• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಂಕರ ಮೊಕಾಶಿ : ಬಸಿರು ಬರೆದಿರುವ ಗೆರೆ ಬಾಳು ದಾಟೀತೇ?

By Staff
|
  • ಜಾನಕಿ

jaanaki@india.com

ಕೊನೆಗಾಲ ಬರುವಿ ನೀ ಹೆತ್ತತಾಯಾಗಿ

ಕನಸ ಹಿಂದಿನ ಕನಸ ಬೊಗಳು ನಾಯಾಗಿ

ಶಂಕರ ಮೊಕಾಶಿ ಪುಣೇಕರರ ಈ ಎರಡು ಸಾಲುಗಳನ್ನು ಧ್ಯಾನಿಸಿ. ಲಂಕೇಶರ ‘ಅವ್ವ’ನೊಂದಿಗೆ ಪುಣೇಕರರ ‘ಮಾಯಿ’ಯನ್ನಿಟ್ಟು ನೋಡಿ. ಬೇಂದ್ರೆಯವರ ‘ಹೆಣದ ಹಿಂದೆ’ ಕವಿತೆಯಲ್ಲಿ ಬರುವ ಆದಿಮಾಯೆ, ತಾನೆತಾಯಿಯಾಗಿ ಬಂದಿದ್ದನ್ನು ನೋಡಿ. ಅಡಿಗರ ಭೂಮಿಗೀತದಲ್ಲಿ ಅಮ್ಮ ಪಡಿಮೂಡಿದ್ದನ್ನು ಗಮನಿಸಿ.

ಕೊನೆಗೂ ಪುಣೇಕರರ ತಾಯಿ ನಿಗೂಢವಾಗಿಯೇ ಉಳಿಯುತ್ತಾಳೆ. ಕನಸ ಹಿಂದಿನ ಕನಸ ಬೊಗಳು ನಾಯಾಗಿ ಎಂಬ ಸಾಲುಗಳು ಮತ್ತೆ ಮತ್ತೆ ಕಾಡುತ್ತವೆ. ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮುಂದಿನ ಸಾಲುಗಳ ನೆರವು ಬೇಡುತ್ತೇವೆ;

ಮುಗಿಲ ಮೂವಟ್ಟೆಗಳ ಮೂದಲಿಸುವಂತೆ

ನಡೆದಿರಲು ಹೊಕ್ಕುಳಲಿ ವ್ಯಾಕುಲತೆ ಚಿಂತೆ

ಮರಣವನು ಗೆದ್ದವರು ರಣದಿ ಓಡಿಹರು

ಕಳೆದ ಕ್ಷಣವನು ಅಂಗಲಾಚಿ ಬೇಡಿಹರು

ಒಡಲು ಒಡ್ಡುವ ಬಲೆಯ ಕಣ್ಣು ನೋಡೀತೇ

ಬಸಿರು ಬರೆದಿರುವ ಗೆರೆ ಬಾಳು ದಾಟೀತೇ?

ಈ ಹಾಡ ತಿರುಳನು ಕುರಿಯುತರಿತವನು

ತಾಯ ಇನ್ನೊಂದು ಮೊಗವನ್ನು ಅರಸುವನು

Interpreting Shankara Mokashi Punekars worksಇಲ್ಲಿ ಬರುವ ‘ಬಸಿರು ಬರೆದಿರುವ ಗೆರೆ ಬಾಳು ದಾಟೀತೇ’ ಅನ್ನುವ ಸಾಲನ್ನೇ ನೋಡಿ. ನಮ್ಮ ಬಾಳಿನ ಮಿತಿ ತಾಯ ಬಸಿರಲ್ಲೇ ನಿರ್ಧಾರವಾಗಿರುತ್ತದೆ ಅನ್ನುವ ಸೂಚನೆಯಿದೆಯೇ? ಇದನ್ನು ನಾವು ಜೆನೆಟಿಕ್‌ ವಿಜ್ಞಾನದ ಎತ್ತರಕ್ಕೆ ಏರಿಸಬಹುದೇ? ಹಾಗಿದ್ದರೆ ಪುಣೇಕರ್‌ ಸಂಪ್ರದಾಯ ಶರಣ ಕವಿ ಅಂತ ಹೇಳಿದವರು ಯಾರು? ತಮ್ಮ ಪುರಾತನ ರೂಪಕಗಳ ಮೂಲಕವೇ ಅವರು ಹೇಗೆ ನವ್ಯವನ್ನೂ ಒಂದು ಹಂತದಲ್ಲಿ ಮೀರಿಬಿಟ್ಟರು.

