ಆಗಷ್ಟೇ ಅವರಿಬ್ಬರೂ ರೇಲಿನಿಂದ ಇಳಿದಿದ್ದರು. ಅದು ಆ ರೇಲು ಹಾದಿಯ ಕೊನೆಯ ನಿಲ್ದಾಣ. ರಸ್ತೆ ಅಲ್ಲಿಗೇ ಕೊನೆಯಾಗುತ್ತದೆ. ಅದರಾಚೆ ಹೋದರೆ ಏನಿದೆ ಅನ್ನುವುದು ರೇಲಿನಲ್ಲಿ ಬಂದು ಇಳಿಯುವವರಿಗೆ ಬಿಡಿ, ಆ ಕೊನೆಯ ಊರಲ್ಲಿರುವವರಿಗೂ ಗೊತ್ತಿಲ್ಲ.

ಆತ ರೇಲ್ವೆ ಟಿಕೆಟ್‌ ಕಲೆಕ್ಟರ್‌. ಆ ಟ್ರೇನಿನಲ್ಲಿ ಅವನಿಗೆ ಅಂಥ ಕೆಲಸವೇನೂ ಇಲ್ಲ. ಆ ರೇಲಿನಲ್ಲಿ ಬರುವವರು ಹೆಚ್ಚೆಂದರೆ ಏಳೆಂಟು ಮಂದಿ. ಅವರೆಲ್ಲರ ಬಳಿಯೂ ಪಾಸ್‌ ಇದೆ ಅನ್ನುವುದು ಅವನಿಗೆ ಗೊತ್ತು. ಅಪರೂಪಕ್ಕೊಮ್ಮೊಮ್ಮೆ ಒಂದೊಂದು ಅಪರಿಚಿತ ಮುಖ ಎದುರಾಗುವುದೂ ಉಂಟು. ಆಗೆಲ್ಲ ಆತ ಇವರು ಈ ಊರಿಗೆ ಯಾಕೆ ಬಂದರು ಅಂತ ಯೋಚಿಸುತ್ತಾನೆ. ಆತ ಆ ಊರಿಗೆ ಬರುವ ಅಪರಿಚಿತರನ್ನು ನೋಡಿದ್ದಾನೆಯೇ ಹೊರತು ತಿರುಗಿ ಹೋದವರನ್ನು ಕಂಡಿಲ್ಲ. ಬಹುಶಃ ಅದು ತಿರುಗಿ ಹೋಗದ ಊರಿರಬೇಕು ಎಂದು ಆತ ಎಷ್ಟೊ ಸಾರಿ ಅಂದುಕೊಂಡಿದ್ದಿದೆ.

Ivan Alexeevich Bunin, Russiaಆಕೆ ಆವತ್ತು ಆತ ನೋಡಿದ ಅಪರಿಚಿತ ಮುಖ. ಆ ಇಡೀ ಬೋಗಿಯಲ್ಲಿ ಅವರಿಬ್ಬರನ್ನು ಬಿಟ್ಟರೆ ಯಾರೂ ಇರಲಿಲ್ಲ. ಅವಳ ಮುಖ ನೋಡುತ್ತಿದ್ದ ಹಾಗೆ ಟಿಕೆಟ್‌ ಕಲೆಕ್ಟರ್‌ಗೆ ಏನನ್ನಿಸಿತೋ ಏನೋ? ಅವಳೂ ಅಷ್ಟೇ ಆತನನ್ನು ನೋಡಿದ್ದೇ ಎಷ್ಟೋ ವರುಷದ ನಂತರ ಭೇಟಿಯಾದ ಗೆಳೆಯನನ್ನು ಕಂಡ ಹಾಗೆ ತಬ್ಬಿಕೊಂಡಳು. ಇಬ್ಬರೂ ಬೋಗಿಯ ಒಣಕಲು ಮರದ ಸೀಟುಗಳನ್ನು ಬಿಟ್ಟು ಬಾಗಿಲ ಬಳಿ ಬಂದು ನಿಂತರು. ಮುಸ್ಸಂಜೆಯ ತಂಗಾಳಿ ಮುಖಕ್ಕೆ ಬಡಿಯುತ್ತಿತ್ತು. ಬೋಳು ಗುಡ್ಡಗಳ ನಡುವಣ ಕಾಲುಹಾದಿ ಅನಂತಕ್ಕೆ ಒಯ್ಯುವಂತೆ ಕಾಣುತ್ತಿತ್ತು. ಆಕೆ ಕಣ್ಣುಮುಚ್ಚಿ, ಕೈಯನ್ನು ಕೆನ್ನೆಗೊತ್ತಿಕೊಂಡು ಯಾವ ತೋರಿಕೆಯೂ ಇಲ್ಲದವಳಂತೆ ಮೋಹಕವಾಗಿ ನಕ್ಕಳು. ಹಾಗೆ ನೋಡಿದರೆ ಅವಳ ಪ್ರತಿಯಾಂದು ಭಂಗಿಯೂ ಮೋಹಕವಾಗಿತ್ತು.

ಅವಳೆಂದಳು;

ನೀವು ಸಿಗುತ್ತೀರಿ ಅನ್ನುವ ಕಲ್ಪನೆಯೇ ಇರಲಿಲ್ಲ. ಈ ಊರಿಗೆ ತಿರುಗಿ ಬರೋಲ್ಲ ಅಂದೂಕೊಂಡಿದ್ದೆ. ಆದರೆ ಈ ಊರು ಅಷ್ಟು ಸುಲಭವಾಗಿ ತಪ್ಪಿಸಿಕೊಂಡು ಹೋಗೋದಕ್ಕೆ ಬಿಡೋಲ್ಲ. ನಿಮ್ಮನ್ನು ನೋಡಿದ ಮೇಲೆ ಒಂಥರ ಅನ್ನಿಸ್ತಿದೆ. ಓಡುತ್ತಿರೋದು ರೈಲೋ ನಾನೋ ನನ್ನ ಮನಸ್ಸೋ ನನ್ನ ಆಶೆಗಳೋ ಗೊತ್ತಾಗುತ್ತಿಲ್ಲ.

ಕತ್ತಲು ನಿಧಾನವಾಗಿ ನೀರಿನಂತೆ ಹಬ್ಬುತ್ತಿತ್ತು. ರೇಲು ತನ್ನ ಹಾದಿಯನ್ನು ತಾನೇ ಕಂಡುಕೊಂಡ ದುರಹಂಕಾರದಲ್ಲಿ ಓಡುತ್ತಿತ್ತು. ಕತ್ತಲು ದಟ್ಟವಾಗುತ್ತಿದ್ದಂತೆ ಕಲೆಕ್ಟರ್‌ ಅವಳ ಬಲಗೈಯನ್ನು ತನ್ನ ಕೈಗೆತ್ತಿಕೊಂಡು ನಿಧಾನವಾಗಿ ತನ್ನ ತುಟಿಗೆ ಒತ್ತಿಕೊಂಡ.

ಅವನ ವಯಸ್ಸು ಐವತ್ತೇಳು.

ರೇಲು ನಿಂತಿತು. ಅದು ಕೊನೆಯ ನಿಲ್ದಾಣಕ್ಕೂ ಹಿಂದಿನ ನಿಲ್ದಾಣ. ಇಲ್ಲೇ ಇಳಿದುಬಿಡೋಣ ಅಂದ ಕಲೆಕ್ಟರ್‌. ಯಾಕೆ ಎಂದಳು ಆಕೆ. ಅವನು ಮಾತಾಡಲಿಲ್ಲ. ಆಕೆ ಮತ್ತೆ ತನ್ನ ಕೈಯನ್ನು ಕೆನ್ನೆಯ ಮೇಲಿಟ್ಟುಕೊಂಡಳು. ಈಗ ಅವಳ ಕೆನ್ನೆಯ ಮೇಲೆ ನೆರಳುಬೆಳಕುಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದವು.

ಪ್ಲೀಸ್‌ ಇಳಿದುಬಿಡೋಣ. ಆತ ಗೋಗರೆದ. ನಿಮಗೆಲ್ಲೋ ಹುಚ್ಚು ಅಂದಳು ಆಕೆ. ಆತ ಮತ್ತೆ ಹಠಹಿಡಿದ. ನಿಮಗಿಷ್ಟ ಬಂದ ಹಾಗೆ ಮಾಡಿ ಅಂದಳು. ಎರಡು ನಿಮಿಷದ ನಂತರ ಅವರಿಬ್ಬರೂ ಸದಾ ನಿದ್ರೆಯಲ್ಲಿರುವಂತೆ ಕಾಣುವ ಆ ಊರಿನ ಕಾಲುಹಾದಿಯಲ್ಲಿ ನಡೆದುಹೋಗುತ್ತಿದ್ದರು. ಆ ಹಾದಿ ಎಲ್ಲಿಗೆ ಹೋಗುತ್ತದೆ ಅನ್ನುವುದು ಇಬ್ಬರಿಗೂ ಗೊತ್ತಿಲ್ಲದವರಂತೆ ನಡೆಯತ್ತಿದ್ದರು.