***

ನವ್ಯದ ಬದ್ಧ ವಿರೋಧಿಗಳಾಗಿದ್ದವರು ಅವರು. ಅಡಿಗರೆಂದರೆ ಅವರಿಗೆ ಕೆಂಡಕೋಪ. ಹಾಗೆ ನೋಡಿದರೆ ಪುಣೇಕರರೂ ನವ್ಯರೇ. ಆದರೆ ಅವರ ಭಾಷೆಯಲ್ಲಿ , ಶೈಲಿಯಲ್ಲಿ ನವ್ಯದ ನಾಟಕೀಯತೆ ಇರಲಿಲ್ಲ. ಅವರು ಅಬ್ಬರಿಸಿ ಬೊಬ್ಬಿರಿಯಲಿಲ್ಲ. ತಣ್ಣಗೆ ಬರೆದರು. ಅವಧೇಶ್ವರಿಯಲ್ಲಿ ಬರುವ ಈ ಸಾಲುಗಳತ್ತ ಕಣ್ಣುಹಾಯಿಸಿ;

‘ಬಹಳ ಗೌರವದ ಹೆಂಗಸು ಲಲಿತಾಂಬೆ. ನಾನು ಹನ್ನೆರಡು ವರುಷದವನಿರಬೇಕು. ಒಂದು ದಕ್ಷಿಣೆ ಇಡಲಿಕ್ಕೆ ಆಕೆಯ ಬಳಿ ದುಡ್ಡೇ ಇರಲಿಲ್ಲ. ಮನೆ ತುಂಬ ಧಾನ್ಯ. ಅಂದು ಒಂದು ಪಾವು ಅಕ್ಕಿ ಅಳೆದು ‘ಇಂದು ದಕ್ಷಿಣೆಯಿಲ್ಲ. ಈ ಸೀಧಾ ಒಯ್ದುಬಿಡು’ ಅಂದಳು. ನಾನು ಪೂಜೆ ಮುಗಿಸಿದೆ. ಇನ್ನೇನು ಹೋಗಬೇಕೆನ್ನುವಷ್ಟರಲ್ಲಿ ನನ್ನ ಕೈಹಿಡಿದು ಕೋಣೆಯಲ್ಲಿ ಒಯ್ದಳು. ‘ನನ್ನನ್ನು ಭೋಗಿಸಿ ನಿನ್ನ ದಕ್ಷಿಣೆಯನ್ನು ಮುಟ್ಟಿಸಿಕೊಂಡು ಬಿಡು’ ಅಂದಳು. ನಾನು ಅಲ್ಲಿಂದ ಓಡಿದೆ. ಸಂಜೆ ನಮ್ಮ ಮಿತ್ರ ಭೀಮಭಟ್ಟ ಕಂಡಾಗ ನಡೆದುದನ್ನು ಹೇಳಿದೆ. ‘ಛೀ ಮಳ್ಳಾ. ನೀನು ಋಗ್ವೇದಿ ಗಂಡಸಾಗಿ ಲಲಿತಾಂಬೆಯನ್ನು ಬಿಟ್ಟು ಬಂದೆಯಾ? ನಾನಾಗಿದ್ದರೆ ಸುಖಬಟ್ಟು ನಿನ್ನ ದಕ್ಷಿಣೆ ಮುಟ್ಟಿತು ಅಂತ ಹೇಳುತ್ತಿದ್ದೆ’ ಎಂದ.