ನಡೆದೂ ನಡೆದೂ ಅವರು ಮೈಲಿ ದೂರದಲ್ಲಿರುವ ಒಂದು ಗೆಸ್ಟ್‌ಹೌಸ್‌ ತಲುಪಿದರು. ಅದೊಂದು ರೇಲ್ವೇ ಅಧಿಕಾರಿಗಳಿಗೆಂದೇ ಮಾಡಿಸಿದ ಗೆಸ್ಟ್‌ಹೌಸು. ಅಲ್ಲಿಗೆ ಯಾರೂ ಬರುತ್ತಿರಲಿಲ್ಲ. ಅದರ ಮೇಟಿ ಮತ್ತು ಅವನ ಹೆಂಡತಿ ಅಲ್ಲೇ ಮನೆ ಮಾಡಿಕೊಂಡಿದ್ದರು. ಕಲೆಕ್ಟರ್‌ ಮತ್ತು ಆಕೆ ಬಂದಿದ್ದು ನೋಡಿ ಇದ್ದುದರಲ್ಲಿ ಒಂದು ಒಳ್ಳೆಯ ರೂಮನ್ನು ಮೇಟಿ ಖಾಲಿಮಾಡಿಕೊಟ್ಟ. ಆಕೆಯ ಲಗೇಜನ್ನು ಮೇಟಿಯ ಹೆಂಡತಿ ಸುಸ್ತಾದ ಕೈಗಳಿಂದ ಎತ್ತಿಕೊಂಡು ಹೋಗಿ ಒಳಗಿಟ್ಟಳು.

ರೂಮಿನೊಳಗೆ ಹೋಗಿ ಬಾಗಿಲು ಹಾಕಿದ್ದೇ ತಡ ಕಲೆಕ್ಟರ್‌ ಹಠಾತ್ತಾಗಿ ಅವಳ ಮೇಲೆ ಬಿದ್ದ. ಅವಳನ್ನು ಅದೇ ಮೊದಲ ಬಾರಿಗೆ ಪ್ರೇಮದಲ್ಲಿ ಬಿದ್ದಿದ್ದೇನೆ ಎಂಬಂತೆ ಮುದ್ದಿಸತೊಡಗಿದ. ಅರ್ಧರಾತ್ರಿಯ ತನಕವೂ ಅವರಿಬ್ಬರೂ ಹಾಗೇ ಮುದ್ದಿಸುತ್ತಲೇ ಕಾಲ ಕಳೆದರು. ಯಾರಾದರೂ ಅವರನ್ನು ನೋಡಿದ್ದರೆ ಅದೀಗ ತಾನೆ ಹರೆಯಕ್ಕೆ ಕಾಲಿಟ್ಟ ಹುಡುಗರು ಅಂದುಕೊಳ್ಳುತ್ತಿದ್ದರು.

ಬೆಳಗಾಯಿತು. ಹೊರಗಿನ ಗದ್ದಲಗಳು ಕಿವಿಗೆ ಬಿದ್ದವು. ರಾತ್ರಿ ಹೆಣದಂತೆ ಬಿದ್ದುಕೊಂಡಿದ್ದ ಊರು ಈಗ ಹಂದಿಯಂತೆ ಗುಟುರುಹಾಕುತ್ತಿತ್ತು. ಕಲೆಕ್ಟರ್‌ ಏಳುವ ಹೊತ್ತಿಗೆಲ್ಲ ಆಕೆ ಸ್ನಾನ ಮುಗಿಸಿ ರೆಡಿಯಾಗಿದ್ದಳು. ನಾನಿನ್ನು ಬರುತ್ತೇನೆ ಎಂದು ಹೊರಟೇ ಬಿಟ್ಟಳು. ನಿನ್ನ ಹೆಸರೇನು ಕೇಳಿದ್ದಕ್ಕೆ ಅಪರಿಚಿತೆ, ಅನಾಮಿಕೆ ಅಂತ ಏನೇನೋ ಅಂದಳು. ಅದೊಂದು ರಾತ್ರಿ ಕಳೆದದ್ದೇ ಸುಳ್ಳು ಎಂಬಷ್ಟು ಕಳೆಕಳೆಯಾಗಿದ್ದಳು. ಕಳೆದ ಸಂಜೆಯಷ್ಟೇ ಮೋಹಕವಾಗಿದ್ದಳು.