ಆಕೆಯ ಹೆಸರು ಮೃಗನಯನೆ. ಅವಳು ತನಗೆ ಗೊತ್ತು ಎಂದು ಸಿಂಹಭಟ್ಟ ಹೇಳಿದಾಗ ಅವಳ ಕುಪ್ಪಸದ ಗುಂಡಿ ತೋರಿಸಿದರೆ ಒಳಗೆ ಬಿಡುತ್ತೇನೆ ಅನ್ನುತ್ತಾ ತಮಾಷೆ ಮಾಡುತ್ತಾನೆ ಕಾವಲುಗಾರ!

ಇದು ಪುಟ್ಟದೊಂದು ಉದಾಹರಣೆ ಅಷ್ಟೇ. ಅನಗತ್ಯವಾಗಿ ನಿಮ್ಮ ಕುತೂಹಲ ಕೆರಳಲಿ ಎಂದು ಇವೇ ಸಾಲುಗಳನ್ನು ಕೊಟ್ಟಿಲ್ಲ. ಅವಧೇಶ್ವರಿಯಂಥ ವೇದಕಾಲೀನ ರಾಜಕೀಯ ಕಾದಂಬರಿಯನ್ನೂ ಅವರು ಎಷ್ಟೊಂದು ಮುಕ್ತ ಮನಸ್ಸಿನಿಂದ ಬರೆದಿದ್ದಾರೆ ಎಂದು ಸೂಚಿಸಲಿಕ್ಕೆ ಈ ಸಾಲುಗಳು ನೆರವಿಗೆ ಬಂದಿವೆ ಅಷ್ಟೇ.

ಪುಣೇಕರರನ್ನು ವಿಕ್ಷಿಪ್ತ, ವಿಚಿತ್ರ ವ್ಯಕ್ತಿ, ಅಪಾರ ಸಿಟ್ಟಿನವರು, ತಮಗೆ ಸರಿಕಂಡದ್ದನ್ನಷ್ಟೇ ಮಾಡುವವರು ಎಂಬಿತ್ಯಾದಿ ಮೂಢನಂಬಿಕೆಗಳಿವೆ. ಅವರಿಗೆ ನವ್ಯರ ಬಗ್ಗೆ ಇದ್ದ ಸಿಟ್ಟು ಬೇಂದ್ರೆಯವರಿಂದ ಬಂದದ್ದಿರಬೇಕು. ಆ ಸಿಟ್ಟಿನಿಂದ ಆದ ಲಾಭವೆಂದರೆ ಗಂಗವ್ವ ಗಂಗಾಮಾಯಿಯಂಥ ಕಾದಂಬರಿ ಕನ್ನಡಕ್ಕೆ ಸಿಕ್ಕಿದ್ದು. ನಟ-ನಾರಾಯಣಿಯಂಥ ಕೃತಿ ದೊರಕಿದ್ದು. ಅವಧೇಶ್ವರಿಯಂಥ ಕಾದಂಬರಿಯನ್ನು ಕಾಲದ ಪ್ರವಾಹದಲ್ಲಿ ಶತಮಾನಗಳ ಹಿಂದಕ್ಕೆ ಹೋಗಿ ಬರೆಯಲು ಸಾಧ್ಯವಾದದ್ದು.

***

ಪುಣೇಕರರು ಧಾರವಾಡದ ಕೂಸು. ಬೇಂದ್ರೆ, ಕಣವಿ, ಗೋಕಾಕ, ಕುರ್ತಕೋಟಿ, ದೇಸಾಯರ ಹಾಗೆ ಮೊಕಾಶಿಯವರದ್ದೂ ಉತ್ತರ ಕರ್ನಾಟಕದ ಮೈಮನ. ಗಂಗವ್ವ ಗಂಗಾಮಾಯಿ ಕಾದಂಬರಿಯನ್ನು ಓದುತ್ತಾ ಕುಳಿತರೆ ಒಂದು ಅಪೂರ್ವ ಇತಿಹಾಸ ಕಣ್ಮುಂದೆ ಮೆರವಣಿಗೆ ಹೊರಟಂತಾಗುತ್ತದೆ. ಆ ಕಾದಂಬರಿಯ ಕೊನೆಯ ಅಧ್ಯಾಯದ ಹೆಸರೇ ಎಷ್ಟು ಸೊಗಸಾಗಿದೆ ನೋಡಿ; ಉಪಸಂಹಾರ ಮತ್ತು ಅಚ್ಯುತನ ಮೂರನೆಯ ಪತ್ರ.