ಜೊತೆಗೇ ಹೋಗೋಣ ಅಂತ ಆತ ಅಲವತ್ತುಕೊಂಡ. ಆಕೆ ಒಪ್ಪಲಿಲ್ಲ. ‘ನಾನು ನೀವಂದುಕೊಂಡಂಥ ಹೆಣ್ಣಲ್ಲ. ನಿನ್ನೆ ಇಲ್ಲಿ ನಡೆದಂಥದ್ದು ಬೇರೆಲ್ಲೂ ನಡೆದಿಲ್ಲ. ನಿನ್ನೆ ಯಾಕೆ ಹೀಗಾಯಿತೋ ಗೊತ್ತಿಲ್ಲ. ನಾನು ಪೂರ್ತಿ ಮೈಮರೆತುಬಿಟ್ಟೆ ಅಂದಳು ಆಕೆ. ಸರಿ ಅಂತ ಆಕೆಯನ್ನು ರೇಲ್ವೇ ನಿಲ್ದಾಣದ ತನಕ ಕರೆದೊಯ್ದ. ಅಲ್ಲಿನ್ನೂ ರೇಲು ಬಂದಿರಲಿಲ್ಲ. ಬರುವ ತನಕ ಕಾದು ಎಲ್ಲರೆದುರೇ ಅವಳ ಕೈ ಅದುಮಿದ. ಅವಳು ಹೊರಟು ಹೋದಳು. ಆತ ಮತ್ತೆ ಗೆಸ್ಟ್‌ಹೌಸಿಗೆ ಮರಳಿದ.

ಅಲ್ಲಿಂದ ಅವನಲ್ಲಿ ಬದಲಾವಣೆ ಶುರುವಾಯಿತು. ಏನನ್ನೋ ಕಳಕೊಂಡ ಭಾವ. ಕೊಠಡಿ ಬೇರೆಯಾಗಿ ಕಾಣಿಸತೊಡಗಿತು. ಅವಳು ಬಳಸಿದ ಸುಗಂಧದ್ರವ್ಯದ ಘಮಘಮ ಎಲ್ಲೆಲ್ಲೂ ಹಬ್ಬಿದಂತೆ ಮೂಗಿಗೆ ಬಡಿಯಿತು. ಅವಳು ಹೋಗುವ ಮೊದಲು ಕುಡಿದಿಟ್ಟ ಕಾಫಿ ಕಪ್ಪು ಅವನನ್ನು ಕಣ್ಣಿಗೆ ಕಾಡಿತು. ಆದರೆ ಅವಳಿಲ್ಲ..

ಅದನ್ನು ತಡೆದುಕೊಳ್ಳುವುದು ಅವನಿಗೆ ಸಾಧ್ಯವೇ ಆಗಲಿಲ್ಲ.

ವಿಚಿತ್ರ.. ಆತ ಕಣ್ಣೀರು ತುಂಬಿ ಮಂಜಾಗುತ್ತಿದ್ದ ಕಣ್ಣನ್ನು ಕರ್ಚೀಪಿನಿಂದ ಒತ್ತಿಕೊಳ್ಳುತ್ತಾ ಹೇಳಿಕೊಂಡ. ಹಾಸಿಗೆಯ ಕಡೆ ನೋಡುವ ಧೈರ್ಯವಾಗಲೇ ಇಲ್ಲ.

ಅದೊಂದು ಅನಿರೀಕ್ಷಿತ ಭೇಟಿ ಅಂತ ಆತ ಎಷ್ಟು ಹೇಳಿಕೊಂಡರೂ ಅವನಿಗೆ ಅದರ ಸೆಳೆತದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಅವಳು ಈಗೆಲ್ಲಿರಬಹುದು ಎಂಬ ಕಲ್ಪನೆ, ಮತ್ತೊಮ್ಮೆ ರೇಲಿನಲ್ಲಿ ಬರುತ್ತಾಳೆ ಎಂಬ ನಿರೀಕ್ಷೆ , ಅವಳೂ ತನ್ನಂತೆ ಈ ಅನಿರೀಕ್ಷಿತ ಭೇಟಿಯನ್ನು ನೆನೆನೆನೆದು ಮರುಗುತ್ತಿದ್ದಾಳೇನೋ ಎಂಬ ಸಂಶಯ, ಅವಳು ತನ್ನನ್ನು ಸಂಧಿಸಲು ತನ್ನಷ್ಟೇ ಹಾತೊರೆಯುತ್ತಿದ್ದಾಳೆ ಎಂಬ ಅನುಮಾನ ಅವನನ್ನು ಕಾಡತೊಡಗಿತು.

ಮೊದಲ ಪ್ರೇಮವಾದರೆ ಹೀಗಾಗುತ್ತದೆ ಅಂತ ಕೇಳಿದ್ದೆ. ಆದರೆ ಈ ವಯಸ್ಸಿನಲ್ಲಿ ಹೀಗಾಗುವುದೆಂದರೆ... ಆತ ನಿಂತಲ್ಲೇ ಶತಪಥ ತಿರುಗತೊಡಗಿದ. ಒಂದು ಕ್ಷಣ ನಿಂತಲ್ಲೇ ನಿಂತರೆ ಆಕೆ ಕಾಡಬಹುದು ಎಂಬ ಭಯ ಅವನನ್ನು ಕಾಡತೊಡಗಿತು. ನಿಜಕ್ಕೂ ತಮ್ಮಿಬ್ಬರನ್ನು ಸೇರಿಸಿದ್ದು ಏನು? ಆ ಸೆಕೆಯೋ ಏಕತಾನತೆಯೋ ಸಂಜೆಯ ಬೇಸರವೋ? ಆತ ಯೋಚಿಸತೊಡಗಿದ. ಅವಳಿಲ್ಲದೇ ಇನ್ನು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಕಣ್ಣಮುಂದೆ ನರ್ತಿಸತೊಡಗಿತು.

ಅವಳ ಬಿಸಿಲ ಝಳಕ್ಕೆ ಕಂದುಬಣ್ಣಕ್ಕೆ ತಿರುಗಿದ ಮುಖ, ಅವಳ ಬಟ್ಟೆಯ ವಾಸನೆ, ಅವಳ ಕೆನ್ನೆಗಳಿಂದ ಹೊರಸೂಸುತ್ತಿದ್ದ ಬಿಸುಪು, ಅವಳ ಕಂಕುಳಿನ ಪರಿಮಳ, ಅವಳ ಹೆಣ್ತನದ ಸುವಾಸನೆ... ಕಲೆಕ್ಟರನನ್ನು ಬಿಡದೇ ಕಾಡಿತು. ಕಿಟಕಿಯಿಂದ ಕಾಣಿಸುತ್ತಿದ್ದ ರೇಲ್ವೇ ಹಳಿಗಳನ್ನು ನೋಡುತ್ತಾ ಕುಳಿತಾಗ ಇದೇ ಹಳಿ ತಾನೆ ಅವಳನ್ನು ಹೊತ್ತೊಯ್ದದ್ದು ಎಂದು ದುಃಖಿಸಿದ.

***

ಹೀಗೆ ಕತೆ ಸಾಗುತ್ತದೆ. ಅದೊಂದು ಅನಿರೀಕ್ಷಿತ ಭೇಟಿ ಆತನನ್ನು ಹೇಗೆ ಕಾಡುತ್ತದೆ ಅಂದರೆ ಪ್ರತಿಯಾಂದು ಕ್ಷಣವೂ ಅವಳ ನೆನಪೇ ಕಾಡುತ್ತದೆ. ಆ ಸುಮಧುರ ಯಾತನೆಯಿಂದ ಪಾರಾಗುವುದು ಸಾಧ್ಯವೇ ಇಲ್ಲದವನಂತೆ ಆತ ಅಲ್ಲಿಂದಿಲ್ಲಿಗೆ ಅಲೆದಾಡುತ್ತಾನೆ.