ಸಂಪ್ರದಾಯ ಮತ್ತು ಕ್ರಾಂತಿಕಾರೀ ಗುಣ ಎರಡನ್ನೂ ಪುಣೇಕರ ಮೈಗೂಡಿಸಿಕೊಂಡಿದ್ದರು ಅಂತ ಅನೇಕರು ಹೇಳುತ್ತಾರೆ. ಆದರೆ ಪುಣೇಕರು ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಥರ. ತಾಯಿ ಆಕಸ್ಮಾತ್‌ ಹಾಡಿದ ಒಂದು ಹಾಡಿನಿಂದ ಇಡೀ ಜಗತ್ತನ್ನು ನೋಡುವ ಒಂದು ಕಿಟಕಿಯನ್ನು ರೂಪಿಸಿಕೊಂಡವರು ಎಕ್ಕುಂಡಿ. ಪುಣೇಕರರನ್ನೂ ಕಾಡಿದ್ದು ತಾಯಿ ಎಂಬ ಮಾಯಿ. ಮಹಮ್ಮಾಯಿ. ಸುಬ್ಬಣ್ಣನವರ ಹಾಗೇ ಪುಣೇಕರರೂ ಕಷ್ಟದ ಹಾದಿಯಲ್ಲಿ ನಡೆದವರು.

ಪುಣೇಕರರು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಸಮಾನವಾಗಿ ಬರೆದವರು. ಬೇಂದ್ರೆ, ರಾಮಾಯಣದರ್ಶನ, ಋತುಸಂಹಾರ, ಅವಧೂತಗೀತಗಳನ್ನು ಅನುವಾದಿಸಿದವರು. ಕನ್ನಡದ ಬಹಳಷ್ಟು ಕಾವ್ಯಗಳಿಗೆ ಮುಖಾಮುಖಿಯಾದವರು. ಆದರೆ ಅವರ ಬಗ್ಗೆ ಸಾಕಷ್ಟು ವಿಮರ್ಶೆ ಬರಲಿಲ್ಲ ಎಂದು ಈಗ ಕೊರಗುವುದರಲ್ಲಿ ಅರ್ಥವಿಲ್ಲ. ಪುಣೇಕರರ ಓದುಗರ ಬಳಗ ತುಂಬ ದೊಡ್ಡದು.

***

ಪುಣೇಕರರ ಒಂದು ಕವಿತೆ ಹೀಗಿದೆ;

ಇದರ ದಾಸರ ಪದದ ಧಾಟಿ ಮತ್ತು ಆಧುನಿಕತೆ ಎರಡನ್ನೂ ಗಮನಿಸಿ;

ಏನು ಬಣ್ಣಿಸಲಿ ಗುರುರಾಯನ ಮಹಿಮೆ ಏನು ಬಣ್ಣಿಸಲಿ

ನ್ಯಾಯ ಹಚ್ಚುತ ಪಾಲು ಕೊಡಿಸಿದನು ಗುರುರಾಯ

ಹುಚ್ಚು ಬಿಡಿಸುವ ದೆವ್ವ ಬಿಡಿಸಿದನು ಗುರುರಾಯ

ಪಾದ ತೊಳೆದಗೆ ಕೆಸರು ಸಿಡಿಸಿದನು ಗುರುರಾಯ

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಪೂರಕ ಓದಿಗೆ-

ಗಂಗಾಮಾಯಿ ಮಡಿಲಲ್ಲಿ ಶಂಕರ ಮೊಕಾಶಿ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more