ಮತ್ತೆ ಸಂಜೆಯಾಗುತ್ತದೆ. ಅಲ್ಲಿಂದ ಆತ ಹೊರಡದೇ ವಿಧಿಯಿಲ್ಲ. ಅಷ್ಟರಲ್ಲಾಗಲೇ ಅವನ ಜಗತ್ತು ಬದಲಾಗಿರುತ್ತದೆ. ಅವಳನ್ನು ಹುಡುಕಬೇಕು ಎಂಬ ನಿರ್ಧಾರ ಬಲವಾಗಿರುತ್ತದೆ. ಅವಳಿಗೊಂದು ಕಾಗದ ಬರೆಯಬೇಕು ಅನ್ನಿಸೋದಕ್ಕೆ ಶುರುವಾಗಿರುತ್ತದೆ.

***

ಸಂಜೆ ಕಲೆಕ್ಟರ್‌ ಎದ್ದು ಹೊರಟ. ತಿರುಗಿ ಹೋಗುವ ರೇಲು ಅವನಿಗೋಸ್ಕರ ಕಾಯುತ್ತಿತ್ತು. ಆದರೆ ಕಲೆಕ್ಟರನಿಗೆ ಅದನ್ನು ಹತ್ತುವುದಕ್ಕೆ ಧೈರ್ಯವಿರಲಿಲ್ಲ. ಅವಳ ನೆನಪಲ್ಲೇ ಕುದ್ದು, ಬಳಲಿ, ಸುಸ್ತಾಗಿ, ಸೊರಗಿ ಆತ ನಾಡಿಗರ ಥರ ಆಗಿಬಿಟ್ಟಿದ್ದ.

ಸಂಜೆಯ ಇಳಿಬೆಳಕು ಕಣ್ತೆರೆಯುತ್ತಿತ್ತು. ರೇಲು ನಿಲ್ದಾಣದಲ್ಲಿ ನಿಂತಿತ್ತು. ಇದ್ದಕ್ಕಿದ್ದಂತೆ ಅದು ತಲೆ ಕೊಡವಿಕೊಂಡಂತೆ ಅಲ್ಲಾಡಿತು. ನಿಧಾನವಾಗಿ ಚಲಿಸಲು ಶುರುಮಾಡಿತು.

ಕಲೆಕ್ಟರ್‌ ನಿಧಾನವಾಗಿ ನಡೆದು ರೇಲು ಹತ್ತಿದ. ತನಗೆ ಇದ್ದಕ್ಕಿದ್ದಂತೆ ಹತ್ತು ವರುಷ ವಯಸ್ಸಾಗಿದೆ ಅಂತ ಅವನಿಗೆ ಅನ್ನಿಸತೊಡಗಿತು.

***

ರಷ್ಯಾದ ಲೇಖಕ ಇವಾನ್‌ ಬುನಿನ್‌ ಬರೆದ ಕತೆ ಇದು. ಜಗತ್ತಿನ ಅತ್ಯುತ್ತಮ ಕತೆಗಳಲ್ಲಿ ಇದೂ ಒಂದು. ಈತ ಬರೆದ ಜಂಟಲ್‌ಮನ್‌ ಫ್ರಮ್‌ ಸ್ಯಾನ್‌ ಫ್ರಾನ್ಸಿಸ್ಕೋ ಮತ್ತೊಂದು ಥರ ಚೆನ್ನಾಗಿದೆ.

ಈ ಇವಾನ್‌ ಬುನಿನ್‌ ಗದ್ಯ ಮತ್ತು ಪದ್ಯ ಎರಡನ್ನೂ ಬರೆದಿದ್ದಾನೆ. ಈತ ಬಹಳ ಕಾಲ ದೇಶದ ರಾಜಕೀಯವನ್ನು ತನ್ನ ಬರಹಗಳಲ್ಲಿ ತರಲೇ ಇಲ್ಲ. ಹೀಗಾಗಿ ತುಂಬ ಕಾಲ ಅನಾಮಿಕನಾಗಿ ಉಳಿದುಬಿಟ್ಟ.

ರಷ್ಯ ಬಿಟ್ಟು ಓಡಿಹೋಗಿ ಪ್ಯಾರಿಸ್‌ನಲ್ಲಿ ಬದುಕಿದ ಇವಾನ್‌ ಬುನಿನ್‌ಗೆ ಬಂದ ನೊಬೆಲ್‌ ರಷ್ಯನ್‌ ಸಾಹಿತ್ಯಕ್ಕೆ ಸಂದ ಮೊದಲ ನೊಬೆಲ್‌ ಪ್ರಶಸ್ತಿ ಕೂಡ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more